Sunday, 15th December 2024

ಅವಿಶ್ವಾಸ ನಿರ್ಣಯ ತಂದದ್ದು ಕಾಂಗ್ರೆಸ್; ಶಕ್ತರಾಗಿದ್ದು ಯಡಿಯೂರಪ್ಪ

 ಅಶ್ವತ್ಥಕಟ್ಟೆ

ರಂಜಿತ್ ಹೆಚ್.ಅಶ್ವತ್ಥ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆಯೇ ಎಲ್ಲದಕ್ಕೂ ಆಧಾರ. ಆಡಳಿತ ಸ್ಥಾಪಿಸಬೇಕು ಎನ್ನುವ ಪಕ್ಷ ಶೇ.50ಕ್ಕಿಂತ ಹೆಚ್ಚು ಜನಪ್ರತಿನಿಧಿಗಳು ನಮ್ಮೊಂದಿಗಿದ್ದಾರೆ ಎಂದು ಸಾಬೀತು ಪಡಿಸಿದರೆ, ಮುಗಿಯಿತು ಅವರ ಕುರ್ಚಿ ಭದ್ರ. ಒಮ್ಮೆ ಈ ರೀತಿ ಬಹುಮತವನ್ನು ಸಾಬೀತುಪಡಿಸಿದರೆ, ಆ ಸರಕಾರ ಇನ್ನಾರು ತಿಂಗಳು ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯ ತೆಯಿರುವುದಿಲ್ಲ. ಇದು ಸಂವಿಧಾನದಲಿ ಸ್ಪಷ್ಟವಾಗಿದೆ.

ಸಂವಿಧಾನದಲ್ಲಿ ಬಹುಮತ ಸಾಬೀತುಪಡಿಸುವುದು ಮುಖ್ಯವೇ ಹೊರತು ಯಾವ ರೀತಿ ಎನ್ನುವುದಲ್ಲ. ಯಾವ ರೀತಿ ಬಹುಮತ ಸಾಬೀತುಪಡಿಸುತ್ತಾರೆ ಎನ್ನುವುದು ಆಯಾ ರಾಜಕೀಯ ಪಕ್ಷಗಳ ‘ನೈತಿಕ’ತೆಗೆ ಬಿಟ್ಟ ವಿಚಾರ. ಆದ್ದರಿಂದಲೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ‘ಸಾಂಧರ್ಬಿಕ ಶಿಶುವಾಗಿ’ ಜನಿಸಿತು. ಬಳಿಕ ಬಹುಮತವನ್ನು ಸಾಭೀತುಪಡಿಸಿದಕ್ಕೆ ಸಿದ್ದರಾಮಯ್ಯ ಅವರು ವ್ಯಾಖ್ಯಾನಿಸುವಂತೆ ‘ಅನೈತಿಕ ಶಿಶು’ ಜನಿಸಿದ್ದು. ಆದರೆ ಇದ್ಯಾವುದು ಸಂವಿಧಾನ ಅಥವಾ ನ್ಯಾಯಾಲಯದಲ್ಲಿ ನಡೆಯುವುದಿಲ್ಲ. ಅಲ್ಲಿ ನಡೆಯುವುದು ಏನಿದ್ದರು ನಂಬರ್ ಗೇಮ್.

ಆದ್ದರಿಂದಲೇ ಸ್ವಂತ ಬಲದ ಮೇಲೆ ಅಧಿಕಾರದಲ್ಲಿರುವ ಯಾವುದೇ ಸರಕಾರಗಳ ಮೇಲೆ ಅವಿಶ್ವಾಸ ನಿರ್ಣಯವನ್ನು
ಮಂಡಿಸುವ ಮೊದಲು ಪ್ರತಿಪಕ್ಷಗಳು ಹತ್ತ ಹಲವು ಮಗ್ಗಲಲ್ಲಿ ಯೋಚಿಸುತ್ತವೆ. ಕರ್ನಾಟಕದಲ್ಲಿ ಮಾತ್ರ, ಬಿಜೆಪಿ ಸ್ಪಷ್ಟ
ಬಹುಮತದೊಂದಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ನಡೆಸುತ್ತಿದ್ದರೂ, ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸುವ
ಮೂಲಕ ಅಚ್ಚರಿ ಮೂಡಿಸಿತ್ತು. ಈ ರೀತಿಯ ನಿರ್ಣಯ ಕೈಗೊಂಡು ಆರಂಭದಲ್ಲಿ ಏನೋ ಸಾಧಿಸಿದೆವು ಎಂದುಕೊಂಡರೂ, ಅಂತಿಮ ಕ್ಷಣದಲ್ಲಿ ಮುಜುಗರಕ್ಕೆ ಒಳಗಾಯಿತು ಎಂದರೂ ತಪ್ಪಿಲ್ಲ.

ಈ ರೀತಿಯ ಮಹತ್ವದ ತೀರ್ಮಾನ ಕೈಗೊಂಡಿದ್ದರ ಹಿಂದೆ ಹಲವು ರಾಜಕೀಯ ‘ಒಳ ಲೆಕ್ಕಾಚಾರ’ಗಳಿವೆ ಎನ್ನುವುದನ್ನು
ಬಿಡಿಸಿ ಹೇಳಬೇಕಿಲ್ಲ. ಅದರಲ್ಲೂ ರಾಜ್ಯದಲ್ಲಿರುವ 225 ಸಂಖ್ಯಾಬಲ ವಿಧಾನಸಭೆಯಲ್ಲಿ 116 ಶಾಸಕರನ್ನು ಹೊಂದಿ, ಸ್ಪಷ್ಟ
ಬಹುಮತ ಹೊಂದಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತು. ಆದರೆ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ
ನೀಡುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಮೊದಲ ದಿನವೇ ಹೊರಬಿತ್ತು. ಕಾಂಗ್ರೆಸ್‌ಗೆ 67 ಶಾಸಕರ ಸಂಖ್ಯಾಬಲವಿದ್ದರೂ ಈ
ರೀತಿ ನಿರ್ಣಯ ಕೈಗೊಂಡಿತ್ತು. ಈ ರೀತಿ ನಿರ್ಣಯದ ಹಿಂದೆ ಸರಕಾರವನ್ನು ಮುಜುಗರಕ್ಕೀಡು ಮಾಡಬೇಕೆಂಬ ಲೆಕ್ಕಾಚಾರವಿದೆ
ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಈ ರೀತಿ ಸರಕಾರವನ್ನು ಹಾಗೂ ವೈಯಕ್ತಿಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ
ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋಗಿ, ಸ್ವತಃ ಕಾಂಗ್ರೆಸ್ ನಾಯಕರು ಮುಖಭಂಗ ಅನುಭವಿಸುವಂತಾಯಿತು.

ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದ ರಾತ್ರಿಯೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ‘ದೊಡ್ಡ ಕಡತ’ದೊಂದಿಗೆ ಭೇಟಿಯಾಗಿ ಅರ್ಧ ತಾಸು ಸಮಾಲೋಚನೆ ಮಾಡುತ್ತಿದ್ದಂತೆ, ಕಾಂಗ್ರೆಸ್‌ಗೆ ಅರಿವಾಯಿತು ಜೆಡಿಎಸ್ ಇಡೀ ಪ್ರಕ್ರಿಯೆಯಲ್ಲಿ ‘ಪ್ರೇಕ್ಷಕನಾಗಿ’ ಇರುತ್ತದೆ ಎನ್ನುವುದು. ಆದರೂ ಅವಿಶ್ವಾಸ ನಿರ್ಣಯವನ್ನು ಮಂಡಿಸಿಯೇ ತೀರಬೇಕು ಎನ್ನುವ IDEA ಕಾಂಗ್ರೆಸ್‌ಗೆ ಏಕೆ ಬಂತು ಎನ್ನುವುದಕ್ಕೆ ಈಗಲೂ ಕಾಂಗ್ರೆಸ್ ನಾಯಕರು ಉತ್ತರಿಸುತ್ತಿಲ್ಲ. ಶನಿವಾರ ಮಧ್ಯಾಹ್ನದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿಶ್ವಾಸ ನಿರ್ಣಯವನ್ನು ಕೈಗೆತ್ತಿಕೊಂಡಾಗ, ‘ಇದು ಮುಗಿಯುವುದು ಯಾವಾಗ?’ ಎನ್ನುವ ಪ್ರಶ್ನೆ ಅಲ್ಲಿದ್ದ ಪ್ರತಿಯೊಬ್ಬರಲ್ಲಿಯೂ ಇತ್ತು.

ಈ ರೀತಿಯ ಪ್ರಶ್ನೆ ಉದ್ಭವಿಸಲು ಕಾರಣ ಇಲ್ಲವೆಂದಲ್ಲ. ಸಹಜವಾಗಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ದಿನಗಟ್ಟಲೆ
ನಡೆಯುವುದು ವಾಡಿಕೆ. ಆದರೆ ಈ ಬಾರಿಯ ಅವಿಶ್ವಾಸನ ನಿರ್ಣಯದ ಚರ್ಚೆ ಮಾತ್ರ ಕೆಲ ಗಂಟೆಗಳಿಗೆ ಸೀಮಿತವಾಗಿತ್ತು.
ಯಡಿಯೂರಪ್ಪ ಅವರ ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದೆ ಎನ್ನುವ ಅಂಶವನ್ನು ಪ್ರಸ್ತಾಪಿಸಿದ ಪ್ರತಿಪಕ್ಷ
ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊರತುಪಡಿಸಿದರೆ, ಇನ್ಯಾರು ಈ ಚರ್ಚೆಯಲ್ಲಿ
’ಅಧಿಕೃತವಾಗಿ’ ಭಾಗವಹಿಸಲಿಲ್ಲ. ಆದರೆ ಸಿದ್ದರಾಮಯ್ಯ ಮಾತನಾಡುವಾಗ ಮಧ್ಯೆ ಎದ್ದು ನಿಂತು ಗದ್ದಲವನ್ನು ಮಾತ್ರ
ಪ್ರತಿಪಕ್ಷದ ಶಾಸಕತು ಯತೇಚ್ಛವಾಗಿ ಮಾಡಿದರು.

ಪ್ರತಿಪಕ್ಷದವರಿಗೆ ತಾವೇನು ಕಡಿಮೆ ಎನ್ನುವ ರೀತಿಯಲ್ಲಿ ಬಿಜೆಪಿಗರು ಮಾಡಿದರು, ಎನ್ನುವುದು ಬೇರೆ ಮಾತು. ಈ ರೀತಿ ಕಾಂಗ್ರೆಸ್ ಸರಕಾರದ ಹಾಗೂ ಯಡಿಯೂರಪ್ಪ ಕುಟುಂಬದ ವಿರುದ್ಧ ಮುಗಿಬಿದ್ದು, ಯಡಿಯೂರಪ್ಪ ಅವರ ರಾಜೀನಾಮೆಯನ್ನು ಆಗ್ರಹಿಸಿದ ಕಾಂಗ್ರೆಸ್, ಇದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಯೋಚಿಸಲಿಲ್ಲವೇ ಎನ್ನುವ ಅನುಮಾನಗಳು ಇದೀಗ ಶುರುವಾಗುತ್ತಿದೆ. ಹಾಗೇ ನೋಡಿದರೆ ಕಾಂಗ್ರೆಸ್‌ನವರು ಮಂಡಿಸಿದ ಈ ಅವಿಶ್ವಾಸ ನಿರ್ಣಯದಿಂದ ಯಾರಿಗೆ ಲಾಭವಾಯಿತು ಎನ್ನುವ ಪ್ರಶ್ನೆಗಳು ಇದೀಗ ನಮ್ಮೆಲ್ಲರ ಮುಂದಿದೆ. ಕೆಲವರು ಬಿಜೆಪಿ ಯ ಅನೇಕ ಶಾಸಕರು ಕೋವಿಡ್ ನಿಂದಾಗಿ ಕ್ವಾರಂಟೈನ್ ಆಗಿದ್ದಾರೆ. ಇದನ್ನು ನೋಡಿಕೊಂಡು ಕಾಂಗ್ರೆಸ್ ನಾಯಕರು ಸರಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಶಾಸಕರಷ್ಟೇ ಕಾಂಗ್ರೆಸ್‌ನ ಶಾಸಕರು ಕೋವಿಡ್‌ನಿಂದ ಸದನದ ಕಡೆ ತಲೆಹಾಕಿರಲಿಲ್ಲ.

ಇದರೊಂದಿಗೆ ಕೇವಲ 67 ಸಂಖ್ಯಾಬಲದ ಕಾಂಗ್ರೆೆಸ್‌ನಿಂದ 116 ಸಂಖ್ಯಾಬಲದ ಬಿಜೆಪಿಯನ್ನು ಸೋಲಿಸುವುದು ಅಸಾಧ್ಯ ಎನ್ನುವುದು ಕಾಂಗ್ರೆಸ್ ತಿಳಿದಿರಲಿಲ್ಲ ಎಂದಲ್ಲ. ಇನ್ನು ಕೆಲವರು ಜೆಡಿಎಸ್‌ಗೆ ಟಾಂಗ್ ನೀಡಲು ಕಾಂಗ್ರೆಸ್ ಮಾಡಿದ ನಾಟಕ ವೆಂದರೆ, ಇನ್ನು ಕೆಲವರು ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಲು ಬಿಜೆಪಿಯ ಗುಂಪೊಂದು ಕಾಂಗ್ರೆಸ್‌ನಿಂದ ಈ ಕೆಲಸವನ್ನು ಮಾಡಿಸಿದೆ ಎನ್ನುತ್ತಿದ್ದಾರೆ. ಆದರೆ ಈ ಎಲ್ಲವನ್ನು ಹೇಗೆ ತಾಳೆ ಹಾಕಿ ನೋಡಿದರೂ, ಮುಂಗಾರು ಅಧಿವೇಶನ ದಲ್ಲಿ ಕಾಂಗ್ರೆಸ್ ಮಂಡಿಸಿದ ಈ ಅವಿಶ್ವಾಸ ನಿರ್ಣಯದಿಂದ ಲಾಭವಾಗಿದ್ದು ‘ಯಡಿಯೂರಪ್ಪ ಮತ್ತು ಯಡಿಯೂರಪ್ಪ ಅವರಿಗೆ ಮಾತ್ರ’ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಹೌದು, ಈ ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರಿಂದ ಸಹಾಯವಾಗಿದ್ದು ಯಡಿಯೂರಪ್ಪ ಅವರಿಗೆ ಮಾತ್ರ.
ತಮ್ಮ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಹಾಗೂ ಕೇಂದ್ರದ ನಾಯಕರಿಗೆ ‘ನಾನಿನ್ನು ಪ್ರಸ್ತುತ’ ಎನ್ನುವ ಸಂದೇಶವನ್ನು ರವಾನೆ ಮಾಡುವುದಕ್ಕೆ ಈ ಅವಿಶ್ವಾಸ ಪ್ರಹಸನವನ್ನು ಬಳಸಿಕೊಂಡರು. ಅಂದ ಮಾತ್ರಕ್ಕೆ ಯಡಿಯೂರಪ್ಪ
ಅವರೇ ಕಾಂಗ್ರೆಸ್ ಕಡೆಯಿಂದ ಈ ಅವಿಶ್ವಾಸ ನಿರ್ಣಯವನ್ನು ಕೊಡಿಸಿ, ಗೆಲುವು ಸಾಧಿಸಿ ಆರು ತಿಂಗಳು ತಮ್ಮ ಕುರ್ಚಿಯನ್ನು
ಭದ್ರಪಡಿಸಿಕೊಂಡಿದ್ದಾರೆ ಎಂದಲ್ಲ. ಬದಲಿಗೆ ಕಾಂಗ್ರೆಸ್‌ನವರ ಒಂದು WRONG MOVE’ ಸಮರ್ಥ ವಾಗಿ ಬಳಸಿಕೊಳ್ಳುವಲ್ಲಿ
ಯಡಿಯೂರಪ್ಪ ಯಶಸ್ವಿಯಾದರು ಎನ್ನಬಹುದು.

ಸಿದ್ದರಾಮಯ್ಯ, ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ಬಂದಾಗ ಕೆಲವರು ಸರಕಾರದ ವಿರುದ್ಧ ಈ ಅಸ್ತ್ರವನ್ನು ಪ್ರಯೋಗಿಸಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ. ಆದರೆ
ಈ ರೀತಿ ಮಾಡುವಾಗ ಕಾಂಗ್ರೆಸ್ ನಾಯಕರಲ್ಲಿ ಸರಕಾರವನ್ನು ಬೀಳಿಸಬೇಕು ಎನ್ನುವ ಉದ್ದೇಶಕ್ಕಿಂತ  ಹೆಚ್ಚಾಗಿ, ಸಾರ್ವಜನಿಕ ವಾಗಿ ಹಾಗೂ ಕಾಂಗ್ರೆಸ್ ವರಿಷ್ಠರ ಮುಂದೆ ‘ರಾಜ್ಯದಲ್ಲಿ ನಾವು ಏನೋ ಮಾಡುತ್ತಿದ್ದೇವೆ’ ಎನ್ನುವ ಶೋ ನೀಡಬೇಕಿತ್ತು. ಒಂದು ವೇಳೆ ಸರಕಾರವನ್ನು ಪತನಗೊಳಿಸಬೇಕು ಎನ್ನುವ ಉದ್ದೇಶವನ್ನು ಕಾಂಗ್ರೆಸ್‌ನವರು ಹೊಂದಿದ್ದರೆ ಸಹಜವಾಗಿಯೇ ಜೆಡಿಎಸ್
ಬೆಂಬಲ ಕೇಳುತ್ತಿದ್ದರು, ಅಥವಾ ತನ್ನ ಶಾಸಕರಿಗೆ ಕನಿಷ್ಟ ವಿಪ್ ಅನ್ನು ಆದರೂ ಜಾರಿಗೊಳಿಸುತ್ತಿದ್ದರು.

ಆದರೆ ಕಾಂಗ್ರೆಸ್ ಈ ಕೆಲಸವನ್ನು ಮಾಡಲಿಲ್ಲ. ಬದಲಿಗೆ ಈ ನಿರ್ಣಯದ ವೇಳೆ ಮಾತನಾಡುವಾಗ, ಯಡಿಯೂರಪ್ಪ ವಿರುದ್ಧ ಯಾವ ರೀತಿ ವಾಗ್ದಾಳಿ ನಡೆಸಬಹುದು ಎನ್ನುವ ಲೆಕ್ಕಾಚಾರದಲ್ಲಿಯೇ ಗಿರಿಕ್ಕಿ ಹೊಡೆದರು. ಆದರೆ ಚರ್ಚೆಗೆ ಅವಕಾಶ ಪಡೆಯುವ ತನಕ ನಡೆದುಕೊಂಡ ಜಾಣ್ಮೆೆ, ಮಾತನಾಡುವಾಗ ಕಳೆದುಕೊಂಡು ಪೇಚಿಗೆ ಸಿಲುಕಿತು. ಆದರೆ ಇದನ್ನು ಸಮರ್ಥವಾಗಿ ಬಳಸಿಕೊಂಡ ಯಡಿಯೂರಪ್ಪ ಅವರು, ಪುನಃ ‘ತಮ್ಮ ಸ್ಥಾಪನೆಯನ್ನು’ ಸಮರ್ಥಿಸಿಕೊಳ್ಳುವ ರೀತಿ ತಾವು ಹಾಗೂ ತಮ್ಮ ಬೆಂಬಲಿಗರ ಮೂಲಕ ಹೇಳಿಸಿದರು.

ಈ ರೀತಿ ಸ್ಪಷ್ಟ ಬಹುಮತವಿದ್ದರೂ ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೆಸ್ ಪೇಚಿಗೆ ಸಿಲುಕಿದ್ದು ಇದೇ ಮೊದಲಲ್ಲ. ಈ
ಹಿಂದೆ ವಿಧಾನಪರಿಷತ್ ಸಭಾಪತಿಯಾಗಿ ಡಿ.ಎಚ್ ಶಂಕರಮೂರ್ತಿ ಅವರಿದ್ದಾಗ ಕಾಂಗ್ರೆಸ್‌ನ ಹಿರಿಯ ನಾಯಕ ರಾಗಿದ್ದ
ಉಗ್ರಪ್ಪ ಆ್ಯಂಡ್ ಟೀಂ ಇದೇ ರೀತಿ ಸಭಾಪತಿಗಳ ವಿರುದ್ಧ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ, ಅವರನ್ನು ಕೆಳಗೆ ಇಳಿಸಲು ಪ್ರಯತ್ನಿಸಿದ್ದರು. ಆದರೆ ಅಂದೂ ಸಹ ಬಿಜೆಪಿ ಪ್ರತಿಪಕ್ಷದಲ್ಲಿದ್ದರೂ, ವಿಧಾನ ಪರಿಷತ್‌ನಲ್ಲಿ ಹೆಚ್ಚಿನ ಸ್ಥಾನ ವನ್ನು ಹೊಂದಿತ್ತು. ಇದರೊಂದಿಗೆ ಜೆಡಿಎಸ್ ಸಹ ತಟಸ್ಥ ನೀತಿ ಅನುಸರಿಸಿತ್ತು. ಉಗ್ರಪ್ಪ ತಮ್ಮ ಹಟವನ್ನು ಬಿಡದೇ,
ಸಭಾಪತಿಯಾಗಿದ್ದ ಶಂಕರಮೂರ್ತಿ ವಿರುದ್ಧ ವಾಗ್ಬಾಣವನ್ನು ಸುರಿಸಿದರೂ, ಅವರ ಸ್ಥಾನಕ್ಕೆ ಮಾತ್ರ ಕುತ್ತು ಬರಲಿಲ್ಲ. ಬದಲಿಗೆ
ಸ್ವಪಕ್ಷದವರೇ, ‘ನಿನ್ನಿಂದ ನನ್ನ ಮರ್ಯಾದೆ ಹಾಳು’ ಎಂದು ಹೇಳಿಕೊಂಡು ಹೊರನಡೆದಿದ್ದರು.

ಆದರೆ ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಿದ ನಿರ್ಣಯದ ಮೇಲೆ ಚರ್ಚೆ ನಡೆದಾಗ, ಸಿದ್ದರಾಮಯ್ಯ ಹಾಗೂ
ಡಿ.ಕೆ ಶಿವಕುಮಾರ್ ನೇರವಾಗಿ ಹಾಗೂ ಇನ್ನುಳಿದ ಕಾಂಗ್ರೆಸ್ ಶಾಸಕರು ‘ನಮ್ಮದು ಒಂದು ಇರಲಿ’ ಎಂದು ಗುಂಪಿನಲ್ಲಿ  ವೀರಾವೇಷದ ಮಾತುಗಳನ್ನು ಆಡಿದರು. ರಾಜ್ಯದಲ್ಲಿನ ಕರೋನಾ ಆರ್ಭಟ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದೊಂಬಿಯಲ್ಲಿ ಸರಕಾರದ ವೈಫಲ್ಯವೇ ಕಾರಣ ಎನ್ನುವ ಟೀಕೆ ಹಾಗೂ ಮುಖ್ಯವಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದರ ವಿರುದ್ಧ ನ್ಯಾಯಾಂಗ ತನಿಖೆಯಾಗಬೇಕು ಎನ್ನುವ ಆಗ್ರಹವಿತ್ತು. ಆರಂಭದಲ್ಲಿ ಈ ಎಲ್ಲವೂ ಯಡಿಯೂರಪ್ಪ ಅವರನ್ನು ಕೇಂದ್ರದ ವರಿಷ್ಠರ ದೃಷ್ಟಿಯಲ್ಲಿ ಕೆಟ್ಟವರನ್ನಾಗಿ ಮಾಡುತ್ತದೆ ಎಂದು ಭಾವಿಸಿದ್ದರೂ, ನಂತರ ಇದರಿಂದ ಯಡಿಯೂರಪ್ಪ ಅವರಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಯಿತು ಎಂದು ತಿಳಿಯಿತು.

ಇದೀಗ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧ ಕೆಲವರು ಕತ್ತಿ ಮಸೆಯುತ್ತಿದ್ದಾರೆ ಎನ್ನುವುದು ‘ಒಪನ್ ಸಿಕ್ರೇಟ್’
ಆಗಿತ್ತು. ಆದರೆ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಬಿಜೆಪಿಯ ಶಾಸಕರು ಹಾಗೂ ಸಚಿವರು ಯಡಿಯೂರಪ್ಪ
ಹಾಗೂ ವಿಜಯೇಂದ್ರ ಪರವಾಗಿ ವಕಾಲತು ವಹಿಸಬೇಕಾಯಿತು. ಇದರೊಂದಿಗೆ ಇಡೀ ಪ್ರಸಂಗವನ್ನು ಸೂಕ್ಷ್ಮವಾಗಿ ಗಮನಿಸಿದರೆ,
ಯಡಿಯೂರಪ್ಪ ಅವರಿಗೆ ಈಗಲೂ ಪಕ್ಷದ ಬಹುತೇಕ ಶಾಸಕರು ‘ನಿಷ್ಠೆ’ಯಿಂದ ಇದ್ದಾರೆ ಎನ್ನುವುದು ಸಾಬೀತಾಯಿತು.

ಇದಿಷ್ಟೇ ಅಲ್ಲದೇ, 32 ಶಾಸಕರ ಸಂಖ್ಯಾಬಲದ ಜೆಡಿಎಸ್ ಸಹ ಬಿಜೆಪಿ ಪರ ನಿಲ್ಲಬೇಕಾದರೆ, ಬಿಜೆಪಿ ಸರಕಾರದ ನಾಯಕತ್ವವನ್ನು
ಯಡಿಯೂರಪ್ಪ ಅವರೇ ವಹಿಸಿರಬೇಕು ಎನ್ನುವ ಪರೋಕ್ಷ ಸಂದೇಶವನ್ನು ಜೆಡಿಎಸ್ ರವಾನಿಸಿತು. ಶನಿವಾರ ನಡೆದ ಅವಿಶ್ವಾಸ ನಿರ್ಣಯದ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಕಾಂಗ್ರೆಸ್ ನಾಯಕರಿಗೆ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡುವುದು ಬೇಕಿತ್ತೇ ಹೊರತು, ನಿರ್ಣಯವನ್ನು ಮತದಾನದ ತನಕ ತಗೆದುಕೊಂಡು ಹೋಗಬೇಕು ಎನ್ನುವ ಅಪೇಕ್ಷೆ ಇರಲಿಲ್ಲ. ಆದ್ದರಿಂದಲೇ ಮತದಾನವಿಲ್ಲದೇ, ಅವಿಶ್ವಾಸ ನಿರ್ಣಯದ ಪ್ರಕ್ರಿಯೆ ಇಲ್ಲದೇ ಮುಗಿಯಿತು. ಬಿಜೆಪಿಯ ಇತರ ನಾಯಕರನ್ನು ನೋಡಿಕೊಂಡರೆ ಕಾಂಗ್ರೆಸ್‌ನವರಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತಿರುವಷ್ಟು ದಿನ ಸುಲಭ. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವ ಬಿಎಸ್‌ವೈರಿಂದ ಪಡೆಯುವ ‘ಅನುದಾನ’ ಇತರ ನಾಯಕರು ಬಂದು ಕೂತರೇ ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್‌ಗೆ ಗೊತ್ತಿದೆ.

ಆದ್ದರಿಂದಲೇ ಕಾಂಗ್ರೆಸ್ ವರಿಷ್ಠರಿಗೂ ಸಂತೃಪ್ತಿಯಾಗುವಂತೆ ಹಾಗೂ ಪ್ರತಿಪಕ್ಷದ ಸ್ಥಾನಕ್ಕೂ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿಕೊಂಡಿದ್ದರು. ಆದರೆ ನಿರ್ಣಯ ಮಂಡಿಸುವಾಗ, ಕೆಲ ಶಾಸಕರು ಮಾಡಿಕೊಂಡ ಎಡವಟ್ಟುಗಳಿಂದ ‘ತಾವೇ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವ ಸ್ಥಿತಿ’ಯನ್ನು ಕಾಂಗ್ರೆಸ್ ಮಾಡಿಕೊಂಡಿತು.

ರಾಜ್ಯದಲ್ಲಿ ಆದ ಈ ಬೆಳವಣಿಗೆಯನ್ನು ಅಚ್ಚರಿಯಿಂದ ಅಲ್ಲದಿದ್ದರೂ, ರಾಜಕೀಯ ಕಣ್ಣುಗಳನ್ನು ತೆರೆದು ಬಿಜೆಪಿ
ವರಿಷ್ಠರು ವೀಕ್ಷಿಸುತ್ತಿದ್ದರು. ಒಂದು ವೇಳೆ ಎಲ್ಲಾದರೂ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನುವುದು ತಿಳಿಯುತ್ತಿದ್ದಂತೆ, ತಮ್ಮ ಅಭ್ಯರ್ಥಿಯನ್ನು ಹಾಕುವ ಲೆಕ್ಕಾಚಾರದಲ್ಲಿದ್ದರು. ಅದಕ್ಕಾಗಿಯೇ, ಬಿಜೆಪಿ ಶಾಸಕಾಂಗ ಪಕ್ಷದ
ಸಭೆಗೆ ಕೇವಲ ಯಡಿಯೂರಪ್ಪ ಹಾಗೂ ಬಿಜೆಪಿ ಶಾಸಕರು ಮಾತ್ರವಲ್ಲದೇ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಕಳಿಸಿಕೊಟ್ಟಿತ್ತು. ಆದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ, ಕೆಲ ಸಣ್ಣಪುಟ್ಟ ಸಮಸ್ಯೆಯ ಬಗ್ಗೆ ಅನೇಕ ಶಾಸಕರು ತಮ್ಮ ಅಳಲನ್ನು ತೋಡಿಕೊಂಡರೆ ಹೊರತು, ‘ನಾಯಕತ್ವ ಬದಲಾವಣೆ’ಯ ವಿಷಯ ಬಂದಾಗ ಮೌನಕ್ಕೆ ಶರಣಾದರು.

ರಾಜ್ಯದಲ್ಲಿ ಮೊದಲಿನಿಂದಲೂ ಯಡಿಯೂರಪ್ಪ ನಂತರ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅದಕ್ಕೆ ಈ ಅವಿಶ್ವಾಸ
ನಿರ್ಣಯವಾದರೂ ಉತ್ತರಿಸಲಿದೆ ಎನ್ನುವ ಲೆಕ್ಕಾಚಾರದಲ್ಲಿ ಅನೇಕ ನಾಯಕರಿದ್ದರು. ಆದರೆ ಸಿಕ್ಕ ಅವಕಾಶ, ಹಾಕಿದ ಪಟ್ಟನ್ನು
ಸರಿಯಾಗಿ ಕಾಂಗ್ರೆಸ್ ಮುಂದುವರಿಸದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷವನ್ನು ಬೀಳಿಸುವ ಬದಲು, ಕಾಂಗ್ರೆಸ್ ತನ್ನcredibility ಯನ್ನು ಕಳೆದುಕೊಳ್ಳುವ ಸ್ಥಿತಿಯನ್ನು ನಿರ್ಮಿಸಿಕೊಂಡಿತು.

ನಿರ್ಣಯ ಮಂಡಿಸಿದ ದಿನದಿಂದಲೂ, ‘ಗೆಲ್ಲುವುದಕ್ಕೆ ಆಗುವುದಿಲ್ಲ’ ಎನ್ನುವ ಲೆಕ್ಕಾಚಾರದಲ್ಲಿಯೇ ಕಾಂಗ್ರೆಸ್ ನಾಯಕರು ಇದಿದ್ದರಿಂದ, ಈ ನಿರ್ಣಯವೇ ಸಾರ್ವಜನಿಕ ವಲಯದಲ್ಲಿ ಹಾಸ್ಯಸ್ಪದವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಸುಲಭ ತುತ್ತು ಎಂದು ಗೊತ್ತಿದ್ದರೂ ಯಡಿಯೂರಪ್ಪ ತನ್ನ ಪಕ್ಷದ ಶಾಸಕರಿಗೆ ವಿಪ್ ನೀಡಿ ಸದನಕ್ಕೆ ಹಾಜರಾಗುವಂತೆ ಮಾಡಿದರು. ಇದನ್ನು ಗಮನಿಸಿದರೆ, ಯಡಿಯೂರಪ್ಪ ಹಾಗೂ ಸರಕಾರವನ್ನು ಮುಜುಗರಕ್ಕೀಡು ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದ್ದರೂ, ಈ ನಡೆಯನ್ನು ಬಳಸಿಕೊಂಡು ಸರಕಾರವನ್ನು ಮತ್ತಷ್ಟು ಸೇಫ್ ಮಾಡಿಕೊಳ್ಳುವ ತಂತ್ರಗಾರಿಕೆಯಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ.

ಈಗಾಗಲೇ, ರಾಜ್ಯ ಬಿಜೆಪಿಯಲ್ಲಿ ಶುರುವಾಗಿರುವ ನಾಯಕತ್ವ ಬದಲಾವಣೆಯ ಮಾತಿಗೆ ಕೇಂದ್ರದ ವರಿಷ್ಠರು ಯಾವ ರೀತಿ
ಪ್ರತಿಕ್ರಿಯಿಸುತ್ತಾರೆ ಎನ್ನುವ ಪ್ರಶ್ನೆ ಇರುವ ವೇಳೆ, ಅವಿಶ್ವಾಸ ನಿರ್ಣಯದಲ್ಲಿ ಮತದಾನವಿಲ್ಲದೇ ಗೆಲುವು ಸಾಧಿಸಿರುವ
ಯಡಿಯೂರಪ್ಪ ಅವರು ರಾಜಕೀಯವಾಗಿ ಮೇಲುಗೈ ಸಾಧಿಸಿದ್ದಾರೆ ಎಂದರೆ ತಪ್ಪಲ್ಲ. ಇನ್ನು ಈ ಮೇಲುಗೈ ಮರೆಯಾಗುವ ಮೊದಲೇ, ಶಿರಾ ಉಪಚುನಾವಣೆ, ಬಳಿಕ ಇನ್ನುಳಿದ ಕ್ಷೇತ್ರಗಳ ಉಪಚುನಾವಣೆ, ನಂತರ ಗ್ರಾಮ ಪಂಚಾಯಿತಿ ಚುನಾವಣೆ. ಹೀಗೆ ಸಾಲು ಸಾಲು ಚುನಾವಣೆ ಎದುರಾಗುವುದರಿಂದ, ಈ ಸಮಯದಲ್ಲಿ ಪಕ್ಷದ ನಾಯಕರು ಸರಕಾರದ ನಾಯಕತ್ವವನ್ನು ಬದಲಾ ವಣೆ ಮಾಡುವುದಕ್ಕೆ ಮುಂದಾಗುವುದಿಲ್ಲ. ಆದ್ದರಿಂದ, ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿ, ಅವರ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದರೂ ಇದರ ನೇರ ಲಾಭವನ್ನು ಯಡಿಯೂರಪ್ಪ ಪಡೆಯುತ್ತಿದ್ದಾರೆ.

ಆದ್ದರಿಂದಲೇ ‘ದಾಳ ಹೂಡಿ, ಕಾಯಿ ನಡೆಸುವ ಮೊದಲು ಎಂಟು ದಿಕ್ಕುಗಳಿಂದಲೂ ಯೋಚಿಸಬೇಕು’ ಎನ್ನುವುದು.