Thursday, 12th December 2024

ನೊಬೆಲ್ ವಂಚಿತ ಬ್ರಹ್ಮಚಾರಿ ಮತ್ತು ಕಾಳಜ್ವರ !

ಹಿಂದಿರುಗಿ ನೋಡಿದಾಗ

ಮನುಕುಲವನ್ನು ಕಾಡುವ ಪಿಡುಗುಗಳು ಹಲವಾರು. ಅವುಗಳಲ್ಲಿ ಪ್ರಮುಖವಾದವು ಸಿಡುಬು, ಪ್ಲೇಗ್, ಮಲೇರಿಯ, ಕಾಲರಾ, ಇನ್ ಫ್ಲುಯೆಂಜಾ, ಕ್ಷಯ, ಕುಷ್ಠ ಮುಂತಾದವು. ಈ ಪಟ್ಟಿಯಲ್ಲಿ ಸೇರುವ ಎಲ್ಲ ಅರ್ಹತೆಯನ್ನು ಪಡೆದ ಮತ್ತೊಂದು ಪಿಡುಗೆಂದರೆ ಕಾಲಾ-ಅಜ಼ರ್ ಅಥವಾ ಕಾಳಜ್ವರ. ಈ ಬೇನೆ ಬಂದವರು ಸಾಯುವುದು ಬಹುಪಾಲು ಖಚಿತ. ಅಂಥ ಉಗ್ರವಾದ ರೋಗವಿದು.

ಕಾಳಜ್ವರವು ಬಹುಶಃ ಮೆಡಿಟೆರೇನಿಯನ್ ಸಮುದ್ರದ ಆಸುಪಾಸಿನ ಯುರೋಪಿಯನ್ ಪ್ರದೇಶಗಳಲ್ಲಿ ಹಾಗೂ ಆಫ್ರಿಕಾದಲ್ಲಿ ಹುಟ್ಟಿತೆಂದು ಕಾಣುತ್ತದೆ. ಯುರೋಪಿನಿಂದ ಭಾರತಕ್ಕೆ ಬಂದ ವ್ಯಾಪಾರಿಗಳು ಕಾಳಜ್ವರವನ್ನು ಉಚಿತವಾಗಿ ಹಂಚಿದರು. ಬಹುಶಃ ಬ್ರಿಟಿಷರ ಮೂಲಕ ಭಾರತಕ್ಕೆ ಬಂದ ಕಾಳಜ್ವರವು, ಪೂರ್ವ ಭಾರತವನ್ನು ತನ್ನ ಮೂಲನೆಲೆಯನ್ನಾಗಿ ಆಯ್ಕೆಮಾಡಿಕೊಂಡು ಬೇರೂರಿತು. ೧೮೬೦ರಲ್ಲಿ ಬಂಗಾಳದ ಹೂಗ್ಲಿ ಮತ್ತು ಬರ್ದ್ವಾನ್ ಜಿಲ್ಲೆಗಳಲ್ಲಿ ವಿಚಿತ್ರ
ಜ್ವರವೊಂದು ಕಾಣಿಸಿಕೊಂಡಿತು. ರೋಗಲಕ್ಷಣಗಳಲ್ಲಿ ಬಹುಪಾಲು ಮಲೇರಿಯವನ್ನು ಹೋಲುತ್ತಿದ್ದವು. ಕ್ವಿನೈನ್ ಔಷಧವು ಈ ಹೊಸಜ್ವರವನ್ನು ನಿಗ್ರಹಿಸಲು ವಿಫಲವಾಯಿತು. ೧೮೭೦ರಲ್ಲಿ ಈ ಹೊಸ ಜ್ವರವು ಅಸ್ಸಾಂ ಪ್ರದೇಶದಲ್ಲಿ ಕಾಣಿಸಿಕೊಂಡಿತು.

ಜ್ವರ ಪೀಡಿತರು ಸಾಯುವುದು ಹೆಚ್ಚಾದಾಗ ಸ್ಥಳೀಯರು ಇದನ್ನು ‘ಸರಕಾರಿ ಬೀಮಾರಿ’ ಎಂದು ಕರೆದರು. ಬ್ರಿಟಿಷರ ಆಗಮನಕ್ಕೂ ಈ ಕಾಯಿಲೆಗೂ ಏನೋ
ಸಂಬಂಧವಿರಬೇಕು ಎಂದು ಜನರ ಗುಮಾನಿಯಾಗಿತ್ತು. ೧೮೯೦ರ ಹೊತ್ತಿಗೆ ಪೂರ್ಣ ಪ್ರಮಾಣದ ಪಿಡುಗು ಅಸ್ಸಾಮನ್ನು ಅಲ್ಲೋಲಕಲ್ಲೋಲಗೊಳಿಸಿ ನಂತರ ಇದ್ದಕ್ಕಿದ್ದಂತೆ ಮಾಯವಾಯಿತು, ೧೫ ವರ್ಷಗಳ ನಂತರ ಮರುಕಳಿಸಿತು. ಇದನ್ನು ಕಲಕತ್ತೆಯ ಜನ ‘ಬರ್ದ್ವಾನ್ ಜ್ವರ’ ಎಂದರೆ, ಬರ್ದ್ವಾನ್ ಜನ ‘ಡಂಡಂ ಜ್ವರ’ ಎಂದು ಕರೆದರು.

ಆದರೆ ಈ ಕಾಯಿಲೆ ಬಂದವರ ಚರ್ಮವು ಗಾಢಕಂದು ಇಲ್ಲವೇ ಕಪ್ಪು ಬಣ್ಣವನ್ನು ತಳೆಯುತ್ತಿತ್ತು. ಹಾಗಾಗಿ ಜನರು ಇದನ್ನು ಕಾಲಾ-ಅಜ಼ರ್ ಎನ್ನತೊಡಗಿದರು. ಹಿಂದಿಯಲ್ಲಿ ಕಾಲಾ ಎಂದರೆ ಕಪ್ಪು. ಪರ್ಷಿಯನ್ ಭಾಷೆಯಲ್ಲಿ ಅಜ಼ರ್ ಎಂದರೆ ಕಾಯಿಲೆ. ಹಾಗಾಗಿ ಇದನ್ನು ಕಪ್ಪು ಕಾಯಿಲೆ ಎಂಬರ್ಥದ ಕಾಲಾ-ಅಜ಼ರ್ ಎಂಬ ಪದವೇ ಜನಪ್ರಿಯವಾಗಿ ಇಂದಿಗೂ ಬಳಕೆಯಲ್ಲಿದೆ. ೧೯೦೦ರಲ್ಲಿ ಮತ್ತೊಂದು ಪಿಡುಗು ಅಸ್ಸಾಂ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಅದೆಷ್ಟು ಉಗ್ರವಾಗಿತ್ತೆಂದರೆ ಬೆಟ್ಟಗುಡ್ಡ ಪ್ರದೇಶಗಳನ್ನು ಆಕ್ರಮಿಸಿ ಬಯಲುಸೀಮೆಗೂ ವ್ಯಾಪಿಸಿತು. ಬಿರುಗಾಳಿಯಂತೆ ಆವರಿಸಿ ಹಳ್ಳಿಗೆ ಹಳ್ಳಿಗಳನ್ನೇ ನಿರ್ಮಾನುಷ ಮಾಡಿತು. ೧೯೧೭ರಲ್ಲಿ ಮತ್ತೆ ಕಾಣಿಸಿಕೊಂಡು ೧೯೨೭ರವರೆಗೆ ರುದ್ರತಾಂಡವವಾಡಿತು.

೧೯೩೧ರ ಹೊತ್ತಿಗೆ ಹಠಾತ್ತನೆ ಮಾಯವಾಗಿ ವೈದ್ಯಸಂಕುಲವನ್ನು ಅಚ್ಚರಿಗೊಳಿಸಿತು. ೧೯೩೭ ರಲ್ಲಿ ಬಿಹಾರದಲ್ಲಿ ಕಾಣಿಸಿಕೊಂಡು ಹಳ್ಳಿಗಳನ್ನು ಧ್ವಂಸಗೈದಿತು. ೧೯೭೮ರಲ್ಲಿ ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಮರುಕಳಿಸಿತು. ಪೂರ್ವ ಭಾರತವನ್ನು ಪದೇ ಪದೆ ಕಾಡುತ್ತಿದ್ದ ಈ ಹೊಸ ಜ್ವರದ ಸ್ವರೂಪವು ವೈದ್ಯರಿಗೂ ಜನಸಾಮಾನ್ಯರಿಗೂ ನಿಗೂಢ ವಾಗಿತ್ತು. ಇಂಥ ಪಿಡುಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿತ್ತು. ಮೊದಲಿಗೆ, ಪಿಡುಗಿಗೆ ಕಾರಣವಾದ ಜೀವಿಯನ್ನು ಪತ್ತೆಹಚ್ಚಬೇಕಾಗಿತ್ತು. ಎರಡನೆಯದಾಗಿ, ಆ ರೋಗಕಾರಕವು ಕಾಯಿಲೆ ಪೀಡಿತರಿಂದ ಆರೋಗ್ಯವಂತರಿಗೆ ಹೇಗೆ ಹಬ್ಬುತ್ತದೆ ಎಂಬುದನ್ನು
ತಿಳಿದುಕೊಳ್ಳುವುದು ರೋಗನಿಯಂತ್ರಣದ ದೃಷ್ಟಿಯಿಂದ ಮುಖ್ಯವಾಗಿತ್ತು.

ಮೂರನೆಯದಾಗಿ, ರೋಗಪೀಡಿತರನ್ನು ಗುಣಪಡಿಸಲು ಸೂಕ್ತ ಚಿಕಿತ್ಸೆಯನ್ನು ಪತ್ತೆಹಚ್ಚಬೇಕಾಗಿತ್ತು. ಈ ಹೊತ್ತಿಗೆ ಸರ್ ರೊನಾಲ್ಡ್ ರಾಸ್ ಮಲೇರಿಯ
ಹರಡುವ ಬಗ್ಗೆ ಸಂಶೋಧನೆ ನಡೆಸಿದ್ದರು. ಇದು ವೈದ್ಯಕೀಯ ವಲಯದಲ್ಲಿ ಹುಮ್ಮಸ್ಸನ್ನು ತುಂಬಿತ್ತು. ಹಾಗಾಗಿ ಹೊಸಜ್ವರದ ಗುಟ್ಟಿನ ಅನಾವರಣಕ್ಕೆ ಹಲವರು ಹಂಬಲಿಸಿದರು. ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿನ ವೈದ್ಯಾಧಿಕಾರಿ ಡಾ.ವಿಲಿಯಂ ಬೂಗ್ ಲೀಷ್ಮನ್ ಬಳಿ ಹೊಸಜ್ವರ ಪೀಡಿತರು ಬರುತ್ತಿದ್ದರು. ರಾಸ್ ಸಂಶೋಧನೆಯಿಂದ ಪ್ರೇರಿತನಾಗಿದ್ದ ಲೀಷ್ಮನ್, ರೋಗಿಗಳ ರಕ್ತವನ್ನು ಸೂಕ್ಷ್ಮ ದರ್ಶಕದಡಿ ಪರೀಕ್ಷಿಸಿದ. ರಕ್ತಕಣಗಳ ಒಳಗೆ ಕೆಲವು ವಿಚಿತ್ರ ಕಾಯಗಳು ಕಂಡುಬಂದವು. ಸರಿಸುಮಾರು ಇದೇ ಹೊತ್ತಿಗೆ ಮದ್ರಾಸ್ ಯೂನಿವರ್ಸಿಟಿ ಮೆಡಿಕಲ್ ಕಾಲೇಜಿನಲ್ಲಿದ್ದ ಐರಿಷ್ ವೈದ್ಯ ಚಾರ್ಲ್ಸ್ ಡೋನೋವನ್ ಕೂಡ ಹೊಸಜ್ವರ ಪೀಡಿತರ ಗುಲ್ಮದಲ್ಲಿ ವಿಚಿತ್ರಕಾಯಗಳನ್ನು ಕಂಡ.

ಇವು ವಾಸ್ತವದಲ್ಲಿ ಹೊಸಜ್ವರಕ್ಕೆ ಕಾರಣವಾಗಿದ್ದ ರೋಗಜನಕಗಳು ಬೀಡುಬಿಟ್ಟಿದ್ದ ಕಾಯಗಳಾಗಿದ್ದವು. ಇಬ್ಬರೂ ಒಬ್ಬರ ನಂತರ ಒಬ್ಬರಂತೆ ಸಂಶೋಧನೆ ಗಳನ್ನು ಪ್ರಕಟಿಸಿದರು; ಇವರಿಬ್ಬರಲ್ಲಿ ಹೊಸಜ್ವರ ಕಾರಕವನ್ನು ಕಂಡುಹಿಡಿದ ಕೀರ್ತಿ ಯಾರಿಗೆ ಸಲ್ಲಬೇಕೆಂಬ ವಿಚಾರದಲ್ಲಿ ಘರ್ಷಣೆ ಶುರುವಾಗಿ ಪ್ರಕರಣ
ರೊನಾಲ್ಡ್ ರಾಸ್ ಬಳಿಗೆ ಬಂದಿತು. ಅವರು ಈ ಹೊಸಜ್ವರಕ್ಕೆ ಕಾರಣವಾಗಿದ್ದ ಜೀವಿಗೆ ‘ಲೀಷ್ಮೇನಿಯ ಡೊನೋವನಿ’ ಎಂದು ನಾಮಕರಣ ಮಾಡಿ ಇಬ್ಬರಿಗೂ ಗೌರವ ಸೂಚಿಸಿದರು.

ಕಾಲಾ-ಅಜ಼ರ್‌ನ ಕಾರಕ ಜೀವಿಯು ವೈದ್ಯವಿಜ್ಞಾನಿಗಳಿಗೆ ತಿಳಿದುಬಂತು. ಆದರೆ ಈ ಕಾಯಿಲೆಯು ರೋಗಿಗಳಿಂದ ಆರೋಗ್ಯವಂತರಿಗೆ ಹೇಗೆ ಹರಡುತ್ತದೆಯೆಂಬ ವಿಚಾರ ರಹಸ್ಯವಾಗಿಯೇ ಇತ್ತು. ೧೯೦೭ರಲ್ಲಿ ಭಾರತದಲ್ಲಿ ಪ್ಯಾಟನ್ ಎಂಬ ಸಂಶೋಧಕ ತಿಗಣೆಯ ಒಡಲನ್ನು ಪರೀಕ್ಷಿಸಿದ. ಅದರಲ್ಲಿ ಲೀಷ್ಮೇನಿಯ ಡೊನೋವನಿ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿತ್ತು. ನಂತರ ಆ ತಿಗಣೆ ಯಾರನ್ನಾದರೂ ಕಚ್ಚಿದರೆ ಅವರಲ್ಲಿ ತೀವ್ರಸ್ವರೂಪದ ಜ್ವರ ಕಾಣಿಸಿಕೊಳ್ಳುತ್ತಿತ್ತು.
ವಾಸ್ತವದಲ್ಲಿ ಅದು ಹುಸಿ ಸಂಶೋಧನೆಯಾಗಿದ್ದು ವೈದ್ಯ ವಿಜ್ಞಾನಿಗಳ ದಿಕ್ಕು ತಪ್ಪಿಸಿ ಅಮೂಲ್ಯ ಸಮಯವನ್ನು ಹಾಳು ಮಾಡಿತು. ಏಕೆಂದರೆ ತಿಗಣೆ ಸುಮಾರು ೪೧ ಮಾನವ ರೋಗ ಗಳನ್ನು ಹರಡುತ್ತದೆ ಎಂಬ ಗುಮಾನಿಯಿತ್ತು.

ವಾಸ್ತವದಲ್ಲಿ ಇದು ಕಾಳಜ್ವರ ಪಿಡುಗಿಗೆ ಕಾರಣವಾಗಿರಲಿಲ್ಲ. ೧೯೨೪ರಲ್ಲಿ ಅಸ್ಸಾಂನಲ್ಲಿ ಕಾಲಾ-ಅಜ಼ರ್ ಆಯೋಗವನ್ನು ಸ್ಥಾಪಿಸಿದರು. ಕ್ರಿಸ್ಟೋಫರ್, ಶಾರ್ಟ್, ಬರಾದ್ ಎನ್ನುವವರು ಇದನ್ನು ಮುನ್ನಡೆಸುವ ಹೊಣೆ ಹೊತ್ತರು. ೧೯೨೮ರಲ್ಲಿ -ಬಾಟಮಸ್ ಅಲೆಗ್ಸಾಂಡ್ರಿ ಸಿಂಟನ್ ಎನ್ನುವ ಸಂಶೋಧಕ ಡಿಪ್ಟೆರ ವಂಶಕ್ಕೆ
ಸೇರಿದ ಮರಳುನೊಣವು (ಸ್ಯಾಂಡ್ – = -ಬಾಟಮಸ್ ಆರ್ಜೆಂಟಿಪಸ್) ಎಲ್ಲೆಲ್ಲಿ ಕಾಲಾ ಅಜ಼ರ್ ಕಂಡುಬರುತ್ತದೋ ಅಲ್ಲೆಲ್ಲ ಅವ್ಯಾಹತವಾಗಿ ವಾಸಿಸುತ್ತದೆ ಎಂಬ ಅಂಶವನ್ನು ಗುರುತಿಸಿ ಆ ಬಗ್ಗೆ ಪ್ರಬಂಧ ಪ್ರಕಟಿಸಿದ. ಆದರೆ ಮರಳು ನೊಣವೇ ಕಾಲಾ ಅಜ಼ರ್‌ಗೆ ಕಾರಣವಾದ ಲೀ.ಡೊನೋವನಿಯನ್ನು ಹರಡುತ್ತದೆ ಎನ್ನುವುದಕ್ಕೆ ನೇರ ಪುರಾವೆ ದಕ್ಕಲಿಲ್ಲ.

ವಿಜ್ಞಾನಿಗಳು ಮರಳುನೊಣಗಳ ಮೂಲಕ ಲೀ.ಡೊನೋ ವನಿಯನ್ನು ಗಿನಿಪಿಗ್‌ಗಳಿಗೆ ವರ್ಗಾಯಿಸಿ ಸೋಂಕುಂಟು ಮಾಡುವಲ್ಲಿ ಭಾಗಶಃ ಯಶಸ್ವಿಯಾದರು. ಆದರೆ ಮನುಷ್ಯರಲ್ಲಿ ಮಾತ್ರ ಸಂಪೂರ್ಣ ವಿಫಲರಾದರು. ಕೊನೆಗೆ ೧೯೩೯ರಲ್ಲಿ ಸ್ಮಿಥ್, ಹಾಲ್ದರ್ ಮತ್ತು ಅಹಮದ್ ಎಂಬ ಸಂಶೋಧಕರು ಒಂದು  ವಿಚಿತ್ರವನ್ನು ಪತ್ತೆಹಚ್ಚಿದರು. ಮರಳುನೊಣಗಳು ರೋಗಪೀಡಿತರ ರಕ್ತವನ್ನು ಕುಡಿದ ಮೇಲೆ, ಸಸ್ಯರಸವನ್ನು ಹೀರಬೇಕಾಗಿತ್ತು. ಮರಳುನೊಣಗಳ ಹೊಟ್ಟೆಯಲ್ಲಿದ್ದ
ಸಸ್ಯರಸವು ಲೀ.ಡೊನೋವನಿ ವರ್ಧನೆಗೆ ನೆರವಾಗುತ್ತಿತ್ತು. ಈಗ ವಿಜ್ಞಾನಿಗಳಿಗೆ ಕಾಲಾ-ಅಜ಼ರ್ ಒಬ್ಬರಿಂದ ಒಬ್ಬರಿಗೆ ಹರಡುವ ಬಗ್ಗೆ ತಿಳಿಯಿತು. ಮಲೇರಿಯ ನಿರ್ಮೂಲನಕ್ಕೆ ವಿಸ್ತೃತವಾಗಿ ಬಳಸುತ್ತಿದ್ದ ಡಿಡಿಟಿ ಮರಳುನೊಣವನ್ನೂ ನಾಶಮಾಡುತ್ತಿತ್ತು. ಹಾಗಾಗಿ ಮಲೇರಿಯ ಜತೆಯಲ್ಲಿ ಕಾಲಾ-ಅಜ಼ರನ್ನೂ ನಿಯಂತ್ರಿಸುವುದು ಸುಲಭವಾಯಿತು.

ಆದರೆ ಕಾಲಾ-ಅಜ಼ರನ್ನು ಗುಣಪಡಿಸಬಲ್ಲ ಔಷಧವನ್ನು ಕಂಡುಹಿಡಿಯಬೇಕಾಗಿತ್ತು. ಇದನ್ನು ಭಾರತೀಯ ವೈದ್ಯ ಜ್ಞಾನಿ ರಾಯ್‌ಬಹಾದುರ್ ಸರ್ ಉಪೇಂದ್ರನಾಥ್ ಬ್ರಹ್ಮಚಾರಿ ಸಮರ್ಥವಾಗಿ ನಿರ್ವಹಿಸಿದರು. ಇವರಿಗೆ ರಸಾಯನಶಾಸ್ತ್ರದಲ್ಲಿ ಪರಿಶ್ರಮವಿದ್ದುದರಿಂದ ಕಾಲಾ- ಅಜ಼ರ್‌ಗೆ ಔಷಧ ಕಂಡುಹಿಡಿ ಯಲು ಪಣತೊಟ್ಟರು. ಅವರಿದ್ದ ಕ್ಯಾಂಪ್‌ಬೆಲ್ ಆಸ್ಪತ್ರೆಯಲ್ಲಿ ಸಂಶೋಧನೆಗೆ ಯಾವುದೇ ಸೌಲಭ್ಯವಿರಲಿಲ್ಲ. ಇದ್ದ ಒಂದು ಕೋಣೆಯಲ್ಲಿ ವಿದ್ಯುದ್ದೀಪ, ಕೈತೊಳೆಯಲು ಸಿಂಕ್, ರೋಗಜನಕಗಳೊಡನೆ ಕೆಲಸ ಮಾಡಲು ಅಗತ್ಯವಿದ್ದ ಗ್ಯಾಸ್ ಬರ್ನರ್ ಇರಲಿಲ್ಲ. ಲಾಟೀನು ಬೆಳಕಲ್ಲೇ ಕೆಲಸ ಮಾಡಬೇಕಾಯಿತು. ಗುಣಪಡಿಸಬಹುದಾದ ಹಲವು ರಾಸಾಯನಿಕಗಳನ್ನು ಆಯ್ಕೆ ಮಾಡಿ ಸೂಕ್ಷ್ಮದರ್ಶಕದ ಮುಂದೆ ಕುಳಿತು, ಯಾವ ಔಷಧ ಲೀ. ಡೊನೋವನಿಯನ್ನು ಸಂಪೂರ್ಣ ನಾಶಪಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಿದರು. ಜತೆಗೆ ಆ ರಾಸಾಯನಿಕವು ರೋಗಿಗೆ ತೊಂದರೆಯುಂಟುಮಾಡಬಾರದು ಎನ್ನುವ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡರು.

ಕೊನೆಗೆ ಯೂರಿಯ ಸ್ವಿಬಾಮೈನ್ ಎನ್ನುವ ರಾಸಾಯನಿಕವನ್ನು ಪತ್ತೆ ಹಚ್ಚಿದರು. ಕಾಲಾ ಅಜ಼ರ್ ರೋಗಿಗಳಿಗೆ ೧.೫ ಗ್ರಾಂ ಯೂರಿಯ ಸ್ಪಿಬಾಮೈನ್ ಇಂಜಕ್ಷನ್ ನೀಡಿದರು. ಕಾಲಾ ಅಜ಼ರ್ ಬಂದ ಶೇ.೯೫ರಷ್ಟು ಜನರು ಸಾಯುವುದು ಖಚಿತವಿತ್ತು. ಆದರೆ ಯೂರಿಯ ಸ್ಟಿಬಾಮೈನ್ ಇಂಜಕ್ಷನ್ ಪಡೆದ ಮೇಲೆ ಸಾವಿನ ಸಂಖ್ಯೆ ಶೇ.೧೦ಕ್ಕೆ ಇಳಿಯಿತು (೧೯೨೫). ೧೯೩೬ರ ವೇಳೆಗೆ ಇದು ಶೇ.೭ಕ್ಕೆ ಕುಗ್ಗಿತು. ಅದುವರೆಗೂ ಚಿಕಿತ್ಸೆಯಿಲ್ಲದ ರೋಗವೆಂದು ಕುಖ್ಯಾತವಾಗಿದ್ದ ಕಾಲಾ ಅಜ಼ರ್ ಈಗ ಗುಣಮುಖವಾಯಿತು. ಗ್ರೀಸ್, ಫ್ರಾನ್ಸ್, ಚೀನಾಗಳಲ್ಲಿ ಯೂರಿಯ ಸ್ಪಿಬಾಮೈನ್ ಔಷಧವನ್ನು ಪರಿಣಾಮಕಾರಿಯಾಗಿ ಬಳಸಿ ಕಾಲಾ ಅಜ಼ರನ್ನು ನಿಗ್ರಹಿಸಿದರು.

ಉಪೇಂದ್ರನಾಥ್ ಕಾಲಾ ಅಜ಼ರನ್ನು ಗುಣಪಡಿಸುವ ಕಾಲಕ್ಕೆ ಹೆಚ್ಚು ಔಷಧಗಳು ದೊರೆಯುತ್ತಿರಲಿಲ್ಲ. ಮಲೇರಿಯವನ್ನು ಗುಣಪಡಿಸಲು ಕ್ವಿನೈನ್, ರಕ್ತಹೀನತೆಯ ತಡೆಗೆ ಕಬ್ಬಿಣದ ಗುಳಿಗೆಗಳು, ಹೃದ್ರೋಗ ನಿಯಂತ್ರಣಕ್ಕೆ ಡಿಜಿಟಾಲಿಸ್ ಮತ್ತು ಸಿಫಿಲಿಸ್‌ನ ನಿಯಂತ್ರಣಕ್ಕೆ ಆಂಟಿಮನಿ ಸಂಯುಕ್ತಗಳಷ್ಟೇ ಲಭ್ಯವಿದ್ದವು. ಉಳಿದ ರೋಗಗಳಿಗೆ ಯಾವುದೇ ಔಷಧಗಳಿರಲಿಲ್ಲ. ಕೇವಲ ರೋಗಲಕ್ಷಣಗಳ ಶಮನಕ್ಕೆ ಕೆಲವು ಔಷಧಗಳನ್ನು ನೀಡುತ್ತಿದ್ದರು. ಇಂಥ ವೇಳೆ ಕಾಲಾ ಅಜ಼ರನ್ನು ಗುಣಪಡಿಸಬಲ್ಲ ಯೂರಿಯ ಸ್ಪಿಬಾಮೈನ್ ಭಾರತೀಯರ ಪಾಲಿಗೆ ವರವಾಯಿತು.

ಅಸ್ಸಾಂನ ರಾಜ್ಯಪಾಲ ಸರ್ ಜಾನ್ ಕೆರ್, ‘ಕಳೆದ ೧೦ ವರ್ಷಗಳ ಅವಧಿಯಲ್ಲಿ ಉಪೇಂದ್ರನಾಥ್ ತಮ್ಮ ಔಷಧದಿಂದ ಅಸ್ಸಾಂ ಒಂದರಲ್ಲೇ ೩ ಲಕ್ಷ ಜನರ ಜೀವ ಉಳಿಸಿದರು’ ಎಂಬ ಹೇಳಿಕೆಯಿತ್ತರು. ಇದನ್ನು ಬ್ರಿಟಿಷರು ವಿರೋಧಿಸಿದರು. ಉಪೇಂದ್ರನಾಥ ಬ್ರಹ್ಮಚಾರಿ ಉದರದ ಕಾಲಾ ಅಜ಼ರ್ ಜತೆ ಮನುಷ್ಯರ ಚರ್ಮದ ಮೇಲೆರಗುವ ವಿಶೇಷ ಕಾಲಾ-ಅಜ಼ರನ್ನೂ ಗುರುತಿಸಿದರು. ಹಾಗಾಗಿ ಅವರ ಗೌರವಾರ್ಥ ಈ ಚರ್ಮಕಾಯಿಲೆಯನ್ನು ಉಪೇಂದ್ರನಾಥ್ ಲೀಷ್ಮೆನಾಯ್ಡ್ ಎಂದರು. ೧೯೧೩ರಲ್ಲಿ ಸಾಹಿತ್ಯ ನೊಬೆಲ್ ಪ್ರಶಸ್ತಿ ರವೀಂದ್ರನಾಥ ಟ್ಯಾಗೋರರಿಗೆ ದೊರೆತಿತ್ತು. ಈಗ ಭಾರತವು ವಿಜ್ಞಾನದ ಮೊದಲ ನೊಬೆಲ್ ಪಾರಿತೋಷಕ
ಗಳಿಸಲು ಸಿದ್ಧವಾಯಿತು.

ಸ್ವೀಡಿಶ್ ಅಕಾಡೆಮಿಯಿಂದ ಹ್ಯಾನ್ಸ್ ಕ್ರಿಶ್ಚಿಯನ್ ಜಾಕೋಬಿಯಸ್ ಹಾಗೂ ಗೋರನ್ ಲಿಲ್ಜೆಸ್ಟ್ರಾಂಡ್ ಎಂಬಿಬ್ಬರು ಸದಸ್ಯರು ಭಾರತಕ್ಕೆ ಬಂದರು. ಯೂರಿಯ ಸ್ಟಿಬಾಮೈನ್ ಹೇಗೆ ಕಾಲಾ ಅಜ಼ರನ್ನು ಗುಣಪಡಿಸುತ್ತದೆ ಎಂಬುದನ್ನು ಕಣ್ಣಾರೆ ಕಾಣಬಯಸಿದರು. ಜತೆಗೆ ಚರ್ಮವನ್ನು ಕಾಡುವ ಡರ್ಮಲ್ ಲೀಷ್ಮೆನಾಯ್ಡನ್ನೂ
ಗುರುತಿಸಿದ್ದರಲ್ಲವೆ! ಆ ಬಗ್ಗೆ ಸ್ವಮಗ್ರವಾಗಿ ತಿಳಿಯಬಯಸಿದರು. ಬ್ರಹ್ಮಚಾರಿಯವರಿಗೆ ನೊಬೆಲ್ ಪ್ರಶಸ್ತಿ ಘೋಷಿಸುವ ಇರಾದೆ ಅವರಿಗಿತ್ತು. ಆದರೆ ಆ ವರ್ಷದ
ವೈದ್ಯಕೀಯ ಪ್ರಶಸ್ತಿ ಕ್ರಿಶ್ಚಿಯನ್ ಇಜ಼್ಕ್‌ಮನ್ ಹಾಗೂ ಫ್ರೆಡ್ರಿಕ್ ಗೋಲ್ಯಾಂಡ್ ಹಾಪ್ಕಿನ್ಸ್‌ರಿಗೆ ದೊರೆಯಿತು. ಅವರು ವಿಟಮಿನ್ನುಗಳನ್ನು ಕಂಡುಹಿಡಿದಿದ್ದರು. ಬಹುಶಃ ಉಪೇಂದ್ರ ನಾಥ್ ಕಂದುಬಣ್ಣದ ಭಾರತೀಯರಾಗಿರದೆ ಬಿಳಿತೊಗಲಿನ ಯುರೋಪಿಯನ್ ಆಗಿದ್ದಿದ್ದರೆ ವೈದ್ಯಕೀಯ ನೊಬೆಲ್ ಖಂಡಿತ ದೊರೆಯುತ್ತಿತ್ತು. ಬ್ರಿಟಿಷರ ಒಡೆದು ಆಳುವ ನೀತಿ ಮತ್ತೊಮ್ಮೆ ಗೆದ್ದಿತ್ತು.

ಭಾರತವು ಕಾಲಾ ಅಜ಼ರ್‌ನಿಂದ ಇನ್ನೂ ಪೂರ್ಣ ಮುಕ್ತ ವಾಗಿಲ್ಲ. ೧೯೭೬-೭೭ರಲ್ಲಿ ಇದು ೪೦೦೦ ಜನರನ್ನು ಬಲಿ ತೆಗೆದುಕೊಂಡಿತು. ಇಂದು ಜಗತ್ತಿನ ೮೨ ದೇಶಗಳಲ್ಲಿ ಕಾಲಾ ಅಜ಼ರ್ ಇದೆ. ವಿಶ್ವ ಆರೋಗ್ಯ ಸಂಸ್ಥೆಯು ಇಂದಿಗೂ ಜಾಗತಿಕ ಮಟ್ಟದಲ್ಲಿ ೬ ಲಕ್ಷ ಪ್ರಕರಣಗಳು ಸಂಭವಿಸುತ್ತಿವೆ ಎಂದಿದೆ. ಏಡ್ಸ್ ಪೀಡಿತರನ್ನು ಕಾಡುವ ಮೂಲಕ ಸಮಯಸಾಧಕ ರೋಗವೆಂದು ಕುಖ್ಯಾತವಾಗಿದೆ. ಮನುಷ್ಯನು ಚಾಪೆಯ ಕೆಳಗೆ ತೂರಿದರೆ, ರೋಗಕಾರಕಗಳು ರಂಗೋಲಿಯ ಕೆಳಗೆ ನುಸುಳುತ್ತವೆ. ಹಾಗಾಗಿ ಮನುಷ್ಯ ಹಾಗೂ ರೋಗಕಾರಕಗಳ ನಡುವಿನ ಕಣ್ಣಾಮುಚ್ಚಾಲೆ ಆಟ ಮುಂದುವರಿಯುತ್ತಿದೆ.