Sunday, 15th December 2024

ಮೆದುಳಿನ ಸ್ಟ್ರೋಕ್’ನಿಂದ ಪಾರಾಗುವುದು ಹೇಗೆ ?

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ಮೆದುಳು ಬಹು ಸೂಕ್ಷ್ಮ ಅಂಗಾಂಗವಾಗಿದ್ದು, 3 ರಿಂದ 5 ನಿಮಿಷಗಳ ಕಾಲ ಮೆದುಳಿಗೆ ರಕ್ತ ಪರಿಚಲನೆಯಾಗದಿದ್ದಲ್ಲಿ ಸಂಬಂಧಿಸಿದ ಮೆದುಳಿನ ಭಾಗ ಸಾವಿಗೀಡಾಗಿ ಶಾಶ್ವತ ತೊಂದರೆಗಳುಂಟಾಗುತ್ತವೆ. ಮೆದುಳಿನ ರಕ್ತನಾಳಗಳು ಅವುಗಳಲ್ಲಿಯೇ ರಕ್ತ ಹೆಪ್ಪುಗಟ್ಟುವುದರಿಂದ(ತ್ರಾಂಬೋಸಿಸ್) ಅಥವಾ ದೇಹದ ಬೇರೆಭಾಗದಲ್ಲಿ ಉಂಟಾದ ರಕ್ತಹೆಪ್ಪು ರಕ್ತಪರಿಚಲನೆ ಮೂಲಕ ಮೆದುಳಿನ ಶುದ್ಧರಕ್ತನಾಳಕ್ಕೆ ರವಾನೆಯಾಗಿ ಅಡಚಣೆಗೀಡಾಗಬಹುದು.

ಮೆದುಳಿನ ಸ್ಟ್ರೋಕ್ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಮೆದುಳಿನ ಜೀವಕೋಶಗಳು ಶಾಶ್ವತ ವಾಗಿ ಸಾವಿಗೀಡಾಗುವುದರಿಂದ, ಸಕಾಲಿಕ ಸೂಕ್ತ ಚಿಕಿತ್ಸೆ ಲಭಿಸದಿದ್ದಲ್ಲಿ ಸಾವು ಅಥವಾ ಶಾಶ್ವತ ದೈಹಿಕ ಮತ್ತು ಮಾನಸಿಕ ಊನ ಗಳುಂಟಾಗಿ ಬದುಕು ಬರಡಾಗುತ್ತದೆ. ಅಲ್ಪಾವಧಿಯಲ್ಲಿ ಸೂಕ್ತ ಚಿಕಿತ್ಸೆ ಲಭಿಸಿದಲ್ಲಿ ಅವಘಡಗಳಿಂದ ಪಾರಾಗಬಹುದು.

ಇದು ಮರಣಾಂತಿಕವಾಗಬಲ್ಲ ಗಂಭೀರ ಸ್ವರೂಪದ ಕಾಯಿಲೆಯಾದುದರಿಂದ ಇದನ್ನು ತಡೆಗಟ್ಟುವ ದಿಕ್ಕಿನಲ್ಲಿ ಕ್ರಮ ವಹಿಸು ವುದು ಅತ್ಯವಶ್ಯಕ. ಇದನ್ನು ಅರ್ಥಮಾಡಿ ಕೊಳ್ಳಲು ಮೆದುಳಿನ ರಚನೆ ಮತ್ತು ಕಾರ್ಯಗಳು, ಮೆದುಳಿನ ರಕ್ತಪರಿಚಲನಾ ವ್ಯವಸ್ಥೆ, ಕಾರಣಗಳು ಇತ್ಯಾದಿಗಳನ್ನು ಅರಿತುಕೊಳ್ಳುವುದು ಅತ್ಯವಶ್ಯಕ.

ರಚನೆ ಮತ್ತು ಕಾರ್ಯಗಳು: ಮೆದುಳು, ವಿಕಾಸಕ್ರಿಯೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ವಿಕಾಸವಾಗಿರುವ ಮನಸ್ಸು, ಪ್ರಜ್ಞೆ, ಅರಿವು, ಆಲೋಚನೆ, ಭಾವ, ನೆನಪು, ಮರೆವು, ವಿಮರ್ಶೆ, ಬುದ್ಧಿ ಇತ್ಯಾದಿ ಇನ್ನಿತರ ಪ್ರಾಣಿಗಳಿಗಿಲ್ಲದ ವಿಶಿಷ್ಟ ಗುಣಗಳುಳ್ಳ ಮೃದು ವಾದ ಮನುಷ್ಯನ ವಿಶಿಷ್ಟಾಂಗ. ಮೆದುಳು ತಲೆಬುರುಡೆಯೊಳಗಿದ್ದು, ಅದರೊಳಗಿರುವ ಮನಸ್ಸಿನೊಂದಿಗೆ ದೇಹದ ಎಲ್ಲ ಅಂಗಾಂಗ ಗಳನ್ನು ನರವ್ಯವಸ್ಥೆಯ ಮೂಲಕ ನಿಯಂತ್ರಿಸುತ್ತದೆ.

ಗೋಳಾಕೃತವಾಗಿರುವ ಮೆದುಳು ಬೇರ್ಪಟ್ಟಿರುವ ಎಡ ಮತ್ತು ಬಲ ಎಂಬ ಸಮರ್ಧ ಮೆದುಳು ಗೋಳಗಳನ್ನೊಳಗೊಂಡಿದ್ದು,
ಇವೆರಡೂ ಸಮರ್ಧ ಗೋಳಗಳು ಕಾರ್ಪಸ್‌ಕೊಲಾಸಂ ಎಂಬ ಸೇತುವೆಯಂತಿರುವ ರಚನೆಯಿಂದ ಪರಸ್ಪರ ಬಂಧಿತವಾಗಿವೆ. ಇದರ ಮೂಲಕ ನರಾಜ್ಞೆಗಳು ಎಡ ಮತ್ತು ಬಲ ಸಮರ್ಧ ಮೆದುಳು ಗೋಳಗಳ ನಡುವೆ ರವಾನೆಯಾಗಿ ಅಂತಿಮವಾಗಿ ಒಂದೇ ಮೆದುಳಿನಂತೆ ಕಾರ್ಯನಿರ್ವಹಣೆಯಾಗುತ್ತದೆ.

ಮೆದುಳು ಹಲವಾರು ಹಾಲೆಗಳಾಗಿ(ಲೋಬು) ವಿಂಗಡಣೆಯಾಗಿದ್ದು, ಪ್ರತಿಯೊಂದು ಲೋಬು ತನ್ನದೇ ಆದ ನಿರ್ದಿಷ್ಟ ಕಾರ್ಯ ಗಳನ್ನು ನಿರ್ವಹಿಸುತ್ತದೆ. ಮೆದುಳಿನ ನಾನಾ ಲೋಬುಗಳಲ್ಲಿ ಹಲವಾರು ಬಗೆಯ ಕೇಂದ್ರಗಳಿದ್ದು, ಒಂದೊಂದು ಕೇಂದ್ರವು ಒಂದೊಂದು ನಿರ್ದಿಷ್ಟ ಕಾರ್ಯ ನಿಯಂತ್ರಿಸುತ್ತದೆ. ಉದಾ:- ಫ್ರಾಂಟಲ್ ಲೋಬಿನಲ್ಲಿರುವ ಚಲನಾಕೇಂದ್ರ ದೇಹದ ಕೈ ಕಾಲುಗಳು, ಕತ್ತು ಇತ್ಯಾದಿ ಮೂಳೆ ಸ್ನಾಯುಗಳ ಕಾರ್ಯಗಳನ್ನು ಚಲನಾಕೇಂದ್ರದಿಂದ ಉದ್ಭವಿಸುವ ನರತಂತುಗಳ ಮುಖಾಂತರ ನಿಯಂತ್ರಿಸುತ್ತದೆ.

ಬಲಭಾಗದ ಸಮರ್ಧ ಮೆದುಳು ಗೋಳ ಎಡ ದೇಹ ಭಾಗದ ಸ್ನಾಯುಗಳನ್ನು, ಎಡ ಸಮರ್ಧ ಮೆದುಳು ಗೋಳ ಬಲ ದೇಹ ಭಾಗದ ಸ್ನಾಯುಗಳನ್ನು ನಿಯಂತ್ರಿಸುತ್ತದೆ. ಬಲ ಸಮರ್ಧ ಮೆದುಳು ಗೋಳದ ಚಲನಾಕೇಂದ್ರ ಕಾರ್ಯ ಹೀನವಾದಲ್ಲಿ ಎಡ ದೇಹ ಭಾಗದ ಕೈಕಾಲಿನ ಸ್ನಾಯುಗಳು ಶಕ್ತಿಹೀನವಾಗಿ ಸಮರ್ಧ ಲಕ್ವ ತಗಲುತ್ತದೆ. ಬಲಗೈ ಉಪಯೋಗಿಸುವವರಲ್ಲಿ ಎಡ ಸಮರ್ಧ ಮೆದುಳುಗೋಳದ ಟೆಂಪೋರಲ್ ಲೋಬಿನಲ್ಲಿ ಮಾತಿನ ಕೇಂದ್ರವಿದ್ದು, ಎಡ ಸಮರ್ಧ ಮೆದುಳು ಗೋಳದ ಮಾತು ಕೇಂದ್ರ ಕಾರ್ಯಹೀನವಾದಲ್ಲಿ ಮಾತಿನ ಸಮಸ್ಯೆಗಳುಂಟಾಗುತ್ತವೆ.

ಅದೇ ಬಲಭಾಗದ ಸಮರ್ಧ ಮೆದುಳು ಗೋಳ ಕಾರ್ಯಹೀನವಾದಲ್ಲಿ ಕೇವಲ ಎಡಭಾಗದ ಕೈ ಕಾಲುಗಳ ಲಕ್ವ ಸಂಭವಿಸು ತ್ತದೆಯೇ ವಿನಃ ಮಾತಿನ ಸಮಸ್ಯೆಗಳುಂಟಾಗುವುದಿಲ್ಲ. ಮೆದುಳಿನ ಹಿಂಭಾಗ ದಲ್ಲಿರುವ ಆಕ್ಸಿಪೀಟಲ್ ಲೋಬ್ ಕಾರ್ಯಹೀನ ವಾದಲ್ಲಿ ದೃಷ್ಟಿ ಸಮಸ್ಯೆಗಳುಂಟಾಗುತ್ತವೆ. ಸೆರೆಬಿಲಂ ಭಾಗ ದೇಹದ ಸಮಸ್ಥಿತಿ ಮತ್ತು ಕೈಕಾಲುಗಳ ಸ್ನಾಯುಗಳ ಪರಸ್ಪರ ಸಹಕಾರವನ್ನು ನಿಯಂತ್ರಿಸುವುದರಿಂದ ಅದರ ಕಾರ್ಯಹೀನತೆಯಿಂದ ತೂರಾಡುವಿಕೆ ಮತ್ತು ಕೈ ಕಾಲುಗಳ ಚಲನಾ ಕ್ರಿಯೆಗಳನ್ನು ಸುವ್ಯವಸ್ಥಿತವಾಗಿ ಮಾಡಲಾಗದಿರುವ ತೊಂದರೆಗಳುಂಟಾಗುತ್ತವೆ.

ಮೆದುಳಿನ ಕಾಂಡಭಾಗ(ಬ್ರೈನ್‌ಸ್ಟೆಮ್) ಬಹುಮುಖ್ಯ ಭಾಗವಾಗಿದ್ದು, ಹೃದಯ, ಉಸಿರಾಟ, ಪ್ರಜ್ಞೆಗಳನ್ನು ನಿಯಂತ್ರಿಸುವ ಕೇಂದ್ರಗಳು ಇಲ್ಲಿದ್ದು, ಇದರ ಕಾರ್ಯ ಹೀನತೆಯಿಂದ ಹೃದಯ, ಉಸಿರಾಟ ಮತ್ತು ಪ್ರಜ್ಞಾ ಹೀನತೆಯ ಸಮಸ್ಯೆಗಳುಂಟಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಒಂದು ಸಮರ್ಧ ಮೆದುಳು ಗೋಳ ಅಥವಾ ಎರಡೂ ಸಮರ್ಧ ಮೆದುಳು ಗೋಳಗಳು
ಕಾರ್ಯಹೀನವಾಗಬಹುದು. ಒಂದು ಸಮರ್ಧ ಮೆದುಳು ಗೋಳ ಕಾರ್ಯಹೀನವಾದಲ್ಲಿ ದೇಹದ ವಿರುದ್ಧ ಭಾಗ ಲಕ್ವಕ್ಕೀಡಾ ಗುತ್ತದೆ. ಎರಡೂ ಸಮರ್ಧ ಮೆದುಳು ಗೋಳ ಕಾರ್ಯಹೀನವಾದಾಗ ಪ್ರಜ್ಞಾ  ಹೀನತೆ, ಎರಡೂ ಕಡೆಯ ಮುಖ ಮತ್ತು ಕೈಕಾಲು ಗಳ ಲಕ್ವ ಇತ್ಯಾದಿ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮೆದುಳಿನ ಸ್ಟ್ರೋಕ್ ಎಂದರೇನು?
ಮೆದುಳಿಗೆ ರಕ್ತ ಪರಿಚಲಿಸುವ ರಕ್ತನಾಳ ವ್ಯವಸ್ಥೆಯ ರಕ್ತನಾಳ ಅಡಚಣೆಗೀಡಾಗಿ ಅಥವಾ ಹರಿದುಹೋಗಿ ಸಂಬಂಧಿಸಿದ ಮೆದುಳು ಭಾಗಕ್ಕೆ ರಕ್ತಪರಿಚಲನೆ ಅಸ್ತವ್ಯಸ್ತವಾಗಿ ಸಂಬಂಧಿಸಿದ ಮೆದುಳಿನ ಭಾಗ ಕಾರ್ಯಹೀನವಾಗುವುದನ್ನು ‘ಮೆದುಳಿನ ಸ್ಟ್ರೋಕ್’ ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು ದಿಢೀರನೆ ಕೆಲವು ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ ಕಾಣಿಸಿಕೊಳ್ಳುವು ದರಿಂದ ಇದನ್ನು ‘ಮೆದುಳಿನ ದಿಢೀರ್ ಲಕ್ವ’ ಎಂದೂ ಕರೆಯಲಾಗುತ್ತದೆ.

ಇದು ಯಾವುದೇ ಪೂರ್ವ ಭಾವಿ ರೋಗತೊಂದರೆಗಳಿಲ್ಲದೆ ಅಥವಾ ಇದ್ದರೂ ಗಮನಕ್ಕೆ ಬಾರದ ಅತ್ಯಲ್ಪ ಪ್ರಮಾಣದಲ್ಲಿದ್ದು, ಇದ್ದಕ್ಕಿದ್ದಂತೆ ಕಾಯಿಲೆಗೀಡಾಗಿ, ಕಾರ್ಯಹೀನವಾದ ಮೆದುಳಿನ ಭಾಗಕ್ಕನುಗುಣವಾಗಿ ತೊಂದರೆಗಳು ಅತ್ಯಲ್ಪಾವಧಿಯಲ್ಲಿ
ಉಂಟಾಗುತ್ತವೆ. ಲಕ್ವಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಮೆದುಳಿನ ಸ್ಟ್ರೋಕ್ ಕೂಡ ಒಂದು. ಮೆದುಳಿನ ಶುದ್ಧ ರಕ್ತನಾಳದ ಅಡಚಣೆ ಅಥವಾ ಹರಿಯುವಿಕೆಯಿಂದ ದಿಢೀರನೆ ಉಂಟಾದ ಲಕ್ವವನ್ನು ಮಾತ್ರ ಮೆದುಳಿನ ದಿಢೀರ್ ಲಕ್ವ (ಬ್ರೈನ್ ಸ್ಟ್ರೋಕ್)
ಎನ್ನಲಾಗುತ್ತದೆ.

ರಕ್ತಪರಿಚಲನೆ ವ್ಯವಸ್ಥೆ: ಮೆದುಳಿನ ಸ್ಟ್ರೋಕ್ ಅನ್ನು ಅರ್ಥಮಾಡಿಕೊಳ್ಳಲು ಮೆದುಳಿನ ರಕ್ತನಾಳ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಮೆದುಳಿನ ಮುಂಭಾಗಕ್ಕೆ ಕೆರೋಟಿಡ್ (ಕತ್ತಿನ) ಶುದ್ಧ ರಕ್ತನಾಳಗಳು ಮತ್ತು ಮೆದುಳಿನ ಹಿಂಭಾಗಕ್ಕೆ
ವರ್ಟಿಬ್ರಲ್(ಬೆನ್ನುಸ್ಥಂಭದ) ಶುದ್ಧ ರಕ್ತನಾಳಗಳು ಅವುಗಳ ಕವಲು ರಕ್ತನಾಳಗಳ ಮೂಲಕ ಶುದ್ಧರಕ್ತವನ್ನು ಸರಬರಾಜು ಮಾಡುತ್ತವೆ. ಎಡ ಮತ್ತು ಬಲಭಾಗದ ಕತ್ತಿನ ಮೂಲಕ ಮೆದುಳನ್ನು ತಲುಪುವ ಕತ್ತಿನ ಎಡ ಮತ್ತು ಬಲ ಕತ್ತಿನ ಶುದ್ಧ ರಕ್ತನಾಳ ಗಳು (ಕೆರೊಟಿಡ್ ಅರ್ಟರೀಸ್) ಮುಂಭಾಗದ ಮೆದುಳಿನ ತಳಭಾಗದಲ್ಲಿ ಮುಂಭಾಗದ ಮೆದುಳಿನ ಶುದ್ಧರಕ್ತನಾಳ (ಆಂಟೀರಿ ಯರ್ ಸೆರೆಬ್ರಲ್ ಆರ್ಟರಿ)ಮತ್ತು ಮೆದುಳಿನ ಮಧ್ಯದ ಶುದ್ಧರಕ್ತನಾಳ (ಮಿಡಲ್ ಸೆರೆಬ್ರಲ್ ಆರ್ಟರಿ)ಗಳಾಗಿ ಕವಲೊಡೆದು ಮುಂಭಾಗದ ಮತ್ತು ಮಧ್ಯ ಮೆದುಳಿನ ಎಲ್ಲ ಭಾಗಗಳಿಗೆ ರಕ್ತ ಸರಬರಾಜನ್ನು ಮಾಡುತ್ತವೆ.

ಕತ್ತಿನ ಹಿಂಭಾಗದಲ್ಲಿರುವ ಎಡ ಮತ್ತು ಬಲ ಬೆನ್ನು ಸ್ತಂಭದ ಶುದ್ಧರಕ್ತನಾಳಗಳು (ವರ್ಟಿಬ್ರಲ್ ಆರ್ಟರೀಸ್) ಮೆದುಳಿನ ಹಿಂಭಾ ಗದ ತಳಭಾಗದಲ್ಲಿ ಜೋಡಣೆಯಾಗಿ ಬೆಸಿಲಾರ್ ಶುದ್ಧರಕ್ತನಾಳವಾಗಿ ಅದು ತದನಂತರ ಮೆದುಳಿನ ಹಿಂಭಾಗದ ಎಡ ಮತ್ತು ಬಲ ಶುದ್ಧರಕ್ತನಾಳಗಳಾಗಿ ಕವಲೊಡೆದು ಮೆದುಳಿನ ಹಿಂಭಾಗದ ಭಾಗಗಳಿಗೆ ರಕ್ತ ಸರಬರಾಜನ್ನು ಮಾಡುತ್ತದೆ.

ಕೆರೊಟಿಡ್ ಮತ್ತು ವರ್ಟಿಬಲ್ ಶುದ್ಧರಕ್ತನಾಳಗಳು ಪರಸ್ಪರ ಜೋಡಣೆಯಾಗಿ ವಿಲ್ಲಿಸ್‌ನ ವೃತ್ತ( ಸರ್ಕಲ್ ಆಫ್ ವಿಲ್ಲಿಸ್) ಉಂಟಾಗುತ್ತದೆ. ಮೆದುಳಿನ ಒಂದು ನಿರ್ದಿಷ್ಟ ಭಾಗಕ್ಕೆ ನಿರ್ದಿಷ್ಟ ರಕ್ತನಾಳ ರಕ್ತಸರಬರಾಜು ಮಾಡುವುದರಿಂದ ಸಂಬಂಧಿಸಿದ ರಕ್ತನಾಳದ ಕಾಯಿಲೆ ಅದು ರಕ್ತ ಸರಬರಾಜು ಮಾಡುವ ಮೆದುಳಿನ ಭಾಗವನ್ನು ಕಾರ್ಯಹೀನಗೊಳಿಸುತ್ತದೆ.

ಈ ವಿಶಿಷ್ಟ ಜೋಡಣಾ ರಚನೆಯಿಂದ ಒಂದು ರಕ್ತ ನಾಳ ವ್ಯವಸ್ಥೆ ಕಾರ್ಯಹೀನವಾದರೆ ಮತ್ತೊಂದು ರಕ್ತ ನಾಳ ವ್ಯವಸ್ಥೆಯಿಂದ ಮೆದುಳಿಗೆ ನಿರಂತರವಾಗಿ ರಕ್ತ ಸರಬರಾಜಾಗುತ್ತದೆ. ಮೆದುಳು ಬಹು ಸೂಕ್ಷ್ಮ ಅಂಗಾಂಗವಾಗಿದ್ದು, 3 ರಿಂದ 5 ನಿಮಿಷಗಳ ಕಾಲ ಮೆದುಳಿಗೆ ರಕ್ತ ಪರಿಚಲನೆಯಾಗದಿದ್ದಲ್ಲಿ ಸಂಬಂಧಿಸಿದ ಮೆದುಳಿನ ಭಾಗ ಸಾವಿಗೀಡಾಗಿ ಶಾಶ್ವತ ತೊಂದರೆಗಳುಂಟಾಗುತ್ತವೆ.

ಮೆದುಳಿನ ರಕ್ತನಾಳಗಳು ಅವುಗಳಲ್ಲಿಯೇ ರಕ್ತ ಹೆಪ್ಪುಗಟ ವುದರಿಂದ(ತ್ರಾಂಬೋಸಿಸ್) ಅಥವಾ ದೇಹದ ಬೇರೆಭಾಗದಲ್ಲಿ ಉಂಟಾದ ರಕ್ತಹೆಪ್ಪು ರಕ್ತಪರಿಚಲನೆ ಮೂಲಕ ಮೆದುಳಿನ ಶುದ್ಧರಕ್ತನಾಳಕ್ಕೆ (ಎಂಬಾಲಿಸಂ) ರವಾನೆಯಾಗಿ ಅಡಚಣೆಗೀಡಾಗ ಬಹುದು ಇದಲ್ಲದೇ ಮೆದುಳಿನ ರಕ್ತನಾಳ ಶಿಥಿಲಗೊಂಡು ರಕ್ತ ಒತ್ತಡ ಅಧಿಕವಾದಾಗ ಅಥವಾ ಶುದ್ಧರಕ್ತನಾಳದ ಹಿಗ್ಗುವಿಕೆ (ಅನ್ಯೂರಿಸಂ) ಒಡೆದು ರಕ್ತ ಮೆದುಳಿಗೆ ಸ್ರಾವವಾಗಬಹುದು(ಮೆದುಳಿನ ರಕ್ತಸ್ರಾವ).

ತೊಂದರೆಗಳು: ಅತೀವ ತಲೆನೋವು, ತಲೆತಿರುಗು, ದೃಷ್ಟಿ ತೊಂದರೆಗಳು, ಮುಖ, ಕೈಕಾಲುಗಳ ಲಕ್ವ, ಪ್ರಜ್ಞಾ ತೊಂದರೆಗಳು,
ಮಾತಿನ ತೊಂದರೆಗಳು, ನಡೆಯಲಾಗದಿರುವಿಕೆ, ತೂರಾಟ ಇತ್ಯಾದಿ ತೊಂದರೆಗಳುಂಟಾಗುತ್ತವೆ. ರಕ್ತ ಹೆಪ್ಪುಗಟ್ಟುವಿಕೆ ತೊಂದರೆ ಯಲ್ಲಿ ಸಾಮಾನ್ಯವಾಗಿ ತೊಂದರೆಗಳು ನಿಧಾನವಾಗಿ ಕಾಣಿಸಿಕೊಂಡು 6-8 ಗಂಟೆಗಳಲ್ಲಿ ಪೂರ್ಣ ಪ್ರಮಾಣದ ಅಂತಿಮಹಂತ ವನ್ನು ತಲುಪುತ್ತವೆ. ಸಾಮಾನ್ಯವಾಗಿ ಇದು ರಾತ್ರಿ ವೇಳೆ ಮಲಗಿರುವಾಗ ಉಂಟಾಗಿ ಬೆಳಗ್ಗೆ ಏಳುವ ಹೊತ್ತಿಗೆ ಲಕ್ವ ಸಂಭವಿಸಿ ರುತ್ತದೆ. ಸಂಭವಿಸುವ ತೊಂದರೆಗಳು ಕಾಯಿಲೆಗೀಡಾದ ನಿರ್ದಿಷ್ಟ ರಕ್ತನಾಳವನ್ನು ಅವಲಂಬಿಸಿರುತ್ತವೆ.

ಒಂದೊಂದು ರಕ್ತನಾಳದ ಕಾಯಿಲೆಯು ಒಂದೊಂದು ಬಗೆಯ ತೊಂದರೆಗಳನ್ನುಂಟುಮಾಡುತ್ತದೆ. ಮೆದುಳಿನ ಮುಂಭಾಗದ ಮತ್ತು ಮಧ್ಯ ಮೆದುಳಿನ ಶುದ್ಧರಕ್ತನಾಳಗಳ ಕಾಯಿಲೆಗಳಲ್ಲಿ ದೇಹದ ತದ್ವಿರುದ್ಧ ಭಾಗದ ಮುಖ ಮತ್ತು ಕೈ ಕಾಲುಗಳ ಲಕ್ವ
ಉಂಟಾಗುತ್ತದೆ. ಎಡ ಮುಂಭಾಗದ ಶುದ್ಧರಕ್ತನಾಳದ ಕಾಯಿಲೆಯಲ್ಲಿ ಬಲಭಾಗದ ಕೈ ಕಾಲುಗಳ ಲಕ್ವ ಮತ್ತು ಮಾತಿನ ತೊಂದರೆಗಳುಂಟಾಗುತ್ತವೆ. ಬಲ ಮುಂಭಾಗದ ಶುದ್ಧರಕ್ತನಾಳಗಳ ಕಾಯಿಲೆಗಳಲ್ಲಿ ದೇಹದ ಎಡ ಸಮರ್ಧ ಭಾಗದ ಲಕ್ವ ಉಂಟಾಗುತ್ತದೆ, ಮಾತಿನ ತೊಂದರೆಗಳುಂಟಾಗುವುದಿಲ್ಲ.

ಮೆದುಳಿನ ಹಿಂಭಾಗದ ಶುಧ್ಧರಕ್ತನಾಳಗಳ ಕಾಯಿಲೆಗಳಲ್ಲಿ ದೇಹದ ಎರಡೂ ಭಾಗಗಳ ಕೈ ಕಾಲುಗಳ ಲಕ್ವ ಉಂಟಾಗುತ್ತದೆ. ಸಾಮಾನ್ಯವಾಗಿ ಸ್ಟ್ರೋಕ್ ಬೆಳಗಿನ ವೇಳೆಯಲ್ಲಿ ಉಂಟಾಗುತ್ತದೆ. ಸ್ಟ್ರೋಕ್ ಆಗುವ ಮುನ್ನ ಕೆಲವರಲ್ಲಿ ತಾತ್ಕಾಲಿಕವಾಗಿ
ಶಕ್ತಿ ಹೀನತೆ, ಕಣ್ಣುಗಳು ಮಂಜಾಗುವಿಕೆ, ಕೈ ಕಾಲುಗಳು ಜುಂ ಆಗುವಿಕೆ, ತಲೆನೋವು ಇತ್ಯಾದಿ ತೊಂದರೆಗಳು ಕಂತುಗಳಲ್ಲಿ ಕಾಣಿಸಿಕೊಳ್ಳಬಹುದು. ಇವುಗಳನ್ನು ಉದಾಸೀನ ಮಾಡದೆ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಸ್ಟ್ರೋಕ್ ಅನ್ನು ತಡೆಯಬಹುದು.

ಕಾರಣಗಳು ಏನು?
ಮೆದುಳಿನ ಶುದ್ಧರಕ್ತನಾಳಗಳ ಅಡಚಣೆ(ರಕ್ತ ಹೆಪ್ಪುಗಟ್ಟುವಿಕೆ) ಮತ್ತು ರಕ್ತಸ್ರಾವಕ್ಕೆ ಹಲವಾರು ಕಾರಣಗಳಿವೆ. ಏರು ರಕ್ತದೊ ತ್ತಡ ಅನಿಯಂತ್ರಿತ ಸಕ್ಕರೆ ಕಾಯಿಲೆ, ರಕ್ತ ಜಿಡ್ಡೇರಿಕೆ, ಧೂಮಪಾನ, ಮದ್ಯಪಾನ, ಸ್ಥೂಲಕಾಯ, ಹೃದಯಾಘಾತ, ಹೃದಯದ ನಲಯ ಮಿಡಿತಗಳು ಅದರಲ್ಲೂ ಹೃತ್ಕರ್ಣದ ಅದುರುವಿಕೆ ಅನ್ಯೂರಿಸಂ, ಅತಿಯಾದ ಮಾನಸಿಕ ಒತ್ತಡ ಇವುಗಳಲ್ಲಿ ಮೆದುಳಿನ ಶುದ್ಧರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಮತ್ತು ಹರಿದು ರಕ್ತಸ್ರಾವವಾಗುವ ಸಂಭವ ಅಧಿಕ.

ಮೇಲೆ ವಿವರಿಸಿದ ಯಾವುದಾದರೊಂದು ಅಥವಾ ಹೆಚ್ಚು ಮೆದುಳಿನ ಶುದ್ಧರಕ್ತನಾಳ ಕಾಯಿಲೆಗೀಡಾಗಬಹುದು. ಇವರುಗಳಲ್ಲಿ ಯಾವುದಾದರೊಂದು ಕಾರಣದಿಂದ ಮಾನಸಿಕ ಒತ್ತಡ ಹೆಚ್ಚಾದಾಗ ಮೆದುಳಿನ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚಾಗಿರು ತ್ತದೆ.

ರೋಗ ದೃಢೀಕರಣ: ಮೆದುಳಿನ ಸ್ಟ್ರೋಕ್‌ಗೆ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವ ಕಾರಣವೋ ಮತ್ತು ಮೆದುಳಿನ ಯಾವ ಶುದ್ಧರಕ್ತನಾಳ ಮತ್ತು ಯಾವ ಭಾಗ ಕಾಯಿಲೆಗೀಡಾಗಿದೆ ಎಂಬುದನ್ನು ನಿಖರಪಡಿಸಿಕೊಳ್ಳಲು ಮೆದುಳು ರಕ್ತನಾಳಗಳ ಚಿತ್ರೀ ಕರಣ (ಸೆರೆಬ್ರಲ್ ಆಂಜಿಯೋಗ್ರಾಂ), ಮೆದುಳಿನ ಸಿಟಿ, ಎಂಆರ್‌ಐ ಪರೀಕ್ಷೆಗಳು ಚಿಕಿತ್ಸಾ ದೃಷ್ಟಿಯಿಂದ ಅತ್ಯವಶ್ಯಕ.

ಐಸಿಯು ಚಿಕಿತ್ಸೆ: ಅವಶ್ಯಕ ಎಲ್ಲ ಅತ್ಯಾಧುನಿಕ ಸಲಕರಣೆಗಳು ಮತ್ತು ತಂತ್ರಜ್ಞರನ್ನುಳ್ಳ ನರ ಐಸಿಯು ಚಿಕಿತ್ಸೆ ಅತ್ಯವಶ್ಯಕ.
ಮೆದುಳಿನಲ್ಲಿ ಅಸಂಖ್ಯಾತ ಮೆದುಳು ಜೀವಕೋಶಗಳಿದ್ದು, ಮೆದುಳಿನ ಸ್ಟ್ರೋಕ್‌ನಿಂದ ಇವು ಬಹುಬೇಗ ಸಾವಿಗೀಡಾಗುತ್ತವೆ. ಮೆದುಳಿನ ಜೀವಕೋಶಗಳಿಗೆ ಪುನರೋತ್ಪತ್ತಿ ಸಾಮರ್ಥ್ಯ ಇಲ್ಲದಿರುವುದರಿಂದ ಸ್ಟ್ರೋಕ್ ಸಂಭವಿಸಿದ 4-6 ಗಂಟೆಯ ಒಳಗೆ ಕಾರಣವನ್ನು ನಿಖರ ಪಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಭವಿಸಬಹುದಾದ ಸಾವು ಮತ್ತು ಶಾಶ್ವತ ವಿಕಲತೆಗಳನ್ನು ತಡೆಗಟ್ಟಬಹುದು.

ನಿಧಾನಿಸಿದಂತೆಲ್ಲ ಸಾವಿಗೀಡಾಗುವ ಮೆದುಳು ಜೀವಕೋಶಗಳ ಸಂಖ್ಯೆಯೂ ಅಧಿಕವಾಗುತ್ತಿರುತ್ತದೆ. 8 ರಿಂದ  ಗಂಟೆಗಳ ನಂತರ ನೀಡುವ ಚಿಕಿತ್ಸೆಯಿಂದ ನಿರೀಕ್ಷಿತ ಫಲ ಲಭಿಸದಿರಬಹುದು. ಆದುದರಿಂದ ಕಾಲವ್ಯಯ ಮಾಡದೆ ಸ್ಟ್ರೋಕ್ ಸಂಭವಿಸಿದ ತಕ್ಷಣ ಸುಸಜ್ಜಿತ ಸ್ಟ್ರೋಕ್ ಚಿಕಿತ್ಸಾ ಘಟಕವಿರುವ ಆಸ್ಪತ್ರೆಗೆ ಕರೆದೊಯ್ಯಬೇಕು.

ಸ್ಟ್ರೋಕ್ ರಕ್ತ ಹೆಪ್ಪಿನಿಂದಾಗಿದ್ದಲ್ಲಿ ರಕ್ತ ಹೆಪ್ಪನ್ನು ಕರಗಿಸುವ ಔಷಧಗಳನ್ನು ತಕ್ಷಣ ನೀಡಲಾಗುತ್ತದೆ. ಈ ಔಷಧಗಳನ್ನು ರಕ್ತ ಸ್ರಾವವಾಗಿದ್ದಲ್ಲಿ ನೀಡಬಾರದು. ರಕ್ತ ಹೆಪ್ಪು ಕರಗದಿದ್ದಲ್ಲಿ ಶಸಕ್ರಿಯೆಯ ಮೂಲಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ರಕ್ತ ಹೆಪ್ಪನ್ನು ಒಡೆದು ತೆಗೆದು ರಕ್ತ ಪರಿಚಲನೆಯನ್ನು ಪುನರ್‌ಸ್ಥಾಪಿಸಲಾಗುತ್ತದೆ.

ರಕ್ತಸ್ರಾವವಾಗಿ ಮೆದುಳಿನೊಳಗಿನ ಒತ್ತಡ ಹೆಚ್ಚಾಗಿದ್ದಲ್ಲಿ ತಲೆಬುರುಡೆ ಸೀಳುವಿಕೆ (ಕ್ರೇನಿಯಾಟಮಿ) ಶಸ್ತ್ರಕ್ರಿಯೆ ಅನಿವಾರ್ಯ ವಾಗುತ್ತದೆ. ಇದರ ಜತೆ ಜತೆಗೆ ಏರುರಕ್ತ ಒತ್ತಡ ನಿಯಂತ್ರಣ, ಸಕ್ಕರೆಕಾಯಿಲೆ ಮತ್ತು ರಕ್ತ ಜಿಡ್ಡು ನಿಯಂತ್ರಣದ ಔಷಧಗಳ ಚಿಕಿತ್ಸೆ ಅತ್ಯವಶ್ಯಕ.

ಇವುಗಳಲ್ಲದೆ ಉಸಿರಾಟದ ಅವ್ಯವಸ್ಥೆ ಇದ್ದಲ್ಲಿ ವೆಂಟಿಲೇಟರ್ ಅಳವಡಿಸುವುದು ಅನಿವಾರ್ಯವಾಗುತ್ತದೆ. ಮೆದುಳಿನ ರಕ್ತಸ್ರಾವ ದಲ್ಲಿ ಸಂಪೂರ್ಣ ಗುಣಮುಖ ಅಸಾಧ್ಯ. ನಿಶ್ಚೇತನಗೊಂಡ ಸ್ನಾಯುಗಳನ್ನುಪುನಶ್ಚೇತನಗೊಳಿಸುವ ವ್ಯಾಯಾಮ ಚಿಕಿತ್ಸೆ ಅತಿ ಉಪಯುಕ್ತ.

ಸುಯೋಗ್ ಘಟಕ
ಆಧುನಿಕ ತಂತ್ರಜ್ಞಾನದ ವಿವಿಧ ಸಲಕರಣೆಗಳು ಮತ್ತು ನುರಿತ ನರರೋಗ ತಜ್ಞರು ಮತ್ತು ತಂತ್ರಜ್ಞರನ್ನೊಳಗೊಂಡ ವಿಶೇಷ ಸುಸಜ್ಜಿತ ಮೆದುಳಿನ ಸ್ಟ್ರೋಕ್ ಘಟಕ ಸ್ಟ್ರೋಕ್ ಚಿಕಿತ್ಸೆಗೆ ಅತ್ಯವಶ್ಯಕ. ಕ್ಯಾತ್‌ಲ್ಯಾಬ್, ಸಿಟಿ, ಎಂಆರ್‌ಐ ಇತ್ಯಾದಿ ಅತ್ಯಾಧುನಿಕ ಸಲಕರಣೆಗಳು ಅತ್ಯವಶ್ಯಕ. ಇಂತಹ ಸುಸಜ್ಜಿತ ಘಟಕವನ್ನು ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ
ಇತ್ತೀಚೆಗೆ ತೆರೆಯಲಾಗಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸ್ಟ್ರೋಕ್ ರೋಗಿಗಳಿಗೆ ಆಶಾಕಿರಣವಾಗಿದ್ದು, ಕೈಗೆಟುಕುವ ದರದಲ್ಲಿ ಈ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ನಾಟಿ ಚಿಕಿತ್ಸೆ ಸಲ್ಲದು
ಮೆದುಳಿನ ಸ್ಟ್ರೋಕ್‌ಗೆ ಅತಿ ಜರೂರಾಗಿ ನಿಖರವಾದ ಚಿಕಿತ್ಸೆ ನೀಡಬೇಕಾದುದರಿಂದ ಸಾಕ್ಷ್ಯಾಧಾರಿತವಾಗಿ ಫಲಿತಾಂಶ ಸಾಬೀತಾ ಗಿಲ್ಲದ ನಾಟಿ ವೈದ್ಯಚಿಕಿತ್ಸೆ ನೀಡಿ ಕಾಲಹರಣ ಮಾಡಬಾರದು. ನಾಟಿ ವೈದ್ಯ ಚಿಕಿತ್ಸೆಯಿಂದ ಲಕ್ವ ಪೂರ್ಣವಾಗಿ ವಾಸಿಯಾ ಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಪಾರಿವಾಳ ಹಕ್ಕಿಯ ರಕ್ತ ಕುಡಿಸುವಿಕೆ, ಅದನ್ನು ಮೈಮೇಲೆ ಓಡಾಡಿ ಸುವಿಕೆ ಮತ್ತು ಗಿಡಮೂಲಿಕೆಯ ಔಷಽಗಳಿಂದ ಲಕ್ವ ವಾಸಿಯಾಗುತ್ತದೆ ಎಂಬುದು ಸಾಬೀತಾಗಿಲ್ಲ.

ನಿಶ್ಚೇತನಗೊಂಡ ಸ್ನಾಯುಗಳ ಪುನಶ್ಚೇತನಕ್ಕೆ ದೀರ್ಘಾವಧಿಯಲ್ಲಿ ಮಸಾಜ್ ಇತ್ಯಾದಿ ಚಿಕಿತ್ಸೆಗಳು ಸಹಕಾರಿಯಾಗಬಹುದು. ಇವುಗಳನ್ನು ಒತ್ತಾಸೆ ಚಿಕಿತ್ಸೆಗಳಾಗಿ ಬಳಸಬಹುದೇ ವಿನಃ ಇವೇ ಏಕಮೇವ ಚಿಕಿತ್ಸೆಯಲ್ಲ.

ಸ್ಟ್ರೋಕೋತ್ತರ ಬದುಕು
ಕೈ ಕಾಲುಗಳ ಸ್ವಾಧೀನವಿಲ್ಲದೆ ಸ್ನಾಯುಗಳು ಬಿಗಿತಗೊಂಡು ಅಂಗವೈಕಲ್ಯ ಉಂಟಾಗುತ್ತವೆ. ಕ್ರಿಯಾಶೀಲತೆ ಕುಗ್ಗುತ್ತದೆ. ಮಾತಿನ ತೊಂದರೆಗಳಿದ್ದಲ್ಲಿ, ಸಂವಹನ ಇಲ್ಲದಂತಾಗಿ ಮಾನಸಿಕವಾಗಿ ಕುಗ್ಗುತ್ತಾರೆ. ಸ್ನಾಯುಗಳ ಬಿಗಿತ್ವವನ್ನು ತಡೆಯಲು ದೈನಂದಿನ ಪುನಶ್ಚೇತನ ವ್ಯಾಯಾಮ ಅತ್ಯವಶ್ಯಕ. ಅಲ್ಟ್ರಾಸೌಂಡ್ ಮತ್ತು ಶಾಕ್ ವೇವ್ ಚಿಕಿತ್ಸೆಗಳ, ಭೌತಿಕ ಚಿಕಿತ್ಸೆಯಿಂದ ಸ್ನಾಯುಗಳನ್ನು
ಪುನಶ್ಚೇತನಗೊಳಿಸಲಾಗುತ್ತದೆ. ಮಾತಿಲ್ಲದವರಿಗೆ ಸನ್ನೆಗಳ ಮೂಲಕದ ಸಂವಹನ ತರಬೇತಿ ನೀಡಲಾಗುತ್ತದೆ.

ತಡೆಗಟ್ಟುವುದು ಹೇಗೆ?
ಸ್ಟ್ರೋಕ್ ತಡೆಗಟ್ಟಬಹುದಾದ ಕಾಯಿಲೆ. ಸಮತೋಲನ ಆಹಾರ, ದೈನಂದಿನ ವ್ಯಾಯಾಮ, ನೆಮ್ಮದಿಯ ಜೀವನಶೈಲಿ ಅತ್ಯವ ಶ್ಯಕ. ಏರು ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣ, ಧೂಮಪಾನ ಮತ್ತು ಮದ್ಯ ಪಾನಗಳ ವರ್ಜನೆ, ರಕ್ತ ಕೊಲೆಸ್ಟ್ರಾಲ್ ನಿಯಂತ್ರಣದಿಂದ ಇದನ್ನು ತಡೆಗಟ್ಟಬಹುದು. ಸ್ಟ್ರೋಕ್ ಸಂಭವವಿರುವವರು ರಕ್ತ ಹೆಪ್ಪು ನಿರೋಧಕಗಳಾದ ಆಸ್ಪರಿನ್, ಕ್ಲೊಪಿಡೊಗ್ರಿಲ್ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಗಳನ್ನು ಪ್ರತಿನಿತ್ಯ ತೆಗೆದುಕೊಳ್ಳುವುದರಿಂದ ತಡೆಗಟ್ಟಬಹುದು.

ಡಾಪ್ಲರ್ ಪರೀಕ್ಷೆಯಿಂದ ಕತ್ತಿನ ಶುದ್ಧರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ನಿಖರಪಡಿಸಿಕೊಂಡು ಪರೋಕ್ಷವಾಗಿ ಮೆದುಳಿನ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವ ಸಾಧ್ಯತೆಯನ್ನು ತಿಳಿದು ತಕ್ಷಣ ಸೂಕ್ತ ಚಿಕಿತ್ಸೆ ಮಾಡುವುದರಿಂದ ಸಂಭವಿಸ ಬಹುದಾದ ಸ್ಟ್ರೋಕ್ ಅನ್ನು ತಡೆಗಟ್ಟಬಹುದು. ಬೆಳ್ಳುಳ್ಳಿ ಸೇವನೆ, ಬಣ್ಣ ಬಣ್ಣದ ಹಣ್ಣುಗಳ ಸೇವನೆ ಸ್ಟ್ರೋಕ್ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಬೇಕರಿ ಆಹಾರ ಪದಾರ್ಥಗಳು, ಉಪ್ಪು, ಕರಿದ ಆಹಾರ ಪದಾರ್ಥಗಳು ಸ್ಟ್ರೋಕ್ ಸಾಧ್ಯತೆಯನ್ನು ಹೆಚ್ಚಿಸು ತ್ತವೆ.

ಮೆದುಳು ಅತ್ಯಂತ ಅವಶ್ಯಕ ಅಂಗವಾದುದರಿಂದ ಅದಕ್ಕೆ ಸ್ಟ್ರೋಕ್ ಹೊಡೆಸಿಕೊಂಡು ದೇಹವನ್ನು ಊನವಾಗಿಸಿಕೊಳ್ಳುವು ದಕ್ಕಿಂತ ಜೀವನಶೈಲಿಯಿಂದ ಸ್ಟ್ರೋಕ್ ನಿಂದ ಪಾರಾಗುವ ಆಯ್ಕೆ ನಮ್ಮದಾಗಬೇಕಲ್ಲವೇ?