Saturday, 12th October 2024

ಆರ್ಥಿಕ ಅಸ್ಪ್ರಶ್ಯತೆ – ನವಯುಗ ಬ್ರಹ್ಮಾಸ್ತ್ರ

ವಿಶ್ಲೇಷಣೆ

ಕಿಶೋರ್‌ ನಾರಾಯಣ್

kishor.narayan@gmail.c0m

ಕೇವಲ ರಷ್ಯಾದ ಜತೆ ನಾವು ನಮ್ಮ ವ್ಯವಹಾರಗಳನ್ನು ಮುಂದುವರಿಸುತ್ತಿದ್ದೇವೆ ಎನ್ನುವ ಚಿಕ್ಕ ಕಾರಣಕ್ಕೆ ನಮ್ಮನ್ನೂಅಸ್ಪೃಶ್ಯರನ್ನಾಗಿ ನೋಡಬಾರದು ಎನ್ನುವುದೇ ನಮ್ಮ ಸರಕಾರದ ಮುಖ್ಯ ಉದ್ದೇಶವಾಗಬೇಕು.

ರಷ್ಯಾ ಉಕ್ರೇನ್‌ನ ಮೇಲೆ ದಾಳಿ ಪ್ರಾರಂಭಿಸಿ ಇಪ್ಪತ್ತು ದಿನಗಳು ಕಳೆದಿವೆ. ಉಕ್ರೇನ್‌ನ ಅನೇಕ ನಗರಗಳನ್ನು ರಷ್ಯಾದ ಪಡೆಗಳು ವಿನಾಶದ ಅಂಚಿಗೆ ದೂಡಿವೆ.

1990ರಲ್ಲಿ ನಡೆದ ಮೊದಲ ಕೊಲ್ಲಿ ಯುದ್ಧದ ನಂತರ ಮೂಗಿನ ಮೇಲೆ ಬೆರಳಿಟ್ಟು ‘ಅಬ್ಬಾ’ ಎನ್ನುವ ಮಟ್ಟಿಗೆ ಈ ಯುದ್ಧ ಜನರ ಗಮನ ಸೆಳೆದಿದೆ. ಉಕ್ರೇನ್ ಸಹಾಯ ಕ್ಕೆಂದು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಥರಾವರಿಯಾಗಿ ಕೇಳಿಕೊಳ್ಳುತ್ತಿದೆ. ಶಸ್ತ್ರಾಸ್ತ್ರಗಳು ಬೇಕು, ಆ ಶಸಾಸಗಳನ್ನು ಚಲಾಯಿಸಲು ಸೈನಿಕರು ಬೇಕು ಎನ್ನುವ ರೀತಿಯಲ್ಲಿ ಉಕ್ರೇನ್ ಪರಿತಪಿಸುತ್ತಿದೆ. ಆದರೂ ಉಕ್ರೇನ್‌ನ ಬೆನ್ನಿಗೆ ನಿಲ್ಲಲು ಯಾವ ದೇಶವೂ ತಯಾರಿಲ್ಲ. ಕಾರಣ ಎದುರಿಗಿರುವುದು ರಷ್ಯಾ.

ರಷ್ಯಾದ ಯುದ್ಧ ಸಾಮರ್ಥ್ಯ ಎಲ್ಲರಿಗೂ ತಿಳಿದಿರುವುದೇ. ಮೇಲಾಗಿ ರಷ್ಯಾದ ಅಧ್ಯಕ್ಷ ಪುಟಿನ್ ಅಂತೂ ಕ್ರೋಧಗೊಂಡು ಯಾರೇ ಉಕ್ರೇನ್ ಸಹಾಯಕ್ಕೆ ಬಂದರೂ, ಅವರು ನಮ್ಮ ಮೇಲೆ ಯುದ್ಧಕ್ಕೆ ಬಂದರೆಂದು ರಷ್ಯಾ ಪರಿಗಣಿಸುತ್ತದೆ ಎಂದು ಘೋಷಿಸಿದ್ದಾರೆ. ಅಲ್ಲದೆ ಪುಟಿನ್ ತಮ್ಮಲ್ಲಿರುವ ಅಣ್ವಸ್ತ್ರಗಳ ನ್ನೂ ಸನ್ನದ್ಧಗೊಳಿಸಲು ಆದೇಶಿಸಿzರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆ ಯಾವ ದೇಶವಾದರೂ ಹೇಗೆ ರಣಭೂಮಿಗೆ ಸಹಾಯಕ್ಕೆ ಹೋದೀತು? ಅದಕ್ಕಾಗಿ ಅಮೆರಿಕದ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶ ಗಳು ರಷ್ಯಾದ ಮೇಲೆ ಆರ್ಥಿಕ ವಾಗಿ ಹೊರೆ ಹೊರೆಸಲು ಸಜ್ಜಾಗಿವೆ.

ಹಿಂದೆಂದೂ ಕಾಣದ ರೀತಿಯಲ್ಲಿ ಆರ್ಥಿಕ ನಿರ್ಬಂಧಗಳನ್ನು ರಷ್ಯಾ ಮೇಲೆ ಹೊರಿಸುತ್ತೇವೆಂದು ಹೇಳುತ್ತಲೇ ಬಂದಿರುವ ಅಮೆರಿಕಾದಿ ರಾಷ್ಟ್ರಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಈ ಕ್ರಮಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಈ ಲೇಖನದ್ದಾಗಿದೆ. ಆರ್ಥಿಕ ನಿರ್ಬಂಧಗಳು ಒಂದು ಹೊಸ ಆವಿಷ್ಕಾರವೇನಲ್ಲ. ಕ್ಯೂಬಾ, ದಕ್ಷಿಣ ಆಫ್ರಿಕಾ, ಉತ್ತರ ಕೊರಿಯಾ ಅಲ್ಲದೆ ಭಾರತದ ಮೇಲೂ ಆರ್ಥಿಕ ನಿರ್ಬಂಧಗಳನ್ನು ಅನೇಕ ಕಾರಣಗಳಿಗೆ ಹೇರಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಇದೊಂದು ಹೊಸ ಬಗೆಯ ಆರ್ಥಿಕ ಅಸ್ಪೃಶ್ಯತೆ ಯನ್ನು ರಷ್ಯಾ ಮೇಲೆ ಹೇರಿರುವುದು ಗಮನಾರ್ಹ.

1. ಸ್ವಿಫ್ಟ್ ವ್ಯವಸ್ಥೆ – ಸ್ವಿಫ್ಟ್ ಎನ್ನುವ ಜಾಗತಿಕ ಪಾವತಿ ವ್ಯವಸ್ಥೆ ಈಗ ಪ್ರಪಂಚದ 200ಕ್ಕೂ ಹೆಚ್ಚು ದೇಶ ಹಾಗೂ ಪ್ರದೇಶಗಳ 11 ಸಾವಿರಕ್ಕೂ ಹೆಚ್ಚು ಬ್ಯಾಂಕ್‌ಗಳನ್ನು ಒಳಗೊಂಡಿದೆ. ಒಂದು ದೇಶದ ಬ್ಯಾಂಕ್‌ನಿಂದ ಮತ್ತೊಂದು ದೇಶದ ಬ್ಯಾಂಕ್‌ಗೆ ಹಣ ವರ್ಗಾಯಿಸ ಬೇಕಾದರೇ ಈ ಸ್ವಿಫ್ಟ್ ವ್ಯವಸ್ಥೆಯ ಮೂಲಕವೇ ಡಾಲರ್ ಸಂದಾಯವಾಗಬೇಕು. ಒಂದು ರೀತಿಯಲ್ಲಿ ಇದು ಆರ್ಥಿಕ ಜಗತ್ತಿನ ರಕ್ತ ಪರಿಚಲನ ವ್ಯವಸ್ಥೆ ಎಂದರೆ ತಪ್ಪಾಗಲಾರದು. ಅಂತಹ ಸ್ವಿಫ್ಟ್ ವ್ಯವಸ್ಥೆಯಿಂದ ಈಗ ರಷ್ಯಾವನ್ನು ಹೊರಗುಳಿಸಲಾಗಿದೆ. ಅಂದರೆ ಹೊರಗಿ ನಿಂದ ರಷ್ಯಾಕ್ಕೆ ಹಾಗೂ ರಷ್ಯಾದಿಂದ ಹೊರಕ್ಕೆ ಹಣ ಸಂದಾಯವಾಗುವುದನ್ನೇ ತಡೆಯಲಾಗಿದೆ.

2. ಕಾರ್ಡ್ ನಿಷ್ಕ್ರಿಯ – ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಂಪನಿಗಳು ರಷ್ಯಾದಲ್ಲಿ ಇರುವ ಅವರ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿ ದ್ದಾರೆ. ಅಂದರೆ ಸಾಮಾನ್ಯ ರಷ್ಯನ್ನರಿಗೆ ಅವರ ದೈನಂದಿನ ವಹಿವಾಟುಗಳಿಗೆ ಒಂದು ಪರ್ಯಾಯ ಹುಡುಕಬೇಕಾಗಿದೆ.

3. ಆಪಲ್ ಪೇ, ಜಿಪೇ – ಸ್ಮಾರ್ಟ್ ಫೋನ್‌ಗಳಲ್ಲಿ ಇರುವ ಆಪಲ್ ಪೇ ಹಾಗೂ ಜಿಪೇ ಎನ್ನುವ ಪಾವತಿ ವ್ಯವಸ್ಥೆಗಳೂ ರಷ್ಯಾದಲ್ಲಿ ನಿಷ್ಕ್ರಿಯವಾಗಿವೆ. ಅಂದರೆ, ರಷ್ಯನ್ನರು ಅವರ ಬ್ಯಾಂಕ್ ಖಾತೆಗಳನ್ನು ಈ ಸ್ಮಾರ್ಟ್ ಫೋನ್ ಪಾವತಿ ವ್ಯವಸ್ಥೆಗೆ ಜೋಡಿಸಿದ್ದರೆ, ಅದರಿಂದ ಈಗ ಹಣ ಪಾವತಿಸುವುದು ಅಸಾಧ್ಯ.

4. ಕಚ್ಚಾ ತೈಲ ಬಂದ್ – ಎಕ್ಸಾನ್ ಕಾರ್ಪೋರೇಶನ್ ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಕಂಪನಿಗಳಲ್ಲಿ ಒಂದು. ರಷ್ಯಾದ ರೋಸ್‌ ನೆಫ್ಟೋ ಎನ್ನುವ ಕಚ್ಚಾ ತೈಲ ಕಂಪನಿ ಜತೆಗೆ ರಫ್ಯು ವಹಿವಾಟು ನಡೆಸುತ್ತಿತ್ತು. ಈಗ ಎಕ್ಸಾನ್, ರೋಸ್‌ನೆಫ್ಟೋ ಜತೆಗಿನ ತನ್ನ ಸಂಬಂಧ ವನ್ನು ಮುರಿದಿದೆ. ಇದರಿಂದ ಎಕ್ಸಾನ್ ಗೆ ೪ ಬಿಲಿಯನ್ ಡಾಲರ್‌ಗಳ ನಷ್ಟವಾಗುತ್ತಿದ್ದರೂ ಈ ಹೆಜ್ಜೆ ಇಟ್ಟಿದೆ.

5. ವಿದೇಶಿ ವಿನಿಮಯ ಜಪ್ತು – ಎಲ್ಲ ದೇಶಗಳು ತನ್ನ ಕಷ್ಟ ಸಮಯಕ್ಕೆ ಬೇಕಾಗುವಂತೆ ಡಾಲರ್‌ಗಳನ್ನು ಸಂಗ್ರಹಿಸಿಕೊಳ್ಳುತ್ತದೆ. ಆದರೆ, ಈ ಸಂಗ್ರಹ ಅವರ ದೇಶದ ಬ್ಯಾಂಕ್ ಗಳಲ್ಲಿ ಇರುವುದಿಲ್ಲ. ಬದಲಾಗಿ, ಅನ್ಯ ಬಲಿಷ್ಠ ದೇಶಗಳ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿರುತ್ತದೆ. ರಷ್ಯಾ ಕೂಡ 643 ಬಿಲಿಯನ್ ಡಾಲರ್ ಇಟ್ಟುಕೊಂಡಿತ್ತು. ಅದರಲ್ಲಿ ಈಗ ಪಾಶ್ಚಿಮಾತ್ಯ ದೇಶಗಳು ಈ ಸಂಗ್ರಹವನ್ನು ಜಪ್ತು ಮಾಡಿಬಿಟ್ಟಿವೆ.

ಇದರಿಂದಾಗಿ, ರಷ್ಯಾ ಇದ್ದರೂ ಬಳಸಿಕೊಳ್ಳಲಾಗದ ಹಾಗೆ ಆಗಿದೆ ಈ ವಿದೇಶಿ ವಿನಿಮಯ. ಹಿಂದೆಂದೂ ಕಾಣದಂತಹ ಈ ರೀತಿಯ ಹೆಜ್ಜೆಗಳನ್ನು ಪಾಶ್ಚಿಮಾತ್ಯ ದೇಶಗಳು ತೆಗೆದುಕೊಂಡಿರುವುದು ರಷ್ಯಾಕ್ಕೆ ಅತ್ಯಂತ ಆಘಾತಕಾರಿಯಾಗಿರುವುದಂತೂ ನಿಜ. ರಷ್ಯಾಕ್ಕೆ ಕೈಯಲ್ಲಿ ಒಂದು ಬಿಡಿಗಾಸೂ ಇರಬಾರದು, ಅದರಿಂದ ಯುದ್ಧ ಮಾಡುವ ಕ್ಷಮತೆ ಕಳೆದುಕೊಳ್ಳಬೇಕು ಎನ್ನುವುದು ಅಮೆರಿಕಾದಿ ದೇಶಗಳ ಉಪಾಯ. ಇದು ನಿಜವಾಗಿ ಹಾಗೆ ಆಗುತ್ತದೋ ಇಲ್ಲವೋ ಕಾಲವೇ ಹೇಳುತ್ತದೆ. ಆದರೆ ಈ ರೀತಿಯ ಆರ್ಥಿಕ ಅಸ್ಪೃಶ್ಯತೆ ನವಯುಗದ ಬ್ರಹ್ಮಾಸ್ತ್ರ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಆದರೆ, ಇದೆಲ್ಲದರ ನಡುವೆ ಒಂದು ಹೊಸ ಪ್ರಶ್ನೆ ಉದ್ಭವವಾಗುವುದಂತೂ ಸಹಜ. ಒಂದು ವೇಳೆ ಪಾಶ್ಚಿಮಾತ್ಯ ದೇಶಗಳಿಗೆ ಭಾರತದ ಮೇಲೆ ಮುನಿಸಾದರೆ, ಆಗ ಭಾರತದ ಮೇಲೂ ಇಂತಹದ್ದೇ ಬ್ರಹ್ಮಾಸ ಪ್ರಯೋಗವಾಗಬಹುದೇ? ಒಂದು ವೇಳೆ ಪ್ರಯೋಗವಾದರೆ ಭಾರತ ಗತಿಯೇನು? ಇಂತಹ ಒಂದು ವಿಚಾರ ಭಾರತೀಯರ ಮನದಲ್ಲೂ ಹರಿದಾಡುತ್ತಿದೆ. ಇದೆಲ್ಲದಕ್ಕೂ ಒಂದೇ ಉತ್ತರ. ಭಾರತ ವೂ ಚೀನಾಕ್ಕಿಂತಲೂ ಬಲಿಷ್ಠವಾಗಬೇಕು. ಎಷ್ಟು ಬಲಿಷ್ಠವೆಂದರೆ, ಭಾರತಕ್ಕೆ ಹಾನಿ ಮಾಡಹೊರಟರೆ ಅವರಿಗೆ ಹೆಚ್ಚು ಹಾನಿಯಾಗು ವಂತಾಗಬೇಕು. ಇದು ಹುಚ್ಚು ದೇಶಭಕ್ತಿ ಎಂದೆನಿಸುವುದು ಸಹಜ.

ಆದರೆ ಈ ಮಾತಿನಲ್ಲಿ ಒಂದು ತಿರುಳಿದೆ. ಚೀನಾ ಪ್ರಪಂಚಕ್ಕೇ ಫ್ಯಾಕ್ಟರಿ ಎನ್ನುವ ರೀತಿಯಲ್ಲಿ ಎಲ್ಲ ಪದಾರ್ಥಗಳನ್ನು ತಯಾರಿಸುತ್ತಿತ್ತು. ಆದರೆ ಕರೋನ ಮಹಾಮಾರಿ ಎಡೆ ಹರಡಿದಾಗ, ಲಾಕ್‌ಡೌನ್ ನಿಂದ ಚೀನಾದಿಂದ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗದ ಪರಿಸ್ಥಿತಿ ಉದ್ಭವವಾದಾಗ, ಎಲ್ಲ ದೇಶಗಳಿಗೂ ಅನಿಸಿದ್ದು – ನಮ್ಮ ದೇಶದ ನಮಗೆ ಬೇಕಾದ ಪದಾರ್ಥಗಳ ಉತ್ಪಾದನಾ ಘಟಕಗಳನ್ನು ತೆರೆಯಬೇಕು ಎಂದು. ಸೇಫ್ಟಿ ಪಿನ್‌ನಿಂದ ಮಕ್ಕಳ ಆಟಿಕೆಯವರೆಗೆ, ವಾಹನಗಳ ಬಿಡಿಭಾಗಗಳಿಂದ ರಬ್ಬರ್ ಪದಾರ್ಥಗಳವರೆಗೆ ಯಾವುದು ಸಾಧ್ಯವೋ ಅದನ್ನು ನಾವೇ ತಯಾರಿಸಿಕೊಳ್ಳಬೇಕೆನ್ನುವುದು.

ಭಾರತಕ್ಕೆ ಈಗ ಎರಡು ಸವಾಲುಗಳು ಎದುರಾಗಿವೆ. ಚೀನಾ ಎದುರಿಗೆ ನಿಲ್ಲಬೇಕಾದರೆ ಚೀನಾ ತಯಾರಿಸುತ್ತಿದ್ದ ಪದಾರ್ಥಗಳನ್ನು ನಾವೇ ತಯಾರಿಸಬೇಕಾಗುತ್ತದೆ. ನಮಗಾಗಿ ಅಷ್ಟೇ ಅಲ್ಲ, ಪ್ರಪಂಚಕ್ಕೆ ಬೇಕಾಗುವಷ್ಟು. ದರದಲ್ಲಿ ಗುಣಮಟ್ಟದಲ್ಲಿ ಈ ಪದಾರ್ಥಗಳು ಸಾಬೀತಾಗಬೇಕು. ಹೀಗೆ ಮಾಡುತ್ತ ದೇಶ ಮತ್ತಷ್ಟು ಶ್ರೀಮಂತವಾಗಬೇಕಾಗುತ್ತದೆ. ಮತ್ತೊಂದು ಆಯಾಮ ಭಾರತದ ಆರ್ಥಿಕ ಬೆಳವಣಿಗೆ.

ಭಾರತ ಶೀಘ್ರಾತಿ ಶೀಘ್ರವಾಗಿ ಶೇ.8-10ರ ಮಟ್ಟದಲ್ಲಿ ಬೆಳೆಯಬೇಕಾಗುತ್ತದೆ. ಅಲ್ಲದೆ, ತನ್ನದೇ ಆರ್ಥಿಕ ಮೂಲಸೌಕರ್ಯಗಳನ್ನು ಬೆಳೆಸಬೇಕಾಗುತ್ತದೆ. ರೂಪೇ ಕಾರ್ಡ್ಗಳು, ಯುಪಿಐ ಪಾವತಿ ವ್ಯವಸ್ಥೆ ಇದೆ ಮೂಲಸೌಕರ್ಯದ ಬುನಾದಿ. ಮುಂದಿನ ದಿನಗಳಲ್ಲಿ ನಮ್ಮ ದೇಶದ ರುಪಾಯಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗುತ್ತದೆ. ನಮ್ಮ ಮಿತ್ರ ದೇಶಗಳಾದ ಯೂಎಈ, ಇಸ್ರೇಲ್, ರಷ್ಯಾ, ಇರಾನ್, ಶ್ರೀಲಂಕಾ, ಸಿಂಗಾಪುರಗಳ ಜತೆ ಸಾಧ್ಯವಾದಷ್ಟು ಮಟ್ಟಿಗೆ ರುಪಾಯಿಯ ವಹಿವಾಟು ನಡೆಸುವ ಪ್ರಯತ್ನ ನಡೆಸುವುದು ಉತ್ತಮ. ಇದರಿಂದ ಎರಡು ಪ್ರಯೋಜನಗಳಾಗುತ್ತವೆ. ಭಾರತ ಕಷ್ಟ ಪಟ್ಟು ಸಂಗ್ರಹಿಸಿಟ್ಟ ಡಾಲರ್ ವಿದೇಶಿ ವಿನಿಮಯ ತನ್ನ ಉಳಿಯುತ್ತದೆ.

ಅಲ್ಲದೆ ರುಪಾಯಿ ಕೂಡ ವಿದೇಶಿಯರ ಪ್ರೀತಿಗೆ ಪಾತ್ರವಾಗುತ್ತದೆ. ಜಪಾನಿನ ಯೆನ್, ಯೂರೋಪ್‌ನ ಯುರೋ, ಚೀನಾದ ಯೂವಾನ್‌ನಂತೆಯೇ ಭಾರತದ ರುಪಾಯಿಯೂ ಜಾಗತಿಕ ನಾಣ್ಯವಾಗಿ ಹೊರಹೊಮ್ಮುತ್ತದೆ. ಈ ಎಲ್ಲ ಬದಲಾವಣೆಗಳು ರಾತ್ರೋ ರಾತ್ರಿ ನಡೆಯುವಂಥದ್ದಲ್ಲ. ಕನಿಷ್ಠ 1-2 ದಶಕಗಳೇ ಹಿಡಿಯುತ್ತವೆ. ಈ ಸಮಯದಲ್ಲಿ ಪ್ರಪಂಚದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಏನೇ ಆದರೂ ಭಾರತ ತನ್ನ ಗುರಿಯತ್ತ ಮುಂದೆ ಸಾಗಬೇಕಾಗುತ್ತದೆ.

ಹಾಗೆಯೇ ಆರ್ಥಿಕ ಅಸ್ಪೃಶ್ಯತೆ ಎನ್ನುವ ಬೀಸುವ ದೊಣ್ಣೆಯಿಂದಲೂ ಭಾರತ ತಪ್ಪಿಸಿಕೊಳ್ಳಬೇಕಾಗುತ್ತದೆ. ಕೇವಲ ರಷ್ಯಾದ ಜತೆ ನಾವು ನಮ್ಮ ವ್ಯವಹಾರಗಳನ್ನು ಮುಂದುವರಿಸುತ್ತಿದ್ದೇವೆ ಎನ್ನುವ ಚಿಕ್ಕ ಕಾರಣಕ್ಕೆ ನಮ್ಮನ್ನೂ ಅಸ್ಪೃಶ್ಯರನ್ನಾಗಿ ನೋಡಬಾರದು ಎನ್ನುವುದೇ ನಮ್ಮ ಸರಕಾರದ ಮುಖ್ಯ ಉದ್ದೇಶವಾಗಬೇಕು. ಮುಂದಿನ ವರ್ಷಗಳಲ್ಲಿ ಕದನಗಳು ಹೆಚ್ಚಾದರೆ, ನಮ್ಮ ಆರ್ಥಿಕ ವ್ಯವಸ್ಥೆ ಅದರಿಂದ ಹೆಚ್ಚು ಕಷ್ಟಕ್ಕೊಳಗಾಗಬಾರದು ಎನ್ನುವುದೂ ಸರಕಾರದ ಗುರಿಯಾಗುತ್ತದೆ. ಸರಕಾರದ ಈಗಿನ ಆತ್ಮನಿರ್ಭರತೆ ಅಭಿಯಾನ ಈ ನಿಟ್ಟಿನಲ್ಲಿ ಇಟ್ಟಿರುವ ಸರಿಯಾದ ಹೆಜ್ಜೆ. ಇದನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಶರವೇಗದಲ್ಲಿ ಮುಂದೆ ತೆಗೆದುಕೊಂಡು ಹೋಗ ಬೇಕಾಗುತ್ತದೆ.

ಜನರು ಸಹ ಇದನ್ನು ಅರ್ಥಮಾಡಿಕೊಂಡು ಸರಕಾರದ ಸಹಾಯಕ್ಕೆ ನಿಲ್ಲಬೇಕಾಗುತ್ತದೆ. ಆಗಲೇ ಭಾರತ ಹೊರಗಿನ ಸವಾಲುಗಳಿಗೆ ಸರಿಯಾದ ಪ್ರತಿಕ್ರಿಯೆ ನೀಡಬಲ್ಲದು.