Saturday, 5th October 2024

ನೆನಪಾಗುತ್ತಿದೆ ಬಿಎಸ್‌ವೈ, ಅನಂತ್ ಕುಮಾರ್‌ ಜೋಡಿ

ವರ್ತಮಾನ

maapala@gmail.com

ಗೆಲುವಿಗೆ ಹಲವು ಅಪ್ಪಂದಿರು, ಸೋಲು ಅನಾಥ ಎನ್ನುತ್ತಾರೆ. ರಾಜ್ಯ ಬಿಜೆಪಿಯಲ್ಲಿರವುದು ಇದೇ ಪರಿಸ್ಥಿತಿ. ವಿಧಾನಸಭೆ ಚುನಾವಣೆ ಸೋಲಿನ
ಒಂದು ತಿಂಗಳ ಬಳಿಕ ಈ ವಿಚಾರದಲ್ಲಿ ನಾಯಕರ ಮಧ್ಯೆ ನಡೆಯುತ್ತಿರುವ ಜಟಾಪಟಿ ರಾಜ್ಯ ಪಕ್ಷಕ್ಕೆ ಅನಾಥ ಭಾವನೆ ಮೂಡಿಸಿದೆ. ಬಣ ರಾಜಕಾರಣದ ಭಿನ್ನಮತ ಉತ್ತುಂಗಕ್ಕೆ ಏರಿದ್ದು, ತಳಮಟ್ಟದಲ್ಲಿ ಹಗಲಿರುಳೆನ್ನದೆ ಓಡಾಡಿ, ಪ್ರತಿಪಕ್ಷದವರೊಂದಿಗೆ ಜಟಾಪಟಿಗಿಳಿದು ಹೊಡೆದಾಟಕ್ಕೂ ಹೇಸದೆ ಪಕ್ಷಕ್ಕಾಗಿ ತಮ್ಮನ್ನು ಸಮರ್ಥಿಸಿಕೊಂಡಿರುವ ಕಾರ್ಯಕರ್ತರನ್ನು ಕೇಳುವವರೇ ಇಲ್ಲವಾಗಿದೆ.

ಹುದ್ದೆಗಾಗಿ ಹಪಹಪಿಸುತ್ತಿರುವ ಎರಡೂ ಕಡೆಯವರು ಮಾತಿನ ಸಮರದಲ್ಲಿ ತೊಡಗಿದ್ದು, ರಾಜ್ಯ ಬಿಜೆಪಿಯ ನಾಯಕತ್ವವನ್ನೇ ಪ್ರಶ್ನಿಸುತ್ತಿದ್ದಾರೆ. ಸೋಲಿಗೆ ಪರಸ್ಪರರನ್ನು ಹೊಣೆ ಮಾಡುತ್ತಾ ಕಾಲ ತಳ್ಳುತ್ತಿದ್ದಾರೆಯೇ ಹೊರತು ಈ ಸೋಲಿನಿಂದ ಹೊರಬಂದು ಒಗ್ಗಟ್ಟಾಗಿ ಮುಂದಿನ ಕಾರ್ಯತಂತ್ರ ಗಳನ್ನು ಸಿದ್ಧಪಡಿಸುವುದನ್ನು ಮರೆತಿದ್ದಾರೆ. ಶಿಸ್ತಿನ ಪಕ್ಷ ಎನಿಸಿಕೊಂಡಿದ್ದ ಬಿಜೆಪಿಯಲ್ಲಿ ಶಿಸ್ತು ಎನ್ನುವುದು ಹುಡುಕಿದರೂ ಸಿಗುವುದಿಲ್ಲ ಎನ್ನುವಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ನಿರ್ದೇಶನ ಕಸಕ್ಕಿಂತ ಕಡೆಯಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಾಯಕರೇ ಕಾರಣ ಎಂಬುದು ಬಹಿರಂಗ ಸತ್ಯ. ೨೦೧೯ರಲ್ಲಿ ಮೈತ್ರಿ ಸರಕಾರವನ್ನು ಉರುಳಿಸಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಬಿ.ಎಸ್.ಯಡಿಯೂರಪ್ಪ ಅವರನ್ನು ೨೦೨೦ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದಾಗಲೇ
೨೦೨೩ರಲ್ಲಿ ಬಿಜೆಪಿ ಮತ್ತೆ ಅಽಕಾರಕ್ಕೆ ಬರುವುದು ಕಷ್ಟ ಎನ್ನುವಂತಾಗಿತ್ತು. ಆದರೆ, ನಂತರದಲ್ಲಾದರೂ ಬದಲಾವಣೆಗಳಾಗಬಹುದು. ಬಿಜೆಪಿ ಗೆಲ್ಲಬಹುದು ಎಂಬ ಸಣ್ಣ ನಿರೀಕ್ಷೆ ಇತ್ತಾದರೂ ಚೇತರಿಸಿಕೊಳ್ಳುವ ಪ್ರಯತ್ನವನ್ನು ಪಕ್ಷದ ನಾಯಕರು ಮಾಡಲೇ ಇಲ್ಲ.

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದು ಘೋಷಣೆ ಮಾಡಿದರೂ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅವರನ್ನು ಬದಿಗೆ ಸರಿಸಲಾಯಿತಾದರೂ ಪರ್ಯಾಯ ನಾಯಕರನ್ನು ಬೆಳೆಸಲಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಅನಿವಾರ್ಯ ಎಂಬುದನ್ನು ಗಮನಿಸಿದ ಪಕ್ಷದ ವರಿಷ್ಠರು ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ನೇಮಿಸಿ ಮತ್ತೆ ಮುನ್ನಲೆಗೆ ತಂದರು. ಆದರೆ, ಅಷ್ಟರಲ್ಲೇ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಬಿಸಾಕುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿತ್ತು.

ಇದಾದ ಬಳಿಕವೂ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಲಿಲ್ಲ. ಸಿಗಲು ಬಿಡಲೂ ಇಲ್ಲ. ಸಾಮಾನ್ಯವಾಗಿ ಪಕ್ಷ ಅಧಿಕಾರದಲ್ಲಿದ್ದಾಗ ಸಮನ್ವಯತೆ ಎಂಬುದು ಪ್ರಮುಖವಾಗುತ್ತದೆ. ಆ ಸಮ್ವಯತೆ ಇದ್ದರಷ್ಟೇ ಎರಡೂ ಒಟ್ಟಾಗಿ ಮುಂದೆ ಸಾಗಿ ಚುನಾವಣೆ ಬಂದಾಗ ಒಟ್ಟು ಸೇರಿ ಹೋರಾಟ ಮಾಡುತ್ತದೆ. ಆದರೆ, ಇಲ್ಲಿ ಮಾತ್ರ ಸರಕಾರ ಮತ್ತು ಪಕ್ಷ ರೈಲ್ವೆ ಹಳಿಯಂತಾಗಿತ್ತು. ಆರಂಭದಿಂದ ಅಂತ್ಯದವರೆಗೂ ಎರಡೂ ಪ್ರತ್ಯೇಕವಾಗಿದ್ದವೇ ಹೊರತು ಎಲ್ಲೂ ಒಟ್ಟು ಸೇರಲೇ ಇಲ್ಲ. ಚುನಾವಣೆ ಸಮೀಪಿಸಿದಾಗ ಎರಡನ್ನೂ ಒಟ್ಟು ಸೇರಿಸುವ ಪ್ರಯತ್ನ ಮಾಡಲಾಯಿತಾ ದರೂ ಅಷ್ಟರಲ್ಲಿ ಸಮಯ ಕಳೆದಿತ್ತು.

ಇದರ ಪರಿಣಾಮ ಅಧಿಕಾರದಲ್ಲಿದ್ದ ಪಕ್ಷ ಹೀನಾಯವಾಗಿ ಸೋಲುವಂತಾಯಿತು. ಈ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಕಾರಣವನ್ನು ಬಿಜೆಪಿ ನಾಯಕರು ಹೇಳಬಹುದು. ಆದರೆ, ಆ ನಾಯಕರೇ ಸೋಲಿಗೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ. ಏಕೆಂದರೆ ಈ ಸೋಲಿಗೆ ಪಕ್ಷ ಎಷ್ಟು ಜವಾಬ್ದಾರಿಯೋ, ಅಷ್ಟೇ ಜವಾಬ್ದಾರಿ ಪಕ್ಷದ ಸರಕಾರದ್ದೂ ಆಗಿದೆ. ಅಧಿಕಾರದಲ್ಲಿದ್ದಾಗ ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ, ಪ್ರತಿಪಕ್ಷ ಕಾಂಗ್ರೆಸ್ಸನ್ನು ಕಟ್ಟಿ ಹಾಕಲು ಎಲ್ಲಾ ಅಸಗಳು ಬತ್ತಳಿಕೆಯಲ್ಲಿ ಇದ್ದರೂ ಒಂದೇ ಒಂದು ಅಸವನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಸರರಾಕದ ವಿರುದ್ಧ ಪ್ರತಿಪಕ್ಷಗಳಿಗೆ ಭ್ರಷ್ಟಾಚಾರದ ದೊಡ್ಡ ಅಸವೇ ಸಿಕ್ಕಂತಾಯಿತು.

ಏನಾದರೂ ಬಿಜೆಪಿ ಸರಕಾರ ಹಿಂದಿನ ಸರಕಾರದ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಿದ್ದರೆ ಪ್ರತಿಪಕ್ಷಗಳಿಗೆ ಅಷ್ಟು ದೊಡ್ಡ ಅಸ ಸಿಗುತ್ತಿರಲಿಲ್ಲ. ಪಕ್ಷ ಕೂಡ ಈ ವಿಚಾರದಲ್ಲಿ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲೇ ಇಲ್ಲ. ಇದೆಲ್ಲಕ್ಕೂ ಕಾರಣ ಮತ್ತೆ ಬಣ ರಾಜಕಾರಣ. ಇಲ್ಲಿ
ಅಧಿಕಾರದಲ್ಲಿರುವವರನ್ನು ಒಂದು ಬಣವಾದರೆ, ಪಕ್ಷದ್ದು ಇನ್ನೊಂದು ಬಣ. ಪಕ್ಷವೇ ಮುಖ್ಯ ಎಂದುಕೊಂಡಿದ್ದವರ ಮಾತಿಗೆ ಆಡಳಿತದಲ್ಲಿ ಬೆಲೆ ಸಿಗುತ್ತಿರಲಿಲ್ಲ.

ಹೀಗಾಗಿ ಹೊಂದಾಣಿಕೆ ರಾಜಕಾರಣ ಬೇಡ ಎಂಬ ಮಾತಿಗೆ ಕಿಮ್ಮತ್ತು ಸಿಗಲಿಲ್ಲ. ಈ ಭಿನ್ನಮತ ಎಷ್ಟರ ಮಟ್ಟಿಗೆ ಮುಂದುವರಿಯಿತು ಎಂದರೆ, ಪಕ್ಷ ಏನಾದರೆ ನಮಗೇನು? ನಾವು, ನಮ್ಮೊಂದಿಗಿರುವವರು ಆಯಕಟ್ಟಿನ ಸ್ಥಳಗಳಲ್ಲಿದ್ದರೆ ಸಾಕು. ನಮ್ಮ ಮಾತಿನಂತೆ ಎಲ್ಲವೂ ನಡೆಯಬೇಕು ಎನ್ನುವ ಹಂತಕ್ಕೆ ಹೋಯಿತು. ಸರಕಾರದ ನಿರ್ಧಾರಗಳು ಮಾತ್ರವಲ್ಲ, ಪಕ್ಷದ ನಿರ್ಧಾರಗಳು ಕೂಡ ಏಕಪಕ್ಷೀಯವಾಗಿ ಇರುವಂತಾಗಿತ್ತು. ಹಿಂದಿನ ಸರಕಾರದ ಅಕ್ರಮದ ವಿರುದ್ಧದ ತನಿಖೆ ಮತ್ತು ಮೀಸಲು ವಿಚಾರದಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರಗಳು, ಟಿಕೆಟ್ ಹಂಚಿಕೆಯಲ್ಲಿ ಪಕ್ಷ
ತೆಗೆದುಕೊಂಡ ನಿರ್ಧಾರಗಳೇ ಇದಕ್ಕೆ ಸಾಕ್ಷಿ. ಇಲ್ಲಿ ನಾಯಕರ ಮಧ್ಯೆ ಪಕ್ಷಕ್ಕಿಂತ ನಾನೇ ಎಂಬ ಅಹಂ ಕೆಲಸ ಮಾಡಿತು.

ಅದರ ಪರಿಣಾಮ ಬಿಜೆಪಿ ಸೋತು ಅಧಿಕಾರದಿಂದ ಕೆಳಗಿಳಿಯುವಂತಾಯಿತು. ಇದಾಗಿ ಒಂದು ತಿಂಗಳ ಬಳಿಕ ಮತ್ತೆ ಬಣ ರಾಜಕಾರಣದ ಒಳಬೇಗುದಿ ಸೋಟಿಸಲಾರಂ ಭಿಸಿದೆ. ಪರಸ್ಪರ ಆರೋಪ- ಪ್ರತ್ಯಾರೋಪಗಳು ಮುಂದುವರಿದಿವೆ. ಹೀಗಾಗಿಯೇ ಬಿ.ಎಸ್.ಯಡಿಯೂರಪ್ಪ- ಅನಂತ ಕುಮಾರ್ ಜೋಡಿ ನೆನಪಾಗುತ್ತಿದೆ. ಇವರಿಬ್ಬರಿಂದಾಗಿ ಬಿ.ಬಿ.ಶಿವಪ್ಪ ಅವರಂಥ ಕೆಲವು ನಾಯಕರು ಮೂಲೆಗುಂಪಾದರಾದರೂ ಪಕ್ಷಕ್ಕೆ ಯಾವತ್ತೂ ಸಮಸ್ಯೆಯಾಗಲಿಲ್ಲ. ಪಕ್ಷದ ಪಾಲಿಗೆ ಇಬ್ಬರೂ ಜೋಡೆತ್ತುಗಳಂತೆ ಇದ್ದರು. ಕಾಂಗ್ರೆಸ್ ಮತ್ತು ಜನತಾ ಪರಿವಾರದ ಪೈಪೋಟಿ ಮಧ್ಯೆ ಬಿಜೆಪಿ ಈ ಮಟ್ಟಕ್ಕೆ ಬೆಳೆದುನಿಲ್ಲಲು ಇವರಿಬ್ಬರ ಕೊಡುಗೆಯೂ ಮಹತ್ವದ್ದಾಗಿದೆ. ಹಾಗೆಂದು ಇಬ್ಬರ ಮಧ್ಯೆ ಎಲ್ಲವೂ ಸರಿ ಇತ್ತು ಎಂದು ಅರ್ಥವಲ್ಲ. ಅಧಿಕಾರ, ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ‘ಭಿನ್ನಾಭಿಪ್ರಾಯ’ಗಳಿದ್ದವು.

ಆದರೆ, ಅದನ್ನು ‘ಭಿನ್ನಮತ’ವಾಗಲು ಅವಕಾಶ ನೀಡುತ್ತಿರಲಿಲ್ಲ. ಇಬ್ಬರ ನಡುವಿನ ಅಂತರ್ಯುದ್ಧ ಹಲವು ಬಾರಿ ದೆಹಲಿವರೆಗೂ ತಲುಪಿ ವರಿಷ್ಠರು ಮಧ್ಯೆಪ್ರವೇಶಿಸಿ ಸಮಸ್ಯೆ ಬಗೆಹರಿಸುವ ಮಟ್ಟಕ್ಕೂ ಇಬ್ಬರ ನಡುವೆ ಆಂತರಿಕ ಕಚ್ಚಾಟ ಮುಂದುವರಿಯುತ್ತಿತ್ತು. ತಮ್ಮ ನೀಲಿಗಣ್ಣಿನ ಯುವಕ ಅನಂತ್‌ಕುಮಾರ್ ಮೇಲೆ ಯಡಿಯೂರಪ್ಪ ಅದೆಷ್ಟೋ ಬಾರಿ ಕೆಂಗಣ್ಣು ಬೀರಿದ್ದರು. ಅನಂತ್‌ಕುಮಾರ್ ಕೂಡ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡುತ್ತಿದ್ದರು. ಇವರಿಬ್ಬರು ಒಟ್ಟಾದ ಬಳಿಕ ಅನಂತಕುಮಾರ್ ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸಚಿವರಾಗುವವರೆಗೂ ಇದು ಪುನರಾವರ್ತನೆಯಾಗುತ್ತಲೇ ಇತ್ತು.

ಇಷ್ಟೆಲ್ಲಾ ಇದ್ದರೂ ಪಕ್ಷ ಸಂಘಟನೆ ವಿಚಾರ ಬಂದಾಗ ಒಟ್ಟಾಗುತ್ತಿದ್ದರು. ಜೋಡೆತ್ತುಗಳ ಹೆಗಲ ಮೇಲೆ ನೊಗ ಹೇರಿದಾಗ ಹೇಗೆ ಒಟ್ಟಾಗಿ ಕೆಲಸ ಮಾಡುತ್ತವೋ ಅದೇ ರೀತಿ ಇಬ್ಬರೂ ದುಡಿಯುತ್ತಿದ್ದರು. ತಮ್ಮಿಬ್ಬರ ಮಧ್ಯೆ ಏನೇ ವೈಮನಸ್ಯವಿರಲಿ, ಮೂರನೇ ವ್ಯಕ್ತಿಗೆ ಮೂಗು ತೂರಿಸಲು
ಅವಕಾಶ ನೀಡುತ್ತಿರಲಿಲ್ಲ. ಹಾಗೇನಾದರೂ ಮೂಗು ತೂರಿಸಲು ಯತ್ನಿಸಿದರೆ ಮೂಗನ್ನೇ ಕತ್ತರಿಸಿಹಾಕುತ್ತಿದ್ದರು. ಅನಂತಕುಮಾರ್ ಅವರ ರಾಜಕೀಯ ತಂತ್ರಗಾರಿಕೆ, ಚಾತುರ್ಯಕ್ಕೆ ಯಡಿಯೂರಪ್ಪ ಅವರ ಸಂಘಟನಾ ಶಕ್ತಿ ಜತೆಯಾಗಿ ನಿಲ್ಲುತ್ತಿತ್ತು. ಇಬ್ಬರೂ ಒಟ್ಟಾಗಿ ರಾಜ್ಯವಿಡೀ
ಓಡಾಡಿ ಸಂಘಟನೆ ಬಲಗೊಳಿಸುತ್ತಿದ್ದರು. ಯಾರಾದರೂ ಅನಂತಕುಮಾರ್ ಮಾತು ಕೇಳದೇ ಇದ್ದಾಗ ಯಡಿಯೂರಪ್ಪ ಗದರಿಸಿ ಸುಮ್ಮನಾಗಿಸುತ್ತಿದ್ದರು.

ಯಡಿಯೂರಪ್ಪ ವಿರುದ್ಧ ಯಾರಾದರೂ ಸಿಟ್ಟಿಗೆದ್ದರೆ ಅನಂತಕುಮಾರ್ ಹೋಗಿ ತಣ್ಣಗಾಗಿಸುತ್ತಿದ್ದರು. ಎಲ್ಲ ಕ್ಕಿಂತ ಮುಖ್ಯವಾಗಿ ತಮ್ಮಿಬ್ಬರ ನಡು
ವಿನ ಭಿನ್ನಾಭಿಪ್ರಾಯ ಕಾರ್ಯ ಕರ್ತರು ಮಾತ್ರವಲ್ಲ, ಸ್ಥಳೀಯ ಮುಖಂಡರ ಹಂತಕ್ಕೂ ತಲುಪಲು ಅವಕಾಶ ನೀಡುತ್ತಿರಲಿಲ್ಲ. ಹೀಗಾಗಿ
ಯಡಿಯೂರಪ್ಪ-ಅನಂತ್‌ಕುಮಾರ್ ಒಟ್ಟಾಗಿದ್ದಾರೆ ಎಂಬ ಕಾರಣಕ್ಕೆ ಕಾರ್ಯಕರ್ತರೂ ಒಟ್ಟಾಗಿರುತ್ತಿದ್ದರು. ಬಣ ರಾಜಕಾರಣಕ್ಕೆ ಆಸ್ಪದವೇ ಇರಲಿಲ್ಲ.
ಆದರೆ, ಈಗ ಆಗುತ್ತಿರುವುದೇನು? ರಾಜ್ಯ ಮಟ್ಟದಿಂದ ಬೂತ್ ಮಟ್ಟದವರೆಗೂ ಬಣ ರಾಜಕಾರಣ ತೀವ್ರವಾಗಿದೆ.

ರಾಜ್ಯ ಮಟ್ಟದಿಂದ ಹಿಡಿದು ತಳ ಮಟ್ಟದವರೆಗೂ ತಮ್ಮ ಬಣದವರನ್ನು ಸಮರ್ಥಿಸಿಕೊಳ್ಳಲು, ಅವರಿಗೆ ಸ್ಥಾನಮಾನ ಕಲ್ಪಿಸಲು ಪೈಪೋಟಿ ನಡೆಯು ತ್ತಿದೆ. ತಾನೇ ಸರಿ ಎಂಬ ನಾಯಕರ ನಿಲುವು ಕಾರ್ಯಕರ್ತರವರೆಗೂ ತಲುಪಿದೆ. ತಮ್ಮಲ್ಲೇ ಪರಸ್ಪರ ಕಚ್ಚಾಡಿಕೊಳ್ಳುತ್ತಿರುವ ರಾಜ್ಯ ನಾಯಕತ್ವ ಇದನ್ನು ಸರಿಪಡಿಸುವ ಪರಿಸ್ಥಿತಿಯಲ್ಲಿ ಇಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಆದ್ಯತೆ ನೀಡಿರುವ ರಾಷ್ಟ್ರೀಯ ನಾಯಕರಿಗೆ ಪುರುಸೋತ್ತಿಲ್ಲ. ಹೀಗಾಗಿ ಸದ್ಯಕ್ಕಂತೂ ಬಿಜೆಪಿಯಲ್ಲಿ ಬಣ ರಾಜಕಾರಣ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.

ಲಾಸ್ಟ್ ಸಿಪ್: ನಮಗೆ ಯಾವಾಗಲೂ ದೇಶ ಮೊದಲು ಎನ್ನುತ್ತಿರುವವರು ನಾನು ಮೊದಲು ಎಂದು ಭಾವಿಸಿದರೆ ರಾಜ್ಯ ಬಿಜೆಪಿಗಾದ ಪರಿಸ್ಥಿತಿ ಆಗುತ್ತದೆ.