ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ರಾಜಕೀಯ ನಿಂತ ನೀರಲ್ಲ. ಇಲ್ಲಿ ನಿತ್ಯ ಹೋರಾಟ ಅಗತ್ಯ ಮತ್ತು ಅನಿವಾರ್ಯ. ‘ನಾಯಕ’ ಎಂದು ಗುರುತಿಸಿಕೊಳ್ಳುವುದು
ಎಷ್ಟು ಸುಲಭವೋ ಅದನ್ನು ಉಳಿಸಿ, ಬೆಳೆಸುವುದು ಬಹು ಕಷ್ಟ. ಒಂದು ಕೆಟ್ಟ ಚುನಾವಣೆ ಎಂತಹ ನಾಯಕನನ್ನು ನೆಲಕ್ಕೆ
ಬೀಳಿಸುವ ಶಕ್ತಿಯಿರುತ್ತದೆ. ಇದೀಗ ಇದೇ ರೀತಿಯ ಮತ್ತೊಂದು ಉಪಚುನಾವಣೆ ರಾಜ್ಯದಲ್ಲಿ ಎದುರಾಗಿದ್ದು, ಇಂದು (ಮಂಗಳವಾರ) ಇದಕ್ಕೆ ಮತದಾನ ನಡೆಯಲಿದೆ.
ಈ ಉಪಚುನಾವಣೆಯ ಫಲಿತಾಂಶವನ್ನು ಅಭ್ಯರ್ಥಿಗಿಂತ ಹೆಚ್ಚು ಪಕ್ಷದ ನಾಯಕರು ಕಾಯುತ್ತಿದ್ದಾರೆ. ಹೌದು, ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಹೋಗುವುದಕ್ಕೆ ಹಾಗೂ ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಯಾಗುವುದಕ್ಕೆ ಬುನಾದಿಯಂತಿದ್ದ ಕ್ಷೇತ್ರದಲ್ಲಿ ಒಂದಾದ ಆರ್.ಆರ್ ನಗರಕ್ಕೆ ಇದೀಗ ಉಪಚುನಾವಣೆ ಎದುರಾಗಿದೆ. ಇದರೊಂದಿಗೆ ಜೆಡಿಎಸ್
ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಖಾಲಿಯಾಗಿರುವ ಶಿರಾ ಕ್ಷೇತ್ರದಲ್ಲಿಯೂ ಚುನಾವಣೆ ನಡೆಯುತ್ತಿದೆ. ಈ ಎರಡು ಕ್ಷೇತ್ರದಲ್ಲಿ ಕಳೆದ ೨೨ ದಿನದಿಂದ ರಾಜಕೀಯ ರಂಗ ಭಾರಿ ಜೋರಾಗಿ, ಇದೀಗ ಮತದಾನದ ಹಂತಕ್ಕೆ ಬಂದು ನಿಂತಿದೆ. ಈ ಉಪಚುನಾವಣೆ ಶುರುವಾದಾಗಿನಿಂದ ಸೂಕ್ಷ್ಮವಾಗಿ ನೋಡುವುದಾದರೆ, ಚುನಾವಣಾ ಪ್ರಚಾರ ಆರಂಭಗೊಂಡ ದಿನದಿಂದ ಅಂತಿಮ ದಿನದವರೆಗೆ ಅಭ್ಯರ್ಥಿಗಿಂತ ಪಕ್ಷ ಹಾಗೂ ಪಕ್ಷದ ನಾಯಕರೇ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ರಾಜರಾಜೇಶ್ವರಿ
ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಹೊರತುಪಡಿಸಿದರೆ, ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಅಥವಾ ಕುಸುಮಾ ಅವರಾಗಲಿ, ಜೆಡಿಎಸ್‌ನ ಅಮ್ಮಾಜಮ್ಮ ಅಥವಾ ಕೃಷ್ಣಮೂರ್ತಿ ಅವರಾಗಲಿ ಮುನ್ನೆಲೆಗೆ ಬರಲೇಇಲ್ಲ.
ಇನ್ನು ಶಿರಾದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ಪಕ್ಷದ ಅಭ್ಯರ್ಥಿಯಾಗಿ ಎನ್ನುವುದಕ್ಕಿಂತ ಕಾರ್ಯಕರ್ತರ ರೀತಿ ಕಾಣಿಸಿಕೊಂಡಿದ್ದರು. ರಾಜ್ಯದಲ್ಲಿ ಮೂರು ಪಕ್ಷಗಳಿಗೆ ತಮ್ಮದೇಯಾದ ರಾಜಕೀಯ ಲಾಭ – ನಷ್ಟ ಲೆಕ್ಕಾಚಾರದಲ್ಲಿ ಇರುವ ಈ
ಚುನಾವಣೆಯಲ್ಲಿ ಅಭ್ಯರ್ಥಿ, ಪಕ್ಷಕ್ಕಿಂತ ಹೆಚ್ಚಾಗಿ ಕೆಲವೇ ಕೆಲವು ನಾಯಕರಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡುವುದಕ್ಕೆ ಸಿಕ್ಕಿರುವ ಅವಕಾಶವಾಗಿದೆ. ಉಪಚುನಾವಣೆಯಲ್ಲಿ ಮೂರು ಪಕ್ಷದಲ್ಲಿ ನೂರಾರು ಲಾಭ – ನಷ್ಟಗಳಿವೆ ಎನ್ನುವುದನ್ನು ಒಪ್ಪಲೇಬೇಕು. ಈ ಮೂರು ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಹಾಕುವುದಷ್ಟೇ ಅಲ್ಲದೇ, ಯಾರು ಗೆದ್ದರೆ ಯಾವ ನಾಯಕರಿಗೆ ಮುನ್ನಡೆ, ಹಿನ್ನಡೆ
ಎನ್ನುವುದು ಅಡಗಿದೆ. ಹಾಗೇ ನೋಡಿದರೆ, ಮೂರು ಪಕ್ಷದ ನಾಯಕರು ಆರ್.ಆರ್. ನಗರ ಚುನಾವಣೆಯನ್ನು ಮಾತ್ರ
ಎದುರು ನೋಡುತ್ತಿದ್ದರು.
ಮುನಿರತ್ನ ಅವರಿಂದ ಖಾಲಿಯಾಗಿದ್ದ ಕ್ಷೇತ್ರವನ್ನು ಯಾರು ಗೆಲ್ಲುತ್ತಾರೆ ಎನ್ನುವುದು ಕಳೆದೊಂದು ವರ್ಷದಿಂದ ಕುತೂಹಲ ಮೂಡಿಸಿದ್ದ ಪ್ರಶ್ನೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಮುನಿರತ್ನ ಅವರು ಕ್ಷೇತ್ರದಲ್ಲಿ ತಮಗಿರುವ ಹಿಡಿತ ತೋರಿಸುವುದು
ಒಂದೆಡೆಯಾದರೆ, ಆಡಳಿತರೂಢ ಪಕ್ಷ ಬಿಜೆಪಿಗೆ ಈ ಚುನಾವಣೆಯಲ್ಲಿ ಸೋತರೆ ಭವಿಷ್ಯದಲ್ಲಿ ಆಪರೇಷನ್ ಕಮಲದಂಥ ‘ರಿಸ್ಕ್’ ತಗೆದುಕೊಳ್ಳಲು ಯಾರು ಮುಂದೆ ಬರುವುದಿಲ್ಲ ಎನ್ನುವ ಸ್ಪಷ್ಟತೆ ಬಿಜೆಪಿಗೆ ಇತ್ತು. ಆದ್ದರಿಂದ ಈ ಕ್ಷೇತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಕ್ಷ್ಮವಾಗಿ ನಿಭಾಯಿಸಿದರು.
ಮುನಿರತ್ನ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ರಾಜೀನಾಮೆ ನೀಡುವ ಮೊದಲೇ ಒಪ್ಪಂದವಾಗಿದ್ದರೂ, ಮೂಲ ಬಿಜೆಪಿಯ ತುಳಸಿ ಮುನಿರಾಜು ಗೌಡ ಇದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಕಲ್ಲು ಹಾಕಲು ಪ್ರಯತ್ನಿಸಿದರು. ಒಂದು ಹಂತಕ್ಕೆ ಇದು
ಯಶಸ್ವಿಯಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮೆಲ್ಲ ರಾಜಕೀಯ ಒತ್ತಡವೇರಿ ಟಿಕೆಟ್ ಕೊಡಿಸಿದ್ದಾರೆ. ಆದ್ದರಿಂದ ಇದೀಗ ಮುನಿರತ್ನ ಅವರ ಸೋಲು – ಗೆಲುವಿನ ಮೇಲೆ ಯಡಿಯೂರಪ್ಪ ಅವರ ಪ್ರತಿಷ್ಠೆ ಅಡಗಿದೆ. ರಾಜರಾಜೇಶ್ವರಿ ನಗರದಲ್ಲಿ ‘ಕಳೆದುಕೊಂಡಿರುವಲ್ಲಿಯೇ ಹುಡುಕಬೇಕು’ ಎನ್ನುವ ಸ್ಥಿತಿಯಲ್ಲಿರುವ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಯನ್ನು ಹಾಕಿತು ಎಂದರೆ ತಪ್ಪಾಗುವುದಿಲ್ಲ. ಆರಂಭದಲ್ಲಿ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು
ಸುದ್ದಿ ತೇಲಿಬಂದಿತ್ತು.
ಆದರೆ ಆಫ್ ದಿ ರೆಕಾರ್ಡ್ ಹೇಳುವುದಾದರೆ, ಕಳೆದ ಆರು ತಿಂಗಳಿನಿಂದ ಈ ಬಾರಿ ಆರ್.ಆರ್ ನಗರಕ್ಕೆ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎನ್ನುವ ಆಲೋಚನೆ ಕೈನಲ್ಲಿತ್ತು ಎನ್ನುವುದನ್ನು ಅನೇಕ ನಾಯಕರು ಒಪ್ಪಿಕೊಂಡಿದ್ದಾರೆ. ಮಹಿಳಾ
ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಮೂಡಿದಾಗ ಅನೇಕರ ಹೆಸರು ಮುನ್ನೆಲೆಗೆ ಬಂದಿವೆ. ಆದರೆ ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಹಠಕ್ಕೆ ಬಿದ್ದು ಕುಸುಮಾ ಅವರನ್ನು ಕಣಕ್ಕೆ ಇಳಿಸಿದ್ದರು.
ಮುನಿರತ್ನ ವಿರುದ್ಧ ಮಹಿಳೆಯನ್ನು ಕಣಕ್ಕೆ ಇಳಿಸಿ ಕ್ಷೇತ್ರದಲ್ಲಿರುವ ೨,೨೦,೨೬೧ ಮತಗಳಲ್ಲಿ ಕನಿಷ್ಠ ೫೦ರಷ್ಟು ಮತಗಳನ್ನು ಸೆಳೆಯುವ ಯೋಜನೆಯನ್ನು ರೂಪಿಸಿದ್ದರು. ಕುಸುಮಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದರೂ, ಇಡೀ ಕ್ಷೇತ್ರವನ್ನು ಹ್ಯಾಂಡಲ್
ಮಾಡಿದ್ದು ಮಾತ್ರ ಡಿ.ಕೆ. ಬ್ರದರ‍್ಸ್ ಎನ್ನುವುದನ್ನು ಮರೆಯುವಂತಿಲ್ಲ. ಕುಸುಮಾ ಅವರ ತಂದೆ ಹನುಮಂತರಾಯಪ್ಪ ರಾಜಕೀಯದಲ್ಲಿದ್ದರೂ, ಈ ಉಪಚುನಾವಣೆಯಲ್ಲಿ ಮಾತ್ರ ಡಿ.ಕೆ.ಸಹೋದರರೇ ಅಭ್ಯರ್ಥಿಯನ್ನು ಲೀಡ್ ಮಾಡಿದ್ದರು.
ಇದೇ ರೀತಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೃಷ್ಣಮೂರ್ತಿ ಅವರಿಗಿಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ ರಾಜೇಶ್ವರಿ ನಗರದಲ್ಲಿ ಗೆಲ್ಲುವುದಕ್ಕೆ ಹೆಚ್ಚು ಶ್ರಮಿಸಿದ್ದಾರೆ.
ಕೃಷ್ಣಮೂರ್ತಿ ಅವರ ಬದಲು ಜೆಡಿಎಸ್ ನಿಂದ ಹಲವು ಆಕಾಂಕ್ಷಿಗಳಿದ್ದರೂ ಅವರಿಗೆ ‘ನಿಷ್ಠಾವಂತ ಕಾರ್ಯಕರ್ತ’ ಎನ್ನುವ ಕಾರಣಕ್ಕೆ ಟಿಕೆಟ್ ನೀಡಿದ್ದ ಕುಮಾರಸ್ವಾಮಿ ಅವರು ಒಕ್ಕಲಿಗ ಮತಗಳು ಚದುರದಂತೆ ನೋಡಿಕೊಳ್ಳಲು ಶ್ರಮಿಸಿದ್ದಾರೆ.
ರಾಜರಾಜೇಶ್ವರಿ ನಗರದ ಟಿಕೆಟ್ ಹಂಚಿಕೆ ಪ್ರಕ್ರಿಯೆ ಇದಾದರೆ, ಶಿರಾದಲ್ಲಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿಯೂ ಒಂದೊಂದು ಪಕ್ಷದ ಅಭ್ಯರ್ಥಿಯ ಹಿಂದೆ ಒಬ್ಬ ಪ್ರಭಾವಿ ನಾಯಕರು ನಿಂತು ಇಡೀ ಪ್ರಕ್ರಿಯೆಯನ್ನು ‘ಡ್ರೈವ್ ’ ಮಾಡುತ್ತಿದ್ದಾರೆ. ಹಾಗೇ ನೋಡಿದರೆ ಜೆಡಿಎಸ್ ವರಿಷ್ಠ ದೇವೇಗೌಡರು ಇತ್ತೀಚಿಗೆ ಹಲವು ಚುನಾವಣೆಯಲ್ಲಿ ತಾವೇ ಜವಾಬ್ದಾರಿ ಹೊತ್ತು ನಿಂತದ್ದು ತೀರಾ ಕಡಿಮೆ. ಆದರೆ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕೆ ಇಳಿಸಿದ ದೇವೇಗೌಡರು, ಸ್ವತಃ ತಾನೇ ಶಿರಾದಲ್ಲಿ
ಕೂತು ಚುನಾವಣಾ ಪ್ರಚಾರ ನಡೆಸಿದ್ದಾರೆ.
ದೇವೇಗೌಡರು ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಬೇಕೆಂದು ಈ ರೀತಿ ಪಟ್ಟು ಹಿಡಿದು ಕೂತದ್ದು ತೀರಾ ಅಪರೂಪ.
ಜೆಡಿಎಸ್ ಭದ್ರ ಕೋಟೆಯಾಗಿರುವ ಶಿರಾವನ್ನು ಉಳಿಸಿಕೊಳ್ಳಲು ದೇವೇಗೌಡರು ಇಷ್ಟು ಶ್ರಮಿಸಿದರೆ, ಕಾಣಿಸಿಕೊಂಡಿರುವ ಒಡಕಿನಲ್ಲಿ ಕಮಲ ಅರಳಿಸಲು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಹೆಗಲಿಗೆ ಈ ಕ್ಷೇತ್ರವನ್ನು ಬಿಜೆಪಿ ನಾಯಕರು ನೀಡಿದರು. ಈ ಹಿಂದೆ ಕೆ. ಆರ್. ಪೇಟೆಯನ್ನು ಗೆಲ್ಲಿಸಿಕೊಂಡ ರೀತಿಯಲ್ಲಿಯೇ ಇದನ್ನು ಗೆಲ್ಲಿಸಿಕೊಂಡು ವಿಜಯೇಂದ್ರ ಗೆಲ್ಲಿಸಿಕೊಂಡು ಬರಲಿದ್ದಾರೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿಗರಿದ್ದಾರೆ.
ಬಿಜೆಪಿ, ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ರಾಜಕೀಯವಾಗಿ ಅಷ್ಟೇನು ಪರಿಚಿತರಿರಲಿಲ್ಲ. ಆದರೆ ಕಾಂಗ್ರೆಸ್‌ನಿಂದ ಕಣಕ್ಕೆ
ಇಳಿದ ಟಿ.ಬಿ. ಜಯಚಂದ್ರ ಅವರು ರಾಜಕೀಯವಾಗಿ ಬಲಾಢ್ಯರಾಗಿದ್ದರೂ, ಈ ಬಾರಿ ಮಾತ್ರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರನ್ನು ಗೆಲ್ಲಿಸಿಕೊಂಡು ಬರಲು ಹೆಚ್ಚು ತಲೆಕೆಡಿಸಿಕೊಂಡಿದ್ದರು.
ಈ ರೀತಿ ಎರಡು ಕ್ಷೇತ್ರದಲ್ಲಿಯೂ ಮೂರು ಪಕ್ಷದ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಹೆಚ್ಚು ತಲೆಕೆಡಿಸಿಕೊಂಡಿದ್ದರು. ಅದರಲ್ಲಿ ಮುನಿರತ್ನ ಹಾಗೂ ಟಿ.ಬಿ. ಜಯಚಂದ್ರ ಅವರನ್ನು ಹೊರತುಪಡಿಸಿ, ಇನ್ನುಳಿದ ಎಲ್ಲರೂ ರಾಜಕೀಯವಾಗಿ ಅಷ್ಟೇನು ಗುರುತಿಸಿಕೊಂಡ ಮುಖಗಳಲ್ಲ. ಆದ್ದರಿಂದ ಅವರ ಬ್ಯಾಟ್ ಮಾಡಿ ಟಿಕೆಟ್ ಕೊಡಿಸಿದ ನಾಯಕರೇ ಅವರನ್ನು ಗೆಲ್ಲಿಸಿಕೊಂಡು
ಬರಬೇಕಾದ ಸ್ಥಿತಿಯಿತ್ತು. ಈ ರೀತಿ ಒಬ್ಬೊಬ್ಬ ನಾಯಕರು ಒಬ್ಬರ ಅಭ್ಯರ್ಥಿ ಪರ ಭಾರಿ ಪ್ರಚಾರ ನಡೆಸುತ್ತಿರುವ ಹಿಂದೆ ಅಭ್ಯರ್ಥಿ ಗೆಲ್ಲುವ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ, ತಮ್ಮ ಸ್ವಪ್ರತಿಷ್ಠೆ ಮುಖ್ಯವಾಗಿದೆ.
ಇದೀಗ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವು – ಸೋಲಿನ ಮೇಲೆ ಈ ನಾಯಕರ ರಾಜಕೀಯ ಹಿಡಿತ ಹಾಗೂ ಭವಿಷ್ಯ ನಿರ್ಧಾರ ವಾಗಲಿದೆ. ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಎದುರಾಗುತ್ತಿರುವ ಮೊದಲ ಚುನಾವಣೆ ಇದಾಗಿದೆ. ಕೆಪಿಸಿಸಿ ಅಧ್ಯಕ್ಷ ಗಾದಿ ಸಿಕ್ಕ ಬಳಿಕ ಪಕ್ಷವನ್ನು ಸಂಘಟಿಸಿ, ರಾಜ್ಯದಲ್ಲಿ ಮತ್ತೊಮ್ಮೆ ‘ಕಾಂಗ್ರೆಸ್ ಯುಗ’ ಸ್ಥಾಪಿಸುವ ವಿಶ್ವಾಸದಲ್ಲಿರುವ ಡಿ.ಕೆ.ಶಿ ಅವರಿಗೆ ಈ ಚುನಾವಣಾ ಫಲಿತಾಂಶ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ಅದರಲ್ಲಿಯೂ
ಶೇ.೫೦ಕ್ಕಿಂತ ಹೆಚ್ಚು ಒಕ್ಕಲಿಗ ಸಮುದಾಯದವರೇ ಇರುವ ರಾಜರಾಜೇಶ್ವರಿ ನಗರದಲ್ಲಿ ಗೆಲ್ಲಿಸಿಕೊಂಡು ಬರುವಲ್ಲಿ ಎಡವಿದರೆ, ಎದುರಿಸಿದ ಮೊದಲ ಕದನದಲ್ಲಿಯೇ ಹಿನ್ನಡೆಯಾಗುತ್ತದೆ. ಆದ್ದರಿಂದ ಮುನಿರತ್ನ ವಿರುದ್ಧ ಗೆಲ್ಲುವುದು ಸುಲಭದ ಮಾತಲ್ಲ ಎನ್ನುವುದು ತಿಳಿದಿದ್ದರೂ, ಈ ಸಾಹಸಕ್ಕೆ ಕೈಹಾಕಿದ್ದಾರೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಚಾರವನ್ನು ನೋಡುವುದಾದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ರಾಜ್ಯ ಬಿಜೆಪಿಗೆ ಮುಂದಿನ ನಾಯಕನ್ಯಾರು? ಯಡಿಯೂರಪ್ಪ ಬಳಿಕ ಅವರ ಪುತ್ರ ಈ ಸ್ಥಾನವನ್ನು ತುಂಬಬಹುದೇ ಎಂಬೆಲ್ಲ ಪ್ರಶ್ನೆಗಳು ಇರುವಾಗ ತಾವಿನ್ನು ‘ಮಾಸ್ ಲೀಡರ್’ ಎಂದು ತೋರಿಸಲು ಇದೊಂದು ಸುವರ್ಣಾವಕಾಶ. ಮುಖ್ಯಮಂತ್ರಿಯಾಗಿರುವುದರಿಂದ
ಯಡಿಯೂರಪ್ಪ ಅವರಿಗೆ ಉಪಚುನಾವಣೆಯಲ್ಲಿ ಸರಕಾರದ ‘ಎಲ್ಲ ಬಲವನ್ನು’ ಬಳಸಿಕೊಂಡಾದರೂ ಗೆಲ್ಲಬೇಕಾದ ಅನಿವಾರ್ಯತೆ ಇರುತ್ತದೆ. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ, ಪಕ್ಷದಲ್ಲಿಯೇ ಇರುವ ಕೆಲವು ವಿರೋಧಿಗಳು ಇದನ್ನೇ ಅಸ್ತ್ರವಾಗಿಸಿಕೊಂಡು ಯಡಿಯೂರಪ್ಪ ಅವರನ್ನು ಬದಲಾಯಿಸಿ ಎನ್ನುವ ಕೂಗನ್ನು ಪುನಃ ದೆಹಲಿಯಲ್ಲಿ ಶುರು ಮಾಡುವರಲ್ಲಿ ಅನುಮಾನವಿಲ್ಲ.
ಯಡಿಯೂರಪ್ಪ ನಂತರ ತಂದೆ ಸ್ಥಾನಕ್ಕೆ ಬರಲು ಈಗಲೇ ತಯಾರಿ ನಡೆಸಿಕೊಂಡಿರುವ ವಿಜಯೇಂದ್ರ ಅವರಿಗೆ ಕಳೆದ ಬಾರಿಯಂತೆಯೇ ಈ ಬಾರಿಯೂ ಕಠಿಣ ಪರೀಕ್ಷೆಯನ್ನೇ ನೀಡಲಾಗಿದೆ. ಕೆ.ಆರ್. ಪೇಟೆಯ ರೀತಿಯಲ್ಲಿಯೇ, ಶಿರಾದಲ್ಲಿಯೂ ಕಾಂಗ್ರೆಸ್ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿದೆ. ಇದರೊಂದಿಗೆ ಈ ಬಾರಿ ಶಿರಾದಲ್ಲಿ ಅನುಕಂಪದ ಅಲೆಯಿದ್ದು, ಇದು ಜೆಡಿಎಸ್‌ಗೆ ಇನ್ನಷ್ಟು ಶಕ್ತಿ ನೀಡುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಈ ಸಂಕಷ್ಟದ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದರೆ, ಮತ್ತೊಮ್ಮೆ ವರಿಷ್ಠರ ಕಣ್ಣಿಗೆ ವಿಜಯೇಂದ್ರ ಮಾಸ್ಟರ್ ಪ್ಲಾನರ್ ಆಗಿ ಕಾಣುತ್ತಾರೆ. ಒಂದು ವೇಳೆ ವಿಫಲರಾದರೆ, ಪಕ್ಷದಲ್ಲಿ ಅವರ
ತಂದೆಯ ವರ್ಚಸ್ಸಿಗೆ ಹೊಡೆತ ಬಿದ್ದ ರೀತಿಯಲ್ಲಿಯೇ ಇವರಿಗೂ ಬೀಳುತ್ತದೆ.
ರಾಷ್ಟ್ರೀಯ ಪಕ್ಷಗಳ ನಾಯಕರ ಸಮಸ್ಯೆ ಇದಾದರೆ ಜೆಡಿಎಸ್‌ಗೆ ಈ ಉಪಚುನಾವಣೆ ಅಳಿವು – ಉಳಿವಿನ ಪ್ರಶ್ನೆಯಾಗಿದೆ. ಆರ್.ಆರ್ ನಗರದಲ್ಲಿ ಈಗಾಗಲೇ ಗೆಲುವಿನಿಂದ ದೂರ ನಿಂತಿರುವ ಜೆಡಿಎಸ್, ಶಿರಾದಲ್ಲಿ ಅನುಕಂಪದ ಆಧಾರದಲ್ಲಿಯಾದರೂ ಗೆದ್ದುಕೊಂಡು ಬರಬೇಕು ಎನ್ನುವ ಯೋಚನೆಯಲ್ಲಿದೆ. ಒಂದು ವೇಳೆ ಶಿರಾದಲ್ಲಿ ಈ ಅವಕಾಶವನ್ನುಕಳೆದುಕೊಂಡರೆ, ಜೆಡಿಎಸ್‌ಗೆ ಇರುವ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮತ್ತೊಂದು ಜಿಲ್ಲೆಯನ್ನು ಕಳೆದುಕೊಂಡ ರೀತಿಯಾಗುತ್ತದೆ. ಈಗಾಗಲೇ ಕೆ.ಆರ್.
ಪೇಟೆಯಲ್ಲಿ ಬಿಜೆಪಿ ಗೆಲ್ಲಿಸಿಕೊಂಡ ಬಳಿಕ ಮಂಡ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದೇ ರೀತಿ ತುಮಕೂರಿನಲ್ಲಿಯೂ ಜೆಡಿಎಸ್ ಕೋಟೆಯಲ್ಲಿ ಬಿರುಕು ಕಾಣಿಸಿಕೊಳ್ಳುವ ಆತಂಕದಲ್ಲಿ ಜೆಡಿಎಸ್‌ಯಿದೆ. ಆದ್ದರಿಂದಲೇ ಸ್ವತಃ ದೇವೇಗೌಡರು ಶಿರಾದಲ್ಲಿ ಬೀಡುಬಿಟ್ಟಿದ್ದಾರೆ. ಇಂದು ನಡೆಯಲಿರುವ ಮತದಾನದ ಫಲಿತಾಂಶ ಏನೇ
ಬಂದರೂ ಸರಕಾರ ಬದಲಾವಣೆ ಅಥವಾ ಉಳಿವು ಎನ್ನುವಂಥ ಯಾವುದೇ ರಾಜ್ಯಕೀಯ ಸ್ಥಿತ್ಯಂತರಗಳು ಆಗುವುದಿಲ್ಲ. ಆದರೆ ರಾಜಕೀಯ ನಾಯಕರ ಬಲಪ್ರದರ್ಶನ, ಭವಿಷ್ಯದಲ್ಲಿ ಯಾರ ನೇತೃತ್ವದಲ್ಲಿ ಪಕ್ಷ ಮುನ್ನಡೆಯಬೇಕು? ಮುಖ್ಯಮಂತ್ರಿ ಬದಲಾಗಬೇಕೇ? ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರು ಎಷ್ಟರ ಮಟ್ಟಿಗೆ ಪಕ್ಷ ಸಂಘಟಿಸಿದ್ದಾರೆ?
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೇಗಿದೆ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಆದ್ದರಿಂದ ಆರ್.ಆರ್. ನಗರ ಹಾಗೂ ಶಿರಾದಲ್ಲಿ ನಡೆಯುತ್ತಿರುವ ಈ ಉಪಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಿಗಿಂತ ಅವರ
ಬೆನ್ನಿಗೆ ನಿಂತಿರುವ ನಾಯಕರದ್ದು