Thursday, 12th December 2024

ಬಜೆಟ್: ನಿರೀಕ್ಷೆ, ಅಪೇಕ್ಷೆ ಹಾಗೂ ಸವಾಲುಗಳು

ಪ್ರಸ್ತುತ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಲೋಕಸಭೆಯಲ್ಲಿ ಜುಲೈ ೨೩ರಂದು ಸತತ ಏಳನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ೩.೦ ಸರಕಾರದ ೨೦೨೪-೨೫ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಎರಡಂಕಿ ಪ್ರಗತಿಯ ಸಾಕಾರಕ್ಕೆ ಶ್ರೀಕಾರ ಹಾಕಲು ಸಜ್ಜಾಗಿದ್ದಾರೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆಯ ನಿಯಂತ್ರಣದ ಜತೆಗೆ ಕೃಷಿ ಕ್ಷೇತ್ರದ ಬೇಗುದಿಯನ್ನು ನಿವಾರಿಸಲು ನಿರ್ಣಾಯಕ ಹೆಜ್ಜೆ ಇಡುವುದು ಈಗಿನ ತುರ್ತು ಆದ್ಯತೆ. ಇದರೊಂದಿಗೆ ಆರ್ಥಿಕ ಬೆಳವಣಿಗೆಯ ವೇಗವನ್ನು ವೃದ್ಧಿಗೊಳಿಸಿ ೫ ಟ್ರಿಲಿಯನ್ ಡಾಲರ್ ಎಕಾನಮಿ ಹೊಂದುವ ಸಂಕಲ್ಪಕ್ಕೆ ಚಾಲನೆ ನೀಡಬೇಕಾಗಿದೆ.

ದೇಶದಲ್ಲಿ ಮೂಲ ಸೌಕರ್ಯಗಳನ್ನು ಸುಧಾರಣೆ ಮಾಡಲು ಹಾಗೂ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಲು ಶ್ರಮ ಕೈಗೊಳ್ಳುವರೇ ಪ್ರಧಾನಿ ಯವರಿಗೆ ದೇಶದ ಪ್ರಮುಖ ಅರ್ಥಶಾಸಜ್ಞರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬಜೆಟ್‌ನ ಆರ್ಥಿಕ ಸುಧಾರಣೆಗಳಿಗೆ ಮಾನವೀಯ ಸ್ಪರ್ಶ ನೀಡಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ. ಅಲ್ಲದೇ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಸರಕಾರವು ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಯನ್ನು ಕಡಿಮೆ ಮಾಡಬೇಕಿದೆ. ಚಿಲ್ಲರೆ ಹಣದುಬ್ಬರದ ಏರಿಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಆರ್ಥಿಕತೆಯ ಬೆಳವಣಿಗೆಗೆ ಒತ್ತು ನೀಡಬೇಕಿದೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಪರಿಣಾಮವಾಗಿ ಪುನಃ ದೇಶದ ಹಣದುಬ್ಬ ರವು ಜೂನ್ ತಿಂಗಳಿನಲ್ಲಿ ಶೇ.೫.೦೮ರಷ್ಟಕ್ಕೆ ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಚಿಲ್ಲರೆ ಹಣದುಬ್ಬರವನ್ನು ಶೇ.೪ ರಮಿತಿ ಯಲ್ಲಿ ಕಾಯ್ದುಕೊಳ್ಳುವುದು ಆರ್‌ಬಿಐನ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಜೂನ್ ತಿಂಗಳ ಸಗಟು ಹಣ ದುಬ್ಬರವು ಶೇ.೩.೩೬ಕ್ಕೆ ಏರಿಕೆ ಯಾಗುವು ದರೊಂದಿಗೆ ೧೬ ತಿಂಗಳಿನ ಗರಿಷ್ಠಮಟ್ಟ ತಲುಪಿದೆ.

ಸತತ ನಾಲ್ಕನೇಯ ತಿಂಗಳೂ ಏರಿಕೆಯ ಹಾದಿಯಲ್ಲಿದೆ. ಒಟ್ಟಾರೆ ಹಣದುಬ್ಬರವು ಇನ್ನೂ ಕಳವಳಕಾರಿ ಪರಿಸ್ಥಿತಿಯಲ್ಲಿದೆ. ಈ ಬಜೆಟ್‌ನಲ್ಲಿ ಕೃಷಿ
ಕ್ಷೇತ್ರದ ಸವಾಲುಗಳನ್ನು ಎದುರಿಸುವುದು, ಉದ್ಯೋಗ ಸೃಷ್ಟಿ, ಬಂಡವಾಳ ವೆಚ್ಚವನ್ನು ಉಳಿಸಿಕೊಳ್ಳುವುದು ಮತ್ತು ಹಣಕಾಸಿನ ಬಲವರ್ಧನೆಯನ್ನು ಕಾಪಾಡಿಕೊಳ್ಳಲು ಆದಾಯದ ಬೆಳವಣಿಗೆಯನ್ನು ಹೆಚ್ಚಿಸುವುದು ಆಗಿರುತ್ತದೆ. ಲೋಕಸಭೆ ಚುನಾವಣೆಗೂ ಮುನ್ನ ಫೆ.೧ರಂದು ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿ ಕೃಷಿ, ಮಹಿಳಾ ಸಬಲೀಕರಣ, ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು ಈ ಬಾರಿ ಬಜೆಟ್‌ನ ಮುಖ್ಯಾಂಶಗಳಾಗಿರಲಿವೆಯೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿರುವುದರಿಂದ ಬಜೆಟ್ ಮೇಲಿನ ನಿರೀಕ್ಷೆಗಳು ಗರಿಗೆದರಿವೆ. ತನ್ಮೂಲಕ ಈ ಬಾರಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಆರೋಗ್ಯ, ಶಿಕ್ಷಣ ಮತ್ತು
ಗ್ರಾಮೀಣಾಭಿವೃದ್ಧಿಯನ್ನೊಳಗೊಂಡ ಸಾಮಾಜಿಕ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗವಾಗುವ ನಿರೀಕ್ಷೆ ಇದೆ.

ಗ್ರಾಮೀಣ ಭಾಗಕ್ಕೆ ಆದ್ಯತೆ ಮತ್ತು ಸಮಾಜದ ದುರ್ಬಲ ವರ್ಗಗಳನ್ನು ಸಬಲಗೊಳಿಸುವುದರ ಕಡೆಗೆ ಹೆಚ್ಚಿನ ಗಮನ ನೀಡುವ ಸಾಧ್ಯತೆ ಇದೆ.
ಸಾಮಾಜಿಕ ಕಲ್ಯಾಣ, ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ವೆಚ್ಚಕ್ಕೆ ಹೆಚ್ಚು ಆದ್ಯತೆ, ವಿತ್ತೀಯ ಕೊರತೆಗೆ ಕಡಿವಾಣ, ಹಣದುಬ್ಬರವನ್ನು ಹೆಚ್ಚಿಸದೆ ಬೆಳವಣಿಗೆಯನ್ನು ಉತ್ತೇಜಿಸುವುದು ರೈತರ ಆದಾಯ ಹೆಚ್ಚಿಸಲು ಕ್ರಮ, ರಾಜ್ಯಗಳ ಬಂಡವಾಳ ವೆಚ್ಚಕ್ಕೆ ಉತ್ತೇಜನೆ, ರಕ್ಷಣೆ, ರೈಲ್ವೇ, ಮೂಲ ಸೌಕರ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸ ಘೋಷಣೆಗಳು, ಸ್ಟಾಂಡರ್ಡ್ ಡಿಡಕ್ಷನ್ ೫೦ ಸಾವಿರದಿಂದ ೧ ಲಕ್ಷಕ್ಕೆ ಏರಿಕೆ, ಮಧ್ಯಮ ವರ್ಗದವರಿಗೆ ಹೊಸ ತೆರಿಗೆ ಪದ್ಧತಿ ಯ ಅಡಿಯಲ್ಲಿ ಹೊಸ ತೆರಿಗೆ ಸ್ಲ್ಯಾಬ್ ಸಾಧ್ಯತೆಗಳಿವೆ.

ತೆರಿಗೆಗಳಲ್ಲಿ ವಿನಾಯಿತಿ ನಿರೀಕ್ಷಿಸಲಾಗಿದೆ. ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಶಿಕ್ಷಣಕ್ಕೆ ಬಜೆಟ್‌ನಲ್ಲಿ ವಿನಿಯೋಗಿಸಿ ಖಾಸಗಿ ಪಾಲನ್ನು ಕಡಿಮೆ ಮಾಡಬೇಕಾದ ತುರ್ತು ಉಂಟಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಗ್ರಾಮ, ನಗರ, ಪಟ್ಟಣವೆಂಬ ಬೇಧವಿಲ್ಲದೆ,
ಎಲ್ಲ ಕುಟುಂಬಗಳಿಗೂ ಇದು ಅತಿಯಾದ ಹೊರೆಯೆನಿಸಿದೆ. ಇದು ದೊಡ್ಡ ಅಸಮಾನತೆಗೂ ಕಾರಣವಾಗಿದೆ. ಕೌಶಲ, ಗುಣಮಟ್ಟ ಮತ್ತು ಅವಕಾಶಗಳ ವರ್ಧನೆಗೆ ಸರಕಾರ ಬಜೆಟ್‌ನಲ್ಲಿ ಹೆಚ್ಚಿನ ಗಮನ ನೀಡಬೇಕಾಗಿದೆ. ಕೇಂದ್ರ ಸರಕಾರವು ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಬೇಕು. ಮಕ್ಕಳ ಶಿಕ್ಷಣಕ್ಕೆ ತಂದೆ, ತಾಯಿಗಳ ಆದಾಯದ ಬಹುಪಾಲು ವ್ಯಯವಾಗುತ್ತಿದೆ. ಈಗಾಗಲೇ ಶಿಕ್ಷಣ, ಆರೋಗ್ಯ ವಲಯಗಳು ಖಾಸಗಿ ದರ್ಬಾರ್‌ನಲ್ಲಿ ನಡೆಯು ತ್ತಿವೆ. ಈ ಎರಡೂ ವಲಯಗಳು ರಾಷ್ಟ್ರೀಕರಣವಾಗಬೇಕಾಗಿದೆ.

ಪ್ರಮುಖ ಬೆಳೆಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಕೃಷಿ, ಮೂಲಸೌಕರ್ಯ ಮತ್ತು ಪ್ರೋತ್ಸಾಹದ ಮೇಲೆ ಗಮನ ಹರಿಸುವುದು ಕೂಡ ನಿರೀಕ್ಷಿಸಲಾಗಿದೆ. ಕೃಷಿಕರಿಗೆ ಉತ್ಪಾದನೆ ಗಾಗುವ ಖರ್ಚು, ಹೆಚ್ಚಿನ ಬೆಂಬಲ ಸಿಗಬೇಕಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದತೆ ೭೦ ವರ್ಷಕ್ಕಿಂತ ಮೇಲ್ಪಟ್ಟು ಎಲ್ಲ ಹಿರಿಯ ನಾಗರಿಕರನ್ನು ಆಯುಷ್ಮಾನ್ ಭಾರತದ ಅಡಿಯಲ್ಲಿ ತರುವ ಭರವಸೆಯನ್ನು ಈಡೇರಿಸಬೇಕಾಗಿದೆ. ಇದಕ್ಕೆ ಹೆಚ್ಚಿನ ಹಣವನ್ನು ವಿನಿಯೋಗಿಸ ಬೇಕಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೂ (ಗ್ರಾಮೀಣ) ಹೆಚ್ಚಿನ ಬಜೆಟ್ ಬೇಕಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಸಾಲ, ಜಾಗತಿಕ  ಸಾಮರ್ಥ್ಯ ಕೇಂದ್ರಗಳನ್ನು ವಿಸ್ತರಿಸುವುದು. ಸೇವಾ ರಫ್ತಿನ ಮೇಲೆ ನಿರಂತರ ಗಮನ ಮತ್ತು ದೇಶೀಯ ಆಹಾರ ಸರಪಳಿಗೆ ಒತ್ತು ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಜಿಡಿಪಿ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರವನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ತನ್ಮೂಲಕ ತೆರಿಗೆ ಉಳಿಸಿ ಜನರ ಕೈಯಲ್ಲಿ ಖರ್ಚು ಮಾಡಲು ಹೆಚ್ಚಿಗೆ ಹಣವನ್ನು ಉಳಿಸಿದರೆ ಅವರ ಖರೀದಿ ಶಕ್ತಿ ಹೆಚ್ಚುತ್ತದೆ. ಇದರಿಂದ ಹಣದ ಚಲಾವಣೆ, ವ್ಯಾಪಾರ ವಹಿವಾಟು ಹೆಚ್ಚಿನ ಆರ್ಥಿಕ ಪ್ರಗತಿಗೆ ಇಂಬು ದೊರಕುತ್ತದೆ ಎಂಬುದು ಸದ್ಯದ ಸರಕಾರದ ಲೆಕ್ಕಾಚಾರವಾ
ಗಿದೆ. ಪ್ರಸಕ್ತ ಬ್ಯಾಂಕ್‌ಗಳಲ್ಲಿ ಠೇವಣಿ ಸಾಲದ ಅನುಪಾತ ಶೇ.೭೫ರ ಕಳವಳಕಾರಿ ಮಟ್ಟಕ್ಕೆ ತಲುಪಿದ್ದು, ಈ ಅಂತರ ಕಡಿಮೆ ಮಾಡಲೂ ನೆರವಾಗಲಿದೆ.

ತೆರಿಗೆ ಹಣ ಉಳಿತಾ ಯವಾದರೆ ಜನರ ಕೈಯಲ್ಲಿ ಉಳಿಯುವ ಹಣ ಠೇವಣಿ ರೂಪದಲ್ಲಿ ಬ್ಯಾಂಕ್‌ಗಳಿಗೆ ಹರಿದು ಠೇವಣಿಯ ಪ್ರಮಾಣ ಹೆಚ್ಚಾಗುವ ಸಂಭವವಿರುತ್ತದೆ. ನಿರುದ್ಯೋಗ ಮತ್ತು ಹಣ ದುಬ್ಬರವು ಜನಗಳಿಗೆ ಪ್ರಮುಖ ವಿಷಯವಾಗಿದೆ. ಆರ್ಥಿಕತೆಯ ವೇಗವನ್ನು ಗಮನಿಸಿದಾಗ ಇದು ಪ್ರತಿ ವರ್ಷ ೮೦-೯೦ ಲಕ್ಷ ಉದ್ಯೋಗ ಸೃಷ್ಟಿಸುತ್ತದೆ. ಆದರೆ ವಾರ್ಷಿಕ ೧.೧ ಕೋಟಿಯಿಂದ ೧.೨ ಕೋಟಿ ಉದ್ಯೋಗ ಒದಗಿಸಬೇಕಾಗುತ್ತದೆ. ವಾಣಿಜ್ಯ ವಿಮಾನ ತಯಾರಿಕೆಯ ಜತೆಗೆ ಆಟಿಕೆಗಳು ಜವಳಿ ಮತ್ತು ಉಡುಪು ತಯಾರಿಕೆಯಂತಹ ವಲಯಗಳಿಗೆ ಬಜೆಟ್‌ನಲ್ಲಿ ಹಣಕಾಸಿನ ಪ್ರೋತ್ಸಾಹ ನೀಡಿದರೆ
ಕಾರ್ಮಿ ಕರ ಸಂಖ್ಯೆ ಹೆಚ್ಚಳವಾಗಲಿದೆ.

ಸವಾಲುಗಳು: ಇದೀಗ ದೇಶದ ಬಾಹ್ಯ ಸಾಲ ೬೩೮ ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಇದಕ್ಕೆ ಕಡಿವಾಣ ಹಾಕುವ ಸವಾಲಿದೆ. ೨೦೪೭ಕ್ಕೇ ಕಸಿತ ಭಾರತದ ಗುರಿ ಸಾಧಿಸುವ ನಿಟ್ಟಿನಲ್ಲಿ ಬಾಹ್ಯ ಸಾಲದ ಪ್ರಮಾಣವನ್ನು ತಗ್ಗಿಸುವ ಕಾರ್ಯದಲ್ಲಿ ನಿರತರಾಗಬೇಕಾಗಿದೆ. ವಿತ್ತೀಯ ಕೊರತೆಯನ್ನು ೨೦೨೪-೨೫ನೇ ಸಾಲಿನಲ್ಲಿ ಶೇ.೫.೧ ಹಾಗೂ ೨೦೨೫-೨೬ರಲ್ಲಿ ಶೇ.೪.೫ಕ್ಕೆ ತಗ್ಗಿಸುವ ಗುರಿ ಹೊಂದಬೇ ಕಾಗಿದೆ. ಇದು ಸಾಕಾರವಾಗಲು ಸರಕಾರ ಅನವಶ್ಯಕ ವೆಚ್ಚಗ ಳನ್ನು ನಿಯಂತ್ರಿಸಬೇಕಾಗಿದೆ. ಕೇಂದ್ರ ಸರಕಾರಕ್ಕೆ ಆರ್‌ಬಿಐ ೨.೧೧ ಲಕ್ಷ ಕೋಟಿ ರು. ಡಿಡೆಂಡ್ ಘೋಷಿಸಿದೆ. ಇದರಿಂದ ವಿತ್ತೀಯ ಕೊರತೆ ಶೇ.೦.೩ರಷ್ಟು ಕಡಿಮೆಯಾಗಲಿದೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಮಂದಗತಿಯಲ್ಲಿದ್ದು, ಭಾರತದಲ್ಲಿ ಅದರ ಪರಿಣಾಮಗಳು ಸಹಜವಾಗಿಯೇ ಉಂಟಾಗಿವೆ. ೫ ಟ್ರಿಲಿಯನ್ ಸೃಷ್ಟಿಯ ಸಂಕಲ್ಪ, ಉದ್ಯೋಗ ಸೃಷ್ಟಿಗೆ ನೀಡುವ ಅನಿವಾರ್ಯತೆ ಮತ್ತು ವಿತ್ತೀಯ ಕೊರತೆಯ ಗುರಿ ಕಾಯ್ದುಕೊಳ್ಳುವ ಸವಾಲು ಸರಕಾರದ ಮುಂದಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರುಗತಿಯಲ್ಲಿರುವುದು ಸವಾಲೇ ಆಗಿದೆ. ವಿವಿಧ ಸ್ಥರದ ಜನಮಾನಸದ ನಿರೀಕ್ಷೆ ಮತ್ತು ಅಪೇಕ್ಷೆಗಳ ಈಡೇರಿಕೆ ಯೊಂದಿಗೆ ಬಜೆಟ್‌ನ್ನು ಸರಿದೂಗಿಸುವುದು ಸಾಧ್ಯವೇ? ಕಾದು ನೋಡಬೇಕಾಗಿದೆ.

(ಲೇಖಕರು: ನಿವೃತ್ತ ಮುಖ್ಯ ಪ್ರಬಂಧಕರು ವಿಜಯ
ಬ್ಯಾಂಕ್ ಮತ್ತು ಸಂದರ್ಶಕ ಪ್ರಾಧ್ಯಾಪಕರು)