Thursday, 12th December 2024

ಆಕೆಯ ದೇಹದೊಳಗೆ ಹೊಕ್ಕಿತ್ತು ಹನ್ನೊಂದು ಗುಂಡು

ಶಶಾಂಕಣ

shashidhara.halady@gmail.com

ಆಕೆಯ ಹೆಸರು ಕಮ್ಲೇಶ್ ಕುಮಾರಿ ಯಾದವ್. ನೆನಪಿದೆಯೆ? ಉಹುಂ.. ನಮ್ಮಲ್ಲಿ ಹೆಚ್ಚಿನವರು ಈ ಹೆಸರನ್ನು ಮರೆತೇ ಬಿಟ್ಟಿದ್ದೇವೆ. ಇದನ್ನು ಕಂಡೇ ಹೇಳುವುದು ‘ಪಬ್ಲಿಕ್ ಮೆಮೊರಿ ಈಸ್ ಶಾರ್ಟ್’ : ನನ್ನನ್ನೂ ಸೇರಿಸಿಕೊಂಡು ಹೇಳುತ್ತಿದ್ದೇನೆ : ಸಾರ್ವಜನಿಕರ ನೆನಪು ಕ್ಷಣಿಕ.

ಕಮ್ಲೇಶ್ ಕುಮಾರಿ ಅಥವಾ ಕಮ್ಲೇಶ್ ಕುಮಾರಿ ಯಾದವ್ ಅವರ ದೇಹತ್ಯಾಗವು ನಮ್ಮ ದೇಶದ ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು,, ಆದರೂ ನಾವು ಆ ಮಹಿಳೆಯನ್ನು ತಕ್ಷಣ ನೆನಪಿಸಿಕೊಳ್ಳಲಾರೆವು. ಈಗ ಅವಳನ್ನು ನೆನಪಿಸಿಕೊಳ್ಳಲು, ‘ಬಣ್ಣದ ಹೊಗೆ’ಯು ಕಾರಣವಾಗಿ ರುವುದು ಒಂದು ವಿಪರ್ಯಾಸ. ಕಮ್ಲೇಶ್ ಕುಮಾರಿಯವರು ಆ ದಿನ ಪಾರ್ಲಿಮೆಂಟ್ ಪ್ರವೇಶ ದ್ವಾರದ ಮೊದಲನೆಯ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದರು.

ಸಿಆರ್‌ಪಿಎಫ್ ರಕ್ಷಣಾ ಸಿಬ್ಬಂದಿಯಾಗಿದ್ದ ಅವರ ಪ್ರತಿ ದಿನದ ಕೆಲಸ ಎಂದರೆ, ಪಾರ್ಲಿಮೆಂಟಿಗೆ ಬರುವವರನ್ನು ತಪಾಸಣೆ ಮಾಡುವಲ್ಲಿ ಇತರ ರಕ್ಷಣಾ ಸಿಬ್ಬಂದಿಗೆ ಸಹಾಯ ಮಾಡುವುದು. ಆಗ ಒಂದು ಬಿಳಿ ಅಂಬಾಸಿಡರ್ ಕಾರು ಪಾರ್ಲಿಮೆಂಟ್ ಗೇಟ್ ಸಂಖ್ಯೆ ೧ರತ್ತ ಧಾವಿಸಿತು. ಅದರ ಮೇಲೆ ‘ಗೃಹ ಸಚಿವಾಲಯ’ ಮತ್ತು ‘ಪಾರ್ಲಿಮೆಂಟ್’ ಎಂಬ ಸ್ಟಿಕರ್ ಇತ್ತು! ಅಂದರೆ, ಇದು ಸರಕಾರದ ಅಽಕೃತ ಅಂಬಾಸಿಡರ್ ಕಾರು ಎಂಬ ಭಾವನೆ ಬರುವಂತೆ ಅದನ್ನು ವಿನ್ಯಾಸ ಗೊಳಿಸಲಾಗಿತ್ತು. ಆಗೆಲ್ಲಾ ಅಂಬಾಸಿಡರ್ ಕಾರು ಗಳನ್ನು ಸರಕಾರದ ಗಣ್ಯರು ಬಳಸುತ್ತಿದ್ದ್ರು. ವಿವಿಐಪಿ ಕಾರು ಸಾಮಾನ್ಯವಾಗಿ ಗೇಟಿನ ಬಳಿ ಬಂದಾಗ ನಿಧಾನವಾಗಿ ಚಲಿಸುತ್ತವೆ; ಆದರೆ ಆ ಕಾರು ಇತರ ಕಾರುಗಳಂತೆ ನಿಧಾನವಾಗಿ ಚಲಿಸದೆ, ಹೆಚ್ಚು ವೇಗವಾಗಿ ಚಲಿಸುವುದನ್ನು ಕಮ್ಲೇಶ್ ಕುಮಾರಿ ಗಮನಿಸಿದರು.

ಆ ಬಿಳಿ ಕಾರು ತುಸು ಅನುಮಾನಾಸ್ಪದವಾಗಿ, ವೇಗವಾಗಿ ಚಲಿಸಿದ್ದನ್ನು ಗುರುತಿಸಿದ ಇವರು, ಅದರೊಳಗೆ ಐವರು ಯುವಕರು ಇದ್ದುದನ್ನು ಕಂಡರು; ತಕ್ಷಣ ಅನುಮಾನ ಬಂತು. ಅವರ ಬಳಿ ಅಂದು ಇದ್ದ ಒಂದೇ ಒಂದು ಅಸ್ತ್ರ ಎಂದರೆ, ವಾಕಿ ಟಾಕಿ. ಆ ಕಾರಿನಲ್ಲಿದ್ದ ಐವರು ಕೆಳಗಿಳಿದು ಪಾರ್ಲಿ ಮೆಂಟಿನತ್ತ ಹೋಗುವುದನ್ನು ಕಂಡ ಕೂಡಲೆ, ತನ್ನ ವಾಕಿ ಟಾಕಿಯಿಂದ ಮೇಲಧಿಕಾರಿಗೆ ಎಚ್ಚರಿಕೆ ಸಂದೇಶ ಕಳಿಸಿದರು. ಪಾರ್ಲಿಮೆಂಟಿನ ಒಳ ಆವರಣದಲ್ಲಿದ್ದ ಇತರ ಸಿಆರ್‌ಪಿಎಫ್ ಸಿಬ್ಬಂದಿಗೆ ಈ ರೀತಿ ಐವರು ಅನುಮಾಸ್ಪದವಾಗಿ ಅತ್ತ ಬರುತ್ತಿದ್ದಾರೆ ಎಂದು ಹೇಳಿಬಿಟ್ಟರು. ಇದನ್ನು ಗಮನಿಸಿದ ಆ ಐವರಲ್ಲಿ ಒಬ್ಬನು, ಇವರ ಮೇಲೆ ಏಕಾಏಕಿ ಗುಂಡು ಚಲಾಯಿಸಿದ.

ಗೇಟ್ ನಂ.೧೧ರ ಬಳಿ ಇದ್ದ ಇನ್ನೊಬ್ಬ ಸಿಆರ್‌ಪಿಎಫ್ ಕಾನ್ಸ್ಟೆಬಲ್ ಸುಖವಿಂದರ್ ಸಿಂಗ್ ಎಂಬಾತನ ಬಳಿ ಬಂದೂಕು ಇತ್ತು; ಅದನ್ನು ಹಿಡಿದು, ಆತ ಕಮ್ಲೇಶ್ ಕುಮಾರಿಯವರತ್ತ ಧಾವಿಸಿದ. ಕಮ್ಲೇಶ್ ಕುಮಾರಿಯವರ ಬಳಿ ಬಂದೂಕು ಇರಲಿಲ್ಲ; ಆಕೆ ವಾಕಿ ಟಾಕಿ ಮೂಲಕ ಎಚ್ಚರಿಕೆ ನೀಡುತ್ತಲೇ, ಗುಂಡೇಟು ತಿಂದು ಕುಸಿದರು. ಅವರ ದೇಹದೊಳಗೆ ಹನ್ನೊಂದು ಗುಂಡುಗಳು ಹೊಕ್ಕಿದ್ದವು.

ಆದರೆ ಆ ಒಂದು ಹೊತ್ತಿನಲ್ಲಿ ಅವರು ಬಹಳ ಮಹತ್ವದ ಕೆಲಸ ಮಾಡಿದ್ದರು : ವಾಕಿ ಟಾಕಿ ಮೂಲಕ ಭಯೋತ್ಪಾದಕರ ಆಗಮನವನ್ನು ಘೋಷಿಸಿದ್ದ ರಿಂದಾಗಿ, ಇಡೀ ಪಾರ್ಲಿಮೆಂಟ್ ಆವರಣದಲ್ಲಿದ್ದ ರಕ್ಷಣಾ ಸಿಬ್ಬಂದಿ ಎಚ್ಚೆತ್ತುಕೊಂಡಿತು. ಇವರ ಎಚ್ಚರಿಕೆಯನ್ನು ಕೇಳಿ, ಇವರತ್ತ ಧವಿಸಿ ಬಂದ ಸುಖವಿಂದರ್ ಸಿಂಗ್, ಬಂದೂಕು ಚಲಾಯಿಸಿ ಭಯೋತ್ಪಾದಕರನ್ನು ತಡೆದರು. ಅವರು ಮತ್ತು ಇನ್ನೊಬ್ಬ ಸಿಬ್ಬಂದಿ ಸಂತೋಷ್ ಕುಮಾರ್ ಎಂಬು ವವರು ಮೂವರು ಭಯೋತ್ಪಾದಕ ರನ್ನು ಸಾಯಿಸಿದರು.

ಕಮ್ಲೇಶ್ ಕುಮಾರಿ ಯಾದವ್ ಅವರ ಬಲಿದಾನವು ಬಹಳ ಪ್ರಮುಖ ಎನಿಸಿದೆ; ೧೩.೧೨.೨೦೦೧ರಂದು ಐವರು ಭಯೋತ್ಪಾದಕರು, ಅಪಾರ ಪ್ರಮಾಣದ ಶಸಾಸಗಳೊಂದಿಗೆ, ಬಿಳಿ ಅಂಬಾಸಿಡರ್ ಕಾರಿನಲ್ಲಿ ಪಾರ್ಲಿಮೆಂಟ್ ಆವರಣ ಪ್ರವೇಶಿಸಿದರೂ, ಕಮ್ಲೇಶ್ ಕುಮಾರಿ ಅವರ ಎಚ್ಚರಿಕೆಯಿಂದಾಗ, ಇತರ ರಕ್ಷಣಾ ಸಿಬ್ಬಂದಿ ಪ್ರತಿ ದಾಳಿ ನಡೆಸಿ, ಅವರೈವರನ್ನೂ ಕೊಂದು ಹಾಕಿದರು ಮತ್ತು ಪಾರ್ಲಿಮೆಂಟಿನ ಒಳಗೆ ಅವರು ಪ್ರವೇಶಿಸದಂತೆ ಮಾಡಿದರು. ಕಮ್ಲೇಶ್ ಕುಮಾರಿಯವರ ತ್ಯಾಗ ವನ್ನು ಗುರುತಿಸಿದ ಸರಕಾರ ಮತ್ತು ಸೇನೆ, ಅವರಿಗೆ ೨೦೦೨ರಲ್ಲಿ ಮರಣೋತ್ತರವಾಗಿ ‘ಅಶೋಕ ಚಕ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಶೌರ್ಯಕ್ಕಾಗಿ ಇರುವ ಈ ಅತ್ಯುನ್ನತ ಗೌರವವನ್ನು ಪಡೆದ ಮೊದಲ ಮಹಿಳಾ ಪೊಲೀಸ್ ಕಮ್ಲೇಶ್ ಕುಮಾರಿ ಯಾದವ್.

ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಪ್ರಮುಖ ಮಹಿಳೆಯರಲ್ಲಿ ಕಮ್ಲೇಶ್ ಕುಮಾರಿ ಯಾದವ್ ಸೇರಿದ್ದಾರೆ. ೧೩.೧೨.೨೦೦೧ರಂದು ಇವರ ಜತೆಯಲ್ಲೇ ಇನ್ನೂ ಹತ್ತು ಜನರು ಪಾರ್ಲಿಮೆಂಟ್ ಆವರಣದಲ್ಲಿ ಬಲಿದಾನಕ್ಕೆ ಒಳಗಾಗಿದ್ದು ನಿಜಕ್ಕೂ ಬೇಸರದ ವಿಷಯ. ನಮ್ಮ ದೇಶದ ಪಾರ್ಲಿಮೆಂಟ್ ಕಲಾಪಗಳು ನಡೆಯುತ್ತಿರುವಾಗಲೇ ನಡೆದ ಈ ಭಯೋತ್ಪಾದಕ ದಾಳಿಯು ನಿಜಕ್ಕೂ ಒಂದು ಕಪ್ಪು ಚುಕ್ಕೆ; ಅಂದು ಅದನ್ನು ನಮ್ಮವರು ಸಮರ್ಥವಾಗಿ ಎದುರಿಸಿದರೂ, ಹನ್ನೊಂದು ಜನರ ಬಲಿದಾನ ಆಗಬಾರದಿತ್ತು; ಸಮರ್ಥವಾಗಿ ಎದುರಿಸಿದೆವು ಎಂಬ ಹೆಮ್ಮೆ ಒಳಗೊಳಗೇ ಇದ್ದರೂ, ಇಂಥದೊಂದು ದಾಳಿಯನ್ನು ಆರಂಭದಲ್ಲೇ, ಅಂದರೆ, ಮೊದಲನೇ ನಂಬರ್ ಗೇಟ್‌ನ ಹೊರಭಾಗದಲ್ಲೇ ತಡೆಯಬೇಕಿತ್ತು ಎನಿಸುತ್ತದೆ.

ಇದೊಂದು ದುರ್ಘಟನೆ; ಕಹಿ ಅನುಭವ; ಸಣ್ಣಗೆ ಅವಮಾನವೂ ಆಗುವಂತಹ ಹತ್ಯಾಕಾಂಡ; ಮರೆಯಲೇಬಾರದ, ಆದರೆ, ಕಹಿನೆನಪನ್ನು ದೂರ ಮಾಡುವ ಉದ್ದೇಶದಿಂದ ಮರೆಯಬೇಕು ಎನಿಸುವ ಘಟನೆ. ಆದರೆ, ೧೩.೧೨.೨೦೨೩ರಂದು, ಅಂದರೆ ಮೊನ್ನೆ ನಡೆದ ‘ಬಣ್ಣದ ಬಾಂಬ್’ ಪ್ರಕರಣವು, ಈ ಘಟನೆಯನ್ನು ಮತ್ತೆ ನೆನಪಿಸಿದೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ನಡೆದ ಈ ಪಾರ್ಲಿಮೆಂಟ್ ದಾಳಿಯ ವಿವರಗಳನ್ನು ನೋಡುತ್ತಾ ಹೋದರೆ ಇಂದಿಗೂ ರೋಷ ಉಕ್ಕುತ್ತದೆ, ಹತಾಷ ಭಾವನೆ ಕಾಡುತ್ತದೆ. ಹತಾಷೆ ಏಕೆಂದರೆ, ಆ ಭಯಾನಕ ದಾಳಿ ನಡೆಸಿ, ನಮ್ಮ ಹತ್ತುಮಂದಿ ರಕ್ಷಣಾ ಸಿಬ್ಬಂದಿಯ ಸಾವಿಗೆ ಕಾರಣರಾದವರನ್ನು ನಮ್ಮ ದೇಶದವರು ಅಕ್ಷರಶಃ ಕ್ಷಮಿಸಿ ಬಿಟ್ಟರು! ಅಂದರೆ, ಯಾವುದೇ ಪ್ರತೀಕಾರ ತೆಗೆದುಕೊಳ್ಳದೇ, ಶಾಂತಿ ಮಂತ್ರ ಜಪಿಸುತ್ತಾ, ಭಯೋತ್ಪಾದಕರನ್ನು ಪಾರ್ಲಿಮೆಂಟ್ ಆವರಣಕ್ಕೆ ಕಳಿಸಿದ ನೆರೆಯ ದೇಶದ ಆ ಕುಕೃತ್ಯವನ್ನು ಕ್ಷಮಿಸಿದೆವು.

ಎಲ್ಲಕ್ಕೂ ಪ್ರತೀಕಾರ ಮಾಡುತ್ತಾ ಹೋಗಬಾರದು ಎಂದು ಕೆಲವರು ಹೇಳಬಹುದು; ಆದರೆ, ಪಾರ್ಲಿಮೆಂಟಿನಂತಹ ಪವಿತ್ರ ತಾಣದ ಮೇಲೆ, ನಮ್ಮ ಪ್ರಧಾನಿ ಯವರೂ ಸೇರಿದಂತೆ ಆಡಳಿತ ನಡೆಸುವ ಪ್ರಮುಖ ವ್ಯಕ್ತಿಗಳು ಇರುವ ಜಾಗದ ಮೇಲೆ, ದೇಶದ ನೂರಾರು ಜನಪ್ರತಿನಿಧಿಗಳು ಸೇರುವ ಜಾಗದ ಮೇಲೆ ಬಾಂಬ್ ದಾಳಿ ನಡೆಸಲು ಪ್ರಯತ್ನಿಸಿದವರನ್ನು ಸುಮ್ಮನೆ ಬಿಡುವುದು ಸರಿಯೆ? ಪಾರ್ಲಿಮೆಂಟ್ ಮೇಲೆ ಆ ದಾಳಿ ನಡೆದ ಏಳು ವರ್ಷಗಳ ನಂತರ, ಮುಂಬಯಿಯ ಮೇಲೆ ಇದೇ ರೀತಿಯ, ಇನ್ನೂ ಭಯಾನಕ ದಾಳಿ ನಡೆಯಿತು; ಆಗ ೧೬೫ ನಾಗರಿಕರನ್ನು ಭಯೋತ್ಪಾದಕರು ಕೊಂದು ಹಾಕಿದರು. ಬಹುಷಃ, ೨೦೦೧ರ ಪಾರ್ಲಿಮೆಂಟ್ ದಾಳಿಯ ನಂತರ ಸೂಕ್ತ ಪ್ರತೀಕಾರ ಕ್ರಮ ತೆಗೆದುಕೊಂಡಿದ್ದರೆ, ೨೦೦೮ರ ಮುಂಬೈ ದಾಳಿ ನಡೆಯುತ್ತಿದ್ದಿಲ್ಲ ಎಂದು ಕೆಲವು ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

೧೩.೧೨.೨೦೦೧ರಂದು ನಡೆದ ಪಾರ್ಲಿಮೆಂಟ್ ಮೇಲೆ ನಡೆದ ಆ ಭೀಕರ ದಾಳಿಯಲ್ಲಿ ಒಟ್ಟು ಹನ್ನೊಂದು ಜನ ಮೃತಪಟ್ಟರು; ಐವರು ಭಯೋತ್ಪಾದಕ ರನ್ನು ನಮ್ಮ ರಕ್ಷಣಾ ಸಿಬ್ಬಂದಿ ಕೊಂದು ಹಾಕಿದರು. ಒಟ್ಟು ಹದಿನಾರು ಸಾವು! ಅಂದೂ ಸಹ ದಾಳಿ ಆರಂಭವಾಗಿದ್ದು ಬೆಳಗಿನ ೧೧.೩೦ರ ಸಮಯಕ್ಕೆ; ಐವರು ಭಯೋತ್ಪಾದಕರ ಕೈಯಲ್ಲಿ ‘ಬಣ್ಣದ ಕ್ಯಾನಿಸ್ಟರ್’ಗಳಿರಲಿಲ್ಲ, ಬದಲಿಗೆ ಗ್ರೆನೇಡ್‌ಗಳಿದ್ದವು, ಬಂದೂಕುಗಳಿದ್ದವು. ದೆಹಲಿ ಪೊಲೀಸರ ಹೇಳೀಕೆಯ ಪ್ರಕಾರ, ಅವರ ಬಳಿ ಎ.ಕೆ. ಬಂದೂಕು, ೯ ಎಂಎಂ ಪಿಸ್ತೂಲು, ಗ್ರೆನೇಡ್ ಲಾಂಚರ್, ಗ್ರೆನೇಡ್‌ಗಳು ಇದ್ದವು; ಜತೆಗೆ, ಡ್ರೈ ಫುಟ್‌ಗಳನ್ನೂ ಅವರು ಹೊತ್ತು ತಂದಿದ್ದರು! (೨೦೦೮ರ ಮುಂಬೈ ದಾಳಿಯಲ್ಲಿ ಎರಡು ದಿನ ಭಯೋತ್ಪಾದಕರು ತಾಜ್ ಹೊಟೆಲ್ ನಲ್ಲಿ ತಂಗಿದ್ದರು ಮತ್ತು ಡ್ರೈ ಫುಟ್‌ಗಳನ್ನು ಹೊತ್ತು ತಂದಿದ್ದರು!)

೧೬.೧೨.೨೦೦೧ರಂದು ದೆಹಲಿಯ ಪೊಲೀಸ್ ಕಮಿಷನರ್ ಅಜಯ್ ರಾಜ್ ಶರ್ಮಾ ಅವರ ಹೇಳಿಕೆಯ ಪ್ರಕಾರ, ೧೩.೧೨.೨೦೦೧ರಂದು ಪಾರ್ಲಿಮೆಂಟ್ ಮೇಲೆ ಸಶಸ ದಾಳಿ ಮಾಡಿದವರು ಪಾಕಿಸ್ತಾನದವರಾಗಿದ್ದು, ಅವರ ಹೆಸರು ಹಜ್ಮಾ, ಹೈದರ್ ಅಲಿಯಾಸ್ ತೌಫಿಲ್, ರಾನಾ, ರಾಜ ಮತ್ತು ಹಮದ್. ಪೊಲೀಸರ ಪ್ರಕಾರ ಇವರಿಗೆ ಸಹಾಯ ಮಾಡಿದವರು ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಸೈಯದ್ ಅಜ್ಞಿಲ್ ಜಿಲಾನಿ, ಅಫ್ಜಲ್ ಗುರು, ಶೌಕತ್ ಹುಸೇನ್ ಮೊದಲಾದವರು; ಈ ದಾಳಿಯನ್ನು ರೂಪಿಸಿದ್ದು ಜೆಇಎಂ ಮತ್ತು ಜೆಕೆಎಲ್ ಎಫ್ ಎಂದು ಪೊಲೀಸರು ಹೇಳಿದ್ದರು.

ಆ ಭಯೋತ್ಪಾದಕ ದಾಳಿಯು ವಿಡಿಯೋ ಕ್ಯಾಮೆರಾಗಳಲ್ಲಿ ಸೆರೆಯಾಗಿ, ಟಿವಿಗಳ ಮೂಲಕ ದೇಶದಾದ್ಯಂತ ಬಿತ್ತರವಾಗಿದ್ದು ಇನ್ನೊಂದು ವಿಶೇಷ ಘಟನೆ. ಲೋಕಸಭಾ ಅಧಿವೇಶನ ನಡೆಯುತ್ತಿದ್ದು ದರಿಂದ, ಅಂದು ಉಪರಾಷ್ಟ್ರಪತಿ ಕೃಷ್ಣ ಕಾಂತ್, ರಾಜ್ಯಸಭಾ ಅಧ್ಯಕ್ಷರು, ಎಲ್.ಕೆ.ಅದ್ವಾನಿಯವರೂ ಸೇರಿದಂತೆ ಹಲವು ನಾಯಕರು ಪಾರ್ಲಿಮೆಂಟ್ ಒಳಗೆ ಇದ್ದರು. ಪ್ರಮುಖ ಸುದ್ದಿಮಾಧ್ಯಮದ ಪ್ರತಿನಿಧಿಗಳು ಪಾರ್ಲಿಮೆಂಟ್ ಆವರಣದಲ್ಲೇ ಇದ್ದು, ಎಲ್ಲಾ ವಿವರಗಳನ್ನು ಚಿತ್ರೀಕರಣ ಮಾಡಿದರು.

ಆ ದಿನದ ದಾಳಿಯು ಸ್ಪಷ್ಟವಾಗಿ ಆತ್ಮಹತ್ಯಾದಾಳಿ; ಮಾನವ ಬಾಂಬ್ ಸಹ ಆ ದಿನ ಪಾರ್ಲಿಮೆಂಟ್ ಆವರಣದೊಳಗೆ ಬಂದಿದ್ದ! ಬಿಳಿ ಅಂಬಾಸಿಡರ್ ಕಾರು ಮೊದಲನೆಯ ಗೇಟ್ ದಾಟಿ ಮುಂದೆ ಬಂದು, ಉಪ ರಾಷ್ಟ್ರಪತಿಗಳ ರಕ್ಷಣಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದಿತ್ತು; ಅಷ್ಟರಲ್ಲಾಗಲೇ ಕಮ್ಲೇಶ್ ಕುಮಾರಿ ಯಾದವ್ ವಾಕಿಟಾಕಿಯಲ್ಲಿ ಸಿಆರ್‌ಪಿಎಫ್ ಕಂಟ್ರೋಲ್ ರೂಂಗೆ ಸುದ್ದಿ ಮುಟ್ಟಿಸಿದ್ದರಿಂದ, ಎಲ್ಲರೂ ಎಚ್ಚೆತ್ತುಕೊಂಡಿದ್ದರು. ತಮ್ಮನ್ನು ಗುರುತಿಸಿ, ಎಚ್ಚರಿಕೆ ನೀಡಿದ ಕಮ್ಲೇಶ್ ಕುಮಾರಿ ಯಾದವ್ ಅವರನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು, ಅದೇ ಸಮಯದಲ್ಲಿ ದೇಶ್ ರಾಜ್ ಎಂಬ ತೋಟದ ಕೆಲಸಗಾರರನ್ನು ಕೊಂದಿದ್ದರು.

ಗೇಟ್ ಸಂಖ್ಯೆ ೧೧ರ ಮುಂದೆ ಇದ್ದ ಗೋಡೆಯನ್ನು ನಾಲ್ವರು ಭಯೋತ್ಪಾದಕರು ಹತ್ತಿ ಮುಂದೆ ಸಾಗಿದರು. ತಾವು ಧರಿಸಿದ್ದ ಸಾದಾ ಬಟ್ಟೆಯನ್ನು ತೆಗೆದು, ಒಳಗಿದ್ದ ಹಸಿರು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡರು. ಪ್ರತಿಯೊಬ್ಬರ ಬಳಿ ಒಂದು ಡಜನ್‌ಗಿಂತಲೂ ಹೆಚ್ಚು ಗ್ರೆನೇಡ್‌ಗಳಿದ್ದವು. ಇದೇ ಸಮಯದಲ್ಲಿ ಗೇಟ್ ೫ ಬಳಿಯಿದ್ದ ಸಿಬ್ಬಂದಿಯು, ಪ್ರಧಾನಿಯವರ ಆಗಮನಕ್ಕೆ ಸಿದ್ಧತೆ ನಡೆಸುತ್ತಿದ್ದರು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೆಲವೇ ನಿಮಿಷಗಳಲ್ಲಿ ಆ
ಗೇಟ್ ಮೂಲಕ ಒಳಗೆ ಬರುವವರಿದ್ದರು. ಕಮ್ಲೇಶ್ ಕುಮಾರಿ ಯಾದವ್ ಅವರ ವಾಕಿ ಟಾಕಿ ಸಂದೇಶ ಕೇಳಿ ಎಚ್ಚೆತ್ತುಕೊಂಡ ಸಿಬ್ಬಂದಿ, ತಕ್ಷಣ ಗೇಟ್ ೫
ಸೇರಿದಂತೆ, ಪಾರ್ಲಿಮೆಂಟಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿದರು. ಇದರಿಂದಾಗಿ ಭಯೋತ್ಪಾದಕರು ಯಾವ ಕಾರಣಕ್ಕೂ ಪಾರ್ಲಿಮೆಂಟಿನ ಒಳಗೆ
ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಅತ್ತಿತ್ತ ಓಡಾಡುತ್ತಿದ್ದ, ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸುತ್ತಿದ್ದ ಭಯೋತ್ಪಾದಕರನ್ನ ಸಿಆರ್‌ಪಿಎಫ್ ಯೋಧರು ಬೆನ್ನಟ್ಟಿದರು; ಅವರತ್ತ ಗುಂಡು
ಹಾರಿಸಿದರು. ಗೇಟ್ ೮ ಮತ್ತು ೯ ರ ಬಳಿ ಮೂವರು ಭಯೋತ್ಪಾದಕರು ಸತ್ತರು. ದೂರದರ್ಶನ ಕೇಬಲ್ ಹಿಡಿದು ಮೊದಲನೆಯ ಮಹಡಿಗೆ ಮೇಲೇರಲು
ಯತ್ನಿಸಿದ ಮತ್ತೊಬ್ಬ ಸಹ ಗುಂಡಿಗೆ ಬಲಿಯಾದ. ನಮ್ಮ ಪೊಲೀಸರ ಗುಂಡಿಗೆ ಬಲಿಯಾಗುವ ಮುಂಚೆ ಆತ ಒಂದು ಗ್ರೆನೇಡ್ ಸಿಡಿಸಿದ್ದ! ಈ ನಡುವೆ ನಮ್ಮ
ದೇಶದ ಒಟ್ಟು ಹತ್ತು ಜನ ರಕ್ಷಣಾ ಸಿಬ್ಬಂದಿ ಬಲಿಯಾದರು. ಹಲವರು ಗಾಯಗೊಂಡರು. ಐದನೆಯ ಭಯೋತ್ಪಾದಕನು ಪಾರ್ಲಿಮೆಂಟ್ ಮುಖ್ಯ ಕಟ್ಟಡದ ಹತ್ತಿರ ಓಡಿದ; ಆದರೆ ಮುಖ್ಯ ಬಾಗಿಲನ್ನು ರಕ್ಷಣಾ ಸಿಬ್ಬಂದಿ ಮುಚ್ಚಿದ್ದರಿಂದಾಗಿ, ಸಿಆರ್‌ಪಿಎಫ್ ಸಿಬ್ಬಂದಿಯ ಗುಂಡಿಗೆ ಸಿಲುಕಿ ಸತ್ತ.

ಈ ಐವರಲ್ಲಿ ಒಬ್ಬರು ಅಥವಾ ಇಬ್ಬರು ಪಾರ್ಲಿಮೆಂಟಿನ ಒಳಗೆ ಸೇರಿಕೊಂಡಿದ್ದರೆ, ಬಹುಷಃ ನಾನಾ ರೀತಿಯ ಅನಾಹುತಗಳಾಗುತ್ತಿದ್ದವು. ಅವರ ಬಳಿ ಡ್ರೈ ಫುಟ್ ಪ್ಯಾಕೆಟ್ ಇದ್ದುದನ್ನು ಗಮನಿಸಿದ ರಕ್ಷಣಾ ತಜ್ಞರು, ಅವರು ಕೆಲವು ನಾಯಕರನ್ನು ಒತ್ತೆಯಾಳಾಗಿ ತೆಗೆದುಕೊಳ್ಳುವ ಸಾಧ್ಯತೆ ಇತ್ತು ಎಂದಿದ್ದಾರೆ. ಈ ನಡುವೆ, ಅವರು ಬಂದಿದ್ದ ಬಿಳಿ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಸುಮಾರು ೩೦ ಕಿಲೊ ಸ್ಫೋಟಕ ವಸ್ತುಗಳಿದ್ದವು; ಬಹುಷಃ ಆ ವಾಹನವನ್ನು ಇನ್ನಷ್ಟು ದೂರ ಚಲಿಸಿ, ಪಾರ್ಲಿಮೆಂಟಿನ ಒಂದು ಬಾಗಿಲಿನ ಬಳಿ ಸ್ಫೋಟಿಸುವುದು ಸಹ ಅವರ ಉದ್ದೇಶವಾಗಿದ್ದಿರಬಹುದು.

ಗೇಟ್ ೧೦ ಮತ್ತು ೧೧ರ ನಡುವೆ ಒಂದು ಗೋಡೆಯನ್ನು ೨೦೦೧ರ ಸಮಯದಲ್ಲಿ ನಿರ್ಮಿಸಲಾಗಿದ್ದು, ಇದರ ಮಾಹಿತಿ ಭಯೋತ್ಪಾದಕರಿಗೆ ಇರಲಿಲ್ಲ ಎಂದೂ, ಮತ್ತು ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿತು ಎಂದೂ ರಕ್ಷನಾ ತಜ್ಞರು ಆನಂತರ ವಿಶ್ಲೇಷಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಅತ್ಯುನ್ನತ ಮತ್ತು ಪವಿತ್ರ ಸ್ಥಾನ ಎನಿಸಿರುವ ಪಾರ್ಲಿಮೆಂಟ್ ಮೇಲೆ ನಡೆದ ಆ ದಾಳಿಯು ನಿಜಕ್ಕೂ ಭಯ ಹುಟ್ಟಿಸುವಂತಹದ್ದು. ಹತ್ತು ಜನ ರಕ್ಷಣಾ ಸಿಬ್ಬಂದಿ ಯೂ ಸೇರಿದಂತೆ ಹನ್ನೊಂದು ಜನ ಅಂದು ಮೃತರಾಗಿದ್ದರೂ, ಪ್ರಧಾನಿಯೂ ಸೇರಿದಂತೆ ಹಿರಿಯ ನಾಯಕರಿಗೆ ಯಾವುದೇ ಹಾನಿಯಾಗಲಿಲ್ಲ ಎಂಬುದು ಸಮಾಧಾದ ವಿಷಯ. ಅದು ಕೇವಲ ‘ಬಣ್ಣದ ಬೆದರಿಕೆ’ ಯಾಗಿರಲಿಲ್ಲ; ಗ್ರೆನೇಡ್ ಸಹಿತ ಪಾರ್ಲಿಮೆಂಟಿನ ಮೇಲಿನ ದಾಳಿಯಾಗಿತ್ತು. ಕಮ್ಲೇಶ್ ಕುಮಾರಿಯವರಂತಹ ರಕ್ಷಣಾ ಸಿಬ್ಬಂದಿಯಿಂದಾಗಿ,
ಅಂದು ಅಪಾರ ಅನಾಹುತ ತಪ್ಪಿತ್ತು.