ತಿಳಿವಳಿಕೆ
ಶ್ರೀಧರ ಭಟ್ಟ
ಇಂಗ್ಲೆಂಡ್ ದೇಶದಲ್ಲಿ ಹೆಚ್ಚಾಗಿ ಬೆಳೆಯುವ ಮರಗಳಲ್ಲಿ ‘ಬರ್ಚ್’ ಮರವೂ ಒಂದು. ಸುಮಾರು ಐವತ್ತು ಅಡಿಗಳಷ್ಟು
ಎತ್ತರ ಬೆಳೆಯುವ, ಬಿಳಿ ಬಣ್ಣದ ತೊಗಟೆ ಹೊಂದಿರುವ ಇವುಗಳ ಮೇಲೆ, ತಿಳಿಬೂದು / ಬಿಳಿ ಬಣ್ಣದ ‘ಲೈಕೆನ್’ ಎಂಬ ಶೈವಲ ಗಳು ಆಶ್ರಯ ಪಡೆದಿರುತ್ತವೆ.
ಅಲ್ಲಲ್ಲಿ ಕಪ್ಪು ಕಲೆಗಳಿರುವ, ಉಳಿದಂತೆ ಬೆಳ್ಳಗಿರುವ ತೊಗಟೆಯ ಈ ಮರಗಳು ನೋಡುಗರ ಕಣ್ಣಿಗೆ ಆಕರ್ಷಕವಾಗಿ ಕಾಣಿಸು ತ್ತವೆ. ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ‘ಪೆಪ್ಪರ್ಡ್ ಪತಂಗ’ (Peppered Moth) ಎಂಬ ಕೀಟವೂ ಅದೇ ತೊಗಟೆಯ ಮೇಲೆ ಕುಳಿತಿದ್ದರೂ, ನಮ್ಮ ಕಣ್ಣುಗಳು ಅವುಗಳನ್ನು ತಕ್ಷಣಕ್ಕೆ ಗುರುತಿಸಲು ವಿಫಲವಾಗುತ್ತವೆ. ಏಕೆಂದರೆ, ಈ ಪತಂಗಗಳ ರೆಕ್ಕೆಗಳೂ ಬೆಳ್ಳಗಿದ್ದು, ಮೇಲೆ ಕಪ್ಪು ಚುಕ್ಕಿಗಳ ಚಿತ್ತಾರ ಇರುತ್ತದೆ. ಬಿಳಿಯ ಹಿನ್ನೆಲೆಯ ಮೇಲೆ ಕಾಳುಮೆಣಸಿನ ಪುಡಿ (Pepper) ಚೆಲ್ಲಿದಂತೆ ಕಾಣುವುದರಿಂದ, ಈ ಕೀಟಗಳಿಗೆ ಆ ಹೆಸರು. ಇಂದು ವಿಷಯವನ್ನು ಸ್ಪಷ್ಟಪಡಿಸಬೇಕು.
ನಮ್ಮ ಭಾಷೆಯನ್ನು ಸಾಮಾನ್ಯ ಸಂದರ್ಭಗಳಲ್ಲಿ ಬಳಸುವಾಗ, ‘ಚಿಟ್ಟೆ’ ಮತ್ತು ‘ಪತಂಗ’ ಎಂಬ ಪದಗಳನ್ನು ಸಮಾನಾರ್ಥಕ ಗಳಂತೆ ಉಪಯೋಗಿಸುತ್ತೇವೆ. ಆದರೆ ವಿಜ್ಞಾನದ ವಿವರಣೆ ನೀಡುವಾಗ, ‘ಚಿಟ್ಟೆ’ಯನ್ನು ‘Butterfly’’ ಎನ್ನುವುದಕ್ಕೂ, ‘ಪತಂಗ’ವನ್ನು ‘Moth’ ಎನ್ನುವುದಕ್ಕೂ ಬಳಸುತ್ತೇವೆ. ಚಿಟ್ಟೆಗೂ, ಪತಂಗಕ್ಕೂ ಹಲವು ವ್ಯತ್ಯಾಸಗಳಿವೆ. ಚಿಟ್ಟೆ ಹಗಲು ಹೊತ್ತಿ ನಲ್ಲಿ ಸಂಚರಿಸುವ ಜೀವಿಯಾದರೆ, ಪತಂಗ ನಿಶಾಚರಿ. ಚಿಟ್ಟೆ ಎದರೂ ಕುಳಿತುಕೊಳ್ಳುವಾಗ, ರೆಕ್ಕೆಗಳನ್ನು ಮೇಲ್ಮುಖವಾಗಿ ಮಡಚಿ ಕುಳಿತರೆ, ಪತಂಗ ಕುಳಿತುಕೊಳ್ಳುವಾಗ, ರೆಕ್ಕೆಯನ್ನು ಹರಡಿಕೊಂಡು ಕುಳಿತುಕೊಳ್ಳುತ್ತದೆ.
ಪೆಪ್ಪರ್ಡ್ ಪತಂಗಗಳಿಗೆ ಪ್ರಕೃತಿ ದಯಪಾಲಿಸಿರುವ ವರದಾನಗಳು ಏನೆಂದು ನಿಮ್ಮ ಮನಸ್ಸಿನಲ್ಲಿ ಹೊಳೆದಿರಬಹುದು. ಹೌದು, ನೀವು ಯೋಚಿಸುತ್ತಿರುವುದು ಸರಿಯಾಗಿದೆ. ಪೆಪ್ಪರ್ಡ್ ಪತಂಗಗಳು ನಿಶಾಚರಿಗಳಾಗಿರುವುದರಿಂದ, ರಾತ್ರಿಯೆಲ್ಲ ಸಂಚರಿಸಿ, ಹಗಲು ಹೊತ್ತಿನಲ್ಲಿ ಮಲಗುವ ಸಲುವಾಗಿ, ಬರ್ಚ್ ಮರಗಳ ಕಾಂಡವನ್ನು ಆಶ್ರಯಿಸುತ್ತವೆ. ಅವುಗಳ ಮೈಮೇಲಿನ ಚಿತ್ತಾರ (Camouflage) ಮರದ ತೊಗಟೆಯ ಹಿನ್ನೆಲೆಯಲ್ಲಿ ಮರೆಯಾಗಲು ಸಹಾಯ ಮಾಡುತ್ತದೆ.
ಹೀಗಾಗಿ, ಹುಳಹುಪ್ಪಟೆ ಗಳನ್ನು ಆಹಾರವಾಗಿರಿಸಿಕೊಂಡಿರುವ ಹಕ್ಕಿಗಳ ದೃಷ್ಟಿಗೆ ಅಗೋಚರವಾಗಿ ಉಳಿದುಕೊಂಡು, ಈ ಪತಂಗಗಳು ಜೀವ ಉಳಿಸಿಕೊಳ್ಳುತ್ತವೆ. ಆದರೆ ಇಲ್ಲಿ ಮತ್ತೂ ಒಂದು ಕೌತುಕದ ಸಂಗತಿಯಿದೆ. ಎಲ್ಲ ಪೆಪ್ಪರ್ಡ್ ಪತಂಗಗಳೂ ಕಪ್ಪು ಚುಕ್ಕಿಗಳಿಂದ ಕೂಡಿದ ಬಿಳಿಯ ಮೈಬಣ್ಣದ್ದಾಗಿರುವುದಿಲ್ಲ. ಕೆಲವು ಪತಂಗಗಳು, ಸಂಪೂರ್ಣ ಕಪ್ಪಗಿದ್ದು, ರೆಕ್ಕೆಗಳ ಮೇಲೆ ಬೂದು ಬಣ್ಣದ ಚುಕ್ಕಿಗಳನ್ನು ಹೊಂದಿರುತ್ತವೆ.
ಇವುಗಳ ಜೀವನ ಎಷ್ಟು ದುಸ್ತರ ನೋಡಿ; ಉಳಿದ ಪತಂಗಗಳಂತೆ ಇವುಗಳಿಗೆ ಬರ್ಚ್ ಮರದ ಆಶ್ರಯ ಸಿಕ್ಕರೂ, ಬಿಳಿಯ ತೊಗಟೆಯ ಮೇಲೆ ಎದ್ದು ಕಾಣುವುದರಿಂದ, ಹಕ್ಕಿಗಳ ಪಾಲಿಗೆ ಸುಲಭದ ತುತ್ತಾಗುತ್ತವೆ. ಹೀಗಾಗಿ, ಪೆಪ್ಪರ್ಡ್ ಪತಂಗಗಳ ಒಟ್ಟೂ ಜನಸಂಖ್ಯೆಯಲ್ಲಿ, ಬಿಳಿಯ ಪತಂಗಗಳದ್ದೇ ಸಿಂಹಪಾಲು. ಕಪ್ಪಗಿನ ಪತಂಗಗಳು ಅಲ್ಪಸಂಖ್ಯಾತರು. ಆದರೆ ಈ ಕಪ್ಪು ಪತಂಗ ಗಳಿಗೆ ಶಾಪವೇ ವರವಾದ ವಿದ್ಯಮಾನ ಹತ್ತೊಂಬತ್ತನೆಯ ಶತಮಾನದಲ್ಲಿ ನಡೆಯಿತು. ಅದು ಪಾಶ್ಚಾತ್ಯ ದೇಶಗಳಲ್ಲಿ ಔದ್ಯಮಿಕ ಕ್ರಾಂತಿ ನಡೆದ ಕಾಲಮಾನ. ಭಾರತದಂಥ ಸಂಪದ್ಭರಿತ ದೇಶವನ್ನು ವಸಾಹತುಶಾಹಿ ಕಪಿಮುಷ್ಟಿಗೆ ತೆಗೆದುಕೊಂಡಿದ್ದ ಇಂಗ್ಲೆಂಡ್, ತನ್ನ ದೇಶದ ನೆಲದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ಕೊಡುತ್ತಿತ್ತು.
ಕಚ್ಚಾವಸ್ತುಗಳ ಪೂರೈಕೆಗೆ ಹೇಗಿದ್ದರೂ ಉಪಖಂಡವೇ ಇತ್ತಲ್ಲ! ಹೀಗೆ ಸ್ಥಾಪನೆಯಾದ ಕಾರ್ಖಾನೆಗಳು, ಪರಸ್ಪರ ಪೈಪೋಟಿಗೆ ಇಳಿದವರಂತೆ ಹೊಗೆಯುಗುಳುತ್ತಿದ್ದವು. ಈ ಹೊಗೆ, ಬರ್ಚ್ ವೃಕ್ಷಗಳ ಮೇಲೆ ಬೆಳೆದಿದ್ದ ಲೈಕೆನ್ ಗಳನ್ನು ಕೊಲ್ಲುವುದಷ್ಟೇ ಅಲ್ಲ, ಇಡೀ ತೊಗಟೆಯನ್ನೇ ಕಪ್ಪಾಗಿಸಿಬಿಡುತ್ತಿತ್ತು!ಬದಲಾದ ಪ್ರಕೃತಿಯ ಸನ್ನಿವೇಶ, ಕಪ್ಪು ಪತಂಗಗಳಿಗೆ ಅನುಕೂಲಕರವಾಗಿ ವರ್ತಿಸಿತು. ಅಷ್ಟು ದಿನವೂ, ಅಡಗಲು ಒzಡಿ ಹಕ್ಕಿಗಳ ಕೊಕ್ಕಿಗೆ ಸಿಲುಕುತ್ತಿದ್ದ ಕಪ್ಪು ಪೆಪ್ಪರ್ಡ್ ಪತಂಗಗಳು, ಈಗ ಹಕ್ಕಿಗಳ ಕಣ್ಣಿಗೆ ಸುಲಭಕ್ಕೆ ಬೀಳುತ್ತಿರಲಿಲ್ಲ.
ಬಿಳಿಯ ಪೆಪ್ಪರ್ಡ್ ಪತಂಗಗಳು ಮರಗಳ ತೊಗಟೆಗಳ ಹಿನ್ನೆಲೆಯಲ್ಲಿ ಎದ್ದು ಕಾಣುತ್ತಿದ್ದವು! ಹೀಗಾಗಿ, ದಶಕಗಳಲ್ಲಿ ಇಂಗ್ಲೆಂಡಿನ ತುಂಬ ಕಪ್ಪು ಪತಂಗಗಳೇ ತುಂಬಿಹೋದವು. ಬಿಳಿ ಪತಂಗಗಳನ್ನು ಹುಡುಕುವ ಪರಿಸ್ಥಿತಿ ಎದುರಾಯಿತು. ತಮಾಷೆ ಎಂದರೆ, ವಿಕಸನವಾದದ ಪ್ರವಕ್ತಾರನಾದ ನಿಸರ್ಗದ ಆಯ್ಕೆಯನ್ನು ನಿರೂಪಿಸಿದ ಡಾರ್ವಿನ್, ತನ್ನದೇ ದೇಶದಲ್ಲಿ ತನ್ನದೇ ಜೀವಿತಾವಧಿ ಯಲ್ಲಿ ಕಂಡುಬಂದ ಈ ಘಟನೆಯನ್ನು ತನ್ನ ಕೃತಿಗಳಲ್ಲಿ ಉದಾಹರಿಸಿಲ್ಲ!