Thursday, 21st November 2024

C Ashwath: ಸ್ಫೂರ್ತಿಪಥ ಅಂಕಣ: ಕನ್ನಡದ ಸುಗಮ ಸಂಗೀತ ಲೋಕದ ಮಹಾತಾರೆ ಸಿ.ಅಶ್ವತ್ಥ

ashwatha

ಅವರು ಹಾಡಿರುವ, ರಾಗ ಸಂಯೋಜನೆ ಮಾಡಿದ ಅಷ್ಟೂ ಹಾಡುಗಳು ಸಾವಿರದ ಹಾಡುಗಳು

Rajendra Bhat K
  • ರಾಜೇಂದ್ರ ಭಟ್ ಕೆ.

ಭಾರತದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಭಾವಗೀತೆಗಳು ಬಹಳ ಎತ್ತರದ ಸ್ಥಾನವನ್ನು ಪಡೆಯುತ್ತವೆ. ಅದಕ್ಕೆ ಕಾರಣವು ಬಹಳ ಸ್ಪಷ್ಟ.

ಕವಿಗಳು ಯಾವ ಭಾವನೆಯಿಂದ ತಮ್ಮ ಭಾವಗೀತೆಗಳನ್ನು ಬರೆದರೋ ಅದೇ ಭಾವನೆಯನ್ನು ಮನಸಿನಲ್ಲಿ ಇಟ್ಟುಕೊಂಡು ರಾಗ ಸಂಯೋಜನೆ ಮಾಡಿ ಮತ್ತು ಹಾಡಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿಯು ಕನ್ನಡದ ಹಲವು ಸಂಗೀತಗಾರರಿಗೆ ದೊರೆಯಬೇಕು. ಅದರಲ್ಲಿ ಒಂದು ಅಗ್ರಪಂಕ್ತಿಯ ಹೆಸರು ಸಿ.ಅಶ್ವತ್ಥ ಅವರು ಅನ್ನೋದು ಹೆಚ್ಚು ಸರಿ. ಅವರು ‘ಕನ್ನಡ ಸುಗಮ ಸಂಗೀತ ಕ್ಷೇತ್ರದ ಧ್ರುವತಾರೆ’ ಎಂದರೆ ಅದು ಉತ್ಪ್ರೇಕ್ಷೆ ಆಗಲಾರದು.

ಬಾಲ್ಯದಲ್ಲಿಯೇ ಸಂಗೀತದ ದಟ್ಟ ಪ್ರಭಾವ

ಸಿ. ಅಶ್ವತ್ಥ ಅವರು ಹುಟ್ಟಿದ್ದು ಚೆನ್ನರಾಯ ಪಟ್ಟಣದಲ್ಲಿ (ಡಿಸೆಂಬರ್ 29,1939). ಬಾಲ್ಯದಲ್ಲಿ ಸಂಗೀತದ ಪ್ರಭಾವ ದಟ್ಟವಾಗಿತ್ತು. ಹಿಂದುಸ್ತಾನಿ ಸಂಗೀತದ ಮಹಾಗುರುಗಳಾದ ದೇವಗಿರಿ ಶಂಕರ ರಾವ್ ಅವರಿಂದ ಶಾಸ್ತ್ರೀಯ ಸಂಗೀತದ ಅಭ್ಯಾಸವು ನಡೆಯಿತು. ನಂತರ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೂಲಕ ಬಿ.ಎಸ್ಸಿ ಪದವಿಯನ್ನು ಪಡೆದರು. ನಂತರ 27 ವರ್ಷಗಳಷ್ಟು ದೀರ್ಘ ಕಾಲ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ ಉದ್ಯೋಗವನ್ನು ಮಾಡಿದರು. ಕೊನೆಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಯಲ್ಲಿ ನಿವೃತ್ತರಾದರು.

ಆರಂಭದಲ್ಲಿ ಕನ್ನಡ ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದ ಅಶ್ವತ್ಥ ಅವರು ಬಹು ಬೇಗ ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಯಿಂದ ಆಕರ್ಷಿತರಾದರು. ಕುವೆಂಪು, ಬೇಂದ್ರೆ, ನರಸಿಂಹ ಸ್ವಾಮಿ, ಲಕ್ಷ್ಮಣ್ ರಾವ್, ಶಿವರುದ್ರಪ್ಪ , ವೆಂಕಟೇಶ ಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ ಮೊದಲಾದವರ ಶ್ರೇಷ್ಟ ಭಾವಗೀತೆಗಳನ್ನು ಚಂದವಾಗಿ ಅಧ್ಯಯನ ಮಾಡಿ ಸಂಗೀತ ಸಂಯೋಜನೆ ಮಾಡಲು ತೊಡಗಿದರು. ಸಾಹಿತ್ಯದ ಆಳವಾದ ಪ್ರಜ್ಞೆ ಇದ್ದರೆ ಮಾತ್ರ ಅದಕ್ಕೆ ಸರಿಯಾದ ರಾಗ ಸಂಯೋಜನೆಯನ್ನು ಮಾಡಲು ಸಾಧ್ಯ ಮತ್ತು ಅದನ್ನು ಸುಲಲಿತವಾಗಿ ಹಾಡಲು ಸಾಧ್ಯ ಎಂದು ಬಲವಾಗಿ ನಂಬಿದರು. ಅವರ ಸುವರ್ಣ ಸ್ಪರ್ಶ ಪಡೆದ ಗೀತೆಗಳು ಅಮರತ್ವವನ್ನು ಪಡೆಯುತ್ತ ಹೋದವು.

ಮೈಸೂರು ಮಲ್ಲಿಗೆಯಿಂದ, ಶಿಶುನಾಳ ಶರೀಫರವರೆಗೆ!

ಕೆ. ಯಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಹಾಡುಗಳು ಸರಸ, ವಿರಸ, ವಿರಹ ಮತ್ತು ಸಮರಸದ ರಸಪಾಕಗಳು. ಅಂತಹ ಹಾಡುಗಳನ್ನು ಸಿ. ಅಶ್ವತ್ಥ ಅವರ ಸಂಯೋಜನೆ ಮತ್ತು ಧ್ವನಿಯಲ್ಲಿಯೇ ಕೇಳಬೇಕು. ಶಿಶುನಾಳ ಶರೀಫರ ನೂರಾರು ತತ್ವ ಪದಗಳು, ಕುವೆಂಪು ಅವರ ಶ್ರೇಷ್ಟ ಗೀತೆಗಳು, ವರಕವಿ ಬೇಂದ್ರೆಯವರ ಸಾವಿರದ ಭಾವ ಗೀತೆಗಳು ಅಶ್ವತ್ಥ ಅವರಿಂದ ಬಹು ಜನಪ್ರಿಯವಾದವು. ಸುಮಾರು 150ಕ್ಕಿಂತ ಅಧಿಕ ಭಾವಗೀತೆಗಳ ಆಲ್ಬಂಗಳಿಗೆ ಸಂಗೀತ ಸಂಯೋಜನೆ ಮಾಡಿ, ಹಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅದರಲ್ಲೂ ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಗೀತೆಗಳು, ಶ್ರಾವಣ( ಬೇಂದ್ರೆ), ದೀಪಿಕಾ (ಲಕ್ಷ್ಮೀ ನಾರಾಯಣ ಭಟ್ಟ), ಸುಬ್ಬಾ ಭಟ್ಟರ ಮಗಳೆ( ಲಕ್ಷ್ಮಣ್ ರಾವ್), ಕೈಲಾಸಂ ಗೀತೆಗಳು, ತೂಗು ಮಂಚ( ಹೆಚ್.ಯಸ್. ವೆಂಕಟೇಶ್ ಮೂರ್ತಿ), ನನ್ನವಳು(ಲಕ್ಷ್ಮಣ್ ರಾವ್), ಎಲ್ಲಾದರೂ ಇರು ( ಕುವೆಂಪು), ಮಾವು ಬೇವು (ದೊಡ್ಡರಂಗೆ ಗೌಡ), ನೇಸರ ನೋಡು (ರಂಗ ಭೂಮಿಯ ಗೀತೆಗಳು) ತುಂಬಾ ಜನಪ್ರಿಯವಾದವು. ಅದರಲ್ಲೂ ಡಾ. ರಾಜಕುಮಾರ್ ಹಾಡಿದ ‘ಎಲ್ಲಾದರೂ ಇರು ಎಂತಾದರೂ ಇರು’ ಗೀತೆಯು ಕನ್ನಡದ ಭಾವನೆಗಳನ್ನು ಮೀಟಿತು. ರತ್ನಮಾಲಾ ಪ್ರಕಾಶ್, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್, ಸಂಗೀತಾ ಕಟ್ಟಿ… ಮೊದಲಾದ ಹೊಸ ಪೀಳಿಗೆಯ ಹಾಡುಗಾರರನ್ನು ಬೆಳೆಸಿದ ಕೀರ್ತಿ ಕೂಡ ಅಶ್ವತ್ಥ ಅವರಿಗೆ ಸಲ್ಲುತ್ತದೆ.

ಕನ್ನಡದ ಸಿನೆಮಾಗಳಿಗೆ ಸಂಗೀತ ನಿರ್ದೇಶನ.

‘ಕಾಕನ ಕೋಟೆ’ ಕನ್ನಡ ಸಿನೆಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಅವರು ಮತ್ತೊಂದು ಮಜಲನ್ನು ತಲುಪಿದರು. ನಂತರ ಎಲ್. ವೈದ್ಯನಾಥನ್ ಅವರನ್ನು ಸೇರಿಕೊಂಡು ‘ಅಶ್ವತ್ಥ – ವೈದಿ’ ಎಂಬ ಹೆಸರಿನೊಂದಿಗೆ 27 ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದರು. ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಕೊಟ್ರೇಶಿ ಕನಸು, ಬಾಡದ ಹೂವು, ಸ್ಪಂದನ, ಅನುಪಮಾ, ನಾರದ ವಿಜಯ, ಆಲೆಮನೆ, ಕಾಂಚನ ಮೃಗ, ಸಿಂಗಾರೆವ್ವ…ಈ ಸಿನೆಮಾಗಳ ಹಾಡುಗಳನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಸ್ಪಂದನ ಮತ್ತು ಚಿನ್ನಾರಿ ಮುತ್ತ ಸಿನೆಮಾಗಳಿಗೆ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ರಾಜ್ಯ ಪ್ರಶಸ್ತಿ ಬಂದರೆ, ಮೈಸೂರು ಮಲ್ಲಿಗೆ ಸಿನೆಮಾ ಅವರಿಗೆ ಫಿಲ್ಮ್ ಫೇರ್ ಅವಾರ್ಡ್ ಗೆದ್ದುಕೊಟ್ಟಿತು.

ರಾಜ್ಯ ಸರ್ಕಾರದ ವಿನಂತಿಯ ಮೇರೆಗೆ ರೈತಗೀತೆ (ಕುವೆಂಪು ಅವರ ನೇಗಿಲ ಯೋಗಿ)ಯನ್ನು ಸಮರ್ಪಣೆ ಮಾಡಿದ್ದು ಕೂಡ ಅವರೇ.

ತಮ್ಮ ಸುಗಮ ಸಂಗೀತದ ತಂಡ ಕಟ್ಟಿಕೊಂಡು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಅವರು ನೀಡಿದರು. ಆಸ್ಟ್ರೇಲಿಯಾದ ಮೆಲ್ಬರ್ನ್ ನಗರ, ಅಮೆರಿಕ ಮತ್ತು ಲಂಡನ್ ನಗರದಲ್ಲಿ ಕೂಡ ಅವರು ಕಾರ್ಯಕ್ರಮ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಮೈದುಂಬಿ ಹಾಡಿದ್ದಾರೆ.

2005ರಲ್ಲಿ ಅವರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಸಿಕೊಟ್ಟ ‘ಕನ್ನಡವೇ ಸತ್ಯ’ ಸಂಗೀತ ಕಾರ್ಯಕ್ರಮಕ್ಕೆ 1,50,000 ಸಂಗೀತದ ಮಹಾ ಅಭಿಮಾನಿಗಳು ಸೇರಿದ್ದು ಒಂದು ಅದ್ಭುತ ದಾಖಲೆ. ಅವರಿಗೆ 1986ರಲ್ಲಿ ರಾಜ್ಯ ಸರ್ಕಾರವು ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಸಿ.ಅಶ್ವತ್ಥ ಅವರು 2009ರ ಇಸವಿ ತಮ್ಮ ಹುಟ್ಟುಹಬ್ಬದಂದು ನಮ್ಮನ್ನು ಅಗಲಿ ಹೋದರು.

ಸಿ.ಅಶ್ವತ್ಥ ಅವರ ಹಾಡುಗಳ ವಿಶೇಷತೆ

ಸಿ. ಅಶ್ವತ್ಥ ಅವರು ರಾಗ ಸಂಯೋಜನೆ ಮಾಡಿದ ಮತ್ತು ಹಾಡಿದ ಹಾಡುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಶುದ್ಧ ಸಾಹಿತ್ಯದ ಟಿಪಿಕಲ್ ಫ್ರೇಮ್ ವರ್ಕ್ ಕಂಡು ಬರುತ್ತದೆ. ಶುದ್ಧ ಶಾಸ್ತ್ರೀಯ ರಾಗಗಳ ಬಳಕೆ ಅವರ ವಿಶೇಷತೆ. ಅಬ್ಬರದ, ಶಬ್ದ ಮಾಲಿನ್ಯದ ವಾದ್ಯಗಳನ್ನು ಅವರು ಬಳಕೆ ಮಾಡಿದ್ದೆ ಇಲ್ಲ. ಆಲೆಮನೆ ಸಿನೆಮಾದ ‘ನಮ್ಮೂರ ಮಂದಾರ ಹೂವೇ’ ಹಾಡನ್ನು ಎಷ್ಟು ಬಾರಿ ಕೇಳಿದರೂ ಅದು ಹಳತು ಆಗುವುದೇ ಇಲ್ಲ. ಕಾರಣ ಅದರ ಮಾಧುರ್ಯ ಮತ್ತು ಸಾಹಿತ್ಯದ ಸ್ಪಷ್ಟತೆ. ಕುವೆಂಪು ಅವರ ಶ್ರೇಷ್ಟವಾದ ಸಾಹಿತ್ಯದ ‘ಬಾ ಇಲ್ಲಿ ಸಂಭವಿಸು’ ಹಾಡಿನ ಸಂಗೀತ ಸಂಯೋಜನೆ ಗಮನಿಸಿ. ಅದು ನಿಮ್ಮನ್ನು ಆಧ್ಯಾತ್ಮದ ಆಳಕ್ಕೆ ಕರೆದುಕೊಂಡು ಹೋಗುತ್ತದೆ. ಜಿ ಎಸ್ ಶಿವರುದ್ರಪ್ಪ ಅವರ ಸಾಹಿತ್ಯದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ ‘ ಹಾಡನ್ನು ಒಮ್ಮೆ ಕೇಳಿದರೆ ಅದು ನಮ್ಮ ಹೃದಯದಲ್ಲಿ ಸಾಗರದ ಅಲೆಗಳನ್ನು ಉಂಟುಮಾಡುತ್ತದೆ. ಬೇಂದ್ರೆಯವರ ‘ನೀ ಹಿಂಗ ನೋಡಬ್ಯಾಡ ನನ್ನ ‘ ಹಾಡು ನಮ್ಮ ಮನಸ್ಸಿನಲ್ಲಿ ವಿಷಾದದ ಭಾವವನ್ನು ಉಳಿಸಿ ಹೋಗುತ್ತದೆ. ಚಿನ್ನಾರಿ ಮುತ್ತ ಸಿನೆಮಾದ ‘ ಈ ಬಾನು ಈ ಹಕ್ಕಿ ‘ ಹಾಡು ನಮ್ಮನ್ನು ಕೈಹಿಡಿದು ನಮ್ಮ ಬಾಲ್ಯದ ಅಂಗಳಕ್ಕೆ ಕರೆದುಕೊಂಡು ಹೋಗುತ್ತದೆ. ‘ಒಳಿತು ಮಾಡೋ ಮನುಷಾ’ ಅಶ್ವತ್ಥ ಅವರ ಎತ್ತರದ ಸ್ಥಾಯಿಯ ಧ್ವನಿಯಲ್ಲಿ ಒಂದು ಪಾಸಿಟಿವ್ ಫೀಲ್ ಬಿಟ್ಟು ಹೋಗುತ್ತದೆ. ಹೀಗೆ ಅವರು ರಾಗ ಸಂಯೋಜನೆ ಮಾಡಿದ, ಅವರು ಹಾಡಿದ ಅಷ್ಟೂ ಹಾಡುಗಳು ಕನ್ನಡದ ಖಜಾನೆಯ ಶ್ರೇಷ್ಟವಾದ ರತ್ನಗಳಾಗಿ ಉಳಿದುಹೋಗುತ್ತವೆ.

ಸಿ. ಅಶ್ವತ್ಥ ಅವರು ಹಾಡುಗಳ ಮೂಲಕ ಚಿರಂಜೀವಿ

ಇಂದಿಗೂ ಅವರ ಬ್ರಾಂಡ್ ಆದ ನೀ ಹೀಂಗ ನೋಡಬ್ಯಾಡ ನನ್ನ, ಕಾಣದಾ ಕಡಲಿಗೆ, ಕುರುಡು ಕಾಂಚಾಣ ಕುಣಿಯುತಲಿತ್ತಾ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಹೇಳಿ ಹೋಗು ಕಾರಣ, ಬಾ ಇಲ್ಲಿ ಸಂಭವಿಸು, ಬಾರೆ ನನ್ನ ದೀಪಿಕಾ, ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ತೂಗು ಮಂಚದಲ್ಲಿ ಕೂತು, ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ, ರಾಯರು ಬಂದರು ಮಾವನ ಮನೆಗೆ, ಕೋಡಗನ ಕೋಳಿ ನುಂಗಿತ್ತಾ, ಒಳಿತು ಮಾಡು ಮನುಷಾ…….. ಮೊದಲಾದ ಚಿರಂಜೀವಿಯಾದ ಹಾಡುಗಳನ್ನು ಕೇಳುವಾಗ ಅಶ್ವತ್ಥ ಅವರು ಕಣ್ಣು ಮುಂದೆ ಬರುತ್ತಾರೆ. ಕನ್ನಡದಲ್ಲಿ ಇಂದು ಮೈಸೂರು ಮಲ್ಲಿಗೆಯ ಹಾಡುಗಳು ಮತ್ತು ಶಿಶುನಾಳ ಶರೀಫರ ಹಾಡುಗಳು ಸ್ಟಾರ್ ವ್ಯಾಲ್ಯೂ ಪಡೆದಿವೆ ಅಂದರೆ ಅದಕ್ಕೆ ಕಾರಣ ಸಿ.ಅಶ್ವತ್ಥ ಅನ್ನುವುದು ನಿರ್ವಿವಾದ.

ಅವರ ಹಾಡುಗಳ ಮೂಲಕ ಅವರೂ ಚಿರಂಜೀವಿ.