ಮೂರ್ತಿ ಪೂಜೆ
ಕೆಲ ದಿನಗಳ ಹಿಂದೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಒಂದು ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಮತ್ತವರ ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ ಕೆಲವರಷ್ಟೇ ಇದ್ದರು. ಅಲ್ಲಿ ಮಾತನಾಡಿದ ಯಡಿಯೂರಪ್ಪ ತಮ್ಮ ಪುತ್ರನಿಗೆ ಒಂದು ಮಹತ್ವದ ಸುಳಿವು ನೀಡಿದರಂತೆ.
‘ರಾಜ್ಯದಲ್ಲಿ ಬಿಜೆಪಿಯ ಪುನಶ್ಚೇತನವಾಗಬೇಕು ಮತ್ತು ಪಾರ್ಲಿಮೆಂಟ್ ಚುನಾವಣೆ ಯಲ್ಲಿ ೨೦ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ನಮ್ಮ ಉದ್ದೇಶ ಈಡೇರಬೇಕು ಎಂದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಸೂಚಿಸಿದವರು ಬಂದು ಕೂರಬೇಕು. ಹೀಗೆ ರಾಜ್ಯಾಧ್ಯಕ್ಷರಾಗುವವರು ಪಕ್ಷಕ್ಕೆ ಶಕ್ತಿ ತುಂಬುವ ನಮ್ಮ ಗುರಿಗೆ ಪ್ಲಸ್ ಆಗಿರಬೇಕು. ಆ ದೃಷ್ಟಿಯಿಂದ ನಮ್ಮ ಮುಂದಿರುವ ಆಯ್ಕೆ ಎಂದರೆ ಇವತ್ತು ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ. ಅವರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿದರೆ ರಾಜ್ಯದಲ್ಲಿ ಬಿಜೆಪಿಯ ಪವರ್ ಹೆಚ್ಚಾಗುತ್ತದೆ ಅಂತ ನಾನು ವರಿಷ್ಠರಿಗೆ ಹೇಳುತ್ತೇನೆ. ಆದರೆ ಅದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಅವರ ವಿಷಯದಲ್ಲಿ ನಿನಗಿರುವ ಭಿನ್ನಾಭಿಪ್ರಾಯ ನಿವಾರಣೆ ಯಾಗಬೇಕು’- ಹೀಗಂತ ಯಡಿಯೂರಪ್ಪ ಅವರು ಹೇಳಿದಾಗ ವಿಜಯೇಂದ್ರ ಅರೆಕ್ಷಣ ಮೌನವಾಗಿದ್ದರಂತೆ.
ಅಂದ ಹಾಗೆ, ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಶೋಭಾ ಕರಂದ್ಲಾಜೆ ೨೦೧೯ರಲ್ಲಿ ನಡೆದ ಒಂದು ಘಟನೆಯಿಂದ ಬೇಸತ್ತು ದೂರವಾಗಿದ್ದರು. ಹೀಗಾಗಿ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದ ನಂತರ ಇಷ್ಟು ಕಾಲ ಅವರ ಕ್ಯಾಂಪಿನಲ್ಲಿ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ. ೪ ವರ್ಷಗಳ ಹಿಂದೆ ವಿಜಯೇಂದ್ರ ತಮ್ಮ ವಿರುದ್ಧ ಕಿಡಿ ಕಾರಿದ್ದರಿಂದ ನೊಂದುಕೊಂಡ ಶೋಭಾ ಕರಂದ್ಲಾಜೆ ತಪ್ಪಿಯೂ ಯಡಿಯೂರಪ್ಪ ಅವರ ಮನೆಯ ಕಡೆ ಹೋಗಿರಲಿಲ್ಲವಂತೆ.
ಮುಂದೆ ಅವರು ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವರಾದರು. ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸೆಟ್ಲಾದರು. ಅಲ್ಲಿಗೆ ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಕ್ಕಿಳಿಸಲಾಯಿತು. ಅಷ್ಟೇ ಅಲ್ಲ, ಅವರನ್ನು ಬಿಜೆಪಿಯ ‘ಔಟರ್ ರಿಂಗ್ ರೋಡ್’ನಲ್ಲಿ ನಿಲ್ಲಿಸುವ ಯತ್ನ ಆರಂಭವಾಯಿತು.
ಯಡಿಯೂರಪ್ಪ ಅವರನ್ನೇ ದೂರ ತಳ್ಳುವ ಯತ್ನ ನಡೆದಾಗ ವಿಜಯೇಂದ್ರ ಅವರನ್ನು ಸುಮ್ಮನೆ ಬಿಡಲು ಸಾಧ್ಯವೇ? ಹಾಗಂತಲೇ ಅವರ ವಿಧಾನ ಪರಿಷತ್ ಎಂಟ್ರಿಗೆ ಅವಕಾಶ ನೀಡದೆ, ಬೊಮ್ಮಾಯಿ ಸಂಪುಟಕ್ಕೆ ನುಗ್ಗುವ ಚಾನ್ಸು ನೀಡದೆ ನಿಯಂತ್ರಿಸಲಾಯಿತು. ಆದರೆ ಎಲ್ಲ ಕಡೆ ತಮಗಿರುವ ಲಿಂಕುಗಳನ್ನು ಬಳಸಿ ವಿಜಯೇಂದ್ರ ಅವರು ವಿಧಾನಸಭೆ ಪ್ರವೇಶಿಸುವಂತೆ ನೋಡಿಕೊಂಡ ಯಡಿಯೂರಪ್ಪ ಅವರಿಗೆ ಈಗ ನಿಜವಾದ ಸವಾಲು ಶುರುವಾಗಿದೆ.
ಅರ್ಥಾತ್, ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವ ಅವರ ವಿರೋಧಿ ಗ್ಯಾಂಗು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಶಾಸಕಾಂಗ ನಾಯಕನ ಸ್ಥಾನವನ್ನು ಕಬ್ಜಾ ಮಾಡಿಕೊಳ್ಳಲು ಹೊರಟಿದೆ. ಈ ದಿಸೆಯಲ್ಲಿ ‘ಎ’ ಪ್ಲ್ಯಾನ್ ಮತ್ತು ‘ಬಿ’ ಪ್ಲ್ಯಾನ್ ರೆಡಿ ಮಾಡಿಟ್ಟುಕೊಂಡಿರುವ ಈ ಗ್ಯಾಂಗು ಯಶಸ್ವಿಯಾದರೆ ಅನುಮಾನವೇ ಬೇಡ, ಪಕ್ಷದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ‘ಷೇರು ಮೌಲ್ಯ’ ಕಡಿಮೆಯಾಗಲಿದೆ.
ಅಂದ ಹಾಗೆ, ಹಿರಿಯ ನಾಯಕ ವಿ. ಸೋಮಣ್ಣ ರಾಜ್ಯಾಧ್ಯಕ್ಷರಾಗಿ, ಡಾ. ಅಶ್ವಥ್ಥ ನಾರಾಯಣ ಇಲ್ಲವೇ ವಿ.ಸುನೀಲ್ ಕುಮಾರ್ ಶಾಸಕಾಂಗ ನಾಯಕ ರಾಗುವುದುದರ ‘ಎ’ ಪ್ಲ್ಯಾನು. ಇದೇ ರೀತಿ ಡಾ. ಅಶ್ವಥ್ಥ ನಾರಾಯಣ, ಸಿ.ಟಿ. ರವಿ ಮತ್ತು ವಿ. ಸುನೀಲ್ ಕುಮಾರ್ ಅವರ ಪೈಕಿ ಒಬ್ಬರು ರಾಜ್ಯಾಧ್ಯಕ್ಷ ರಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಶಾಸಕಾಂಗ ನಾಯಕರಾಗುವುದು ಅದರ ‘ಬಿ’ ಪ್ಲ್ಯಾನು. ಯಾವಾಗ ಇದು ಸ್ಪಷ್ಟವಾಯಿತೋ, ದಿಢೀರನೆ ಎಚ್ಚೆತ್ತ ಯಡಿಯೂರಪ್ಪ ತಾವೊಂದು ಪ್ಲ್ಯಾನು ರೆಡಿ ಮಾಡಿದ್ದಾರೆ.
ಅದರ ಪ್ರಕಾರ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಲ್ಲವೇ ಮಾಜಿ ಸಚಿವ ಆರ್.ಅಶೋಕ್ ಅವರನ್ನು ತರಬೇಕು. ಅದೇ ರೀತಿ ಶಾಸಕಾಂಗ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಬಂದು ಕೂರುವಂತೆ ಮಾಡಬೇಕು. ಇದು ಯಡಿಯೂರಪ್ಪ ಪ್ಲ್ಯಾನು. ಬೊಮ್ಮಾಯಿ ಈಗ ಅನಿವಾರ್ಯ ಅಂದ ಹಾಗೆ, ಪಕ್ಷದ ಶಾಸಕಾಂಗ ನಾಯಕರಾಗಿ, ಆ ಮೂಲಕ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆ ಆಗುವುದು ಸಹಜ ನ್ಯಾಯ. ಏಕೆಂದರೆ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ಅಽಕೃತ ವಿರೋಧ ಪಕ್ಷವಾದಾಗ ಮುಖ್ಯಮಂತ್ರಿ ಗಳಾಗಿದ್ದವರೇ ವಿಪಕ್ಷ ನಾಯಕರಾಗುವುದು ಸಂಪ್ರದಾಯ.
ಇದಕ್ಕೆ ಕಾರಣವೂ ಇದೆ. ಅದೆಂದರೆ ಮುಖ್ಯಮಂತ್ರಿಗಳಾಗಿದ್ದವರಿಗೆ ಸರಕಾರದ ಎಲ್ಲ ಇಲಾಖೆಗಳ ಆಳ-ಅಗಲ ಗೊತ್ತಿರುತ್ತದೆ. ಅದೇ ರೀತಿ, ಬಯಸಿದ ಮಾಹಿತಿ ಪಡೆಯಲು ಅವರಿಗೆ ಬೇಕಾದ ಅಧಿಕಾರಿಗಳಿರುತ್ತಾರೆ. ಇದೇ ಕಾರಣಕ್ಕಾಗಿ ಕರ್ನಾಟಕದ ಇತಿಹಾಸದಲ್ಲಿ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ಅಧಿಕೃತ ವಿರೋಧ ಪಕ್ಷವಾದಾಗ, ಮುಖ್ಯಮಂತ್ರಿಗಳಾಗಿದ್ದವರೇ ವಿಪಕ್ಷ ನಾಯಕರಾಗಿದ್ದು ಜಾಸ್ತಿ. ೨೦೦೬ರಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಸರಕಾರ ಉರುಳಿ ಬಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದಾಗ ಧರ್ಮಸಿಂಗ್ ಪ್ರತಿಪಕ್ಷ ನಾಯಕರಾಗಿದ್ದರು. ೨೦೧೩ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಶುರುವಿನಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ, ನಂತರ ಬಿಜೆಪಿಯ ಜಗದೀಶ್ ಶೆಟ್ಟರ್, ೨೦೧೮ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಮೇಲೆದ್ದಾಗ ಬಿಜೆಪಿಯ ಯಡಿಯೂರಪ್ಪ, ೨೦೧೯ರಲ್ಲಿ ಬಿಜೆಪಿ ಸರಕಾರ ಸೆಟ್ಲಾದಾಗ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದರು.
೧೯೮೩ರ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಗುಂಡೂರಾಯರು ಸೋಲನುಭವಿಸಿದ್ದರಿಂದ ಜನತಾರಂಗ ಸರಕಾ ರದ ಎದುರು ಪ್ರತಿಪಕ್ಷ ನಾಯಕರಾಗಲು ಸಾಧ್ಯವಾಗಲಿಲ್ಲ. ೧೯೯೪ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಾಗ ಅದಕ್ಕೆ ಅಽಕೃತ ವಿರೋಧ ಪಕ್ಷದ ಸ್ಥಾನವೇ ಇರಲಿಲ್ಲ. ಪಕ್ಷ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆದರೂ ವಿಪಕ್ಷ ನಾಯಕ ಸ್ಥಾನದಲ್ಲಿ ಕೂರದ ಮಾಜಿ ಮುಖ್ಯಮಂತ್ರಿ ಎಂದರೆ ರಾಮಕೃಷ್ಣ ಹೆಗಡೆ. ೧೯೮೯ರಲ್ಲಿ ಜನತಾದಳ ೨೪ ಸ್ಥಾನ ಗೆದ್ದು ಅಽಕೃತ ವಿರೋಧ ಪಕ್ಷವಾದಾಗ, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹೆಗಡೆ ಸಹಜ ಆಯ್ಕೆಯಾಗಿದ್ದರು.
ಆದರೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಾಟ್ಲಿಂಗ್, ರೇವಜಿತು, ಟೆಲಿಫೋನ್ ಕದ್ದಾಲಿಕೆ ಹಗರಣಗಳಿಗೆ ಸಿಲುಕಿದ್ದ ಅವರು, ಇಷ್ಟೆಲ್ಲ ರಗಳೆ ಹೆಗಲ ಮೇಲಿರುವಾಗ ತಾವು ವಿಪಕ್ಷ ನಾಯಕನಾಗಿ ಕೂರುವುದು ಸರಿಯಲ್ಲ ಎಂದು ತೀರ್ಮಾನಿಸಿದ್ದರು. ಹೀಗಾಗಿ ಅವತ್ತು ಡಿ.ಬಿ. ಚಂದ್ರೇಗೌಡರು ಪ್ರತಿಪಕ್ಷದ ನಾಯಕರಾದರು. ಹೀಗೆ ಆಡಳಿತಾರೂಢ ಪಕ್ಷ ಅಧಿಕೃತ ವಿರೋಧ ಪಕ್ಷವಾ ದಾಗ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮುಖ್ಯಮಂತ್ರಿ ಗಳಾಗಿದ್ದವರೇ ಬಂದು ಕೂರುವುದು ಪ್ರಾಕ್ಟಿಕಲ್ ಕೂಡಾ. ಯಾರೇನೇ ಹೇಳಿದರೂ ಇವತ್ತು ಸಿದ್ದರಾಮಯ್ಯ ಅವರ ಮುಂದೆ ನಿಲ್ಲುವ ಮತ್ತು ಹಣಕಾಸಿನ ವಿಷಯದಲ್ಲಿ ಪವರ್ ಫುಲ್ಲಾಗಿ ಮಾತನಾಡುವ ಶಕ್ತಿ ಅಂತಿದ್ದರೆ ಅದು ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಅಜೆಂಡಾ ಹಿಡಿದು ಹೋರಾಡಲು ಒಂದು ರಾಜಕೀಯ ಪಕ್ಷಕ್ಕೆ ಜನತಾ ನ್ಯಾಯಾಲಯ ಸಾಕು, ಆದರೆ ವಿಧಾನಸಭೆಯಲ್ಲಿ ಹೋರಾಡಲು ಅದಕ್ಕೆ ವಿಷಯಜ್ಞಾನದ ನೇತೃತ್ವ ಬೇಕೇ ಬೇಕು. ಆ ದೃಷ್ಟಿಯಿಂದ ಬೊಮ್ಮಾಯಿ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ತರದೆ ಬಿಜೆಪಿ ವರಿಷ್ಠರಿಗೆ ವಿಧಿಯಿಲ್ಲ. ಒಂದು ವೇಳೆ ಹಾಗೆ ಮಾಡದೆ ಬೊಮ್ಮಾಯಿ ‘ಮ್ಯಾಚ್‌ಫಿಕ್ಸಿಂಗ್ ಕ್ಯಾಂಡಿಡೇಟು’ ಅಂತ ವಾದಿಸುವವರ ಪರ ಅದು ನಿಂತರೆ, ಬೇರೊಬ್ಬರನ್ನು ತಂದರೆ ಪರಿಸ್ಥಿತಿ ಕಷ್ಟಕರವಾಗಬಹುದು.
ಶೋಭಾ ಕರಂದ್ಲಾಜೆ ಏಕೆ ಬೇಕು?
ಅಂದ ಹಾಗೆ, ಇಂಥ ಅಂಶಗಳೆಲ್ಲ ಬೊಮ್ಮಾಯಿ ಅವರಿಗೆ ಪ್ಲಸ್ ಆಗುವುದರಿಂದ ಯಡಿಯೂರಪ್ಪಅವರಿಗೆ ಹೆಚ್ಚಿನ ಚಿಂತೆ ಇಲ್ಲ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತರುವ ವಿಷಯದಲ್ಲಿ ಅವರಿಗೆ ಒಂದಿಲ್ಲೊಂದು ಅಡ್ಡಿ ಎದುರಾಗುತ್ತಿದೆ. ಹಾಗಂತಲೇ ಅವರು ಶಾಂಗ್ರಿಲಾ ಹೋಟೆಲಿನ ಮೀಟಿಂಗಿನಲ್ಲಿ ಕುಳಿತು ವಿಜಯೇಂದ್ರ ಅವರಿಗಿದ್ದ ವಿರೋಧ ವನ್ನು ನಿವಾರಿಸಿದ್ದಾರೆ.
ಇದಾದ ನಂತರ ದಿಲ್ಲಿಗೆ ಹೋದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬಳಿ ಚರ್ಚಿಸಿದ್ದಾರೆ. ಪಕ್ಷದ ರಾಜ್ಯಾ ಧ್ಯಕ್ಷ ಸ್ಥಾನಕ್ಕೆ ಶೋಭಾ ರನ್ನು ತಂದರೆ ಕರ್ನಾಟಕದಲ್ಲಿ ಒಕ್ಕಲಿಗ ಮತಬ್ಯಾಂಕನ್ನು ಕ್ರೋಡೀಕರಿಸುವುದು ಸುಲಭ ಎಂದವರು ಹೇಳಿದ್ದನ್ನು ನಡ್ಡಾ ಕುತೂಹಲದಿಂದ ಕೇಳಿಸಿಕೊಂಡರಂತೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಳೆ ಮೈಸೂರು ಭಾಗದ ಬಹುತೇಕ ಒಕ್ಕಲಿಗ ಮತದಾರರು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯನ್ನು ಅರಸುತ್ತಿದ್ದಾರೆ. ಇಂಥ ಕಾಲದಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಕೈಗೂಡಿಸಿದರೆ ಮತ್ತು ಅದೇ ಕಾಲಕ್ಕೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದರೆ ಒಕ್ಕಲಿಗ ಮತದಾರರು ಕನ್ ಸಾಲಿಡೇಟ್ ಆಗುತ್ತಾರೆ. ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಮತಬ್ಯಾಂಕನ್ನು ಒಡೆದಿದ್ದರಿಂದ ಅದು ಕಾಂಗ್ರೆಸ್ಸಿಗೆ ಅನುಕೂಲವಾಯಿತು.
ಈಗ ಆ ಮತಬ್ಯಾಂಕು ಒಗ್ಗೂಡುವಂತೆ ಮಾಡಿದರೆ ನಾವು ಯಶಸ್ಸು ಗಳಿಸುವುದು ಗ್ಯಾರಂಟಿ. ಇಷ್ಟಾದ ನಂತರ ನೋ ಡೌಟ್, ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವು ೨೦ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಅಂತ ಯಡಿಯೂರಪ್ಪ ವಿವರಿಸಿದಾಗ ನಡ್ಡಾ ತಲೆದೂಗಿದರಂತೆ.
ಶೋಭಕ್ಕ ಬಂದ್ರೆ ತಲೆಯೆತ್ತಲಿದೆ ಕೆಜೆಪಿ?
ಯಡಿಯೂರಪ್ಪ ದಿಲ್ಲಿಗೆ ಹೋಗಿ ಶೋಭಾ ಕರಂದ್ಲಾಜೆ ಪಕ್ಷಾಧ್ಯಕ್ಷರಾಗಲಿ ಅಂತ ಹೇಳಿ ಬರುತ್ತಿದ್ದಂತೆ ಅವರ ವಿರೋಧಿ ಗ್ಯಾಂಗು ಕುದಿಯತೊಡಗಿದೆ. ಹಾಗಂತಲೇ ಅದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂದೇಶ ರವಾನಿಸಿ, ಶೋಭಾ ಪಕ್ಷದ ಅಧ್ಯಕ್ಷರಾದರೆ ಕರ್ನಾಟಕದಲ್ಲಿ ಕೆಜೆಪಿ ಮತ್ತೆ ತಲೆಯೆತ್ತಲಿದೆ ಅಂತ ಹೇಳಿದೆಯಂತೆ. ಅಂದರೆ, ಯಡಿಯೂರಪ್ಪ ನಿಷ್ಠರು ಮೇಲೆದ್ದು, ಪಕ್ಷನಿಷ್ಠರು ಮೂಲೆಗುಂಪಾಗುವುದು ನಿಶ್ಚಿತ ಅಂತಲೂ ವಿವರಿಸಿದೆಯಂತೆ.
ಎಲ್ಲಕ್ಕಿಂತ ಮುಖ್ಯವಾಗಿ, ಶೋಭಾ ಕರಂದ್ಲಾಜೆ ಪಕ್ಷದ ಅಧ್ಯಕ್ಷರಾದರೆ ಬಿಜೆಪಿಗಿಂತ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಪ್ಲಸ್ಸು. ಯಾಕೆಂದರೆ ಇವರಿಬ್ಬರೂ ಕರ್ನಾಟಕದಲ್ಲಿ ಪವರ್ ಮಿನಿಸ್ಟರುಗಳಾಗಿದ್ದವರು ಅಂತ ಅದು ಸೂಚ್ಯವಾಗಿ ಹೇಳಿದೆಯಂತೆ. ಪರಿಣಾಮ? ರಾಜ್ಯ ಬಿಜೆಪಿಯನ್ನು ವಶಪಡಿಸಿಕೊಳ್ಳಲು ಎರಡು ಬಣಗಳು ನಡೆಸಿರುವ ಕದನ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮುಂದೇನೋ? ಕಾದು ನೋಡಬೇಕು.