Sunday, 15th December 2024

ಧರೆಯೆ ಹೊತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ?

ವಿರಾಜಯಾನ

ವಿರಾಜ್ ಕೆ ಅಣಜಿ

virajkvishwavani@gmail.com

ಅಫ್ಘಾನಿಸ್ತಾನ. ಈ ಕ್ಷಣದ ಜಗತ್ತಿನ ಮೋಸ್ಟ್ ಹಾಟ್ ಟಾಪಿಕ್. ಪ್ರಜಾಪ್ರಭುತ್ವದ ದೇಗುಲವೆಂದು ಹೆಸರಾದ ಸಂಸತ್ ಭವನದಲ್ಲಿ, ಜನನಾಯಕರು ಪೆನ್ ಮತ್ತು ಪೇಪರ್ ಇಡಬೇಕಾದ ಸ್ಥಳದಲ್ಲೀಗ ದೊಡ್ಡ ದೊಡ್ಡ ಗನ್‌ಗಳಿವೆ.

ಕ್ರೌರ್ಯ, ಅಮಾನವೀಯತೆಗಳೀಗ ಅಲ್ಲಿನ ಸರಕಾರದ ಸಾರಥ್ಯ ವಹಿಸಿವೆ. ಇಂಥದ್ದೊಂದು ಯುದ್ಧಕಾಂಡವನ್ನು “Our war on terror begins with Al Qaeda, but it does not end there” ಎಂದು ಅಂದಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಆರಂಭಿಸಿದ್ದರು. ಈಗಿನ ಅಧ್ಯಕ್ಷ ಜೋ ಬೈಡನ್,  Do I trust the Taliban? No. But, I trust the capacity of Afghan Military, they have three hundred thousand well equipped as any army in the world, against something like 75 thousand Taliban  ಎಂದು ಹೇಳಿ ತಮ್ಮ ಸೈನ್ಯವನ್ನು ಹೇಳದೇ ಕೇಳದೇ ಅಲ್ಲಿಂದ ವಾಪಸ್ ಕರೆಸಿಕೊಂಡು, ಅಂತಂತ್ರ ಅಂತ್ಯ ಹಾಡಿದ್ದಾರೆ.

ಇದರಿಂದೀಗ ತಾಲಿಬಾನಿಗಳು ಆಫ್ಘನ್ನರನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ದಿಕ್ಕೆಟ್ಟ ಜನರು ವಿಮಾನದ ಮೇಲೆ ಕುಳಿತಾದರೂ ದೇಶ ಬಿಟ್ಟು ಹೋಗಬೇಕು ಎಂದು ಜೀವ ಅವುಚಿ ಕೂತಿದ್ದಾರೆ. ನಮ್ಮೆಲ್ಲ ಪತ್ರಿಕೆ, ನ್ಯೂಸ್ ಚಾನೆಲ್, ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್, ಕ್ಲಬ್‌ಹೌಸ್‌ನಲ್ಲಿಯೂ ಈಗ ಇದೇ ಸುದ್ದಿ, ಇದೊಂದರ ಬಗ್ಗೆಯೇ ಮಾತು. ಆಫ್ಘನ್‌ನಲ್ಲಿ ಇಂತಹ ನರಮೇಧ ಆಗುತ್ತಿರುವುದು ಧರ್ಮಾಂಧತೆ, ಆಸೆ ಬುರುಕುತನ, ಅಧಿಕಾರದ ಹಪಾಹಪಿ, ಹಣದ ಮದದಿಂದಾಗಿ. ಅಲ್ಲಿ ಸಾಯುತ್ತಿರುವವರೆಲ್ಲ ಅಮಾಯಕರು, ಜನಸಾಮಾನ್ಯರು. ಇದೆಲ್ಲವೂ ಎಂದು ನಿಲ್ಲಲಿದೆ, ಮುಂದೇನು ಆಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆಫ್ಘನ್ ಸದ್ಯಕ್ಕೀಗ ಅರಾಜಕತೆಗೆ ಶರಣಾದ ಕೋಟೆ.

ಜನರು ಹೆಚ್ಚೆಚ್ಚು ಸಾಯುವಂಥ ಈ ಟಿಆರ್‌ಪಿಯ ಸುದ್ದಿಯಿದ್ದಾಗ ಸಹಜವಾಗಿ ಬೇರೆ ಸುದ್ದಿಗಳಿಗೆ ಹೆಚ್ಚಿನ ಮೈಲೇಜ್ ಸಿಗುವುದೇ ಇಲ್ಲ. ಬೇಕಾದರೆ ನೋಡಿ, ಎಲ್ಲೂ ಕರೋನಾ ಆರ್ಭಟ ಎಂಬ ಹೆಡ್ ಲೈನ್ ಕಾಣುತ್ತಿಲ್ಲ. ಇದರ ಜತೆಗೆ ಜಗತ್ತಿನ ಇತರೆಡೆಯ ಪ್ರಮುಖ ವಿಚಾರಗಳು, ವಿಷಯಗಳು ಸುದ್ದಿ ಆಗುತ್ತಿಲ್ಲ. ಹೈಟಿ ದೇಶದ ಭೂಕಂಪ, ಜಪಾನ್, ಜರ್ಮನಿ, ಟರ್ಕಿಯಲ್ಲಿನ ಜಲ ಪ್ರಳಯ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಗ್ರೀಸ್, ಸ್ಪೇನ್‌ನಲ್ಲಿನ ಕಾಡ್ಗಿಚ್ಚು, ಹಿಮಾಚಲ ಪ್ರದೇಶದ ಭೂ ಕುಸಿತ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಆದ ಪ್ರವಾಹ, ನಮ್ಮದೇ ನಾಡಿನ ಉತ್ತರ ಕನ್ನಡದಲ್ಲಿದ ಮುಳುಗಿದ ಜನರ ಬದುಕಿನಂಥ ಯಾವ ಸುದ್ದಿಯೂ ಪದೇ ಪದೆ ಕಿವಿಗೆ ಬೀಳುತ್ತಿಲ್ಲ. ಬಿದ್ದರೂ ನಾವದನ್ನು ಕೇರ್ ಕೂಡ ಮಾಡುತ್ತಿಲ್ಲ. ಯಾಕೆ ಹೀಗೆಲ್ಲ ಆಗುತ್ತಿದೆ ಎಂದು ನಾವೆಲ್ಲ ಯೋಚನೆಯನ್ನೂ ಮಾಡುತ್ತಿಲ್ಲ.

ನಮ್ಮ ಮನಸ್ಸು ಸಂವೇದನೆಯನ್ನೇ ಕಳೆದುಕೊಂಡಿತೇ ಎಂಬುದೂ ಸದ್ಯಕ್ಕೀಗ ಗೊತ್ತಾಗುತ್ತಿಲ್ಲ. ದೇಶದ ಪ್ರಧಾನಿ ಮಾಡಿದ ಯಾವುದೋ ಒಂದು ಕೆಲಸ,
ವಿಚಾರವನ್ನು ಮೆಚ್ಚಿ ಮಾತನಾಡಿದರೆ ಭಕ್ತ, ಚಡ್ಡಿ ಎನ್ನುವ, ಅವರನ್ನೇನಾದರೂ ಟೀಕಿಸಿ ಮಾತನಾಡಿದರೆ ಗಂಜಿ ಗಿರಾಕಿ ಎಂದು ಮುಗಿಬೀಳುವ ಹಂತಕ್ಕೆ ಬಂದು
ಬಿಟ್ಟಿದ್ದೇವೆ. ಏಕೆಂದರೆ ನಾವೆಲ್ಲ ವಿದ್ಯಾವಂತರು, ಓದಿಕೊಂಡವರು. ಇನ್ನೊಬ್ಬರು ಏನೇ ಮಾಡಲಿ ಅವರನ್ನು ಆಡಿಕೊಳ್ಳುವುದು ಹೇಗೆಂದು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದೇವೆ, ಇದೇ ಈಗಿನ ‘new normal‘ ಕೂಡ ಆಗಿಬಿಟ್ಟಿದೆ. ಹಾಗಂತ ಒಂದು ವಿಚಾರಧಾರೆಯ ಪರ ಮತ್ತು ವಿರೋಧದ ಚರ್ಚೆ, ವಾಗ್ವಾದ ಇರಲೇ ಬಾರದು ಎಂದಲ್ಲ.

ಅವುಗಳು ಅದರ ಪಾಡಿಗೆ ನಡೆಯುತ್ತಿದ್ದರೆ ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಈಗಿನ ವಿಚಾರ ಇದ್ಯಾವುದೂ ಅಲ್ಲ. ಈಗಷ್ಟೇ ಪ್ರಸ್ತಾಪಿಸಿದ ಜಲಪ್ರಳಯ, ಕಾಡ್ಗಿಚ್ಚು, ಭೂಕಂಪ, ಭೂಕುಸಿತ ಎಂಬ ವಿದ್ಯಮಾನಗಳೆಲ್ಲ ಎಂದೋ ಆಗಿ ಹೋಗಿರುವಂಥದ್ದಲ್ಲ. ಇವು ಇಂದಿನ ಸುದ್ದಿಯೇ. ಎಲ್ಲವುಗಳನ್ನು ಭೂಪಟ ಇಟ್ಟು ಕೊಂಡು ನೋಡುತ್ತ ಹೋದರೆ, ವಿಶ್ವದ ಬಹುತೇಕ ಅರ್ಧ ಭಾಗವೀಗ ಪ್ರಾಕೃತಿಕ ವಿಕೋಪದಿಂದ ನಲುಗಿದೆ.

ಅಲ್ಲೆಲ್ಲ ಜನರು ನಿರ್ಗತಿಕರಾಗಿದ್ದಾರೆ. ತುತ್ತು ಅನ್ನಕ್ಕೆ ಆಶ್ರಯ ಕೇಂದ್ರಗಳಲ್ಲಿ ಕೈವೊಡ್ಡಿ ನಿಂತಿದ್ದಾರೆ. ಮನೆ-ಮಠ, ಆಸ್ತಿ-ಪಾಸ್ತಿ ಬಿಲ್‌ಕುಲ್ ನಿರ್ನಾಮ ಆಗಿ ಹೋಗಿವೆ. ಈ ಭೀಕರ ಸನ್ನಿವೇಶದಲ್ಲಿ ಮನುಷ್ಯರು ತಮ್ಮನ್ನೇಗೋ ಕಾಪಾಡಿ ಕೊಳ್ಳುತ್ತಿದ್ದಾರೆ. ಆದರೆ, ವನ್ಯಜೀವಿಗಳ ಸುಟ್ಟು ಕರಕಲಾದ, ನೀರಿನಲ್ಲಿ
ಉಸಿರುಗಟ್ಟಿ ಜೀವ ಬಿಟ್ಟ ನೂರಾರು ಚಿತ್ರಗಳನ್ನು ದಿನನಿತ್ಯ ನೋಡುವಾಗ ಮನಸ್ಸನ್ನು ಕದಡುತ್ತಿವೆ. ನಾವು ಪ್ರಕೃತಿಯ ಮೇಲೆ ಮಾಡುತ್ತಿರುವ ಪೈಶಾಚಿಕ
ದಬ್ಬಾಳಿಕೆಯ ಪರಿಣಾಮ, ಜೀವಿಸಲು ನಮ್ಮಷ್ಟೇ ಹಕ್ಕು ಹೊಂದಿದ ಮೂಕ ಜೀವಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಸತ್ತು ಹೋಗುತ್ತಿವೆ. ಕೈಗಾರಿಕಾ ಕ್ರಾಂತಿ, ಆಧುನಿಕತೆ, ಅಭಿವೃದ್ಧಿಯ ಹೆಸರಿನಲ್ಲಿ ಭೂಮಂಡಲದ ಬುಡಕ್ಕೇ ನಾವು ಬೆಂಕಿ ಹಚ್ಚಿದ್ದೇವೆ.

ನಮ್ಮ ಅರಿವಿಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಆದ ಈ ಪ್ರಮಾದವೇ ಈಗಿನ ಎಲ್ಲ ದುರಂತಗಳಿಗೆ ನೇರ ಹೊಣೆ. ವಿಶ್ವದ ಅತಿದೊಡ್ಡ ಉಷ್ಣವಲಯದ ಕಾಡು ಗಳಾದ ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳು ಇಂಗಾಲದ ಡೈ ಆಕ್ಸೆ ಡ್ ಹೀರಿಕೊಳ್ಳುವ ಬದಲಾಗಿ ತಾವೇ ಇಂಗಾಲವನ್ನು ಹೊರಸೂಸುತ್ತಿವೆ. ಇದಕ್ಕೆ
ಬಹುಮುಖ್ಯ ಕಾರಣ ಕಾಡ್ಗಿಚ್ಚು. ಧಗಧಗನೇ ಉರಿದು ಹೋಗುತ್ತಿರುವ ಅರಣ್ಯದಿಂದಾಗಿ ಇಂಗಾಲ ಹೆಚ್ಚುತ್ತಿದೆ. ಇದರಿಂದಾಗಿ ಭೂಮಿ ಮತ್ತಷ್ಟು ಬಿಸಿಯಾಗುತ್ತಿದೆ. ಆಗ್ನೇಯ ಏಷ್ಯಾದ ಕೆಲ ಕಾಡುಗಳು, ತೋಟಗಳು ಬೆಂಕಿಯಿಂದಾಗಿ ನಾಶವಾದ ಪರಿಣಾಮ, ಕಳೆದ ಕೆಲ ವರ್ಷಗಳಿಂದ ಕಾಡುಗಳೀಗ ಇಂಗಾಲದ ಗೂಡುಗಳಾಗಿ
ಮಾರ್ಪಟ್ಟಿವೆ.

ದಕ್ಷಿಣ ಅಮೆರಿಕದಲ್ಲಿರುವ ಅಮೆಜಾನ್ ಕಾಡಿನಲ್ಲಿ ಬಿದ್ದ ಬೆಂಕಿ ನಮಗೂ ಮುಖ್ಯ ಅನಿಸುತ್ತಿದೆ. ಅದಕ್ಕೆ ಕಾರಣ, ಆ ಕಾಡಿನ ವಿಸ್ತೀರ್ಣ ಮತ್ತು ಸಂಪತ್ತು. ಅಮೆಜಾನ್ ಜಲಾನಯನ ಪ್ರದೇಶವು 6 ಮಿಲಿಯನ್ ಚದರ ಕಿಲೋಮೀಟರ್‌ನಷ್ಟಿದೆ. ಇನ್ನೂ ಸರಳವಾಗಿ ಹೇಳಬೇಕು ಎಂದರೆ ಭಾರತದ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚು! 2019ರಲ್ಲಿ ಅಮೆಜಾನ್ ಕಾಡಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಜ್ವಾಲೆಗಳು ಬಾಹ್ಯಾಕಾಶದಿಂದಲೂ ಗೋಚರಿಸುತ್ತಿದ್ದವು ಎಂದರೆ ಅದರ ಪ್ರಖರತೆ ಎಷ್ಟಿರಬೇಡ ಲೆಕ್ಕ ಹಾಕಿ. ವಿಶ್ವದೆಲ್ಲೆಡೆ ಬಳಸುವ ವಾಹನಗಳು ವಾತಾವರಣಕ್ಕೆ ಹೊರಹಾಕುವ ಇಂಗಾಲ ವನ್ನು ಅಮೆಜಾನ್ ಕಾಡುಗಳು ಹೀರಿಕೊಳ್ಳುತ್ತಿದ್ದವು.

ಇದರಿಂದಾಗಿ ಜಾಗತಿಕ ಹವಾಮಾನ ನಿಯಂತ್ರಣ ಸಾಧ್ಯವಾಗುತ್ತಿತ್ತು. ಆದರೀಗ ಪರಿಸ್ಥಿತಿ ಉಲ್ಟಾ ಹೊಡೆದಿದೆ, ಉಸಿರಾಡಲು ಶುದ್ಧ ಗಾಳಿ ನೀಡುತಿದ್ದ ಅಮೆಜಾನ್ ಕಾಡೀಗ ಥೇಟ್ ಇಟ್ಟಿಗೆ ಸುಡುವ ಗೂಡಿನಂತಾಗಿದೆ. ಇದೇ ರೀತಿ ರಷ್ಯಾ ಭೂ ಭಾಗವೂ ಕೂಡ ಆಮ್ಲಜನಕದ ಮತ್ತೊಂದು ದೊಡ್ಡ ಆಗರವೆನ್ನುತ್ತಾರೆ.
ಜಗತ್ತಿಗೆ ಅಗತ್ಯವಾದ ಆಮ್ಲಜನಕವು ಅಲ್ಲಿನ ಕಾಡುಗಳಿಂದ ಶೇ.೧೦ರಷ್ಟು ವಾತಾವರಣವನ್ನು ತುಂಬಿಕೊಳ್ಳುತ್ತದೆ ಎಂದು ಅಧ್ಯಯವವೊಂದು ಹೇಳುತ್ತದೆ. ಆದರೀಗ ರಷ್ಯಾ ಮತ್ತು ಸೈಬೀರಿಯಾ ಭಾಗದ ಕಾಡುಗಳಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡು, ತಂಗಾಳಿ ಬರಬೇಕಿದ್ದ ಕಡೆಯಿಂದ ಬಿಸಿಗಾಳಿ ಬರುವಂತಾಗಿದೆ.

ಅದರಲ್ಲೂ ಸೈಬೀರಿಯಾ ಪ್ರಾಂತ್ಯ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಮಣ್ಣಿನಲ್ಲಿ ಕಾರ್ಬನ್ ಸಂಯುಕ್ತಗಳ ಪ್ರಮಾಣ ಹೆಚ್ಚಿದೆ. ಒಂದೊಮ್ಮೆ ಇಲ್ಲೇನಾದರೂ ಕಾಡ್ಗಿಚ್ಚು ಉಂಟಾದರೆ ಅದರ ಪರಿಣಾಮ ಊಹೆಗೂ ನಿಲುಕದು. ಷುಗರ್ ಕಾರ್ಖಾನೆ ಬಳಿ ನೀವೇನಾದರೂ ಗಾಳಿ ಕುಡಿದಿದ್ದರೆ, ಅಲ್ಲಿ ಬರುವ ಕಡುಕಪ್ಪು ಬಣ್ಣದ ಹೊಗೆಯನ್ನು
ನೋಡಿದ್ದರೆ ಅದನ್ನು ರಷ್ಯಾದ ಕಾಡಿನ ಪ್ರದೇಶದಲ್ಲಿನ ಸಣ್ಣ ಝಲಕ್ ಎಂದುಕೊಳ್ಳಿ. ಕಾಡಿನಿಂದಲೇ ಅಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಹಾಗೂ
ಕಾರ್ಬನ್ ಮೊನಾಕ್ಸೈಡ್ ವಾತಾವರಣವನ್ನು ಸೇರಿಕೊಳ್ಳುತ್ತದೆ. ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದು ಶೇಕಡ 35 ರಷ್ಟು
ಹೆಚ್ಚಾಗಿದೆ. ಈಗಾಗಲೇ 250 ಮೆಗಾಟನ್ ಕಾರ್ಬನ್ ಸೈಬೀರಿಯಾ ಕಾಡ್ಗಿಚ್ಚಿನಿಂದ ವಾತಾವರಣ ಸೇರಿದೆ ಎಂಬುದನ್ನು ತಜ್ಞರು ಅಂದಾಜು ಮಾಡಿದ್ದಾರೆ.

ಅಂದರೆ ಆ ಭೂಪ್ರದೇಶದಿಂದ ದೂರವಿದ್ದರೂ ನಾವು ಅಥವಾ ಜಗತ್ತಿನ ಇನ್ಯಾರೋ ಆ ವಿಷಗಾಳಿಯನ್ನು ಕುಡಿಯುತ್ತಿದ್ದಾರೆ. ಒಟ್ಟಾರೆ ಕಳೆದ ಕೆಲವು ವರ್ಷದಲ್ಲಿ
ಆದ ಅರಣ್ಯ ನಾಶ, ಮಳೆಯ ಕೊರತೆಯಿಂದಾಗಿ ಭೂಮಿಯ ಒಟ್ಟಾರೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಈ ಹೊತ್ತಲ್ಲೇ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ
ಐಪಿಸಿಸಿ (Intergovernmental Panel for Climate Change) ಒಂದು ವಾರದ ಹಿಂದಷ್ಟೇ ಬಿಡುಗಡೆ ಮಾಡಿದ ವರದಿಯ ಸುದ್ದಿ ಕಣ್ಣಿಗೆ ಬಿತ್ತು.
ಒಂದೊಂದಾಗಿ ಓದುತ್ತಾ ಹೋದಂತೆಲ್ಲ ನಿಜಕ್ಕೂ ಮೈ ಕಂಪಿಸುವ ಅನುಭವ.

ವರದಿಯಲ್ಲಿ ಮಾನವರು ಮಾಡುತ್ತಿರುವ ಚಟುವಟಿಕೆಗಳೇ ಭೂಮಿಯಲ್ಲಿ ಆಗುತ್ತಿರುವ ಇಷ್ಟೆಲ್ಲ ಪ್ರಾಕೃತಿಕ ವಿಕೋಪಗಳಿಗೆ ನೇರ ಕಾರಣ ಎಂದು ಹೇಳಲಾಗಿದೆ. ಭೂಮಿಯ ತಾಪಮಾನವು ಗಂಭಿರವಾಗಿ ಏರಿಕೆಯಾಗುತ್ತಿದ್ದು, ಇದು irreversible  ಆಗಿರಲಿದೆ. ಇದರಿಂದಾಗಿಯೇ ಪ್ರವಾಹ, ಕಾಡ್ಗಿಚ್ಚು, ಭೂಕುಸಿತ
ಸಂಭವಿಸುತ್ತಿವೆ. ಇದು ಬರೀ ಟೀಸರ್ ಅಷ್ಟೇ, ಪಿಕ್ಚರ್ ಅಭೀ ಬಾಕಿ ಹೈ ಎಂದು ಹೇಳಲಾಗಿದೆ. 1980ರ ನಂತರ ಉಷ್ಣ ಅಲೆ (ಹೀಟ್ ವೇವ್ಸ್) ಅಂದರೆ ಸಮುದ್ರ ದಿಂದ ಮೇಲೇಳುವ ಬೆಚ್ಚಗಿನ ಮಾರುತದ ಪ್ರಕ್ರಿಯೆ ಹೆಚ್ಚಾಗಿದೆ. ಇದರ ವೇಗ ಮತ್ತು ಪ್ರಮಾಣ 2006ರ ನಂತರವಂತೂ ದುಪ್ಪಟ್ಟಾಗಿದೆ ಎಂಬ ಆತಂಕಕಾರಿ ವಿಚಾರ ವರದಿಯಲ್ಲಿದೆ.

ಹೀಗೆಯೇ ಅನಿಯಂತ್ರಿತವಾಗಿ ಕಾರ್ಬನ್ ಹೊರಹಾಕುತ್ತಲೇ ಹೋದರೆ ಭವಿಷ್ಯದಲ್ಲಿ ಜೀವ ಸಂಕುಲಕ್ಕೇ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂಬುದನ್ನು ಪ್ರಮುಖವಾಗಿ ಹೇಳಲಾಗಿದೆ. 2019ರಲ್ಲಿ ವಾಯು ಮಂಡಲದ ಇತಿಹಾಸದಲ್ಲೇ ಅತಿ ಹೆಚ್ಚು ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆ ದಾಖಲಾಗಿದೆ. ಕಳೆದ ೧೨೦ ವರ್ಷಗಳಲ್ಲಾದ ಜಾಗತಿಕ ಸಮುದ್ರ ಮಟ್ಟದ ಹೆಚ್ಚಳವು ಹಿಂದಿನ ಮೂರು ಸಾವಿರ ವರ್ಷಗಳಲ್ಲಾದ ಹೆಚ್ಚಳಕ್ಕೆ ಸಮ. 1750ರಿಂದ ಹಸಿರು ಮನೆ ಅನಿಲ(ಗ್ರೀನ್ ಹೌಸ್ ಗ್ಯಾಸ್)ಹೊರ ಸೂಸುವಿಕೆಯ ನಿರಂತರವಾಗಿ ಹೆಚ್ಚಾಗಿದೆ ಎಂಬಂತಹ ಹಲವು ಆತಂಕಕಾರಿ ವಿಚಾರಗಳನ್ನು ವರದಿ ಒಳಗೊಂಡಿದೆ.

ಇದು ಎಲ್ಲೋ ಬಿಡುಗಡೆಯಾಗುವ ಮೂರು ಮತ್ತೊಂದು ವರದಿಯಂತಲ್ಲ. ಐಪಿಸಿಸಿಯ ವರ್ಕಿಂಗ್ ಗ್ರೂಪ್ 1ರ ಈ ವರದಿಯನ್ನು 195 ದೇಶಗಳ ಸರಕಾರಗಳು, ಹಲವು ದೇಶಗಳ 234 ಅತ್ಯುನ್ನತ ವಿಜ್ಞಾನಿಗಳು ಅನುಮೋದಿಸಿದ್ದಾರೆ. ’Climate change 2021: The Physical Science Basis’ ಹೆಸರಿನಲ್ಲಿ ಪ್ರಕಟ ವಾಗಿರುವ ಈ ಆರನೇ ವರದಿಯಲ್ಲಿ, ಮಾನವ ಕುಲದಿಂದಾದ ಇಂಗಾಲದ ಹೊರಸೂಸುವಿಕೆ ಮತ್ತು ಅದರ ಪರಿಣಾಮಗಳ ಬಗ್ಗೆ  ನಡೆದ ಆಳವಾದ ಅಧ್ಯಯನದ ಫಲಿತಾಂಶವಿದ್ದು. ಪ್ರಮುಖವಾದ 47 ದೇಶಗಳ ಸರಕಾರಗಳು ಅಧ್ಯಯನದಲ್ಲಿ ನೇರವಾಗಿ ಪಾಲ್ಗೊಂಡಿವೆ.

ಜಗತ್ತಿನ ಅಲ್ಲಲ್ಲಿ ಈಗ ಆಗುತ್ತಿರುವ ಕಾಡ್ಗಿಚ್ಚು, ಪ್ರವಾಹ, ಭೂಕಂಪ, ಭೂಕುಸಿತಗಳು ಪ್ರಕೃತಿ ನಮಗೆ ಕೊಡುತ್ತಿರುವ ಅಲಾರಂ ಬೆಲ್. ಈಗಲೇ ಈ ಬಗ್ಗೆ ನಾವು
ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮುಂದಿನ ಗರಿಷ್ಠ ಹತ್ತು ತಲೆಮಾರುಗಳು ಮಾತ್ರ ಭೂಮಿ ಯಲ್ಲಿ ಬದುಕಬಹುದೇನೋ. ನಂತರ ಭೂಮಿಯೇ ನಾಮಾವಶೇಷ ವಾದರೂ ಅಚ್ಚರಿ ಪಡಬೇಕಾಗಿಲ್ಲ. ಇಂಥದ್ದೊಂದು ವಿಷಯಗಳನ್ನು ಅರಿತಾಗ ಜನ ಸಾಮಾನ್ಯರಾದ ನಾವು ಮರುಕ ಪಡುತ್ತೇವೆ. ಏನಪ್ಪಾ ಮಾಡೋದು, ನಮ್ಮ ಕೈಯಲ್ಲಿ ಏನಿದೆ. ನಮ್ಮ ಜನರಿಗೆ ಬುದ್ಧಿ ಯಾವಾಗ ಬರುವುದೋ ಎಂದು ಯೋಚಿಸುತ್ತೇವೆ. ಇದೊಂದು ರೀತಿ ದೋಸೆಯನ್ನು ತಿರುವಿ ಹಾಕಿದಂತೆ.

ನಮ್ಮಿಂದ ಪರಿಸರ ರಕ್ಷಣೆ ಆಗುತ್ತಿದೆಯೇ, ನಾವು ಹೇಗೆ ಪ್ರಕೃತಿಗೆ ಕಂಟಕವಾಗಿದ್ದೇವೆ ಎಂಬುದನ್ನು ಬಿಟ್ಟು ಇನ್ನೊಬ್ಬರ ಮೇಲೆ ಹೊಣೆ ಹೊರಿಸಿಬಿಡುತ್ತೇವೆ. ನಮ್ಮ ಕಾರಿನೊಳಗೆ ಕೂತಾಕ್ಷಣ ಎಸಿ ಹಾಕಿಕೊಳ್ಳುವ ನಾವೇ ದಿನೇದಿನೇ ಬಿಸಿಲು ಹೆಚ್ಚಾಗ್ತಿದೆ, ಸೆಖೆ ತಡೆಯಲಾಗದು ಎಂದು ಬೈಯುತ್ತೇವೆ. ಸೆಂಟ್ರಲೈಸ್ಡ್ ಎಸಿ ಹಾಲ್‌ನಲ್ಲಿ ಪರಿಸರ ಸಂರಕ್ಷಣೆಯ ಸೆಮಿನಾರ್ ಮಾಡಿ, ನಡುನಡುವೆ ತಿಂಡಿ-ತೀರ್ಥವೆಂದು ಪ್ಲಾಸ್ಟಿಕ್‌ನ ತಟ್ಟೆ, ಲೋಟ, ಬಾಟಲಿಗಳ ರಾಶಿ ಮಾಡುತ್ತೇವೆ.

ಇಂತಹ ಸಣ್ಣಸಣ್ಣ ವಿಚಾರಗಳು ಕೂಡ ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲವು ಎಂಬುದನ್ನು ಮರೆತು ಬಿಡುತ್ತೇವೆ. ಎಲ್ಲದಕ್ಕೂ ಸರಕಾರ, ಇತರರನ್ನು
ದೂರುವ ನಾವು ನಮ್ಮ ಮೇಲೆಂದೂ ದೂರು ದಾಖಲಿಸಿಕೊಂಡೇ ಇಲ್ಲ. ಇನ್ನು ದೇಶ ದೇಶಗಳು ತಮ್ಮ ದೊಡ್ಡಸ್ತಿಕೆಗಾಗಿ ಅಣುಬಾಂಬ್, ಮಿಸೈಲ್‌ಗಳನ್ನೆಲ್ಲ ಉಪಯೋಗಿಸಿ ಭೂಮಿಯನ್ನು ಅದುರುವಂತೆ ಮಾಡುತ್ತಿದ್ದಾರೆ. ನಾವು ಸಣ್ಣದಾಗಿ, ದೊಡ್ಡವರು ದೊಡ್ಡದಾಗಿ ಭೂಮಿಗೆ ಹಿಂಸೆ ಕೊಡುತ್ತಿದ್ದೇವೆ. ಇಂಥ ವಿಚಾರ ಗಳನ್ನೆಲ್ಲ ಒಟ್ಟು ಗೂಡಿಸಿ ಪರಿಸರ ರಕ್ಷಣೆಯ ಬಗ್ಗೆ ಹಿಂದೆಯೂ ಅಸಂಖ್ಯ ಲೇಖನಗಳು, ವರದಿಗಳು ಬಂದಿವೆ, ಮುಂದೆಯೂ ಬರಲಿವೆ. ಆದರೆ, ಅವುಗಳಿಂದ ನಮಗೆಷ್ಟು ಪರಿಸರ ಜಾಗೃತಿ ಮೂಡಿದೆ ಎಂಬದಷ್ಟೇ ಮುಖ್ಯ.