Sunday, 15th December 2024

ಸಂಕಷ್ಟಗಳ ಕಾಲದ ಸಮರ್ಪಕ ಯೋಧ ಯಡಿಯೂರಪ್ಪ

ಸಾಂದರ್ಭಿಕ

ಮುರುಗೇಶ್‌ ಆರ್‌.ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವರು

ಯಡಿಯೂರಪ್ಪ ನುಡಿದಂತೆ ನಡೆಯುವ ನಾಯಕ. ವಿಶ್ವಾಸದ್ರೋಹ ಎಂದೂ ಮಾಡುವುದಿಲ್ಲ. ತಮ್ಮನ್ನು ನಂಬಿ ಕಾಂಗ್ರೆಸ್, ಜೆಡಿಎಸ್ ತೊರೆದು ಬಂದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ಅವರು ಸಫಲರಾಗಿದ್ದಾರೆ. ಯಡಿಯೂ ರಪ್ಪ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಬೇಕು. ಅವರ ನಾಯಕತ್ವದಲ್ಲೆ ಮುಂದಿನ ಚುನಾವಣೆ ಎದುರಿಸ ಬೇಕು ಎಂಬ ಸದಾಶಯ ಪಕ್ಷದಲ್ಲಿ ಇದೆ. ಬಿಎಸ್‌ವೈ ಬೆಂಬಲಿಗರಂತೂ ಇದೇ ಬಯಕೆಯಲ್ಲಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ.

ಹೌದು. ಯಡಿಯೂರಪ್ಪ ಎಲ್ಲರ ಆಪತ್ಬಾಂಧವ! ಆದ್ದರಿಂದಲೇ ಕನ್ನಡ ನಾಡಿನ ಜನತೆ ಅವರನ್ನು ತಮ್ಮ ಜನನಾಯಕ ಎಂದು ಗುರುತಿಸಿದೆ. ಬಿ.ಎಸ್.ವೈ 4ನೆಯ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೋವಿಡ್ – 19 ಸಂಕಷ್ಟದ ದಿನಗಳು, ಬರಗಾಲ ನೆರೆ ಹಾವಳಿ, ಮೀಸಲಾತಿ ಹೋರಾಟಗಳು, ಹೀಗೆ ಹತ್ತು ಹಲವು ಸವಾಲುಗಳನ್ನು ಅವರು ಒಬ್ಬ ಸಮರ್ಥ ಯೋಧನಂತೆ ನಿರ್ವಹಿಸಿದ್ದಾರೆ. ಅವರಿಗೆ ದಣಿವಾಗುವುದಿಲ್ಲ.

ಅವರ ಚಟುವಟಿಕೆ, ಲವಲವಿಕೆ, ಓಡಾಟ, ಹೋರಾಟದ ಕಿಚ್ಚು ಜನಸ್ಪಂದನ ಗಮನಿಸಿದರೆ ಅವರಿನ್ನೂ 25 ಹರೆಯದವರಾಗಿ
ಕಾಣುತ್ತಿದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆಯುವ ನಾಯಕ. ವಿಶ್ವಾಸದ್ರೋಹ ಎಂದೂ ಮಾಡುವುದಿಲ್ಲ. ತಮ್ಮನ್ನು ನಂಬಿ ಕಾಂಗ್ರೆಸ್ ಜೆಡಿಎಸ್ ತೊರೆದು ಬಂದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ಅವರು ಸಫಲರಾಗಿದ್ದಾರೆ. ಯಡಿಯೂರಪ್ಪ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಬೇಕು. ಅವರ ನಾಯಕತ್ವದಲ್ಲೆ ಮುಂದಿನ ಚುನಾವಣೆ ಎದುರಿಸಬೇಕು ಎಂಬ ಸದಾಶಯ ಪಕ್ಷದಲ್ಲಿ ಇದೆ.

ಬಿಎಸ್‌ವೈ ಬೆಂಬಲಿಗರಂತೂ ಇದೇ ಬಯಕೆಯಲ್ಲಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಆಡಳಿತದ ಕಡೆ ಅನುಕ್ಷಣವೂ ಅವರು ಲಕ್ಷ್ಯವಿಟ್ಟಿದ್ದಾರೆ. ಈ ವಯಸ್ಸಿನಲ್ಲಿ ಅವರ ಕಾರ್ಯತತ್ಪರತೆ ಹಾಗೂ ಲವಲವಿಕೆಯನ್ನು ಮೆಚ್ಚುವಂಥದ್ದು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹಿಂದಿನ ಗುರುಗಳಾದ ಸುಯತೀಂದ್ರ ತೀರ್ಥರು ಬಿ.ಎಸ್.ವೈ ಭೇಟಿಯಾದಾಗಲೆಲ್ಲ ಆಪತ್ಬಾಂಧವ ಯಡಿಯೂರಪ್ಪ ಎಂದು ಪ್ರೀತಿಯಿಂದ ಸಂಭೋಧಿ ಸುತ್ತಿದ್ದರು. ಇದನ್ನು ಗಮನಿಸಿದ ಪತ್ರಕರ್ತರೊಬ್ಬರು ಸುಯತೀಂದ್ರತೀರ್ಥರನ್ನು ಸ್ವಾಮೀಜಿ ಇಡೀ ಭಕ್ತ  ಸಮುದಾಯ ತಮ್ಮನ್ನು ಆಪತ್ಬಾಂಧವ ಎಂದು ನಂಬಿ ಆರಾಧಿಸುತ್ತಿದೆ.

ಆದರೆ ತಾವು ಬಿ.ಎಸ್.ವೈ ಅವರನ್ನು ಆಪತ್ಬಾಂಧವ ಎಂದು ಅಭಿಮಾನದಿಂದ ಸಂಭೋಧಿಸುತ್ತೀರಿ? ಏನಿದರ ಮರ್ಮ? ಎಂದು ಪ್ರಶ್ನಿಸಿದರು. ಸ್ವಾಮೀಜಿ ಒಂದು ಕ್ಷಣ ಭಾವುಕರಾದರು. ಯಡಿಯೂರಪ್ಪ ಪ್ರಭಾವಿ ರಾಜಕಾರಣಿ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಅವರನ್ನು ಹೊಗಳಿ ಸಂತುಷ್ಟಗೊಳಿಸುವುದು ನಮ್ಮ ಉದ್ದೇಶವಲ್ಲ. ನಿಮಗೆಲ್ಲರಿಗೂ ಗೊತ್ತಿರುವಂತೆ 2009ರಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿ ಇಡೀ ಮಂತ್ರಾಲಯ ಜಲಾವೃತವಾದ ಸಂದರ್ಭದಲ್ಲಿ ನಾನು ಹಾಗೂ ಕೆಲವು ಭಕ್ತರು ಪ್ರವಾಹದ ಮಧ್ಯೆ ಸಿಲುಕಿದ್ದೆವು. ಎಲ್ಲವೂ ಮುಗಿದೇ ಹೋಯಿತು ಎಂದುಕೊಂಡು ತೀವ್ರ ಆತಂಕಗೊಂಡ ಆ ಘಳಿಗೆಯಲ್ಲಿ ಹೆಲಿಕಾಪ್ಟರ್ ಮೂಲಕ ನಮ್ಮನ್ನು ಯಡಿಯೂರಪ್ಪ ರಕ್ಷಿಸಿದರು.

ಇಷ್ಟು ಮಾತ್ರವಲ್ಲ, ಸುರಕ್ಷಿತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಕೊಂಡರು. ಜಲಪ್ರಳಯದಿಂದ ತನ್ನೆಲ್ಲಾ ಬೆಡಗು –
ಬಣ್ಣ ಕಳೆದುಕೊಂಡಿದ್ದ ಮಂತ್ರಾಲಯ ಶ್ರೀ ಕ್ಷೇತ್ರಕ್ಕೆ ಪುನರುತ್ಥಾನ ಕಲ್ಪಿಸಿದರು. ಯಡಿಯೂರಪ್ಪ ನಿಜ ಅರ್ಥದಲ್ಲಿ ಆಪತ್ಬಾಂಧವ! ಎಂದು ಸ್ವಾಮೀಜಿ ಜಲಪ್ರಳಯದ ಆ ದಿನದ ಘಟನೆ ನಿಧಾನವಾಗಿ ಪತ್ರಕರ್ತರಿಗೆ ವಿವರಿಸಿದ್ದರು. ಉತ್ತರ ಕರ್ನಾಟಕದ ಜಯಪುರ, ಬಾಗಲಕೋಟ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಭೀಕರ ನೆರೆ ಬಂದು ಅಪಾರ ಆಸ್ತಿ, ಜೀವ ಹಾನಿಗಳಾಗಿತ್ತು. ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಿದ ಬಿ.ಎಸ್.ವೈ ಪ್ರವಾಹ ಪೀಡಿತರಿಗೆ
ಅಗತ್ಯ ಪರಿಹಾರ ಒದಗಿಸಿದರು.

ಖಾಸಗಿ ಉದ್ದಿಮೆದಾರರು ಹಾಗೂ ಮಠಗಳ ಸಹಭಾಗಿತ್ವದಲ್ಲಿ ಸಂತ್ರಸ್ತರಿಗಾಗಿ ಸುಮಾರು 12000 ಮನೆಗಳನ್ನು ನಿರ್ಮಿಸಿ ವಿತರಿಸಿದರು. ಇದು ದೇಶದಲ್ಲಿ ಒಂದು ದಾಖಲೆಯಾಗಿ ಉಳಿದಿದೆ. ಈ ಮನೆಗಳನ್ನು ಪಡೆದ ಜನ ತಮ್ಮ ಮನೆಯಲ್ಲಿ ಬಿ.ಎಸ್.ವೈ ಫೋಟೊ ಇಟ್ಟು ಪೂಜಿಸುತ್ತಾರೆ. ಅವರು ಕೂಡ ಯಡಿಯೂರಪ್ಪ ಅವರನ್ನು ನಮ್ಮ ಆಪತ್ಬಾಂಧವ ಎಂದು ನಿತ್ಯ ಸ್ಮರಿಸುತ್ತಾರೆ.
ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ಧಲಿಂಗಪ್ಪ ಪುಟ್ಟತಾಯಮ್ಮ ಅವರ ಮಗನಾಗಿ 1943ರ ಫೆಬ್ರವರಿ 27 ರಂದು ಜನನ.

1965ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದರು. ಶಿಕಾರಿ ಪುರವನ್ನು ತಮ್ಮ ಕಾರ್ಯಕ್ಷೇತ್ರನಾಗಿ ಆಯ್ಕೆ ಮಾಡಿಕೊಂಡು ಅವರು ಜನ ಸೇವೆಯ ಮೂಲಕ ಬೆಳೆದಿದ್ದಾರೆ. ನಾನು ಒಮ್ಮೊಮ್ಮೆ ನಿಧಾನಕ್ಕೆ ನಡೆಯುತ್ತೇನೆ. ಆದರೆ ಹಿಂದಕ್ಕೆ ಮಾತ್ರ ನಡೆಯುವುದಿಲ್ಲ ಎಂದು ಅವರು ಆಗಾಗ ಹೇಳುತ್ತಾರೆ. ಅದು ಅಕ್ಷರಶ ಸತ್ಯ. 1983ರಲ್ಲಿ ಮೊದಲು ಬಾರಿ ಶಿಕಾರಿಪುರ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾದರು. ಮುಂದೆ ಅವರು ಎಂಟು ಬಾರಿ ಆ ಕ್ಷೇತ್ರ ದಿಂದ ಗೆದ್ದಿದ್ದಾರೆ.

ಪುರಸಭೆಯಿಂದ ಲೋಕಸಭೆ ಸೇರಿದಂತೆ ಅವರು ಬದುಕಿನಲ್ಲಿ 15 ಚುನಾವಣೆಗಳನ್ನು ಎದುರಿಸಿ ಗೆದ್ದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಸರಕಾರದಲ್ಲಿ ನಾನು ಬೃಹತ್ ಕೈಗಾರಿಕೆ ಮಂತ್ರಿಯಾಗಿ ಸರಕಾರದ ಇಕ್ಕಟ್ಟಿನ
ಸ್ಥಿತಿ ತೀರ ಸಮೀಪದಿಂದ ನೋಡಿದ್ದೇನೆ. ಆಗ ವಿರೋಧ ಪಕ್ಷಗಳಾಗಿದ್ದ ಕಾಂಗ್ರೆಸ್ ಜೆಡಿಎಸ್ ನಾಯಕರು ಸರಕಾರ ಅಭದ್ರ ಗೊಳಿಸಲು ವಿಪರೀತ ಗೊಂದಲ ಸೃಷ್ಟಿಸಿದರು.

ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಒಂದು ವರ್ಷದ ಅವಧಿಯಲ್ಲಿ ಯಡಿಯೂರಪ್ಪ ಸರಕಾರ ಬರಕಾಸ್ತ ಮಾಡಲು ಮೂರು ಬಾರಿ ಕೇಂದ್ರ ಸರಕಾರಕ್ಕೆ ವರದಿ ಮಾಡಿದ್ದು ಭಾರತದ ಪ್ರಜಾಪ್ರಭುತ್ವ ಇತಿಹಾಸದ ಒಂದು ದುರಂತದ ಸಂಗತಿಯಾಗಿದೆ. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ರಾಜ್ಯಪಾಲರ ವರದಿಯನ್ನು ಒಪ್ಪಲಿಲ್ಲ.

ರಾಜ್ಯಪಾಲರು ತೀವ್ರ ಮುಖಭಂಗ ಅನುಭವಿಸಿದರೂ ಸರಕಾರಕ್ಕೆ ತೊಂದರೆ ಕೊಡುವುದನ್ನು ನಿಲ್ಲಿಸಲಿಲ್ಲ. ಮೊದಲ ಬಾರಿಗೆ (2008) ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಾವಯವ
ಕೃಷಿಕನ ಮನೆಯಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಶಿವಲಿಂಗಯ್ಯ ಗಣಾಚಾರಿ ಅವರ ತೋಟದ ಮನೆಯಲ್ಲಿ 2010ರ ಜೂ.26ರಂದು ವಾಸ್ತವ್ಯ ಹೂಡಿದ್ದರು.

ಮರುದಿನ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮದ ವಿದ್ಯಾರ್ಥಿನಿ ಜಯಲಕ್ಷ್ಮಿ ಸದಾಶಿವ ಗಣಿ ಎದ್ದು
ನಿಂತು ನನ್ನ ತಂದೆ ಬಡ ರೈತ ಅವರ ಆರೋಗ್ಯ ಕೆಟ್ಟಿದೆ, ದವಾಖಾನೆ ಖರ್ಚಿಗೆ ಇದ್ದ ಎರಡು ಎಕರೆ ಭೂಮಿ ಕೂಡ ಮಾರಿದ್ದಾರೆ. ನಾನು ಬಿ. ಎಸ್. ಸಿ. ಪಾಸಾಗಿ ಎಂ. ಸಿ. ಎ. ಬಾಗಲಕೋಟ ಕಾಲೇಜಿನಲ್ಲಿ ಓದುತ್ತಿದ್ದೇನೆ ಕಾಲೇಜ್ ಫೀ, ಹಾಸ್ಟೇಲ್ ಫೀ ಕಟ್ಟಲು
ಸಾಧ್ಯವಾಗಲಿಲ್ಲ. ಈಗ ಶಿರೋಳ ಗ್ರಾಮಕ್ಕೆ ಬಂದು ಮನೆಯಲ್ಲಿ ಕುಳಿತಿದ್ದೇನೆ ನನಗೆ ನೆರವಾಗಬೇಕು ಎಂದು ವಿನಂತಿ ಮಾಡಿದಳು.

ತೆಳ್ಳಗೆ, ಬೆಳ್ಳಗೆ ಎತ್ತರದ ನಿಲುವಿನ ಜಯಲಕ್ಷ್ಮಿ ಧೈರ್ಯವಾಗಿ ಎದ್ದು ನಿಂತು ತುಂಬ ಸರಳವಾಗಿ, ಸ್ಪಷ್ಟವಾಗಿ ಪ್ರಶ್ನೆ ಕೇಳಿದಾಗ ಸಭೆಯಲ್ಲಿ ಒಂದು ನಿಮಿಷ ಅಚ್ಚರಿ ಮಾಡಿತು. ಇನ್ನೊಮ್ಮೆ ನಿನ್ನ ಹೆಸರು ಹೇಳಮ್ಮ? ಎಂದು ಯಡಿಯೂರಪ್ಪ ಕೇಳಿದರು. ‘ಜಯಲಕ್ಷ್ಮಿ’ ಉತ್ತರಿಸಿದಳು. ನಾಡಿನ ಎಲ್ಲ ಮಕ್ಕಳಿಗೆ ನೆರವಾಗಬೇಕು ಎಂದು ನನ್ನ ಮನಸ್ಸು ಹಂಬಲಿಸುತ್ತಿದೆ ಅದು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜಯಲಕ್ಷ್ಮಿ ನಿನ್ನನ್ನು ದತ್ತು ಪಡೆದಿದ್ದೇನೆ. ನಿನ್ನ ಓದಿನ ಖರ್ಚು ವೆಚ್ಚಕ್ಕೆ ಪೂರ್ಣ ಅನುಕೂಲ ಮಾಡುವೆ ಎಂದು ಸಭೆಯಲ್ಲಿ ಹೇಳಿದರು.

ವಾಗ್ದಾನ ಮಾಡಿದಂತೆ ಯಡಿಯೂರಪ್ಪ ಜಯಲಕ್ಷ್ಮಿ ಶಿಕ್ಷಣಕ್ಕೆ ವರ್ಷಕ್ಕೆ 2 ಲಕ್ಷ 40ರು. ಸಾವಿರ ಪಾವತಿ ಮಾಡಿದರು. ಆಕೆಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಂಡಿದ್ದಾರೆ ಜಯಲಕ್ಷ್ಮಿಯ ತಂದೆ ಸದಾಶಿವ ಉಪಚಾರಕ್ಕೆ 1 ಲಕ್ಷ 20 ಸಾವಿರ ನೀಡಿದ್ದಾರೆ. ಇದನ್ನೆಲ್ಲ ಜಯಲಕ್ಷ್ಮಿ ಸ್ಮರಿಸುತ್ತಾಳೆ. ಶಿವಮೊಗ್ಗ ಜಿಲ್ಲೆಯ ಕೂಗಿನಹಳ್ಳಿ ರೈತ ಸಿದ್ದರಾಮೇಶ್ವರಪ್ಪ ಸದಾ ಯಡಿಯೂರಪರವನ್ನು ನೆನೆಯುತ್ತಾನೆ. ತನ್ನ ಮಗನಿಗೆ ಯಡಿಯೂರಪ್ಪ ಎಂದು ಹೆಸರಿಟ್ಟಿದ್ದಾನೆ. ಸಿದ್ದರಾಮಪ್ಪ ಹಿಂದುಳಿದ ಸಮಾಜಕ್ಕೆ ಸೇರಿದರು. ಅವನ ಜಮೀನು ಬಲಿಷ್ಠ ವರ್ಗದಿಂದ ಬಿಡಿಸಿಕೊಡಲು ಯಡಿಯೂರಪ್ಪ ಹೋರಾಟ ನಡೆಸಿದರು.

ತಹಶೀಲ್ದಾರ್ ಕಚೇರಿ ಎದುರು 46 ದಿನ ಆತನೊಂದಿಗೆ ಧರಣಿ ನಡೆಸಿದರು. ಆಗ ಅವರು ತಹಶೀಲ್ದಾರ್ ಕಚೇರಿಗೆ ಸೈಕಲ್ ಮೇಲೆ ಬರುವುದನ್ನು ಆತ ನೆನಪಿಸುತ್ತಾನೆ. ಸಿದ್ದರಾಮಪ್ಪ ಪಾಲಿಗೂ ಯಡಿಯೂರಪ್ಪ ಇಂದಿಗೂ ಆಪತ್ಬಾಂಧವ ಆಗಿದ್ದಾರೆ.
ಯಡಿಯೂರಪ್ಪ ನನ್ನ ರಾಜಕೀಯ ಗುರು. ಅವರ ಸಮರ್ಪಣ ಮನೋಭಾವ, ಧೈರ್ಯ, ಋಜುತ್ವ, ನನನ್ನು ಬಹಳ ಆಕರ್ಷಿಸಿವೆ. ಆರೋಗ್ಯದ ಬಗ್ಗೆ ಅವರು ವಿಶೇಷ ಕಾಳಜಿ ವಹಿಸುತ್ತಾರೆ. ಮುಂಜಾನೆ ಕಡ್ಡಾಯ ವಾಗಿ ವಾಯು ವಿಹಾರ ಮಾಡುತ್ತಾರೆ. ಊಟ ತುಂಬ ಮಿತವ್ಯಯ. ಸಮಾಜದಲ್ಲಿರುವ ಬಹುಪಾಲು ಬಡವರಿಗಾಗಿ ಏನನ್ನಾದರೂ ಮಾಡಲೇಬೇಕೆಂದು ಅವರು ಮೊದಲಿ ನಿಂದಲೂ ಚಿಂತಿಸುತ್ತಿದ್ದಾರೆ.

ಅಧಿಕಾರದ ಉತ್ತುಂಗದಲ್ಲಿದ್ದಾಗಲೂ ಅವರಲ್ಲಿ ಅದೇ ತುಡಿತವನ್ನು ನಾನು ಕಂಡಿದ್ದೇನೆ. ಅವರ ಎಲ್ಲರ ಪಾಲಿನ ಆಪತ್ಬಾಂಧವ ಆಗಿದ್ದಾರೆ. ಅವರೊಂದಿಗೆ ಪ್ರವಾಸ ಮಾಡುವ, ಸರಕಾರ ನಡೆಸುವ, ಪಕ್ಷ ಸಂಘಟಿಸುವ ಅನೇಕ ಸಭೆ ಸಮಾರಂಭಗಳಲ್ಲಿ ವೇದಿಕೆ ಹಂಚಿಕೆಕೊಳ್ಳುವ, ಅವರೊಂದಿಗೆ ಊಟಮಾಡುವ, ನಗುವ ಬಹುದೊಡ್ಡ ಭಾಗ್ಯ ನನಗೆ ದೊರೆತಿದೆ. ಧಾರವಾಡ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ಬಾಲಿಕಯೊಬ್ಬಳ್ಳು ಶಾಲೆಗೆ ಹೋಗಲು ಸೈಕಲ್ ಬೇಕು ಎಂದು ತಂದೆ ಎದುರು ಕಣ್ಣೀರು ಹಾಕುವು ದನ್ನು ಪ್ರತ್ಯಕ್ಷವಾಗಿ ಕಂಡ ಯಡಿಯೂರಪ್ಪ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಸೈಕಲು ನೀಡುವ ಮಹತ್ವದ ಯೋಜನೆ ಜಾರಿಗೆ ತಂದರು.

ಕೆ.ಎಂ.ಎಫ್ ಗೆ ಹಾಲು ಪೂರೈಸುವ ರೈತರಿಗೆ ಲೀಟರಿಗೆ 2 ರು. ಸಬ್ಸಿಡಿ ಜಾರಿ ಮಾಡಿದರು. ಇದರ ಲಾಭ ನೇರವಾಗಿ ಕೃಷಿ ಮಹಿಳೆಯ ರಿಗೆ ಲಭಿಸಿತು. ಶಿಕಾರಿಪುರದ ರೈತನೊಬ್ಬನ ಟ್ರ್ಯಾಕ್ಟರ್ ಹರಾಜು ಹಾಕುವ ಸಂಗತಿ ತಿಳಿದಾಗ ಇಂಥ ರೈತರಿಗೆ ನೇರವಾಗಬೇಕು ಎಂದು ಸಾಲಮನ್ನಾ ಕಾರ್ಯಕ್ರಮ ಘೋಷಿಸಿದರು. ಯಡಿಯೂರಪ್ಪ ಸದಾ ಬಡವರ, ನೊಂದವರ, ಶೋಷಣೆಗೆ ಒಳಗಾದವರ, ತುಳಿತಕ್ಕೊಳ ಗಾದವರ, ದೀನ – ದಲಿತರ ಪರವಾಗಿ ಧ್ವನಿ ಎತ್ತುವ ದಿಟ್ಟ ಹೋರಾಟಗಾರ. ಜನರ ನೋವು ತನ್ನ ನೋವು ಎಂದು ಭಾವಿಸುವ ಅಃತಕರಣವುಳ್ಳವರು.

ಪ್ರತ್ಯೇಕ ಕೃಷಿ ಬಜೆಟ್ ಎಂಬ ಅದ್ಭುತ ಕಲ್ಪನೆಯ ಹರಿಕಾರ ಯಡಿಯೂರಪ್ಪನವರು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಜನ್ 2020 ರೂಪಿಸಿದರು. ದೇಶದಲ್ಲಿ ಮೊದಲ ಬಾರಿಗೆ ಶೇ.2 ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿದರು. ಬೀಳಗಿಯ ನಮ್ಮ ಮನೆಗೆ
ಆಗಮಿಸಿದಾಗ ಅಲ್ಲಿಯ ಸ್ಥಳೀಯ ಪತ್ರಕರ್ತರು ನಿಮ್ಮ ಯಶಸ್ಸಿನ ಗುಟ್ಟು ಯಾವುದು ಎಂದು ಪ್ರಶ್ನಿಸಿದ್ದರು. ಕಠಿಣ ದುಡಿಮೆ ಸದಾ ಸಂಚಾರ, ಸಮಾಜಕ್ಕೆ ಯಾವಾಗಲೂ ಒಳ್ಳೆಯದನ್ನು ಬಯಸುವುದು ಎಂದು ಬಿ.ಎಸ್.ವೈ ಉತ್ತರಿಸಿದರು.

ಬಿ.ಎಸ್.ವೈ. ಮುಖ್ಯಮಂತ್ರಿಯಾಗಿ ಮಾಡಿದಷ್ಟು ಜನಪರ ಕೆಲಸಗಳನ್ನು ಕರ್ನಾಟಕದ ಯಾವುದೇ ಮುಖ್ಯಮಂತ್ರಿ ಮಾಡಿಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಅವರು ಯಾವುದೇ ಸಭೆಯಲ್ಲಿ ಭಾಗವಹಿಸಿರಲಿ ಅಲ್ಲಿ ಚಪ್ಪಾಳೆ ಸುರಿಮಳೆ ತುಂಬಿರುತ್ತದೆ. ಜನ ತುಂಬು ಆಸಕ್ತಿಯಿಂದ ಬಿ.ಎಸ್.ವೈಯವರೇ ಬಿ.ಜೆ.ಪಿ ಅಧ್ಯಕ್ಷರಾಗಬೇಕೆಂದು ಬಯಸುತ್ತಿದ್ದಾರೆ. ಅವರು ನನ್ನನ್ನು ಬಹಳ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ನಾನು ಭೇಟಿಯಾದಾಗಲೆಲ್ಲ ಮುರುಗೇಶ ಮತ್ತೆ ಯಾವ ಕಾರ್ಖಾನೆ ಕಟ್ಟುತ್ತೀದ್ದಿರೀ ಎಂದೇ ಮಾತು
ಆರಂಭಿಸುತ್ತಾರೆ. ಅವರು ಬೇಸರಗೊಂಡದ್ದನ್ನು, ನಿರಾಸೆಗೊಂಡದ್ದನ್ನು ನಾನು ಒಮ್ಮೆಯೂ ನೋಡಿಲ್ಲ.

ನಾಯಕನಾದವನು ಎಂಥ ಒತ್ತಡದಲ್ಲಿಯೂ ಯೋಚಿಸುವವ ಮನಸ್ಸು ಕೇಳುವ ಕಿವಿ ಕಳೆದುಕೊಳ್ಳಬಾರದು. ಜನರು ಹೇಳುವ ಮಾತು ಕಿವಿಗೊಟ್ಟು ಕೇಳುವ ಸಂಯಮ ಸಮಾಧಾನ ರೂಢಿಸಿಕೊಳ್ಳಬೇಕು ಎಂದು ಅವರು ತಮ್ಮ ಸಂಗಾತಿಗಳಿಗೆ ಹೇಳುತ್ತಾರೆ.