Sunday, 15th December 2024

ನಮ್ಮವರ ನೆನಪಿಗಾಗಿ ಸಮಾಧಿ ಬದಲು ಸಸಿ ನೆಟ್ಟರೆ ಹೇಗಿದ್ದೀತು !

ಇದೇ ಅಂತರಂಗ ಸುದ್ದಿ

vbhat@me.com

ಯೋಗಿ ದುರ್ಲಭಜೀ ಅವರು ಒಂದು ಕಾಡನ್ನು ನೋಡಲು ಹೋಗಿದ್ದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮರಗಳಿದ್ದ ಕಾಡು. ಹಾಗೆ ನೋಡಿದರೆ ಅಲ್ಲಿನ ಮರಗಳು ತಮ್ಮಷ್ಟಕ್ಕೆ ತಾವು ಬೆಳೆದದ್ದಲ್ಲ. ಎಲ್ಲವನ್ನೂ ಬೆಳೆಸಿದ್ದು. ಅಂದರೆ ಅದು ಕೃತಕ ಕಾಡು. ಅಲ್ಲಿ ಎಲ್ಲ ರೀತಿಯ ಮರಗಳಿದ್ದವು. ಅಲ್ಲಿ ಮರಗಳನ್ನು ನೆಟ್ಟು ಹೋದವರು ಬಹಳ ಆಸ್ಥೆಯಿಂದ ಅದರ ವಾಗಾತಿ, ಆರೈಕೆ ಮಾಡುತ್ತಿದ್ದರು. ತಾವು ನೆಟ್ಟ ಮರ ಹೇಗಿದೆಯೆಂದು ವನಪಾಲಕರನ್ನು ವಿಚಾರಿಸುತ್ತಿದ್ದರು.

ವಿದೇಶಗಳಲ್ಲಿ ನೆಲೆಸಿದವರೂ ಕಾಲಕಾಲಕ್ಕೆ ತಾವು ನೆಟ್ಟ ಸಸಿ ಎಷ್ಟು ಎತ್ತರವಾಗಿದೆ, ನೀರು-ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದೀರಾ, ಆ ಸಸಿಯ ಫೋಟೊ ತೆಗೆದು ವಾಟ್ಸಪ್‌ನಲ್ಲಿ ಕಳಿಸಿಕೊಡಿ ಎಂದು ಹೇಳುತ್ತಿದ್ದರು. ಇನ್ನು ಕೆಲವರಂತೂ ತಾವು ನೆಟ್ಟ ಸಸಿ ದೊಡ್ಡ ಮರವಾಗಿದ್ದನ್ನು ಕಂಡು ಸಂಭ್ರಮಿಸಿ, ಅದಕ್ಕೆ ಪೂಜೆ ಮಾಡಿ, ಅದರ ಮುಂದೆ ನಿಂತು ಫೋಟೊ ತೆಗೆಸಿ, ಅದನ್ನು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಪೋಸ್ಟ್ ಮಾಡಿ ಖುಷಿಪಡುತ್ತಿದ್ದರು. ಬರುಬರುತ್ತಾ ಈ ಕಾಡು ಸಮೃದ್ಧವಾಗಿ ಬೆಳೆದು ದಟ್ಟ ಅರಣ್ಯವೇ ಆಯಿತು.

ಹೂವು, ಹಣ್ಣು, ಮರಮಟ್ಟುಗಳು ಸೇರಿದಂತೆ ವೈವಿಧ್ಯಮಯ ತಳಿಗಳಿಂದ ಈ ಕಾಡು ವೈಶಿಷ್ಟ್ಯಪೂರ್ಣವೆಂದು ಅನಿಸಿಕೊಂಡಿತು. ಈ ಕಾಡಿನಲ್ಲಿ ಔಷಧಿಯ ಗುಣಗಳುಳ್ಳ ಸಸ್ಯಗಳೂ ತಲೆಯೆತ್ತಿದವು. ಈ ಕಾಡಿಗೆ ಪ್ರತಿವರ್ಷ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಯಿತು. ‘ವಿಶ್ವದಲ್ಲೇ ಮನುಷ್ಯ ನಿರ್ಮಿಸಿದ ಪ್ರಥಮ ಅರಣ್ಯ’ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ಪತ್ರಿಕೆ, ಟಿವಿ ಗಳಲ್ಲೂ ಈ ಕಾಡಿನ ಬಗ್ಗೆ ವಿಶೇಷ ವರದಿ, ಕಾರ್ಯಕ್ರಮಗಳಿಂದಾಗಿ ಮತ್ತಷ್ಟು ಜನಪ್ರಿಯ ವಾಯಿತು. ಎಲ್ಲ ಕಾಡುಗಳಲ್ಲಿರುವ ಮರ ಗಳು ಕಣ್ಮರೆಯಾಗಿ, ಅರಣ್ಯ ವಿನಾಶದಲ್ಲಿದ್ದರೆ, ವರ್ಷದಿಂದ ವರ್ಷಕ್ಕೆ ಅತಿ ಶೀಘ್ರದಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಕಾಡು ಇದೊಂದೇ ಎಂಬುದು ಇದರ ವೈಶಿಷ್ಟ್ಯಗಳಲ್ಲೊಂದಾಗಿತ್ತು.

ಈ ಮಧ್ಯೆ, ಕೆಲವು ಕಾಡುಗಳ್ಳರು ಈ ಅರಣ್ಯದಲ್ಲಿರುವ ಶ್ರೀಗಂಧ, ಬೀಟೆ, ತೇಗದ ಮರಗಳಿಗೆ ಕೊಡಲಿ ಹಾಕಿದರು. ಆಗ ತೀವ್ರ ಪ್ರತಿರೋಧ ವ್ಯಕ್ತವಾಯಿತು. ತಾವು ನೆಟ್ಟ ಮರಗಳಿಗೇ ಕೊಡಲಿ ಹಾಕಿದ್ದಾರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಜನರು ಅಲ್ಲಿಗೆ ಬರಲಾರಂಭಿಸಿದರು. ಅರಣ್ಯಕ್ಕೆ ಒದಗಿಸಿದ ಭದ್ರತೆ
ಹೆಚ್ಚಿಸುವಂತೆ ಆಗ್ರಹಿಸಿದರು. ಇವರೆಲ್ಲರನ್ನೂ ಸಂತೈಸುವ ಹೊತ್ತಿಗೆ ವನಪಾಲಕರು ಸುಸ್ತಾಗಿ ಹೋದರು. ಈ ಕಾಡಿನಲ್ಲಾದ ಮರ ಗಳ್ಳತನದ ಬಗ್ಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲೂ ವರದಿಯಾಯಿತು. ಇನ್ನು ಮುಂದೆ ಈ ರೀತಿ ಆಗದಂತೆ ತಾನೂ ಎಚ್ಚರ ವಹಿಸುವುದಾಗಿ ಸ್ಥಳೀಯ ಆಡಳಿತವೂ ಭರವಸೆ ನೀಡಿತು.

ಕೇವಲ ಶ್ರೀಗಂಧ, ಬೀಟೆ, ತೇಗ, ಸಾಗವಾನಿ ಮರಗಳಷ್ಟೇ ಅಲ್ಲ, ಪ್ರತಿ ಮರಕ್ಕೂ ಲಕ್ಷ ಲಕ್ಷ ಹಣ ಕೊಡುತ್ತೇವೆಂದರೂ ಅದನ್ನು ನೆಟ್ಟವರು ಕಡಿಯಲು ಅವಕಾಶ ಕೊಡುತ್ತಿರಲಿಲ್ಲ. ಅದು ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ ಎಂದು ಅವುಗಳನ್ನು ನೆಟ್ಟವರು ಭಾವಿಸಿದ್ದರು. ಅಷ್ಟಕ್ಕೂ ಪೂಜಿಸಿದ ಮರವನ್ನು ಕಡಿಯಲು ಅವರು
ಬಿಟ್ಟಾರಾ? ಕೆಲವು ವರ್ಷಗಳ ಹಿಂದೆ ಟಿಂಬರ್ ಮಾಫಿಯಾದ ಕಣ್ಣು ಈ ಅರಣ್ಯದ ಮೇಲೆ ಬಿತ್ತು. ಈ ಅರಣ್ಯದೊಳಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಹೈಟೆನ್‌ಶನ್ ವಿದ್ಯುತ್ ತಂತಿ ಮಾರ್ಗ ನುಗ್ಗಿಸುವ ಯೋಜನೆಯ ಪ್ರಸ್ತಾವನೆ ಹರಿಬಿಟ್ಟರು. ಖಡಾಖಡಿ ರಣಾಂಗಣ ವಾಗುವುದೊಂದು ಬಾಕಿ ಇತ್ತು. ಆ ಪರಿ ವಿರೋಧ ವ್ಯಕ್ತ
ವಾಯಿತು. ಅಲ್ಲಿ ಸಸಿ ನೆಟ್ಟವರೆಲ್ಲ ಯಾರ ಪ್ರೇರಣೆಯಿಲ್ಲದೇ, ಸುದ್ದಿ ತಿಳಿದ ತಕ್ಷಣ ಧಾವಿಸಿ ಬಂದರು.

ಅಂಥ ಯಾವುದೇ ಪ್ರಸ್ತಾವನೆಯೂ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಯೇ ಖುದ್ದು ಹೇಳಿಕೆ ನೀಡಿದರು. ಅಲ್ಲಿಗೆ ಆ ವಿವಾದ ಕೊನೆಗೊಂಡಿತು.
ಯೋಗಿ ದುರ್ಲಭಜೀ ಈ ಪ್ರಸಂಗವನ್ನು ಹೇಳಿ ಸುಮ್ಮನಾದರು. ‘ಯೋಗೀಜೀ, ಎಲ್ಲ ಕಡೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯನಾಶ, ಮರಗಳನ್ನು ಕಡಿಯುತ್ತಿದ್ದರೂ ವ್ಯಕ್ತವಾಗದ ಪ್ರತಿಭಟನೆ, ಈ ಅರಣ್ಯದ ವಿಷಯಕ್ಕೆ ಬಂದಾಗ ಮುಗಿಲು ಮುಟ್ಟುವುದೇಕೆ? ಈ ಅರಣ್ಯವೇಕೆ ಅಷ್ಟು ಮಹತ್ವದ್ದು?’ ಎಂದು ಕೇಳಿದೆ. ಅದಕ್ಕೆ
ಯೋಗೀಜೀ ಹೇಳಿದರು – ‘ನೋಡಿ, ಇದು ಜನರೇ ನೆಟ್ಟ ಕಾಡು. ಇದೇನು ಸುಮ್ಮನೆ ನೆಟ್ಟಿದ್ದಲ್ಲ. ತಮ್ಮ ತಂದೆ, ತಾಯಿ, ಮಗ, ಮಗಳು, ಆಪ್ತರು ನಿಧನರಾದಾಗ ಅವರ ಅಸ್ಥಿ, ಬೂದಿಯನ್ನು ತಂದು ಸುರಿದು, ಅವರ ಹೆಸರಿನಲ್ಲಿ ಸಸಿ ನೆಟ್ಟು, ಅದರ ಪೋಷಣೆಗೆ ಹಣ ಕೊಟ್ಟು, ಮನೆ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ.

ಯಾರ ನೆನಪಿನಲ್ಲಿ ಇವುಗಳನ್ನು ನೆಟ್ಟಿದ್ದಾರೋ, ಅವರು ಮರದ ರೂಪದಲ್ಲಿ ಸಾಕ್ಷಾತ್ ಜೀವಂತವಾಗಿದ್ದಾರೆಂದು ನಂಬಿದ್ದಾರೆ. ಹೀಗಿರುವಾಗ ಈ ಮರಗಳನ್ನು ಕಡಿಯಲು ಬಿಟ್ಟಾರಾ? ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಈ ಅರಣ್ಯವನ್ನು ರಕ್ಷಿಸುತ್ತಾರೆ. ದುರ್ದೈವವೆಂದರೆ ಇವರೆಲ್ಲ ಬೇರೆ ಮರ, ಅರಣ್ಯಕ್ಕೆ ಕೊಡಲಿ ಬಿದ್ದಾಗ ಸುಮ್ಮನಿರುತ್ತಾರೆ. ಅದು ಏನು ಬೇಕಾದರೂ ಆಗಲಿ, ಈ ಕಾಡು ಮಾತ್ರ ಶಾಶ್ವತವಾಗಿರಲಿ ಎಂಬ ಮನೋಭಾವ. ಅದೇನೇ ಇರಲಿ, ಹೀಗಾದರೂ ನಾವು ಅರಣ್ಯ ಬೆಳೆಸಬೇಕಿದೆ, ಉಳಿಸಿಕೊಳ್ಳಬೇಕಿದೆ’. ನಮ್ಮನ್ನು ಅಗಲಿದವರ ನೆನಪಿಗೆ ಸಮಾಧಿ ಮಾಡಿ, ಕಲ್ಲು ನೆಡುವ ಬದಲು ಒಂದು ಸಸಿ ನೆಟ್ಟರೆ ಹೇಗಿದ್ದೀತು, ಯೋಚಿಸಿ.

ಮನುಷ್ಯರ ನಾಯಿ ಪ್ರೀತಿ
‘ಮನೆಯಲ್ಲಿ ಎಲ್ಲರೂ ಆರಾಮ ಇದ್ದಾರೆ, ನಾಯಿಯನ್ನೂ ಸೇರಿದಂತೆ’ ಎಂದು ನನ್ನ ತಂದೆಯವರು ನಾನು ಕಾಲೇಜಿನಲ್ಲಿ ಓದುವಾಗ ಪತ್ರ ಬರೆಯುತ್ತಿದ್ದರು. ಪ್ರತಿ ಪತ್ರದಲ್ಲೂ ನಾಯಿಯ ಬಗ್ಗೆ ಪ್ರಸ್ತಾಪವಿರುತ್ತಿತ್ತು. ನಮ್ಮ ಮನೆಗೆ ಅಕ್ಕಂದಿರು ಬರುವಾಗ ಅವರ ಮನೆಯ ನಾಯಿಯೂ ಬಂದಿದ್ದರೆ, ‘ಮನೆಯಲ್ಲಿ ನಡೆದ
ಕಾರ್ಯಕ್ರಮಕ್ಕೆ ಅಕ್ಕ-ಭಾವಂದಿರೆಲ್ಲ ಬಂದಿದ್ದರು. ಜತೆಯಲ್ಲಿ ಅವರ ಮಕ್ಕಳು ಬಂದಿದ್ದರು. ನಾಯಿಯೂ ಬಂದಿತ್ತು’ ಎಂದು ಪತ್ರದಲ್ಲಿ ಬರೆಯುತ್ತಿದ್ದರು. ಈ ಪತ್ರವನ್ನು ನೋಡಿ ನನಗೆ ನಗು ಬರುತ್ತಿತ್ತು. ನಮ್ಮ ಸಂಬಂಧಿಕರಿಗೆ ಬರೆದ ಪತ್ರದಲ್ಲೂ ನಾಯಿಯ ಬಗ್ಗೆ ತಂದೆಯವರು ಪ್ರಸ್ತಾಪಿಸುತ್ತಿದ್ದರು. ಅದನ್ನು ಓದಿ
ಅವರೆಲ್ಲರೂ ಜೋರಾಗಿ ನಗುತ್ತಿದ್ದರು. ನಾವೆಲ್ಲ ಸೇರಿದಾಗ, ಈ ವಿಷಯ ಪ್ರಸ್ತಾಪವಾದಾಗ ಎಲ್ಲ ಸೇರಿ ಇದನ್ನು ತಮಾಷೆಯ ವಿಷಯವಾಗಿ ತೆಗದುಕೊಂಡು ನನ್ನ ತಂದೆಯವರನ್ನು ಗೇಲಿ ಮಾಡುತ್ತಿದ್ದರು.

ಮನುಷ್ಯರ ಬಗ್ಗೆಯೇ ಯಾರೂ ಯೋಚಿಸುವುದಿಲ್ಲ, ವಿಚಾರಿಸಿಕೊಳ್ಳುವುದಿಲ್ಲ. ಹೀಗಿರುವಾಗ ತಂದೆಯವರು ನಾಯಿಯ ಬಗ್ಗೆ ಪ್ರತಿ ಪತ್ರದಲ್ಲೂ ಬರೆಯುತ್ತಿದ್ದುದು ಉಳಿದ ವರಿಗೆ ವಿಚಿತ್ರವಾಗಿ ಕಾಣುತ್ತಿತ್ತು. ಆರಂಭದಲ್ಲಿ ನನಗೆ ಇದು ಹಾಗೇ ಅನಿಸಿದರೂ, ಕೊನೆ ಕೊನೆಗೆ ಅವರು ಪ್ರಾಣಿಗಳ ಬಗ್ಗೆ ಹೊಂದಿದ್ದ ಮೃದು ಮನಸ್ಸನ್ನು ಅರ್ಥ ಮಾಡಿಕೊಂಡಾಗ, ಅದು ತೀರಾ ಸಹಜ ಎನಿಸುತ್ತಿತ್ತು. ಅವರು ಮನೆಯಲ್ಲಿ ಸಾಕಿದ್ದ ಆಕಳು, ಬೆಕ್ಕಿನ ಯೋಗಕ್ಷೇಮದ ಬಗ್ಗೆ ತಮ್ಮ ಪತ್ರದಲ್ಲಿ ಬರೆಯು ತ್ತಿದ್ದರು.

ಬೇರೆಯವರು ಈ ವಿಷಯದ ಬಗ್ಗೆ ತನ್ನನ್ನು ಗೇಲಿ ಮಾಡಿ ಕೊಳ್ಳುತ್ತಾರೆ ಎಂದು ಅವರಿಗೆ ಗೊತ್ತಾದ ನಂತರವೂ, ಅವುಗಳ ಬಗ್ಗೆ ಬರೆಯುವುದನ್ನು ನಿಲ್ಲಿಸಲಿಲ್ಲ. ಕಾರಣ ಈ ಸಾಕು ಪ್ರಾಣಿಗಳು ತಮ್ಮ ಕುಟುಂಬದ, ಮನೆಯ ಒಂದು ಭಾಗವೆಂದೇ ಅವರು ಭಾವಿಸಿದ್ದರು. ಸಾಮಾನ್ಯವಾಗಿ ಯಾರೂ ಪತ್ರದಲ್ಲಿ ತಮ್ಮ ಮನೆಯ ನಾಯಿ, ಬೆಕ್ಕುಗಳ ಬಗ್ಗೆ ಬರೆಯುವುದಿಲ್ಲ. ಅದರಲ್ಲೂ ೩೫-೪೦ ವರ್ಷಗಳ ಹಿಂದೆ ಈ ರೀತಿ ಬರೆಯುತ್ತಿದ್ದುದು ಇಲ್ಲವೇ ಇಲ್ಲ ಎನ್ನಬಹುದು. ನನ್ನ ತಂದೆಯವರು ನನಗೆ ಬರೆದ ಹಳೇ ಪತ್ರಗಳನ್ನು ಇತ್ತೀಚೆಗೆ ಓದುತ್ತಿದ್ದೆ. ಆ ಎಲ್ಲ ಪತ್ರಗಳಲ್ಲಿ ನಾಯಿಯ ಪ್ರಸ್ತಾಪವಿಲ್ಲದೇ ಕೊನೆಗೊಂಡಿದ್ದೇ ಇಲ್ಲ.

ಈಗ ನಾಯಿ ಸಾಕುವುದು, ಮನೆಯಲ್ಲಿ ಮಕ್ಕಳೊಂದಿಗೇ ಬೆಳೆಸುವುದು, ಅವುಗಳಿಗೆ ಡ್ರೆಸ್ ಹೊಲಿಸುವುದು, ಸತ್ತಾಗ ಸಮಾಧಿ ನಿರ್ಮಿಸುವುದು, ಕಾರಿನಲ್ಲಿ ಜತೆಯಲ್ಲಿಯೇ ಕರೆದು ಕೊಂಡು ಹೋಗುವುದು ತೀರಾ ಸಹಜ. ಆದರೆ ಹಳ್ಳಿಗಳಲ್ಲಿ ಅದೂ ಅಷ್ಟು ವರ್ಷಗಳ ಹಿಂದೆ, ನಾಯಿ ಬಗ್ಗೆ ಅಂಥ ಮಮಕಾರ ಇರಲಿಲ್ಲ. ಈಗ ಅದೊಂದು ಫ್ಯಾಶನ್ ಆಗಿದೆ. ನಾನು ಅಮಿತಾ ತ್ರಾಸಿ ಬರೆದ The Color of Our sky ಎಂಬ ಕಾದಂಬರಿಯನ್ನು ಓದುತ್ತಿದ್ದೆ. ಕೊನೆಯಲ್ಲಿ ಕಾದಂಬರಿ
ಕಾರ್ತಿಯ ಸಂಕ್ಷಿಪ್ತ ಪರಿಚಯ ಹೀಗಿತ್ತು -Amita Trasi was born and raised in Mumbai, India. She has an MBA in Human Resource Management and currently lives in Houston, Texas with her husband and two cats.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪರಿಚಯ ಸಾಮಾನ್ಯ ವಾಗಿದೆ. ಮನುಷ್ಯರು ಮನುಷ್ಯರ ಜತೆಗೆ ಜೀವಿಸುವುದು ಹೊಸತೇನಲ್ಲ. ಪ್ರಾಣಿಗಳ ಜತೆ ಬಾಳ್ವೆ ಮಾಡುವುದು ಬಹುತ್ವದ ಪ್ರತೀಕವಾಗಿದೆ. ದಿಲ್ಲಿಯ ವಾಸ್ತುಶಿಲ್ಪ ತಜ್ಞ ಸಂಜೀವ ಅಶೋಕ ತಾವು ಹೆಂಡತಿ, ಮಗ ಹಾಗೂ ಮೂರು ಹಾವುಗಳ ಜತೆ ಜೀವಿಸು ತ್ತಿರುವುದಾಗಿ ಪರಿಚಯದಲ್ಲಿ ಹೇಳಿಕೊಂಡಿದ್ದರು. ಈ ರೀತಿಯ ಪರಿಚಯದಿಂದ ವ್ಯಕ್ತಿಯ ಬಗ್ಗೆ ಬೇರೆ ರೀತಿಯ ಭಾವನೆ ಮೂಡುವುದು ಸುಳ್ಳಲ್ಲ.

ಕೆಲದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಒಬ್ಬರು ತಮ್ಮ ಪರಿಚಯದಲ್ಲಿ ‘ನಾನು ಜಗಳಗಂಟ, ನನ್ನ ನಾಯಿಗೆ ಒಳ್ಳೆಯ ಸ್ನೇಹಿತ. ಕಲಿಸಿದ್ದಕ್ಕಿಂತ ಕಲಿತದ್ದೇ ಜಾಸ್ತಿ. ಹೀಗಾಗಿ ನಾನು ಕೀಳು ಮಾನವ, ಅದು ಉತ್ತಮ ಶ್ವಾನ’ ಎಂದು ಬರೆದುಕೊಂಡಿದ್ದರು. ಈಗ ನನ್ನ ತಂದೆಯವರು ಬದುಕಿದ್ದಿದ್ದರೆ ಬಹುಶಃ ತಮ್ಮ ಪರಿಚಯದಲ್ಲಿ ನಾಯಿಯನ್ನು ಖಂಡಿತವಾಗಿಯೂ ಬಿಡುತ್ತಿರಲಿಲ್ಲವೇನೋ.

ಮರೆಯಲಾಗದ ಶೀರ್ಷಿಕೆ
ಬಾಹ್ಯಾಕಾಶ ನೌಕೆಯಲ್ಲಿ ಪಯಣಿಸಿ ಯಶಸ್ವಿಯಾಗಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಧರೆಗೆ ಮರಳಿದ್ದಳು. ಈ ಸುದ್ದಿಗೆ ಮೈಸೂರಿನಿಂದ ಪ್ರಕಟವಾಗುವ ಪತ್ರಿಕೆಯೊಂದು ಶೀರ್ಷಿಕೆ ನೀಡಿತ್ತು. ಅದನ್ನು ಬರೆದ ಉಪಸಂಪಾದಕ ಅಥವಾ ಸುದ್ದಿ ಸಂಪಾದಕನಿಗೆ ತಾನು ಬಳಸಿದ ಪದಗಳು ಎಂಥ ಅವಾಂತರ ಮಾಡಬಹುದು ಎಂಬ ಅರಿವಿರಲಿಲ್ಲ ಎಂದೆನಿಸುತ್ತದೆ. ಅಂದ ಹಾಗೆ ಆ ಸುದ್ದಿಗೆ ನೀಡಿದ ಶೀರ್ಷಿಕೆ – ‘ಕಲ್ಪನಾ ಚಾವ್ಲಾ ಮರಳಿ ಮಣ್ಣಿಗೆ’.

ಸಾಮಾನ್ಯವಾಗಿ ಗಣ್ಯವ್ಯಕ್ತಿಗಳು ನಿಧನರಾದಾಗ ‘ಮರಳಿ ಮಣ್ಣಿಗೆ’ ಎಂದು ಬಳಸುತ್ತಾರೆ. ಚಾವ್ಲಾ ಬಾಹ್ಯಾಕಾಶ ಪಯಣ ಮುಗಿಸಿ ಭೂಮಿಗೆ (ಮಣ್ಣಿಗೆ) ಬಂದಿದ್ದಳು. ‘ಮರಳಿ ಧರೆಗೆ’ ಎಂದಿದ್ದರೆ ಪರವಾಗಿರಲಿಲ್ಲ. ಮಣ್ಣು ಎಂಬುದನ್ನು ಭೂಮಿ ಎಂಬುದಾಗಿ ಅರ್ಥೈಸಿಕೊಂಡು ಈ ಶೀರ್ಷಿಕೆ ಕೊಟ್ಟಾಗ ಅದು ಎಂಥ ಯಡವಟ್ಟಾಗಬಹುದು ಎಂದು ಅದನ್ನು ಬರೆದವರು ಯೋಚಿಸಿರಲಿಕ್ಕಿಲ್ಲ. ಅವಸರದಲ್ಲಾದ ಈ ಪ್ರಮಾದ ಸದಾ ನೆನಪಿನಲ್ಲಿರುವ ಶೀರ್ಷಿಕೆಯಾಗಿ ಸ್ಥಾಯಿಯಾಗಿ ನಿಂತು ಬಿಡುತ್ತದೆ. ತಮಾಷೆಯೆಂದರೆ, ಈ ಪ್ರಕರಣದಲ್ಲಿ ಶೀರ್ಷಿಕೆಯಲ್ಲಾದ ಪ್ರಮಾದ ಹೆಚ್ಚಿನ ಓದುಗರಿಗೆ ಗೊತ್ತಾಗಲಿಲ್ಲ. ಬಾಹ್ಯಾಕಾಶಕ್ಕೆ ಹೋದವಳು ಮಣ್ಣಿಗೆ ಅಂದರೆ ಭೂಮಿಗೆ ಬಂದಳು ಎಂದು ಸರಿಯಾಗಿಯೇ ಭಾವಿಸಿಕೊಂಡು ಓದಿಕೊಂಡರು.

ಎಂಥಾ ಕಾಲ ಬಂತು?!
ಕೆಲ ವರ್ಷದ ಹಿಂದೆ ನನ್ನ ಆತ್ಮೀಯ ಸ್ನೇಹಿತರಾದ ವೆಂಕಟೇಶ್ ಹೆಗಡೆಯವರು ಫೋನ್ ಮಾಡಿ, ನಿನ್ನ ಜತೆ ಸ್ವಲ್ಪ ಮುಖ್ಯವಾದ ವಿಷಯದ ಬಗ್ಗೆ ಮಾತಾಡುವು ದಿದೆ. ನನಗೆ ನಿನ್ನ ಅರ್ಧ ದಿನ ಬೇಕು ಎಂದರು. ನಾನು ಒಂದು ಕೆಲಸ ಮಾಡು, ನಾನು ಈಗ ಚಿಕ್ಕೋಡಿಯಲ್ಲಿದ್ದೇನೆ, ನಾಳೆ ಬೆಳಗ್ಗೆ ಹುಬ್ಬಳ್ಳಿಯಲ್ಲಿರುತ್ತೇನೆ. ನೀನು ಅಲ್ಲಿಗೆ ಬಂದರೆ ಒಟ್ಟಿಗೆ ಉಜಿರೆಗೆ ಹೋಗೋಣ, ಅಲ್ಲಿ ನಾನೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದೆ. ಅರ್ಧ ದಿನವೇನು ಎರಡು ದಿನ ಒಟ್ಟಿಗೆ ಇರೋಣ ಎಂದೆ. ಅದಕ್ಕೆ ಅವರು ಒಪ್ಪಿದರು. ತಮ್ಮ ಊರಾದ ಶಿರಸಿಯಿಂದ ಹೊರಟು ಹುಬ್ಬಳ್ಳಿಗೆ ಬಂದು ಸೇರಿಕೊಂಡರು.

ನಾವು ಅಲ್ಲಿಂದ ಶಿವಮೊಗ್ಗ ಮಾರ್ಗವಾಗಿ ಉಜಿರೆಗೆ ಹೊರಟೆವು. ನನಗೆ ಒಂದೇ ಸಮನೆ ಫೋನ್ ಕರೆಗಳು ಬರುತ್ತಿದ್ದವು. ಹೆಗಡೆಯವರು ವಿಷಯ ಪ್ರಸ್ತಾಪಿಸಲು ಬಯಸುತ್ತಿದ್ದಂತೆ ಫೋನ್ ಮೊಳಗುತ್ತಿತ್ತು. ಫೋನನ್ನು ಸ್ವಿಚ್ ಆಫ್ ಮಾಡಿಡೋಣ ಅಂದರೆ ಮನಸ್ಸು ಒಪ್ಪುತ್ತಿರಲಿಲ್ಲ, ನಮ್ಮ ಮಾತುಕತೆ ಒಂದೆರಡು ತಾಸಿನಲ್ಲಿ ಮುಗಿಯುವಂಥzಗಿರಲಿಲ್ಲ. ಉಜಿರೆ ತಲುಪುವ ವರೆಗೂ ನಮ್ಮ ಮಾತುಕತೆ ಶೇ.ಇಪ್ಪತ್ತರಷ್ಟು ಮುಗಿದಿರಲಿಲ್ಲ. ಅಲ್ಲಿಯವರೆಗೂ ನನಗೆ ಒಂದೇ ಸಮನೆ, ಅಲ್ಲಲ್ಲಿ ಬಿಟ್ಟು ಬಿಟ್ಟು ಫೋನ್ ಕರೆಗಳ ಕಾಟ.

ಸರಿ, ಉಜಿರೆ ಬಂತು. ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ವೇದಿಕೆ ಏರಿದೆ. ಮುಂದಿನ ಮೂರು ತಾಸು ಕಾರ್ಯಕ್ರಮದಲ್ಲಿ ಮಗ್ನನಾಗಿಬಿಟ್ಟೆ. ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಊಟ. ಅನೇಕ ಗಣ್ಯರು ಜತೆಗಿದ್ದರು. ಬಹಳ ಹೊತ್ತು ಹರಟೆ. ಆಯಾಸವಾಗಿದ್ದರಿಂದ ಇಬ್ಬರೂ ಮಲಗಿಬಿಟ್ಟೆವು. ಮರುದಿನ ಬೇಗ ಎದ್ದು ಬಂದ ದಾರಿಯ ಹೊರಟೆವು. ಸರಿ, ನಿನ್ನೆಯ ಮಾತುಕತೆಯನ್ನು ಮುಂದುವರಿಸಿ ಎಂದೆ. ಅವರು ಮಾತಾಡಲು ಆರಂಭಿಸುತ್ತಿದ್ದಂತೆ ಸತತ ಫೋನ್ ಕರೆಗಳ
ಸುರಿಮಳೆ. ಅರ್ಧ ಗಂಟೆ ಮಾತಾಡುವ ಹೊತ್ತಿಗೆ ಮೂರ್ನಾಲ್ಕು ಕರೆಗಳ ಮಧ್ಯಪ್ರವೇಶ. ಇನ್ನೇನು ಹುಬ್ಬಳ್ಳಿ ತಲುಪಲು ಒಂದು ಗಂಟೆ ಇದೆ ಎನ್ನುವಾಗ, ಹೆಗಡೆಯವರು ಕಾರನ್ನು ನಿಲ್ಲಿಸುವಂತೆ ಹೇಳಿದರು. ಮೂತ್ರವಿಸರ್ಜನೆಗೋ, ಪ್ರಯಾಣದ ದಣಿವು ನೀಗಿಸಿಕೊಳ್ಳಲೋ ಕಾರಿನಿಂದ ಇಳಿದಿರಬಹುದು ಎಂದು ಭಾವಿ
ಸಿದೆ. ಒಂದು ಕ್ಷಣದ ನಂತರ ನನ್ನ ಫೋನ್ ಮೊಳಗಿತು. ನೋಡಿದರೆ ಹೆಗಡೆಯವರ ಫೋನ್ ಕರೆ !

ಅತ್ತ ಕಡೆಯಿಂದ ಹೆಗಡೆಯವರು ಮಾತಾಡುತ್ತಿದ್ದರು – ‘ನಿನ್ನೆಯಿಂದ ನಿನ್ನ ಜತೆ ಮಾತಾಡಬೇಕೆಂದು ಪ್ರಯತ್ನಪಡುತ್ತಿದ್ದೇನೆ. ನೆಟ್ಟಗೆ ಹತ್ತು ನಿಮಿಷ ಮಾತಾಡಲು ಆಗುತ್ತಿಲ್ಲ. ನಿನಗೆ ಸದಾ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ನೀನು ಫೋನ್ ಮಾಡಿದವರ ಜತೆಯಲ್ಲಿ ಮಾತಾಡುವೆ. ಆದರೆ ಪಕ್ಕದಲ್ಲಿರುವವರ ಜತೆ ಮಾತಾಡಲು ಆಗುತ್ತಿಲ್ಲ. ಅದಕ್ಕೆ ನಾನೇ ಕೆಳಗಿಳಿದು ಬಂದು ನಿನ್ನ ಜತೆ ಮಾತಾಡುತ್ತಿದ್ದೇನೆ. ಈಗ ನಿನಗೆ ಬೇರೆ ಯಾವುದೇ ಕರೆಗಳೂ ಬರುವುದಿಲ್ಲ. ನಾನು ಹೇಳಬೇಕಿರುವುದನ್ನೆಲ್ಲ ಹೀಗೆಯೇ ಹೇಳಿಬಿಡುತ್ತೇನೆ. ಇದೆ ವಾಸಿ.’ ಎಂದರು.

ನಾನು ಬೇಡ ಬೇಡ ಎಂದರೂ ಅವರು ಕೇಳಲಿಲ್ಲ. ಒಬ್ಬರಿಗೊಬ್ಬರು ಹತ್ತಿಪ್ಪತ್ತು ಮೀಟರ್ ದೂರದಲ್ಲಿದ್ದರೂ ಫೋನ್ ನಲ್ಲಿಯೇ ಮಾತಾಡೋಣ ಎಂದು ಅವರು ಪಟ್ಟು ಹಿಡಿದರು. ಇಲ್ಲದಿದ್ದರೆ ನಿನ್ನ ಜತೆ ಮಾತುಕತೆಯೇ ಸಾಧ್ಯವಿಲ್ಲ ಎಂದರು. ಅದೇ ರೀತಿ ನಾವಿಬ್ಬರೂ ಸುಮಾರು ಒಂದೂವರೆ ಗಂಟೆ ಮೊಬೈಲಿನಲ್ಲಿ ಮಾತಾಡಿದೆವು. ಅವರು ಹೇಳಬೇಕಿರುವುದನ್ನೆಲ್ಲ ಹೇಳಿದರು. ನಂತರ ಹುಬ್ಬಳ್ಳಿ ಬಂತು. ಅವರು ಅಲ್ಲಿ ಇಳಿದು ಹೋದರು. ನಾನು ಮುಂದೆ ಅಲ್ಲಿಂದ ಬೆಂಗಳೂರಿಗೆ ಬಂದೆ.

ಇಂದು ಏನಾಗಿದೆಯೆಂದರೆ ಇಬ್ಬರು ಅಕ್ಕಪಕ್ಕದಲ್ಲಿದ್ದರೆ, ನಾವು ಪರಸ್ಪರ ಮಾತಾಡುವುದಕ್ಕಿಂತ ಬೇರೆಯವರ ಜತೆಯೇ ಹೆಚ್ಚು ಮಾತಾಡುತ್ತೇವೆ, ಹರಟೆ ಹೊಡೆಯುತ್ತೇವೆ. ಇಲ್ಲವೇ ಸಾಮಾಜಿಕ ತಾಣದಲ್ಲಿ ಹೂತುಹೋಗಿರುತ್ತೇವೆ. ಮನೆಯಲ್ಲಿ ಹೆಂಡತಿ ಮಕ್ಕಳ ಜತೆ ಇದ್ದರೂ ಬೇರೆಯವರ ಜತೆ ಸಂಪರ್ಕದಲ್ಲಿರು ತ್ತೇವೆ. ಅವರೂ ಇನ್ಯಾರದೋ ಜತೆಯಲ್ಲಿ ಹರಟೆ ಹೊಡೆಯುತ್ತಿರುತ್ತಾರೆ. ಪರಸ್ಪರ ಮಾತುಕತೆಗಿಂತ ಮೊಬೈಲ್ ಮಾತು, ಚಾಟ್‌ನಲ್ಲಿ ನಿರತರಾಗು ವುದೇ ಹೆಚ್ಚು.
ಎಂಥಾ ಕಾಲ ಬಂತು?!

ಹೀಗೊಂದು ಬಯೋಡಾಟಾ
‘ಬಾಲ್ಕನಿಯಿಂದ’ ಎಂಬ ಪುಸ್ತಕವನ್ನು ಓದುತ್ತಿದ್ದೆ. ಸುಮಾರು ಹತ್ತು ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕವಿದು. ಇದನ್ನು ಬರೆದವರು ಸಹಜಾ. ಅವರು ತಮ್ಮ ಬಗ್ಗೆ ಬರೆದುಕೊಂಡ ಪರಿಚಯ ಖುಷಿಕೊಟ್ಟಿತು. ಒಂದೇ ರೀತಿಯ ಬಯೋಡಾಟಾ ಓದಿ ಓದಿ ಬೇಸತ್ತಿದ್ದ ಮನಸ್ಸಿಗೆ ಈ ‘ಬಯೋಡಾಟಾ’ ಖುಷಿ ಕೊಟ್ಟಿತು. ಆ
ಬಯೋಡಾಟಾ ಹೀಗಿದೆ: ‘ನಾನು ಮಲೆನಾಡಿನವಳು. ತೋಟ, ಗುಡ್ಡ, ನದಿ, ಅಡಕೆ ತೋಟ, ಏಲಕ್ಕಿ ಘಮಲು, ಬಾಳೆಯ ಗೊನೆಯ ಹೊಯ್ದಾಟದ ನಡುವೆ ಬೆಳೆದವಳು. ನನಗೆ ಹಂಡೆಯಲ್ಲಿ ಕಾಯಿಸಿದ ಬಿಸಿ ನೀರಿನ ಸ್ನಾನವೆಂದರೆ ಮುಗೀತು. ಹುಡುಗರನ್ನು ಕಂಡರೆ ಬಹಳ ಇಷ್ಟ.

ಪುಸ್ತಕ, ಸಂಗೀತ, ಸಿನಿಮಾ, ಕ್ಯಾಮೆರಾ, ಪ್ರವಾಸ, ಬ್ಲಾಗಿಂಗ್, ಪಿಜ್ಜಾ ನನಗೆ ಪ್ರಾಣ. ಅನಿಸಿದ್ದನ್ನೆಲ್ಲ ಹೇಳಿಬಿಡುವ ವಾಚಾಳಿ. ಕೆಲವರು ನನ್ನನ್ನು ಈ ಕಾರಣಕ್ಕೆ ಬಜಾರಿ ಅಂತಾರೆ. ಹಾಗೆ ಕರೆಯಿಸಿಕೊಂಡು ಪುಳಕಗೊಳ್ಳುತ್ತೇನೆ. ಸದ್ಯ ಬೆಂಗಳೂರಿನ ಲೇಡಿಸ್ ಹಾಸ್ಟೆಲೊಂದರಲ್ಲಿ ವಾಸ. ನನ್ನ ರೂಮ್‌ಮೇಟ್ ಚವತಿ.
ನಾನು ಕೋತಿಯಾದರೆ ಆಕೆ ಏತಿ. ಇನ್ನೂ ಲವ್ವು ಗಿವ್ವು ಅಂತ ತಲೆಕೆಡಿಸಿಕೊಂಡಿಲ್ಲ. ಹಾಗಂತ ಮುಗ್ಧೆ ಅಲ್ಲ. ಖುಷಿಖುಷಿಯಿಂದ ಇರೋದೇ ಜೀವನವೆಂದು ತಿಳಿದಿದೀನಿ. ಮದುವೆ ಸಂಸಾರ ಇಷ್ಟು ಬೇಗ ಬೇಡ. ಸುಂದರಿಯಲ್ಲ. ಲಕ್ಷಣವಾಗಿದೀನಿ ಅಂತಾರೆ. ಉಳಿದ ವಿವರಗಳನ್ನು ನನ್ನ ಬರಹಗಳು ಹೇಳುತ್ತವೆ.’