ನಾಡಿಮಿಡಿತ
ವಸಂತ ನಾಡಿಗೇರ
vasanth.nadiger@gmail.com
ಮಕ್ಕಳನ್ನು ಹೊತ್ತು, ಹೆತ್ತು, ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರನ್ನು ದಾರಿಗೆ ಹಚ್ಚುವುದು ಪಾಲಕರ ಕರ್ತವ್ಯ. ಮುಂದೆ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತ ಬಳಿಕ ಅವರಿಗೆ ಮದುವೆ ಮಾಡಿದ ನಂತರ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಭಾವ. ವಯಸ್ಸಾದ ನಂತರ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ನೈತಿಕ ಕರ್ತವ್ಯ.
ಇದು ನಮ್ಮ ದೇಶದಲ್ಲಿ ಕಂಡುಬರುವ ದೃಶ್ಯ. ಆದರೆ ಮದುವೆ, ಸಂಸಾರ, ಕುಟುಂಬ ಇತ್ಯಾದಿಗಳಿಗೆ ನಮ್ಮಲ್ಲಿರುವ ಅರ್ಥ, ಆಚರಣೆಗೂ, ವಿದೇಶಗಳಿಗೂ ಸಾಕಷ್ಟು ಅಂತರವಿದೆ. ನಮ್ಮಲ್ಲಿ ಇದು ಹೆಚ್ಚಾಗಿ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿ ಎಂದೆನಿಸಿಕೊಳ್ಳುತ್ತದೆ. ಆದರೆ ವಿದೇಶಗಳಲ್ಲಿ ಇವೆಲ್ಲ ಹೆಚ್ಚು ಮುಕ್ತ. ನಮ್ಮಂತೆ ಅಲ್ಲಿ ನೂರೆಂಟು ಬಗೆಯ ನಿರ್ಬಂಧ, ನಿಷೇಧಗಳಿಲ್ಲ. ಆದರೂ ಈಗೀಗ ಭಾರತದಲ್ಲೂ ಪಾಶ್ಚಾತ್ಯ ಸಂಸ್ಕೃತಿಯು ನಿಧಾನಕ್ಕೆ ತನ್ನ ನೆರಳು ಚಾಚುತ್ತಿದೆಯಾದರೂ ಪರಿಸ್ಥಿತಿ ಇನ್ನೂ ಅಂಥ ವಿಪರೀತ ತಿರುವು ಪಡೆದುಕೊಂಡಿಲ್ಲ.
ಅಮೆರಿಕದಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನವೊಂದನ್ನು ಗಮನಿಸಿದ ಬಳಿಕ ಇದೆಲ್ಲ ನೆನಪಾಗುತ್ತಿದೆ.
ಏನಿದು ವಿದ್ಯಮಾನ? ಆಕೆ ಖ್ಯಾತ ಪಾಪ್ ಗಾಯಕಿ. ಬೇಕಾದಷ್ಟು ಹಣ, ಹೆಸರು ಗಳಿಸಿದ್ದಾಳೆ. ಕೋಟ್ಯಂತರ ಅಭಿಮಾನಿಗಳನ್ನು
ಪಡೆದಿದ್ದಾಳೆ. ಆದರೆ ಅಪಾರವಾದ ಖ್ಯಾತಿಯೇ ಮುಳುವಾಯಿತೋ ಎಂಬಂತೆ ಆಕೆಯ ಬದುಕು ಮೂರಾಬಟ್ಟೆ ಆಗಿದೆ. ಆಕೆಯ ಹೆಸರು ಬ್ರಿಟ್ನಿ ಸ್ಪಿಯರ‍್ಸ್. ಸಾಕಷ್ಟು ಜನರು ಈ ಹೆಸರನ್ನು ಕೇಳಿರಬಹುದು. ಸಂಗೀತ ಪ್ರಿಯರಿಗೆ ಪರಿಚಿತಳೂ ಆಗಿರಬಹುದು. ಆದರೆ ಅವಳ ಜೀವನ ಮಾತ್ರ ವಿಪರೀತ ಅಧ್ವಾನವಾಗಿದೆ. ಎಲ್ಲ ಇದ್ದು ಏನೂ ಇಲ್ಲದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾಳೆ.
40ರ ಈ ಮಧ್ಯವಯಸ್ಸಿನಲ್ಲೂ ತಂದೆಯ ನೆರಳಲ್ಲಿ, ಮರ್ಜಿಯಲ್ಲಿ ಇರಬೇಕಾಗಿದೆ. ಆಕೆ ರೆಕ್ಕೆ ಮುರಿದ ಹಕ್ಕಿ. ಪಂಜರದ ಗಿಳಿ. ಅದಕ್ಕಾ ಗಿಯೇ ‘ಫ್ರೀ ಬ್ರಿಟ್ನಿ’ ಎಂಬ ಆಂದೋಲನ ಇದೀಗ ಆರಂಭವಾಗಿದೆ. ತಾನೇ ಹೆಣೆದುಕೊಂಡಿರುವ ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುವ ಬ್ರಿಟ್ನಿ ಅಲ್ಲಿಂದ ಹೊರಬರಲು ಕಾನೂನು ಹೋರಾಟ ನಡೆಸುತ್ತಿದ್ದಾಳೆ. ಈ ಮೊದಲೇ ತಿಳಿಸಿರುವಂತೆ ಅಮೆರಿಕದಂಥ ದೇಶದಲ್ಲಿ ನಮ್ಮಲ್ಲಿರು ವಂತೆ ಒಂದು ಸುರಕ್ಷತೆಯ ಬಂಧ ಇರುವುದಿಲ್ಲ.
ಸ್ವೇಚ್ಛಾಚಾರ ಹೆಚ್ಚು. ಇದು ಅನೇಕ ಸಲ ಸಾಕಷ್ಟು ಸಮಸ್ಯೆಗಳನ್ನು ತಂದಿಡುತ್ತದೆ. ಈಗ ಬ್ರಿಟ್ನಿಗೆ ಆಗಿರುವುದೂ ಅದೇ. ಕೌಟುಂಬಿಕ ಸಂತಸ, ನೆಮ್ಮದಿ ಇಲ್ಲದ ಕಾರಣದಿಂದ ಮಾನಸಿಕ ಕ್ಷೋಭೆ, ಖಿನ್ನತೆಗೆ ಒಳಗಾಗಿ, ಮಾದಕದ್ರವ್ಯ ಇತ್ಯಾದಿಗಳ ಗೀಳಿಗೆ ಬಿದ್ದ ಪರಿಣಾಮ ಸ್ವತಂತ್ರವಾಗಿ ಜೀವನ ನಡೆಸುವ, ಸ್ವಂತ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬ ಹಣೆಪಟ್ಟಿಯನ್ನು ಕೋರ್ಟ್‌ನಿಂದ ಹಚ್ಚಿಸಿಕೊಂಡ
ಪರಿಣಾಮವಾಗಿ ತಂದೆಯೂ ಇರುವ ಒಂದು ಟ್ರಸ್ಟ್‌ನ ನಿಗಾದಲ್ಲಿ ಇರುವಂತಾಗಿದೆ. ‘ಕನ್ಸರ್ವೇಟರ್‌ಶಿಪ್’ಗೆ ಒಳಗಾಗಿದ್ದಾಳೆ. ಅಂದಹಾಗೆ ಏನಿದು ಕನ್ಸರ್ವೇಟರ್‌ಶಿಪ್ ? ನಮ್ಮಲ್ಲಿ ಇದು ಹೆಚ್ಚು ಚಾಲ್ತಿಯಲ್ಲಿಲ್ಲದ ಕಾರಣ ಹೊಸದು, ವಿಚಿತ್ರ ಎನಿಸುತ್ತದೆ. ಆದರೆ ಅಮೆರಿಕದಲ್ಲಿ ಇಂಥದೊಂದು ಕಾನೂನು ಜಾರಿಯಲ್ಲಿದೆ.
ಅದರ ವ್ಯಾಖ್ಯೆ ಹೀಗಿದೆ: ವ್ಯಕ್ತಿಗೆ ವಯಸ್ಸಾಗಿದ್ದರೆ, ಇಲ್ಲವೆ ಮಾನಸಿಕ/ ದೈಹಿಕ ಇತಿಮಿತಿಗಳ ಕಾರಣ ಆತ ಅಥವಾ ಆಕೆಯ ಆರ್ಥಿಕ
ಮತ್ತಿತರ ವ್ಯವಹಾರಗಳನ್ನು ನೋಡಿಕೊಳ್ಳಲು ಪೋಷಕ ಅಥವಾ ಸಂರಕ್ಷಕರನ್ನು ನ್ಯಾಯಾಲಯ ನೇಮಿಸುವುದು. ಕಳೆದ 12 ವರ್ಷ ಗಳಿಂದ ಬ್ರಿಟ್ನಿ ಸ್ಪಿಯರ್ಸ್ ಕೂಡ ಇದೇ ರೀತಿಯ ಬದುಕನ್ನು ದೂಡುತ್ತಿದ್ದಾಳೆ. ಅಂದರೆ ಬೇಕಾದಷ್ಟು ಆಸ್ತಿ ಇದೆ. ಆದರೆ ಅದನ್ನು ತನಗೆ ಬೇಕಾದ ಹಾಗೆ ಖರ್ಚು ಮಾಡುವಂತಿಲ್ಲ. ಹೇಗೆ ಬೇಕೊ ಹಾಗೆ ಸ್ವತಂತ್ರವಾಗಿ ಇರುವಂತಿಲ್ಲ. ಎಲ್ಲದಕ್ಕೂ ತಂದೆ ಹಾಗೂ ಇತರರು ಇರುವ
ಟ್ರಸ್ಟ್‌ನ ಅಡಿಯಾಳಾಗಿ, ಎಲ್ಲದಕ್ಕೂ ಅವರ ಅನುಮತಿ ಕೇಳುವಂಥ ದೈನೇಸಿ ಬಾಳು ಸಾಗಿಸುತ್ತಿದ್ದಾಳೆ.
ಇಷ್ಟಕ್ಕೂ ಆಕೆಯ ಜೀವನ ಈ ಸ್ಥಿತಿಗೆ ತಲುಪಿದ್ದು ಏಕೆ ಮತ್ತು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಇದೆಲ್ಲ ಹೇಗಾಯಿತು ಎಂಬುದನ್ನು ತಿಳಿದು ಕೊಳ್ಳಬೇಕೆಂದರೆ ಬ್ರಿಟ್ನಿ ಸ್ಪಿಯರ್ಸ್ ಜೀವನದ ಕಥೆ ಕೇಳಬೇಕಾಗುತ್ತದೆ. ಅದನ್ನು ಕೇಳುತ್ತ ಹೋದಂತೆ ಅದೇ ಒಂದು ಆಲ್ಬಂ ಆಗಬಹು ದೇನೊ. ಬ್ರಿಟ್ನಿ ಜಿನ್ ಸ್ಪಿಯರ್ಸ್ ಹುಟ್ಟಿದ್ದು 1981ರ ಡಿಸೆಂಬರ್ 2ರಂದು ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿ. ತಂದೆ ಜೇಮ್ಸ್
ಸ್ಪಿಯರ್ಸ್. ತಾಯಿಯ ಹೆಸರು ಲಿನ್ ಯರೀನ್ ಬ್ರಿಜಿಸ್.
ಆಕೆಗೆ ಬ್ರಯಾನ್ ಜೇಮ್ಸ್ ಎಂಬೊಬ್ಬ ಸೋದರ. ಜೇಮಿ ಲಿನ್ ಸ್ಪಿಯರ್ಸ್ ಎಂಬ ತಂಗಿ. ಚಿಕ್ಕಂದಿನಿಂದಲೇ ಬ್ರಿಟ್ನಿಗೆ ಹಾಡುವುದು, ಡಾನ್ಸ್ ಮಾಡುವುದು ಎಂದರೆ ಇಷ್ಟ. ಪೋಷಕರು ಕೂಡ ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ. ತರಬೇತಿ, ಶಿಕ್ಷಣ ಕೊಡಿಸುತ್ತಾರೆ. ಆ ವಯಸ್ಸಿನಲ್ಲೇ
ಪ್ರದರ್ಶನ ನೀಡಿ ಸಾಕಷ್ಟು ಪ್ರಶಂಸೆ, ಪ್ರಶಸ್ತಿ ಗಳಿಸುತ್ತಾಳೆ. ಎಂಟು ವರ್ಷದವಳಿದ್ದಾಗ ಆಕೆಯನ್ನು ತಾಯಿ ಅಟ್ಲಾಂಟಾಗೆ ಆಡಿಷನ್‌ಗೆ ಕರೆದೊಯ್ಯುತ್ತಾಳೆ. ಅಲ್ಲಿ ಈಕೆ ತೀರ ಚಿಕ್ಕವಳು ಎಂದು ಕಂಪನಿಯೊಂದು ತಿರಸ್ಕರಿಸಿತು.
ಬಾಲಕಲಾವಿದರಿಗೆ ಅವಕಾಶವಿರುವ ಮತ್ತೊಂದು ಕಂಪನಿಯ ಪರಿಚಯ ನೀಡುತ್ತಾರೆ. ತಾಯಿ ಮಗಳಿಬ್ಬರೂ ಅನಂತರ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಹಾಡುವ ಅವಕಾಶ ಸಿಗುತ್ತದೆ. ಆದರೆ ನಿಗದಿಯಾಗಿದ್ದ ಕಾರ್ಯಕ್ರಮವೊಂದು ರದ್ದಾದ ಕಾರಣ ತವರಿಗೆ
ಮರಳಬೇಕಾಗುತ್ತದೆ. ಅಲ್ಲಿ ಕೆಲವು ಪಾಪ್ ಗ್ರೂಪ್ ಜತೆ ಕೆಲಸ ಮಾಡುತ್ತಾಳೆ. ಒಂದಷ್ಟು ಹಾಡುಗಳಿಗೆ ಧ್ವನಿಯಾಗುತ್ತಾಳೆ. ಆ ರೆಕಾರ್ಡ್ ಗಳನ್ನು ತೆಗದುಕೊಂಡು ಮತ್ತೆ ನ್ಯೂಯಾರ್ಕ್ ಗೆ ಹೋಗಿ ಕೊಟ್ಟು ಬರುತ್ತಾಳೆ. ‘ನೀನೇನು ಮಡೊನ್ನಾನಾ ಅಥವಾ ವಿಟ್ನಿ ಹ್ಯೂಸ್ಟನ್ನಾ’ ಎಂದು ಮೂದಲಿಸುತ್ತಾರೆ.
ಹೀಗೆ ನಿರಾಶಳಾಗಿರುವಾಗ ಆ ಪೈಕಿ ಒಬ್ಬ, ‘ಈಕೆಯ ದನಿ ಅಪರೂಪದ್ದಾಗಿದೆ, ಏನೋ ವಿಶೇಷವಿದೆ ಎಂದು ಹೇಳಿ ಅವಕಾಶ ನೀಡುವು ದರೊಂದಿಗೆ ಬ್ರೇಕ್ ಸಿಗುತ್ತದೆ. ಇದಾದ ಬಳಿಕ ಸತತವಾಗಿ ಅವಕಾಶಗಳು ಬರುತ್ತವೆ. 1999ರಲ್ಲಿ ‘ಬೇಬಿ ಒನ್ ಮೋರ್ ಟೈಮ್’ ಎಂಬ ಆಲ್ಬಮ್ ಬಿಡುಗಡೆ ಆಗಿ ಸಾಕಷ್ಟು ಜನಪ್ರಿಯ ಮತ್ತು ಹಿಟ್ ಆಗುತ್ತದೆ. ಇದಾದ ಬಳಿಕ ಹಿಂತಿರುಗಿ ನೋಡುವುದಿಲ್ಲ. ಒಂದಾದ ಮೇಲೊಂದ ರಂತೆ ಆಲ್ಬಮ್, ಸಂಗೀತ ಕಾರ್ಯಕ್ರಮಗಳ ಟೂರ್ ಸಾಗುತ್ತದೆ. ಗ್ರ್ಯಾಮಿ ಪ್ರಶಸ್ತಿ, ಗಿನ್ನಿಸ್ ರೆಕಾರ್ಡ್ ಎಲ್ಲ ಒಲಿದು ಬರುತ್ತವೆ. ಪಾಪ್ ಕ್ವೀನ್ ಎನಿಸಿಕೊಳ್ಳುತ್ತಾಳೆ.
ಅದರಲ್ಲೂ ಹದಿಹರೆಯದವರ ಪಾಪ್ ದೇವತೆ ಎನಿಸುತ್ತಾಳೆ. ಬಿಡುವಿಲ್ಲದ, ಬೇಡಿಕೆಯ ಗಾಯಕಿ ಮತ್ತು ನರ್ತಕಿಯಾಗಿ ಹೊರ ಹೊಮ್ಮು ತ್ತಾಳೆ. ಇಷ್ಟೊತ್ತಿಗೆ, ಅಂದರೆ 2002ರ ವೇಳೆಗೆ ಬ್ರಿಟ್ನಿಯ ಜನಪ್ರಿಯತೆ ಉತ್ತುಂಗಕ್ಕೇರಿತು. ಕ್ರಮೇಣ ಹಣ, ಹೆಸರಿನ ಮದ ತಲೆಗೇರಿದ ಹಾಗಾಯಿತು. ಕೆಲವು ಅತಿರೇಕದ, ಹುಚ್ಚಾಟದ ವರ್ತನೆಗಳು ಮೊದಲಾದವು. ನ್ಯೂಯಾರ್ಕ್’ನಲ್ಲಿ ರೆಸ್ಟುರಾವನ್ನು ತೆರೆದಳಾದರೂ ಪಾಲುದಾರರ ಜತೆ ಕಿರಿಕ್ ಮಾಡಿಕೊಂಡು ಬಿಟ್ಟುಬಿಟ್ಟಳು.
ಜಸ್ಟಿನ್ ಟಿಂಬರ್ ಲೇಕ್ ಎಂಬುವನ ಜತೆ ಸಂಬಂಧ ಬೆಳೆಯಿತಾದರೂ ಮೂರು ವರ್ಷಗಳಲ್ಲೇ ಅದು ಮುರಿದುಬಿತ್ತು. ಮಡೊನ್ನಾ
ಜತೆ ಸೇರಿ ನಡೆಸಿದ ಕಾರ್ಯಕ್ರಮ ಅಪಾರ ಜನಪ್ರಿಯತೆ ಗಳಿಸಿತು. ಹಾಡುಗಳ ಸಿಲ್‌ಸಿಲಾ ಕೂಡ ಜಾರಿ ಯಲ್ಲಿತ್ತಾದರೂ ಪಾಪ್ ಗೀತೆ ಗಿಂತ ಆಕೆಯ ಪ್ರೇಮಗೀತೆ ಹೆಚ್ಚಾಗತೊಡಗಿತು. ಈ ನಡುವೆ 2004ರಲ್ಲಿ ಬಾಲ್ಯದ ಗೆಳೆಯ ಜೇಸನ್ ಅಲೆಕ್ಸಾಂಡರ್ ಎಂಬಾತನ
ಕೈಹಿಡಿದಳಾದರೂ ಅದು ಕಾನೂನು ತೊಡಕಿನಿಂದಾಗಿ ಮುಂದುವರಿಯಲಿಲ್ಲ. 2004ರಲ್ಲಿ ಡಾನ್ಸರ್ ಕೆವಿನ್ ಫೆಡರ್ಲಿನ್ ಜತೆ ನಿಶ್ಚಿತಾರ್ಥ ವಾಗುತ್ತದೆ. ಅನಂತರ ಮದುವೆಯೂ ಆಗುತ್ತದೆ. ಗಂಡು ಮಗುವಾಗುತ್ತದೆ.
ಮರುವರ್ಷ ಮತ್ತೊಂದು ಮಗು ಜನಿಸುತ್ತದೆ. ಹೀಗೆ ಜೀವನ ಒಂದು ಹಂತಕ್ಕೆ ಸ್ಥಿರಗೊಳ್ಳುವ ಲಕ್ಷಣ ಗೋಚರಿಸಿತು. ಆದರೆ ತಮ್ಮ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣ ನೀಡಿ 2007ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಾರೆ.
ಇಲ್ಲಿಂದಲೇ ಆಕೆಯ ಜೀವನ ಕವಲು ದಾರಿ ಹಿಡಿಯುತ್ತದೆ. ಮದುವೆ ಏನೊ ಮುರಿದುಬಿದ್ದಿತು. ಆದರೆ ಮಕ್ಕಳ ಗತಿ ಏನು ಎಂಬ ಪ್ರಶ್ನೆ ಎದುರಾಯಿತು. ತನ್ನ ವಶಕ್ಕೆ ಮಕ್ಕಳು ಬೇಕು ಎಂದು ಬ್ರಿಟ್ನಿ ಹಠ ಹಿಡಿಯುತ್ತಾಳಾದರೂ ನ್ಯಾಯಾಲಯ ಒಪ್ಪದೆ ಜಂಟಿ ವಶದಲ್ಲಿರಲಿ ಎಂದು ತೀರ್ಪು ನೀಡುತ್ತದೆ. ಮಕ್ಕಳನ್ನು ತುಂಬಾ ಹಚ್ಚಿಕೊಂಡಿದ್ದ ಬ್ರಿಟ್ನಿಗೆ ಇದರಿಂದ ಆಘಾತವಾಗುತ್ತದೆ.
ಮಾನಸಿಕ ಸ್ತಿಮಿತ ಕಳೆದುಕೊಳ್ಳತೊಡಗುತ್ತಾಳೆ. ಮಕ್ಕಳು ತನ್ನ ವಶಕ್ಕೆ ಬಂದಾಗ, ಅವಽ ಮುಗಿದರೂ ವಾಪಸು ಕೊಡುವುದಿಲ್ಲ. ಆತನ
ಮನೆಗೆ ಹೋದಾಗ ಮಗುವನ್ನು ಎತ್ತಿಕೊಂಡು ಶೌಚಾಲಯದಲ್ಲಿ ಅಡಗಿ ಕುಳಿತುಕೊಳ್ಳುವುದು; ಸಮಯ ಮೀರಿದರೂ ಬಿಟ್ಟು ಕೊಡದೇ ಇರುವುದು ಮೊದಲಾದ ಅತಿರೇಕದ ವರ್ತನೆ ತೋರುತ್ತಾಳೆ. ಆಗೆಲ್ಲ ಪೊಲೀಸರನ್ನು ಕರೆಸಲಾಗುತ್ತದೆ. ಮಾನಸಿಕ ಕ್ಷೋಭೆಗೊಳಗಾಗಿ ಮಾದಕವಸ್ತುವಿನ ದಾಸಳಾಗುತ್ತಾಳೆ. ಆಗಾಗ ಪುನರ್ವಸತಿ ಕೇಂದ್ರಕ್ಕೆ ಸೇರಬೇಕಾಗುತ್ತದೆ.
ಒಮ್ಮೆಯಂತೂ ಪುನರ್ವಸತಿ ಕೇಂದ್ರದಿಂದ ಒಂದು ದಿನದಲ್ಲೇ ದಿನವೇ ಓಡಿ ಬರುತ್ತಾಳೆ. ಅಷ್ಟು ಸಾಲದೆಂಬಂತೆ ತನ್ನ ತಲೆಯನ್ನು ಬೋಳಿಸಿಕೊಂಡು ವಿಕ್ಷಿಪ್ತವಾಗಿ ವರ್ತಿಸುತ್ತಾಳೆ. ಬೆಂಬಿಡದ ಛಾಯಾಗ್ರಾಹಕನ ಕಾರಿಗೆ ಗುದ್ದಿ ಹಾನಿಮಾಡುತ್ತಾಳೆ. ಇದೇ ವೇಳೆಗೆ ಸಂಗೀತ ಕಂಪನಿಯೊಂದು ಯಾವುದೋ ಕಾರಣಕ್ಕೆ ಮೊಕದ್ದಮೆ ದಾಖಲಿಸುತ್ತದೆ. ೨೦೦೮ರಲ್ಲಿ ಇದು ಅತಿರೇಕಕ್ಕೆ ಹೋಗುತ್ತದೆ.
ಮಕ್ಕಳನ್ನು ಪತಿಯ ಪ್ರತಿನಿಧಿಗಳ ವಶಕ್ಕೆ ಒಪ್ಪಿಸಲು ಬ್ರಿಟ್ನಿ ನಿರಾಕರಿಸಿ ರಂಪಾಟ ಮಾಡುತ್ತಾಳೆ. ಮತ್ತೆ ಪೊಲೀಸರು ಬಂದು ಮಕ್ಕಳನ್ನು ಬಲವಂತವಾಗಿ ವಶಕ್ಕೆ ಪಡೆಯುತ್ತಾರೆ.
ಇದರಿಂದ ಮತ್ತಷ್ಟು ಕುಗ್ಗಿಹೋದ ಆಕೆ ಮಾದಕವಸ್ತುವನ್ನು ಅತಿಯಾಗಿ ಸೇವಿಸಿದ ಪರಿಣಾಮ ಆಸ್ಪತ್ರೆ ಸೇರಬೇಕಾಗುತ್ತದೆ. ಇದು ಪದೇ ಪದೆ ಪುನರಾವರ್ತನೆ ಆಗುತ್ತಿರುತ್ತದೆ. ಇದರ ನಡುವೆ ಕೆವಿನ್ ಜತೆ ವಿಚ್ಛೇದನ ಆಗುತ್ತಿದ್ದಂತೆ ಆಸ್ತಿ ಹಂಚಿಕೆಯ ವಿಷಯ ಮುನ್ನೆಲೆಗೆ ಬರುತ್ತದೆ. ಬಹುಪಾಲು ಆಸ್ತಿ ಕೆವಿನ್‌ಗೆ ಹೋಗಿಬಿಟ್ಟರೆ ಏನು ಗತಿ ಎಂಬ ಚಿಂತೆ ಆಕೆಯ ಅಪ್ಪ ಜೇಮ್ಸ್‌ಗೆ. ಹೀಗಾಗಿ ಕೋರ್ಟ್ ಮೆಟ್ಟಿಲೇರು ತ್ತಿದ್ದಂತೆ ಬ್ರಿಟ್ನಿಗೆ ಬಹು ದೊಡ್ಡ ಆಘಾತ ಕಾದಿರುತ್ತದೆ. ಆಕೆಯನ್ನು ತಂದೆ ಜೇಮ್ಸ್‌ನ ಪೋಷಣೆ, ಅಂದರೆ ಕನ್ಸರ್ವೇಟರ್‌ಶಿಪ್‌ಗೆ ಕೋರ್ಟ್ ಒಳಪಡಿಸುತ್ತದೆ.
ತಂದೆ ಸೇರಿದಂತೆ ಒಂದು ಟ್ರಸ್ಟ್, ಬ್ರಿಟ್ನಿಯ ಆಸ್ತಿ ಮತ್ತಿತರ ವ್ಯವಹಾರಗಳನ್ನು ನೋಡಿಕೊಳ್ಳಬೇಕೆಂದು ತೀರ್ಪು ನೀಡುತ್ತದೆ. ಇದು 2008ರ ಕಥೆ. ಅಲ್ಲಿಂದ ಈ ವರೆಗೆ ಬ್ರಿಟ್ನಿಗೆ ಸ್ವಾತಂತ್ರ್ಯ ಇಲ್ಲವಾಗಿದೆ. ಇದರ ನಡುವೆಯೂ ಕಾರ್ಯಕ್ರಮ ನೀಡುವುದು, ಹೊಸ ಆಲ್ಬಮ್ ಇತ್ಯಾದಿ ಕಾರ್ಯಗಳು ನಡೆದೇ ಇದ್ದವು. ಅದರ ಜತೆಗೆ ಮಾನಸಿಕ ಕ್ಷೋಭೆ, ಖಿನ್ನತೆ ಇತ್ಯಾದಿ. ನಡುನಡುವೆಯೇ ಸ್ಯಾಮ್ ಅಸ್ಘರ್ ಎಂಬ ಸಂಗಾತಿ ಆಕೆಗೆ ಸಿಕ್ಕಿದ್ದು ಈಗಲೂ ಮುಂದುವರಿದಿದೆ.
ಈಗಿನ ಸಮಸ್ಯೆ ಏನೆಂದರೆ 2008ರಲ್ಲಾದ ಘಟನೆಗಳನ್ನು ಆಧರಿಸಿ ಬ್ರಿಟ್ನಿಯನ್ನು ಒಂದರ್ಥದಲ್ಲಿ ದಿಗ್ಬಂಧನಕ್ಕೆ ಒಳಪಡಿಸಿದ್ದು ಹೌದಾದರೂ ಎಷ್ಟು ದಿನ ಹೀಗೆಯೇ ಮುಂದುವರಿಯುವುದು? ಈಗಾಗಲೇ ೧೨ ವರ್ಷ ಮುಗಿಯಿತು. ಎಲ್ಲದಕ್ಕೂ ತಂದೆಯನ್ನು, ಟ್ರಸ್ಟ್‌ನ್ನು
ಅವಲಂಬಿಸಬೇಕು. ಹಾಡುವುದು, ಕುಣಿಯುವುದು ಬ್ರಿಟ್ನಿಯಾದರೂ ಆಕೆಯ ಜೀವನವನ್ನು ಕುಣಿಸುವವರು ಮತ್ಯಾರೋ. ಎಳ್ಳಷ್ಟೂ ಸ್ವಾತಂತ್ರ್ಯ ಇಲ್ಲದ ಇದೆಂಥ ಬಾಳು? ಇದೇ ಪ್ರಶ್ನೆಯನ್ನು ಬ್ರಿಟ್ನಿಯೂ ಕೇಳುತ್ತಿದ್ದಾಳೆ, ಆಕೆಯ ಅಭಿಮಾನಿಗಳೂ ಪ್ರಶ್ನಿಸುತ್ತಿದ್ದಾರೆ. ಆಕೆಯ ಈ ಸ್ವಾತಂತ್ರ್ಯಕ್ಕಾಗಿ ಅಭಿಯಾನವನ್ನೂ ಆರಂಭಿಸಿದ್ದಾರೆ.
ಇದರ ಮಧ್ಯೆ ಬ್ರಿಟ್ನಿಯ ತಾಯಿ ಕೂಡ ಈ ಹೋರಾಟದಲ್ಲಿ ಸೇರಿಕೊಂಡಿದ್ದಾಳೆ. ಅಸಲು ಸಂಗತಿ ಏನೆಂದರೆ ಬ್ರಿಟ್ನಿಯ ತಂದೆ ತಾಯಿ 2002ರಿಂದಲೇ ಪ್ರತ್ಯೇಕವಾಗಿದ್ದಾರೆ. ಅಂದರೆ ವಿಚ್ಛೇದನ ಪಡೆದಿದ್ದಾರೆ. ಆದರೆ ತಂದೆ ಮಾತ್ರ ಬ್ರಿಟ್ನಿಯ ಆಸ್ತಿ, ಪೋಷಣೆ ಇತ್ಯಾದಿ
ಹೊಣೆ ಹೊರಲು ಹುನ್ನಾರ ನಡೆಸಿ ಯಶಸ್ವಿಯೂ ಆಗಿದ್ದಾರೆ. ಆ ತಂದೆ ಎಂಥ ಕಿಲಾಡಿ ಎಂದರೆ ಆಗಾಗ ನಡೆಯುವ ಈ ಕಾನೂನು ಹೋರಾಟಕ್ಕೆ ಬೇಕಾಗುವ ಖರ್ಚು ವೆಚ್ಚವನ್ನು ಬ್ರಿಟ್ನಿಯ ಆಸ್ತಿಯಿಂದಲೇ ಪಡೆಯುತ್ತಿದ್ದಾನೆ.
ಇದೆಂಥದ್ದು ಎಂಬುದು ಬ್ರಿಟ್ನಿ ಪರ ವಕೀಲರ ವಾದ. ಜತೆಗೆ ತನ್ನ ಹಣವನ್ನು ಕೂಡ ತಾನು ಖರ್ಚು ಮಾಡುವ ಅಧಿಕಾರವಿಲ್ಲದ ದೈನೇಸಿ ಸ್ಥಿತಿಗೆ ತಲುಪಿ ಹತಾಶಳಾಗಿದ್ದಾಳೆ. ಆದರೂ ‘ಸಾಕು ತನಗಿನ್ನು ಈ ಪೋಷಕತ್ವ’ ಎಂದು ಪದೇ ಪದೆ ಕೋರ್ಟ್ ಮೊರೆ ಹೋಗಿದ್ದರೂ ಅಲ್ಲಿ ಅದೇಕೊ ಇವಳ ವಾದಕ್ಕೆ ಮನ್ನಣೆ ದೊರೆಯುತ್ತಿಲ್ಲ. ಬಹಿರಂಗ ವಿಚಾರಣೆ ನಡೆಸಿ; ನನ್ನ ಮಾತು, ಅಳಲನ್ನೂ ಕೇಳಿ ಎಂದು ಅಂಗಲಾಚು ತ್ತಿದ್ದಾಳೆ.
ಮುಖ್ಯವಾಗಿ ತನ್ನಿಬ್ಬರು ಮಕ್ಕಳು ತನ್ನ ಬಳಿ ಇಲ್ಲವಲ್ಲ ಎಂಬ ನೋವು ಆತಿಯಾಗಿ ಕಾಡುತ್ತಿದೆ. ಹೋಗಲಿ ಇನ್ನೊಂದು ಮಗುವನ್ನು ಮಾಡಿಕೊಳ್ಳೋಣ ಎಂದರೆ ಅದಕ್ಕೂ ಈ ಪೋಷಕರು ಕಲ್ಲು ಹಾಕಿದ್ದಾರೆ, ಮಕ್ಕಳಾಗದಂತೆ ಮಾಡಿದ್ದಾರಂತೆ. ಇದು ಬ್ರಿಟ್ನಿ ಸ್ಪಿಯರ್ಸ್‌ಳ ನೋವಿನ ಬದುಕಿನ ಕಥೆ. ಸೀತೆಯ 14 ವರ್ಷಗಳ ವನವಾಸದ ಕಥೆಯಂತೆ ಭಾಸವಾಗುತ್ತಿದೆ. ಮೊದಲ ಬಾರಿಗೆ ಆಡಿಶನ್‌ಗೆ ಹೋದಾಗ, ‘ನೀನೇನು ಮಡೊನ್ನಾನಾ, ವಿಟ್ನಿ ಹ್ಯೂಸ್ಟನ್ನಾ’ ಎಂಬ ಮೂದಲಿಕೆ ಕೇಳಿದ ಬಳಿಕ ಅವರ ಎತ್ತರಕ್ಕೆ ಏರಿದಳು. ಆದರೆ ಅವರಿಬ್ಬರ ಬದುಕು ಅಂತ ತಂಟೆ ತಕರಾರಿಲ್ಲದೆ ನಡೆಯುತ್ತಿದ್ದರೂ ಇದೇ ಮಾತನ್ನು ಬ್ರಿಟ್ನಿ ವಿಚಾರದಲ್ಲಿ ಹೇಳುವಂತಿಲ್ಲ. ಈಕೆಯ ಬಾಳ ಹಾದಿಯ ತುಂಬೆಲ್ಲ ಬರಿ ಕಲ್ಲು ಮುಳ್ಳುಗಳೇ.
ಬಹುಶಃ ಇದಕ್ಕೆಲ್ಲ ಕಾರಣ ಆಕೆ ಕೈಗೊಂಡ ಆತುರದ, ಎಡವಟ್ಟಿನ ನಿರ್ಧಾರ ಕಾರಣವಾಗಿರಬಹುದು. ಹಾಗೆಯೇ ತಂದೆ ತಾಯಿಯಾದರೂ ಒಟ್ಟಾಗಿದ್ದಿದ್ದರೆ ಅವರ ಆಸರೆಯಾದರೂ ಸಿಗುತ್ತಿತ್ತೋ ಏನೊ. ಆದರೆ ಈಗ ಗಂಡ – ಮಕ್ಕಳು, ತಂದೆ ತಾಯಿಯಿಂದ ದೂರವಾಗಿ ಮನಶಾಂತಿ, ನೆಮ್ಮದಿಯೂ ಇಲ್ಲದೆ, ಕೊನೆಗೆ ಸ್ವಂತ ನಿರ್ಧಾರ ಕೈಗೊಳ್ಳುವ ಹಕ್ಕು, ಅಽಕಾರವೂ ಇಲ್ಲದೆ ಬಂಧನದ ಬಾಳು ಬಾಳುತ್ತಿರುವುದು ಬ್ರಿಟ್ನಿ ಸ್ಪಿಯರ್ಸ್‌ಳ ದುರದೃಷ್ಟ. ಇದು ಸ್ವಯಂಕೃತಾ ಪರಾಧವೋ, ವಿಧಿ ಲಿಖಿತವೋ, ದುರದೃಷ್ಟವೋ ಗೊತ್ತಿಲ್ಲ.
ಅಂತೂ ಇಂಥ ಒಬ್ಬ ಅದ್ಭುತ ಕಲಾವಿದೆಯ ಬದುಕು ಇಂಥದೊಂದು ತೊಳಲಾಟ, ಗೋಳಾಟಕ್ಕೆ ಸಿಲುಕಿರುವುದೇ ದುರ್ದೈವ.
ನಾಡಿಶಾಸ್ತ್ರ
ಪಾಪ್ ಗಾಯಕಿಯ ಸ್ಥಿತಿ ಈಗ ಪಾಪ
ರೆಕ್ಕೆಮುರಿದ ಈ ಹಾಡುಹಕ್ಕಿಯದು ಪ್ರಲಾಪ
ಗಂಟಲು ಕಟ್ಟಿದೆ, ನೋವು ಮಡುಗಟ್ಟಿದೆ
ಪೋಷಣೆ ಹೆಸರಲ್ಲಿ ನಡೆದಿದೆ ದೂಷಣೆ
ಕೊನೆ ಇಲ್ಲದಾಗಿದೆ ಇವಳಿಗೆ ಶೋಷಣೆ