Thursday, 12th December 2024

ಯಡಿಯೂರಪ್ಪ ಬಯಸಿದ ಕ್ಯಾಬಿನೆಟ್ ?

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಯಡಿಯೂರಪ್ಪ ಮತ್ತು ಸಂತೋಷ್ ಅವರ ಕಾರಣದಿಂದ ಕಾಣಿಸಿಕೊಳ್ಳುತ್ತಿರುವ ಹೆಸರುಗಳು. ಅರ್ಥಾತ್, ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಪುಟ ಪುನರ್ ರಚನೆ ಕಾರ್ಯದಲ್ಲಿ ಯಡಿಯೂರಪ್ಪ ಅವರ ಪಾತ್ರ ಬಹುಮುಖ್ಯವಾಗಿರಲಿದೆ ಎಂಬುದಂತೂ ನಿಸ್ಸಂಶಯ.

ಕಳೆದ ಐದು ತಿಂಗಳ ಬೆಳವಣಿಗೆಯಿಂದ ಮುಜುಗರಕ್ಕೆ ಸಿಲುಕಿರುವ ಬಿಜೆಪಿ ವರಿಷ್ಠರು ಪುನಃ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದು
ಕೊಳ್ಳಲು ಮುಂದಾಗಿದ್ದಾರೆ. ವಯಸ್ಸಿನ ಕಾರಣದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಪರ್ಯಾಯ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ತಂದು ಕೂರಿಸಿದರೂ ಪಕ್ಷದ ಗ್ರಾಫ್ ಮೇಲಕ್ಕೇರುತ್ತಿಲ್ಲ ಎಂಬುದು ಬಿಜೆಪಿ ವರಿಷ್ಠರ ಚಿಂತೆ. ಬೊಮ್ಮಾಯಿ ನೇತೃತ್ವದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ, ವಿಧಾನ ಪರಿಷತ್ತಿನ ಇಪ್ಪತ್ತೈದು ಸ್ಥಾನಗಳಿಗೆ ನಡೆದ ಚುನಾವಣೆ ಮತ್ತು ಐವತ್ತೆಂಟು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ.

ವಿಧಾನ ಪರಿಷತ್ತಿನ ಹನ್ನೊಂದು ಸ್ಥಾನಗಳನ್ನು ಅದು ಗೆದ್ದುಕೊಂಡಿತಾದರೂ, ಆಡಳಿತ ಪಕ್ಷವಾಗಿ ಕನಿಷ್ಠ ಹದಿನೈದು ಕ್ಷೇತ್ರಗಳಲ್ಲಾದರೂ ಗೆಲ್ಲಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದರೆ ಅದು ನಾಯಕತ್ವದ ವೈಫಲ್ಯ ಎಂಬುದು ವರಿಷ್ಠರ ತೀರ್ಮಾನ. ಆದರೆ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ಕರ್ನಾಟಕ ದಲ್ಲಿ ನಾಯಕತ್ವ ಬದಲಾವಣೆಯಂತಹ ವಿಷಯಕ್ಕೆ ಕೈ ಹಾಕುವುದು ಸರಿಯಲ್ಲ.

ಬದಲಿಗೆ ಈಗಿರುವ ಬೊಮ್ಮಾಯಿ ಸಂಪುಟಕ್ಕೇ ಸರ್ಜರಿ ಮಾಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಹೈ ಬಂದಿದೆ. ಹೀಗಾಗಿ ಬಯಡಿಯೂರಪ್ಪ ಆಯ್ಕೆಯ ಬೊಮ್ಮಾಯಿ ಅವರನ್ನು ತುರ್ತಾಗಿ ಕೆಳಗಿಳಿಸುವುದು ಎಂದರೆ ಅವರಿಂದ ಮಾನಸಿಕವಾಗಿ ಅಂತರ ಕಾಯ್ದುಕೊಳ್ಳುವುದು ಅಂತಲೇ ಅರ್ಥ. ವಸ್ತುಸ್ಥಿತಿ ಎಂದರೆ ಬಿಜೆಪಿ ವರಿಷ್ಠರಿಗೆ ಈಗ ತುರ್ತಾಗಿ ಬೇಕಿರುವುದು ಯಡಿಯೂರಪ್ಪ ಅವರ ವಿಶ್ವಾಸ. ಈ ಹಿಂದೆ ಅಧಿಕಾರದಿಂದ ಕೆಳಗಿ ಳಿದ ಸಿಟ್ಟಿನಲ್ಲಿದ್ದ ಯಡಿಯೂರಪ್ಪ ಅವರು, ತಮ್ಮ ಮಗ ವಿಜಯೇಂದ್ರ ಅವರ ಭವಿಷ್ಯದ ಸಲುವಾಗಿ ಬೇರೊಂದು ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ವರಿಷ್ಠರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಆಪ್ತರ ಮೇಲೆ ಸರಣಿ ಐಟಿ ದಾಳಿಗಳು ನಡೆಯುವ ಲಕ್ಷಣಗಳೂ ಕಾಣಿಸಿ ಕೊಂಡಿದ್ದವು. ಆದರೆ ಒಂದು ಸಲ ಇದರ ಕುರುಹು ಸಿಗುತ್ತಿದ್ದಂತೆಯೇ ಯಡಿಯೂರಪ್ಪ ಕೂಡ ಮೌನಕ್ಕೆ ಜಾರಿದರು. ಬಿಜೆಪಿ ವರಿಷ್ಠರೂ ಹೆಚ್ಚಿನ ದ್ವೇಷಕ್ಕೆ ಮುಂದಾಗದೆ ಸುಮ್ಮನಾದರು.

ಆದರೆ ನಾಯಕತ್ವ ಬದಲಾವಣೆಯಾಗಿ ಐದು ತಿಂಗಳು ಕಳೆದ ಮೇಲೆ, ಈ ಐದು ತಿಂಗಳಲ್ಲಿ ನಡೆದ ರಾಜ್ಯ ರಾಜಕೀಯದ ಬೆಳವಣಿಗೆಗಳನ್ನು ನೋಡಿದ ಮೇಲೆ ಬಿಜೆಪಿ ವರಿಷ್ಠರಿಗೆ ಒಂದು ವಿಷಯ ನಿಕ್ಕಿಯಾಗಿದೆ. ಅದೆಂದರೆ, ಯಡಿಯೂರಪ್ಪ ಅವರ ನೆರವಿಲ್ಲದೆ 2023ರ ವಿಧಾನಸಭೆ ಚುನಾವಣೆಯಲ್ಲಿ ತಪ್ಪಿಯೂ ಪಕ್ಷ ಗೆಲುವಿನ ಕಡೆ ಮುಖ ಮಾಡಲು ಸಾಧ್ಯವಿಲ್ಲ ಎಂಬುದು. ಅಂದ ಹಾಗೆ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಕಾಲದಲ್ಲೇ ಪರ್ಯಾಯ ನಾಯಕರನ್ನು ಮೇಲೆ ಬ್ಬಿಸಲು ವರಿಷ್ಠರು ದೊಡ್ಡ ಸೈಜಿನ ಪ್ರಯತ್ನ ಮಾಡಿದ್ದು ರಹಸ್ಯವೇನಲ್ಲ.

ಇದೇ ಕಾರಣಕ್ಕಾಗಿ ಗೋವಿಂದ ಕಾರಜೋಳ್, ಲಕ್ಷ್ಮಣ್ ಸವದಿ ಮತ್ತು ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೇರಿಸಲಾಯಿತು. ಆದರೆ ಲಕ್ಷ್ಮಣ ಸವದಿ ಅವರ ಷೇರು ಮೊದಲ ದಿನದಿಂದಲೂ ಮೇಲಕ್ಕೇರಲಿಲ್ಲ. ಸಾರಿಗೆ ನೌಕರರ ಮುಷ್ಕರ ಯಾವ ಮಟ್ಟದಲ್ಲಿ ಲಕ್ಷ್ಣಣ ಸವದಿ ಅವರ ಹೆಸರನ್ನು ಕುಗ್ಗಿಸಿತು ಎಂದರೆ ಅದರ ಹೊಡೆತದಿಂದ ಮೇಲೇಳಲು ಅವರಿಗೆ ಸಾಧ್ಯವಾಗಲೇ ಇಲ್ಲ, ಅದೇ ರೀತಿ ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದ ಕೆಲ ಜಿಲ್ಲೆಗಳಲ್ಲಿ ಅವರು ಮತದಾರರ ಮೇಲೆ ಪ್ರಭಾವ ಬೀರಬಲ್ಲರು ಅಂತ ಬಿಲ್ಡಪ್ ಕೊಡಲಾಗಿತ್ತಾದರೂ, ಅದು ಯಶಸ್ವಿಯಾಗಲೇ ಇಲ್ಲ. ಹೀಗಾಗಿ ಯಡಿಯೂರಪ್ಪ ಅವರು ಕೆಳಗಿಳಿದ ನಂತರ ಲಕ್ಷ್ಮಣ್ ಸವದಿ ಅವರಿಗೂ ಸಂಪುಟದಿಂದ ಗೇಟ್ ಪಾಸ್ ಕೊಡಲಾಯಿತು. ಇನ್ನು ಯಡಿಯೂರಪ್ಪ ಅವರ ಅವಧಿಯಲ್ಲಿ ಒಂದಷ್ಟು ಗಮನ ಸೆಳೆದಿದ್ದ ಕಾರಜೋಳ್ ಕೂಡಾ ಈಗ ಸಪ್ಪಗಾಗಿ ಹೋಗಿದ್ದಾರೆ.

ಹೀಗೆ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ನಾಯಕರನ್ನು ಬೆಳೆಸಲು ಬಿಜೆಪಿ ಥಿಂಕ್ ಟ್ಯಾಂಕ್ ರೂಪಿಸಿದ ನರ್ಸರಿ ಎಷ್ಟು ಬೇಗ ಒಣಗಿ ಹೋಗಿದೆ ಎಂದರೆ, ಪುನಾ ಯಡಿಯೂರಪ್ಪ ಅವರ ಶಕ್ತಿ ಪಕ್ಷಕ್ಕಾಗಿ ವಿನಿಯೋಗವಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಗೆಲುವು ಗಳಿಸುವುದಿರಲಿ, ಪ್ರತಿಪಕ್ಷವಾಗಿ ಕೂರಲೂ
ಪರದಾಡಬೇಕಾಗಬಹುದು ಎಂಬ ಮನ:ಸ್ಥಿತಿ ಬಿಜೆಪಿಯಲ್ಲೇ ಕಾಣಿಸಿಕೊಂಡಿದೆ.

ರಾಜ್ಯ ಬಿಜೆಪಿಯ ಇಪ್ಪತ್ತರಷ್ಟು ಶಾಸಕರು ಕೂಡಾ ಅದಾಗಲೇ ಕಾಂಗ್ರೆಸ್ ಪಾಳೆಯದ ಕಡೆ ತಿರುಗಿ ನೋಡುತ್ತಿದ್ದಾರೆ ಎಂಬ ವರ್ತಮಾನ ಸಿಕ್ಕ ಮೇಲಂತೂ ಯಡಿಯೂರಪ್ಪ ಅವರ ಪವರ್ ಏನು ಅನ್ನುವುದರ ಚಿತ್ರಣ ಪುನ: ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಸಚಿವ ಸಂಪುಟವನ್ನು ಪುನರ್ ರಚಿಸುವುದು, ಆ ಮೂಲಕ ಕುಂಟುತ್ತಿರುವ ಸರಕಾರದ ಇಮೇಜಿಗೆ ಬಲ ತುಂಬುವುದು ಬಿಜೆಪಿ ವರಿಷ್ಠರ ಯೋಚನೆ. ಆದರೆ ಇಂತಹ ಯೋಚನೆಯನ್ನು ಕಾರ್ಯಗತಗೊಳಿಸಲು ಅದು ಈಗ ಏಕಕಾಲಕ್ಕೆ ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ಅವರನ್ನು ಅವಲಂಬಿಸಿದೆ.

ಯಡಿಯೂರಪ್ಪ ಅವರ ಪದಚ್ಯುತಿಯ ನಂತರದ ದಿನಗಳಲ್ಲಿ ರಾಜ್ಯ ಬಿಜೆಪಿಯ ಮೇಲೆ ದೊಡ್ಡ ಮಟ್ಟದ ಕಂಟ್ರೋಲು ಬಂದಿದ್ದು ಬಿ.ಎಲ್.ಸಂತೋಷ್ ಅವರಿಗೆ.
ಈಗ ಸಂತೋಷ್ ಅವರ ಜತೆ ಯಡಿಯೂರಪ್ಪ ಅವರಿಗೂ ಪ್ರಾತಿನಿಧ್ಯ ನೀಡುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಇದೇ ಕಾರಣಕ್ಕಾಗಿ ಫೆಬ್ರವರಿ ತಿಂಗಳಲ್ಲಿ ಅದರ ಸೂಚನೆಯಂತೆ ನಡೆಯಲಿರುವ ರಾಜ್ಯ ಸಚಿವ ಸಂಪುಟದ ಪುನರ್ ರಚನೆ ಸಂದರ್ಭದಲ್ಲಿ ಮಂತ್ರಿಯಾಗುವ ಮೊದಲ ಹೆಸರು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರದು. ಹೀಗೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಮೊದಲ ದಿನದಿಂದ ಪಕ್ಷದ ವರಿಷ್ಠರಿಗೆ ದುಂಬಾಲು ಬೀಳುತ್ತಾ ಬಂದಿದ್ದರಾದರೂ, ವರಿಷ್ಠರು ಅದಕ್ಕೆ ಕ್ಯಾರೇ ಎಂದಿರಲಿಲ್ಲ.

ಆದರೆ ಐದು ತಿಂಗಳ ನಂತರ ಚಿತ್ರಣ ಬದಲಾಗಿದೆ. ಹೀಗಾಗಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಅಂದ ಹಾಗೆ ಬದಲಾದ ಈ ಕಾಲಘಟ್ಟದಲ್ಲಿ ಯಡಿಯೂರಪ್ಪ ಮತ್ತು ಬಿ.ಎಲ್. ಸಂತೋಷ್ ಅವರ ಸಲಹೆಯನ್ನು ಮುಖ್ಯವಾಗಿಟ್ಟುಕೊಳ್ಳಲು ಬಯಸಿರುವ ಬಿಜೆಪಿ ವರಿಷ್ಠರು ಒಳ್ಳೆಯ ಸಂಪುಟವೊಂದನ್ನು ರಚಿಸಬೇಕು ಎಂಬ ಕಸರತ್ತು ಆರಂಭಿಸಿದ್ದಾರೆ. ಇದರ ಪ್ರಕಾರ, ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಹತ್ತರಿಂದ ನ್ನೆರಡು ಜನ ಮಂತ್ರಿ ಮಂಡಲದಿಂದ ಹೊರಬೀಳಲಿದ್ದು,
ಹದಿನೈದರಷ್ಟು ಮಂದಿ ಒಳಪ್ರವೇಶ ಪಡೆಯಲಿದ್ದಾರೆ.

ಈಗಿನ ಮಾಹಿತಿಗಳ ಪ್ರಕಾರ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಿಂದ ಹಲ ಹಿರಿಯ ಸಚಿವರು ಹೊರಬೀಳಲಿದ್ದು ಪಕ್ಷದ ಕೆಲಸಕ್ಕಾಗಿ ನಿಯೋಜಿತ ರಾಗಲಿದ್ದಾರೆ. ಅಚ್ಚರಿಯ ಮಾಹಿತಿ ಎಂದರೆ, ಯಡಿಯೂರಪ್ಪ ಪತನದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಬಂದಿದ್ದ ಮುರುಗೇಶ್ ನಿರಾಣಿ ಅವರ ಹೆಸರು ಈ ಪಟ್ಟಯಲ್ಲಿರುವುದು. ನಿರಾಣಿ ಅವರನ್ನು ಕೈ ಬಿಟ್ಟು ಅವರ ಜಾಗಕ್ಕೆ ಮತ್ತೋರ್ವ ಪಂಚಮಸಾಲಿ ಲಿಂಗಾಯತ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ತರಬೇಕು ಎಂಬ ಶಿಫಾರಸ್ಸು ಈಗಾಗಲೇ ವರಿಷ್ಟರಿಗೆ ತಲುಪಿದೆ. ಇದೇ ರೀತಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು ಎಂಬ ಶಿಫಾರಸ್ಸು ದಿಲ್ಲಿ ತಲುಪಿದೆ. ಅಂದ ಹಾಗೆ ವಿ.ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂಬುದು ಯಡಿಯೂರಪ್ಪ ಗ್ಯಾಂಗಿನ ಬಯಕೆಯಾದರೆ, ಅವರನ್ನು ಸಂಪುಟದಲ್ಲಿ ಉಳಿಸಿಕೊಂಡರೆ ರಾಜಧಾನಿಯ ರಾಜಕೀಯ ಸುಲಭ ಎಂಬುದು ಸಂತೋಷ್ ಬಣದ ವಾದ.

ಇದೇ ರೀತಿ ಗೋವಿಂದ ಕಾರಜೋಳ್ ಅವರನ್ನು ಕೈ ಬಿಡಬೇಕು ಎಂಬ ವಾದ ಸಂತೋಷ್ ಗ್ಯಾಂಗಿನಿಂದ ಕೇಳಿ ಬರುತ್ತಿದ್ದರೆ, ಅವರನ್ನು ಉಳಿಸಿಕೊಂಡರೆ ದಲಿತ ವರ್ಗದ ಎಡಗೈ ಸಮುದಾಯದ ಮನ ಒಲಿಸುವುದು ಸುಲಭ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರ ಬಣಕ್ಕಿದೆ. ಇನ್ನು ಮಹಿಳಾ ಕೋಟಾದಡಿ ಮಂತ್ರಿಯಾಗಿ ರುವ ಶ್ರೀಮತಿ ಶಶಿಕಲಾ ಜೊಲ್ಲೆ ಅವರ ಬದಲು ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಚಿತ್ರದುರ್ಗ, ತುಮಕೂರು ಮತ್ತಿತರ ಭಾಗ ಗಳಲ್ಲಿ ಪ್ರಬಲವಾಗಿರುವ ಗೊಲ್ಲ ಸಮುದಾಯದ ಮತಗಳ ಮೇಲೆ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರ ಇದೆ. ಇದೇ ರೀತಿ ಬೇರೆ ಪಕ್ಷಗಳಿಂದ ವಲಸೆ
ಬಂದು ಸಂಪುಟದಲ್ಲಿ ಕುಳಿತಿರುವ ಕೆಲವರನ್ನು ಕಿತ್ತು ಹಾಕುವ ಲಕ್ಷಣಗಳು ದಟ್ಟವಾಗತೊಡಗಿವೆ. ಈ ಪೈಕಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ನಾರಾಯಣ ಗೌಡ ಪ್ರಮುಖರು. ಹೊರಗಿನಿಂದ ಬಂದು ಸರಕಾರ ರಚಿಸಲು ಇವರು ಬೆಂಬಲ ನೀಡಿದ್ದು ನಿಜವಾದರೂ ಸಾಕಷ್ಟು ಕಾಲ ಮಂತ್ರಿಗಿರಿಯನ್ನು ಅನುಭವಿಸಿರುವ ಇವರಿಂದ ಭವಿಷ್ಯದಲ್ಲಿ ಪಕ್ಷಕ್ಕಾಗುವ ಲಾಭ ಏನು? ಅನ್ನುವುದು ವರಿಷ್ಠರ ಯೋಚನೆ.

ಇದೇ ರೀತಿ ಎಸ್.ಅಂಗಾರ ಮತ್ತು ಪ್ರಭು ಚೌಹಾಣ್ ಅವರು ಸಂಪುಟದಿಂದ ಹೊರಬೀಳುವ ಲಕ್ಷಣಗಳು ಹೆಚ್ಚಾಗಿವೆ. ಇನ್ನು ಮೈಸೂರು ಜಿಲ್ಲೆಯಿಂದ ಎ.ರಾಮ ದಾಸ್, ಚಾಮರಾಜ ನಗರ ಜಿಲ್ಲೆಯಿಂದ ಎನ್.ಮಹೇಶ್ ಮತ್ತು ಕೊಡಗು ಜಿಲ್ಲೆಯಿಂದ ಅಪ್ಪಚ್ಚು ರಂಜನ್ ಸಂಪುಟಕ್ಕೆ ಬರುವ ಸಾಧ್ಯತೆಯಿದೆ. ಸಧ್ಯದ ಸ್ಥಿತಿಯಲ್ಲಿ ಈ ಮೂರು ಜಿಲ್ಲೆಗಳ ರಾಜಕೀಯದ ಮೇಲೆ ಪ್ರಭಾವ ಬೀರುವ ಶಕ್ತಿ ಇರುವುದು ಈ ಮೂವರಿಗೆ ಎಂಬುದು ಈ ಲೆಕ್ಕಾಚಾರಕ್ಕೆ ಕಾರಣ. ಹಾಗೆಯೇ ಸಿಡಿ ಲೇಡಿ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸಂಪುಟದಿಂದ ಹೊರಬಿಬಿದ್ದಿದ್ದ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಬ್ರದರ್ಸ್ ಪಾತ್ರ ಮಹತ್ವದ್ದು ಎಂಬುದು ಇದಕ್ಕೆ ಮುಖ್ಯ ಕಾರಣ. ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ತಮ್ಮ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ನೋಡಿಕೊಂಡಿದ್ದ ರಮೇಶ್ ಜಾರಕಿಹೊಳಿ ಬಿಜೆಪಿಗೆ ಅಘಾತ ನೀಡಿದ್ದರು. ಅದೇನೇ ತಿಪ್ಪರಲಾಗ ಹಾಕಿದರೂ ರಮೇಶ್ ಜಾರಕಿಹೊಳಿ ಅವರ ಪವರ್ ಇಲ್ಲದ ಬಿಜೆಪಿ ಕ್ಯಾಂಡಿಡೇಟು ಎಷ್ಟು ಹೀನಾಯವಾಗಿ ಸೋತರೆಂದರೆ, ಅಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ನಿರ್ಲಕ್ಷಿಸಿದರೆ ಅಪಾಯ ಎಂಬುದು ಕನ್ ಫರ್ಮ್ ಆಗಿದೆ. ಒಂದು ವೇಳೆ ಕಾನೂನಿನ ತೊಡಕಿನಿಂದಾಗಿ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರ ಮನ ಒಲಿಸಿ ಮಹೇಶ್ ಕುಮಟಳ್ಳಿ ಅವರನ್ನು ಸೇರಿಸಿಕೊಳ್ಳುವ ಯತ್ನವೂ ನಡೆಯಲಿದೆ.