Sunday, 15th December 2024

ಬ್ರಾಹ್ಮಣರಿಗೆ ರೌರವ ನರಕ ತಪ್ಪಿದ್ದಲ್ಲ

ರಾವ್‌-ಭಾಜಿ

ಪಿ.ಎಂ.ವಿಜಯೇಂದ್ರ ರಾವ್‌

ಆಕೆಯ ಏಕೈಕ ಅಪರಾಧ ಆಕೆ ಆತನಾಗಿಲ್ಲದ್ದು. ಇದು ಇಂದಿನ ಕಠೋರ ವಾಸ್ತವ. ತುಸುವಾದರೂ ಈ ವಾಸ್ತವದ ಘೋರತೆಯ ಅರಿವಾಗಬೇಕಾದರೆ ನೀವು ಆತನಾಗಿರದೆ, ಆಕೆಯಾಗಿರಬೇಕು. ಎಲ್ಲ ಹೆಣ್ಣುಗಳು ಅತ್ಯಾಚಾರಕ್ಕೊಳಗಾಗುವುದಿಲ್ಲ.

ಆದರೆ ಅತ್ಯಾಚಾರಕ್ಕೊಳಗಾಗದ ಹೆಣ್ಣುಗಳೆಲ್ಲರ ಬಾಳು ನೆಮ್ಮದಿಯದಲ್ಲ. ಅವರು ಅನುಭವಿಸುವ ನಿತ್ಯ ಕಿರುಕುಳದ ಮೂಲ ಒಂದೇ – ವ್ಯಕ್ತಿ ಹೆಣ್ಣೆಂಬುದು. ಬಹುತೇಕ ಹೆಂಗಸರು ಅವರವರ ಕಾರ್ಯಕ್ಷೇತ್ರದಲ್ಲಿ ಅನುಭವಿಸುವ ಹಿಂಸೆಯಿದು. ಸಂಪರ್ಕ ರಹಿತ ಲೈಂಗಿಕ ಕಿರುಕುಳ ಪ್ರಕರಣಗಳೂ ತಿಳಿದದ್ದೇ. ಆಕೆಯ ಉಡುಪನ್ನಷ್ಟೆ ಸ್ಪರ್ಶಿಸಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲವೆಂಬ ನ್ಯಾಯಾಲಯವೊಂದರ ಇತ್ತೀಚಿನ ಅಪದ್ಧ ತೀರ್ಪು ಆಕೆಗೆ ಕಿರುಕುಳವನ್ನು ಮುಂದುವರಿಸಲು ಕೊಟ್ಟ ಪರವಾನಗಿಯಂತಿದೆ.

ಇಂಥದೇ ಕಿರುಕುಳವನ್ನು ಅವರಷ್ಟೇ ನಿರಂತರವಾಗಿ ಅನುಭವಿಸುವ ವರ್ಗ, ದಲಿತರನ್ನು ಹೊರತುಪಡಿಸಿದರೆ, ಬ್ರಾಹ್ಮಣರದ್ದು.
ದಲಿತರಿಗಾದರೋ ಕಾನೂನಿನ ರಕ್ಷಣೆಯಿದೆ. (ಆ ಕಾನೂನಿನ ದುರ್ಬಳಕೆಯೂ ಉಂಟು, ಆ ವಿಷಯ ಬೇರೆ). ಕಿರುಕುಳಕ್ಕೆ ಒಳಗಾ ದವರು ಮಹಿಳೆಯರೇ ಇರಲಿ, ದಲಿತರೇ ಇರಲಿ, ಕಾನೂನು ಅದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತ ಬ್ರಾಹ್ಮಣರ ಮೇಲಾಗುವ ದೌರ್ಜನ್ಯ, ಹಿಂಸೆ, ಕಿರುಕುಳ, ಅನ್ಯಾಯವನ್ನು ತಡೆಗಟ್ಟಲು ಯಾವ ವಿಶೇಷ ಕಾನೂನೂ ಇಲ್ಲ. ಇರುವ ಕಾನೂನಿಗೇ ಇಂತಹ ನಿತ್ಯ ಘಟಿಸುವ ಪ್ರಕರಣಗಳ ಪ್ರಮಾಣವನ್ನಾದರೂ ಕಡಿಮೆ ಮಾಡುವ ಶಕ್ತಿ ಇದೆ. ಆದರೆ, ಬ್ರಾಹ್ಮಣರು ಓಟ್ ಬ್ಯಾಂಕ್ ಅಲ್ಲವಲ್ಲ? ಬ್ರಾಹ್ಮಣರು ಪಾಪ ಮಾಡಿದರೆ, ಅವರು ತಿಳಿದವರಾದ್ದರಿಂದ, ಆ ತಪ್ಪಿಗೆ ಉಳಿದವರ ಪಾಪಕ್ಕೆ ದೊರಕುವುದಕ್ಕಿಂತ ಹೆಚ್ಚು ಉಗ್ರ ಶಿಕ್ಷೆ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಆದರೆ ಅವರ ಮೊದಲ ತಪ್ಪೇ ಬ್ರಾಹ್ಮಣರಾಗಿ ಜನಿಸಿದ್ದು ಎಂಬಂತಿರುವ ಇಂದಿನ ಪರಿಸ್ಥಿತಿಯಲ್ಲಿ ಬ್ರಾಹ್ಮಣರೆಲ್ಲರಿಗೂ ನರಕ ಕಟ್ಟಿಟ್ಟ ಬುತ್ತಿ. ವಿಶೇಷವೆಂದರೆ, ಆ ಬುತ್ತಿಯನ್ನು ಉಣ್ಣಲು ಪರಲೋಕಕ್ಕೆ ತೆರಳಬೇಕಿಲ್ಲ, ಇಹಲೋಕದ ಅದು ಬಿಚ್ಚಿಕೊಳ್ಳುತ್ತದೆ. ಹುಟ್ಟಿನಿಂದಲೇ ಅಂಟಿಕೊಳ್ಳುವ ಈ ಕಳಂಕದ ಬಾಧೆಯ ತೀವ್ರತೆಯ ಶಮನಕ್ಕಾಗಿ ಕೆಲ ಬ್ರಾಹ್ಮಣರು ಎಡಪಂಥದ ಮೊರೆ ಹೋಗುತ್ತಾರೆ, ಕೆಲವರು ಹೋದಂತೆ ಸೋಗು ಹಾಕುತ್ತಾರೆ. ಉಗ್ರ ಎಡಪಂಥೀಯರ ಜತೆ ಗುರುತಿಸಿಕೊಂಡ ಹಿರಿಯ ಪತ್ರಕರ್ತ ರೊಬ್ಬರು ಬ್ರಾಹ್ಮಣರನ್ನು ಹೀಗಳೆಯಲಿಕ್ಕೆ ಮೀಸಲಿಟ್ಟ ತಮ್ಮ ನಿಯತಕಾಲಿಕೆಯ ಒಂದು ಸಂಚಿಕೆಯ ಮುಖಪುಟದಲ್ಲಿ ಅಪಸವ್ಯ -ಧಾರಿ ಬ್ರಾಹ್ಮಣನೊಬ್ಬನ ಚಿತ್ರವನ್ನು ಪ್ರಕಟಿಸಿ ಧನ್ಯರಾದ ಸರಿ ಸುಮಾರಿನ ಪಿತೃವಿಯೋಗದ ನಂತರ ಮಾಡಿಸಿಕೊಳ್ಳ ಬೇಕಾದ ಕೇಶಮುಂಡನದ ಉಪಯೋಗವನ್ನು ಖಾಸಗಿ ಯಾಗಿ, ಬಿಯರ್ ಕುಡಿಯುತ್ತಾ ಹಂಚಿಕೊಂಡಿದ್ದರು.

ಭೋಜನಪ್ರಿಯನಿಗೆ ಉದರಪೋಷಣೆಯ ಮಹತ್ವವನ್ನು ಹೇಳಿಕೊಡಬೇಕೇ? ಆ ಪತ್ರಕರ್ತನ ಮಾತು ಬಿಡಿ, ಸ್ವತಃ ನಾನೂ ಅಂದು
ಉಗ್ರ ನಾಸ್ತಿಕನೇ. (ಈಗಲೂ ಪರಮ ಆಸ್ತಿಕನೇನಲ್ಲ). ಆದರೆ ಹೊಟ್ಟೆಪಾಡಿನ ನಾಸ್ತಿಕತೆಯಲ್ಲ. ಯಾರನ್ನೂ ಮೆಚ್ಚಿಸಲಿಕ್ಕೆ ಹಾಕಿದ ಮುಖವಾಡವಲ್ಲ. ನನ್ನ ಹದಿನೇಳನೇ ವಯಸ್ಸಿಗೆ ಸ್ವಪ್ರೇರಣೆಯಿಂದ, ಸ್ವಾನುಭವದಿಂದ, ವಿವೇಕಪೂರ್ಣವಾಗಿ ದೇವರನ್ನು ನಿರಾಕರಿಸಿದ್ದೆ. ನನ್ನ ನಾಸ್ತಿಕತೆಯ ಒಣಾಡಂಬರ ನಡೆಸಿಲ್ಲ. ಎಚ್. ನರಸಿಂಹಯ್ಯನವರ ವಿಚಾರಧಾರೆಯೋ, ಪಿ. ಲಂಕೇಶರಿಂದ ಸೋಂಕಿರಬಹುದಾದ ಬಾಲಿಶ ಮಠಧಿ ದ್ವೇಷವೋ ಕಾಣೆ, ನಮ್ಮ ಮನೆಗೆ ಪೇಜಾವರ ಮಠಾಧಿಪತಿಗಳು ಬರುವುದಿತ್ತು, ಕೆಲಸ ಸೃಷ್ಟಿಸಿಕೊಂಡು ಮನೆಯಿಂದ ಹೊರಬಿದ್ದಿದ್ದೆ.

ಇದು ವೃತ್ತಿಪರ ಪತ್ರಕರ್ತನ ಲಕ್ಷಣವಲ್ಲ ಎಂದು ಮುಂದೆಂದೋ ಮನವರಿಕೆಯಾಯಿತು. ಲಂಕೇಶರಷ್ಟೇ ಪೂರ್ವಗ್ರಹ ನನ್ನಲ್ಲೂ ಹೊಕ್ಕಿತ್ತು. ಅದರಿಂದ ಹೊರಬಂದು ವಿಶ್ವೇಶ ತೀರ್ಥರನ್ನು ಕಾಣುವ ಪ್ರಜ್ಞೆ ಬಂದಿದ್ದು ತಡವಾಗಿ. ಅವರಂತಹ ಸಾತ್ವಿಕ, ಧರ್ಮನಿಷ್ಠ, ಪ್ರಗತಿಪರ ಸಂತನ ಭೇಟಿಯ ಭಾಗ್ಯದಿಂದ ದೂರ ಉಳಿದಿದ್ದಕ್ಕೆ ಖೇದವಿದೆ. ಅವರ ನಿಧನಕ್ಕೆ ಮುಂಚೆ ಒಮ್ಮೆ ಭೇಟಿಯಾಗಿದ್ದಾನಾದರೂ ಸಾಂಗೋಪಾಂಗವಾಗಿ ಮಾತನಾಡಲಾಗಲಿಲ್ಲ.

ಎಡಪಂಥೀಯ ಮಾಧ್ಯಮ ಅಂತಹವರನ್ನೂ ವಿಕೃತವಾಗಿ ಚಿತ್ರಿಸಿತು. ಮಾಧ್ಯಮದ ಮುಖ್ಯವಾಹಿನಿಯಿಂದ ನಾನು ದೂರ
ಉಳಿಯುವುದಕ್ಕೆ ಮುಖ್ಯ ಕಾರಣ ಅಲ್ಲಿನ ಜಾತೀಯತೆ. ಅವಕಾಶಗಳನ್ನರಸಿ ಸಣ್ಣ ಊರಿನಿಂದ ದೊಡ್ಡ ಊರಿಗೆ ವಲಸೆ ಹೋಗು ವುದು ಕ್ರಮ. ನಾನು ಬಾಂಬೆ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ, ಗ್ರಾಮೀಣ ಪತ್ರಿಕೋದ್ಯಮವೆಂದರೆ ಮೂಗು ಮುರಿಯುವವರೇ ಹೆಚ್ಚು ಜನರಿರುವ ವ್ಯವಸ್ಥೆಯಲ್ಲಿ ಸಣ್ಣ ಊರಿನಲ್ಲಿ ವರದಿಗಾರನಾಗಿ ಅನುಭವ ಪಡೆಯಲು ಬಯಸಿ ಮೈಸೂರಿಗೆ ಬಂದೆ. ಇಲ್ಲಿ ನಾನು ಗಳಿಸಿದ್ದು ಸಾಕಷ್ಟಿದೆ.

ಆದರೆ, ಖಿನ್ನನಾಗಿಸಿದ್ದು ನನ್ನ ಕೆಲವು ಸಹೋದ್ಯೋಗಿಗಳ ಮಾನಸಿಕ ಅಸ್ವಸ್ಥತೆ. ಪತ್ರಿಕಾರಂಗದಲ್ಲಿಯೂ ಜಾತಿ ವಿಷಮತೆ
ಇರಬಹುದೆಂಬ ಅರಿವು ಮೂಡಿದ್ದೇ ಅವರಿಂದ. ತಾಳಿ ಕಟ್ಟುವಾಗ ನನಗೆ ನನ್ನ ಬಾಳಸಂಗಾತಿಯ ಜಾತಿ ತಿಳಿದಿರಲಿಲ್ಲ. ಆಕೆಗೂ ನನ್ನ ಜಾತಿ ತಿಳಿದಿರಲಿಲ್ಲ. ಅದರ ಅವಶ್ಯಕತೆ ಇಬ್ಬರಿಗೂ ಕಂಡುಬಂದಿರಲಿಲ್ಲ. ಮದುವೆಯ ಹೊಸದರಲ್ಲಿ ಮನೆಗೆ ಬಂದ ಜಾತ್ಯತೀತ ಪತ್ರಕರ್ತ ಮಿತ್ರರೊಬ್ಬರು ಯಾವುದೇ ಮುಲಾಜಿಲ್ಲದೆ ನನ್ನಾಕೆಯನ್ನು ಅವಳ ಜಾತಿಯ ಬಗ್ಗೆ ವಿಚಾರಿಸಿ ನಮ್ಮನ್ನು ಅವಾಕ್ಕಾಗಿಸಿದ್ದರು. ಅದರಿಂದ ಚೇತರಿಸಿಕೊಳ್ಳಲು ನನ್ನ ಮಡದಿಗೆ ಸಾಕಷ್ಟು ಸಮಯ ಹಿಡಿಯಿತು.

ಇಂಗ್ಲಿಷ್ ಮೇಲೆ ಪ್ರಭುತ್ವವಿರುವ ಕನ್ನಡ ಮಾಧ್ಯಮದಲ್ಲಿರುವ ಪತ್ರಕರ್ತರ ಸಂಖ್ಯೆ ಕಡಿಮೆ. ಕರ್ನಾಟಕದಲ್ಲಿದ್ದು ಕನ್ನಡ ಕಲಿಯದೇ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಪತ್ರಕರ್ತರೂ ಹೆಚ್ಚಿನ ಸಂಖ್ಯೆಯ ಕಂಡು ಬರುತ್ತಾರೆ. ಇವೆರಡೂ ನ್ಯೂನತೆಗಳೇ. ಯಾವುದೇ ರಾಜ್ಯದಲ್ಲಿನ ಪತ್ರಕರ್ತರೂ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ದುಭಾಷಿಗಳಾಗಿದ್ದಲ್ಲಿ ಮಾಧ್ಯಮಲೋಕ ಶ್ರೀಮಂತವಾಗಿ ಓದುಗರ/ಶ್ರೋತೃಗಳ/ವೀಕ್ಷಕರಿಗೂ ಲಾಭವಾಗುತ್ತೆ. ಈ ದುರದೃಷ್ಟವೆಂದರೆ, ಕನ್ನಡ ಕಲಿಯದ ಇಂಗ್ಲಿಷ್ ಭಾಷಾ ಪತ್ರಕರ್ತರು ತಮ್ಮ ಕನ್ನಡ-ಅಜ್ಞಾನವನ್ನು ಹೆಮ್ಮೆಯಿಂದ ತೋರ್ಪಡಿಸುವುದೂ, ಇಂಗ್ಲಿಷ್ eನದ ಅಭಾವದಿಂದ ಕುಂದಿದ ಕನ್ನಡ ಭಾಷಾ ಮಾಧ್ಯಮದಲ್ಲಿನ ಪತ್ರಕರ್ತರು ಕೊರಗುವುದೂ ಸಾಮಾನ್ಯ.

ಈ ಕೊರತೆಯನ್ನು ನನ್ನ ಕೈಲಾದ ಮಟ್ಟಿಗೆ ನೀಗಲು ಪ್ರಯತ್ನಿಸಿದ್ದೇನೆ. ಪ್ರಜಾವಾಣಿಯ ನನ್ನ ಒಬ್ಬ ಸಹೋದ್ಯೋಗಿ ಡೆಕ್ಕನ್
ಹೆರಾಲ್ಡ್ ಗೆ ಅವರು ಬರೆಯುತ್ತಿದ್ದ, ಹೇರಳ ತಪ್ಪುಗಳಿರುತ್ತಿದ್ದ ಅವರ ಲೇಖನಗಳನ್ನು ಸರಿಪಡಿಸಿ ಕೊಟ್ಟಿದ್ದೂ ಉಂಟು. ಅದಕ್ಕೆ ಪ್ರತ್ಯುಪಕಾರವಾಗಿ ಅವರು ನಾನು ಬರೆದು ಪ್ರಕಟಣೆಗಿನ್ನೂ ಕಳಿಸದ ಲೇಖನಗಳನ್ನು ನಾನಿಲ್ಲದ ಸಮಯದಲ್ಲಿ ಅಳಿಸಿ ಹಾಕಿ ದ್ದರು. (ಆಗಷ್ಟೇ ಕಂಪ್ಯೂಟರ್ ಬಳಕೆ ಕಲಿತಿದ್ದ ನಮಗೆ ಪಾಸ್‌ವರ್ಡ್ ರಕ್ಷಣೆಯ ಬಗ್ಗೆ ಅರಿವಿರಲಿಲ್ಲ).

ಇವರಾಗಲೀ, ಇವರ ಪರಿವಾರದವರಾಗಲೀ ಎದುರಿಗೆ ನಗುನಗುತ್ತಲೇ ಮಾತನಾಡಿಸುತ್ತಿದ್ದರು. ತೋರ್ಪಡಿಕೆಯ ಸಾಮರಸ್ಯ ಅವರಿಗೆ ಅವಶ್ಯವಾಗಿತ್ತು. ಏಕೆಂದರೆ ನಾನು ಓಡಾಡಿ ತರುತ್ತಿದ್ದ ಬಹುತೇಕ ಸುದ್ದಿಗಳನ್ನು ಕೂತ ಪಡೆಯುವ ಸವಲತ್ತು ಅವರಿ ಗಿತ್ತು. ಅದಕ್ಕೆ ನನ್ನ ಅಪಾತ್ರದಾನದ ಔದಾರ್ಯವಿತ್ತು. ನಗುನಗುತ್ತಲೇ ಮಾತನಾಡಿಸುತ್ತಿದ್ದರೆಂದು ಹೇಳಿದೆ, ಆದರೆ ನನ್ನ ಬೆನ್ನ ಹಿಂದೆಯೂ ನಗುತ್ತಾರೆಂಬುದು ಆ ನಗುವಿನಿಂದಲೇ ತಿಳಿಯುತ್ತಿತ್ತು.

ಬೆನ್ನ ಹಿಂದಿನ ಆ ನಗು ಬೆನ್ನಿಗೆ ಇರಿತವಾಗಿ ಮಾರ್ಪಾಡಾಗಲು ಒಂದು ಮುಹೂರ್ತವನ್ನು ಕಾಯುತ್ತಿತ್ತು. ಅಂದಿನ ಜಂಟಿ
ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ತಿಲಕ್ ಕುಮಾರ್ ಅವರು ಮೈಸೂರಲ್ಲಿ ನೀಡಿದ ಔತಣ ಕೂಟ ಆ ಮುಹೂರ್ತವನ್ನು ಒದಗಿಸಿತ್ತು. ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿನ ಡೆಕ್ಕನ್ ಹೆರಾಲ್ಡ್ ಪ್ರತಿನಿಧಿಗಳಿಗೆ ತಮ್ಮ ನೇತೃತ್ವದ ಕುಮಾರ್ ಒಂದೆರಡು ದಿನಗಳ ಪ್ರವಾಸ ಏರ್ಪಡಿಸಿದ್ದರು.

ಅವರ ಜತೆ ಒಟ್ಟುಗೂಡಿ ಒಂದು ಸಂಜೆ ಕಳೆಯಲು ಸಂಸ್ಥೆಯ ಮೈಸೂರಿನ ಪ್ರತಿನಿಧಿಗಳಿಗೆ ಆಮಂತ್ರಣವಿತ್ತಿದ್ದರು. ಸದರ್ನ್
ಸ್ಟಾರ್ ಹೊಟೆಲಲ್ಲಿ ನಡೆದ ಆ ಕೂಟಕ್ಕೆ ನಾನು ಹೋಗಿರಲಿಲ್ಲ. ನನ್ನ ಅನುಪಸ್ಥಿತಿಯ ಲಾಭ ಪಡೆದ ನನ್ನ ಘನತೆವೆತ್ತ ಪ್ರಜಾ ವಾಣಿ ಸಹೋದ್ಯೋಗಿಗಳು ನನ್ನ ಬಗ್ಗೆ ಚಾಡಿ ಹೇಳಿದ್ದರು. ನಾನು ಆಫೀಸಿಗೇ ಬರುತ್ತಿಲ್ಲವೆಂದೂ ದೂರಿದ್ದರು. ಅ ಉಪಸ್ಥಿತರಿದ್ದ ಬೆಂಗಳೂರು ಡೆಕ್ಕನ್ ಹೆರಾಲ್ಡ್‌ನ ನನ್ನ ಒಂದಿಬ್ಬರು ವಿಭಾಗ ಮುಖ್ಯಸ್ಥರು ನನ್ನ ಪರವಾಗಿ ಮಾತನಾಡಿದ್ದಾರೆಂದು ನಂತರ ತಿಳಿದುಬಂತು.

ಮಾರನೆಯ ದಿನ ಸಂಜೆ, ಕುಮಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ನಮ್ಮ ಪ್ರಜಾವಾಣಿ ವರದಿಗಾರರನ್ನು ಕಕ್ಕಾಬಿಕ್ಕಿಯಾಗಿಸಿ ದ್ದರು. ನನ್ನ ಸಹೋದ್ಯೋಗಿಗಳು ನೀಡುತ್ತಿದ್ದ ಕಿರುಕುಳವನ್ನು ಅವರಲ್ಲಿ ಪ್ರಸ್ತಾಪಿಸಿದೆ. ನೆನ್ನೆ ನಿಮ್ಮ ಬಗ್ಗೆ ಅವರು ದೂರಿದರು, ಅದಕ್ಕಾಗಿ ಇಂದು ಅವರ ಬಗ್ಗೆ ನೀವು ದೂರುತ್ತಿದ್ದೀರಿ ಅಂದರು. ಒಂದು ಮುಖ್ಯ ವ್ಯತ್ಯಾಸವಿದೆ, ಮಿಸ್ಟರ್ ತಿಲಕ್ ಕುಮಾರ್. ಅವರು ನನ್ನ ಬೆನ್ನ ಹಿಂದೆ ದೂರಿದರು. ಗಂಡಸಾದ್ದರಿಂದ ನಾನು ಅವರೆದುರಿಗೇ ದೂರುತ್ತಿದ್ದೇನೆ.

ಅಂದು ನಾನು ಹೌಹಾರಿದ್ದಕ್ಕೆ ನನಗೆ ಸಿಕ್ಕಿದ್ದು ವರ್ಗಾವಣೆಯ ಬೆದರಿಕೆ. ಆ ಬೆದರಿಕೆಗೆ ನಾನು ಸೊಪ್ಪು ಹಾಕದಿದ್ದುದರಿಂದ ಅದು ಕಾರ್ಯಗತವೂ ಆಯಿತು. ಅಂದು ನಾನು ಮಾತನಾಡಿದಾಗ, ನಾನು ಹೇಳಿದ್ದನ್ನು ವಿರೋಧಿಸಿ ಒಬ್ಬ ಸಹೋದ್ಯೋಗಿಯೂ ದನಿ ಎತ್ತಲಿಲ್ಲ. ಎದುರಿಗೆ ಸೆಣಸಾಡುವ ಸ್ವಭಾವವಿಲ್ಲದವರು. ಒಂದು ವ್ಯಕ್ತಿಯ ವಿರುದ್ಧವೇ ಮುಖಾಮುಖಿ ಸೆಣಸಲಾರದವರು
ವ್ಯವಸ್ಥೆಯನ್ನು ಹೇಗೆ ಎದುರು ಹಾಕಿಕೊಳ್ಳಬಲ್ಲರು? ನಾನಾ ಪಟೇಕರ್ ನಾಯಕ ನಟನಾಗಿ ಅಭಿನಯಿಸಿರುವ ಕ್ರಾಂತಿ ವೀರ ಚಿತ್ರದ ಕೊನೆಯಲ್ಲಿ ಭ್ರಷ್ಟಾಚಾರಿಗಳನ್ನು ಕೊಂದಕ್ಕಾಗಿ ಅವನನ್ನು ಗಲ್ಲಿಗೇರಿಸುವ ದೃಶ್ಯ. ಅದಕ್ಕೆ ಮುಂಚೆ ಅವನಿಗೆ ಮಾತನಾ ಡುವ ಅವಕಾಶ ನೀಡಲಾಗುತ್ತದೆ.

ಅವನ ಭಾಷಣದ ಮುಖ್ಯಾಂಶದ ಸಾರ: ನಿಮ್ಮನ್ನು ಸೃಷ್ಟಿಸಿದ ಭಗವಂತನೇನಾದರೂ ಒಮ್ಮೆಭೂಮಿಯತ್ತ ಇಣುಕಿ ನೋಡಿ ದರೆ, ನಿಮ್ಮನ್ನು ಕಂಡು ಅವನಿಗೇ ಆಶ್ಚರ್ಯವಾಗುತ್ತದೆ. ಅರೆ, ನಾನು ಮಾನವರನ್ನು ನಿರ್ಮಿಸಿದೆ, ಇಲ್ಲಿ ನೋಡಿದರೆ ಕೀಟ ಗಳಷ್ಟೇ ಕಂಡುಬರುತ್ತಿದೆ.

ನನ್ನನ್ನು ನಾನು ಸಂತ್ರಸ್ತನನ್ನಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಇದಲ್ಲ. ಸಹೋದ್ಯೋಗಿಗಳು ನೀಡುತ್ತಿದ್ದ ಕಿರುಕುಳದ ಕಿರು ಪರಿಚಯ ಇದಷ್ಟೆ. ಇದನ್ನು ಸವಿವರವಾಗಿ ಬೇರೆಡೆ ಬರೆದಿದ್ದೇನೆ. ಇದು ನಾನೊಬ್ಬನೇ ಅನುಭವಿಸಿದ/ ಅನುಭವಿಸುವ ಯಾತನೆ ಯಲ್ಲ. ಅನುಭವಿಸುತ್ತಿರುವುದನ್ನು ಹೇಳಿಕೊಳ್ಳಲಾಗದೆ ಮೂಕವೇದನೆ ಪಡುತ್ತಿರುವವರನ್ನು ಕಂಡಿದ್ದೇನೆ, ನೀವೆಲ್ಲರೂ ಕಂಡಿರು ತ್ತೀರಿ. ಇದು ಜನಸಂಖ್ಯೆಯ ಮೂರು ಪರ್ಸೆಂಟ್ ಇರುವ ಬ್ರಾಹ್ಮಣರ ದೈನಂದಿನ ಸಮಸ್ಯೆ. ಅವರನ್ನು ತೆಗಳಲು ಅವರು ಬ್ರಾಹ್ಮಣ ರೆಂಬ ಒಂದೇ ಕಾರಣ ಸಾಕು.

ವಿಶ್ವೇಶ್ವರಯ್ಯ, ವಿಶ್ವೇಶ ತೀರ್ಥ, ನಾರಾಯಣ ಮೂರ್ತಿ ಮುಂತಾದವರನ್ನೇ ಹಳಿಯುವದನ್ನು ಬಿಟ್ಟಿಲ್ಲವೆಂದ ಮೇಲೆ ಸಾಮಾನ್ಯ ಬ್ರಾಹ್ಮಣರ ಪಾಡೇನು? ಇನ್ನು ಅವರ ಬೆಂಬಲಕ್ಕೆ ನಿಲ್ಲದಿರಲು ಅವರು ಅಲ್ಪಸಂಖ್ಯಾತರೆಂಬ ಕಾರಣವೇ ಸಾಕು. ನಾನು ಬ್ರಾಹ್ಮಣ
ಸಮಾಜದ ವಕ್ತಾರನಲ್ಲ. ಬ್ರಾಹ್ಮಣರು ಮಾಡಿದ್ದೆಲ್ಲವನ್ನೂ ಸಮರ್ಥಿಸಲೂ ಇದನ್ನು ಬರೆದಿಲ್ಲ. ಬ್ರಾಹ್ಮಣರೇತರರೆಲ್ಲರೂ
ಪುರುಷೋತ್ತಮರೆಂದೂ ಹೇಳುವುದಿಲ್ಲ.

ಪಂಚರ್ ಅಂಗಡಿಯಲ್ಲಿ ‘ದಸ್ ಕಾ ಸ್ಪಾನರ್ ಲಾರೇ’ ಎನ್ನುತ್ತಾ ಬಾಲಕಾರ್ಮಿಕನ ತಲೆ ಮೇಲೆ ಮೊಟುಕುವುದು ಆ ಬಾಲಕ ಮಾಡಿದ ತಪ್ಪಿಗಲ್ಲ; ಅದು ಮಾಲೀಕನ ಅಭ್ಯಾಸ. ಬ್ರಾಹ್ಮಣರದ್ದು ಆ ಬಾಲಕನ ಪರಿಸ್ಥಿತಿಯಷ್ಟೇ ದಾರುಣ. ಮಾಡದ ತಪ್ಪು ಗಳಿಗೂ ಬೆಲೆ ತೆರಬೇಕಾಗಿರುವುದು ಅವರ ನಿತ್ಯ ಕರ್ಮ. ಅದಾವುದೋ ಪೊಗರು ಎಂಬ ಚಿತ್ರ. ಜನಿವಾರಧಾರೀ ಪುರೋಹಿತನ ಭುಜದ ಮೇಲೆ ಬೂಟುಗಾಲಿಟ್ಟ ದೃಶ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ನಿರ್ಮಾಪಕನದ್ದೂ, ನಿರ್ದೇಶನದ್ದೂ ಪೊಗರೇ! ಯಾವುದೇ ವ್ಯಕ್ತಿಯ ಘನತೆಗೆ ಚ್ಯುತಿ ತರುವ ದೃಶ್ಯ (ಅಥವಾ ನಿತ್ಯದ ಬದುಕಿನ ಘಟನೆ) ಖಂಡನೀಯ. ಸೆನ್ಸಾರ್ ಇದಕ್ಕೆ ಕತ್ತರಿ ಪ್ರಯೋಗಿಸದಿದ್ದದ್ದೂ ಅಕ್ಷಮ್ಯ. ಚೀನಾದಲ್ಲಿ ನಡೆಯುತ್ತಿರುವ ಮುಖ್ಯ ಬೆಳವಣಿಗೆಯ ಕುರಿತು ಬರೆಯಲು ಸಜ್ಜಾಗಿದ್ದೆ. ಫೇಸ್‌ಬುಕ್‌ನಲ್ಲಿ ಪೊಗರಿನ ಬಗ್ಗೆ ಯಾರೋ ಹಾಕಿದ್ದ ಪೋ ಓದಿ ವಿಚಲಿತನಾದೆ, ಅದೇ ವಿಷಯದ ಬಗ್ಗೆ ಬರೆಯುವಂತಾಯಿತು.