Sunday, 19th May 2024

ಹುಟ್ಟುವಾಗ ಮೆದುಳು ಖಾಲಿ ಸ್ಲೇಟ್ !

ಹಿಂದಿರುಗಿ ನೋಡಿದಾಗ

ಒಂದು ಜೀವಿ ಅಥವಾ ಒಬ್ಬ ಮನುಷ್ಯನು ಜ್ಞಾನವನ್ನು (ನಾಲೆಡ್ಜ್) ಗಳಿಸುವ ವಿಧಿ ವಿಧಾನಗಳನ್ನು ಅಧ್ಯಯನ ಮಾಡುವ
ವಿಜ್ಞಾನ ಶಾಖೆಯೇ ಜ್ಞಾನಶಾಸ್ತ್ರ ಅಥವಾ ಜ್ಞಾನ ಮೀಮಾಂಸೆ (ಎಪಿಸ್ಟೆಮಾಲಜಿ). ಮನುಷ್ಯನು ಹೇಗೆ ಜ್ಞಾನವನ್ನು ಗಳಿಸುತ್ತಾನೆ ಎನ್ನುವುದು ಒಂದು ಅನಾದಿ ಕಾಲದ ಪ್ರಶ್ನೆ.

ಪ್ರಶ್ನೆ ಹಳೆಯದಾದರೂ, ಇಂದಿಗೂ ಅದು ನವನವೀನ. ಈ ಕಂಪ್ಯೂಟರ್ ಯುಗದಲ್ಲಿ, ಮನುಷ್ಯನನ್ನು ಮೀರಿಸುವ ರೋಬಾಟ್‌ಗಳ ತಯಾರಿಕೆಯ ಯುಗದಲ್ಲಿ, ಈ ಪ್ರಶ್ನೆಯ ವೈಶಾಲ್ಯತೆಯು ಮತ್ತಷ್ಟು ಹೆಚ್ಚಿದೆ. ಈ ಕ್ಷೇತ್ರದಲ್ಲಿ ಇಂದಿಗೂ ನಿರಂತರ ಅಧ್ಯಯನಗಳು ನಡೆಯುತ್ತಿವೆ. ಪ್ರಾಚೀನ ಜಗತ್ತಿನಲ್ಲಿ ಜ್ಞಾನ ಮೀಮಾಂಸೆಗೆ ಸಂಬಂಧಿಸಿದಂತೆ ವಿವರಣೆ ಯನ್ನು ನೀಡಲು ಎರಡು ಸಿದ್ಧಾಂತಗಳು ಪ್ರಚಲಿತದಲ್ಲಿದ್ದವು. ಮೊದಲನೆಯದು ಅನುಭವಜಾತವಾದ (ಎಂಪೆರಿಸಿಸಂ) ಹಾಗೂ ಎರಡನೆಯದು ಜನ್ಮಜಾತ ವಾದ (ಇನ್ನೇಟಿಸಂ).

ಈ ಎರಡೂ ಸಿದ್ಧಾಂತಗಳು ಬೆಳೆದು ಬಂದ ದಾರಿಗಳು ಕುತೂಹಲಕರವಾಗಿದೆ. ಒಂದು ಮಗುವು ಹುಟ್ಟಿದಾಗ, ಅದರ ಮಿದುಳು ಸಂಪೂರ್ಣವಾಗಿ ಮುಕ್ತವಾಗಿರುತ್ತದೆ. ಹುಟ್ಟುವ ಮೊದಲು ಯಾವುದೇ ವಿಚಾರಗಳು ಮಗುವಿನ ಮನಸ್ಸಿನಲ್ಲಿ ಇರುವುದಿಲ್ಲ. ಇದನ್ನು ಸೂಚಿಸಲು ಟ್ಯಾಬುಲ ರಾಸ ಎಂಬ ನುಡಿಗಟ್ಟನ್ನು ಬಳಸಿದರು. ಇದೊಂದು ಲ್ಯಾಟಿನ್ ಭಾಷೆಯ ನುಡಿಗಟ್ಟು. ಇಂಗ್ಲಿಷಿನಲ್ಲಿ ಇದನ್ನು ‘ಬ್ಲಾಂಕ್ ಸ್ಲೇಟ್’ ಅಥವಾ ‘ಇರೇಸ್ಡ್ ಸ್ಲೇಟ್’ ಎಂದು ಅನುವಾದಿಸಬಹುದು. ಹಾಗಾಗಿ ಕನ್ನಡದಲ್ಲಿ ಇದನ್ನು ಖಾಲಿ ಸ್ಲೇಟ್ ಅಥವಾ ಅಳಿಸಿದ ಸ್ಲೇಟ್ ಎನ್ನಬಹುದು. ಒಂದು ಮಗುವು ಹುಟ್ಟಿದಾಗ, ಅದರ ಮಿದುಳು ಖಾಲಿ ಸ್ಲೇಟಿನ ಹಾಗೆ, ಯಾವುದೇ ರೀತಿಯ ಬರಹಗಳಿಲ್ಲದೆ ಮುಕ್ತವಾಗಿರುತ್ತದೆ. ಆ ಮಗುವು ತನ್ನ ಜೀವಮಾನದಲ್ಲಿ ಕಲಿಯುವ ಒಂದೊಂದು ಹೊಸ ಹೊಸ ವಿಚಾರವು, ಒಂದೊಂದು ಕಲಿಕೆ-ನೆನಪಿಗೆ ಕಾರಣವಾಗುತ್ತದೆ.

ಹೀಗೆ ಆ ಮಗುವಿನ ಜ್ಞಾನವು ಬೆಳೆಯುತ್ತಾ ಹೋಗುತ್ತದೆ ಎನ್ನುವುದು ಅನುಭವಜಾತ ವಾದದ ತಿರುಳು. ಹಾಗಾಗಿ ಪ್ರತಿಯೊಂದು ಮಗುವು ತನ್ನ ಬದುಕಿನಲ್ಲಿ ತಾನು ಗಳಿಸುವ ಅನುಭವಕ್ಕೆ ಅನುಗುಣವಾಗಿ ಅದರ ಜ್ಞಾನವು ವರ್ಧಿಸಿಕೊಳ್ಳುತ್ತಾ ಹೋಗುತ್ತದೆ ಎನ್ನಬಹುದು. ಅನುಭವಜಾತ ವಾದವನ್ನು ಸಮಾ ವಿರೋಧಿಸುವ ಸಿದ್ಧಾಂತವೇ ಜನ್ಮಜಾತ ವಾದ. ಹೆಸರೇ ಸೂಚಿಸುವ ಹಾಗೆ,
ಮಗುವು ಹುಟ್ಟುವುದಕ್ಕೆ ಮೊದಲೇ ಅದರ ಸ್ಲೇಟಿನಲ್ಲಿ ಹಲವು ಸಿದ್ಧ ವಿಚಾರಗಳನ್ನು ಬರೆದಿಟ್ಟಿರಲಾಗುತ್ತದೆ ಎನ್ನುವುದು ಈ
ಸಿದ್ಧಾಂತದ ಸಾರಾಂಶ. ಈ ಸಿದ್ಧ ವಿಚಾರಗಳನ್ನು ಯಾರು ಬರೆದಿಟ್ಟರು ಎಂದು ಪ್ರಶ್ನೆಯನ್ನು ಕೇಳಿದರೆ, ಅದನ್ನು ದೇವರು ಬರೆದಿಟ್ಟಿರಬಹುದು, ಪ್ರಕೃತಿಯು ಬರೆದಿಟ್ಟಿರಬಹುದು ಅಥವಾ ಯಾವುದೋ ಒಂದು ಶಕ್ತಿ ಬರೆದಿಟ್ಟಿರಬಹುದು ಎನ್ನುವ ವಿವರಣೆಯು ದೊರೆಯುತ್ತದೆ.

ಭಾರತೀಯ ದರ್ಶನ ಶಾಸವನ್ನು ಆಸ್ತಿಕ ದರ್ಶನಗಳು ಹಾಗೂ ನಾಸ್ತಿಕ ದರ್ಶನಗಳು ಎಂದು ವಿಶಾಲವಾಗಿ ವಿಂಗಡಿಸಬಹುದು. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ ಮತ್ತು ವೇದಾಂತ ಆರು ಆಸ್ತಿಕ ದರ್ಶನಗಳು. ನಾಸ್ತಿಕ ದರ್ಶನದಲ್ಲಿ ಚಾರ್ವಾಕ, ಆಜೀವಕ, ಬೌದ್ಧ, ಜೈನ ಮತ್ತು ಅಜ್ಞಾನ ಮುಖ್ಯವಾದವು. ಕಣಾದನ ವೈಶೇಷಿಕ ದರ್ಶನವು (ಕ್ರಿ.ಪೂ.೬೦೦-ಕ್ರಿ.ಪೂ. ೨೦೦) ನಾವು ಜ್ಞಾನವನ್ನು ಎರಡು ಮೂಲಗಳಿಂದ ಪಡೆಯಬಹುದು ಎನ್ನುತ್ತದೆ.

ಮೊದಲನೆಯದು ನಮ್ಮ ಕಣ್ಣಿನಿಂದ ಪ್ರತ್ಯಕ್ಷ ನೋಡಿ ಗ್ರಹಿಸಿದ್ದು (ಪರ್ಸೆಪ್ಷನ್) ಹಾಗೂ ಎರಡನೆಯದು ಪ್ರತ್ಯಕ್ಷ ದರ್ಶನದ ಮೂಲಕ ಪಡೆದ ಮಾಹಿತಿಯನ್ನು ಅನುಸರಿಸಿ ನಾವು ತೆಗೆದುಕೊಳ್ಳುವ ತೀರ್ಮಾನ (ಇನ್-ರೆನ್ಸ್). ಬೌದ್ಧ ಧರ್ಮವು ಹಾಗೂ ಚಾರ್ವಾಕ ಸಿದ್ಧಾಂತವು ಸಹ, ಈ ನಿಲುವನ್ನು ಒಪ್ಪುತ್ತವೆ. ಪಾಶ್ಚಾತ್ಯ ಜಗತ್ತಿನಲ್ಲಿ ಜ್ಞಾನಶಾಸ್ತ್ರದ ಉಗಮವು ಸರಿಸುಮಾರು ಕ್ರಿ.ಪೂ.೪೦೦ರಲ್ಲಿ ಗ್ರೀಸ್ ಸಾಮ್ರಾಜ್ಯದಲ್ಲಿದ್ದ ವೈದ್ಯ ಸಮುದಾಯದಲ್ಲಿ ಆರಂಭವಾಯಿತು. ಆ ಸಮುದಾಯದಲ್ಲೇ ಬೆಳೆಯಿತು. ಕಾಲಕ್ರಮೇಣ ಗ್ರೀಕ್ ಮತ್ತು ರೋಮನ್ ವೈದ್ಯ ಸಮುದಾಯದಲ್ಲಿ ಎರಡು ಪದ್ಧತಿಗಳು ಅಸ್ತಿತ್ವಕ್ಕೆ ಬಂದವು.

ಮೊದಲನೆಯದು ದೃಢೀಕೃತ ವೈದ್ಯಕೀಯ ಪದ್ಧತಿ (ಡಾಗ್ಮಾಟಿಕ್ ಸ್ಕೂಲ್ ಆಫ್ ಮೆಡಿಸಿನ್). ಇವರು ಹಿಪ್ಪೋಕ್ರೇಟ್ಸ್‌ನ (ಕ್ರಿ.ಪೂ. ೪೬೦-ಕ್ರಿ.ಪೂ.೩೭೦) ಅನುಯಾಯಿಗಳು. ಒಬ್ಬ ವ್ಯಕ್ತಿಯು ಅನಾರೋಗ್ಯ ಪೀಡಿತ ನಾಗುತ್ತಾನೆ ಎಂದರೆ, ನಮ್ಮ ಬರಿಗಣ್ಣಿಗೆ ಕಾಣುವ ರೋಗಲಕ್ಷಣಗಳನ್ನು ಪರಿಗಣಿಸುವುದರ ಜೊತೆಯಲ್ಲಿ, ನಮ್ಮ ಬರಿಗಣ್ಣಿಗೆ ಕಾಣದ, ಆದರೆ ಅವನ ದೇಹದಲ್ಲಿ ಸುಪ್ತ
ವಾಗಿದ್ದು, ರೋಗಜನನಕ್ಕೆ ಕಾರಣವಾಗಿರಬಹುದಾದ ಅಂಶಗಳನ್ನೂ ಪರಿಗಣಿಸಬೇಕು ಎನ್ನುವುದು ಈ ವೈದ್ಯ ಪದ್ಧತಿಯ
ತಿರುಳು. ಎರಡನೆಯದು ಅನುಭವಜಾತ ವೈದ್ಯಕೀಯ ಪದ್ಧತಿ (ಎಂಪೆರಿಕ್ ಸ್ಕೂಲ್ ಆಫ್ ಮೆಡಿಸಿನ್) ಈ ಪದ್ಧತಿಯು ಸರಿ ಸುಮಾರು ಕ್ರಿ.ಪೂ.೩೫೦ರಲ್ಲಿ ಆರಂಭವಾಯಿತು.

ಎಂಪೆರಿಕ್ ಎಂಬ ಶಬ್ದ ಮೂಲ ಎಂಪೀರಿಯ. ಇದನ್ನು ಅನುಭವ ಅಥವಾ ಎಕ್ಸ್‌ಪೀರಿಯನ್ಸ್ ಎಂದು ಕರೆಯಬಹುದು. ಒಬ್ಬ ರೋಗಿಯನ್ನು ಪರೀಕ್ಷಿಸಿದಾಗ, ವೈದ್ಯನ ಅನುಭವಕ್ಕೆ ಬರುವ ಅಂಶಗಳನ್ನು ಮಾತ್ರ ಪರಿಗಣಿಸಿ, ಚಿಕಿತ್ಸೆಯನ್ನು ನೀಡುವುದು ಈ  ಪದ್ಧತಿಯ ತಿರುಳು. ಈ ಪದ್ಧತಿಯು ಅಪಾರ ಜನಪ್ರಿಯತೆಯನ್ನು ಗಳಿಸಿ, ಕ್ರಿ. ಶ.೪ನೆಯ ಶತಮಾನದವರೆಗೆ ಬೆಳಗಿತು. ಟ್ಯಾಬುಲ ರಾಸ ಎಂಬ ನುಡಿಗಟ್ಟನ್ನು ಒಪ್ಪಿ ಬಳಸಿದವನು ಅರಿಸ್ಟಾಟಲ್. ಅವನು ತನ್ನ ‘ಡಿ ಆನಿಮ ಆನ್ ದಿ ಸೋಲ್’ ಆತ್ಮದ ಮೇಲೆ ಎನ್ನುವ ಕೃತಿಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾನೆ.

ಸ್ಲೇಟಿನ ಮೇಲೆ ನಾವು ಏನನ್ನಾದರೂ ಬರೆದಿದ್ದರೆ ಮಾತ್ರ ನಾವು ಅದನ್ನು ಓದಬಹುದು. ಏನೂ ಬರೆಯದಿದ್ದರೆ ಅದು ಖಾಲಿಯೇ ಇರುತ್ತದೆ. ಹಾಗೆಯೇ ಮನಸ್ಸು ಎನ್ನುವುದು ಏನನ್ನಾದರೂ ಕಲಿತಿದ್ದರೆ ಮಾತ್ರ ಅದು ಯೋಚಿಸಬಲ್ಲುದು. ಏನನ್ನೂ ಕಲಿತಿಲ್ಲ ವೆಂದರೆ, ಮನಸ್ಸೂ ಸಹ ಖಾಲಿ ಸ್ಲೇಟಿನಂತೆ ಎಂದು ಪ್ರತಿಪಾದಿಸಿದ. ಹುಟ್ಟುವ ಪ್ರತಿಯೊಂದು ಮಗುವಿನ ಮಿದುಳು ಅಥವಾ ಮನಸ್ಸು ಖಾಲಿ ಯಾಗಿರುತ್ತದೆ.

ಮೊದಲ ಬಾರಿಗೆ ಪಂಚೇಂದ್ರಿಯಗಳಿಂದ ಹೊಸ ಹೊಸ ಮಾಹಿತಿಯನ್ನು ಸ್ವೀಕರಿಸಿದಾಗ, ಅವು ಮಿದುಳು/ಮನಸ್ಸಿನ ಒಳಗೆ ಪ್ರವೇಶಿಸುತ್ತದೆ. ದಾಖಲಾಗುತ್ತವೆ. ಈ ಕಲಿಕೆಯ ವಿಶ್ಲೇಷಣೆಯಿಂದ ಜ್ಞಾನವು ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿದ.
ಅರಿಸ್ಟಾಟಲ್ ಪ್ರತಿಪಾದಿಸಿದ ಟ್ಯಾಬುಲ ರಾಸವನ್ನು ಕ್ರಿ.ಪೂ.೩ನೆಯ ಶತಮಾನದಲ್ಲಿ ಜನಪ್ರಿಯವಾದ ಸ್ವಸಂಯಮತೆ ಸಿದ್ಧಾಂತವು (ಸ್ಟೋಯಿಸಿಸಂ) ಪೋಷಿಸಿತು. ಇದನ್ನು ಆರಂಭಿಸಿದವನು ಸೈಪ್ರಸ್ಸಿನ ಸಿಟಿಯಂ ಪ್ರದೇಶದಲ್ಲಿದ್ದ ಜ಼ೆನೊ (ಕ್ರಿ.ಪೂ.೩೩೪-ಕ್ರಿ.ಪೂ.೨೬೨) ಎನ್ನುವ ದಾರ್ಶನಿಕ.

ಮನುಷ್ಯನಾದವನ್ನು ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ, ಆನಂದಕರ ಜೀವನವನ್ನು ನಡೆಸಲು ಅಗತ್ಯವಾದ, ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದೇ ಸ್ವಸಂಯತೆಯ ಸಿದ್ಧಾಂತದ ತಿರುಳು. ಈ ಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟವರು ಹುಟ್ಟುವಾಗ ನಮ್ಮ ಮನಸ್ಸು (ಬುದ್ಧಿ) ಬ್ಲಾಂಕ್-ಖಾಲಿಯಾಗಿರುತ್ತದೆ. ಹೊರಗಿನ ಪ್ರಪಂಚದ ಬಗ್ಗೆ ತಿಳಿವು ದೊರೆಯುತ್ತಾ ಹೋದಂತೆ ಹೊಸ ಹೊಸ ವಿಚಾರಗಳನ್ನು ಕಲಿಯುತ್ತೇವೆ. ಆಗ ಸ್ವಸಂಯಮ ಬದ್ಧವಾದ ಕಲಿಕೆಗಳು ಮಾತ್ರ ನಮಗೆ ಆನಂದವನ್ನು ನೀಡಬಲ್ಲುದು ಎಂದು ಭಾವಿಸಿದರು.

ಸ್ವಸಂಯತೆಯ ಸಿದ್ಧಾಂತವನ್ನು ಕ್ರಿ.ಶ.೧ಕ್ರಿ.ಶ.೨ನೆಯ ಶತಮಾನದಲ್ಲಿ ಜೀವಿಸಿದ್ದ ಏಯ್ಟಸ್ ಎನ್ನುವ ದಾರ್ಶನಿಕ ಸ್ವಸಂಯಮ ದಲ್ಲಿ ನಂಬಿಕೆಯನ್ನಿಟ್ಟವರ ಅನ್ವಯ, ಅವರ ಆಣತಿಯನ್ನು ಸ್ವೀಕರಿಸುವ ಆತ್ಮವು, ಒಂದು ಖಾಲಿ ಹಾಳೆಯ ಹಾಗೆ ಇರುತ್ತದೆ. ಹಾಗಾಗಿ ಅವರು ಪ್ರಕೃತಿದತ್ತವಾದ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡರೆ, ಅವು ನಮ್ಮ ಮನಸ್ಸಿನಲ್ಲಿ ಉಳಿದು, ನಾವು ಆನಂದವಾಗಿ ಬಾಳಲು ನೆರವಾಗುತ್ತವೆ ಎಂದು ಸಂಗ್ರಹಿಸಿದ.

ದಯೋಜಿನಸ್ ಲೇರ್ಶಿಯಸ್ (ಕ್ರಿ. ಶ.೩ನೆಯ ಶತಮಾನ) ಎಂಬ ಗ್ರೀಕ್ ಸಾಮ್ರಾಜ್ಯದ ಜೀವನಚರಿತ್ರೆಗಳನ್ನು ರಚಿಸುತ್ತಿದ್ದವನ ಪ್ರಕಾರ ಗ್ರಹಿಕೆ ಎನ್ನುವುದು ಮನಸ್ಸಿನ ಕಾರ್ಯದ ಫಲ. ಮೇಣದ ಮೇಲೆ ಒಂದು ಮುದ್ರೆಯನ್ನು ಒತ್ತಿದರೆ, ಆ ಮುದ್ರೆಯು ಹೇಗೆ ಮೇಣದಲ್ಲಿ ಮೂಡುವುದೋ, ಹಾಗೆಯೇ ಮನಸ್ಸು ಗ್ರಹಿಸಿದ್ದು ಮನಸ್ಸಿನಲ್ಲಿಯೇ ಮೂಡಿ, ಅಲ್ಲಿಯೇ ಉಳಿಯುತ್ತದೆ. ಗ್ರಹಿಕೆಯು ಸಮಗ್ರವಾಗಿರಬಹುದು ಅಥವಾ ಅಸಮಗ್ರವಾಗಿರಬಹುದು. ಸಮಗ್ರವಾಗಿ ಗ್ರಹಿಸಬಲ್ಲ ವಿಷಯಗಳು ಯಾವಾಗಲೂ ಸತ್ಯವಾ ಗಿರುವ ವಿಚಾರಗಳನ್ನು ಒಳಗೊಂಡಿರುತ್ತದೆ.

ಅಸಮಗ್ರವಾಗಿರುವುದು ಯಾವುದೇ ನೈಜ ವಸ್ತುವಿಗೆ ಅಥವಾ ವಿಚಾರಕ್ಕೆ ಸಂಬಂಧಪಟ್ಟಿರಲು ಸಾಧ್ಯವಿಲ್ಲ. ಆ ತರಹದ್ದು ಇದೆ ಎಂದರೆ ಅದು ಅಸ್ಪಷ್ಟವಾಗಿರುತ್ತದೆ ಎಂದ. ಇಬ್ನ್ ಸಿನ ಅಥವಾ ಅವಿಸೆನ್ನ, ಪರ್ಷಿಯ ದೇಶದ ಬಹುಶ್ರುತ ವಿದ್ವಾಂಸ. ಈತನು ಟ್ಯಾಬುಲ ರಾಸ ಪರಿಕಲ್ಪನೆಯನ್ನು ಮತ್ತಷ್ಟು ಸ್ಪಷ್ಟಪಡಿಸಿದ. ಹುಟ್ಟುವಾಗ ಮನುಷ್ಯನ ಧೀಃ ಶಕ್ತಿಯು ಖಾಲಿ ಸ್ಲೇಟಿನ ಹಾಗೆಯೇ ಇರುತ್ತದೆ. ಆದರೆ ಅದರಲ್ಲಿ ಅಪರಿಮಿತ ಶಕ್ತಿಯಿರುತ್ತದೆ. ಈ ಶಕ್ತಿಯು ಸೂಕ್ತ ಶಿಕ್ಷಣದ ಮೂಲಕ ಪ್ರಕಟವಾಗುತ್ತದೆ. ಹಾಗಾಗಿ ಮನುಷ್ಯನು ತನ್ನ ಬದುಕಿನ ಪ್ರತಿಯೊಂದು ಅನುಭವದ ಮೂಲಕ ಈ ಜಗತ್ತಿನ ಅಮೂರ್ತ ವಿಚಾರಗಳ ಬಗ್ಗೆ ಕಲಿಯುತ್ತಾ ಹೋಗುತ್ತಾನೆ. ಈ ಕಲಿಕೆಯು ಅನುಮಾನಾತ್ಮಕ ತಾರ್ಕಿಕತೆ (ಸಿಲ್ಲಾಜಿಸಂ) ಯನ್ನು ಅವಲಂಬಿಸುತ್ತದೆ.

ಸಾಮಾನ್ಯವಾಗಿ ಈ ರೀತಿಯ ಕಲಿಕೆಯಲ್ಲಿ ಎರಡು ಪ್ರಮಾಣಗಳಲ್ಲಿ ಆಧರಿಸಿ ತೀರ್ಮಾನಕ್ಕೆ ಬರುವುದುಂಟು. ಒಂದು ಉದಾ ಹರಣೆಯನ್ನು ಪರಿಗಣಿಸೋಣ. ಮೊದಲನೆಯ ಹೇಳಿಕೆ ಎಲ್ಲ ನಾಯಿಗಳು ಪ್ರಾಣಿಗಳು. ಎರಡನೆಯ ಹೇಳಿಕೆ ಎಲ್ಲ ಪ್ರಾಣಿಗಳಿಗೂ ನಾಲ್ಕು ಕಾಲುಗಳಿರುತ್ತವೆ. ಈ ಎರಡು ಹೇಳಿಕೆಗಳನ್ನಾಧರಿಸಿ, ಹಾಗಾಗಿ ನಾಯಿಗೂ ನಾಲ್ಕು ಕಾಲುಗಳಿರುತ್ತವೆ ಎನ್ನುವ ತೀರ್ಮಾನಕ್ಕೆ ಬರುವ ವಿಧಾನವೇ ಅನುಮಾನಾತ್ಮಕ ತಾರ್ಕಿಕತೆ. ಈ ತೀರ್ಮಾನವು ಸರಿಯಾಗಿದೆಯೇ ಅಥವಾ ತಪ್ಪಾಗಿದೆಯೇ
ಎನ್ನುವುದು ಬೇರೆಯ ವಿಷಯ.

ಇಲ್ಲಿ ಮೊದಲು ನಾಯಿಯನ್ನು ಗಮನಿಸಿದ್ದೇವೆ. ನಾಯಿಯು ಗಿಡವಲ್ಲ, ಮರವಲ್ಲ, ಹಕ್ಕಿಯಲ್ಲ, ಮೀನಲ್ಲ, ಅದೊಂದು ಪ್ರಾಣಿ
ಎನ್ನುವುದು ಮನದಟ್ಟಾಗಿದೆ. ಸಾಮಾನ್ಯವಾಗಿ ಪ್ರಾಣಿಗಳು ಎಂದು ಕರೆಯುವ ಎಲ್ಲ ಜೀವರಾಶಿಗಳಿಗೆ ನಾಲ್ಕೇ ಕಾಲುಗಳಿರುತ್ತವೆ. ಹಾಗಾಗಿ ನಾಯಿಗೂ ನಾಲ್ಕೇ ಕಾಲು ಇರಬೇಕು ಎನ್ನುವ ತಾರ್ಕಿಕ ತೀರ್ಮಾನಕ್ಕೆ ಬರಲು ನೆರವಾಗುತ್ತದೆ. ಇಬ್ನ್ ಟು-ಲ್ (೧೧೧೦-೧೧೮೫) ಎಂಬ ಅರಬ್ ಬಹುಶ್ರುತ ವಿದ್ವಾಂಸನಿದ್ದ. ಇವನು ಟ್ಯಾಬುಲ ರಾಸಕ್ಕೆ ಪುರಾವೆಯಾಗಿ ಅರಾಬಿಕ್ ಭಾಷೆಯಲ್ಲಿ ಒಂದು ದಾರ್ಶನಿಕ ಕಾದಂಬರಿಯನ್ನು ಬರೆದ. ಹಯ್ ಇಬ್ನ್ ಯಾಕ್ದನ್ (ಫಿಲಾ-ಸ್ ಆಟೋಡೈಡಾಕ್ಟಸ್ = ಸ್ವಯಂಬೋಧಕ
ತತ್ತ್ವಶಾಸ್ತ್ರ) ಎಂಬ ಹೆಸರಿನ ಈ ಕಾದಂಬರಿಯು, ಮನುಷ್ಯರ ಸಂಪರ್ಕವೇ ಇಲ್ಲದೇ ಕಾಡಿನಲ್ಲಿ ಬೆಳೆದ ಮಗುವಿನ ಬಗ್ಗೆ
ವಿವರಿಸುತ್ತದೆ. ಈ ಮಗುವಿಗೆ ನಾಗರಿಕ ಜಗತ್ತಿನ ಯಾವುದೇ ಅನುಭವ ಆಗಿರುವುದಿಲ್ಲ. ಏಕೆಂದರೆ ಈ ಮಗುವಿಗೆ ಇರುವುದು ಟ್ಯಾಬುಲ ರಾಸ ಮಿದುಳು. ಹಾಗಾಗಿ ಅದು ಖಾಲಿಯಾಗಿಯೇ ಉಳಿದುಬಿಟ್ಟಿದೆ. ರಡ್ಯರ್ಡ್ ಕಿಪ್ಲಿಂಗ್ ಬರೆದ ಜಂಗಲ್ ಬುಕ್ ಕಾದಂಬರಿಯ ಮೋವ್‌ಗ್ಲಿಯ ಪಾತ್ರ ಇದಕ್ಕೆ ಉತ್ತಮ ಉದಾಹರಣೆ.

ಕಾಡಿನಲ್ಲಿ ತೋಳಗಳು ಈ ಮಗುವನ್ನು ಬೆಳೆಸುವ ಕಾರಣ, ನಾಗರಿಕ ಸಮಾಜದ  ರೀತಿ ನೀತಿಗಳು ಮೋವ್‌ಗ್ಲಿಯು ಕಲಿತಿರುವು ದಿಲ್ಲ. ಮೋವ್ ಗ್ಲಿ ಒಂದು ಕಾಲ್ಪನಿಕ ಪಾತ್ರ; ನಿಜ ಜೀವನದಲ್ಲಿ ಹೀಗಾಗಬಹುದೆ ಎಂಬ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಮೂಡಬಹುದು. ೧೯೮೭ರ ನಡೆದ ಸಾಟರ್ಡೆ ತಿಯಾನೆ ಎಂಬ ಬಾಲಕನ ಪ್ರಸಂಗವನ್ನು ಗಮನಿಸಬಹುದು. ದಕ್ಷಿಣ
ಆಫ್ರಿಕದ ಕ್ವಾಜ಼ುಲು-ನಟಾಲ್ ಕಾಡಿನಲ್ಲಿ ಐದು ವರ್ಷದ ಬಾಲಕನೊಬ್ಬ ದೊರೆತ. ಈ ಬಾಲಕನು ಮಂಗಗಳ ಜೊತೆಯಲ್ಲಿದ್ದ. ಇವನು ಶನಿವಾರದಂದು ದೊರೆತ ಕಾರಣ, ಇವನಿಗೆ ಸಾಟರ್ಡೆ ಎಂದು ನಾಮಕರಣವನ್ನು ಮಾಡಿದರು.

ಏಕೆಂದರೆ ಪೂರ್ವಾಪರ ಏನೇನೂ ಗೊತ್ತಿರಲಿಲ್ಲ. ಇವನನ್ನು ಬುದ್ಧಿಮಾಂದ್ಯರ ವಿಶೇಷ ಶಾಲೆಗೆ ಸೇರಿಸಿದರು. ಆ ಶಾಲೆಯ ಮುಖ್ಯೋಪಾಧ್ಯರು ಇವನಿಗೆ ತಿಯಾನೆ ಎಂಬ ಹೆಸರನ್ನು ನೀಡಿದರು. ಇವನಿಗೆ ನಾಗರಿಕ ಸಮಾಜದ ಕನಿಷ್ಠ ತಿಳಿವಳಿಕೆಯನ್ನು ಕಲಿಸಲು ಪ್ರಯತ್ನಿಸಿದರು. ಇವನಿಗೆ ೧೭ ವರ್ಷಗಳಾದರೂ ಎರಡು ಕಾಲುಗಳ ಮೇಲೆ ನಡೆಯುವುದನ್ನು ಕಲಿಯಲಿಲ್ಲ. ನಾಲ್ಕೂ ಅವಯವಗಳನ್ನು ಬಳಸಿಕೊಂಡು ಓಡುತ್ತಿದ್ದ ಇಲ್ಲವೇ ಕುಪ್ಪಳಿಸುತ್ತಿದ್ದ.

ಭಾಷೆಯನ್ನು ಕಲಿಯಲೇ ಇಲ್ಲ. ಬೇಯಿಸಿದ ಆಹಾರ ಪದಾರ್ಥಗಳನ್ನು ತಿನ್ನುತ್ತಿರಲಿಲ್ಲ. ಕೇವಲ ಹಸಿಯಾಗಿರುವ ಪದಾರ್ಥ ಗಳನ್ನು ಮಾತ್ರ ತಿನ್ನುತ್ತಿದ್ದ. ಸಮವಯಸ್ಕರೊಡನೆ  ಆಹಾರವನ್ನು ಹಂಚಿಕೊಂಡು ತಿನ್ನುವುದಾಗಲಿ ಅಥವಾ ಆಟವನ್ನು ಆಡುವುದಾಗಲಿ ಕಲಿಯಲೇ ಇಲ್ಲ. ೨೦೦೫ರಲ್ಲಿ ನಡೆದ ಅಗ್ನಿ ಅಪಘಾತವೊಂದರಲ್ಲಿ ಮರಣಿಸಿದ. ಶೈಶವದಲ್ಲಿ ತಿಯಾನೆಯ ಮಿದುಳು ಟ್ಯಾಬುಲ ರಾಸ ಸ್ಥಿತಿಯಲ್ಲಿಯೇ ಇತ್ತು. ಅವನಿಗೆ ಸಕಾಲದಲ್ಲಿ ಹೊರ ಜಗತ್ತಿನ ಅನುಭವಗಳು ಆಗಲೇ ಇಲ್ಲ. ಹಾಗಾಗಿ ಅವನು ಹೊಸ ಹೊಸ ವಿಚಾರಗಳನ್ನು ಕಲಿಯಲೇ ಇಲ್ಲ – ಹೀಗೆ ಟ್ಯಾಬುಲ ರಾಸವನ್ನು ಮಂಡಿಸುವ ಪ್ರಯತ್ನಗಳು ನಡೆದವು.

 
Read E-Paper click here

error: Content is protected !!