Sunday, 15th December 2024

ಕೋಟಿಗೊಬ್ಬ ಯಡಿಯೂರಪ್ಪ

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್‌

‘ಕನ್ನಡ ಭವನ ನಿರ್ಮಾಣಕ್ಕಾಗಿ ಒಂದು ಕೋಟಿ ರುಪಾಯಿ ಕೊಡುತ್ತೇನೆ…’ ಅದು 2008ರ ‘ಕನ್ನಡ ವೈಭವ’ ಕಾರ್ಯಕ್ರಮ. ಮುತ್ತಿನ ದ್ವೀಪ ಬಹ್ರೈನ್‌ನಲ್ಲಿ ಕನ್ನಡ ಸಂಘ ಪ್ರತಿ ವರ್ಷ ಆಯೋಜಿಸುವ ಕನ್ನಡದ ಹಬ್ಬ ಅದು.

ನವೆಂಬರ್-ಡಿಸೆಂಬರ್‌ನಲ್ಲಿ ರಾಜ್ಯೋತ್ಸವದ ಸಂದರ್ಭದಲ್ಲಿ ಬಹ್ರೈನ್ ಕನ್ನಡಿಗರು ಸಂಭ್ರಮಿಸುವ ಕಾರ್ಯಕ್ರ ಮ. ಸಂಘ ಆಯೋಜಿಸುವ ಕಾರ್ಯಕ್ರಮಗಳ ಅತಿ ದೊಡ್ಡ ಕಾರ್ಯಕ್ರಮ ಅದಾದದ್ದರಿಂದ ಕರ್ನಾಟಕದಿಂದ ಕಲಾವಿದರ, ಗಣ್ಯ ವ್ಯಕ್ತಿಗಳ ಉಪಸ್ಥಿತಿ ಸರ್ವೇ ಸಾಮಾನ್ಯ. ಆ ವರ್ಷ ಗೌರವಾನ್ವಿತ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ. ಅವರ ಜತೆಗೆ ಸಚಿವರಾದ ರಾಮಚಂದ್ರೇ ಗೌಡ, ಶೋಭಾ ಕರಂದ್ಲಾಜೆ ಕೂಡ ಇದ್ದರು.

1977ರಲ್ಲಿ ಬಹ್ರೈನ್ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದಲ್ಲಿ ನೋಂದಾಯಿಸಲ್ಪಟ್ಟು, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಹೆಸರಾದ ಸಂಘದ ಇತಿಹಾಸದ ಮೊದಲ ಬಾರಿ ರಾಜ್ಯದ ಮುಖ್ಯ ಮಂತ್ರಿಯೊಬ್ಬರು ಭಾಗವಹಿಸಿದ ಕಾರ್ಯಕ್ರಮ ಅದಾಗಿತ್ತು. ಆ ವರ್ಷ ಕಾರ್ಯಕ್ರಮ ನಡೆದದ್ದು ಬಹ್ರೈನ್
ದೇಶದ ರಾಜಧಾನಿ ಮನಾಮದಲ್ಲಿರುವ ಕೇರಳೀಯ ಸಮಾಜಂನ ಸಭಾಂಗಣದಲ್ಲಿ. ಅಂದು ಅಧ್ಯಕ್ಷರಾಗಿದ್ದ ಆಸ್ಟಿನ್ ಸಂತೋಷ್, ಸಂಘದ ಹಿರಿಯ ಸದಸ್ಯರಾದ ಶ್ರೀ ಕೃಷ್ಣ ಭಟ್ ಸೂಚನೆಯಂತೆ, ಬಹ್ರೈನ್‌ನಲ್ಲಿ ನೂತನ ‘ಕನ್ನಡ ಭವನ’ ನಿರ್ಮಾಣದ ಪ್ರಸ್ತಾವವನ್ನು ಸಾವಿರಾರು ಕನ್ನಡಿಗರು ನೆರೆದ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದಿಟ್ಟಿದ್ದರು.

ಇಡೀ ಸಭಾಂಗಣವೇ ಮುಖ್ಯಮಂತ್ರಿಯ ಭಾಷಣಕ್ಕೆ ಕಾಯುತ್ತಿತ್ತು. ನಿಮ್ಮ ‘ಕನ್ನಡ ಭವನ’ ನಿರ್ಮಾಣಕ್ಕಾಗಿ ಮೊದಲ ಕಂತಾಗಿ ಒಂದು ಕೋಟಿ ರುಪಾಯಿ ಕೊಡುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದಾಗ ಇಡೀ ಸಭಾಂಗಣವೇ ಎದ್ದು ನಿಂತು ಹರ್ಷೋದ್ಘಾರ ದೊಂದಿಗೆ ಗೌರವ ಸೂಚಿಸಿತ್ತು.

ಆ ಒಂದು ನುಡಿಗಾಗಿ ಬಹ್ರೈನ್ ಕನ್ನಡಿಗರ ಕಿವಿಗಳು ಕಾತರದಿಂದ ಕಾದಿದ್ದವು. ಬಹ್ರೈನ್ ಕನ್ನಡಿಗರಿಗೆ ಅದೊಂದು ಭಾವುಕ, ರೋಮಾಂಚನ ಕ್ಷಣ. ಸದಾ ಸಾಂಸ್ಕೃತಿಕ, ಮನರಂಜನೆ ಮತ್ತು ಕನ್ನಡ ಪರ ಕಾರ್ಯಕ್ರಮಗಳಿಗೆ ಹೆಸರಾದ ‘ಕನ್ನಡ ವೈಭವ’ ಆ ವರ್ಷ ಅವಿಸ್ಮರಣೀಯವಾದದ್ದು ಇದೇ ಕಾರಣಕ್ಕೆ. ಯಾವ ಕಾರಣವೋ ಏನೋ, ಒಂದು ವರ್ಷ ವಾದರೂ ಆ ಹಣ ಬಿಡುಗಡೆಯಾಗಿರಲಿಲ್ಲ. ಮುಂದಿನ ವರ್ಷ ಅದೇ ಕಾರ್ಯಕ್ರಮಕ್ಕೆ ಸಂಪಾದಕರಾದ ವಿಶ್ವೇಶ್ವರ ಭಟ್ ಆಗಮಿಸಿದ್ದರು.

ವಿಷಯ ಅರಿತ ಭಟ್ಟರು 15 ದಿನದ ಒಳಗೆ ಸರಕಾರ ಹಣ ಬಿಡುಗಡೆ ಮಾಡದಿದ್ದರೆ, ಮುಖಪುಟದಲ್ಲಿ ಲೇಖನ ಬರೆಯುವುದಾಗಿ ಹೇಳಿದರು. ಅಂತೆಯೇ
ಹದಿನಾರನೆಯ ದಿನ ಲೇಖನ ಬರೆದರು. ಅದನ್ನು ನೋಡಿದ ಯಡಿಯೂರಪ್ಪನವರು ಅಂದೇ ಹಣ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದರು. ಎಲ್ಲಾ ಸರಕಾರಿ ನಿಯಮಗಳನ್ನು ಪಾಲಿಸಿ, ಆ ಹಣ ಬಹ್ರೈನ್ ತಲುಪುವ ವೇಳೆಗೆ ಮೂರು ವರ್ಷಗಳೇ ಕಳೆದವು. ನಂತರ ಕಟ್ಟಡದ ರೂಪುರೇಷೆ, ನಕ್ಷೆಗಳೆಲ್ಲ ತಯಾರಾಗಿ ಬಹ್ರೈನ್‌ನ ಸಂಬಂಧಪಟ್ಟ ಕಚೇರಿಗಳ, ಪುರಸಭೆಯ ಪರವಾನಿಗೆ ದೊರಕುವ ಹೊತ್ತಿಗೆ ಮತ್ತೆ ನಾಲ್ಕು ಐದು ವರ್ಷ ಸಂದುಹೋದವು.

ಅಂತೂ 2018ರಲ್ಲಿ ಕಟ್ಟಡದ ಕಾರ್ಯ ಆರಂಭವಾದಾಗ ಸರಕಾರದಿಂದ ಎರಡನೆಯ ಕಂತಿನ ಹಣ ಪಡೆಯುವುದಕ್ಕೆ ಸಾಹಸ ಆರಂಭವಾಯಿತು. ಆಗ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ಪ್ರದೀಪ್ ಶೆಟ್ಟಿ ಸಂಘದ ಅಧ್ಯಕ್ಷರಾಗಿದ್ದರು. ಒಮ್ಮೆ ದುಬೈನಲ್ಲಿ, ಇನ್ನೊಮ್ಮೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಹಣಕ್ಕಾಗಿ ಮನವಿ ಸಲ್ಲಿಸಲಾಯಿತು. ಎರಡನೆಯ ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಚುನಾವಣೆ ನಡೆದು, ಕುಮಾರಸ್ವಾಮಿ ಮುಖ್ಯಮಂತ್ರಿ ಯಾದರು.

ಅದಕ್ಕೆ ಸರಿಯಾಗಿ ಸಂಘದ ಅಡಿಗಲ್ಲು ಸಮಾರಂಭಕ್ಕೂ ಮುಹೂರ್ತ ನಿರ್ಣಯವಾಯಿತು. ಮುಖ್ಯಮಂತ್ರಿಯ ತಂದೆ, ಮಾಜಿ ಪ್ರಧಾನಿ ದೇವೇಗೌಡರು ನೂತನ ಕನ್ನಡ ಭವನಕ್ಕೆ ಅಡಿಗಲ್ಲನ್ನು ಇಟ್ಟರು. ಅವರೂ ಹಣ ಕೊಡಿಸುವುದಾಗಿ ಭರವಸೆ ನೀಡಿದ ಕಾರಣ, ಬೆಂಗಳೂರಿಗೆ ಹೋಗಿ ಅವರನ್ನೂ, ಕುಮಾರಸ್ವಾಮಿ ಯವರನ್ನೂ ಭೇಟಿ ಮಾಡಿದ್ದಾಯಿತು. ಮೊದಲ ಮಾತುಕತೆಯಲ್ಲಿ ಎಂದಿನಂತೆ ಭರವಸೆ, ಭರವಸೆ, ಭರವಸೆ. ಎರಡನೆಯ ಬಾರಿ  ಪುನಃ ವಿಶ್ವೇಶ್ವರ ಭಟ್ ಮತ್ತು ಇನ್ನೊಬ್ಬ ಸಂಪಾದಕರೊಂದಿಗೆ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಅಂದು ಸಂಘದ ನಕ್ಷೆಯನ್ನು ನೋಡಿ ಸಾಕಷ್ಟು ಸಲಹೆಯನ್ನೂ ನೀಡಿದ ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಹಣ ಹೊಂದಿಸುವ ಭರವಸೆ ನೀಡಿದರು. ಬಜೆಟ್ ದಿನ ನೋಡಿದರೆ, ಎಂದಿನಂತೆ ನಿರಾಸೆ! ಅಲ್ಲಿಗೆ, ಎರಡು ವರ್ಷದಲ್ಲಿ ತಲಾ ಎರಡು ಬಾರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿ
ಮನವಿಸಲ್ಲಿಸಿದ ಒಟ್ಟೂ ನಾಲ್ಕು ‘ದಂಡ’ ಯಾತ್ರೆ ಪೂರ್ಣಗೊಂಡಿತ್ತು!

ಪುನಃ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಮೊದಲ ಭೇಟಿಯ ಒಂದು ಕೋಟಿ ನೀಡುವುದಾಗಿ ಭರವಸೆ ನೀಡಿದರಾದರೂ, ಕರ್ನಾಟಕದಲ್ಲಿ ಆಗ ಬಂದ ಪ್ರವಾಹದಲ್ಲಿ ಅದು ಕೊಚ್ಚಿ ಹೋಯಿತು. ಮತ್ತೊಮ್ಮೆ ವಿಶ್ವೇಶ್ವರ ಭಟ್ ಅವರ ಜತೆಯ ಹೋಗಿ ಭೇಟಿಯಾದ ದಿನವೇ ಉಪಚುನಾವಣೆ ಘೋಷಣೆಯಾದದ್ದರಿಂದ, ಚುನಾವಣೆ ಮುಗಿದ ನಂತರ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು ಬಿಎಸ್‌ವೈ.

ಚುನಾವಣೆ ನಡೆದು, ಬಿಎಸ್ ವೈ ಪ್ರಯತ್ನದಿಂದ ಭಾರತೀಯ ಜನತಾ ಪಕ್ಷ ಹನ್ನೆರಡು ಸ್ಥಾನಗಳಿಸಿದ್ದೂ ಆಯಿತು. ಸಂಘಕ್ಕೆ ಸಿಗಬೇಕಾಗಿದ್ದ ಹಣದ ವಿಷಯ ಮಾತ್ರ ನೆನೆಗುದಿಗೆ ಬಿದ್ದಿತ್ತು. ಸುಮಾರು ನಾಲ್ಕರಿಂದ ಐದು ತಿಂಗಳ ನಂತರ ಒಮ್ಮೆ ಭಟ್ಟರು ಯಡಿಯೂರಪ್ಪನವರನ್ನು ಭೇಟಿಯಾಗಿ ಕನ್ನಡ ಭವನಕ್ಕೆ ಎರಡನೆಯ ಕಂತಿನ ಹಣ ನೀಡುವುದರ ವಿಚಾರ ಪ್ರಸ್ತಾಪಿಸಿದಾಗ ಯಡಿಯೂರಪ್ಪ ಒಪ್ಪಿ, ಸದ್ಯ ಒಂದು ಕೋಟಿ ರುಪಾಯಿ ನೀಡುವುದಾಗಿಯೂ, ಮುಂದೆ
ಇನ್ನೊಂದು ಕಂತಿನ ಅನುದಾನದ ಭರವಸೆಯನ್ನೂ ನೀಡಿದರು. ಕೆಲವೇ ದಿನಗಳಲ್ಲಿ ಆದೇಶವೂ ಹೊರಟಿತು. ಒಂದು ವಿಷಯ ಏನು ಗೊತ್ತಾ? ಆ ಸಂದರ್ಭದಲ್ಲಿ ಸಂಘದ ಯಾವುದೇ ಪದಾಧಿಕಾರಿಗಳಾಗಲೀ, ಸದಸ್ಯರಾಗಲೀ ಇರಲಿಲ್ಲ. ಅವರ ಅನುಪಸ್ಥಿತಿಯಲ್ಲೂ ತಮ್ಮ ಮಾತನ್ನು ಉಳಿಸಿಕೊಂಡವರು ಯಡಿಯೂರಪ್ಪ ಮತ್ತು ವಿಶ್ವೇಶ್ವರ ಭಟ್.

ರಾಜಾ ಹುಲಿ ಅಂದು ಮತ್ತೊಮ್ಮೆ ತಾವು ಮಾತಿಗೆ ತಪ್ಪದ ಮಗ ಎಂದು ಸಾಬೀತುಪಡಿಸಿದರು. ರಾಜಕೀಯ ನನಗೆ ಒಲ್ಲದ ತುತ್ತು. ಅದರಲ್ಲೂ ಇತ್ತೀಚೆಗಿನ ಕರ್ನಾಟದ ರಾಜಕೀಯದ ನಡೆಯ ತಲೆ ಬುಡ ಅರ್ಥವಾಗುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ ಬಿಡಿ. ದೇಶ ಬಿಟ್ಟು ದೂರ ಉಳಿದವನಿಗೆ ರಾಜಕೀಯದ ಉಸಾಬರಿ ಏಕೆ? ಎಷ್ಟು ಬೇಕೋ ಅಷ್ಟಿದ್ದರೆ ಸಾಕು ಎನ್ನುವ ಭಾವನೆ ನನ್ನದು. ಹಾಗಂತ ಪ್ರತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುತ್ತೇನೆ. ಅದು ನನ್ನ ಹಕ್ಕು. ಯಾರೇ ಆಗಲಿ, ಮತ ಚಲಾಯಿಸಿದಾಗ ಮಾತ್ರ ಸರಕಾರದ ಧೋರಣೆ, ನೀತಿಯನ್ನು ಪ್ರಶ್ನಿಸುವ ಹಕ್ಕು ಇರುತ್ತದೆ.

ಇಲ್ಲವಾದರೆ ಅವರಿಗೆ ಸರಕಾರವನ್ನು ಪ್ರಶ್ನಿಸುವ ಯಾವ ಹಕ್ಕೂ ಇಲ್ಲ ಎಂದು ನಂಬಿದವ ನಾನು. ಹಾಗಂತ ಒಂದು ಮತ ಚಲಾಯಿಸಿದ್ದಕ್ಕೆ ಐದು ವರ್ಷ ಪೂರ್ತಿ ಪ್ರತಿನಿತ್ಯ ಸರಕಾರವನ್ನು ಪ್ರಶ್ನಿಸುವ, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವುದರ ಕುರಿತೇ ಯೋಚಿಸುವ ಜಾಯಮಾನವೂ ನನ್ನದಲ್ಲ. ಆದರೆ, ಈ ಒಂದು ವಿಷಯವನ್ನು ತೀರಾ ಹತ್ತಿರದಿಂದ ಗಮನಿಸಿದ್ದೇನೆ. ನಾಲ್ಕು ದಶಕದ ಇತಿಹಾಸವಿರುವ, ವಿದೇಶದಲ್ಲಿ ಕನ್ನಡದ ಕೆಲಸಕ್ಕೆ ಕಟಿಬದ್ಧವಾಗಿ ನಿಂತ ಒಂದು ಸಂಘಕ್ಕೆ ಸರಕಾರದಿಂದ ಅನುದಾನ ನೀಡಲು ಅಧಿಕಾರದಲ್ಲಿರುವವರು ಮೀನಾ ಮೇಷ ಎಣಿಸುವುದೇಕೆ? ಹೋಗಲಿ, ಕೊಡುವ ಮನಸ್ಸಿಲ್ಲದಿದ್ದರೆ, ಸಾಧ್ಯವಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳಿ ಬಿಡಬಹುದಲ್ಲ. ಅನಾವಶ್ಯಕ ಆಶ್ವಾಸನೆ ನೀಡುವುದು ಯಾಕೋ? ಬಹ್ರೈನ್‌ಗೆ ಬಂದ ಪ್ರತಿಯೊಬ್ಬ ರಾಜಕೀಯ ಮುಖಂಡರೂ
ಆಶ್ವಾಸನೆ ನೀಡಿ ಹೋಗಿದ್ದಾರೆ.

ಆದರೆ ದುರಾದೃಷ್ಟ, ಸಂಘದ ಪದಾಽಕಾರಿಗಳು ಬೆಂಗಳೂರಿಗೆ ಹೋದಾಗಲೆ ಆ ಧುರೀಣರು ಬೇರೆ ಕೆಲಸದಲ್ಲಿ ವ್ಯಸ್ಥರಾಗಿರುತ್ತಾರೆ. ಇಲ್ಲಿ ಯಾವುದೇ ಮಂತ್ರಿ
ಯನ್ನೋ, ಮುಖ್ಯಮಂತ್ರಿಯನ್ನೋ, ಪಕ್ಷವನ್ನೋ ತೆಗಳುವ ಉದ್ದೇಶ ಇಲ್ಲವೇ ಇಲ್ಲ. ವಿದೇಶದಲ್ಲಿರುವ ಸಂಘಕ್ಕೆ ಹಣ ನೀಡಿದರೆ ರಾಜಕೀಯವಾಗಿ ಅವರಿಗೆ
ಯಾವ ಲಾಭವೂ ಇಲ್ಲ ಎನ್ನುವುದನ್ನು ಒಪ್ಪೋಣ. ಅದೇ ಹಣವನ್ನು ರಾಜ್ಯದಲ್ಲಿರುವ ಸಂಘ ಸಂಸ್ಥೆಗೆ ನೀಡಿದರೆ ಒಂದಿಷ್ಟು ಪ್ರಚಾರ, ಜನಪ್ರಿಯತೆ, ತನ್ಮೂಲಕ ಓಟಾದರೂ ಸಿಕ್ಕೀತು. ಅದೇ ಲೆಕ್ಕಾಚಾರ ವಾದರೆ ಯಡಿಯೂರಪ್ಪ ಅದಕ್ಕೆ ಖಂಡಿತ ಹೊರತು.

ಕೇವಲ ಬಹ್ರೈನ್ ಕನ್ನಡ ಸಂಘಕ್ಕೆ ಹಣ ನೀಡಿದರು ಎಂದು ನಾನು ಈ ಮಾತು ಹೇಳುತ್ತಿಲ್ಲ. ಲಂಡನ್‌ನಲ್ಲಿ ಬಸವೇಶ್ವರ ಮೂರ್ತಿಯ ಪ್ರತಿಷ್ಠಾಪನೆಯ ವಿಚಾರ
ವನ್ನೇ ತೆಗೆದುಕೊಳ್ಳಿ. ಯಡಿಯೂರಪ್ಪ ಇಲ್ಲದಿದ್ದರೆ ಅದು ಇಂದಿಗೂ ಸಾಧ್ಯವಾಗುತ್ತಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಂದ ನಂತರವೇ ಮಠಗಳು, ದೇವಸ್ಥಾನಗಳು, ಸಮುದಾಯ ಭವನಗಳು ಸರಕಾರದಿಂದ ಕೋಟಿ ಕೋಟಿ ಅನುದಾನ ಕಂಡದ್ದು. ಅದಕ್ಕೂ ಮೊದಲಿನ ಮುಖ್ಯಮಂತ್ರಿಗಳಾದವರು ಯಾರೂ ಇವರಷ್ಟು ಅನುದಾನ ನೀಡಿಲ್ಲ ಎನ್ನುವುದನ್ನು ಒಪ್ಪಲೇಬೇಕು.

ಈ ಸಂದರ್ಭದಲ್ಲಿ ಇನ್ನೊಂದು ಮಾತು ಹೇಳಬೇಕು. ೨೦೦೮ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭ ಅದು. ಅನಿವಾಸಿ ಕನ್ನಡಿಗರಿಗಾಗಿ ಒಂದು ಪ್ರತ್ಯೇಕ NRI Cell ಸ್ಥಾಪಿಸುವಂತೆ ವಿಶ್ವೇಶ್ವರ ಭಟ್ಟರು ಅವರ ಪತ್ರಿಕೆಯ ಮುಖಪುಟದಲ್ಲಿ ಒಂದು ಲೇಖನ ಬರೆಯುತ್ತಾರೆ. (ಭಟ್ಟರಿಗೂ, ಅನಿವಾಸಿ ಕನ್ನಡಿಗ ರಿಗೂ ಅದ್ಯಾವ ಅವಿನಾಭಾವ ಸಂಬಂಧವೋ ಗೊತ್ತಿಲ್ಲ, ಅನಿವಾಸಿಗಳ ಮೇಲೆ ಅವರಿಗೆ ಒಂದು ಹಿಡಿ ಪ್ರೀತಿ ಹೆಚ್ಚು). ಇರಲಿ, ಲೇಖನ ಓದಿದ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಅದನ್ನು ಜಾರಿಗೊಳಿಸುತ್ತಾರೆ. ಕರ್ನಾಟಕದಲ್ಲಿ ಇಂದು ಅನಿವಾಸಿ ಕನ್ನಡಿಗರಿಗಾಗಿ ಒಂದು ವೇದಿಕೆ ಸ್ಥಾಪಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಾದರೆ ಅದಕ್ಕೆ ಕಾರಣ ಯಡಿಯೂರಪ್ಪ.

ಕರ್ನಾಟಕದ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದಾರೆ. ಕಳೆದ ಸೋಮವಾರ ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದ ಸಂದರ್ಭದಲ್ಲಿ ಭಾವುಕ ನುಡಿಗಳನ್ನಾಡಿದ ಬಿಎಸ್‌ವೈ ರಾಜೀನಾಮೆ ನೀಡಿದ್ದು, ನಂತರ ಬೊಮ್ಮಾಯಿ ಮುಖ್ಯಮಂತ್ರಿಯಾದದ್ದು ಈಗ ಇತಿಹಾಸ. ಕರ್ನಾಟಕದಲ್ಲಿ ಇಂದು (ಅಥವಾ ಮೊದಲೂ) ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬಂದದ್ದಿದ್ದರೆ ಅದಕ್ಕೆ ಮೂಲ ಕಾರಣ ಬಿಎಸ್‌ವೈ ಎನ್ನುವುದನ್ನು
ಅಲ್ಲಗಳೆಯುವಂತಿಲ್ಲ. ಇನ್ನು ಮುಂದೆ ಅವರು ಪುನಃ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭರವಸೆ ಅವರ ಲ್ಲಿಯೂ ಇರಲಿಕ್ಕಿಲ್ಲ. ಅವರು ನಾಲ್ಕು ಬಾರಿ
ಮುಖ್ಯಮಂತ್ರಿಯಾದರೂ, ಒಮ್ಮೆಯೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿರದ ನೋವು ಅವರಲ್ಲಿ, ಅವರ ಅಭಿಮಾನಿಗಳಲ್ಲಿ ಸದಾ ಇರುತ್ತದೆ.

ಜತೆಗೆ, ಇನ್ನೂ ಒಳ್ಳೆಯ ರೀತಿಯಲ್ಲಿ ಅವರನ್ನು ಬೀಳ್ಕೊಡಬಹುದಿತ್ತು ಎಂಬ ನೋವು ಕೂಡ. ಆದಾಗ್ಯೂ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ, ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ ಎಂಬ ಮಾತನ್ನು ಹೇಳುತ್ತಿದ್ದಾರೆ. ಈಗಿರುವ ಬಸವರಾಜ ಬೊಮ್ಮಾಯಿಯವರಾಗಲಿ, ಮುಂದೆ ಬರುವ ಇನ್ಯಾರೇ ಆಗಲಿ, ಅವರಿಂದ
ಬಹ್ರೈನ್‌ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಎಷ್ಟು ಪ್ರಯೋಜನವೋ ಗೊತ್ತಿಲ್ಲ. ಅವರು ಬಹ್ರೈನ್ ಕನ್ನಡಿಗರಿಗೆ ಎಷ್ಟು ಸ್ಪಂದಿಸುತ್ತಾರೋ ಗೊತ್ತಿಲ್ಲ. ಒಂದಂತೂ ಸತ್ಯ, ಬಹ್ರೈನ್ ಕನ್ನಡಿಗರ ಹೃದಯದಲ್ಲಿ ಅವರು ಪಕ್ಷಾತೀತವಾಗಿ ಉಳಿಯುತ್ತಾರೆ. ಬಹ್ರೈನ್ ಕನ್ನಡಿಗರ ಕಣ್ಣಿನಲ್ಲಿ ಯಡಿಯೂರಪ್ಪ ಕೋಟಿಗೊಬ್ಬರಾಗಿ ನಿಲ್ಲುತ್ತಾರೆ.