ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
ಮುಖ್ಯಮಂತ್ರಿ ಬದಲಾವಣೆಯ ಮಾತು ತಾರಕ್ಕಕ್ಕೇರಿ ಬಾಯಿಗೆ ಬಂದಹಾಗೆ ಪರ ವಿರೋಧ ಮತ್ತು ಬಂಡಾಯದ ಮಾತುಗಳು ಸಾರ್ವಜನಿಕವಾಗಿ ಹುಟ್ಟಿ ಕೊಂಡು ಅಪಹಾಸ್ಯಕ್ಕೂ, ಕ್ಲೀಷೆಗೂ, ಜೋಕಿಗೂ, ದ್ವೇಷಕ್ಕೂ, ಸೇಡಿಗೂ ಚರ್ಚೆಗೂ ಕಾರಣವಾಗಿದ್ದವು.
ಇವೆಲ್ಲವೂ ತಳಮಟ್ಟದಿಂದ ಪಕ್ಷವನ್ನು ಹೆಗಲ ಮೇಲೆ ಹೊತ್ತು ಬೆಳೆಸಿದ ಯಡಿಯೂರಪ್ಪರನ್ನು ಸಾರ್ವಜನಿಕ ವಾಗಿ ಮುಜುಗರಕ್ಕೆ ಒಳಪಡಿಸಿತ್ತು!ಯಡಿಯೂರಪ್ಪ ರನ್ನು ಶತಾಯ ಗತಾಯ ಇಳಿಸಿಯೇ ಸಿದ್ಧ ಎಂದು ಪ್ರತಿಜ್ಞೆ ಮಾಡಿದವರಂತೆ ಬಾಯಿಗೆ ಬಂದಹಾಗೆ ಮನಸೋ ಇಚ್ಛೆ ಮಾತಾಡಿದರು. ಪರಿಣಾಮವೆಂಬಂತೆ ಯಡಿಯೂರಪ್ಪ ತಾವಾಗಿಯೇ ರಾಜೀನಾಮೆ ಕೊಟ್ಟರು. ಆನಂದಬಾಷ್ಪವೋ ಕಂಬನಿಯೋ ಅಂತೂ ಸಂತೋಷದಿಂದ ಅವರು ಪದತ್ಯಾಗ ಮಾಡಲಿಲ್ಲ ಎಂಬುದು ಸ್ಪಷ್ಟ. ಅವರು ಇಳಿದ ಕುರ್ಚಿಯನ್ನು ಬೊಮ್ಮಾಯಿ ಏರಿದರು.
ಲಿಂಗಾಯಿತನೊಬ್ಬನ ಬದಲಿಗೆ ಇನ್ನೊಬ್ಬ ಲಿಂಗಾಯಿತನೇ ಏರುವ ಮೂಲಕ ಎಷ್ಟೇ ಆದರ್ಶದ ಮಾತಾಡಿ ದರೂ ಜಾತಿ ಸಮುದಾಯಗಳ ಮಿತಿಯನ್ನು ಮೀರಲು ಸಾಧ್ಯವಿಲ್ಲವೆಂಬುದನ್ನು ಬಿಜೆಪಿಯೂ ಒಪ್ಪಿಕೊಂಡು ಪ್ರದರ್ಶಿಸಿಕೊಂಡಿತು. ಉಳಿದವರಲ್ಲಿ ಮುನ್ನಿನವರೇ ಮಂತ್ರಿಮಾಗಧರೆ? ಇಲ್ಲ, ಬದಲಾವಣೆ ಅಲ್ಲೂ ಆಯಿತು! ಸಂಘ ಪರಿವಾರಕ್ಕೆ ನಿಷ್ಠರಾದವರಿಗೆ ಮಣೆ ಹಾಕಲಾಯಿತು. ಯಡಿಯೂರಪ್ಪರ ಬೆಂಬಲಿಗರಿಗೂ ಮಂತ್ರಿ ಪದವಿ ಸಿಕ್ಕಿದೆ. ಕೆಲವರು ತಮ್ಮ ತಮ್ಮ ಕೋಣೆಗೆ ಮರಳಿದ್ದಾರೆ. ಖಾಲಿಯಾದ ಕೋಣೆಗೆ ಮೊದಲ ಬಾರಿಗೆ ಅನನುಭವಿ ಹೊಸಬರು ಪ್ರವೇಶ ಮಾಡಿದ್ದಾರೆ.
ಬೇರೆ ಬೇರೆ ಪಕ್ಷಗಳ ಸರಕಾರವಿದ್ದಾಗ ದುಡಿಯುತ್ತಿರುವ ಅಧಿಕಾರಿಗಳ ನಿಷ್ಠೆಯೀಗ ಸನ್ನಿಧಿಯನ್ನು ಬದಲಾಯಿಸಲೇಬೇಕು. ಅವರಲ್ಲೂ ಈಗಾಗಲೇ ಕೆಲವರು ಸ್ಥಾನ ಕಳೆದುಕೊಂಡರು. ಅಲ್ಲಿಯೂ ಹೊಸ ಮುಖಗಳ ಪ್ರವೇಶವಾಯಿತು. ಒಟ್ಟಾರೆ ಪರಿವರ್ತನೆ ಜಗದ ನಿಯಮ ಎಂಬ ಮಾತೂ ಉಳಿದ ಕ್ಷೇತ್ರಗಳಿಗೆ ಹೇಗೆ ಅನ್ವಯಿಸುತ್ತೋ ಏನೋ ಗೊತ್ತಿಲ್ಲ, ರಾಜಕಾರಣಕ್ಕೆ ಮಾತ್ರ ಅಪ್ಪಟ ಅನ್ವಯಿಸುತ್ತದೆ. ಅನ್ವಯಿಸುತ್ತಲೇ ಇರುತ್ತದೆ. ಈ ಸಚಿವ ಸಂಪುಟದಲ್ಲಿ ನಾಲ್ಕೈದು ಬಾರಿ ಗೆದ್ದವರು ಮಂತ್ರಿಯಾಗಲಿಲ್ಲ.
ಒಂದೆರಡು ಬಾರಿ ಗೆದ್ದವರು ಮಂತ್ರಿಯಾಗಿದ್ದಾರೆ ಎಂಬುದೇ ಅಚ್ಚರಿ, ಸಿಟ್ಟು ಮತ್ತು ಬೇಸರದ ವಿಚಾರವಾಗಿದೆ. ಇರಲಿ, ಅವೆಲ್ಲ ಪಕ್ಷದ ತೀರ್ಮಾನವೆಂದು ಬಿಟ್ಟು ಬಿಡೋಣ. ಯಡಿಯೂರಪ್ಪರ ಪರ ಬ್ಯಾಟಿಂಗ್ ಮಾಡಿದ ಮಠಾಧೀಶರುಗಳಿಗೆ ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಲಾಗಲಿಲ್ಲ ಎಂಬುದನ್ನು ಹೊರತು ಪಡಿಸಿದರೆ ತಮ್ಮ ಸಮುದಾಯದವರೇ ಮುಖ್ಯಮಂತ್ರಿ ಆದದ್ದು ಒಂದು ಬಗೆಯಲ್ಲಿ ಆತ್ಮತೃಪ್ತಿಯನ್ನು ಉಂಟು ಮಾಡಿತೆನ್ನಬಹುದು. ಹೇಗಾದರೂ ತೀರ್ಮಾನವಾಗಲಿ ನಮಗೇ ಇರಲಿ ಎಂಬ ವಾದದಂತೆ ಹಠ ಮಾಡಿ ಲಿಂಗಾಯತನನ್ನೇ ಮುಖ್ಯಮಂತ್ರಿಯಾಗಿ ಪಡೆದ ಸಂತಸ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಆಯಿತು. ಅಷ್ಟರಮಟ್ಟಿಗೆ ಅವರು ಬಿಜೆಪಿ ಹೈಕಮಾಂಡಿಗೆ ಕೃತಜ್ಞತೆ ಸಲ್ಲಿಸಲೇಬೇಕು.
ಮಾತ್ರವಲ್ಲದೆ, ಹಿಂದುತ್ವವನ್ನು ಹಿಂದಿಕ್ಕಿ ವೀರಶೈವ ಲಿಂಗಾಯತ ಮತವೇ ಮುನ್ನೆಲೆಗೆ ಬಂತು ಎಂಬುದನ್ನೂ ಗಮನಿಸಬೇಕು! ಆದರೆ ಆತ್ಯಂತ ಸತ್ಯವೇ ನೆಂದರೆ, ಯಡಿಯೂರಪ್ಪರ ರಾಜಕೀಯ ಜೀವನ ನೇಪಥ್ಯಕ್ಕೆ ಸರಿದದ್ದು! ಇದು ಸಹಜವೇ ಹೌದಾದರೂ, ಅವರ ಪೀಠತ್ಯಾಗ ಮಾತ್ರ ಅಸಹಜ ದುರಂತವೇ ಕಂಡಿದ್ದು! ಯಡಿಯೂರಪ್ಪ ಈ ಬಗೆಯಲ್ಲಿ ನೇಪಥ್ಯಕ್ಕೆ ಸರಿಯುವಂತಾದುದು ಬಿಜೆಪಿಯ ಘನತೆಗೆ ತಕ್ಕುದಾಗಿ ಕಾಣಲಿಲ್ಲ ಎಂದೆನಿಸುತ್ತದೆ! ಆಫ್ ಕೋರ್ಸ್ ಬಿಜೆಪಿಯಲ್ಲಿ ಈಗಾಗಲೇ ಅಡ್ವಾಣಿ, ಜೋಶಿಯಂಥ ಮುಖಂಡರು, ಮುತ್ಸದ್ದಿಗಳು ನೇಪಥ್ಯಕ್ಕೆ ಸರಿದವರೇ ಆಗಿದ್ದಾರೆ. ಅವರ ಸಾಲಿಗೆ ಈಗ ಯಡಿಯೂರಪ್ಪ
ಅಷ್ಟೆ! ರಾಜ್ಯಪಾಲರಾಗಿಯೋ ಅಥವಾ ಇನ್ಯಾವುದೇ ರೀತಿಯಲ್ಲಿ ಅವರು ಗೌರವ ಸ್ಥಾನಮಾನವನ್ನು ಪಡೆದರೂ ಅದು ಮುಖ್ಯವಾಗಲಾರದು. ಕೊನೆಗೂ, ಏರಿದವ
ಇಳಿಯಲೇಬೇಕು ಎಂಬ ಲೋಕನ್ಯಾಯಕ್ಕೆ ಯಡಿಯೂರಪ್ಪ ಹೊರತಾಗಲೇ ಇಲ್ಲ.
ರಾಜ್ಯ ಬಿಜೆಪಿಯ ಚರಿತ್ರೆಯಲ್ಲಿ ಯಡಿಯೂರಪ್ಪನವರ ಅಸ್ಮಿತೆಯನ್ನೂ ಇನ್ನೊಬ್ಬರಿಗೆ ಹೋಲಿಕೆ ಮಾಡಲು ಬಿಜೆಪಿಯಲ್ಲೇ ನಿಜವಾಗಿ ಯಾರಿಗೂ ಸಾಧ್ಯವಿಲ್ಲ. ತಳಮಟ್ಟದಿಂದಲೇ ಬಿಜೆಪಿಯನ್ನು ಬೆಳೆಸುತ್ತ ಬಂದವರು ಯಡಿಯೂರಪ್ಪ ನವರು. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಅಷ್ಟೊಂದು ದೊಡ್ಡಮಟ್ಟದ ಹೆಸರಿಲ್ಲದ ಸಂದರ್ಭ ದಲ್ಲೂ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪನವರು ಬೆಳೆಸಲು ಅವಿರತ ಶ್ರಮಿಸಿದವರು. ಪದತ್ಯಾಗದ ಸಂದರ್ಭದಲ್ಲಿ ಅದನ್ನು ಅವರೇ ಹೇಳಿಕೊಂಡಿದ್ದಾರೆ. ಬಿಜೆಪಿಯೇ ಪಡೆಯಬಹುದು ಎನ್ನುವ ಹೊತ್ತಲ್ಲೂ, ಆದರೆ ಬಹುಮತವನ್ನು ಪಡೆಯಲಾರದೇ ಹೋದ ಸಂದರ್ಭದಲ್ಲೂ ಯಡಿಯೂರಪ್ಪ ಕ್ಷಣಿಕ ಹೊಂದಾಣಿಕೆಯನ್ನು ಸಾಧಿಸಿಕೊಂಡ ತಂತ್ರಗಾರಿಕೆಯನ್ನು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರವನ್ನು ರಚಿಸಿದ್ದಾರೆ.
ತೆನೆಹೊತ್ತ ಮಹಿಳೆಯ ಮಕ್ಕಳು ಕೈಕೊಟ್ಟರೂ ಯಡಿಯೂರಪ್ಪ ಮತ್ತೆ ಗೆದ್ದು ಬಂದರು. ಈ ಮೈತ್ರಿಯ ಸರಕಾರ ಎಂಬ ಪರಿಕಲ್ಪನೆ ಕೇಂದ್ರದ ಬಳುವಳಿ. ಹಾಗಂತ
ರಾಜ್ಯಗಳಲ್ಲೂ ಇದು ಇದ್ದದ್ದೇ! ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಕ್ಷವೊಂದರ ಅಸ್ತಿತ್ವ ಮತ್ತು ಅಽಕಾರಕ್ಕೇರುವ ಮಾರ್ಗವೇ ಇದಾಗಿರುವುದರಿಂದ ಯಡಿ ಯೂರಪ್ಪರ ಈ ಕ್ರಮ ತಪ್ಪು ಎಂದೆನಿಸದು, ಅದೂ ಎಡಚರರ ಹೇಳುವ ಬಹುತ್ವದ ಭಾರತದಲ್ಲಿ ಈ ಕ್ರಮ ದೊಡ್ದದೆಂದೆನಿಸದು. ಬಹುಮತದ ಸಮೀಪಕ್ಕೆ ಬಂದು ಸರಕಾರ ರಚನೆಗೆ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಹೊರಗಿನ ಬಲವನ್ನು ಮೈತ್ರಿ ರೂಪದಲ್ಲಿ ಪಡೆಯುವುದಕ್ಕೆ ಮತ್ತು ಅರಾಜಕತೆಯನ್ನು ನೀಗಿಸಿಕೊಳ್ಳುವ ಹಾಗೂ ಬಹುಕಾಲದ ರಾಜಕಾರಣದಲ್ಲಿ ತಾನು ಗೆಲ್ಲಲೇಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವುದರಿಂದ ಯಡಿಯೂರಪ್ಪ ತುಳಿದ ಹಾದಿ ಪ್ರಶ್ನಾರ್ಹವಾಗಿ ಉಳಿದರೂ ರಾಜಕೀಯದಲ್ಲಿ ಯಾರೂ ತುಳಿಯದ ಹಾದಿಯಂತೂ ಅಲ್ಲವೇ ಅಲ್ಲ.
ಹಾಗೆ ಅವರು ತುಳಿದ ಕ್ರಮದಲ್ಲಿ ಪಕ್ಷವು ಅಧಿಕಾರವನ್ನು ಅನುಭವಿಸಿದೆ. ಯಡಿಯೂರಪ್ಪ ಭ್ರಷ್ಟಾಚಾರಿಯಲ್ಲವೆ? ಹೌದು, ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಇದ್ದವರೇ. ಜೈಲಿಗೂ ಹೋಗಿ ಬಂದವರೇ! ಆದರೆ, ಯಾರೂ ನಿಷ್ಪಾಪಿಯಾಗಿ ರಾಜಕಾರಣ ಮಾಡಲಾರರು. ಭ್ರಷ್ಟಾಚಾರ ಯಾವ ರಾಜಕಾರಣಿಯನ್ನು ಬಿಟ್ಟಿದೆ ಅಥವಾ ಯಾವ ರಾಜಕಾರಣಿ ಭ್ರಷ್ಟಾಚಾರವನ್ನು ಬಿಟ್ಟು ರಾಜಕಾರಣ ಮಾಡಬಲ್ಲ? ನೋ ವೇ. ಸಾಧ್ಯವೇ ಇಲ್ಲ. ಒಬ್ಬ ರಾಜಕಾರಣಿ ಭ್ರಷ್ಟನಾಗುವುದು, ಅವನನ್ನು ಭ್ರಷ್ಟನನ್ನಾಗಿಸುವುದು ಜನತೆಯೇ ಹೊರತು ಬೇರೆ ಯಾರೂ ಅಲ್ಲ of course ಭ್ರಷ್ಟಾಚಾರ ಮಾಡಿದವರೆಲ್ಲ ಮಾಡಿದ ಭ್ರಷ್ಟಾಚಾರ ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ ಎಂದ ಮಾತ್ರಕ್ಕೆ ಅಥವಾ ಸಾಬೀತಾಗಿಯೂ ಜೈಲಿಗೆ ಹೋಗಲಿಲ್ಲ ಎಂದ ಮಾತ್ರಕ್ಕೆ ಸರಿಹೊತ್ತಿನ ರಾಜಕಾರಣದಲ್ಲಿ ಎಲ್ಲರೂ ಸುಭಗರಲ್ಲ.
ವ್ಯವಸ್ಥೆಯ ತುದಿಯಿಂದ ಬುಡದವರೆಗೆ ಹತ್ತು ಹಲವು ಬಗೆಯಲ್ಲಿ ಭ್ರಷ್ಟಾಚಾರ ಮಾಡುವವರನ್ನು ಹೊಂದಿರುವ ಈ ಕಾಲದಲ್ಲಿ ಒಬ್ಬ ಯಡಿಯೂರಪ್ಪರನ್ನು ಮಾತ್ರ ಬೊಟ್ಟು ಮಾಡುವುದು ಉಳಿದ ಭ್ರಷ್ಟಾಚಾರಿಗಳಿಗೆ ಸಮ್ಮಾನ ಮಾಡಿದಂತೆ! ಕಪಟ, ವಂಚನೆ, ಚತುರೋಪಾಯ, ದಂಡನೆ, ಮಿಥ್ಯೆ, ಭೇದನೀತಿ ಎಲ್ಲವೂ ಇಂದಿನ ರಾಜಕಾರಣದಲ್ಲಿ ಸಹಜವೇ. ಆದರೆ ಈ ಸರಿಹೊತ್ತಿನ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪರನ್ನು ಪದವಿಯಿಂದ ಇಳಿಸುವಲ್ಲಿ ಬಿಜೆಪಿಯ ಹೈಕಮಾಂಡ್ ಅವಸರಕ್ಕೆ ಬಿತ್ತೇ ಎನಿಸುತ್ತದೆ! ಇಂಥ ಸಂದರ್ಭದಲ್ಲಿ ಅವರನ್ನು ಇಳಿಸುವ ಅಗತ್ಯವಿತ್ತೇ? ಇನ್ನೊಂದೂವರೆ ವರ್ಷ ಅವರೇ ಇರಬಹುದಿತ್ತಲ್ಲ? ಒಂದೆಡೆ,
ಕೋವಿಡ್ ಹುಟ್ಟಿಸಿದ ಅತಂತ್ರ ಪರಿಸ್ಥಿತಿ, ಇನ್ನೊಂದೆಡೆ ವಿಪರೀತ ಮಳೆಯಿಂದಾದ ಅನಾಹುತ, ಕುಸಿದ ಆರ್ಥಿಕತೆ, ಈಗಷ್ಟೇ ಹಳಿಗೆ ಬರುತ್ತಿದ್ದ ಜನರ ಬದುಕು- ಇವುಗಳ ಮಧ್ಯೆ ಮುಖ್ಯಮಂತ್ರಿಯನ್ನು ಇಳಿಸುವ ಪ್ರಶ್ನೆಯೇ ಅನಗತ್ಯವೆನಿಸುತ್ತದೆ ಈಗಲೂ.
ಯಾಕೆಂದರೆ, ಯಡಿಯೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಎಂದರೆ ಯಡಿಯೂರಪ್ಪ ಎಂಬಷ್ಟರ ಮಟ್ಟಿಗೆ ಸ್ವಪ್ರಭೆಯನ್ನು ಹೊಂದಿದ ರಾಜ್ಯ ಬಿಜೆಪಿಯೆಂಬ ಮನೆಯನ್ನು ಕಟ್ಟಿ ಬೆಳೆಸಿದ ಯಜಮಾನನನ್ನು ಹೀಗೆ ಇಳಿಸಿದ್ದು ಪಕ್ಷಕ್ಕೆ ಶೋಭೆಯಾಗಲಿಲ್ಲ. ಅವರನ್ನಿಳಿಸಿದ ಪರಿಣಾಮಕ್ಕಿಂತ (ಅಂಥಾ ಪರಿಣಾಮವೇನೂ ಆಗಲಿಕ್ಕಿಲ್ಲ ಎಂದು ಭಾವಿಸುವುದು ಬಿಜೆಪಿಯಂಥ ರಾಷ್ಟ್ರೀಯ ಪಕ್ಷಕ್ಕೆ ಸಾರ್ವಕಾಲಿಕವಾಗಿ ಆರೋಗ್ಯಯುತವಲ್ಲ. ಆದರೆ, ಜನತೆ ಎಲ್ಲವನ್ನೂ ಬೇಗ ಮರೆತುಬಿಡುತ್ತದೆ ಎಂಬುದಂತೂ ಸತ್ಯವೇ ಆಗಿದೆ) ಹೆಚ್ಚಾಗಿ ಇಳಿಸಿದ ಒಟ್ಟೂ ಪ್ರಕ್ರಿಯೆಯೇ ಸಭ್ಯವಾಗಿ ತೋರಲಿಲ್ಲ.
ಇಳಿಸುವುದೇ ಆದರೂ ಅದಕ್ಕೊಂದು ರೀತಿ ನೀತಿ ಇತ್ತಲ್ಲವೇ? ಅದೂ ಭಾರತೀಯ ಪರಂಪರೆ-ಸಂಸ್ಕೃತಿ-ಸಭ್ಯತೆ-ಸಜ್ಜನಿಕೆಯನ್ನು ಹಾಸುಂಡುಕೊಂಡಿರುವ ಬಿಜೆಪಿಯಂಥ ಪಕ್ಷಕ್ಕೆ ಅದು ಗೊತ್ತಾಗಲಿಲ್ಲವೆ? ಇದನ್ನು ಯಡಿಯೂರಪ್ಪರ ದುರ್ವಿಧಿಯೆನ್ನದೆ ವಿಽಯಿಲ್ಲ! ಪಕ್ಷದ ನಿಯಮವನ್ನು ಮೀರಿಯೂ ಎರಡು ವರ್ಷ
ಮುಖ್ಯಮಂತ್ರಿಯಾದ ಯಡಿಯೂರಪ್ಪರಿಗೆ ಅವಧಿ ಪೂರ್ಣಗೊಳಿಸಲು ಬಿಟ್ಟಿದ್ದರೆ ಅಂಥಾದ್ದೇನೂ ಆಗುತ್ತಿರಲಿಲ್ಲವೆಂಬುದು ಹೈಕಮಾಂಡಿಗೆ ಅರ್ಥವಾಗದ ಸಂಗತಿಯೇನಲ್ಲ!
ಅಷ್ಟಕ್ಕೂ ಇದೊಂದು ಗಹನವಾದ ವಿಚಾರವೇ ಈ ಸರಿಹೊತ್ತಲ್ಲಿ ಆಗಬಾರದಿತ್ತು ಬಿಜೆಪಿ ಹೈಕಮಾಂಡಿಗೆ! ಬಿಜೆಪಿಯ ಹೈಕಮಾಂಡ್ ಎಡವಿತೆನ್ನಲು ಮುಖ್ಯ
ಕಾರಣವೇ ಅದು ಈಗೀಗ ತನ್ನಲ್ಲಿ ರೂಢಿಸಿಕೊಂಡ ಕಾಂಗ್ರೆಸ್‌ನಲ್ಲಿ ಮೊದಲಿಂದಲೂ ಇದ್ದ ಹೈಕಮಾಂಡ್ ಸಂಸ್ಕೃತಿ! ಉತ್ತರ ಭಾರತದಲ್ಲಿ ಬಿಜೆಪಿ ಎಷ್ಟೇ ಪ್ರಾಬಲ್ಯವನ್ನೂ ಹೊಂದಿದ್ದರೂ ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಹೊಂದಲು ಸಾಧ್ಯವಾಗದೇ ಇದ್ದಂಥ ದಿನಮಾನಗಳಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ
ಪಕ್ಷವನ್ನು ಅಽಕಾರಕ್ಕೆ ತಂದವರು. ಕಳೆದ ಮೂರು ಮೂರೂವರೆ ವರ್ಷಗಳಲ್ಲಿ ದೇಶಭಕ್ತಿಗಿಂತಲೂ ಹೆಚ್ಚಾಗಿ ಪಕ್ಷಭಕ್ತಿಯನ್ನು ಮೆರೆದ ಯಡಿಯೂರಪ್ಪನವರಲ್ಲಿ
ಮೊದಲಿದ್ದ ರಾಜಕಾರಣದ ಪ್ರಖರ ಮತ್ತು ಪ್ರಬಲ ಇಚ್ಛಾಶಕ್ತಿಯಿಲ್ಲವೆಂದು ಪೂರ್ತಿಯಾಗಿ ಹೇಳಲು ಸಾಧ್ಯವಿಲ್ಲ.
ಆದರೂ ಇರುವ ಅವಧಿಗಾದರೂ ಮುಂದುವರೆಸಿದ್ದರೆ ಆಕಾಶವೇನೂ ಹರಿದು ಬೀಳುತ್ತಿರಲಿಲ್ಲ. ಯಾಕೆಂದರೆ ಗದ್ದುಗೆಯೇರಲು ಬಿಜೆಪಿಗೆ ಸಾಧ್ಯವಾಗಿದ್ದು ಯಡಿಯೂರಪ್ಪ ಹೂಡಿದ ತಂತ್ರ ಮತ್ತು ಸಾಹಸದಿಂದಲೇ! ಯಡಿಯೂರಪ್ಪ ಹಾಗೆ ಮಾಡಿಲ್ಲದೆ ಹೋಗಿದ್ದರೆ ಬಿಜೆಪಿಗೆ ಅಧಿಕಾರ ಅನುಭವಿಸಲು ಸದ್ಯದ ಮಟ್ಟಿಗಂತೂ ಸಾಧ್ಯವೇ ಇರಲಿಲ್ಲ. ಯಡಿಯೂರಪ್ಪ ಮಾಡಿದ ಸಾಧನೆ ಸಾಹಸ ತಂತ್ರಗಳೆಲ್ಲವೂ ರಾಜಕಾರಣದ ಶಾಶ್ವತ ಮೌಲ್ಯಗಳಲ್ಲವೆಂದರೂ ಯಾರೂ
ಅನುಸರಿಸದ ಮಾರ್ಗವೇನೂ ಅಲ್ಲ! ಅಪವಿತ್ರ ಮೈತ್ರಿಯೆಂಬುದು ರಾಜಕಾರಣದಲ್ಲಿ ಆಸಹಜವೇನಲ್ಲ.
plitics makes strange bed fellows ರಾಜಕೀಯದ ಹಾಸಿಗೆಯಲ್ಲಿ ವಿಚಿತ್ರರು ಸಂಘ ಸ್ನೇಹಿತರಾಗುತ್ತಾರೆಂದರ್ಥ. ಹಾಗಂತ ಈ ಎರಡು ವರ್ಷಗಳಲ್ಲಿ ಯಡಿಯೂರಪ್ಪ ಕೋವಿಡ್ ನೊಂದಿಗೆ ಹೆಣಗಾಡಿದ್ದೇ ಬಂತು ಬಿಟ್ಟರೆ ಅಧಿಕಾರ ಪ್ರಾಪ್ತಿಯ ಸುಖ ಅನುಭವಿಸುವುದರಲ್ಲಿ ಸಿಗಲಿಲ್ಲವೇನೋ!
ಸಂಸಾರಿಯಾದವನು ಸನ್ಯಾಸಿಯಾಗಿ ಬದುಕಲು ಸಾಧ್ಯವಿಲ್ಲ. ಯಡಿಯೂರಪ್ಪರನ್ನು ಕುರಿತಾದ ಅಸಮಾಧಾನದಲ್ಲಿ ಅವರ ಕುಟುಂಬದವರು ನಡೆಸಿದರೆನ್ನಲಾದ ಅಕ್ರಮಗಳ ಬಗ್ಗೆಯೇ ಇರುವಂಥದ್ದು. ಅದೂ ಅವರ ಪಕ್ಷದವರೇ ಹುಯಿಲಿಡುತ್ತಿರುವುದು. ಯಡಿಯೂರಪ್ಪ ಭ್ರಷ್ಟಾಚಾರವನ್ನು ಮಾಡಿಲ್ಲ ಎಂಬ ಪ್ರಶ್ನೆಯೇ ಹುಟ್ಟಲಾರದು.
ಹಗರಣಗಳೇ ಅಮರಿಕೊಂಡು ಜೈಲಿಗೂ ಹೋಗಿ ಬಂದವರು ಅವರು. ಈ ದೇಶಕ್ಕೆ ಭ್ರಷ್ಟಾಚಾರ ತಪ್ಪೆನಿಸುವುದಿಲ್ಲ. ಆದರೆ ತಿನ್ನುವಾಗ ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬುದರಲ್ಲಿ ಯಡಿಯೂರಪ್ಪ ಎಡವಿದರೇನೋ! ಈ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿದ್ದರೆ ಅವರು ಹೈಕಮಾಂಡಿನ ಕಣ್ಣಿಗೆ
ಗುರಿಯಾಗುತ್ತಿರಲಿಲ್ಲ. ಪರಿಣಾಮವಾಗಿ, ಚರಿತ್ರೆಯ ಹಲವು ನಾಯಕರು ಅನುಭವಿಸಿದ ಏಕಾಂಗಿತನವನ್ನು ಈ ಇಳಿ ವಯಸ್ಸಲ್ಲಿ ಹೇಳಿಕೊಳ್ಳಲು ತನಗೆ ಸಮತೂಕದ ಯಾರೂ ಇಲ್ಲದೆ ಏಕಾಂಗಿಯಾದರು. ಕರ್ನಾಟಕದ ರಾಜಕಾರಣದಲ್ಲೇ ದುರಂತ ನಾಯಕನೆಂಬ ಕೀರ್ತಿಗೆ ಭಾಜನರಾದರೇ? ಅವರ ರಾಜಕೀಯ ಬದುಕು ಈ ಬಗೆಯಲ್ಲೂ ವರ್ಣಮಯವಾಯಿತು!
ಕೊನೆಯ ಮಾತು: ಎಲ್ಲ ಪಕ್ಷದಲ್ಲೂ ಹೈ ಕಮಾಂಡಿದೆ, ಹೈ ಡಿಮಾಂಡಿದೆ. ಸರ್ವಾಽಕಾರವಿದೆ. ವಂಶಪಾರಂಪರ್ಯವಿದೆ. ಸ್ವಜನ ಪಕ್ಷಪಾತವಿದೆ. ಅಧಿಕಾರದಲ್ಲಿ ದ್ದಾಗ ಯಡಿಯೂರಪ್ಪ ನವರೂ ಹೀಗೆಯೇ ಕ್ರಮಿಸಿದವರು ಎಂಬುದನ್ನು ಅಲ್ಲಗಳೆಯಲಾಗದು. ಸ್ವಯಂ ಶಕ್ತಿಯಿಂದ ಬಿಜೆಪಿಯ ಇಮೇಜನ್ನು ಹೆಚ್ಚಿಸಿಕೊಂಡ ಯಡಿಯೂರಪ್ಪನವರ ಒಪ್ಪಿಗೆಯಿಲ್ಲದೆ ಯಾವ ನಾಯಕನೂ ಯಡಿಯೂರಪ್ಪನವರ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಒಂದು ಸತ್ಯವಂತೂ ಅರಿವಾಗಿದೆ: ಹೊರಪ್ರಪಂಚಕ್ಕೆ ಯಾರೇನೇ ಆದರ್ಶವನ್ನು ಅಭಿವ್ಯಕ್ತಿಸಿದರೂ ಕೊನೆಗೂ ಉಳಿಯುವುದು ಜಾತಿ ಲೆಕ್ಕಾಚಾರವೇ! ಮತ್ತು ಅದನ್ನು ಬಿಟ್ಟು ರಾಜಕೀಯ ಮಾಡಲು ಯಾರಿಗೂ ಸಾಧ್ಯವೇ ಇಲ್ಲವೆಂಬುದು!
ಆಂತರ್ಯದಲ್ಲಿ ಅನಿಸಿದ ಒಂದು ಮಾತನ್ನು ಹೇಳಿಬಿಡುತ್ತೇನೆ: ರೈತರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ರೈತರ ಋಣ ತೀರಿಸಲು ನಿಜವಾಗಿ
ಪ್ರಯತ್ನಿಸಿ ನಿಜಾರ್ಥದಲ್ಲಿ ಮಣ್ಣಿನ ಮಗನೆನಿಸಿದರು. ಯಾವ ಕಟ್ಟುಪಾಡಿಗೂ ಬಗ್ಗದ ಯಾವ ನಿಯಮಕ್ಕೂ ಜಗ್ಗದ ಆನೆ ನಡೆದದ್ದೇ ದಾರಿ ಎಂಬ ಸ್ವಭಾವದ ಯಡಿಯೂರಪ್ಪ ತಮ್ಮಷ್ಟಕ್ಕೆ ಬೆಳೆದಿದ್ದರೆ ಉದಾರ ಹಿಂದೂವಾಗಬಹುದಿತ್ತು!