Sunday, 15th December 2024

ಅಮೃತವಾಹಿನಿ ಹರಿಯುತಿರಲಿ ಸತತ…

ತನ್ನಿಮಿತ್ತ

ಡಾ.ಮುರಲೀ ಮೋಹನ್ ಚೂಂತಾರು

ಎದೆ ಹಾಲುಣಿಸುವಿಕೆ ಎನ್ನುವುದು ತಾಯಿಯ ಪ್ರಾಥಮಿಕ ಜವಾಬ್ದಾರಿ ಮತ್ತು ಜನ್ಮಸಿದ್ಧ ಹಕ್ಕು. ಸ್ತನ್ಯಪಾನದಿಂದ ಉಂಟಾಗುವ ಧನಾತ್ಮಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲೆಂದು ಪ್ರತಿವರ್ಷದ ಆಗಸ್ಟ್ ಮೊದಲ ವಾರ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಆಚರಿಸಲಾಗುತ್ತದೆ.

ನವಜಾತ ಶಿಶುಗಳಿಗೆ ತಾಯಿಯ ಮೊಲೆಹಾಲೇ ಆಹಾರ ಮತ್ತು ಅಮೃತ. ಮಗುವಿನ ದೈಹಿಕ, ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶ ಗಳು ಹಾಗೂ ಪ್ರತಿಕಾಯಗಳು ಮೊಲೆಹಾಲಿನಲ್ಲಿ ಇರುವ ಕಾರಣದಿಂದ ಸ್ತನ್ಯಪಾನ ಶಿಶುಗಳಿಗೆ ಅತ್ಯಗತ್ಯ ವಾಗಿದೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಸಂಸ್ಥೆಗಳು ಕೂಡ ಸ್ತನ್ಯಪಾನದ ಅಗತ್ಯ ಮತ್ತು ಅನಿವಾರ್ಯದ ಬಗ್ಗೆ ಈ ಕೆಳಗಿನಂತೆ ಸೂಚನೆ ನೀಡಿವೆ: ೧. ಮಗು ಜನಿಸಿದ ಒಂದು ಗಂಟೆಯೊಳಗೆ ಮೊಲೆಹಾಲನ್ನು ನೀಡತಕ್ಕದ್ದು. ೨. ಮಗುವಿಗೆ ೬ ತಿಂಗಳು ಆಗುವವರೆಗೆ ಸ್ತನ್ಯಪಾನ ಮಾಡಿಸಬೇಕು. ಎದೆಹಾಲಲ್ಲದೆ ಬೇರಾವುದೇ ಆಹಾರ ನೀಡಬಾರದು.

೩. ಸ್ತನ್ಯಪಾನವನ್ನು ೨ ವರ್ಷಗಳವರೆಗೆ ಮುಂದುವರಿಸ ಬಹುದು.
೪. ಮಗುವಿಗೆ ೬ ತಿಂಗಳು ಆದ ಬಳಿಕ ಸೂಕ್ತ ಪೂರಕ ಆಹಾರವನ್ನು ಆರಂಭಿಸಬಹುದು.

ಸ್ತನ್ಯಪಾನದ ಪಯೋಜನಗಳು ತಾಯಿಯ ಎದೆಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮಿದುಳಿನ ಬೆಳವಣಿಗೆಗೆ ಅತ್ಯವಶ್ಯಕವಾದರೆ, ಕೊಬ್ಬಿನಂಶವು ಮಗುವಿನ ನರಮಂಡಲ ವ್ಯವಸ್ಥೆ ಅಭಿವೃದ್ಧಿಯಾಗಲು ಪೂರಕ. ಸೋಡಿಯಂ, ಜಿಂಕ್ ಹಾಗೂ ಇತರ ಲವಣಗಳು ಮಗುವಿನ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತವೆ. ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ಅಲರ್ಜಿ, ಅಸ್ತಮಾ, ಕಾಮಾಲೆ, ಹೃದ್ರೋಗ ಮತ್ತು ಜಠರ ರೋಗಗಳನ್ನುತಡೆಗಟ್ಟಲು ತಾಯಿಯ ಎದೆಹಾಲು ಅತ್ಯಗತ್ಯ. ಎದೆಹಾಲನ್ನು ಯಥೇಚ್ಛವಾಗಿ ಕುಡಿದ ಮಗುವಿನ ಬುದ್ಧಿಮಟ್ಟವು ಹೆಚ್ಚಾಗಿರುತ್ತದೆ ಎಂದೂ ಅಧ್ಯಯನಗಳಿಂದ ತಿಳಿದುಬಂದಿದೆ.

ಎದೆಹಾಲಿನಲ್ಲಿ ಹೇರಳವಾಗಿ ಕಿಣ್ವಗಳು, ಆಂಟಿಆಕ್ಸಿಡೆಂಟ್‌ಗಳು ಹಾಗೂ ಆಂಟಿಬಾಡಿಗಳು ಇದ್ದು ಶಿಶುಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಅವು ಮಾಡುತ್ತವೆ. ಎದೆಹಾಲು ಕುಡಿದ ಮಕ್ಕಳಲ್ಲಿ ಮಲಬದ್ಧತೆ, ಅತಿಸಾರ, ಬೇಧಿ ಹಾಗೂ ಇತರ ಜಠರ ಸಂಬಂಧಿ ಕಾಯಿಲೆಗಳು ವಿರಳವಾಗಿರುತ್ತವೆ. ಅದೇ ರೀತಿ, ಎದೆಹಾಲು ನೀಡುವ ತಾಯಂದಿರಿಗೆ ಅಸ್ಥಿರಂಧ್ರತೆ ಬರುವ ಸಾಧ್ಯತೆ ಕಡಿಮೆ ಮತ್ತು ಅಂಡಾಶಯದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ದಿಸುತ್ತದೆ. ತಾಯಿಯ ಅನಗತ್ಯ ಗರ್ಭಧಾರಣೆಯನ್ನು ತಡೆಯು ತ್ತದೆ. ಸ್ತನದ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ. ದೇಹದ ತೂಕ ನಿಯಂತ್ರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಹಾಯಮಾಡು ತ್ತದೆ. ಕೊಲೊಸ್ಟ್ರಮ್ ಎಂಬ ಸಂಜೀವಿನಿ ಮಗುವು ತಾಯಗರ್ಭದಿಂದ ಹೊರಬಂದ ಕೂಡಲೇ ತಾಯಿಯ ಸ್ತನಗಳಿಂದ ಒಂದೆರಡು ಗಂಟೆಗಳ ಕಾಲ ಹಳದಿ ಬಣ್ಣದ ಜೀವದ್ರವ್ಯ ಒಸರಲು ಆರಂಭವಾಗುತ್ತದೆ. ಎದೆ ಹಾಲು ಬರುವ ಮೊದಲೇ ಈ ಜೀವದ್ರವ್ಯ ಸಾಮಾನ್ಯವಾಗಿ ಎಲ್ಲಾ ಸಸ್ತನಿಗಳ ಸ್ತನಗಳಿಂದ ಒಸರುತ್ತದೆ. ಆಂಗ್ಲಭಾಷೆಯಲ್ಲಿ ಈ ದ್ರವವನ್ನು ‘ಕೊಲೊಸ್ಟ್ರಮ್’ ಎಂದು ಕರೆಯುತ್ತಾರೆ.

ಇದೊಂದು ಅಂಟಾದ ಮಂದದ್ರವವಾಗಿದ್ದು, ಅಚ್ಚ ಕನ್ನಡದಲ್ಲಿ ‘ಗಿಣ್ಣುಹಾಲು’ ಎಂದೂ ಕರೆಯುತ್ತಾರೆ. ಇದೊಂದು ಅಮೂಲ್ಯ ಸಂಜೀವಿನಿ ಎಂದರೂ ಅತಿಶಯೋಕ್ತಿಯಾಗಲಾರದು. ತಾಯಂದಿರು ಈ ಕೊಲೊಸ್ಟ್ರಮ್ ಅನ್ನು ಸಂಪೂರ್ಣವಾಗಿ ಮಗುವಿಗೆ ನೀಡಬೇಕು. ಒಂದು ಹನಿಯೂ ವ್ಯರ್ಥವಾಗದಂತೆ ಈ ಜೀವ ದ್ರವವನ್ನು ಮಗುವಿಗೆ ಸಿಗುವಂತೆ ಮಾಡುವ ಹೊಣೆಗಾರಿಕೆ ತಾಯಂದಿರು ಮತ್ತು ದಾದಿಯರಿಗೆ ಇರುತ್ತದೆ. ಈಕಾರಣದಿಂದಲೇ ತಾಯಂದಿರು ಮಗು ಹುಟ್ಟಿದ ಕೂಡಲೇ ಒಂದೆರಡು ಗಂಟೆಗಳ
ಒಳಗೆ ಮಗುವಿಗೆ ಸ್ತನ್ಯಪಾನ ಮಾಡಿಸಲೇ ಬೇಕು. ಈ ಕೊಲೊಸ್ಟ್ರಮ್‌ನಲ್ಲಿ ತಾಯಿಯಿಂದ ಮಗುವಿಗೆ ಬರುವ ಪೋಷಕಾಂಶಗಳು, ರೋಗಗಳಿಂದ ರಕ್ಷಣೆ ನೀಡುವ ಅತ್ಯಮೂಲ್ಯ ಆಂಟಿಬಾಡಿಗಳು ಇರುತ್ತವೆ.

ಮಗುವಿನ ಜೀವರಕ್ಷಕ ವ್ಯವಸ್ಥೆ ಸರಿಯಾಗಿ ಬೆಳವಣಿಗೆ ಆಗಿ, ತನ್ನಿಂತಾನೇ ದೇಹದಲ್ಲಿ ಆಂಟಿಬಾಡಿಗಳು ಉತ್ಪಾದನೆಯಾಗು ವವರೆಗೆ ತಾಯಿಯಿಂದ ಕೊಲೊಸ್ಟ್ರಮ್‌ನ ಜತೆಗೆ ಬಳುವಳಿಯಾಗಿ ಬಂದ ಆಂಟಿಬಾಡಿಗಳು ಮಗುವನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತವೆ. ಮಗುವಿನ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಿ, ಯಾವುದೇ ಸೋಂಕು ಅದಕ್ಕೆ ಬಾರದಂತೆ ತಡೆಯುತ್ತವೆ. ಕೊಲೊಸ್ಟ್ರಮ್‌ನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಈ ಪ್ರೋಟೀನ್ ಮಗುವಿನ ಆರಂಭಿಕ ಬೆಳವಣಿಗೆಗೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಲು ಅತ್ಯವಶ್ಯಕ.

ಶಿಶುಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಚಿಕ್ಕದಾಗಿದ್ದು ಪ್ರಾಥಮಿಕ ಹಂತದಲ್ಲಿ ಇರುತ್ತದೆ. ಇಂಥ ಸಂದರ್ಭದಲ್ಲಿ ಅತಿಹೆಚ್ಚು ಸಾಮರ್ಥ್ಯದ ಪೋಷಕಾಂಶಯುಕ್ತ ಪ್ರೋಟೀನ್ ಮತ್ತು ಖನಿಜಾಂಶಗಳು, ಜೀವಧಾತು ಗಳನ್ನು ಅತಿಕಡಿಮೆ ಗಾತ್ರದಲ್ಲಿ  ನೀಡುತ್ತದೆ. ಈ ಕೊಲೊಸ್ಟ್ರಮ್ ಮಗುವಿಗೆ ಮೊದಲ ಮಲವಿರ್ಸಜನೆ ಮಾಡಲು ಪೂರಕ ವಾತಾವರಣ ನಿರ್ಮಿಸಿಕೊಡುತ್ತದೆ. ಶಿಶುಗಳ ಮೊದಲ ಮಲವನ್ನು ‘ಮೆಕೋನಿಯಮ್’ ಎನ್ನುತ್ತಾರೆ. ಇದರ ಮುಖಾಂತರ ಹೆಚ್ಚಿನ ಪ್ರಮಾಣದ ಬಿಲುರುಬಿನ್
ಎಂಬ ವಸ್ತು ದೇಹದಿಂದ ಹೊರಹಾಕಲ್ಪಡುತ್ತದೆ.

ಮಗು ತಾಯಿಯ ಗರ್ಭದಿಂದ ಹೊರಬಂದಾಗ ರಕ್ತದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿ, ಕೆಂಪು ರಕ್ತಕಣಗಳು ಸತ್ತುಹೋಗಿ ಅತಿಹೆಚ್ಚು ಪ್ರಮಾಣದಲ್ಲಿ ಬಿಲುರುಬಿನ್ ದೇಹದಲ್ಲಿ ಶೇಖರಣೆಯಾದಲ್ಲಿ ಮಗುವಿಗೆ ಕಾಮಾಲೆ ರೋಗ ಅಥವಾ ಜಾಂಡೀಸ್ ಬರುತ್ತದೆ. ಒಟ್ಟಿನಲ್ಲಿ ಈ ಬಿಲುರುಬಿನ್ ವರ್ಣದ್ರವ್ಯ ಸರಾಗವಾಗಿ ದೇಹದಿಂದ ಹೊರಹೋಗಲು ಕೊಲೊಸ್ಟ್ರಮ್ ಸಹಾಯ ಮಾಡುತ್ತದೆ.

ಕೊಲೊಸ್ಟ್ರಮ್‌ನಲ್ಲಿ ದೇಹದ ರಕ್ಷಣ ವ್ಯವಸ್ಥೆಯ ಸೈನಿಕರಾದ ಲಿಂಪೋಸೈಟ್ ಎಂಬ ಬಿಳಿರಕ್ತಕಣಗಳು ಮತ್ತು ಅತಿಮುಖ್ಯ ಆಂಟಿಬಾಡಿಗಳಾದ ಐಜಅ, ಐಜಎ ಮತ್ತು ಐಜI ಇರುತ್ತವೆ. ಇದಲ್ಲದೆ ಲೈಜೋಜೈಮ್, ಲಾಕ್ಟೋಪೆ ರಾಕ್ಸಿಡೇಸ್, ಕಾಂಪ್ಲಿಮೆಂಟ್, ಪಾಲಿಪೆಪ್ಟೈಡ್ ಇಂಟರ್ ಲ್ಯುಕಿನ್, ಸೈಟೋಕೈನ್ ಮುಂತಾದ ಅತ್ಯವಶ್ಯಕ ಜೀವರಕ್ಷಕ ಧಾತುಗಳು ಇರುತ್ತವೆ.

ಕೊನೆಮಾತು: ಜಗತ್ತಿನಲ್ಲಿ ಜನ್ಮವೆತ್ತಿದ ಪ್ರತಿ ಜೀವಸಂಕುಲಕ್ಕೂ, ಹುಟ್ಟಿದ ಕ್ಷಣದಿಂದ ಆಹಾರ ಅತ್ಯವಶ್ಯಕ. ನವಜಾತ ಶಿಶುವಿಗೆ ತಾಯಿಯ ಎದೆಹಾಲಿಗೆ ಸರಿಸಮಾನ ವಾದ ಆಹಾರ ಇನ್ನೊಂದಿಲ್ಲ. ಎದೆಹಾಲು ಎನ್ನುವುದು ಮಗುವಿಗೆಂದೇ ತಯಾರಾದ ನೈಸರ್ಗಿಕ ಆಹಾರ ಅಥವಾ ಜೀವರಕ್ಷಕ ಜೀವದ್ರವ್ಯ. ಎದೆಹಾಲು ಕುಡಿಸುವುದರಿಂದ ತಾಯಿಗೆ ಮಾತೃತ್ವದ ಖುಷಿ ದೊರಕಿದರೆ ಮಗುವಿಗೆ ಆಹಾರದ ಜತೆಗೆ ಸುರಕ್ಷತೆಯ ಭಾವ ಮೂಡುತ್ತದೆ.

ಸ್ತನ್ಯಪಾನ ಕ್ರಿಯೆಯಲ್ಲಿ ತಾಯಿ ಮತ್ತು ಶಿಶುವಿಗೆ ಪರಸ್ಪರರ ಉಸಿರು, ವಾಸನೆ, ಹೃದಯ ಬಡಿತ ಸಮ್ಮಿಳಿತಗೊಂಡು ಅನ್ಯೋನ್ಯತೆಯ ಎಳೆಗಳು ಬೆಸೆದುಕೊಳ್ಳುತ್ತವೆ. ಎದೆಹಾಲು ಉತ್ಪತ್ತಿಯಾಗುವ ಮೊದಲು ಒಸರುವ ಹಳದಿ ಬಣ್ಣದ ಜೀವದ್ರವ್ಯ ವಾದ ಕೊಲೊಸ್ಟ್ರಮ್ ಕೋಟಿಕೋಟಿ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಮಗು ಹುಟ್ಟಿದ ಮೂರರಿಂದ ನಾಲ್ಕು  ದಿನಗಳವರೆಗೆ ಕೊಲೊಸ್ಟ್ರಮ್ ಮಗುವಿಗೆ ಸಿಗು ತ್ತದೆ. ಅ ಬಳಿಕ ಹೆಚ್ಚು ಎದೆಹಾಲು ಉತ್ಪತ್ತಿಯಾಗಿ ಕೊಲೊಸ್ಟ್ರಮ್ ಅಂಶ ಕಡಿಮೆಯಾಗುತ್ತದೆ. ಕೆಲವೊಮ್ಮೆ ನೀರು ನೀರಾಗಿ ಬಣ್ಣರಹಿತ ದ್ರವವಾಗಿ ಕಂಡುಬಂದರೂ.

ಕೊಲೊಸ್ಟ್ರಮ್ ನಲ್ಲಿರುವ ಬೀಟಾಕೆರೊಟಿನ್ ಅಂಶದಿಂದಾಗಿ ಹೆಚ್ಚಾಗಿ ನಸುಹಳದಿ ಬಣ್ಣ ಬರುತ್ತದೆ. ಪ್ರತಿಬಾರಿ ಸ್ತನ್ಯಪಾನ ಮಾಡಿದಾಗಲೂ ಮಗುವಿಗೆ ಅರ್ಧ ಟೀ ಸ್ಪೂನ್‌ನಷ್ಟು ಕೊಲೊಸ್ಟ್ರಮ್ ಮೊದಲ ೨೪ ಗಂಟೆಗಳಲ್ಲಿ ದೊರಕುತ್ತದೆ. ಮಗುವಿನ ಸಣ್ಣ ಕರುಳಿನ ಗಾತ್ರ ಕೇವಲ ೫ರಿಂದ ೭ ಮೀ.ಮೀ. ಇರುವುದರಿಂದ ಪ್ರತಿಬಾರಿ ಸ್ತನ್ಯಪಾನ ಮಾಡಿದಾಗಲೂ ಒಂದು ಟೀ ಸ್ಪೂನ್ ಕೊಲೊಸ್ಟ್ರಮ್ ಧಾರಾಳವಾಗಿ ಸಾಕಾಗುತ್ತದೆ.

ಒಟ್ಟಿನಲ್ಲಿ ಇದು ಶಿಶುಗಳ ಆರೋಗ್ಯ ಕಾಪಾಡುವ ಸಂಜೀವಿನಿ ಎಂದರೆ ಅತಿಶಯೋಕ್ತಿಯಲ್ಲ. ತಾಯಂದಿರು ಈ ಕೊಲೊಸ್ಟ್ರಮ್ ಮಹತ್ವವನ್ನು ಅರಿತು ಮಗು ಹುಟ್ಟಿದ ಕೂಡಲೇ ಸ್ತನ್ಯಪಾನ ಮಾಡಿಸಿದಲ್ಲಿ ಮುಂದೆ ಅವು ಆರೋಗ್ಯವಂತ ಮಕ್ಕಳಾಗಿ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಿದೆ. ಅದರಲ್ಲಿಯೇ ಸಮಾಜದ ಹಿತ ಅಡಗಿದೆ.