Saturday, 23rd November 2024

ಸಂಕದ ಮೇಲಿನ ನಡಿಗೆ ಗೊತ್ತೆ ನಿಮಗೆ ?

ಶಶಾಂಕಣ

shashidhara.halady@gmail.com

ನಮ್ಮೂರಿನಲ್ಲಿ ಜನಸಾಮಾನ್ಯರು ಆಡುವ ಭಾಷೆಯ ಕೆಲವು ಪದಗಳು ತಮಾಷೆ ಎನ್ನಿಸುತ್ತವೆ, ಬೆರಗು ಹುಟ್ಟಿಸುತ್ತವೆ. ಭಾಷಾ ಶಾಸದ ದೃಷ್ಟಿಯಲ್ಲಿ ಇಂಥ ಪದಗಳು ಹೇಗೆ ರೂಪುಗೊಂಡಿರಬಹುದು, ಆ ಪದದ ನಿಷ್ಪನ್ನವೇನು ಎಂಬ ಕುತೂಹಲವೂ ಒಮ್ಮೊಮ್ಮೆ ಮೂಡುತ್ತದೆ. ನಮ್ಮೂರಿನಲ್ಲಿ ಮಳೆ ಬಂದಾಗ ಹೆಚ್ಚು ಬಳಕೆಯಾಗುವ, ಬೇರೆ ಸಮಯದಲ್ಲೂ ಆಗಾಗ ಮಾತಿನಲ್ಲಿ ನುಸುಳುವ ಒಂದು ಪದ ಎಂದರೆ ‘ಸಂಕ’.

ನಮ್ಮ ಹಳ್ಳಿಯ ಸುತ್ತಮುತ್ತಲೂ ಜನರಾಡುವ ಭಾಷೆಯಲ್ಲಿ ಸಂಕ ಎಂದರೆ, ತೋಡು ಅಥವಾ ಪುಟ್ಟ ಹೊಳೆಯನ್ನು ದಾಟಲು ಎರಡೂ ದಡಗಳಿಗೆ ಅಡ್ಡಲಾಗಿ ಹಾಕುವ ಮರದ ಕಾಂಡ. ಒಂದೆರಡು ಅಡಿ ಅಗಲದ ತೋಡಿನಿಂದ ಹಿಡಿದು, ಹದಿನೈದು ಇಪ್ಪತ್ತು ಅಡಿ ಅಗಲದ ಸಣ್ಣ ಹೊಳೆಗೆ (ದೊಡ್ಡ ತೋಡು) ಅಡ್ಡಲಾಗಿ ಸಹ ಇಂಥ ಮರದ ಕಾಂಡವನ್ನು ಹಾಕುತ್ತಾರೆ; ತೋಡಿನ ಅಗಲ ತೀರಾ ಜಾಸ್ತಿ ಎನಿಸಿದಾಗ, ಹೆಚ್ಚು ಭದ್ರತೆಗಾಗಿ ಎರಡು ಮರಗಳನ್ನು ಒಟ್ಟೊಟ್ಟಿಗೆ ಎರಡೂ ದಡದ ಅಗಲಕ್ಕೆ ಮಲಗಿಸಿರುತ್ತಿದ್ದರು.

ಮಳೆ ಬಂದಾಗ, ನೆರೆ ಬಂದಾಗ ಕೆಳಗಿನ ತೋಡಿನಲ್ಲಿ ರಭಸದಿಂದ ಹರಿಯುವ ನೀರು; ಮಳೆ ಕಡಿಮೆಯಾದರೂ ಸುಮಾರು ನವೆಂಬರ್ ತಿಂಗಳಿನ ತನಕವೂ ಹೆಚ್ಚಿನ ತೋಡುಗಳಲ್ಲಿ ನೀರಿರುವುದರಿಂದಾಗಿ, ನಮ್ಮೂರಿನ ಜನರಿಗೆ ಓಡಾಡಲು ಸಂಕವು ಬೇಕೇ ಬೇಕು. ‘ಸಂಕದ ಮೇಲಿ ನಡಿಗೆ’ ಎಂದರೆ, ಕೆಳಗೆ ಹರಿಯುತ್ತಿರುವ ನೀರಿಗೆ ಬೀಳದೇ, ಅದರ ರಭಸ ಕಂಡು ಬೆದರದೇ, ಬ್ಯಾಲೆನ್ಸ್ ಮಾಡಿಕೊಂಡು ಆ ಏಕೈಕ ಮರದ ಕಾಂಡದ ಮೇಲೆ ನಡೆಯುವುದು! ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಸಮಯದಲ್ಲಿ ಸಂಕಕ್ಕೂ ನನಗೂ ಅನುದಿನದ ನಂಟು. ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಗೋರಾಜಿ ಶಾಲೆಗೆ ನನ್ನದು ಪ್ರತಿದಿನ ಚಾರಣ; ಅದು ಒಂದು ಕಿರಿಯ ಪ್ರಾಥಮಿಕ ಶಾಲೆ.

ಮೂರು ಮತ್ತು ನಾಲ್ಕನೆಯ ತರಗತಿ ಯಲ್ಲಿ ನನಗೆ ಕನ್ನಡ ಕಲಿಸಿದ ಶಾಲೆ ಅದು. ಪ್ರತಿ ದಿನವೂ ಆ ಶಾಲೆಗೆ ಹೋಗುವಾಗ, ನಾನು ಹನ್ನೆರಡು ಬಾರಿ ಮರದ ಸಂಕವನ್ನು ದಾಟಬೇಕಿತ್ತು. ಅಂದರೆ, ಶಾಲೆಗೆ ಹೋಗುವ ದಾರಿಯಲ್ಲಿ ಮೂರು ತೋಡು (ಹಳ್ಳ)ಗಳಿದ್ದವು. ಒಂದು ದೊಡ್ಡ ತೋಡು, ಇನ್ನೆರಡು ಸಣ್ಣ ತೋಡುಗಳು. ಅವನ್ನು ದಾಟಲು ಬೆಳಗ್ಗೆ ಮೂರು ಬಾರಿ, ಮಧ್ಯಾಹ್ನ ಊಟಕ್ಕೆ ಬರುವಾಗ ಮೂರು ಬಾರಿ, ಊಟ ಮುಗಿಸಿ ಹೋಗುವಾಗ ಮೂರು ಬಾರಿ, ಸಂಜೆ ವಾಪಸ್ ಬರುವಾಗ ಮತ್ತೆ ಮೂರು ಬಾರಿ!

ನಮ್ಮ ಮನೆಯ ಎದುರಿನ ಅಗೇಡಿ ಅಂಚಿನಲ್ಲಿ ಸುಮಾರು ನೂರು ಮೀಟರ್ ನಡೆದು, ಬಲ ಭಾಗದಲ್ಲಿ ಸಿಗುವ ತೋಡಿನ ಅಂಚಿನಲ್ಲೇ, ಮುಂಡುಕನ ಹಿಂಡಲುಗಳ ಪಕ್ಕದಲ್ಲೇ ತುಸು ದೂರ ಸಾಗಿದ ನಂತರ, ಆ ತೋಡನ್ನೇ ದಾಟಿ ನಡೆಯಬೇಕಾದ ಅನಿವಾರ್ಯತೆ; ಇಲ್ಲೇ ಎದುರಾಗುವುದು ನನ್ನ ದಾರಿಯ ಮೊದಲ ಸಂಕ. ಮಳೆಗಾಲದಲ್ಲೋ, ಈ ತೋಡಿನಲ್ಲಿ ಕೆಂಪನೆಯ ನೀರು ರಭಸವಾಗಿ ಹರಿಯುತ್ತಿತ್ತು!

ಒಮ್ಮೊಮ್ಮೆ ನಾಲ್ಕಾರು ದಿನ ಎಡೆಬಿಡದೆ ಮಳೆ ಸುರಿವ ಹಳ್ಳಿ ನಮ್ಮದು; ಅಂಥ ದಿನಗಳಲ್ಲಿ ರಭಸವಾಗಿ ಹರಿಯುವ ನೀರನ್ನು ಆ ತೋಡಿನಲ್ಲಿ ನೋಡುವುದೇ
ಒಂದು ವಿಶಿಷ್ಟ ಅನುಭವ; ಸುಳಿ ಸುಳಿ ಸುತ್ತುತ್ತಾ ಹರಿಯುವ ಆ ಕೆಂಪನೆಯ ನೀರನ್ನು ನೋಡುತ್ತಲೇ ಶಾಲೆಗೆ ಹೋಗುತ್ತಿದ್ದೆವು. ಆದರೆ ಈ ತೋಡು ಸಾಕಷ್ಟು ದೊಡ್ಡದು, ಮಕ್ಕಳು ಅಕಸ್ಮಾತ್ ಜಾರಿ ಬಿದ್ದರೆ ಕೊಚ್ಚಿ ಹೋಗುವಷ್ಟು ನೀರು ಒಮ್ಮೊಮ್ಮೆ ಅದರಲ್ಲಿ ಹರಿಯುತ್ತಿತ್ತು. ಆ ನೀರಿನ ರಭಸವನ್ನೇ ನೋಡುತ್ತಾ,
ಸಂಕದ ಮೇಲೆ ನಡೆದರೆ ಕಾಲುಜಾರಿ ಬೀಳುವುದೇ ಸೈ. ಆ ನೀರಿನ ಭಯದಿಂದ ದೂರಾಗಲು ಜತೆ ಗಾರರು ಒಂದು ಉಪಾಯ ಹೇಳಿಕೊಡುತ್ತಿದ್ದರು ‘ನೀರನ್ನು ಕಾಂಬುಕಾಗ, ಮರದ ಸಂಕವನ್ನು ಮಾತ್ರ ಕಂಡಕಂಡ್ ನಡಿಕ್. ಆಗ ಹೆದ್ರಿಕೆ ಆತಿಲ್ಲೆ’.

ನಮ್ಮ ಮನೆಯಿಂದ ಸುಮಾರು ೨೦೦ ಮೀಟರ್ ದೂರದಲ್ಲಿದ್ದ ಈ ಸಂಕವನ್ನು ದಾಟುವಾಗ ಕೆಳಗಿನ ತೋಡಿಗೆ ಒಮ್ಮೆ ನಾನು ಬಿದ್ದಿದ್ದೆ! ಸುಮಾರು ೧೫ ಅಡಿ
ಅಗಲದ ತೋಡು ಅದು; ಎರಡೂ ದಡಗಳ ಆಧಾರ ದಿಂದ ಜೋಡಿಸಿರುವ ಮರದ ಸಂಕದ ಉದ್ದ ಸುಮಾರು ೨೦ ಅಡಿ. ಒಂದೇ ಮರ ಹಾಕಿದರೆ ದಾಟಲು ಕಷ್ಟವಾಗುತ್ತದೆ ಎಂದು ೨ ಮರಗಳನ್ನು ಜೋಡಿಸಿದ್ದರು; ಅದರಲ್ಲೊಂದು ಮರ ಓರೆಕೋರೆಯಾಗಿತ್ತು. ಆಗಸ್ಟ್ ತಿಂಗಳಿನ ಒಂದು ದಿನ, ಆ ಸಂಕವನ್ನು ಬಹುಪಾಲು ದಾಟಿ, ಇನ್ನೇನು ಕೊನೆಯ ೩ ಅಡಿ ಹೆಜ್ಜೆ ಹಾಕಿ ಆಚೆ ದಡ ಸೇರಬೇಕು ಎನ್ನುವಷ್ಟರಲ್ಲಿ, ೨ ಮರಗಳ ನಡುವಿನ ಸಂದಿಯಲ್ಲಿ ಸಿಕ್ಕಿಕೊಂಡ ನನ್ನ ಕಾಲು
ಎಡವಿತು! ಪುಸುಕ್ಕನೆ ಜಾರಿ ತೋಡಿಗೆ ಬಿದ್ದೆ; ಸುಮಾರು ೬ ಅಡಿ ಆಳ; ಹೆಚ್ಚಿನ ಏಟಾಗುವ ಸಂಭವ ಇರಲಿಲ್ಲ; ಆ ಸಮಯದಲ್ಲಿ ತೋಡಿನಲ್ಲಿ ಹೆಚ್ಚು ನೀರು ಇರಲಿಲ್ಲ- ಬಿದ್ದ ರಭಸಕ್ಕೆ ಹಾಕಿದ್ದ ಅಂಗಿ ಚಡ್ಡಿ ಒದ್ದೆಯಾಯಿತು; ಕೈಲಿದ್ದ ಪುಸ್ತಕಗಳು ನೀರಿನಲ್ಲಿ ಸ್ನಾನ ಮಾಡಿದವು.

ಅದೃಷ್ಟವಶಾತ್ ಯಾವುದೇ ಏಟು ಆಗಲಿಲ್ಲ. ಆಚೆ ದಡಕ್ಕೆ ಒತ್ತಿಕೊಂಡಂತೆ ಒಂದು ಮನೆ; ಅಲ್ಲಿನ ಮಕ್ಕಳು ಸಹ ನನ್ನ ಜತೆಯಲ್ಲೇ ಶಾಲೆಗೆ ಹೋಗುವವರು. ಅವರ ತಾಯಿ ಲಕ್ಷ್ಮಮ್ಮ ಎಂಬುವವರು ಓಡಿಬಂದು, ತೋಡಿನಿಂದ ಎದ್ದು ಮೇಲೆ ಬರಲು ಸಹಾಯ ಮಾಡಿ, ಅವರ ಮನೆಗೆ ಕರೆದುಕೊಂಡು ಹೋದರು.
‘ಬಿದ್ದದ್ದಕ್ಕೆ ಗಾಯ ಎಂತ ಆಗಿಲ್ಲ ಅಲ್ದಾ? ಜಾಸ್ತಿ ನೀರಿರಲಿಲ್ಲ, ಒಳ್ಳೆದಾಯಿತು. ಇರಲಿ.. ನೀನು ಯಾವ ಕಾಲು ಎಡವಿ ಬಿದ್ದದ್ದು?’ ಎಂದು ಕೇಳಿದರು. ‘ಬಲಗಾಲು’ ಎಂದೆ. ‘ಓ, ಹಾಗಾದರೆ ನಿನಗೆ ಇವತ್ತು ಒಂದು ಒಳ್ಳೆಯ ಸುದ್ದಿ ಇರತ್. ಬಿದ್ದಿದ್ದೂ ಒಳ್ಳೆಯ ದಕ್ಕೇ… ನೀ ಏನೂ ಬೇಜಾರ್ ಮಾಡ್ಕಂಬುದೇ ಬೇಡ’ ಎಂದು ಹುರಿದುಂಬಿಸಿದರು.

ಬಿದ್ದ ನೋವನ್ನು ಮರೆಸುವ, ಸಕಾರಾತ್ಮಕ ಪ್ರೋತ್ಸಾಹದ ಮಾತುಗಳು ಅವು. ಅದೇ ಸಂಜೆ, ನಮ್ಮ ಶಾಲೆಯ ಅಧ್ಯಾಪಕರು, ಸ್ವಾತಂತ್ರ್ಯೋತ್ಸವದ ಆಚರಣೆಗೆ
‘ಗೌರಿ’ ಎಂಬ ನಾಟಕ ಆಡಲು ಪಾತ್ರಧಾರಿಗಳನ್ನಾಗಿ ಆಯ್ಕೆ ಮಾಡುವಾಗ, ನನ್ನನ್ನು ನಾಟಕದ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು! (ಆಗ ಸ್ತ್ರೀ ಪಾತ್ರಗಳನ್ನು
ಹುಡುಗರೇ ಮಾಡುವ ಪರಿಪಾಠ. ಹುಡುಗರು ಹುಡುಗಿಯರು ಒಟ್ಟಿಗೆ ಒಂದು ನಾಟಕದಲ್ಲಿ ಭಾಗ ವಹಿಸುವಂತೆ ಇರಲಿಲ್ಲ!). ಅಂತೂ, ಸಂಕದ ಮೇಲೆ ಬಲಗಾಲು ಎಡವಿ ಕೆಳಗೆ ಬಿದ್ದರೂ, ಲಕ್ಷ್ಮಮ್ಮ ಹೇಳಿದಂತೆ, ನಾಟಕದಲ್ಲಿ ನಟಿಸುವ ಅವಕಾಶದ ಒಳ್ಳೆಯ ಸುದ್ದಿ ಅದೇ ದಿನ ಸಿಕ್ಕಿದ್ದಂತೂ ನಿಜ. ಅಕಸ್ಮಾತ್ ಆ ದಿನ ಜಾಸ್ತಿ ಮಳೆ ಬಂದಿದ್ದರೆ, ಸ್ವಲ್ಪ ದೂರವಾದರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಬೇಕಿತ್ತು! (ಇದು ನಡೆದದ್ದು, ಐದನೆಯ ತರಗತಿಯಲ್ಲಿದ್ದಾಗ- ಹಾಲಾಡಿ ಶಾಲೆಗೆ ಹೋಗುತ್ತಿದ್ದಾಗ).

ಗೋರಾಜಿ ಶಾಲೆಗೆ ಹೋಗಬೇಕಾದಾಗ, ಆ ಮೊದಲ ಸಂಕವನ್ನು ದಾಟಿದ ತಕ್ಷಣ ಒಂದಷ್ಟು ಮಕ್ಕಿಗದ್ದೆಗಳು, ನಂತರ ದಟ್ಟವಾಗಿ ಬೆಳೆದ ಹಕ್ಕಲು, ಗುಡ್ಡೆದಾರಿ. ಆ ಗುಡ್ಡೆಯನ್ನು ಇಳಿಯುವಾಗ ಇನ್ನೊಂದು ಮರದ ಸಂಕ- ಈ ತೋಡಿನ ಅಗಲ ಕಡಿಮೆ. ಆದರೆ ಸಂಕ ಇಳಿಜಾರಾಗಿತ್ತು, ದಾಟುವಾಗ ಸಣ್ಣಗೆ ಬೆದರುವಂತೆ ಮಾಡುತ್ತಿತ್ತು. ಆ ಸಂಕ ದಾಟಿದ ನಂತರ ಒಂದು ಬತ್ತದ ಗದ್ದೆ, ಅದರ ಅಂಚಿನಲ್ಲೇ ಸಾಗಿ ಎಡಕ್ಕೆ ತಿರುವಿದಾಗ, ಇನ್ನೊಂದು ತೋಡು ಎದುರಾಗುತ್ತದೆ. ಅದನ್ನು ದಾಟಲು ನಾಲ್ಕಾರು ಅಡಕೆ ಮರದ ದಬ್ಬೆಗಳನ್ನು ಜೋಡಿಸಿರುತ್ತಿದ್ದರು.

ಅಷ್ಟೇನೂ ಅಗಲವಿಲ್ಲದ ತೋಡು ಅದು. ನಡೆಯುವಾಗ ಭಯ ಇರಲಿಲ್ಲ. ಆದರೆ, ಮುಂಡುಕನ ಮುಳ್ಳುಗಳು ಮೈಗೆ ತಾಗದಂತೆ ನಡೆಯುವ ಜಾಗ್ರತೆ ವಹಿಸಬೇಕಿತ್ತು. ಆ ತೋಡಿನ ಎರಡೂ ಬದಿ ದಟ್ಟವಾಗಿ ಮುಂಡುಕನ ಹಿಂಡಲು ಮತ್ತು ಇತರ ಗಿಡಗಳು ಬೆಳೆದಿದ್ದು, ತಮ್ಮ ಮೈಯುದ್ದಕ್ಕೂ ಸಣ್ಣ ಮುಳ್ಳು
ಗಳನ್ನು ಬೆಳೆಸಿಕೊಂಡಿರುವ ಮುಂಡುಕನ ಎಲೆಗಳು ಸಂಕದಲ್ಲಿ ನಡೆಯುವವರ ಮೈಸವರುವಂತೆ ಅಡ್ಡಕ್ಕೆ ಚಾಚಿಕೊಂಡಿರುತ್ತಿದ್ದವು.

ಬೆಳಗ್ಗೆ ಎದ್ದು ಈ ೩ ಸಂಕಗಳನ್ನು ದಾಟಿ, ಹಾಡಿ ಗುಡ್ಡಗಳಲ್ಲಿ ನಡೆದು ಗೋರಾಜಿ ಶಾಲೆ ತಲುಪಿ, ಆ ಏಕೋಪಾಧ್ಯಾಯ, ಏಕ ಕೊಠಡಿಯ, ಗುಡಿಸಲು
ಶಾಲೆಯಲ್ಲಿ ನಮ್ಮೆಲ್ಲರ ವಿದ್ಯಾಭ್ಯಾಸ. ಮಧ್ಯಾಹ್ನ ಊಟದ ಸಮಯವಾದ ಕೂಡಲೆ, ಅದೇ ದಾರಿಯಲ್ಲಿ ವಾಪಸು; ಬೇಗನೆ ಊಟ ಮಾಡಿಕೊಂಡು ಪುನಃ ಅದೇ
ದಾರಿ ಹಿಡಿದು ನಡಿಗೆ; ಸಂಜೆ ಶಾಲೆ ಬಿಟ್ಟ ನಂತರ, ಅದೇ ದಾರಿಯಲ್ಲಿ, ೩ ಸಂಕಗಳನ್ನು ದಾಟಿ ಮನೆಗೆ ವಾಪಸು. ದಾರಿಯುದ್ದಕ್ಕೂ ಹಕ್ಕಲು, ಹಾಡಿ, ಗುಡ್ಡೆ,
ಗೋವೆಮರಗಳು ಬೆಳೆದಿದ್ದ ಮಕ್ಕಿಗದ್ದೆಯ ಅಂಚು, ಅಲ್ಲಲ್ಲಿ ಬೃಹದಾಕಾರದ ಕಾಟುಮಾವಿನ ಮರಗಳು, ಕೆಲವು ಕಡೆ ದಟ್ಟ ಹಾಡಿ, ಆ ಹಾಡಿಯಲ್ಲಿ ಸಂಚರಿಸುವ
ಹಕ್ಕಿಗಳು, ಮಂಗಗಳು, ಹಕ್ಕಲಿನ ಮರಗಳ ಮೇಲೆ ಓತಿಕ್ಯಾತಗಳ ಆಟ, ಅವುಗಳಿಗೆ ಕಲ್ಲೆಸೆಯುವ ಶಾಲಾ ಮಕ್ಕಳು ಇವೆಲ್ಲವೂ ಗೋರಾಜೆ ಶಾಲೆಯ
ಅನುಭವಗಳಲ್ಲಿ ಸೇರಿಹೋಗಿವೆ.

ಪರಿಸರ, ಪ್ರಕೃತಿಯ ನಡುವೆಯೇ ಇದ್ದ ಆ ‘ಕಿರಿಯ ಪ್ರಾಥಮಿಕ ಶಾಲೆ’ಗೆ ಪ್ರತಿದಿನ ನಡೆದು ಹೋಗುವುದೆಂದರೆ, ಆ ಕಿರಿವಯಸ್ಸಿನಲ್ಲೇ ಪರಿಸರದ ಪಾಠಗಳನ್ನು ಪಡೆದಂತೆ. ಕರಡ ಬೆಳೆಯುತ್ತಿದ್ದ ಪುಟ್ಟ ಮೈದಾನದಲ್ಲಿ, ನಾಲ್ಕಾರು ಕಾಸಾನು ಮರಗಳ ನೆರಳಿನಲ್ಲಿ, ಒಂದು ಕಡೆ ಹಕ್ಕಲು ಇನ್ನೊಂದು ಕಡೆ ಗದ್ದೆಗಳಿರುವ ಭೂ
ಪ್ರದೇಶದಲ್ಲಿದ್ದ ಗೋರಾಜಿ ಶಾಲೆಯಲ್ಲಿ ೪ನೇ ಇಯತ್ತೆ ಪಾಸು ಮಾಡಿ, ೫ನೇ ತರಗತಿಗೆ ಹಾಲಾಡಿ ಶಾಲೆಗೆ ಸೇರಿದೆ. ೩ ಕಿ.ಮೀ.ದೂರದಲ್ಲಿದ್ದ ಆ ಶಾಲೆಗೆ
ಸಾಗಲು ೩ ದಾರಿಗಳಿದ್ದು, ಎಲ್ಲಾ ದಾರಿಗಳಲ್ಲೂ ಸಂಕ ದಾಟುವುದು ಅನಿವಾರ್ಯ. ಆಗೆಲ್ಲಾ, ಅಡ್ಡವಾಗಿ ಹರಿಯುತ್ತಿದ್ದ ತೋಡುಗಳಲ್ಲಿ ನೀರಿನಾಟ ನೋಡು
ವುದು, ತೋಡಿನ ನೀರನ್ನೇ ಆಶ್ರಯಿಸಿದ್ದ ಕಪ್ಪೆ, ಮೀನು, ಕೊಕ್ಕರೆ, ಮಿಂಚುಳ್ಳಿ, ಒಳ್ಳೆ ಹಾವುಗಳನ್ನು ನೋಡುವುದು ಮೊದಲಾದ ವಿವಿಧ ಅನುಭವಗಳನ್ನು
ಈ ದಾರಿಗಳು ಕೊಡುತ್ತಿದ್ದವು.

ಸಾಮಾನ್ಯವಾಗಿ ಅನುಸರಿಸುವ ದಾರಿ ಎಂದರೆ ನಮ್ಮ ಮನೆ ಎದುರಿನ ಅರ್ಧ ಕಿ.ಮೀ. ಉದ್ದನೆಯ ಬೈಲುದಾರಿಯಲ್ಲಿ ಸಾಗಿ, ಅದರ ತುದಿಯಲ್ಲಿರುವ
ತೋಡನ್ನು ದಾಟಿ ಹಾಡಿದಾರಿಯನ್ನು ಅನುಸರಿಸುವುದು. ಈ ತೋಡನ್ನು ದಾಟಲು ಮರದ ‘ಸಾರ’ ಇತ್ತು. ಸುಮಾರು ೨ ಅಡಿ ಉದ್ದದ ಹಲಗೆಯ ಚೂರುಗಳನ್ನು ೨ ಮರದ ಮೋಪುಗಳಿಗೆ ಭದ್ರವಾಗಿ ಜೋಡಿಸಿ ಮಾಡಲಾಗಿದ್ದ ಈ ಸಾರದ ಮೇಲಿನ ನಡಿಗೆ ಸಾಕಷ್ಟು ಸುರಕ್ಷಿತ. ಒಂದೇ ಮರದ ಕಾಂಡದ, ಕೆಲವೊಮ್ಮೆ ಅಲುಗಾಡುವ ಮರದ ಕಾಂಡಗಳ ಮೇಲಿನ ನಡಿಗೆಗಿಂತ, ಮರದ ಸಾರದ ಮೇಲಿನ ನಡಿಗೆ ಎಷ್ಟೋ ಉತ್ತಮ. ನಮ್ಮ ಮನೆಯ ಎದುರಿನಿಂದಲೇ ಹರಿದು ಬರುವ ದೊಡ್ಡ ತೋಡು, ಅರ್ಧ ಕಿ.ಮೀ. ದೂರದ ಈ ಭಾಗಕ್ಕೆ ಬರುವಾಗ ಇನ್ನಷ್ಟು ಮೈದುಂಬಿ ಕೊಂಡಿರುವುದರಿಂದಲೇ ಇರಬೇಕು, ಜನರ ಅನು ಕೂಲಕ್ಕಾಗಿ ಇಲ್ಲಿ ಮರದ ಸಾರವನ್ನು ಪಂಚಾಯತ್ ವತಿಯಿಂದಲೇ ಮಾಡಿಸುತ್ತಿದ್ದರು.

ಮಳೆಗಾಲದಲ್ಲಿ ಒಮ್ಮೊಮ್ಮೆ ಆ ತೋಡಿನಲ್ಲಿ ನೆರೆ ಬಂದಾಗ, ನಾವೆಲ್ಲಾ ಮಕ್ಕಳು ಆ ಮರದ ಸಾರದ ಮೇಲೆ ನಿಂತು ಕೆಂಪನೆಯ ನೀರನ್ನು, ಅದು ರಭಸದಿಂದ ಹರಿಯುವ ಶೈಲಿಯನ್ನು ನೋಡುತ್ತಿದ್ದುದುಂಟು. ಇದೇ ದಾರಿಯಲ್ಲಿ ಮುಂದುವರಿದು, ಹಂದಿ ಕೊಡ್ಲು ಹಾಡಿಯನ್ನು ದಾಟಿ ಇನ್ನೇನು ಮುಖ್ಯರಸ್ತೆಯ ಹತ್ತಿರ ಬಂದು ತಲುಪುತ್ತಿದ್ದೇವೆ ಎನ್ನುವಷ್ಟರಲ್ಲಿ ಒಂದು ತೋಡು ಎದುರಾಗುತ್ತಿತ್ತು. ಇದನ್ನು ದಾಟಲು ಒಂದು ದಪ್ಪನೆಯ ಮರದ ಕಾಂಡವನ್ನು ಹಾಕಿರುತ್ತಿದ್ದರು. ಆದರೆ, ಆ ತೋಡಿನ ಒಂದು ದಡಕ್ಕೂ ಇನ್ನೊಂದಕ್ಕೂ ಎತ್ತರದ ವ್ಯತ್ಯಾಸ ಇದ್ದುದರಿಂದ, ಈ ಸಂಕವು ತುಸು ಇಳಿಜಾರಾಗಿತ್ತು; ಆ ಇಳಿಜಾರಿನ ಸಂಕವನ್ನು ತುಸು ಜಾಗ್ರತೆಯಿಂದಲೇ ದಾಟಬೇಕಿತ್ತು.

ನಮ್ಮ ಶಾಲೆಗೆ ಹೋಗಲು ಇನ್ನೊಂದು ದಾರಿಯಿತ್ತು; ವಾಸ್ತವವಾಗಿ ಈ ದಾರಿಯಲ್ಲಿ ನಡೆದು ಹೋದರೆ, ಸುಮಾರು ಅರ್ಧ ಕಿ.ಮೀ. ಕಡಿಮೆ ದೂರ. ಆದರೆ, ದಾರಿಯುದ್ದಕ್ಕೂ ಗುಡ್ಡ, ಕಾಡು, ತುಸು ನಿರ್ಜನ ಪ್ರದೇಶ ಇದ್ದುದರಿಂದ, ಇಲ್ಲಿ ಹೆಚ್ಚು ಜನ ಹೋಗುತ್ತಿರಲಿಲ್ಲ. ಜತೆಗೆ, ವಿಶಾಲವಾದ ಬತ್ತದ ಬಯಲಿದ್ದ ‘ಹೆರಬೈಲಿ’ನ ಆ ದಾರಿಗಡ್ಡಲಾಗಿ ಸಣ್ಣಹೊಳೆಯೊಂದು ಹರಿಯುತ್ತಿತ್ತು. ಅದನ್ನು ದಾಟಲು ಒಂದೇ ಮರದ ಕಾಂಡದ ಸಂಕ. ಸುಮಾರು ೨೫ ಅಡಿ ಅಗಲದ ಆ ಸಣ್ಣಹೊಳೆಯುಲ್ಲಿ ಸದಾಕಾಲ ನೀರು; ಮಳೆಗಾಲದಲ್ಲಿ ತುಂಬ ನೀರು, ಚಳಿಗಾಲದಲ್ಲಿ ಹದವಾದ ನೀರು, ಬೇಸಗೆಯಲ್ಲಿ ತುಸುನೀರು. ವಿಷಯ ಅದಲ್ಲ, ಆ ಉದ್ದನೆಯ ಸಂಕವನ್ನು ದಾಟಲು, ಮಕ್ಕಳಿಗೆ ನಿಜವಾಗಿಯೂ ತುಸು ಭಯ. ಒಂದೇ ಆ ಮರದ ಸಂಕದ ಮೇಲೆ ಜಾಗ್ರತೆಯಿಂದ ನಡೆಯುತ್ತಾ, ಮಧ್ಯಭಾಗ ತಲುಪಿದಾಕ್ಷಣ ಅದು ಸಣ್ಣಗೆ
ಅಲುಗಾಡಲು ಆರಂಭವಾಗುತ್ತಿತ್ತು!

ಆಧಾರಕ್ಕೆಂದು ಅದಕ್ಕೊಂದು ಕೈಹಿಡಿಯಂಥ ರಚನೆಯನ್ನು ಮಾಡುವ ಪ್ರಯತ್ನ ನಡೆಸುತ್ತಿದ್ದರು; ಆದರೆ ಅದು ಹೆಚ್ಚಿನ ಅವಽಯಲ್ಲಿ ಬಿದ್ದುಹೋಗಿದ್ದೇ ಜಾಸ್ತಿ. ಆದ್ದರಿಂದ ಆ ಸಂಕದ ಮೇಲಿನ ನಡಿಗೆ ಎಂದರೆ, ಮಕ್ಕಳಿಗಂತೂ ಹಗ್ಗದ ಮೇಲಿನ ನಡಿಗೆ. ಸಣ್ಣ ಮಕ್ಕಳು ಅದನ್ನು ದಾಟುವಾಗ ದೊಡ್ಡ ಮಕ್ಕಳು ಕೈ ಹಿಡಿದುಕೊಳ್ಳಲೇಬೇಕಿತ್ತು. ಮಳೆಗಾಲದಲ್ಲಿ ಆ ತೋಡಿನಲ್ಲಿ ತುಂಬಾ ನೀರು ಇರುತ್ತಿದ್ದುದರಿಂದ, ಯಾವುದೇ ಕಾರಣಕ್ಕೂ ಆ ದಾರಿಯಲ್ಲಿ ಹೋಗಬಾರ
ದೆಂದು ಮನೆಯವರು ತಾಕೀತು ಮಾಡುತ್ತಿದ್ದರು. ಚಳಿಗಾಲ ಮತ್ತು ಬೇಸಗೆಯಲ್ಲಿ ಒಮ್ಮೊಮ್ಮೆ ಹೋಗುತ್ತಿದ್ದೆವು; ಆದರೆ ಮಕ್ಕಳು ಒಬ್ಬೊಬ್ಬರೇ ಹೋಗುವುದು
ಕಡಿಮೆ. ಈ ಸಂಕದ ಜಾಗದಲ್ಲಿ ಹಿಂದೊಮ್ಮೆ ಮರದ ಸಾರ ಇತ್ತು ಅನಿಸುತ್ತದೆ. ಅದರ ಎರಡೂ ದಡದಲ್ಲಿ ಸಾರವನ್ನು ಎರಡೂ ತುದಿಗಳನ್ನು ಭದ್ರವಾಗಿರಿಸಲು
ಕಲ್ಲು ಕಟ್ಟಿ ಮಾಡಿದ ಪುಟ್ಟ ರಚನೆ ಇತ್ತು; ಆದರೆ, ಯಾವಾಗಲೋ ಬಿದ್ದು ಹೋಗಿದ್ದ ಆ ಸಾರವನ್ನು ಮತ್ತೆ ಮರುನಿರ್ಮಾಣ ಮಾಡಿರಲಿಲ್ಲ.

ಆದ್ದರಿಂದ, ಮಧ್ಯ ಕ್ಕೆ ಸಾಗಿದಾಗ ಅಲುಗಾಡುವ, ಜೀವ ಕೈಯಲ್ಲಿ ಹಿಡಿದುಕೊಂಡು ದಾಟುವಂಥ ಏಕವೃಕ್ಷದ ಕಾಂಡವೇ ಗತಿ. ಸಣ್ಣಗೆ ಅಲುಗಾಡುತ್ತಿದ್ದ ಆ ಹೆರಬೈಲು ಸಂಕದ ಮೇಲಿನ ನಡಿಗೆಯನ್ನು ನೆನಪಿಸಿಕೊಂಡರೆ ಈಗಲೂ ಅಂಗೈ ಹಿಂದಿನ ರೋಮ ನೆಟ್ಟಗೆ ನಿಲ್ಲುತ್ತದೆ. ಸಂಕದ ಮೇಲಿನ ನಡಿಗೆಯ ರೋಚಕತೆಯನ್ನು ಮತ್ತೊಮ್ಮೆ ಅನುಭವಿಸಿದಂತಾಗುತ್ತದೆ.