Thursday, 19th September 2024

ಕರುಣೆಯ ಬದುಕು ಬೇಡವೆನಿಸುತ್ತದೆ !

ಅಂತರಾಳ

ಮಿರ್ಲೆ ಚಂದ್ರಶೇಖರ

ಊರಿಗೆ ಹೋಗುವುದಕ್ಕಾಗಿ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಯಾಕೋ, ಬಹುತೇಕ ಎಲ್ಲಾ ಸೀಟುಗಳಲ್ಲಿ ಹೆಂಗಸರೇ ಇದ್ದರು. ಅಲ್ಲಲ್ಲಿ ಗಂಡಸರೂ ಕುಳಿತಿದ್ದರು. ಹೀಗಾಗಿ ಯಾವೊಂದು ಸೀಟೂ ಖಾಲಿ ಇರಲಿಲ್ಲ. ಪರಿಣಾಮ, ಕಂಬಕ್ಕೆ ಒರಗಿ ನಿಂತಿದ್ದೆ. ವ್ಯಕ್ತಿಯೊಬ್ಬ ತಾನು ಕುಳಿತಿದ್ದ ಸೀಟಿನಿಂದ ಎದ್ದು ನನ್ನನ್ನು ಉದ್ದೇಶಿಸಿ, ‘ತಾತ, ಬನ್ನಿ ಇಲ್ಲಿ ಕುಳಿತುಕೊಳ್ಳಿ. ಪಾಪ! ನಿಮಗೆ ವಯಸ್ಸಾಗಿದೆ’ ಎಂದು ಕರುಣೆಯ ಧ್ವನಿಯಲ್ಲಿ ಹೇಳಿದ.

ನನಗೋ ಇನ್ನಿಲ್ಲದ ಉರಿ. ‘ನನಗೆ ವಯಸ್ಸಾಗಿದೆ, ನಿಂತು ಪ್ರಯಾಣಿಸಲಾಗು ವುದಿಲ್ಲ’ ಅಂತ ನಾನೇನಾದರೂ ಇವನನ್ನು ಕೇಳಿದೆನೇ? ಆತ ಸೀಟು ಬಿಟ್ಟುಕೊಟ್ಟಿದ್ದು ಓಕೆ; ಆದರೆ, ‘ತಾತ, ಪಾಪ ವಯಸ್ಸಾಗಿದೆ’ ಎಂಬ ಪದಗಳನ್ನು ಏಕೆ ಉಪಯೋಗಿಸಬೇಕಿತ್ತು? ವಯಸ್ಸಾಗಲು ನನಗೇನು ಇಷ್ಟವಿತ್ತೇ? ಆಯ್ತು, ಇವನಿಗೇನೂ ವಯಸ್ಸಾಗುವುದಿಲ್ಲವೇ? ಮೈಸೂರು ಬಸ್ ನಿಲ್ದಾಣದಲ್ಲಿ ತಡೆರಹಿತ ಬಸ್ಸಿಗೆ ಟಿಕೆಟ್ ತೆಗೆದುಕೊಳ್ಳಲು ಸರದಿಯಲ್ಲಿ ನಿಂತರೆ ಅಲ್ಲೊಬ್ಬ, ‘ತಾತ, ನೀವು ಸಾಲಿನಲ್ಲಿ ನಿಲ್ಲುವುದು ಬೇಡ.

ನೇರವಾಗಿ ಹಿರಿಯ ನಾಗರಿಕರ ಕಾರ್ಡ್ ತೋರಿಸಿ ಟಿಕೆಟ್ ತೆಗೆದುಕೊಳ್ಳಿ’ ಎಂದು ಸಲಹೆ ಕೊಟ್ಟ. ಅಲ್ಲಿಯೂ ನಾನು ಮುದುಕನೆಂದು ಪರೋಕ್ಷ ವಾಗಿ ಹೇಳಿದ್ದು ಮನಸ್ಸಿಗೆ ನೋವು ತರದೆ ಇರುತ್ತದೆಯೇ? ಈ ನೋವು ತಡೆಯಲಾರದೆ, ಹಿರಿಯ ನಾಗರಿಕರಿಗೆ ಬಸ್ ಟಿಕೆಟ್‌ನಲ್ಲಿ ಕೊಡುವ ಡಿಸ್ಕೌಂಟನ್ನು ತ್ಯಜಿಸಿದ್ದೇನೆ. ಮನೆಯವರಿಂದ ಹಿಡಿದು ಹೋದೆಡೆಯೆಲ್ಲಾ ಸಿಗುವ ವರು ಸಹಾಯ ಮಾಡುವ ನೆಪದಲ್ಲಿ ಹೆಜ್ಜೆ ಹೆಜ್ಜೆಗೂ ‘ನಿಮಗೆ ವಯಸ್ಸಾಗಿದೆ’ ಎಂದು ಮಾಗಿದ ಮನಸ್ಸಿಗೆ ಚುಚ್ಚಿ ಹೇಳು ತ್ತಾರಲ್ಲಾ, ಇವರಿಗೇನು ಗೊತ್ತು ವಯಸ್ಸಾದವರ ಆಸೆ- ಅಭಿಲಾಷೆಗಳು ಹಾಗೂ ಭಾವನೆಗಳು.

ನೈಸರ್ಗಿಕ ನಿಯಮದಂತೆ ಸಹಜವಾಗಿ ದೇಹಕ್ಕೆ ವಯಸ್ಸು ಆಗಿರಬಹುದು;ಆದರೆ ವಯಸ್ಸಿನ ಯಾವ ಹಂತದಲ್ಲೂ, ಕಡೆಗೆ ಇಂದೋ ನಾಳೆಯೋ ಭಗವಂತನ ಪಾದ ಸೇರಲು ತುದಿಗಾಲಲ್ಲಿ ನಿಂತ ಹಣ್ಣಣ್ಣು ಮುದುಕನ ಮನಸ್ಸು ಕೂಡ ಹರೆಯದವರ ಸ್ಥಿತಿಯಲ್ಲೇ ಇರುತ್ತದೆ ಎಂಬುದು ಕಟುಸತ್ಯ! ಈ ಸತ್ಯಾಂಶದ ಅರಿವಾಗಬೇಕೆಂದರೆ, ಅವರಾಡುವ ಮಾತುಗಳು ಮತ್ತು ಅವರ ನೋಟಗಳನ್ನು ಸೂಕ್ಷ್ಮವಾಗಿ ಗಮನಿಸಿ! ಸುತ್ತಲಿನವರು ವ್ಯಕ್ತಪಡಿಸುವ ಕನಿಕರದ ಮಾತುಗಳಿಂದ ದೇಹಕ್ಕೆ ಏನೂ ಅನಿಸುವುದಿಲ್ಲವಾದರೂ, ಹರೆಯದ ಮನಸ್ಸಿಗೆ ಚೂರಿಯಿಂದ ನೂರೆಂಟು ಬಾರಿ ಚುಚ್ಚಿದ ನೋವು
ಆಗುವುದು!

ಬದುಕನ್ನು ತೊರೆಯುವ ಅಂತ್ಯಕಾಲದ ಘಟ್ಟ ಬಹಳವೇ ಸೂಕ್ಷ್ಮವಾದದ್ದು. ಈ ಹಂತದಲ್ಲಿ ಬಹುತೇಕ ವಯೋ ವೃದ್ಧರು ತಮ್ಮ ಮನೆಯಲ್ಲೇ ತಾವು ಪರಕೀಯರಾಗಿ ಜೀವಿಸುವಂತಾಗುವುದು ದುರಂತ. ಅವರ ಅಭಿಪ್ರಾಯಗಳಿಗೆ ಮನ್ನಣೆ ಇರುವುದಿಲ್ಲ. ಸಾಕಷ್ಟು ಆಸ್ತಿ ಮಾಡಿಟ್ಟಿದ್ದರೂ ಸಂಪಾದನೆ ಅಥವಾ ಪಿಂಚಣಿ ಬರುತ್ತಿಲ್ಲವಾದರೆ, ದಿನ ವೊಂದು ಯುಗವಾಗಿ ಸಾವು ಯಾವಾಗ ಬರುವುದೋ ಎಂಬ ನಿರೀಕ್ಷೆಯಲ್ಲಿ ದಿನದೂಡುವ ಕರ್ಮ ಹಿರಿಯ ಈ
ಜೀವಿಗಳದ್ದು. ಶೂರ-ಧೀರನಿರಲಿ, ಕೋಟ್ಯಧಿಪತಿಯೇ ಆಗಿರಲಿ, ಉನ್ನತ ಹುದ್ದೆಯಲ್ಲಿರಲಿ, ಮನವನ್ನು ಬಗ್ಗು ಬಡಿದು ಹಿಂಡಿ ಹಿಪ್ಪೆ ಮಾಡುವುದು ನಮ್ಮ ಎದುರಾಳಿಯಲ್ಲ ಅಥವಾ ನಮ ಗಿಂತ ಬಲಿಷ್ಠನೂ ಅಲ್ಲ; ಅದುವೇ ಕ್ಷಣ ಕ್ಷಣವೂ ಏರುವ ವಯಸ್ಸು. ಎಂಥವರನ್ನೂ ಮೆತ್ತಗೆ ಮಾಡಿ ಬಿಡುತ್ತದೆ ಈ ವಯಸ್ಸು.

ವ್ಯಕ್ತಿಯೊಬ್ಬ ದುರ್ಮರಣಗಳನ್ನು ಜಯಿಸಿ ಜೀವಂತವಾಗಿದ್ದರೂ, ವಯಸ್ಸು ಎನ್ನುವುದು ಎಲ್ಲರಿಗೂ ಒಂದೇ ನ್ಯಾಯ ಕೊಟ್ಟು ದೇಹವನ್ನು ಕ್ರಮೇಣ
ಕುಗ್ಗಿಸುತ್ತಾ ಅಂತಿಮವಾಗಿ ನಮ್ಮ ಇರುವಿಕೆಯನ್ನು ಕೊನೆ ಗೊಳಿಸಿ ಬಿಡುತ್ತದೆ. ಇಪ್ಪತ್ತರ ಚೆಲುವೆ ಹಾಗೂ ಅರವತ್ತು ದಾಟಿದ ಮಹಿಳೆ ಒಮ್ಮೆಗೇ ಬಸ್ಸಿನೊಳಗೆ ನಿಂತಿದ್ದರೆ, ಕರುಣಾಮಯಿಗಳು ಯಾರಿಗೆ ಸೀಟನ್ನು ಬಿಟ್ಟುಕೊಡುವರು? ಹಾಗೆಯೇ ರಸ್ತೆಯಲ್ಲಿ ನಿಂತು ವಾಹನಗಳಿಗೆ ಕೈ ಅಡ್ಡ ಮಾಡಿ  ಲಿಫ್ಟ್ ಕೇಳಿದರೆ ಇಬ್ಬರಲ್ಲಿ ಯಾರಿಗೆ ಪ್ರಾಮುಖ್ಯ ಕೊಡುವರು? ಅನುಮಾನವೇ ಇಲ್ಲ, ಎಲ್ಲರ ಉತ್ತರ ಒಂದೇ- ಅದು ಇಪ್ಪತ್ತರ ಚೆಲುವೆಗೇ!

ನನ್ನಲ್ಲಿ ಕಾಡುವ ಪ್ರಶ್ನೆ- ಇಲ್ಲೇಕೆ ಹಿರಿಯ ನಾಗರಿಕರ ಮೇಲೆ ಕರುಣೆ ತೋರುವುದಿಲ್ಲ? ತರ್ಕಗಳು ಏನೇ ಇರಲಿ, ಮನುಷ್ಯನಿಗೆ ಯಾವುದೇ ಕಾಯಿಲೆಗ ಳಿಲ್ಲದೆ ಆರೋಗ್ಯದಿಂದ ಇದ್ದರೂ, ಮುಪ್ಪೆಂಬ ಮಹಾರೋಗ ಬಂದೇ ಬರುವುದು. ಈ ಗ್ಯಾರಂಟಿ ರೋಗಕ್ಕೆ ಔಷಧಿಗಳಿಲ್ಲ. ಮಕ್ಕಳಾಗಿದ್ದಾಗ ನಿಮ್ಮನ್ನು ಹೇಗೆ ನೋಡಿಕೊಂಡರೋ ಹಾಗೆಯೇ ನಿಮ್ಮ ಮಕ್ಕಳು, ಮೊಮ್ಮಕ್ಕಳು ಪ್ರೀತಿಯಿಂದ (ಕರುಣೆಯಿಂದಲ್ಲ!) ಜತೆಯಲ್ಲಿ ಇಟ್ಟುಕೊಂಡು ಅಕ್ಕರೆಯಿಂದ ನೋಡಿಕೊಂಡರೆ ವಯೋವೃದ್ಧರು ಇಳಿವಯಸ್ಸಿನಲ್ಲಿ ಅದಕ್ಕಿಂತ ಬೇರೇನನ್ನೂ ಕೇಳರು. ಹಾಂ,ಎಂದಿಗೂ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂಥ ಕ್ರೂರ ಕೆಲಸವನ್ನು ಮಾಡುವುದು ಬೇಡ.

ಹಿರಿಯರು ವಯೋಸಹಜವಾಗಿ ಹಳೆಯದನ್ನು ನೆನಪು ಮಾಡಿಕೊಳ್ಳುವುದು, ಆ ನೆನಪುಗಳನ್ನು ಪದೇಪದೆ ಇತರರೊಂದಿಗೆ ಹೇಳಿಕೊಂಡು ಖುಷಿ ಪಡುವುದು ಸಾಮಾನ್ಯ. ಅವರು ಆ ನೆನಪುಗಳನ್ನು ನಿಮಗೆ ನೂರು ಬಾರಿ ಹೇಳಿರಲಿ, ಪ್ರತಿ ಬಾರಿಯೂ ಹೊಸದೆಂಬಂತೆ ಆಲಿಸಿ ಅವರಿಗೆ ಪ್ರಶ್ನೆ
ಮಾಡಿ. ಅವರಿಗದು ಪರಮಾನಂದ. ತಮಾಷೆಗೂ, ‘ಎಷ್ಟು ಸಾರಿ ಹೇಳ್ತೀಯಾ ತಾತ?’ ಎಂದು ಅವರನ್ನು ಗೇಲಿ ಮಾಡುವುದು, ತೆಗಳುವುದು ಬೇಡ. ಪ್ರತಿಬಾರಿಯೂ ಹೊಸ ದೆಂಬಂತೆ ಆಲಿಸಿ. ಬಹಳಷ್ಟು ವಿಷಯಗಳಲ್ಲಿ ಅವರು ಮುಗ್ಧರಾಗಿಬಿಟ್ಟಿರುತ್ತಾರೆ, ಬದುಕಿನ ಹಲವು ಘಟನೆಗಳನ್ನು ಮರೆತುಬಿಟ್ಟಿರುತ್ತಾರೆ. ಕೆಲವನ್ನು ಮಾತ್ರ ಮರೆಯದೆ ಮಕ್ಕಳೊಂದಿಗೆ, ಸ್ನೇಹಿತರೊಟ್ಟಿಗೆ ಹೇಳಿಕೊಂಡು ಸಂತೋಷ ಪಡುತ್ತಿರುತ್ತಾರೆ.

ಪ್ರಪಂಚದಲ್ಲಿ ಅರವತ್ತು ವರ್ಷ ದಾಟಿದವರೆಲ್ಲರೂ ಒಮ್ಮೆಗೇ ಟಿಕೆಟ್ ಪಡೆದು ಖಾಲಿಮಾಡಿದರು ಎಂದುಕೊಳ್ಳೋಣ, ಆಗ ಎಲ್ಲವೂ ಖಾಲಿಖಾಲಿ. ಮುಖ್ಯವಾಗಿ ವಿಧಾನಸಭೆ, ಸಂಸತ್ ಭವನಗಳಂಥ ಶಕ್ತಿಕೇಂದ್ರಗಳು! ಜತೆಗೆ ಪರಿಣತಿ ಹೊಂದಿದ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಉಪನ್ಯಾಸಕರು ಇತ್ಯಾದಿ. ಇವರೊಂದಿಗೆ ಸಂಸ್ಕಾರ ಎನ್ನುವುದು ಕೂಡ ಮಣ್ಣುಪಾಲಾಗುವುದು. ಸಮಾಜದಲ್ಲಿ ಬಾಲಕರಿಂದ ಮುದುಕರವರೆಗೆ ಯಾರೊ
ಬ್ಬರೂ ಅಮುಖ್ಯರಲ್ಲ, ಎಲ್ಲರಿಗೂ ಅವರದ್ದೇ ಆದ ಮೌಲ್ಯ ವಿದೆ. ‘ನಾನು ಹಿರಿಯ, ಆತ ಕಿರಿಯ’ ಎಂಬ ಭೇದಭಾವ ಗಳು ಬೇಡ. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಗೌರವಿಸೋಣ.

‘ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು, ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ, ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ, ಜಸವು ಜನಜೀವನಕೆ- ಮಂಕುತಿಮ್ಮ’ ಎನ್ನುವ ಕವಿವಾಣಿಯಂತೆ, ಹಳೆಯದು ಮತ್ತು ಹೊಸದು ಎರಡೂ ಇದ್ದಾಗಲೇ ಜೀವನದ ಸೊಬಗು ಹಾಗೂ ಸವಿಯನ್ನು ಸವಯಲಿಕ್ಕೆ ಸಾಧ್ಯ. ಆದ್ದರಿಂದ, ಹಳೆಯದನ್ನು ಕಡೆಗಣಿಸುವುದು ಬೇಡ, ಪ್ರೀತಿಯಿಂದ ಗೌರವಿಸಿ. ಆ ನಿಟ್ಟಿನಲ್ಲಿ ಮಕ್ಕಳ ಮನಸ್ಸುಗಳನ್ನು ವಿಕಸಿತಗೊಳಿಸಿ ಸಮೃದ್ಧ ಸಮಾಜವನ್ನು ಕಟ್ಟುವ ಮೂಲಕ, ಪ್ರಸ್ತುತ ಪ್ರಜ್ವಲಿಸುತ್ತಿರುವ ಅನೈತಿಕ ವಿಷಯಗಳ ಸುದ್ದಿಗೆ ಆಸ್ಪದ ಆಗದ ರೀತಿಯಲ್ಲಿ ಬದುಕು ಕಟ್ಟಲಿಕ್ಕೆ ಸಾಧ್ಯ. ಮನೆಯೊಳಗೆ ಹಿರಿಯರ ಜತೆ ಬೆರೆತು ಬಾಳಿದರೆ ಮಾತ್ರ ಇದು ಸಾಧ್ಯ.

೨೦೨೧ರಲ್ಲಿ ಇದ್ದಂತೆ, ಭಾರತದ ೧೩೩ ಕೋಟಿ ಜನರಲ್ಲಿ ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೇವಲ ಶೇ.೬.೯೦ ರಷ್ಟು ಇದ್ದರೆ, ೧೫ರಿಂದ ೬೪ ವರ್ಷಗಳವರೆಗಿನವರು ಶೇ.೬೭.೭೦ರಷ್ಟು ಇದ್ದಾರೆ. ಆದರೂ, ಅಲ್ಪಸಂಖ್ಯಾತರಾಗಿ ರುವ ಹಿರಿಯ ನಾಗರಿಕರಿಗೆ ನೆಮ್ಮದಿಯ ಬದುಕನ್ನು ರೂಪಿಸಿ
ಕೊಡುವಲ್ಲಿ ಸೋತಿದ್ದೇವೆಂದು ಅನಿಸುವುದಿಲ್ಲವೇ?

(ಲೇಖಕರು ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್)

Leave a Reply

Your email address will not be published. Required fields are marked *