Sunday, 15th December 2024

ಛೇ.. ಬಿಡ್ತು ಅನ್ನಿ, ಯಡಿಯೂರಪ್ಪ ಅಂಥವರಲ್ಲ !

ಹಂಪಿ ಎಕ್ಸ್‌ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡೆರಡು ಕರೋನಾ ಕಂಟಕ- ಸಂಕಟವನ್ನು ದಾಟಿ ನಾಡಿನ ಜನತೆಯ ಜತೆ ಸರಕಾರವೂ ಅನೇಕ ಗಂಡಾಂತರವನ್ನು ಎದುರಿಸಿ ಇನ್ನೇನು ಸಹಜವಾದ ಆಡಳಿತದ ಹಳಿಯ ಮೇಲೆ ಬರಲಾರಂಭಿಸಿ ಯಡಿಯೂರಪ್ಪನವರೇ ಮುಂದುವರೆದು ಅವರ ಸಾರಥ್ಯದಲ್ಲೇ ಮುಂದಿನ ಚುನಾವಣೆಗೆ ಸಿದ್ಧವಾಗುತ್ತದೆ ಎಂದು ಭಾವಿಸಲಾಗಿತ್ತು. ಅದೇನು ಆಂತರಿಕ ಕಾರಣವಿತ್ತೋ ಮತ್ತು ಅದಕ್ಕೆ ಪೂರಕವಾಗಿ ಸಿ.ಪಿ.ಯೋಗೀಶ್ವರ್, ಬಸವನಗೌಡ ಪಾಟೀಲ್ ಯತ್ನಾಳ್ ಯತ್ನಗಳು ಅಪಶಕುನದಂತೆ ಗೋಚರಿಸುತ್ತಿದ್ದಾಗಲೇ ಕೇಂದ್ರ ಬಿಜೆಪಿ ವರಿಷ್ಠರು ಯಡಿಯೂರಪ್ಪನವರ ರಾಜೀನಾಮೆಯನ್ನು ಪಡೆದರು.

ಜತೆಗೆ ಯಡಿಯೂರಪ್ಪನವರ ಆಶಯದಂತೆಯೇ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯಾಗಿಸಿ ದರು. ಇದರಿಂದ ಅರ್ಧದಷ್ಟು ಸಮಾಧಾನ ಗೊಂಡು ಸರಕಾರದ ಜತೆಜತೆಗೇ ಸಾಗೋಣವೆಂದು ತೀರ್ಮಾನಿಸಿ ದ್ದರೂ ಕೂಡ. ಆದರೆ ಬೊಮ್ಮಾಯಿಯವರು ತೋರಿದ ನಡೆಯೊಂದು ಯಡಿಯೂರಪ್ಪನವರ ನಿರೀಕ್ಷೆ ಭರವಸೆಗಳಿಗೆ ಪೆಟ್ಟು ಬಿದ್ದಂತ್ತಾಯಿತು. ವೀರಶೈವ ಸಮುದಾಯದವರೇ ಆದ ಬೊಮ್ಮಾಯಿ ಯವರು ಮುಖ್ಯಮಂತ್ರಿಯಾದ ಕೂಡಲೇ ತಮ್ಮ ಮೊದಲ ಸ್ವಾಮಿನಿಷ್ಠೆಯನ್ನು ಯಡಿಯೂರಪ್ಪನವರಿಗೇ ತೋರಿದ ರಾದರೂ, ವೀರಶೈವ ಸಮುದಾಯದ ಮಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆಯಬೇಕಿದ್ದ ಬೊಮ್ಮಾಯಿಯವರು ದೆಹಲಿಯಿಂ ದ ಕರ್ನಾಟಕಕ್ಕೆ ಕಾಲಿಟ್ಟ ಕೂಡಲೇ ಆಶೀರ್ವಾದ ಪಡೆದದ್ದು ಮಾಜಿ ಪ್ರಧಾನಿ ದೇವೇಗೌಡರದ್ದು.

ಇದೇ ನೋಡಿ ಯಡಿಯೂರಪ್ಪನವರೆಗೆ ಚಿಂತೆಗೀಡು ಮಾಡಿದ್ದು. ಅಲ್ಲಿಂದಲೇ ಒಂದು ನಿರಾಸೆ, ಚದುರಿದ ಭರವಸೆ ಮೊಳಕೆಯೊಡೆದದ್ದು. ಕರ್ನಾಟಕದಲ್ಲಿ ಈಗ ಎಂಥ ಸ್ಥಿತಿ ಇದೆಯೆಂದರೆ ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದು ರೀತಿ ‘ಸ್ಟೆಪ್ನಿ’ಯಾಗಿ ಇಟ್ಟುಕೊಳ್ಳವಂಥ ಅನುಕೂಲ ಸಿಂಧು ಪಕ್ಷವಾಗಿ ಕೂತಿದೆ. ಹೀಗಿರುವಾಗ ಯಡಿಯೂರಪ್ಪನವರ ಭವಿಷ್ಯದ ಭರವಸೆಯಾಗ ಬಹುದಾಗಿದ್ದ ದೇವೇಗೌಡರ ಬಳಿ ತಮ್ಮ ಶಿಷ್ಯ ಬೊಮ್ಮಾಯಿಯವರೇ ಮೊದಲು ಹೋಗಿ ಸಾಷ್ಟಾಂಗ ಎರೆಗಿದಾಗ ಯಡಿಯೂರಪ್ಪನವರಿಗೆ ಒಂದು ತಪ್ಪು ಸಂದೇಶ ರವಾನೆಯಾಯಿತು.

ಇನ್ನೊಂದೆಡೆ ಯಡಿಯೂರಪ್ಪನವರ ಪರವಾಗಿ ಅಖಿಲ ಕರ್ನಾಟಕ ವೀರಶೈವ-ಲಿಂಗಾಯತ ಸಮುದಾಯದ ನೂರಾರು ಸ್ವಾಮೀಜಿಗಳು ಎದ್ದು ನಿಂತರಲ್ಲಾ,
ಆಗಲೇ ಕೇಂದ್ರ ಬಿಜೆಪಿಗೆ ಯಡಿಯೂರಪ್ಪನವರ ದೈತ್ಯಶಕ್ತಿ ಮತ್ತು ಮುಂದಿನ ನಡೆ ಹೇಗಿರಬಹುದೆಂಬ ಚಿತ್ರಣ ಭ್ರೂಣದಂತೆ ಕಾಣಲಾರಂಭಿಸಿತು. ಕಾರಣ
ಸ್ಪಷ್ಟ. ಹಿಂದೆ ಯಡಿಯೂರಪ್ಪನವರು ಕೆಜೆಪಿಯನ್ನು ಕಟ್ಟಿ ಬಿಜೆಪಿಯ ವಿರುದ್ಧ ನಿಂತು, ಕೊನೆಗೆ ಬಿಜೆಪಿಗೆ ಬಂದರೂ ಅವರು ಒಂದು ರೀತಿಯಲ್ಲಿ ಹೊಸಿಲು
ಮಟ್ಟಿದ ಹೆಣ್ಣಿನಂತೆ ಆಗಿದ್ದರು. ಹೀಗಾಗಿ ಯಡಿಯೂರಪ್ಪನವರ ಮುಂದಿನ ನಡೆಯನ್ನು ಗುಮಾನಿಯಿಂದಲೇ ಗಮನಿಸುತ್ತಾ ಬಂದ ಬಿಜೆಪಿಗೆ ದಾವಣಗೆರೆ
ಯಲ್ಲಿ ನಡೆದ ಕಾರ್ಯಕಾರಣಿಲ್ಲಿ ಯಡಿಯೂರಪ್ಪನ ವರು ಮಾಡಿದ ಭಾಷಣ ಆಶ್ಚರ್ಯ ಮೂಡಿಸಿತ್ತು.

ಹೀಗಾಗಿ ಯಡಿಯೂರಪ್ಪನವರು ಮತ್ತೊಂದು ಕೆಜೆಪಿ ೨ ಪ್ರಯತ್ನಕ್ಕೆ ಇಳಿಯಬಹುದಾ ಎಂದು ಬಿಜೆಪಿ ವರಿಷ್ಠರು ಕವಡೆ ಹಾಕಿ ನೋಡಿದಾಗ ಅದರ ಸಾಧ್ಯತೆ ಗಳನ್ನು ತಳ್ಳಿಹಾಕಲಾಗದಂಥ ಅಂಶಗಳು ಕಂಡುಬಂದವು. ಹೀಗಾಗಿ ‘ಅಡ್ವಾನ್ಸ್ ಬುಕಿಂಗ್’ ಎಂಬಂತೆ ಕೇಂದ್ರ ಬಿಜೆಪಿ ಬೊಮ್ಮಾಯಿಯವರನ್ನು ದೇವೇಗೌಡರ ಮನೆಗೆ ಕಳುಹಿಸಿ ಆಶೀರ್ವಾದ ಪಡೆಯುವುದರ ಮೂಲಕ ಕಾದಿರಿಸಲಾಯಿತು. ಜತೆಗೆ ದೇವೇಗೌಡರ ಕೃಪಾಕಟಾಕ್ಷ ಬಿಜೆಪಿ ಮೇಲಿದ್ದರೆ ಯಡಿಯೂರಪ್ಪನವರನ್ನು ಎದುರಿಸಲು ಅನುಕೂಲ ವಾಗುತ್ತದೆಂಬ ದೂರದೃಷ್ಠಿಯೂ ಇದಾಗಿತ್ತು.

ಇನ್ನೊಂದು ಕೋನದಲ್ಲಿ ಯಡಿಯೂರಪ್ಪನವರು ಜೆಡಿಎಸ್‌ನಿಂದಾದ ಕಿರುಕುಳಗಳಿಂದಾಗಿ ಅಪ್ಪಮಕ್ಕಳ ಪಕ್ಷ ಎಂದು ವಿರೋಧಿಸುತ್ತಿರುವಾಗ ಏಕಾಏಕಿ ಬೊಮ್ಮಾಯಿಯವರು ದೇವೇಗೌಡರ ಕಾಲಿಗೆರಗಿ ಬಂದಿದ್ದೂ ಒಂದು ರೀತಿಯಲ್ಲಿ ಸಿಟ್ಟು ಮತ್ತೊಂದು ರೀತಿ ಜೆಡಿಎಸ್ ‘ಅಡ್ವಾನ್ಸ್ ಬುಕಿಂಗ್’ ಆಗುತ್ತಿದೆಯಲ್ಲಾ ಎಂಬ ನಿರಾಸೆಯನ್ನೂ ಸೃಷ್ಠಿಸಿತ್ತು.

ಈಗ ಆಗಿರುವುದೇನೆಂದರೆ, ಮೊದಲಿಗೆ ಯಡಿಯೂರಪ್ಪನವರ ರಾಜೀನಾಮೆಯ ಪರಿಹಾರ ಸೂತ್ರವಾಗಿ ವಿಜಯೇಂದ್ರರಿಗೆ ಸರಕಾರದಲ್ಲಿ ಮಂತ್ರಿ ಗಿರಿಯನ್ನು ನೀಡುವುದು ಮತ್ತು ತಮ್ಮ ಹಾಗೂ ತಮ್ಮ ಆಪ್ತರ ಬಾಕಿ ಉಳಿದಿರುವ ಮುಂದುವರೆಯುವ ಅನೇಕ ‘ಕಮಿಟ್‌ಮೆಂಟ್’ ಗಳಿಗೆ ಸಲೀಸಾಗಿ ಸಹಕರಿಸುವುದೂ ಇದರ ಭಾಗವಾಗಿ ಅಪೇಕ್ಷಿಸಲಾಗಿತ್ತು. ಆದರೆ ಇಂದಿನ ಜಾತಿಪ್ರೇರಿತ, ಕುಟುಂಬ ಆಧರಿತ ಮತ್ತು ಭ್ರಷ್ಟ ಪ್ರಚೋದಿತ ರಾಜಕೀಯವನ್ನು ಹತ್ತಿಕ್ಕುವ ಕೇಂದ್ರ ಬಿಜೆಪಿ ಸಿದ್ಧಾಂತಕ್ಕೆ ಯಡಿಯೂರಪ್ಪನವರ ಆಶಯಗಳು ಒಂದಕ್ಕೊಂದು ‘ಮ್ಯಾಚ್’ ಆಗದಿದ್ದ ಕಾರಣ, ಅಂಥ ಅಡ್ವಾಣಿಯವರಿಗೇ ಕೊಡದ ರಿಯಾಯಿತಿಗಳನ್ನು ಇನ್ನಿತರರಿಗೆ ಕೊಡುವುದು ಅಸಾಧ್ಯ ವಾದಾಗಲೇ ಯಡಿಯೂರಪ್ಪನವರ ಕನಸು ಗಳು ಭಗ್ನ ಗೊಳ್ಳುತ್ತಾ ಹೋದವು.

ಇದಲ್ಲದರ ಬೆಳವಣಿ ಗೆಗಳಿಂದ ಇತ್ತೀಚೆಗೆ ವರದಿಯಾಗಿರುವಂತೆ ಯಡಿಯೂರಪ್ಪನವರು ಮತ್ತೊಮ್ಮೆ ಕೆಜೆಪಿ ಯೋಜನೆಯನ್ನು ರೂಪಿಸುತ್ತಿದ್ದು ಈ ಬಾರಿ ಸಿದ್ದರಾಮಯ್ಯನವರೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವಂಥ ಸುದ್ದಿ ನಿಜಕ್ಕೂ ಆಘಾತಕಾರಿ. ಪ್ರಸ್ತುತ ಯಡಿಯೂರಪ್ಪನವರು ಎಂಥ ದಾರಿ
ಹಿಡಿದರೂ ಅದಕ್ಕೆ ಮಹಾಬಲವಾಗಿ ಅಖಿಲ ಕರ್ನಾಟಕ ವೀರಶೈವ- ಲಿಂಗಾಯಿತ ಸಮುದಾಯದ ಸ್ವಾಮೀಜಿಗಳ ದಿವ್ಯಾಶೀರ್ವಾದವೂ ಸಹಜವಾಗಿ ಇದ್ದೇ
ಇರುತ್ತದೆ. ಬದಲಾದ ಇಂದಿನ ಕಾಲಘಟ್ಟದಲ್ಲಿ ಇಂದಿನ ಎಲ್ಲಾ ಜಾತಿಸ್ವಾಮಿಜೀಗಳಿಗೆ ಧಾರ್ಮಿಕತೆ, ಅಲೌಕಿಕತೆ, ಸಾಮಾಜಿಕತೆಗಳಿಗಿಂತ ಲೌಕಿಕವಾದ ರಾಜಕೀಯ ಆಪೋಷನ, ಸ್ವಜಾತಿ ಸಂರಕ್ಷಣೆಯಂಥ ವಿಚಾರಗಳೇ ಪೂರ್ಣಾವಧಿ ಧ್ಯಾನಗಳಾಗಿವೆ.

ಹೀಗಾಗಿ ಯಡಿಯೂರಪ್ಪನವರಂಥ ಪ್ರಬಲ ಜಾತಿಯ ಮುತ್ಸದ್ದಿಯನ್ನು ಯಾವ ಪಕ್ಷ- ಸಿದ್ಧಾಂತ- ನೀತಿ- ಧರ್ಮದ ಮುಲಾಜಿಲ್ಲದೆ, ಅವರನ್ನು ಕೈಬಿಡುವ
ಪ್ರಶ್ನೆಯೇ ಇಲ್ಲ. ಇದೇ ನೋಡಿ ಯಡಿಯೂರಪ್ಪನ ವರಿಗೆ ಎಲ್ಲಾ ರೀತಿಯ ಆತ್ಮವಿಶ್ವಾಸವನ್ನು ವೃದ್ಧಿಸುತ್ತಿದೆ. ಅವರು ಯಾವ ಪಕ್ಷದಲ್ಲಿದ್ದರೂ ಯಾವ ಕ್ಷೇತ್ರದ
ಲ್ಲಿದ್ದರೂ ಜಾತಿಯ ಪ್ರಭಾವಳಿಯೇ ಅವರ ಪ್ರಬಲತೆ ಎಂಬುವಂತೆ ಮಠಾಽಶರು ಅವರ ಬೆಂಬಲಕ್ಕಿದ್ದಾರೆ. ಇದರ ಮುಂದೆ ಯಾವ ಸಂಘಪರಿವಾರ, ಯಾವ ಪಕ್ಷ,
ಹೈಕಮಾಂಡ್, ಯಾವ ನರೇಂದ್ರ ಮೋದಿಯೂ ನಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಯಡಿಯೂರಪ್ಪನವರು ಜಾತಿಯ ಕೋಟೆಯೊಳಗೆ ರಾರಾಜಿಸಬಹುದಾಗಿದೆ. ಇಂಥ ಸೂಕ್ಷ್ಮತೆಯನ್ನೇ ಮೊನ್ನೆ ದಾವಣೆಗೆರೆಯ ಕಾರ್ಯಕಾರಣಿಯಲ್ಲಿ ‘ಮೋದಿಯವರ ಹೆಸರಿನಿಂದಲೇ ಗೆಲ್ಲಲು ಆಗುವುದಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದು.
ಹಾಗಂತ ಯಡಿಯೂರಪ್ಪನವರನ್ನು ಅಷ್ಟು ಸುಲಭವಾಗಿ ಊಸರವಳ್ಳಿಯಂತೆ, ಸಮಯಸಾಧಕರಂತೆ, ಅನುಕೂಲ ಸಿಂಧು, ಅವಕಾಶವಾದಿ ರಾಜಕಾರಣಿಯಂತೆ ಭಾವಿಸಿದರೆ ಅದು ನಿಜಕ್ಕೂ ಅವರಿಗೆ ಮತ್ತು ನಾಡಿನ ಪ್ರಜೆಗಳಿಗೆ ಮಾಡಿದ ಅವಮಾನ.

ಏಕೆಂದರೆ ಒಂದು ಬಾರಿ ಕೆಜೆಪಿಯನ್ನು ಕಟ್ಟಿ ಪಶ್ಚಾತಾಪಗೊಂಡು ಮತ್ತೇ ಬಿಜೆಪಿ ಸೇರಿ ಹೇಗೇಗೋ ಶ್ರಮಪಟ್ಟು ಬಿಜೆಪಿಯನ್ನು ಎರಡನೇ ಬಾರಿಗೆ ಅಧಿಕಾರಕ್ಕೆ ತಂದು ಕೂರಿಸಿದ್ದಾರಲ್ಲಾ ಅದೇನು ಕುಮಾರಸ್ವಾಮಿಯವರು ಕಂಡು ಬಯಸದೇ ಬಂದಂಥ ಭಾಗ್ಯವಲ್ಲ. ಕಳೆದ ನಾಲ್ಕೈದು ದಶಕಗಳಿಂದ ಬಿಜೆಪಿಯಲ್ಲಿ ಮಣ್ಣೆತ್ತಿ ಸೈಕಲ್ ಹೊಡೆದು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ತಂದರಲ್ಲ ಅದು ನಿಜಕ್ಕೂ ಒಂದು ಅದ್ಭುತ ಅಧ್ಯಾಯ.
ಯಡಿಯೂರಪ್ಪನವರು ಆರ್‌ಎಸ್‌ಎಸ್‌ನ ಗಣವೇಶ ಧಾರಿಯಾಗಿರುವ ದೃಶ್ಯವನ್ನು ಕಂಡರೆ ಈಗಲೂ ಅವರ ಅಭಿಮಾನಿಗಳಿಗೆ ರೋಮಾಂಚನವಾಗುತ್ತದೆ. ರಾಷ್ಟ್ರಯತೆ ಹಿಂದುತ್ವ ಹಿಂದೂಧರ್ಮ ಪರಂಪರೆ ಸಂಸ್ಕೃತಿಗಾಗಿ ಅಲ್ಲದೇ, ನಾಡಿನ ರೈತರು ಮತ್ತು ಎಲ್ಲಾ ಜಾತಿಗಳನ್ನೂ ಓಲೈಸಿಕೊಂಡ ಪರಿಯಿದೆಯಲ್ಲಾ
ಅದನ್ನು ಮೀರಿಸುವಂಥ ಮತ್ತೊಬ್ಬ ನಾಯಕ ಬಿಜೆಪಿಯಲ್ಲೂ ಇಲ್ಲ ಇನ್ನಿತರೆ ಪಕ್ಷಗಳಲ್ಲೂ ಇಲ್ಲ. ಯಡಿಯೂರಪ್ಪ ಅಂದರೆ ಅದು ಸಂಘಪರಿವಾರ, ಬಿಜೆಪಿ ಎಂದರೆ
ಅದು ಯಡಿಯೂರಪ್ಪ ಎನ್ನುವಷ್ಟು ಅನಂತವಾಗಿ ಯಡಿಯೂರಪ್ಪನವರು ಬಿಜೆಪಿಯ ಲಾಂಛನದಂತೆ ಕಂಗೊಳಿಸಿದ್ದಾರೆ. ತೀರಾ ಮೊನ್ನೆ ಅಖಿಲ ಕರ್ನಾಟಕ
ವೀರಶೈವ ಮಠಾಽಶರು ಅವರ ರಾಜೀನಾಮೆಯನ್ನು ನಿಷೇಧಿಸುವ ಹೋರಾಟಕ್ಕೆ ನಿಲ್ಲುವವರೆಗೂ ಯಡಿಯೂರಪ್ಪನವರನ್ನು ಒಂದು ಜಾತಿಯ ನಾಯಕನಾಗಿ
ನಾಡಿನ ಪ್ರಜೆಗಳು ಕಂಡೇ ಇರಲಿಲ್ಲ.

ನಾಡಿನಾದ್ಯಂತ ಎಲ್ಲಾ ಜಾತಿವರ್ಗಗಳನ್ನೂ ಹತ್ತಿರವಾಗಿಸಿಕೊಂಡು ಒಬ್ಬ ಧೀಮಂತ ನಾಯಕ ಎನಿಸಿಕೊಂಡಿದ್ದಾರಲ್ಲ ಅಂಥ ಯೋಗ್ಯತೆ ಇಂದು ಯಾರಿಗೂ ಸಿದ್ಧಿಸಿಲ್ಲ.  ಬಿಜೆಪಿಯನ್ನು ಬೆಳೆಸಿ ಅಽಕಾರಕ್ಕೆ ತಂದಷ್ಟೇ ಸಮವಾಗಿ ವರಿಷ್ಠರು ಅನಂತಕುಮಾರರಂಥ ನಾಯಕ ರನ್ನು ಹಿಂದೆಸರಿಸಿ ಯಡಿಯೂರಪ್ಪನವರನ್ನೇ ಮುಖ್ಯ ಮಂತ್ರಿಯನ್ನಾಗಿಸಿದರು ಮತ್ತು ಈಗಲೂ ಬಯಸಿದ ರಾಜ್ಯಕ್ಕೆ ಘನತೆವೆತ್ತ ರಾಜ್ಯಪಾಲರ ಹುದ್ದೆಯನ್ನೂ ನೀಡಲು ಪಕ್ಷ ಸಿದ್ದವಿದೆ. ಒಬ್ಬ ಮಗನನ್ನು ಸಂಸದನನ್ನಾಗಿಸಿ, ಮತ್ತೊಬ್ಬ ಮಗನಿಗೆ ಪಕ್ಷದಲ್ಲಿ ಉನ್ನತಸ್ಥಾನ ಮತ್ತು ಹೊಣೆಗಾರಿಕೆಯನ್ನು ನೀಡಿದ್ದಾಗಿದೆ.

ಇನ್ನು ಯಡಿಯೂರಪ್ಪನವರ ಮಾತು ನಡಿಗೆ ದೈಹಿಕಭಾಷೆ ಅವರು ಬಸವಳಿದಿರುವುದು ಕಂಡುಬರುತ್ತಿದೆ. ಕರೋನಾ ಸಂಕಷ್ಟದಲ್ಲಿ ಮಹಾಪ್ರವಾಹದಲ್ಲಿಯೂ ಅವರು ಅದಿಕಾರದಲ್ಲಿ ಪಟ್ಟಪಾಡು ರಾಜ್ಯವನ್ನು ನಿಭಾಯಿಸಿದ ರೀತಿ ನಿಜಕ್ಕೂ ಅವರನ್ನು ನೋಡಿ ಅಯ್ಯೋ ಎನಿಸುವಂತ್ತಿತ್ತು. ಇವಿಷ್ಟೂ ಯಡಿಯೂರಪ್ಪನವರ ಒಂದು ಪರ್ವ. ಅಲ್ಲಿಗೆ ಅವರ ತಲೆಮಾರಿಗೆ ಸಿಗಬೇಕಾದ ಎಲ್ಲಾ ಗೌರವವೂ ದಕ್ಕಿದಂತ್ತಾಗಿದೆ.

ಇನ್ನು ಅವರ ವಾರಸುದಾರಿಕೆಯಾಗಿ ಮಕ್ಕಳಿಬ್ಬರ ರಾಜಕೀಯ ಭವಿಷ್ಯವೂ ಖಂಡಿತಾ ಉಜ್ಚಲವಾಗೇ ತೀರುತ್ತದೆ. ಹಾಗಂತ ಏಕಾಏಕಿ ವಿಜಯೇಂದ್ರರನ್ನು
ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು ನ್ಯಾಯಸಮ್ಮತವಲ್ಲ ಅಲ್ಲವೇ. ಏಕೆಂದರೆ ಬಿಜೆಪಿ ಕಾರ್ಯಕರ್ತರ ಪಕ್ಷವೆಂಬ ಸಿದ್ಧಾಂತದಲ್ಲಿದೆ. ಯಾರೇ ಆಗಲಿ ಪಕ್ಷದಲ್ಲಿ
ಇಂತಿಷ್ಟು ವರ್ಷ ದುಡಿದು ಅನುಭವ ಪಡೆದು ತಮ್ಮ ನಡೆ ನುಡಿ ವ್ಯಕ್ತಿತ್ವ ನೈತಿಕ ಬದುಕನ್ನು ಕಟ್ಟಿಕೊಂಡು ನಡೆದರೆ ಸಾಮಾನ್ಯ ಕಾರ್ಯಕರ್ತನಾಗಲಿ ವಿಜಯೇಂದ್ರರಾಗಲಿ ಮುಂದೆ ಮುಖ್ಯಮಂತ್ರಿಯಾಗುವ ಅವಕಾಶ ಖಂಡಿತಾ ಇರುತ್ತದೆ.

ಈಗಾಗಲೇ ವಿಜಯೇಂದ್ರರಲ್ಲಿ ಆಗಿನ ಯಡಿಯೂರಪ್ಪನವರ ಸಂಘಟನಾ ಚತುರತೆ, ಗುಣಛಾಯೆಯನ್ನು ಜನ ಕಾಣಲಾರಂಭಿಸಿದ್ದಾರೆ. ಆದರೆ ಅದನ್ನು
ಸಾರ್ಥಕಗೊಳಿಸುವುದು ಅವರು ತೋರಬಹುದಾದ ಬೆಳೆ ಸಿಕೊಳ್ಳಬಹುದಾದ ಗುಣ ನಡತೆ ನೈತಿಕತೆಯಲ್ಲಿರುತ್ತದೆ. ಹೀಗಿರುವಾಗ ಎಲ್ಲಿಯ ಸಿದ್ದರಾಮಯ್ಯನವರು
ಎಲ್ಲಿಯ ಯಡಿಯೂರಪ್ಪನವರು? ನಿಜಕ್ಕೂ ಇದು ರಾಜಕೀಯ ಸಿದ್ಧಾಂತದಲ್ಲಿ ಮತ್ತೊಂದು ಅನೈತಿಕ ಕೂಸೆಂದರೆ ತಪ್ಪಲ್ಲ. ಒಂದು ಕಾಲದಲ್ಲಿ ಯಡಿಯೂರಪ್ಪ
ನವರನ್ನು ಬಾಯಿಗೆ ಬಂದಂತೆ ಬಯ್ದು, ಏಕವಚನದಲ್ಲೇ ನಿಂದಿಸಿ, ಅಣುಕಿಸಿ, ಲೇವಡಿ ಮಾಡಿ, ಸಿಕ್ಕಾಪಟ್ಟೆ ಗೇಲಿಮಾಡಿ, ಜೈಲೂರಪ್ಪ ಎಂದೆಲ್ಲಾ ವ್ಯಂಗವಾಡಿ
ಕಠೋರವಾಗಿ ಆಡಿಕೊಂಡಿದ್ದಲ್ಲದೇ, ಯಡಿಯೂರಪ್ಪನ ವರ ಮೂಲಸ್ಥಾನವಾದ ಸಂಘಪರಿವಾರದ ದ್ವೇಷಿಯಾಗಿ, ಹಿಂದೂಪರ ಹೋರಾಟವನ್ನು ಖಂಡಿಸುವ, ಮತಾಂಧ ಟಿಪ್ಪುಸುಲ್ತಾನನನ್ನು ಆರಾಧಿಸುವ, ದೇಶದ್ರೋಹಿಗಳಾದ ಕನ್ನಯ್ಯ, ಅಮೂಲ್ಯ ಅಂಥವರನ್ನು ಬೆಂಬಲಿಸುವ, ಅಯೋಧ್ಯ ಶ್ರೀರಾಮಂದಿರವನ್ನೇ ಪ್ರಶ್ನಿಸುವ, ತಿಲವಿಟ್ಟರೆ ಗಾಬರಿಪಡುವ, ಅಲ್ಪಸಂಖ್ಯಾತರ ಭಗೀರಥರಾಗಿರುವ, ಕೇವಲ ಅಹಿಂದ ನಾಯಕರೆನಿಸಿರುವ ಸಿದ್ದರಾಮಯ್ಯನವರೊಂದಿಗೆ ಯಡಿಯೂರಪ್ಪ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿಯೇ ‘ಸೃಷ್ಠಿ ವೈಚಿತ್ರ’ ದಂತೆ ಕಾಣುತ್ತಿದೆ.

ಸಾಧ್ಯವೇ ಇಲ್ಲ. ಈ ಸುದ್ದಿ ಕೇವಲ ಗಾಳಿಸುದ್ದಿಯಾಗಿ ಹೋಗಲಿ ಎಂದು ಬಿಜೆಪಿಯ ಮತ್ತು ಯಡಿಯೂರಪ್ಪನವರ ನೈಜ ಅಭಿಮಾನಿಗಳು ದಾವಂತ ಕ್ಕೊಳ ಗಾಗಿದ್ದಾರೆ. ಯಡಿಯೂರಪ್ಪನವರಂಥ ಮೇರು ಮುತ್ಸದ್ದಿ ಈ ಇಳಿವಯಸ್ಸಿನಲ್ಲಿ ಇಂಥ ಅಸಹ್ಯ ಹೊಂದಾಣಿಕೆ ಮಾಡಿಕೊಳ್ಳುವಂಥ ಅಧಿಕಾರದ ಮೋಹಕ್ಕೆ ಒಳಗಾ
ಗುತ್ತಾರಾ? ಇದನ್ನು ಅವರ ಅಭಿಮಾನಿಗಳು ಖಂಡಿತಾ ಅರಗಿಸಿಕೊಳ್ಳಲಾರರು. ಅಲ್ಲದೇ ಸಾಲುಸಾಲು ಹತ್ಯೆ ಯಾಗಿಹೋದ ಹಿಂದೂ ಕಾರ್ಯಕರ್ತರ ಆತ್ಮಗಳೂ
ಮೇಲೆದ್ದು ರೋಽಸುತ್ತದೆ !.

ವಯೋವೃದ್ಧನೊಬ್ಬ ಕುರೂಪಿಯೊಬ್ಬಳನ್ನು ಅನೈತಿಕವಾಗಿ ಅಪ್ಪಿಕೊಳ್ಳುವಂಥ ಹೀನಾಯ ಸ್ಥಿತಿಗೆ ಯಡಿಯೂರಪ್ಪನವರು ಎಂದೂ ಒಳಗಾಗುವವರಲ್ಲ. ಕೇವಲ
ಅಽಕಾರದ ಆಸೆಗೆ ದಶಕಗಳಿಂದ ಕಟ್ಟಿಕೊಂಡುಬಂದ ಸೈದ್ಧಾಂತಿಕೆಯನ್ನು ತಿಪ್ಪೆಗೆಸೆದು ನೀತಿಗೆಟ್ಟ ರಾಜಕೀಯಕ್ಕಿಳಿಯುವವರಲ್ಲ. ಈಗಾಗಲೇ ಟ್ವಿಟರ್‌ನಲ್ಲಿ ಈ
ಸುದ್ದಿಯನ್ನು ಅಲ್ಲಗೆಳಿದಿದ್ದಾರೆ. ಇಷ್ಟಕ್ಕೂ ಮೀರಿ ಯಡಿಯೂರಪ್ಪ- ಸಿದ್ದರಾಮಯ್ಯ ಕಾಂಬಿನೇಷನ್ ಜಾರಿಗೆ ಬಂದರೂ ಅಂಥ ಆಶ್ಚರ್ಯವೇನಿಲ್ಲ ಬಿಡಿ. ಏಕೆಂದರೆ ಮಹಾಪುರುಷ ಕುಮಾರಸ್ವಾಮಿಯವರು ಹಿಂದೊಮ್ಮೆ ‘ರಾಜಕೀಯದಲ್ಲಿ ಏನುಬೇಕಾದರು ಆಗಬಹುದು’ ಎಂಬ ಭವಿಷ್ಯವಾಣಿ ನುಡಿದರಲ್ಲಾ ಅದನ್ನು ಎತ್ತಿಹಿಡಿಯಲೇಬೇಕು. ಏಕೆಂದರೆ ಮಹಾರಾಷ್ಟ್ರದಲ್ಲಿ ಕಟ್ಟರ್ ಹಿಂದುತ್ವ ಪಕ್ಷವಾಗಿದ್ದ ಶಿವಸೇನೆಯೇ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು
‘ಮತಾಂತರ’ ವಾಗಿರುವಾಗ ಇನ್ನು ಇಂಥ ಕಾಂಬಿನೇಷನ್‌ಗಳು ಯಾವ ‘ಪುಟಗೋಸಿ’ ಅಲ್ಲವೇ?.

ನೆನಪಿರಲಿ, ಇಂಥ ಸ್ವಾರ್ಥ ಹೊಂದಾಣಿಕೆಗಳು, ಅನೈತಿಕ ಆಟಗಳು, ಜಾತಿಮೇಲಾಟಗಳು, ಅನಿಷ್ಠ ನಾಯಕರುಗಳಿಗಿಂತ ಮಿಗಿಲಾದದ್ದು ಪವಿತ್ರವಾದ
ಆಡಳಿತ, ಅಭಿವೃದ್ಧಿ, ಜನಾಭ್ಯುದಯದ ಕೈಂಕರ್ಯ ಗಳು. ಸಂವಿಧಾನಾತ್ಮಕ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಲ್ಲಾ ಜಾತಿಧರ್ಮಗಳನ್ನೂ ಸರಿಸಮನಾಗಿ ಕಂಡು ಸಾಮಾಜಿಕ ಸಮಾನತೆ ಸಾಽಸಿ ಇದೇ ಮಣ್ಣಿನ ಪರಂಪರೆ ವೈಚಾರಿಕತೆ ಸಂಸ್ಕೃತಿ ಸಂಸ್ಕಾರ ನೀತಿ ನಿಯಮಗಳು ನಂಬಿಕೆ ಭಾವನೆಗಳನ್ನು ಗೌರವಿಸಿ ಜಾತಿಭೇದಗಳಿಲ್ಲದ ಆಡಳಿತ ನೀಡಿ ನಾಯಕ ಎನಿಸಿಕೊಳ್ಳುವುದು ನಿಜವಾದ ರಾಜಕೀಯ. ಅದನ್ನು ಬಿಟ್ಟು ಕೇವಲ ಸ್ವಾರ್ಥ ಮತ್ತು ವಂಶರಾಜಕಾರಣವೆಂಬ ಶೀಘ್ರಸ್ಖಲನಕ್ಕಾಗಿ ಸಿಕ್ಕಸಿಕ್ಕ ಅನೈತಿಕ ಸಿದ್ಧಾಂತದೊಂದಿಗೆ ರಾಜಿಮಾಡಿಕೊಂಡು ಜನರ ಮುಂದೆ ಬೆತ್ತಲಾಗಿ ಮತ ಯಾಚನೆ ಮಾಡುವುದಿದೆಯಲ್ಲಾ, ಅದು ಸ್ವಜಾತಿ ಬಂಧುಗಳಿಗೆ ಮಜಾ ನೀಡಬಹುದು.

ಆದರೆ ಅದರಂಥ ಹೇಯ ಮತ್ತೊಂದಿಲ್ಲ. ಮತ್ತೊಮ್ಮೆ ಕೇಳಿಸಿಕೊಳ್ಳೋಣ ‘ಯಡಿಯೂರಪ್ಪ- ಸಿದ್ದರಾಮಯ್ಯ ಹೊಂದಾಣಿಕೆ’! ಛೇ.. ಬಿಡ್ತು ಅನ್ನಿ, ಯಡಿಯೂರಪ್ಪನವರು ಅಂಥವರಲ್ಲ.