ಮೂರ್ತಿ ಪೂಜೆ
ಆರ‍್.ಟಿ.ವಿಠ್ಠಲಮೂರ್ತಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ವಿರುದ್ಧ ತಿರುಗಿ ಬೀಳಲಿದ್ದಾರೆಯೇ? ಹಾಗೆಂಬುದೊಂದು ಪ್ರಶ್ನೆ ರಾಜಕೀಯ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಅಂದ ಹಾಗೆ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಸಂದರ್ಭ ಇದೆಯಲ್ಲ?ಅದನ್ನು ಪಕ್ಷದ ವರಿಷ್ಠರು ಬಣ್ಣಿಸಿದ ರೀತಿ ಬೇರೆ. ಅವರ ಪ್ರಕಾರ, ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದು. ಆದರೆ ಅವತ್ತು ರಾಜೀನಾಮೆ ನಿರ್ಧಾರವನ್ನು ಪ್ರಕಟಿಸುವಾಗ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಅವರ ರಾಜಕೀಯ ಬದುಕನ್ನು ನೋಡಿದವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತದೆ. ಅದೆಂದರೆ,ಅವರು ಅಳು ಮತ್ತು ನಗುವಿನ ವಿಷಯದಲ್ಲಿ ಧಾರಾಳಿಯಲ್ಲ.
2008 ರಲ್ಲಿ ಮುಖ್ಯಮಂತ್ರಿಯಾದ ನಂತರದ ದಿನಗಳಲ್ಲಿ ಅವರ ವಿರುದ್ಧ ಗಣಿರೆಡ್ಡಿಗಳು ಬಂಡಾಯ ಹೂಡಿದ ರಲ್ಲ? ಆ ಬಂಡಾಯ ವಿಕೋಪಕ್ಕೆ ಹೋಗಿ ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿ ಮಂಡಲದಿಂದ ಕೈ ಬಿಡುವ ಷರತ್ತಿಗೆ ಒಳಗಾದಾಗ ಅವರು ಕಣ್ಣೀರು ಹಾಕಿದ್ದರು. ಅದೇ ರೀತಿ 2018 ರಲ್ಲಿ ಅತಂತ್ರ ಫಲಿತಾಂಶ ಬಂದು ಅತ್ಯಂತ ದೊಡ್ಡ ಶಕ್ತಿಯಾಗಿದ್ದ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದರಲ್ಲ? ಆಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲಾಗದೆ ಉರುಳಿದ್ದರು.
ಆ ಸಂದರ್ಭದಲ್ಲೂ ಸಂಕಟ ತಡೆಯಲಾಗದೆ ಅವರು ಕಣ್ಣೀರು ಹಾಕಿದ್ದರು. ಇದನ್ನು ಬಲ್ಲವರಿಗೆ ಈ ಬಾರಿಯ ಅವರ ಅಳು ಸಹಜವಾಗಿ ಗೋಚರಿಸಲು ಸಾಧ್ಯವೇ ಇಲ್ಲ. ಅರ್ಥಾತ್, ಮುಖ್ಯಮಂತ್ರಿ ಹುದ್ದೆಯಿಂದ ಬಲವಂತ ವಾಗಿ ಕೆಳಗಿಳಿದ ಯಡಿಯೂರಪ್ಪ ಒಳಗೊಳಗೇ ಕುದಿಯುತ್ತಿದ್ದಾರೆ. ತಾವು ಅಧಿಕಾರಕ್ಕೆ ತಂದ ಸರಕಾರವನ್ನು ಮುನ್ನಡೆಸಲಾಗದ ಪರಿಸ್ಥಿತಿಯನ್ನು ಸಹಿಸಲಾಗದೆ ಕನಲಿದ್ದಾರೆ.
ಇಂತಹ ಸಂದರ್ಭದಲ್ಲೇ ಜೆಡಿಎಸ್ ನಾಯಕ,ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಡಿಸಿದ ಬಾಂಬು ರಾಜಕೀಯ ವಲಯ ಬೆಚ್ಚಿ ಬೀಳುವಂತೆ
ಮಾಡಿದೆ. ಕುಮಾರಸ್ವಾಮಿ ಅವರ ಪ್ರಕಾರ, ಯಡಿಯೂರಪ್ಪ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಲು ಬಯಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರ ಜತೆ ಮಾತುಕತೆ ನಡೆಸಿದ್ದಾರೆ. ಯಾವಾಗ ಈ ಕುರಿತ ಮಾಹಿತಿ ಲಭ್ಯವಾಯಿತೋ?ಆಗ
ಬಿಜೆಪಿ ವರಿಷ್ಠರು ಯಡಿಯೂರಪ್ಪ ಆಪ್ತರ ವಿರುದ್ಧ ಐಟಿ ದಾಳಿ ನಡೆಯುವಂತೆ ನೋಡಿಕೊಂಡರು. ಅರ್ಥಾತ್, ಇದು ಯಡಿಯೂರಪ್ಪ ಅವರನ್ನು ನಿಯಂತ್ರಿಸಲು ನಡೆದ ಆಟ ಎಂಬುದು ಕುಮಾರಸ್ವಾಮಿ ಅವರ ಮಾತು.
ಈ ಮಾತನ್ನು ಹಿಡಿದು ಇನ್ನಷ್ಟು ಆಳಕ್ಕೆ ಧುಮುಕಿದರೆ ಹಲವು ಕುತೂಹಲಕಾರಿ ಅಂಶಗಳು ಹೊರಬೀಳುತ್ತವೆ. ಅದರ ಪ್ರಕಾರ, ಮುಂದಿನ ಕೆಲ ಕಾಲದಲ್ಲಿ ಹೊಸ ಪಕ್ಷ ಕಟ್ಟಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಹೀಗೆ ಹೊಸ ಪಕ್ಷ ಕಟ್ಟಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಅವರ ಯೋಚನೆ. ಇಂತಹ ಮೈತ್ರಿಯಿಂದ ಐವತ್ತು ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದರೆ ಗಣನೀಯ ಸ್ಥಾನಗಳನ್ನು ಗೆಲ್ಲುವುದು ಖಚಿತ. ಇದಾದ ನಂತರ ಸಿದ್ದರಾಮಯ್ಯ ಸಿಎಂ,ತಮ್ಮ ಪುತ್ರ
ವಿಜಯೇಂದ್ರ ಡಿಸಿಎಂ ಆಗಬೇಕು ಎಂಬುದು ಅವರ ಪ್ಲಾನು. ಇದರ ಸ್ವರೂಪದ ಬಗ್ಗೆ ಯಾರೇನೇ ಹೇಳಲಿ,ಆದರೆ ಇದು ಸಾಧಿತವಾದರೆ ಅದೊಂದು ಡೆಡ್ಲಿ ಕಾಂಬಿನೇಷನ್ ಎಂಬುದು ಮಾತ್ರ ನಿಶ್ಚಿತ.
ಅಂದ ಹಾಗೆ ಯಡಿಯೂರಪ್ಪ ಹೀಗೆ ಹೊಸ ಪಕ್ಷ ಕಟ್ಟಲು ಮುಂದಾದರೆ ಬಿಜೆಪಿ ಹೈಕಮಾಂಡ್ ಸುಮ್ಮನೆ ಇರುತ್ತದೆ ಎಂದೇನಲ್ಲ. ಹಾಗಂತ ಹೈಕಮಾಂಡ್‌ಗೆ ಹೆದರಿ
ಯಡಿಯೂರಪ್ಪ ಸುಮ್ಮನಿರುತ್ತಾರೆ ಎಂದೂ ಅಲ್ಲ. ಹಾಗೊಂದು ವೇಳೆ ಯಡಿಯೂರಪ್ಪ ತಿರುಗಿ ಬಿದ್ದರು ಅಂದುಕೊಳ್ಳಿ. ಅಲ್ಲಿಗೆ ಕರ್ನಾಟಕದ ಇತಿಹಾಸದಲ್ಲಿ
ಹೈಕಮಾಂಡ್ ಸಂಸ್ಕೃತಿಯ ವಿರುದ್ಧ ಎರಡು ಬಾರಿ ತಿರುಗಿ ಬಿದ್ದ ಮೊದಲ ನಾಯಕರಾಗಿ ಅವರು ಪ್ರತಿಷ್ಠಾಪಿತರಾಗುತ್ತಾರೆ. ಈ ಹಿಂದೆ 1969 ರಲ್ಲಿ ನಿಜಲಿಂಗಪ್ಪ ಅವರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿದ್ದರು.
1980 ರಲ್ಲಿ ಸಿಎಂ ಹುದ್ದೆಯಿಂದ ಕೆಳಗಿಳಿದ ದೇವರಾಜ ಅರಸರೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿದ್ದರು. 1992 ರಲ್ಲಿ ಪ್ರಧಾನಿ ಪಿ.ವಿ.ನರ ಸಿಂಹರಾಯರ ಅವಕೃಪೆಗೆ ಗುರಿಯಾಗಿ ಕೆಳಗಿಳಿದ ಬಂಗಾರಪ್ಪ ಕೂಡಾ ಕೆಸಿಪಿ ಕಟ್ಟಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರು. ಆದರೆ ಹೀಗೆ ಹೈಕಮಾಂಡ್ ವಿರುದ್ಧ ಮುಗಿ ಬಿದ್ದ ಈ ನಾಯಕರು ಪಕ್ಷಕ್ಕೆ ಘಾಸಿ ಮಾಡಿದ್ದು ನಿಜವಾದರೂ, ಅಂತಿಮವಾಗಿ ಅವರ ರಾಜಕೀಯ ಬದುಕು ಶಕ್ತಿ ಕಳೆದುಕೊಂಡಿತ್ತು.
ಇನ್ನು ಯಡಿಯೂರಪ್ಪ ಅವರೂ 2013 ರಲ್ಲಿ ಬಿಜೆಪಿ ಹೈಕಮಾಂಡ್‌ಗೆ ಸೆಡ್ಡು ಹೊಡೆದು ಕೆಜೆಪಿ ಬಾವುಟ ಹಿಡಿದಿದ್ದರು. ಅದರ ಫಲವಾಗಿ ಬಿಜೆಪಿ ಹೀನಾಯ ಸೋಲು ಕಂಡಿದ್ದು ಇತಿಹಾಸ. ಹೀಗಾಗಿ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಮೇಲೇಳುವುದು ಕಷ್ಟ ಎಂದರಿತ ಬಿಜೆಪಿ ಹೈಕಮಾಂಡ್ ಪುನಃ ಅವರಿಗೆ ರೆಡ್ ಕಾರ್ಪೆಟ್ ಹಾಸಿತ್ತು. ಹೀಗೆ ರೆಡ್ ಕಾರ್ಪೆಟ್ ಹಾಕಿದ ಪಕ್ಷವೇ ಈಗ ಉಲ್ಟಾ ಹೊಡೆದಿರುವುದರಿಂದ ಯಡಿಯೂರಪ್ಪ ಕನಲಿದ್ದಾರೆ. ಆದರೆ ಈ ಬಾರಿ ಅವರಿಗೆ ಬಿಜೆಪಿ ಹೈಕಮಾಂಡ್‌ಗೆ ತಿರುಗೇಟು ನೀಡುವುದು ಎಷ್ಟು ಮುಖ್ಯವೋ? ತಮ್ಮ ಮಗ ವಿಜಯೇಂದ್ರ ಅವರ ರಾಜಕೀಯ ಬದುಕಿಗೆ ನೆಲೆ ಒದಗಿಸುವುದೂ ಅಷ್ಟೇ ಮುಖ್ಯ.
ಹೀಗಾಗಿ ಮಗನನ್ನು ಸಿಎಂ ಮಾಡಲು ಹಿಂದೆ ರೂಪಿಸಿದ್ದ ಬ್ಲೂಪ್ರಿಂಟಿನ ಫೇಸ್ ಕಟ್ಟು ಬದಲಿಸಿ ಅವರು ಹೊಸ ಲೆಕ್ಕಾಚಾರಕ್ಕೆ ಇಳಿದಿದ್ದಾರೆ. ಈ ಲೆಕ್ಕಾಚಾರ ಈಡೇರಲು ಅವರಿಗೀಗ ಕಾಂಗ್ರೆಸ್ ಜತೆಗೆ ಮೈತ್ರಿ ಬೇಕು. ಇದು ಸಧ್ಯಕ್ಕೆ ಸಿಗುತ್ತಿರುವ ಮಾಹಿತಿ. ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೋ ಗೊತ್ತಿಲ್ಲ, ಆದರೆ ರಾಜ್ಯ ರಾಜಕೀಯದ ಚಿತ್ರವನ್ನು ಅದು ಬದಲಿಸಿರುವುದು ಸುಳ್ಳಲ್ಲ