Thursday, 12th December 2024

ಇಳಿ ವಯಸ್ಸಿನಲ್ಲಿ ಮಿದುಳು ಕುಂದುವುದೇ ?

ವೈದ್ಯ ವೈವಿಧ್ಯ

drhsmohan@gmail.com

ವಾಕಿಂಗ್-ವ್ಯಾಯಾಮಗಳನ್ನು ನಿಯತವಾಗಿ ಮಾಡುವುದರಿಂದ ಇಡೀ ದೇಹಕ್ಕೆ ಹಾಗೆಯೇ ಮಿದುಳಿಗೂ ರಕ್ತಪರಿಚಲನೆ ಜಾಸ್ತಿಯಾಗುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ನಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಬರುವ ಅಂಶವನ್ನು ಗೌಣವಾಗಿಸುತ್ತದೆ, ನೆನಪಿನ ಶಕ್ತಿಯನ್ನು ಕ್ರಮೇಣ ಜಾಸ್ತಿ ಮಾಡುತ್ತದೆ.

ನಮಗೆ ವಯಸ್ಸಾದಂತೆ ನಮ್ಮ ದೇಹಕ್ಕೂ ವಯಸ್ಸಾಗುತ್ತದೆ. ದೇಹದ ಅಂಗಗಳಿಗೂ ವಯ ಗುತ್ತದೆ. ಆಗಾಗ ಕೈ ಕಾಲು ನೋವು, ಸಂದುಗಳ ನೋವು ಕಾಣಿಸಿಕೊಂಡು ನಮಗೆ ವಯಸ್ಸಾಗುತ್ತಿರುವುದನ್ನು ಮತ್ತೆ ಮತ್ತೆ ನೆನಪಿಸುತ್ತವೆ. ಒಂದು ಕಾಲದಲ್ಲಿ ಳಗ್ಗೆ ಹಾಸಿಗೆ ಯಿಂದ ಸ್ಪ್ರಿಂಗ್‌ನಂತೆ ಪುಟಿಯುತ್ತ ಏಳುತ್ತಿದ್ದವರು ಈಗ ನಿಧಾನವಾಗಿ ಎದ್ದು ಸುಧಾರಿಸಿಕೊಂಡು ಆಮೇಲೆ ನಡೆದು ಹೋಗಬೇಕಾಗುತ್ತದೆ. ದೇಹವು ಬದಲಾದಂತೆ ವಿವಿಧ ಅಂಗಗಳೂ ಬದಲಾಗುತ್ತವೆ.

ಹಾಗೆಯೇ ನಮ್ಮ ಮಿದುಳು ಕೂಡ ಸತತವಾಗಿ ಬದಲಾಗುತ್ತ ಹೋಗುತ್ತದೆ. ಆದರೆ ಅದು ನಾವು ತಿಳಿದುಕೊಂಡಷ್ಟು ಸುಲಭ, ಸರಳ ಕ್ರಿಯೆಯಲ್ಲ. ನಮ್ಮ ನೆನಪಿನ ಶಕ್ತಿ, ಮಿದುಳು ಪ್ರತಿಕ್ರಿಯಿಸುವ ವೇಗ, ಸುತ್ತಲಿನ ವಾತಾವರಣದ ಸ್ಪಷ್ಟ ಮತ್ತು ಪರಿಪೂರ್ಣ ಕಲ್ಪನೆ- ಇವೆಲ್ಲ ಶಿಥಿಲವಾಗುತ್ತ ಬರುತ್ತವೆ. ಆದರೆ ಕೆಲವೊಂದು ಗುಣಗಳು-ಮಾತನ್ನು ಜೋಡಿ ಸುವ ಶಕ್ತಿ, ಸಮಸ್ಯೆಗಳ ವಿಶ್ಲೇಷಣಾ ಸಾಮರ್ಥ್ಯ- ಇವೆಲ್ಲ ಇನ್ನೂ ಉತ್ತಮವಾಗುತ್ತವೆ.

ಆದರೆ ಇವೆಲ್ಲ ಏಕೆ ಆಗುತ್ತವೆ? ನಮಗೆ ವಯಸ್ಸಾಗುವುದರ ಬಗ್ಗೆ ನಮ್ಮ ದೇಹದ ಸಂಕೀರ್ಣ ಅಂಗವಾದ ಮಿದುಳು ಏನು ಹೇಳುತ್ತದೆ? ಚಿಕ್ಕವರಿರುವಾಗ ಮಿದುಳು ಪ್ರತಿ ಸೆಕೆಂಡಿಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಹೊಸ ಹೊಸ ನರಗಳ ಸಂಪರ್ಕವನ್ನು ಹೊಸೆಯುತ್ತ ಹೋಗುತ್ತದೆ. ಮಗುವಿಗೆ ಆರು ವರ್ಷವಾದಾಗ ವಯಸ್ಕರ ಮಿದುಳಿನ ಶೇ. 90 ರಷ್ಟು ಮಿದುಳಿನ ಗಾತ್ರ ದೊಡ್ಡದಾಗುತ್ತದೆ.

ನಂತರ 30-40 ವರ್ಷಗಳಾಗುತ್ತಿದ್ದಂತೆ ಮಿದುಳು ನಿಧಾನವಾಗಿ ಗಾತ್ರದಲ್ಲಿ ಸಣ್ಣದಾಗುತ್ತ ಕುಂದುತ್ತದೆ. 60 ವರ್ಷ ಆಗುವಾಗ ಈ ಕುಂದುವ ಪ್ರಮಾಣ ಜಾಸ್ತಿಯಾಗುತ್ತ ಹೋಗುತ್ತದೆ. ವಯಸ್ಸಾದ ಮೇಲೆ ಕೂದಲು ಬಿಳಿಯಾಗುವ ಹಾಗೆ, ಮುಖದಲ್ಲಿ ನೆರಿಗೆಗಳು ಹೆಚ್ಚಾಗುವ ಹಾಗೆ ಮಿದುಳಿನ ಹೊರಗಿನ ಆಕಾರವು ಬದಲಾಗುತ್ತ ಹೋಗುತ್ತದೆ. ಮಿದುಳು ಗ್ರಹಿಸುವ ಸೂಕ್ಷ್ಮತೆಯೂ ಕಡಿಮೆ ಯಾಗುತ್ತ ಬರುತ್ತದೆ.

ವಯಸ್ಸಾದಂತೆ ಮಿದುಳಿನಲ್ಲಿ ಆಗುವ ಮುಖ್ಯ ಬದಲಾವಣೆಗಳ ಕಡೆ ಗಮನ ಹರಿಸೋಣ. ಮಿದುಳಿನ ಒಟ್ಟಾರೆ ಗಾತ್ರ ಕುಗ್ಗುತ್ತ ಅಥವಾ ಕಡಿಮೆ ಯಾಗುತ್ತ ಬರುತ್ತದೆ. ಅದರಲ್ಲೂ ಮಿದುಳಿನ ಮುಂಭಾಗದಲ್ಲಿರುವ ಫ್ರಾಂಟಲ್ ಲೋಬ್ ಮತ್ತು ಹಿಪ್ಪೋ ಕ್ಯಾಂಪಸ್ ಭಾಗಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುದುರುತ್ತವೆ. ನಮ್ಮ ಹಣೆಯ ಭಾಗದ ಒಳಗಡೆ ಇರುವ ಮಿದುಳಿನ ಭಾಗ Frontal lobe. ಇದು ಅತಿದೊಡ್ಡ ಲೋಬ್. ಮಿದುಳು ತೆಳುವಾಗುವ ಕ್ರಿಯೆ ಫ್ರಾಂಟಲ್ ಲೋಬ್‌ನಲ್ಲಿ ಹೆಚ್ಚು ಗೊತ್ತಾಗು ತ್ತದೆ. ಈ ಭಾಗದಲ್ಲಿ ನಮ್ಮ ಜ್ಞಾಪಕ ಶಕ್ತಿ, ಮನಸ್ಸು ನಿಯಂತ್ರಿಸುವ ಭಾವನೆಗಳು (emotions), ಸಮಸ್ಯೆಗಳನ್ನು ಪರಿಹರಿಸುವ ವಿಚಾರ, ದಿಢೀರ್ ಎಂದು ಬರುವ ಯಾವುದೇ ಭಾವನೆಗಳನ್ನು ನಿಯಂತ್ರಿಸುವ ವಿಧಾನ, ಸಾಮಾಜಿಕ ಒಳಗೊಳ್ಳುವಿಕೆ ಅಂದರೆ ಸಮಾಜ ದಲ್ಲಿ ಬೇರೆ ಜನರೊಂದಿಗೆ ಬೆರೆಯುವುದು ಹಾಗೂ ಇಷ್ಟಪಟ್ಟು ಮಾಡುವ ಕ್ರಿಯೆಗಳ ನಿಯಂತ್ರಣ- ಇವೆಲ್ಲ ಇರುತ್ತವೆ.

ಕಿವಿಯ ಹಿಂಭಾಗದಲ್ಲಿರುವ ಟೆಂಪೊರಲ್ ಲೋಬ್‌ನ ಕೆಲವು ಭಾಗದಲ್ಲಿ ಕೂಡ ಮಿದುಳು ತೆಳುವಾಗುವುದು ಗಮನಕ್ಕೆ ಬರುತ್ತದೆ. ಬೇರೆಯವರು ಮಾತನಾಡುವ ಶಬ್ದಗಳು ನಮಗೆ ಅರ್ಥವಾಗುವ ವ್ಯವಸ್ಥೆ, ನಾವು ಮಾತನಾಡುವ, ಓದುವ, ಬರೆಯುವ ಮತ್ತು ಶಬ್ದಗಳ ಅರ್ಥಗಳನ್ನು ವಿವೇಚಿಸಿ ಅವನ್ನು ಜೋಡಿಸುವ- ಈ ರೀತಿಯ ಕ್ರಿಯೆಗಳಿಗೆ ಸಂಬಂಧಪಟ್ಟ ಕೇಂದ್ರಗಳು ಈ ಭಾಗದಲ್ಲಿವೆ. ಟೆಂಪೊರಲ್ ಲೋಬ್‌ನ ಆಳದಲ್ಲಿರುವ ಸಂಕೀರ್ಣವಾದ ಅಂಗ ಹಿಪ್ಪೋಕ್ಯಾಂಪಸ್. ನಾವು ಕಲಿಯುವುದು ಮತ್ತು ಜ್ಞಾಪಕಶಕ್ತಿ- ಈ ಎರಡು ಸಂವೇದನೆಗಳಲ್ಲಿ ಈ ಭಾಗ ಮುಖ್ಯಪಾತ್ರ ವಹಿಸುತ್ತದೆ. ನರಗಳಿಗೆ ಮತ್ತು ಮನಸ್ಸಿಗೆ ಸಂಬಂಧಪಟ್ಟ ಹಲವಾರು ಕಾಯಿಲೆಗಳಲ್ಲಿ ಹಿಪ್ಪೋಕ್ಯಾಂಪಸ್ ಭಾಗ ತೊಂದರೆಗೆ ಒಳಗಾಗುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಗೊತ್ತಾಗಿದೆ.

ಇನ್ನು ಮಿದುಳಿನ ಹೊರಕವಚದ ಸಾಂದ್ರತೆಯ ಕಡೆಗೆ ಗಮನ ಹರಿಸೋಣ. ಮಿದುಳಿನ ಹೊರಚರ್ಮದಂತಿರುವ ಭಾಗ
ತೆಳುವಾಗುತ್ತ ಬರುತ್ತದೆ. ಇದರಲ್ಲಿರುವ ಸಂಕೀರ್ಣವಾದ ಸಂಪರ್ಕಗಳು ಕಡಿಮೆಯಾಗುತ್ತ ಬರುತ್ತವೆ. ಮಿದುಳಿನ ಹೊರಕವಚ
ಸೆರೆಬ್ರಲ್ ಕಾರ್ಟೆಕ್ಸ್ ಕೂಡ ನಿಧಾನವಾಗಿ ತೆಳುವಾಗುತ್ತ ಬರುತ್ತದೆ. ಇದರಲ್ಲಿ ಹಲವು ನರಗಳ ಜೀವಕೋಶಗಳ ಕೇಂದ್ರಗಳಿರುತ್ತವೆ.

ಈ ರೀತಿ ತೆಳುವಾಗುವ ಕ್ರಿಯೆ ಮುಂಭಾಗದ ಫ್ಯಾಂಟಲ್ ಲೋಬ್ ಮತ್ತು ಬದಿಯ ಭಾಗದ ಟೆಂಪೊರಲ್ ಲೋಬ್‌ನ ಕೆಲವು ಭಾಗಗಳಲ್ಲಿ ಆಗುತ್ತವೆ. ಹೀಗೆ ಈ ನರ ಸಂವೇದನೆಯ ಅಂಶಗಳು ಕಡಿಮೆಯಾಗುತ್ತ ಹೋಗುವುದರಿಂದ ಮಿದುಳಿನಲ್ಲಿ
ನಡೆಯುವ ಸೂಕ್ಷ್ಮ ಬುದ್ಧಿವಂತಿಕೆಗೆ ಸಂಬಂಧಪಟ್ಟ ಕ್ರಿಯೆಗಳು ನಿಧಾನವಾಗಿ ಜರುಗುತ್ತವೆ. ಈಗ ಬಿಳಿಯ ವಸ್ತು (ವೈಟ್ ಮ್ಯಾಟರ್) ಎಂಬ ಭಾಗದ ಕಡೆಗೆ ಗಮನ ಹರಿಸೋಣ. ಮಿದುಳಿನ ಜೀವಕೋಶಗಳ ಮಧ್ಯೆ ನರಗಳ ಸಂವೇದನೆಯನ್ನು
ರವಾನಿಸುವ ಮೈಯಲಿನೇಟೆಡ್ ನರಗಳ ಗುಂಪು ಇದೆ. ವಯಸ್ಸಾದ ಹಾಗೆ ಈ ಮೈಯಲಿನ್ ಅಂಶ ಕುಂದುತ್ತ ಬರುತ್ತದೆ. ಪರಿಣಾಮ, ಮಿದುಳಿನ ಸೂಕ್ಷ್ಮಕ್ರಿಯೆಗಳು ಪರಿವರ್ತನೆ ಆಗುವುದು ಕಡಿಮೆಯಾಗಿ ಈ ಕ್ರಿಯೆಗಳು ಬಹಳ ನಿಧಾನವಾಗ ತೊಡಗುತ್ತವೆ.

ಮಿದುಳಿನಲ್ಲಿರುವ ಲೋಬ್ ಗಳಾದ ಫಾಂಟಲ್, ಟೆಂಪೊರಲ್, ಪರೈಟಲ್ ಮತ್ತು ಆಕ್ಸಿಪಿಟಲ್- ಇವುಗಳನ್ನು ಬೆಸೆಯುವ ನರಗಳನ್ನು ಬಿಳಿಯ ವಸ್ತು ಅಥವಾ ವೈಟ್ ಮ್ಯಾಟರ್ ಹೊಂದಿದೆ. ಹಾಗೆಯೇ ಮಿದುಳಿನ ಭಾವನಾತ್ಮಕ ಕೇಂದ್ರ ಎನಿಸಿಕೊಂಡಿ ರುವ ಲಿಂಬಿಕ್ ಸಿಸ್ಟಮ್ ಅನ್ನು ಕೂಡ ಈ ಬಿಳಿಯ ವಸ್ತು ಸುತ್ತುವರಿಯುತ್ತದೆ. ಇನ್ನು ನರಗಳ ಸಾಗಾಟ (ನ್ಯೂರೋ ಟ್ರಾನ್ಸ್ಮಿಟರ್) ವ್ಯವಸ್ಥೆಯನ್ನು ಅವಲೋಕಿಸೋಣ. ಮಿದುಳು ಹಲವು ರೀತಿಯ ಮತ್ತು ಮಟ್ಟದ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಇವು ನರಗಳ ಚಲನೆಗೆ ಅವಶ್ಯಕವಿರುವ ನ್ಯೂರೋ ಟ್ರಾನ್ಸ್ ಮಿಟರ್‌ಗಳು ಹಾಗೂ ಪ್ರೋಟೀನ್ ಉತ್ಪಾದನೆಯ ಮೇಲೆ ಪ್ರಭಾವ ಹೊಂದಿವೆ.

ಕೊನೆಯಲ್ಲಿ ಮಿದುಳಿನ ಸೂಕ್ಷ್ಮ ಸಂವೇದನೆಗಳು ನಿಧಾನವಾಗಿ ಕುಂಠಿತಗೊಳ್ಳುತ್ತ ಬರುತ್ತವೆ. ಈ ಎಲ್ಲ ಬದಲಾವಣೆಗಳು ಇರುವಾಗ ವಯಸ್ಸಾದವರಲ್ಲಿ ನೆನಪಿನ ಶಕ್ತಿ ಕ್ರಮೇಣ ಕುಂದುತ್ತ ಬರುತ್ತದೆ, ಹಲವು ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ, ಒಂದೇ ಬಾರಿ ಹಲ  ಕ್ರಿಯೆಗಳನ್ನು ಕೈಗೊಳ್ಳುವ ಸಾಮರ್ಥ್ಯ (multi tasking) ತೀವ್ರವಾಗಿ ಕುಂಠಿತಗೊಳ್ಳುತ್ತವೆ. ವಯಸ್ಸಾಗುತ್ತ ಹೋದಂತೆ ನರ ಜೀವಕೋಶಗಳು ನಿಧಾನವಾಗಿ ಸಾಯುತ್ತ ಬರುತ್ತವೆ. ಕೆಲವು ಜೀವಕೋಶಗಳು ಅಮೈಲಾಯಿಡ್ ಬೀಟಾ ಎಂಬ ವಸ್ತು ವನ್ನು ಉಂಟುಮಾಡುತ್ತವೆ. ಆಲ್ಜೀಮರ್ಸ್ ಕಾಯಿಲೆಯಲ್ಲಿ ಕಂಡುಬರುವ ವಸ್ತುವೇ ಈ ಅಮೈಲಾಯ್ಡ ಬೀಟಾ. ಇದರ -ಕ್‌ಗಳು ಹರಳುಗಟ್ಟಿದರೆ ಅದು ಆಲ್ಜೀಮರ್ಸ್ ಕಾಯಿಲೆಗೆ ತಿರುಗುತ್ತದೆ. ಹರಳುಗಟ್ಟದಿದ್ದರೆ ಸಾಮಾನ್ಯ ವಯಸ್ಸಾಗುವ ಕ್ರಿಯೆ ಎಂದೆಣಿಸಬಹುದು.

ಮಿದುಳಿನಲ್ಲಿ ಈ ರೀತಿಯ ಕುಂಠಿತಗೊಳ್ಳುವ ಕ್ರಿಯೆ ಆಗುತ್ತಿರುವಾಗ ಆಗುವ ಬದಲಾವಣೆಗಳು ಹೀಗಿವೆ:
೧) ಜ್ಞಾಪಕಶಕ್ತಿ: ಅಲ್ಲಿಯವರೆಗೆ ಆರೋಗ್ಯವಂತ ವ್ಯಕ್ತಿಯ ನೆನಪಿಟ್ಟುಕೊಳ್ಳುವ ಶಕ್ತಿ ನಿಧಾನವಾಗಿ ಕುಂದುತ್ತ ಬರುತ್ತದೆ. ವ್ಯಕ್ತಿಗಳ ಜತೆ ಸಂವಹನ ಪ್ರಕ್ರಿಯೆ ಕಷ್ಟವಾಗುತ್ತದೆ. ಹಿಂದೆ ಸುಲಭವಾಗಿ ಉಪಯೋಗಿಸುತ್ತಿದ್ದ ಶಬ್ದಗಳು ಒಮ್ಮೆಲೇ
ನೆನಪಾಗುವುದೇ ಇಲ್ಲ. ಯಾವುದೇ ಹೊಸ ಕ್ರಿಯೆಯನ್ನು ಕಲಿಯುವುದು ಕಷ್ಟವಾಗುತ್ತದೆ. ಸಣ್ಣ ಕಾಯಿಲೆ ಅಥವಾ ಹೊಡೆತ ಬಿದ್ದರೆ ಉರಿಯೂತದ ಅಂಶ ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ.

ನರ ಜೀವಕೋಶಗಳ ಸಂಪರ್ಕಗಳು ನಿಧಾನಗೊಳ್ಳುವುದರಿಂದ ಮಿದುಳಿನ ಕ್ರಿಯೆಗಳು ವಿಲಂಬಗೊಳ್ಳುತ್ತವೆ. ಮಿದುಳಿಗೆ ರಕ್ತ ಸಂಚಾರ ಕಡಿಮೆ ಉಂಟಾಗಿ ಅದರಲ್ಲಿನ ಕ್ರಿಯೆಗಳು ಮತ್ತಷ್ಟು ತೊಂದರೆಗೆ ಒಳಗಾಗುತ್ತವೆ, ನಿಧಾನಗೊಳ್ಳುತ್ತವೆ. ನಮಗೆ ವಯಸ್ಸಾದಂತೆ ಈ ಎಲ್ಲ ಕ್ರಿಯೆಗಳು ಜರುಗುತ್ತಿರುವಾಗ ಮಿದುಳಿನ ಕುಂದುವಿಕೆ ಕಡಿಮೆ ಮಾಡುವುದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ.

ಅದಕ್ಕೆಂದು ತಜ್ಞರು ಈ ಸಲಹೆಗಳನ್ನು ಕೊಡುತ್ತಾರೆ:- ಪ್ರತಿದಿನ ದೈಹಿಕ ಶ್ರಮ ಮಾಡಬೇಕು: ನಿಯತವಾದ ವಾಕಿಂಗ್, ವ್ಯಾಯಾಮಗಳನ್ನು ಮಾಡುವುದರಿಂದ ಇಡೀ ದೇಹಕ್ಕೆ ರಕ್ತದ ಪೂರೈಕೆ ಜಾಸ್ತಿಯಾಗುತ್ತದೆ. ಹಾಗೆಯೇ ಮಿದುಳಿಗೂ ರಕ್ತಚಲನೆ ಜಾಸ್ತಿಯಾಗುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ನಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಬರುವ ಅಂಶವನ್ನು ಗೌಣವಾಗಿಸುತ್ತದೆ, ನೆನಪಿನ ಶಕ್ತಿಯನ್ನು ಕ್ರಮೇಣ ಜಾಸ್ತಿ ಮಾಡುತ್ತದೆ.

ಆರೋಗ್ಯಕರ ಆಹಾರ ಸೇವನೆ: ಹೃದಯಕ್ಕೆ ಪೂರಕವಾದ ಆಹಾರ ಮಿದುಳಿಗೂ ಸರಿಹೊಂದುತ್ತದೆ. ತಾಜಾ ಹಣ್ಣು, ತರಕಾರಿಗಳು, ತೆಳುವಾದ ಮಾಂಸ, ಚರ್ಮ ತೆಗೆದ ಕೋಳಿಯ ಮಾಂಸ- ಇವೆಲ್ಲ ಒಳ್ಳೆಯವು ಎಂಬುದು ತಜ್ಞರ ಅಭಿಮತ. ವಯಸ್ಸಾದ ಹಾಗೆ ಮದ್ಯಪಾನದ ಪ್ರಮಾಣ ಕಡಿಮೆ ಮಾಡಬೇಕು, ಹೆಚ್ಚು ಸೇವಿಸಿದರೆ ಅದು ನೆನಪಿನ ಶಕ್ತಿಯನ್ನು ಕುಂದಿಸುತ್ತದೆ. ಹಾಗೆಯೇ ಗೊಂದಲ ಹುಟ್ಟಲು ಆರಂಭವಾಗುತ್ತದೆ.

ಮಾನಸಿಕವಾಗಿ ಕ್ರಿಯಾಶೀಲರಾಗಿರಬೇಕು: ಓದುವುದು, ಶಬ್ದಗಳ ಜತೆ ಆಟವಾಡುವುದು, ಹೊಸ ಹವ್ಯಾಸ-ಪ್ರವೃತ್ತಿ ಬೆಳೆಸಿ ಕೊಳ್ಳುವುದು, ಇಷ್ಟವಾಗುವ ಹೊಸರೀತಿಯ ತರಗತಿಗಳಿಗೆ ಸೇರುವುದು, ಸಂಗೀತ ವಾದ್ಯವನ್ನು ನುಡಿಸಲು ಕಲಿಯುವುದು- ಇವೆಲ್ಲ ಇಳಿವಯಸ್ಸಿನಲ್ಲಿ ನಮ್ಮ ಮನಸ್ಸನ್ನು ಕ್ರಿಯಾಶೀಲವಾಗಿಡುತ್ತವೆ. ಹೀಗಿದ್ದಾಗ ನೆನಪಿನ ಶಕ್ತಿಯೂ ಬಹಳಷ್ಟು ಉಳಿಯುತ್ತದೆ. ಹಾಗೆಯೇ ಯೋಚನಾ ಕ್ರಮಗಳು ಸುಸಂಬದ್ಧವಾಗಿರುತ್ತವೆ.

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು: ಮಿತ್ರರು ಮತ್ತು ಕುಟುಂಬದ ಸದಸ್ಯರ ಜತೆ ಸಾಮರಸ್ಯ ಹೊಂದಿ ತೊಡಗಿಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಮಾನಸಿಕ ಖಿನ್ನತೆ ಉಂಟಾಗುವ ಸಾಧ್ಯತೆ ಕಡಿಮೆ ಯಾಗುತ್ತದೆ. ಜನೋಪಯೋಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಘ- ಸಂಸ್ಥೆಗಳಿಗೆ ಸೇರಿಕೊಂಡರೆ ತುಂಬ ಒಳ್ಳೆಯದು.

ಹೃದಯ, ರಕ್ತನಾಳಗಳ ಕಾಯಿಲೆಗಳ ಬಗ್ಗೆ ಗಮನಹರಿಸಬೇಕು: ನಿಯತವಾಗಿ ಸೂಕ್ತ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು. ವಿಪರೀತ ರಕ್ತದೊತ್ತಡ, ಹೆಚ್ಚಿದ ಕೊಲೆಸ್ಟರಾಲ್ ಮತ್ತು ಡಯಾಬಿಟಿಸ್ ಕಾಯಿಲೆಗಳು ಮಿದುಳಿನ ಮೇಲೆ ಪ್ರಭಾವ ತೋರಿಸಿ ಮಿದುಳಿನ ಸೂಕ್ಷ್ಮ ಸಂವೇದನೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತವೆ. ಧೂಮಪಾನದ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸಬೇಕು. ಇದು ಶ್ವಾಸಕೋಶಕ್ಕೆ ಹಾನಿ ಮಾಡುವುದಲ್ಲದೆ ಮಿದುಳಿನ ಸೂಕ್ಷ್ಮತೆಯನ್ನು ಕುಂದಿಸುವುದರಲ್ಲಿಯೂ ತನ್ನ ಪಾತ್ರ ಹೊಂದಿದೆ.

ವಿಟಮಿನ್ ‘ಬಿ’ಯ ಹಲವು ಬಗೆಗಳು ಇಳಿವಯಸ್ಸಿನಲ್ಲಿ ಮಿದುಳಿನ ಆರೋಗ್ಯಕ್ಕೆ ತೀರಾ ಅಗತ್ಯ. ಅವು ಚಿತ್ತವೈಕಲ್ಯ ಅಥವಾ ಡಿಪ್ರೆಷನ್ ಬರದಿರುವಂತೆ ಮಾಡುತ್ತವೆ. ಹಾಗಯೇ ನರವಾಹಕಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತವೆ. ಈ ನರವಾಹಕ ಗಳು ಒಂದು ರೀತಿಯ ರಾಸಾಯನಿಕ ದ್ರವದ ರೂಪದಲ್ಲಿರುತ್ತವೆ. ಆರೋಗ್ಯವಂತ ವ್ಯಕ್ತಿ ಯಲ್ಲಿ ಈ ಟ್ರಾನ್ಸ್‌ಮಿಟರ್, ಸಂದೇಶವನ್ನು ದೇಹ ಮತ್ತು ಮಿದುಳಿಗೆ ತಲುಪಿಸುತ್ತದೆ. ‘ಬಿ’ ಕಾಂಪ್ಲೆಕ್ಸ್ ವಿಟಮಿನ್ ಸರಿಯಾದ ಪ್ರಮಾಣದಲ್ಲಿ ವಯಸ್ಸಾದವರಿಗೆ ದೊರೆಯದಿದ್ದರೆ ಮಿದುಳು ಕುಂದುವ ಸಾಧ್ಯತೆ ಜಾಸ್ತಿ. ಅದೇ ಪರಿಸ್ಥಿತಿ ಮುಂದುವರಿದರೆ ಅದು ನಂತರ ಆಲ್ಜೀಮರ್ಸ್ ಕಾಯಿಲೆಗೆ ತಿರುಗುವ ಸಂಭವ ಜಾಸ್ತಿ. ಹಾಗಾಗಿ ವಿಟಮಿನ್ ‘ಬಿ’ಯನ್ನು ಇಳೀಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.