Sunday, 15th December 2024

ಬೊಮ್ಮಾಯಿಗೆ ಧಕ್ಕೆಯಾಗುವುದೇ ಬಿಎಸ್’ವೈ ನೆರಳೆಂಬ ಇಮೇಜ್

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ‘ಆ ಸ್ಥಾನಕ್ಕಾಗಿ’ ಎಷ್ಟು ಗೊಂದಲ ಸೃಷ್ಟಿಯಾಗುವುದೋ ಎನ್ನುವ ಆತಂಕ ಕೆಲವರಿಗೆ ಇತ್ತು. ಆದರೆ ಈ ಯಾವುದಕ್ಕೂ ಆಸ್ಪದ ಕೊಡದ ಬಿಜೆಪಿ ವರಿಷ್ಠರು, ಯಡಿಯೂರಪ್ಪನವರ ಆಪ್ತರೇ ಆಗಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಯನ್ನಾಗಿ ಪ್ರತಿಷ್ಠಾಪಿಸಿದರು.

ಮೇಲ್ನೋಟಕ್ಕೆ ಹೈಕಮಾಂಡ್‌ನ ಈ ಆಯ್ಕೆಯಿಂದ ಇತ್ತ ಯಡಿಯೂರಪ್ಪ ಅವರಿಗೂ ಬೇಸರವಿಲ್ಲ. ಅತ್ತ ಲಿಂಗಾಯತ, ಉತ್ತರ ಕರ್ನಾಟಕದವರಿಗೂ ಅಸಮಾ ಧಾನವಿಲ್ಲ. ಇನ್ನು ಎಲ್ಲರನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಚಾಕಚಕ್ಯತೆ ಇರುವುದರಿಂದ ಬಿಜೆಪಿಯಲ್ಲಿಯೂ ಹೆಚ್ಚು ವಿರೋಧ ವ್ಯಕ್ತವಾಗಲಿಲ್ಲ. ಆ ಮಟ್ಟಿಗೆ ಎಲ್ಲವೂ ಸುಖಾಂತ್ಯ ಎಂದು ಹೇಳಲಾಗಿದೆ. ಬಿಜೆಪಿ ವರಿಷ್ಠರು ಅಳೆದು-ತೂಗಿ, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳುವ ವ್ಯಕ್ವಿತ್ವ, ಯಡಿಯೂರಪ್ಪ ಅವರನ್ನು ಬಳಸಿಕೊಂಡು ಮುಂದಿನ ಚುನಾವಣೆಗೆ ಸಂಘಟನೆಗೆ ಧಕ್ಕೆಯಾಗದಂತೆ ಬಸವರಾಜ ಬೊಮ್ಮಾಯಿ ಅವರನ್ನು ಏನೋ ಮುಖ್ಯಮಂತ್ರಿಯನ್ನಾಗಿ ಕೂರಿಸಿದೆ. ಆದರೆ ‘ಯಡಿಯೂರಪ್ಪನವರ ನೆರಳು’ ಎಂದೇ ಹೇಳುವ ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿಯಾದಷ್ಟು ಸುಲಭವಾಗಿ, ಮುಖ್ಯಮಂತ್ರಿ ಕಾರ್ಯಭಾರ ಮಾಡುವುದಕ್ಕೆ ಸಾಧ್ಯವೇ? ಎನ್ನುವ ಪ್ರಶ್ನೆಗಳು ಈಗಾಗಲೇ ಶುರುವಾಗಿದೆ.

ಈ ಹಿಂದೆ ಸಂಧಾನಕಾರರಾಗಿ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿರುವ ಬೊಮ್ಮಾಯಿ ಅವರಿಗೆ ಅದೇ ಒಡನಾಟವನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಮುಂದುವರಿಸಲು ಸಾಧ್ಯವೇ ಎನ್ನುವ ಹಲವರಲ್ಲಿದೆ. ಹೌದು, ಈ ಪ್ರಶ್ನೆ ಏಳುವುದಕ್ಕೆ ಕಾರಣ ಇಲ್ಲವೆಂದಲ್ಲ. ಏಕೆಂದರೆ ಮೊದಲೇ ಹೇಳಿದಂತೆ ಯಡಿಯೂರಪ್ಪ ನೆರಳು ಎನ್ನುವುದು ಬಸವರಾಜ ಬೊಮ್ಮಾಯಿ ಅವರಿಗೆ ‘ವರ’ ಮತ್ತು ‘ಶಾಪ’ ಎಂದರೆ ತಪ್ಪಾಗುವುದಿಲ್ಲ. ಯಡಿಯೂರಪ್ಪ ನಂತರ ಅವರ ಆಪ್ತರನ್ನೇ ಕೂರಿಸುವ ಮೂಲಕ, ಪಕ್ಷದ ವರಿಷ್ಠರು ಯಡಿಯೂರಪ್ಪನವರನ್ನು ಮುಂದಿನ ಚುನಾವಣೆ ವರೆಗೆ ಎದುರು ಹಾಕಿಕೊಳ್ಳುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿರುವುದು ಸತ್ಯ. ಆದ್ದರಿಂದಲೇ ಬಸವರಾಜ ಬೊಮ್ಮಾಯಿ ಅವರಿಗೆ ಈ ಸ್ಥಾನ ಸುಲಭದ ತುತ್ತಾಗಿತ್ತು ಎನ್ನುವುದು ಹಲವರ ವಾದ.

ಈ ಮಾತಿಗೆ ಕೆಲವರ ವಿರೋಧವೂ ಇದೆ. ಯಡಿಯೂರಪ್ಪ ಅವರ ಆಪ್ತ ಎನ್ನುವ ಒಂದೇ ಕಾರಣಕ್ಕೆ ಬೊಮ್ಮಾಯಿ ಅವರಿಗೆ ಈ ಸ್ಥಾನ ಸಿಕ್ಕಿಲ್ಲ. ಬದಲಿಗೆ ವರಿಷ್ಠರು ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಈ ತೀರ್ಮಾನ ಕೈಗೊಂಡಿದೆ. ಬೊಮ್ಮಾಯಿ ಅವರು ಎಲ್ಲರನ್ನು ತೂಗಿಸಿಕೊಂಡು ಹೋಗುವ ಛಾತಿಯಿದೆ. ಆದ್ದರಿಂದ ಅವರಿಗೆ ಈ ಸ್ಥಾನ ಸಿಕ್ಕಿದೆ ಎನ್ನುವ ವಾದವನ್ನು ಮಂಡಿಸಿದ್ದಾರೆ. ಅದನ್ನು ಒಪ್ಪೋಣ. ಆದರೆ ಎರಡೂ ವಾದದ ಗೂಡಾರ್ಥ ‘ಮುಂದಿನ ಚುನಾವಣೆಯಲ್ಲಿ ಸಮಸ್ಯೆಯಾಗದಿರಲಿ’ ಎನ್ನುವುದಾಗಿದೆ.

ಆದರೆ ಇಲ್ಲಿ ಇಕ್ಕಟ್ಟಿಗೆ ಸಿಲುಕುವುದು ಬಸವರಾಜ ಬೊಮ್ಮಾಯಿ ಅವರು. ಏಕೆಂದರೆ ಯಡಿಯೂರಪ್ಪ ಅವರನ್ನು ಬಳಸಿಕೊಂಡೇ ಅವರು ಲಿಂಗಾಯತ ಸಮುದಾ
ಯದ ಮತಗಳನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಬೇಕಿದೆ ಹೊರತು, ಯಡಿಯೂರಪ್ಪ ಅವರನ್ನು ಮೀರಿ ಲಿಂಗಾಯತ ನಾಯಕ ಎಂದು ಗುರುತಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಅವರು ಸದ್ಯಕ್ಕಿಲ್ಲ. ಆದರೆ ಯಡಿಯೂರಪ್ಪ ಅವರನ್ನೇ ಎಲ್ಲದ್ದಕ್ಕೂ ಮಾತನಾಡಿಸಲು ಶುರು ಮಾಡಿದರೆ, ದೆಹಲಿ ನಾಯಕರಿಗೆ ಹಾಗೂ ರಾಜ್ಯ ದಲ್ಲಿರುವ ಯಡಿ ಯೂರಪ್ಪ ವಿರೋಧಿ ಬಣದ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ.

ಹಾಗೆಂದ ಮಾತ್ರಕ್ಕೆ ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸಿದರೆ, ಮುಂದಿನ ಕೆಲವೇ ತಿಂಗಳಲ್ಲಿ ಬರಲಿರುವ ಹಾನಗಲ್ ಉಪಚುನಾವಣೆಯಲ್ಲಿ ಅದರ ‘ಸೈಡ್ ಎಫೆಕ್ಟ್’ ತೋರಿಸುವ ಸಾಮರ್ಥ್ಯ ಯಡಿಯೂರಪ್ಪ ಅವರಿಗಿದೆ. ಏಕೆಂದರೆ ಹಾನಗಲ್ ಲಿಂಗಾಯತ ಸಮುದಾಯದ ವೋಟ್ ಇರುವ ಕ್ಷೇತ್ರ. ಇಲ್ಲಿ ಲಿಂಗಾಯತರು ಯಾರ ಪರವಾಗಿ ನಿಲ್ಲುವರೋ ಅವರೇ ಗೆಲ್ಲುವುದು ಎಂದು ಅಂಕಿ-ಅಂಶಗಳು ಹೇಳುತ್ತವೆ.

ಸಾರ್ವತ್ರಿಕ ವಿಧಾನಸಭೆ, ಲೋಕಸಭಾ ಚುನಾವಣೆ ಬರಲು ಒಂದೆರಡು ವರ್ಷವಿದ್ದರೂ, ಮುಂದಿನ ದಿನದಲ್ಲಿ ಸಾಲು ಸಾಲು ಚುನಾವಣೆಗಳಿವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಪಕ್ಷದ ಚಿಹ್ನೆಯಲ್ಲಿಯೇ ಅಭ್ಯರ್ಥಿಗಳು ಸ್ಪಽಸುವುದರಿಂದ, ಈ ಚುನಾವಣೆ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತದೆ. ಆದ್ದರಿಂದ ಈ ಚುನಾವಣೆಯನ್ನು ಗೆಲ್ಲಿಸಿಕೊಂಡು ಬರಬೇಕಾದ ಒತ್ತಡ ಇದೀಗ ಬಸವರಾಜ ಬೊಮ್ಮಾಯಿ ಅವರಿಗೆ ಇದೆ. ಆದರೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರೂ ‘ಮಾಸ್ ಲೀಡರ್’ ಆಗಿ ಗುರುತಿಸಿಕೊಂಡಿಲ್ಲ. ಈ ಕಾರಣಕ್ಕೆ ಅವರಿಗೆ ಯಡಿಯೂರಪ್ಪ ಅವರ ಸಹಾಯ ಅನಿವಾರ್ಯ.

ಅದರಲ್ಲಿಯೂ ಆಷಾಢ ಮುಗಿಯುತ್ತಿದ್ದಂತೆ, ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಈ ಹಂತದಲ್ಲಿ ಅವರನ್ನು ಎದುರು ಹಾಕಿ ಕೊಂಡು ಚುನಾವಣೆ ನಡೆಸಲು ಬೊಮ್ಮಾಯಿ ಅವರಿಗೆ ಸಾಧ್ಯವೇ? ಹಾಗೆಂದು ಯಡಿಯೂರಪ್ಪ ಅವರನ್ನು ಎಲ್ಲದಕ್ಕೂ ನೆಚ್ಚಿಕೊಂಡು ಕೂರುವಂತಿಲ್ಲ. ಕೇಂದ್ರದ ವರಿಷ್ಠರು ಯಡಿಯೂರಪ್ಪ ಅವರ ವಿರುದ್ಧ ಮಾತನಾಡದೇ ಇದ್ದರೂ, ಅವರ ಪರವಾಗಿಯಂತೂ ಸಂಪೂರ್ಣವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಡಿಯೂರಪ್ಪ ಬಗ್ಗೆ ವಿಶೇಷ ಗೌರವ, ಕಾಳಜಿಗಳಿದ್ದರೂ, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರಿಗೆ ಅಷ್ಟಕಷ್ಟೆ. ಆದ್ದರಿಂದ ಯಡಿಯೂರಪ್ಪ ಅವರ ನೆರಳಾಗಿ ಈ ಬಾರಿ ಕೆಲಸ ಮಾಡಲು ಸಾಧ್ಯವಿಲ್ಲ.

ಇನ್ನು ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರದ ಜತೆಜತೆಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗಿದೆ. ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿ ಹೇಗಿರಬೇಕು ಎನ್ನುವುದು ಇದೀಗ ಬೊಮ್ಮಾಯಿ ಅವರು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಜತೆ ಕೂತು ನೀಲನಕ್ಷೆ ಸಜ್ಜುಗೊಳಿಸಬೇಕಿದೆ. ಈ ಅವಧಿಯಲ್ಲಿ ಯಡಿಯೂರಪ್ಪ ಅವರ ಜತೆಗಿದ್ದ ಲಿಂಗಾಯತ ಮತಬ್ಯಾಂಕ್‌ವನ್ನು ಸೂಕ್ಷ್ಮವಾಗಿ ‘ಬಿಜೆಪಿ’ಗೆ ವರ್ಗಾಯಿಸ ಬೇಕಿದೆ. ಯಡಿಯೂರಪ್ಪ ಇಲ್ಲದಿದ್ದರೂ, ಗಾಯತರ ವೋಟುಗಳು ಕಮಲಕ್ಕೆ ಬೀಳುವಂತೆ ನೋಡಿಕೊಳ್ಳಬೇಕಾಗಿದೆ.

ಬೊಮ್ಮಾಯಿ ಸಹ ಲಿಂಗಾಯತರಾಗಿರುವ ಕಾರಣಕ್ಕೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ಈ ರೀತಿ ಯಡಿಯೂರಪ್ಪ ಅವರ ಇಮೇಜ್ ಅನ್ನು ಮೀರಿ
ಸಂಘಟನೆಗೆ ಹೋದರೆ, ಬಿಎಸ್‌ವೈ ಸುಮ್ಮನಿರುವರೇ ಎನ್ನುವ ಪ್ರಶ್ನೆ ಈಗಿದೆ. ಯಡಿಯೂರಪ್ಪ ಅವರ ಶಕ್ತಿಯಾಗಿರುವ ಲಿಂಗಾಯತ ವೋಟ್ ಬ್ಯಾಂಕ್ ಅವರ ಆಪ್ತನ ಮೂಲಕವೇ ಕಸಿಯುವ ವರಿಷ್ಠರ ನಡೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ನೋಡಬೇಕಿದೆ. ಇನ್ನು ಬೊಮ್ಮಾಯಿ ಅವರ ಆಯ್ಕೆಯ ಹಿಂದಿರುವ ಮತ್ತೊಂದು ಸೂಕ್ಷ್ಮ ಎಂದರೆ, ಜನತಾದಳದ ಮೂಲದವರಾದರೂ, ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ತತ್ತ್ವ ಸಿದ್ಧಾಂತಗಳಿಗೆ ಬಹುತೇಕ ಹೊಂದಿ
ಕೊಂಡರು. ಪಕ್ಷದ ವರಿಷ್ಠರಿಗೆ ಈಗ ಈ ರೀತಿ ಹೊಂದಿಕೊಳ್ಳುವ ನಾಯಕರ ಅಗತ್ಯವಿದೆ.

ಈ ಮಧ್ಯೆ ಸಚಿವ ಸಂಪುಟ ರಚನೆ ಎನ್ನುವ ಅತಿ ಜರೂರಿನ ಕಾರ್ಯಕ್ಕೆ ಬೊಮ್ಮಾಯಿ ಮುಂದಾಗಿದ್ದಾರೆ. ವರಿಷ್ಠರು ಯುವಕರಿಗೆ, ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎನ್ನುವ ಸೂಚನೆ ನೀಡುವ ಜತೆಜತೆಗೆ ಹಿರಿಯನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು ಎನ್ನುವ ಫರ್ಮಾನು ಹೊರಡಿಸಿರುವಂತಿದೆ. ಒಂದು ವೇಳೆ ಈ ರೀತಿಯೇ ಆದರೆ, ಸಂಪುಟ ರಚನೆಯಾದ ದಿನವೇ ಪಕ್ಷದಲ್ಲಿ ಆಂತರಿಕ ಬೇಗುದಿ ಶುರುವಾಗುವುದು ಖಚಿತ. ಇನ್ನು ಸೆಟ್ಟಲ್ ಆಗದ ಬೊಮ್ಮಾಯಿ ಅವರು ಈ ಜಟಿಲ ಸಮಸ್ಯೆಯನ್ನು ಯಡಿಯೂರಪ್ಪ ಅವರ ಬಳಿಯೇ ಹೋಗಬೇಕು.

ರಾಜಕೀಯ ಗೊಂದಲಗಳು ಒಂದು ಭಾಗವಾದರೆ, ನಿರೀಕ್ಷೆಗಿಂತ ಮೊದಲೇ ಕರ್ನಾಟಕಕ್ಕೆ ಮೂರನೇ ಅಲೆ ಅಪ್ಪಳಿಸುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಒಂದು ವೇಳೆ ಅವರು ಹೇಳಿದಂತೆಯೇ ಆದರೆ, ಮತ್ತೊಮ್ಮೆ ಲಾಕ್‌ಡೌನ್ ಅಲ್ಲದಿದ್ದರೂ, ಕೆಲವು ನಿರ್ಬಂಧವನ್ನು ಹೇರಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತದೆ. ಇದರೊಂದಿಗೆ ಸೋಂಕಿತರನ್ನು ನಿರ್ವಹಣೆ ಮಾಡಲು, ಅಗತ್ಯ ಆಕ್ಸಿಜನ್, ಬೆಡ್, ವೆಂಟಿಲೇಟರ್ ಇದೆಯೇ ಎನ್ನುವ ಆತಂಕವಂತೂ ಇದೆ. ಇನ್ನು ಜನರಿಗೆ ಕರೋನಾದಿಂದ ತಪ್ಪಿಸಿಕೊಳ್ಳಲು ಸ್ವಯಂ ಪ್ರೇರಿತರಾಗಿ ಮನೆಯಲ್ಲಿಯೇ ಇರುವಂತೆ ಹೇಳಿದರೆ ಅದನ್ನು ಕೇಳುವುದಿಲ್ಲ.
ಕಳೆದ ಎರಡು ಅಲೆಗಿಂತ ಮೂರನೇ ಅಲೆಯ ಹಬ್ಬುವ ವೇಗ ಭಾರಿ ಪ್ರಮಾಣದಲ್ಲಿದೆ ಎನ್ನುವ ಆತಂಕವಿದೆ.

ಈ ಎಲ್ಲ ಸಮಸ್ಯೆಗಳನ್ನು ಸರಕಾರ ಯಾವ ರೀತಿ ನಿರ್ವಹಿಸಲಿದೆ ಎನ್ನುವುದನ್ನು ಕಾದುನೋಡಬೇಕು. ಕರೋನಾದ ಜತೆಜತೆಗೆ ಆರ್ಥಿಕ ಪರಿಸ್ಥಿತಿ ಕೆಟ್ಟು ಕೂತಿದೆ. ಆದ್ದರಿಂದ ಖಾಲಿಯಾಗಿರುವ ಖಜಾನೆಯನ್ನು ತುಂಬಿಸುವ ಕೆಲಸವನ್ನು ಮಾಡಬೇಕಿದೆ. ಆದರೆ ಕರೋನಾ ಮೂರನೇ ಅಲೆ ಎಂದರೆ, ಮತ್ತೊಮ್ಮೆ ತೆರಿಗೆ ಪಾವತಿ ಸಹಜವಾಗಿ ಕುಂಠಿತವಾಗಲಿದೆ. ಈ ಎಲ್ಲ ಸವಾಲುಗಳ ನಡುವೆ ಅಽಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಯಡಿಯೂರಪ್ಪನವರ ನೆರಳು ಎನ್ನುವುದನ್ನು ಕೆಲವೆಡೆ ಸಾಬೀತುಪಡಿಸುವ ಜತೆಜತೆಗೆ ವರಿಷ್ಠರ ಮುಂದೆ ‘ನಾ ಸ್ವತಂತ್ರ್ಯ’ ಎನ್ನುವುದನ್ನು ತೋರಿಸಬೇಕಾದ ಅನಿವಾರ್ಯತೆಯಿದೆ.

ಇದರೊಂದಿಗೆ ಬಿಜೆಪಿ ಪಾಲಿಗೆ ಕರ್ನಾಟಕವೂ ಅಷ್ಟೇ ಮುಖ್ಯ. ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಭದ್ರಕೋಟೆ ಎನಿಸಿರುವ ಏಕೈಕ ರಾಜ್ಯ ಕರ್ನಾಟಕ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕರ್ನಾಟಕದಿಂದ 2019ರ ರೀತಿಯಲ್ಲಿ ಭರ್ಜರಿ ಗೆಲುವಿನ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. ಆದ್ದರಿಂದ ಯಡಿಯೂರಪ್ಪ ಸಂಘಟಿಸಿರುವ ರಾಜ್ಯ ಬಿಜೆಪಿಯನ್ನು ಅದೇ ರೀತಿ ಮುಂದುವರಿಸಿಕೊಂಡು ಹೋಗುವ ನಾಯಕತ್ವದ ಹುಡುಕಾಟದಲ್ಲಿ ಬೊಮ್ಮಾಯಿ ಅವರನ್ನು ಸದ್ಯಕ್ಕೆ ಕೂರಿಸಿದ್ದಾರೆ. ಆದರೆ ಈ ಹಾದಿ ಬಹುದೂರ ಸಾಗಬೇಕಿದೆ ಎನ್ನುವ ಅರಿವು ಸ್ವತಃ ಬಸವರಾಜ ಬೊಮ್ಮಾಯಿ ಅವರಿಗೂ ಇದೆ.

ಈ ದಾರಿ ಎಲ್ಲರೂ ಎನಿಸಿರುವಷ್ಟು ಸುಲಭದ ದಾರಿಯಲ್ಲ ಎನ್ನುವುದು ಬೊಮ್ಮಾಯಿ ಅವರಿಗೆ ಖಾತ್ರಿಯಾಗಿದೆ. ಒಂದೆಡೆ ಯಾರು ಇಲ್ಲದಿದ್ದರೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿರುವ ಬಿಜೆಪಿ ಹೈಕಮಾಂಡ್, ಮತ್ತೊಂದೆಡೆ ತಾನು ಹೇಳಿದಂತೆ ಕೇಳದಿದ್ದರೆ ತಿರುಗಿ ಬೀಳುವ ಹಠ ಸ್ವಭಾವದ ಯಡಿಯೂರಪ್ಪ. ಈ
ಎರಡೂ ಎತ್ತುಗಳನ್ನು ಒಂದೇ ವೇಗಕ್ಕೆ, ತಗೆದುಕೊಂಡು ಹೋಗಿ, ಬಿಜೆಪಿ ಎನ್ನುವ ಬಂಡಿಯನ್ನು ಮುಂದಿನ ಚುನಾವಣೆಯ ರೇಸ್‌ನಲ್ಲಿ ಗೆಲ್ಲಿಸಬೇಕಾದ ಮಹತ್ವದ
ಹೊಣೆಗಾರಿಕೆ ಬೊಮ್ಮಾಯಿ ಅವರ ಮೇಲಿದೆ.

ಅತ್ತ ದರಿ-ಇತ್ತ ಪುಲಿ ಎನ್ನುವ ಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರ ಪ್ರತಿ ನಡೆಯೂ ‘ತಂತಿಯ ಮೇಲಿನ ನಡೆಯಾಗಿರ ಬೇಕಾಗುತ್ತದೆ’. ಕೊಂಚ ಅತ್ತಿತ್ತ ವಾಲಾಡಿದರೂ ಕಂದಕಕ್ಕೆ ಬೀಳುವ ಅಥವಾ ಆಪತ್ತನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಈ ಅಗ್ನಿಪರೀಕ್ಷಾ ಕಾಲ ದಲ್ಲಿರುವ ಬಸವರಾಜ ಬೊಮ್ಮಾಯಿ ಅವರು, ‘ಕೆಸರಿನಲ್ಲಿರುವ ತಾವರೆ’ಯಾಗಿ ಯಡಿಯೂರಪ್ಪನವರ ಆರ್ಶೀವಾದವನ್ನು ಬಿಡದೇ, ವರಿಷ್ಠರ ಕೆಂಗಣ್ಣಿಗೂ ಗುರಿಯಾಗದೇ ರಾಜ್ಯಭಾರ ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.