ವರ್ತಮಾನ
maapala@gmail.com
ಬಿಗಿಯಾಗಿ ಮೂಗು ಹಿಡಿದರೆ ಸ್ವಲ್ಪ ಹೊತ್ತು ಉಸಿರಾಡದೇ ಇರಬಹುದು. ಆದರೆ, ಹೆಚ್ಚು ಹೊತ್ತು ಮೂಗು ಹಿಡಿದು, ಜತೆಗೆ ಬಾಯಿ ಮುಚ್ಚಿದರೆ ಎಷ್ಟು ಹೊತ್ತು ತಾನೇ ತಡೆದು ಕೊಳ್ಳಲು ಸಾಧ್ಯ? ಬದುಕಬೇಕಾದರೆ ಕೊಸರಿಕೊಂಡು ಪಾರಾಗಲೇ ಬೇಕಾಗುತ್ತದೆ. ರಾಜ್ಯ ಬಿಜೆಪಿ ಪರಿಸ್ಥಿತಿ ಆ ಹಂತಕ್ಕೆ ತಲುಪುವ ವೇಳೆ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ.
ಒಂದು ಕಡೆ ಆಪರೇಷನ್ ಹಸ್ತದ ಆತಂಕ. ಇನ್ನೊಂದು ಕಡೆ ಪಕ್ಷದೊಳಗೇ ತಮ್ಮನ್ನು ಕೇಳುವವರಿಲ್ಲ ಎಂಬ ಕೊರಗು. ಇನ್ನೊಂದು ಕಡೆ ಯಾರು ಏನೇ
ಮಾತನಾಡಿದರೂ ಅದನ್ನು ತಪ್ಪು ಎನ್ನುವವರಿಲ್ಲದ, ಪ್ರಶ್ನಿಸಲು ಸಾಧ್ಯವಾಗದ ಅನಾಥ ಪರಿಸ್ಥಿತಿ. ಇದೆಲ್ಲದರ ನಡುವೆ ತಮ್ಮ ಅಸಮಾಧಾನವನ್ನು ಬಹಿರಂಗ ವಾಗಿ ಹೇಳುತ್ತ ಪಕ್ಷಕ್ಕೆ ಮುಜುಗರ ತರುತ್ತಿರುವ ಮುಖಂಡರು, ತಾವೇನೇ ಮಾತನಾಡಿದರೂ ನಡೆಯುತ್ತದೆ ಎನ್ನುವ ನಾಯಕರು… ಇದು ಸದ್ಯದ ರಾಜ್ಯ ಬಿಜೆಪಿಯ ಪರಿಸ್ಥಿತಿ.
ಒಂದು ಕಾಲದಲ್ಲಿ ಶಿಸ್ತಿಗೆ ಹೆಸರಾದ, ಅದರ ಮೂಲಕವೇ ಅಧಿಕಾರಕ್ಕೆ ಸಮೀಪ ಬಂದಿದ್ದ ಬಿಜೆಪಿ, ಅಧಿಕಾರ ಹಿಡಿಯಲು ಆ ಶಿಸ್ತು ಕೈಬಿಟ್ಟಿತು. ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬಲಾಢ್ಯರಲ್ಲದವರಿಗೆ ಮಾತ್ರ ಶಿಸ್ತು ಎಂಬಂತಾಯಿತು. ಅದರ ನಡುವೆಯೂ ಸ್ವಲ್ಪ ಮಟ್ಟಿನ ಶಿಸ್ತು, ಸಿದ್ಧಾಂತವನ್ನು ಇಟ್ಟುಕೊಂಡಿದ್ದ ಪಕ್ಷ ದಲ್ಲಿ ಇದೀಗ ಅವೆರಡೂ ಹುಡುಕಿದರೂ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮ ಪಕ್ಷಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕಾರ್ಯಕರ್ತರು ಈಗ ತಮಗೂ ಬಿಜೆಪಿಗೂ ಅಂತಹ ಸಂಬಂಧವೇ ಇಲ್ಲವೇನೋ ಎಂಬ ಡೋಲಾಯಮಾನ ಸ್ಥಿತಿಯಲ್ಲಿದ್ದರು.
ಇಷ್ಟಕ್ಕೆಲ್ಲ ಕಾರಣ ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಆದ ಹೀನಾಯ ಸೋಲು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬಿಜೆಪಿಯನ್ನು ಸೋಲಿ
ಸಿತು ಎಂಬುದಕ್ಕಿಂತ ಅದಕ್ಕೆ ಪಕ್ಷದ ರಾಜ್ಯ ನಾಯಕರ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ವಸ್ತುಸ್ಥಿತಿಯನ್ನು ಮರೆಮಾಚಿವರಿಷ್ಠರಿಗೆ ಸತ್ಯಕ್ಕೆ ದೂರವಾದ ಮಾಹಿತಿ ನೀಡುತ್ತ ಅವರನ್ನೂ ತಪ್ಪುದಾರಿಗೆಳೆದು, ಅಧಿಕಾರದಲ್ಲಿದ್ದಾಗ ಏನೆಲ್ಲ ನಡೆದಿದ್ದರೂ ಏನೂ ಆಗಿಲ್ಲ ಎಂಬಂತೆ ವರ್ತಿಸಿ ತಮ್ಮನ್ನು ತಾವೇ ಸೋಲಿಸಿಕೊಂಡರು. ದೇಶ ಮೊದಲು, ಪಕ್ಷ ನಂತರ, ಕೊನೆಗೆ ನಾವು ಎನ್ನುತ್ತಿದ್ದ ನಾಯಕರು ಎಲ್ಲಕ್ಕಿಂತ ನಾನೇ ಮೊದಲು ಎಂದು ವರ್ತಿಸಿ, ವೈಯಕ್ತಿಕ ಪ್ರತಿಷ್ಠೆಗೆ ಬಿದ್ದರು. ಇವೆಲ್ಲವೂ ಬಹಿರಂಗವಾದದ್ದು ಚುನಾವಣೆ ಫಲಿತಾಂಶ ಬಂದ
ನಂತರ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ.
ಅಧಿಕಾರ ಕಳೆದುಕೊಳ್ಳುವುದೂ ದೊಡ್ಡ ವಿಷಯವಲ್ಲ. ಆದರೆ, ಕರ್ನಾಟಕದಲ್ಲಿ ಸೋತ ರೀತಿ ಇದೆಯಲ್ಲಾ, ಅದುವೇ ಈಗ ಪಕ್ಷವನ್ನು ಈ ಹಂತಕ್ಕೆ
ತಂದು ನಿಲ್ಲಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಸೋಲಿನಿಂದ ನಿಜವಾಗಿಯೂ ಅವಮಾನಕ್ಕೊಳಗಾಗಿದ್ದು ಬಿಜೆಪಿ ವರಿಷ್ಠರು. ಪ್ರಧಾನಿ ನರೇಂದ್ರ
ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರ ದಂಡೇ ರಾಜ್ಯದಲ್ಲಿ ಮೊಕ್ಕಾಂ ಹೂಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿತು. ಉಳಿದವರ ವಿಚಾರ ಒತ್ತಟ್ಟಿಗಿರಲಿ, ಸ್ವತಃ ಪ್ರಧಾನಿ ಭೇಟಿ ನೀಡಿದ ಪ್ರದೇಶ ಗಳಲ್ಲೂ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ.
ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ೧೯ ಸಾರ್ವಜನಿಕ ಸಭೆ, ಆರು ಬೃಹತ್ ರೋಡ್‌ಶೋಗಳನ್ನು ನಡೆಸಿದ್ದರು. ಆದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದ್ದು, ೧೨ ಕ್ಷೇತ್ರಗಳಲ್ಲಿ ಸೋತಿತ್ತು. ಅದರಲ್ಲೂ ಬಹುತೇಕ ಕ್ಷೇತ್ರಗಳಲ್ಲಿ ಸೋಲಿನ ಅಂತರವೂ ಬಹಳ ಹೆಚ್ಚಾಗಿತ್ತು. ಕರ್ನಾಟಕದ ಈ ಸೋಲು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಮುಜುಗರ ತಂದಿತ್ತು. ಪ್ರಧಾನಿ ಹೋದಲ್ಲೆಲ್ಲಾ ಗೆಲುವು ಎನ್ನುತ್ತಿದ್ದ ಪಕ್ಷಕ್ಕೆ, ಪ್ರಧಾನಿ ಹೋದರೂ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಹಣೆಪಟ್ಟಿಯನ್ನು ತಂದುಕೊಡು ವಂತಾಯಿತು. ಪಕ್ಷದ ರಾಜ್ಯ ಘಟಕದ ಮೇಲೆ ಮುನಿಸಿಕೊಳ್ಳಲು ವರಿಷ್ಠರಿಗೆ ಇದಕ್ಕಿಂತ ದೊಡ್ಡ ಕಾರಣ ಬೇಕಾಗಿರಲಿಲ್ಲ.
ಇದರ ಪರಿಣಾಮ ಫಲಿತಾಂಶದ ನಂತರ ಕಂಡು ಬಂತು. ಆ ಮುನಿಸು ಇನ್ನೂ ತಣಿದಿಲ್ಲ ಎಂಬುದಕ್ಕೆ ಉದಾಹರಣೆ ವಿಧಾನಸಭೆ, ವಿಧಾನ ಪರಿಷತ್‌ಗಳಲ್ಲಿ ಪ್ರತಿಪಕ್ಷ ನಾಯಕರು ಮತ್ತು ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ಇದುವರೆಗೂ ನೇಮಿಸದಿರುವುದು. ಅದು ಒಂದೆಡೆಯಾದರೆ ಈ ಸೋಲಿನ ಮಧ್ಯೆಯೇ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾದರು. ಕರ್ನಾಟಕದ ಮೂಡಣ ಬಾಗಿಲು ಎಂದೇ ಹೇಳುವ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮನೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರವಾಸಕ್ಕೆ ಸಂಕಲ್ಪ ಕೈಗೊಂಡರು. ಆದರೂ ವಿಘ್ನ ನಿವಾರಣೆಯಾಗಲಿಲ್ಲ. ಇದಕ್ಕೆ ಕಾರಣ ವರಿಷ್ಠರ ಕಡೆಯಿಂದ ಪ್ರವಾಸಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಗದೇ ಇರುವುದು ಮತ್ತು ಪ್ರತಿಪಕ್ಷ ನಾಯಕರು, ರಾಜ್ಯಾಧ್ಯಕ್ಷರ ನೇಮಕ ಆಗದೇ ಇರುವುದು.
ಪ್ರಸ್ತುತ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಮುಂದುವರಿದಿದ್ದರಾದರೂ ಸಂಘಟನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮುಂದಿನ ಲೋಕಸಭೆ
ಚುನಾವಣೆಯಲ್ಲಿ ಅವರಿಗೆ ಟೀಕೆಟ್ ಸಿಗುವುದು ಅನುಮಾನವಿರುವುದರಿಂದ ಸಹಜವಾಗಿಯೇ ಅವರು ತಮ್ಮ ಪಾಡಿಗೆ ಕುಳಿತಿದ್ದಾರೆ. ಹೀಗಾಗಿ ಯಡಿ
ಯೂರಪ್ಪ ಅವರ ಪ್ರವಾಸವನ್ನು ಸಂಘಟಿಸಲು ಯಾರನ್ನು ಮುಂದೆ ಬಿಡಬೇಕು ಎಂಬ ಗೊಂದಲವಿತ್ತು.
ಇವೆಲ್ಲವೂ ವರಿಷ್ಠರಿಗೆ ಗೊತ್ತಿಲ್ಲದೇ ಇರುವ ವಿಚಾರವೇನೂ ಅಲ್ಲ. ಆದರೆ, ಅವರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಮೇಲೆತ್ತುವುದಕ್ಕಿಂತಲೂ
ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿ ಕೊಳ್ಳುವುದೇ ಮುಖ್ಯವಾದಂತೆ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿ ಏನೇ ಆದರೂ ತಲೆಕೆಡಿಸಿಕೊ
ಳ್ಳುತ್ತಿಲ್ಲ. ಬಹುತೇಕ ರಾಜ್ಯ ಘಟಕವನ್ನು ಮರೆತಂತೆ ಕಾಣುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಹೋದರೂ ಭೇಟಿಗೆ ಅವಕಾಶ ನೀಡದಷ್ಟು ಬ್ಯುಸಿ
ಎಂಬಂತೆ ವರ್ತಿಸುತ್ತಿದ್ದಾರೆ. ಹಾಗೆಂದು ತಮ್ಮ ಪಾಡಿಗೆ ನಾವು ರಾಜ್ಯದಲ್ಲಿ ಸಂಘಟನೆ ಬಲಪಡಿಸಿ ಕೊಳ್ಳೋಣ ಎಂದು ಹೇಳಲು ರಾಜ್ಯದಲ್ಲಿ ಈಗ
ಅಂತಹ ಸಮರ್ಥ ನಾಯಕತ್ವದ ಕೊರತೆ ಕಾಣುತ್ತಿದೆ.
ಬಿ.ಎಸ್.ಯಡಿಯೂರಪ್ಪ ಅವರು ಇದ್ದಾರೆ. ಅವರಿಗೆ ಉತ್ಸಾಹವೂ ಇದೆ. ಆದರೆ, ವಯಸ್ಸು ಅವಕಾಶ ಮಾಡಿಕೊಡುತ್ತಿಲ್ಲ. ಅದರ ಮಧ್ಯೆಯೂ
ಅವರು ಉತ್ಸಾಹದಿಂದ ಹೊರಟರೆ ತಡೆಯುವ ಕೆಲಸ ಆಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ತಳ ಊರಿರುವ ರಾಜ್ಯದ ನಾಯಕರೇ ಅವರಿಗೆ ಅಡ್ಡಗಾಲು
ಹಾಕುತ್ತಿದ್ದಾರೆ. ಮತ್ತೊಂದೆಡೆ ನಾಯಕತ್ವ ಯಾರಿಗೆ ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿದ್ದರಿಂದ ಉಳಿದವರಾರೂ ಸಂಘಟನೆಗೆ ಮುಂದೆ ಬರುತ್ತಿ
ರಲಿಲ್ಲ.
ಇದೆಲ್ಲವೂ ಒಂದೆಡೆಯಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂಬ ಸಂದೇಶವನ್ನು ವರಿಷ್ಠರು ಕಳುಹಿಸಿದ್ದಾರೆ. ಆದರೆ, ಯಾರಿಗೆಲ್ಲಾ ಅವಕಾಶವಿಲ್ಲ ಎಂಬುದನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಹೀಗಾಗಿ ಹಾಲಿ ಸಂಸದರ ಪೈಕಿ ಮೂರ್ನಾಲ್ಕು ಮಂದಿ ಹೊರತುಪಡಿಸಿ ಉಳಿದವರು ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಪಕ್ಷದೊಳಗೆ ಇಷ್ಟೆಲ್ಲವೂ ನಡೆಯುತ್ತಿರುವಾಗ ಈ ಹಿಂದೆ ಬಿಜೆಪಿ ಮಾಡಿದ್ದ ರಾಜಕೀಯ ಆಪರೇಷನ್ ಅನ್ನು ತಿರುಗುಬಾಣವಾಗಿ ಪ್ರಯೋಗಿಸಲು ಕಾಂಗ್ರೆಸ್ ಸಿದ್ಧವಾಗಿ ನಿಂತಿದೆ. ಈಗಾಗಲೇ ಕೆಲವು ಶಾಸಕರು, ಮಾಜಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಂಡಿದೆ.
ರಾಜ್ಯ ಬಿಜೆಪಿಯ ಈಗಿನ ಸ್ಥಿತಿಗೆ ಕಾರಣದವರಾರೂ ಇವಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಉಳಿದವರು, ಅವರು ಮಾಡಿದ ತಪ್ಪಿಗೆ
ನಾವೇಕೆ ತಲೆ ಕೊಡಬೇಕು ಎನ್ನುತ್ತಿದ್ದಾರೆ. ಇದೆಲ್ಲದರ ಪರಿಣಾಮ ಸಂಘಟನೆ ಬಲಪಡಿಸುವುದಕ್ಕಿಂತ ಇದ್ದುದನ್ನು ಉಳಿಸಿಕೊಳ್ಳುವುದೇ ದೊಡ್ಡ ಸಂಗತಿ ಎನ್ನುವಂತಾಗಿದೆ. ಸಹಜವಾಗಿಯೇ ಇದು ಮೂಲ ಬಿಜೆಪಿಗರಿಗೆ ನೋವು ತಂದಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು, ತಾವು ಅಽಕಾರ ಅನುಭವಿಸಲು ವೈಯಕ್ತಿಕವಾಗಿ ಅವರ ಕೊಡುಗೆ ಎಷ್ಟು ಎನ್ನುವುದು ನಂತರದ ಮಾತು.
ಆದರೆ, ಪಕ್ಷ ಏನೂ ಇಲ್ಲದೇ ಇದ್ದಾಗಲೂ ಕೆಲಸ ಮಾಡಿದ್ದರು. ಶಿಸ್ತು, ಸಿದ್ಧಾಂತದೊಂದಿಗೆ ದುಡಿದಿದ್ದರು. ಹೀಗಾಗಿ ಪಕ್ಷದ ಈಗಿನ ಪರಿಸ್ಥಿತಿ, ಅದಕ್ಕೆ ಕಾರಣರಾದವರ ಮೇಲೆ ಅಸಮಾಧಾನವಿದ್ದರೂ ತಾವು ಕಷ್ಟಪಟ್ಟು ಬೆಳೆಸಿದ ಪಕ್ಷ ಎಂಬ ಪ್ರೀತಿ ಅವರಲ್ಲಿ ಇದ್ದೇ ಇರುತ್ತದೆ. ಹೀಗಿರುವಾಗ ಎಷ್ಟು ಸಮಯ ಸುಮ್ಮನಿರಲು ಸಾಧ್ಯ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷದ ಮೂಗು ಹಿಡಿದು ಉಸಿರಾಡದಂತೆ ಮಾಡಿದ್ದ ವರಿಷ್ಠರು ಇನ್ನೂ ಮೂಗು ಬಿಟ್ಟಿಲ್ಲ. ಜತೆಗೆ ಬಾಯಿಯನ್ನೂ ಮುಚ್ಚಿದ್ದಾರೆ. ಇಷ್ಟು ದಿನ ಅದನ್ನು ತಡೆದುಕೊಂಡಿದ್ದ ಕೆಲವರಿಗೆ ಇನ್ನು ಸುಮ್ಮನಿದ್ದರೆ ಉಸಿರು ನಿಂತುಹೋಬಹುದು ಎಂಬ ಆತಂಕಶುರುವಾಗಿದೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆಸಿದ ಪಕ್ಷಕ್ಕೆ ಈ ಪರಿಸ್ಥಿತಿ ಬಂತಲ್ಲಾ ಎಂಬ ನೋವು ಅವರನ್ನು
ಕಾಡಲಾರಂಭಿಸಿದೆ. ತಾವೇನೇ ಮಾಡಿದರೂ ಅಧಿಕಾರ ರಾಜಕಾರಣದಲ್ಲಿ ವೈಯಕ್ತಿಕ ಪ್ರಾಬಲ್ಯ ವಿಲ್ಲದಿದ್ದರೆ ಬೆಲೆ ಇಲ್ಲ ಎಂಬುದು ಅರ್ಥವಾಗಿದೆ.
ಅದಕ್ಕಾಗಿ ಪಕ್ಷಕ್ಕೆ ನಾವು ಬೇಡವಾದರೂ ನಮ್ಮನ್ನು ನಾವು ಉಳಿಸಿಕೊಳ್ಳಬೇಕು ಎನ್ನುವ ನಿರ್ಣಯಕ್ಕೆ ಬಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಸಂಗಣ್ಣ ಕರಡಿ ಮತ್ತಿತರರು ತಮ್ಮ ವ್ಯಾಪ್ತಿ ಮೀರಿ ಮಾತನಾಡಲು ಇದೇ ಕಾರಣ. ಇನ್ನೊಂದೆಡೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಅಧಿಕಾರ ಪಡೆದವರು ಅಧಿಕಾರ ಇಲ್ಲ ಎಂಬ ಕಾರಣಕ್ಕೆ ತಿರುಗಿ ಬೀಳುತ್ತಿದ್ದಾರೆ. ಇವರಿಗೆ ಪಕ್ಷಕ್ಕಿಂತ ಅಽಕಾರವೇ ಮುಖ್ಯವಾಗಿರುವುದರಿಂದ ಬಿಜೆಪಿಯನ್ನು ಜರಿದರೆ ಬೇರೆಯವರು ಅವಕಾಶ ಕೊಡುತ್ತಾರೋ ಎಂಬ ಆಸೆ ಹುಟ್ಟಿದೆ. ಅದಕ್ಕಾಗಿ ಪಕ್ಷ, ನಾಯಕರ ವಿರುದ್ಧ ಮಾತನಾಡಲಾರಂಭಿಸಿದ್ದಾರೆ.
ಅಧಿಕಾರಕ್ಕಿಂತ ಪಕ್ಷ ಮುಖ್ಯ ಎನ್ನುವವರು ಸಹಜವಾಗಿಯೇ ಇಂಥವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಇದರ ಪರಿಣಾಮ ಶಿಸ್ತಿನ ಪಕ್ಷವಾಗಿದ್ದ ಬಿಜೆಪಿ ಈಗ ಗೊಂದಲದ ಗೂಡಾಗುತ್ತಿದೆ. ಯಾರಿಗೆ ಯಾರೂ ಉತ್ತರದಾಯಿಗಳಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತಿತ್ತು. ಈಗಾಗಲೇ ನಾವಿಕನಿಲ್ಲದ ದೋಣಿಯಾಗಿರುವ ಬಿಜೆಪಿಯಲ್ಲಿ ಈಗ ದೋಣಿಯನ್ನು ಮುನ್ನಡೆಸು ವವರೇ ಇಲ್ಲವಾಗಿದೆ. ದೋಣಿ ಮುನ್ನಡೆಸಲು ಸಾಮರ್ಥ್ಯ ಇದ್ದವರೂ ಅವಕಾಶ ಸಿಗುತ್ತದೆಯೋ, ಇಲ್ಲವೋ ಎಂಬ ಅನುಮಾನದಲ್ಲಿದ್ದಾರೆ. ನಾವಿಕ ನನ್ನು ನೇಮಿಸಿಕೊಳ್ಳುವ ಪರಿಸ್ಥಿತಿಯಲ್ಲಿ ದೋಣಿ ಯಲ್ಲಿರುವವರು ಇಲ್ಲ. ನೀನೇ ನಾವಿಕ ಎಂದು ಹೇಳಬೇಕಾದವರು ಮುಖ ತಿರುಗಿಸಿ ನಿಂತಿದ್ದಾರೆ.
ಇದರಿಂದ ಸಹಜವಾಗಿಯೇ ದೋಣಿಯಲ್ಲಿದ್ದವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆ ಎಂದರೆ ದೋಣಿ ಮುಳುಗಿ ದರೂ ಅಚ್ಚರಿಯಿಲ್ಲ ಎಂಬ ವಾತಾವರಣ ನಿರ್ಮಾಣವಾಗು ವಷ್ಟು ಬೆಳೆಯುತ್ತಿದೆ. ಹೀಗಾಗಿ ಮುಂದೇನಾಗು ತ್ತದೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ತಪ್ಪು ಮಾಡದ ಕಾರ್ಯಕರ್ತರೂ ಶಿಕ್ಷೆ ಅನುಭವಿಸು ವಂತಾಗಿದೆ. ಅವರೂ ತಾಳ್ಮೆ ಕಳೆದುಕೊಂಡರೆ….? ಆದರೆ, ಅದೆಲ್ಲ ಸಂಭವಿಸುವ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ರಾಗಿ ನೇಮಿಸುವ ಮೂಲಕ ಎಲ್ಲದಕ್ಕೂ ತೆರೆ ಎಳೆಯುತ್ತೇವೆ ಎಂಬ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ.
ಲಾಸ್ಟ್ ಸಿಪ್: ಕೆಟ್ಟ ಮೇಲೂ ಬುದ್ಧಿ ಬರದಿದ್ದರೆ, ಬುದ್ಧಿ ಹೇಳುವವರೂ ಸುಮ್ಮನಾದರೆ ಕೊನೆಗೆ ಅಳಿದುಳಿದೆಲ್ಲವೂ ಹಾಳಾಗಿಹೋಗುತ್ತದೆ.