Saturday, 27th July 2024

ದಾಸಯ್ಯನ ಪಾತ್ರಕ್ಕಷ್ಟೇ ಸೀಮಿತರಾದರೇ ಇಬ್ರಾಹಿಂ ?!

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಉಚ್ಛಾರಣೆಯಿಂದ ತಮ್ಮಲ್ಲಿರುವ ಅಗಾಧ ಅನುಭವವನ್ನು ಪುಕ್ಕಟ್ಟೆಯಾಗಿ ಪ್ರದರ್ಶಿಸುತ್ತ ವೇದಿಕೆಗಳಲ್ಲಿ ಸಂಚಲನ ಮೂಡಿಸುತ್ತಿದ್ದರು. ದುರಂತವೆಂದರೆ ಇಂಥ ಮುತ್ಸದ್ದಿತನದಿಂದ ಅನ್ಯ ನಾಯಕರಿಗೆ ಒಂದಷ್ಟು ಉಪಯೋಗ ಆಗುತ್ತಿತ್ತೇ ಹೊರತು ಸ್ವತಃ ಇಬ್ರಾಹಿಂ ಅವರಿಗೆ ಯಾವ ಮೈಲೇಜೂ ಸಿಗಲಿಲ್ಲ.

ಚಾಂದ್ ಮಹಲ್ ಇಬ್ರಾಹಿಂ ಅಲಿಯಾಸ್ ಸಿ.ಎಂ. ಇಬ್ರಾಹಿಂ ಎಂದರೆ ಸಾಮಾನ್ಯ ವ್ಯಕ್ತಿಯಲ್ಲವೇ ಅಲ್ಲ. ಅವರನ್ನೊಬ್ಬ ಅಲ್ಪಸಂಖ್ಯಾತ ನಾಯಕರೆಂದಾಗಲಿ, ಮುಸ್ಲಿಮರನ್ನು ಪ್ರತಿನಿಽಸುವ ರಾಜಕಾರಣಿಯೆಂದಾಗಲಿ ಕರೆಯುವ ಅವಶ್ಯಕತೆ ಇಲ್ಲ. ಆದರೆ ಅವರ ರಾಜಕಾರಣದುದ್ದಕ್ಕೂ ಪಕ್ಷಗಳ ನಾಯಕರು ಅವರನ್ನು ರಾಜಕೀಯವಾಗಿ ಬಳಸಿಕೊಂಡು ಬರಲಾದ ಅಥವಾ ಬಳಸಿಕೊಳ್ಳಲಾದ ವ್ಯಕ್ತಿ ಎಂದು ಮಾತ್ರ ಖಂಡಿತ ವಾಗಿಯೂ ಹೇಳಬಹುದು.

ನೇರವಾಗಿ ಹೇಳಬೇಕೆಂದರೆ ಅವರನ್ನು ಒಂದು ರೀತಿಯಲ್ಲಿ ದಾಸಯ್ಯನಂತೆ ಕಂಡಿದ್ದೇ ಹೆಚ್ಚು. ಬೇಕಾದಾಗೆಲ್ಲ ಅವರನ್ನು ಪಕ್ಷದ ಅಜೆಂಡಾಗಳಿಗೆ, ನಕಲಿ ಜಾತ್ಯತೀತದ ತೆವಲಿಗಾಗಿ ಬಳಸಿಕೊಂಡು ಅವರಿಂದ ಶಂಖ ಊದಿಸಿ, ಜಾಗಟೆ ಬಾರಿಸಿ, ಅಲ್ಪಸಂಖ್ಯಾತರ ಓಲೈಕೆಗೆ ಬಳಸಿಕೊಂಡು ನಂತರ ಇವರನ್ನು ಉತ್ಸವಮೂರ್ತಿ ಯಂತೆ ಮೂಲೆಯಲ್ಲಿ ಕುಳಿರಿಸಿದ್ದೇ ಹೆಚ್ಚು. ನಿರ್ಣಾಯಕ ಹಂತದಲ್ಲಿ ಅವರಿಗೆ ಸಿಗಬೇಕಾದ ಪದವಿ ಸಿಗದಂತೆ ಮಾಡಿ ಹಿಂದೆ ಸರಿಸಿ ‘ಹೇ, ಅವನ್ಯಾವ ಸೀಮೆ ದಾಸಯ್ಯ’ ಎಂದು ನಿರ್ಲಕ್ಷಿಸಿದ್ದು ಸುಳ್ಳಲ್ಲ.

ಇಬ್ರಾಹಿಂ ಸಾಹೇಬ್ರು, ಜಮೀರ್ ಅಹಮದ್ ನಂತೆ ಏಕಾಏಕಿ ಬಸ್ ಇಳಿದು ಬಂಡವಾಳ ಹೂಡಿ ರಾಜಕೀಯಕ್ಕೆ ಬಂದು ದಿಢೀರ್ ಶಾಸಕ ಮಂತ್ರಿಯಾದ ವ್ಯಕ್ತಿಯಲ್ಲ. ಇಬ್ರಾಹಿಂ ಅವರ ರಾಜಕೀಯದ ಒಡನಾಟಕ್ಕೆ ಬರೋಬ್ಬರಿ ಆರುದಶಕಗಳ ಇತಿಹಾಸವಿದೆ. ಇವರ ಬಹುದೊಡ್ಡ ಅರ್ಹತೆ ಎಂದರೆ ಅದು ಮಾತು ಗಾರಿಕೆ. ಆಗ ಇವರ ವಯಸ್ಸು ಸುಮಾರು ಹದಿನೈದರ ಒಳಗಿರಬಹು ದಷ್ಟೆ! ಇವರ ನಡೆನುಡಿ ವಿಚಾರಧಾರೆಯನ್ನು ಕಂಡ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ನವರೇ ಬೆರಗಾಗಿ ರಾಜಕೀಯ ವೇದಿಕೆ, ಚುನಾವಣಾ ಪ್ರಚಾರ ಕಾಂಗ್ರೆಸ್ ಪರ ಭಾಷಣಕಾರನನ್ನಾಗಿ ನೇಮಿಸಿಕೊಂಡಿದ್ದರೆಂದರೆ ಊಹಿಸಿಕೊಳ್ಳಿ ಇವರ ಮಾತುಗಾರಿಕೆಯ ವೈಭವ!

ಇವರ ತಂದೆ ಸಿ.ಎಂ.ಕೆ. ಅಲಿ ಅವರು ನಿಜಲಿಂಗಪ್ಪನವರಿಗೆ ಮತ್ತು ವೀರೇಂದ್ರ ಪಾಟೀಲರಿಗೂ ಬಹಳ ಹತ್ತಿರವಾಗಿದ್ದರಿಂದ ಯುವಕ ಇಬ್ರಾಹಿಂ ಆಗಲೇ ರಾಜಕೀ ಯದಲ್ಲಿ ಜನಾಕರ್ಷಣೆಯ ವ್ಯಕ್ತಿಯಾಗಿದ್ದರು. ಇಂಥ ವ್ಯಕ್ತಿ ಅಂದಿನ ಲೆಕ್ಕಾಚಾರದ ಪ್ರಕಾರವೇ ಹೇಳಬೇಕೆಂದರೆ ಇಂದಲ್ಲ ನಾಳೆ ಅಕ್ಷರಶಃ ಸಿಎಂ ಆಗಲೇ ಬಹುದಾದ ರಾಜಕೀಯ ಪಟ್ಟುಗಳನ್ನು ಮೈಗೂಡಿಸಿಕೊಂಡಿದ್ದರು. ಮುಂದೆ ಕಾಂಗ್ರೆಸ್ ಇಬ್ಭಾಗವಾಗಿ ಜನತಾ ಪರಿವಾರದತ್ತ ಸಾಗಿ ಹೋದ ಇಬ್ರಾಹಿಂ ಇಷ್ಟು ವರ್ಷದ ರಾಜಕೀಯ ಬದುಕಿನಲ್ಲಿ ಅತಿದೊಡ್ಡ ಪದವಿಯನ್ನು ಅಲಂಕರಿಸಿದ್ದೆಂದರೆ ಅದು ದೇವೇಗೌಡರು ಮತ್ತು ಗುಜ್ರಾಲ್ ಅವರು ಪ್ರಧಾನಮಂತ್ರಿಗಳಾಗಿದ್ದ ಸಮಯದಲ್ಲಿ.

ಅವರ ಸಂಪುಟದಲ್ಲಿ ನಾಗರಿಕ ವಿಮಾನಯಾನ, ಮಾಹಿತಿ ಮತ್ತು ಪ್ರಸಾರ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದು. ಅದನ್ನು ಹೊರತು ಪಡಿಸಿದರೆ
ಮುಖ್ಯಮಂತ್ರಿ ಆರ್.ಗುಂಡುರಾವ್ ಅವರ ಸಂಪುಟದಲ್ಲಿ ಮೂರುನಾಲ್ಕು ಖಾತೆಗಳನ್ನು ನಿರ್ವಹಿಸಿರುವುದಷ್ಟೆ. ಇಬ್ರಾಹಿಂ ಮಾತನಾಡುತ್ತಾರೆಂದರೆ ಅದು
ಹರಿಕಥೆಯಂತೆ ಭಾಸವಾಗುತ್ತದೆ. ಭಗವದ್ಗೀತೆಯ ಶ್ಲೋಕಗಳು, ವಚನಗಳು, ಕೀರ್ತನೆಗಳ ಉಚ್ಛಾರಣೆಯಿಂದ ತಮ್ಮಲ್ಲಿರುವ ಅಗಾಧ ಅನುಭವವನ್ನು ಪುಕ್ಕಟ್ಟೆ ಯಾಗಿ ಪ್ರದರ್ಶಿಸುತ್ತ ವೇದಿಕೆಗಳಲ್ಲಿ ಸಂಚಲನ ಮೂಡಿಸುತ್ತಿದ್ದರು. ದುರಂತವೆಂದರೆ ಇಂಥ ಮುತ್ಸದ್ದಿತನದಿಂದ ಅನ್ಯ ನಾಯಕರಿಗೆ ಒಂದಷ್ಟು ಉಪಯೋಗ ಆಗುತ್ತಿತ್ತೇ ಹೊರತು ಸ್ವತಃ ಇಬ್ರಾಹಿಂ ಅವರಿಗೆ ಯಾವ ಮೈಲೇಜೂ ಸಿಗಲಿಲ್ಲ.

ಆದರೆ ಇವರಿಂದ ಉಪಕೃತರಾದವರೇ ಇವರ ಡ್ಯಾಮೇಜ್‌ಗೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿರುವುದು ಸುಳ್ಳಲ್ಲ. ರಾಜಕೀಯ ಜೀವನ ಪೂರ್ತಿ ಪಕ್ಷಗಳ ಪರ, ವ್ಯಕ್ತಿಗಳ ಪರ ಅತಿಶಯ ಭಾಷಣ ಮಾಡುವುದು, ಚಪ್ಪಾಳೆ ಗಿಟ್ಟಿಸುವುದು, ಉತ್ಪ್ರೇಕ್ಷಿತವಾಗಿ ಮಾತನ್ನು ಹರಿಬಿಟ್ಟು ಅಪಹಾಸ್ಯಕ್ಕೆ ಒಳಗಾಗಿ ಪ್ರಚಾರ ಪಡೆದಿರು ವುದು ಇವರ ದೊಡ್ಡಲೋಪ.

ಇಬ್ರಾಹಿಂ ಅವರ ಇಂದಿನ ದುರ್ಗತಿಗೆ ಸ್ವಯಂಕೃತ ಅಪರಾಧಗಳಿವೆ. ಇಷ್ಟು ದಶಕಗಳ ರಾಜಕೀಯ ಪಯಣದಲ್ಲಿ ಜನಾನುರಾಗಿಯಾಗಿ ಮತದಾರರ ವಿಶ್ವಾಸ ಗಳಿಸಿ ಜನರಿಂದ ಆಯ್ಕೆ ಯಾಗುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡದೇ ಇರುವುದು. ಪಕ್ಷಗಳ ನಾಯಕರ ಹಿಂದೆ ಅವರಿಗಾಗಿ ಓಡಾಡುವುದಕ್ಕಿಂತ
ಜನರೊಂದಿಗೆ ಬೆರೆತು ಜನನಾಯಕನಾಗಿ ಬೆಳೆದಿದ್ದರೆ ಇಷ್ಟು ಹೊತ್ತಿಗೆ ಯಾವುದೇ ಪಕ್ಷದಲ್ಲಿ, ಯಾವ ಕ್ಷೇತ್ರದಲ್ಲಾದರೂ ನಿಂತು ಗೆದ್ದು ಬಂದು ಅಽಕಾರ-ಪದವಿ ಯನ್ನು ಪಡೆಯಬಹುದಾದ ಸಾಮರ್ಥ್ಯ ಇತ್ತು.

ಮಂತ್ರಿಯಾಗಿದ್ದಾಗಲೆಲ್ಲ ಅವರು ರಾಜ್ಯಸಭಾ, ವಿಧಾನಪರಿಷತ್ತು ಸದಸ್ಯರಾಗಿದ್ದರೇ ಹೊರತು ಜನರಿಂದ ನೇರವಾಗಿ ಆಯ್ಕೆಯಾಗುವ ನಾಯಕತ್ವದ ಗುಣ ಗಳನ್ನು ಬೆಳೆಸಿಕೊಳ್ಳಲೇ ಇಲ್ಲ. ಜಮೀರ್ ಅಹಮದ್‌ರನ್ನೇ ನೋಡಿ ಯಾವ ಅನುಭವವಿಲ್ಲದಿದ್ದರೂ ರಾಜಕೀಯಕ್ಕೆ ಬಂದು ಮೂರು ಬಾರಿ ಜನರಿಂದ ಗೆದ್ದು ಬಂದು (?!) ಮಂತ್ರಿಯಾಗಿಲ್ಲವೇ?. ಆದರೆ ಅವರಿಗೂ ಇಬ್ರಾಹಿಂ ಅವರಿಗೂ ಅಜಗಜಾಂತರವಿದೆ. ಅದು ಬೇರೆ ವಿಚಾರ. ಇಬ್ರಾಹಿಂ ಅವರಿಗೆ ಏನು ಕಡಿಮೆಯಾಗಿದೆ? ಪುರಾತನ ರಾಜಕೀಯ ಹಿನ್ನೆಲೆಯಿದೆ, ಮುತ್ಸದ್ಧಿತನ ತುಂಬಿ ತುಳುಕುತ್ತಿದೆ. ಒಳ್ಳೆಯ ಮನಸ್ಸಿದೆ, ಆದರೂ ಈಗ ಮಾಧ್ಯಮಗಳ ಮುಂದೆ ನಿಂತು ತಾನೊಬ್ಬ ಅನಾಥ ಎಂದು ದಯನೀಯವಾಗಿ ಹೇಳಿಕೊಂಡು ಕಣ್ಣೀರಿಡುವ ಗತಿ ಬಂದಿದೆಯೆಂದರೆ ಅದು ಸ್ವಯಂಕೃತವಲ್ಲದೆ ಬೇರೇನೂ ಅಲ್ಲ.

ಹಿಂದೆ ಇವರು ಚುನಾವಣಾ ಪ್ರಚಾರ ಭಾಷಣದಲ್ಲಿ ನರೇಂದ್ರ ಮೋದಿಯವರನ್ನು ‘ಮೋದಿ ನೀ ಹೋದಿ, ಮೋದಿ ನೀ ಬೂದಿ’ ಎಂದು ಮನಸೋಇಚ್ಛೆ ಬೈದಾಡಿ ದರು. ತನಗಿದ್ದ ಪ್ರಜ್ಞಾವಂತಿಕೆ ಪ್ರಬುದ್ಧತೆಯನ್ನು ಹರಾಜು ಹಾಕಿಕೊಂಡರು, ತನ್ನ ಯೋಗ್ಯತೆಗಿಂತ ಪಕ್ಷದ ಯೋಗ್ಯತೆಯೇ ಮಿಗಿಲು ಎಂಬಷ್ಟು ಅತಿಯಾದ ನಿಷ್ಠೆಯಿಂದ ದುಡಿದರು. ಆದರೆ ಮೋದಿಯವರು ಏರಬೇಕಾದ ಎತ್ತರವನ್ನು ಏರಿ ಮುಂದೆ ಸಾಗುತ್ತಿದ್ದಾರೆ. ಅವರಿಗಿಂತ ರಾಜಕೀಯದಲ್ಲಿ ಹಿರಿಯರಾದ ಇಬ್ರಾಹಿಂ ಸಾಹೇಬ್ರು ತಾನು ಇನ್ನೂ ಅನಾಥ ಎಂದು ರೋಽಸುತ್ತಿದ್ದಾರೆ. ಇದಕ್ಕೆಲ್ಲ ಯಾರು ಕಾರಣ?. ಅದಕ್ಕೇ ಹೇಳಿದ್ದು ಪಕ್ಷದಷ್ಟೇ ಮುಖ್ಯವಾಗಿ ಮತದಾರರನ್ನೂ ಓಲೈಸಿಕೊಂಡಿದ್ದರೆ ಕಡೆಯ ಪಕ್ಷ ಜನರಾದರೂ ಇವರನ್ನು ಕೈಬಿಡುತ್ತಿರಲಿಲ್ಲ.

ತಾನೊಬ್ಬ ಹಿಂದೂ ಧರ್ಮವನ್ನು ಆರಾಧಕ, ತಾನೊಬ್ಬ ವೇದಾಂತಿಯೆಂದು ತೋರಿಸಿಕೊಳ್ಳುವ ಭರದಲ್ಲಿ ತಮ್ಮಲ್ಲಿದ್ದ ಜ್ಞಾನ ಭಂಡಾರವೆಂಬ ಅಸಗಳನ್ನು ಕೆಲಸಕ್ಕೆ ಬಾರದ ಮುಖಗಳಿಗಾಗಿ ವ್ಯಂಗ್ಯವಾಗಿ, ಅಪಹಾಸ್ಯವಾಗಿ ಬಳಸಿ ಅತ್ತ ಹಿಂದೂಗಳ ಕೆಂಗಣ್ಣಿಗೂ ಗುರಿಯಾಗಿ, ಇತ್ತ ಮುಸಲ್ಮಾನರಿಗೂ ಪ್ರಿಯರಾಗದೆ ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರ ಕಾಲದಲ್ಲೇ ರಾಜಕೀಯದಲ್ಲಿ ಆಕರ್ಷಕ ವ್ಯಕ್ತಿಯಾಗಿ ಗುರುತಿಸಿಕೊಂಡ ವ್ಯಕ್ತಿ ಈಗ
ಈ ಇಳಿವಯಸ್ಸಿನಲ್ಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನಕ್ಕಾಗಿ ಗೋಗರೆಯುವಂಥ ಸ್ಥಿತಿಯಲ್ಲಿರುವುದು ದುರದೃಷ್ಟಕರ.

ಪಕ್ಕದ ಆಂಧ್ರದಲ್ಲಿ ನೋಡಿ,ಅಸಾವುದ್ದೀನ್ ಓವೈಸಿ ತನ್ನದೇ ಪಕ್ಷ ಕಟ್ಟಿಕೊಂಡು ದೇಶದ್ರೋಹದ ಮಾತುಗಳನ್ನಾಡುತ್ತ, ಬಹುಸಂಖ್ಯಾತ ಹಿಂದೂಗಳನ್ನು ಬೆದರಿ ಸುವ ಪ್ರಯತ್ನ ಮಾಡುತ್ತ ರಾಜಕೀಯವಾಗಿ ಭಸ್ಮಾಸುರನಂತೆ ಬೆಳೆಯುತ್ತಿದ್ದಾನೆ. ಆದರೆ ಸಕಲ ಧರ್ಮಗಳ ಸಾರವನ್ನು ಅರಿತು ಹಿಂದು ಧರ್ಮದ ತತ್ತ್ವವನ್ನು ಅರಗಿಸಿಕೊಂಡು ನಾಡುನುಡಿ ದೇಶವನ್ನೂ ಗೌರವಿಸಿಕೊಂಡು ಬಂದಿರುವ ಇಬ್ರಾಹಿಂ ಅವರು ಓವೈಸಿಯಂತೆ ಅಪಾಯಕಾರಿ ಮುಸ್ಲಿಮರಲ್ಲ. ಈ ಮಣ್ಣಿನ ಸಂಸ್ಕಾರದೊಂದಿಗೇ ಬೆಳೆದು ಬಂದ ನೈಜ ಭಾರತೀಯ. ಆದರೂ ಈ ಮಟ್ಟದ ಹಿನ್ನಡೆಯಾಗಿರುವುದು ಶೋಚನೀಯ. ಈಗ ಕಾಲ ಮಿಂಚಿ ಹೋಗಿದೆ. ವಯಸ್ಸು ಎಪ್ಪತ್ತಮೂರು.

ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವೂ ಉಳಿದಿಲ್ಲ. ಕನಿಷ್ಠ ಮುಸ್ಲಿಂ ಮತಗಳನ್ನು ಕ್ರೋಡೀಕರಿಸುವ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ. ಈಗ ನೋಡಿದರೆ ಪ್ರೇಮಿಗಳ ದಿನದಂದು ತೃಣಮೂಲ ಕಾಂಗ್ರೆಸ್, ಸಮಾಜವಾದಿಪಕ್ಷ ಅಥವಾ ಜೆಡಿಎಸ್ ಸೇರುವ ಬಗ್ಗೆ ತೀರ್ಮಾನಿಸುತ್ತೇನೆಂದು ಹೇಳಿದ್ದಾರೆ. ಅಸಲಿಗೆ ಯಾವ
ಪುರುಷಾರ್ಥಕ್ಕಾಗಿ ಈ ಪಕ್ಷಗಳಿಗೆ ಸೇರಬೇಕೆಂದು ಸ್ವತಃ ಇಬ್ರಾಹಿಂ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಯಾವ ಪಕ್ಷ ಸೇರಿದರೂ ಇವರಿಂದ ಆಯಾ ಪಕ್ಷಗಳಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ. ಇನ್ನು ಸಾಹೇಬ್ರಿಗೇನಾದರು ಲಾಭವಿದೆಯಾ ಎಂದು ನೋಡಿದರೆ ಸದ್ಯಕ್ಕೆ ಈ ಪಕ್ಷಗಳು ಚುನಾವಣೆ ಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿದು ಅದರಲ್ಲಿ ಸಾಹೇಬ್ರಿಗೆ ಉನ್ನತ ಸ್ಥಾನಮಾನ ನೀಡುತ್ತಾರೆಂಬುದು ಕನಸಿನ ಮಾತು.

ಎಸ್.ಎಂ.ಕಷ್ಣ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಮೋದಿಯವರ ನಾಯಕತ್ವಕ್ಕೆ ಮನಸೋತು ಇಷ್ಟು ವರ್ಷದ ರಾಜಕೀಯ ಪಯಣದಲ್ಲಿ ಅಂತಿಮ ದಿನಗಳನ್ನು ದೇಶದ ಪರವಾದ ನೈಜ ರಾಜಕೀಯಕ್ಕೆ ರಾಜಿಯಾಗಿ ಗೌರವದಿಂದ ಜೀವಿಸಬೇಕೆಂದು ತೀರ್ಮಾನಿಸಿ ದರು. ಗೂಬೆಯನ್ನು ನವಿಲೆಂದು, ಬೆಕ್ಕನ್ನು
ಹುಲಿಯೆನ್ನುವ ಭಟ್ಟಂಗಿತನವಾಗುತ್ತಿದೆ. ಅಯೋಗ್ಯರನ್ನು ಯೋಗ್ಯರೆಂದು, ಪಕ್ಷದ ಹೈಕಮಾಂಡ್ ಗಳಿಗೆ ಬಕೇಟು ಹಿಡಿದು ತನತನ-ಮುತ್ಸದ್ದಿತನ-ಸಾ
ಭಿಮಾನವನ್ನು ನಾಲಾಯಕ್ಕು ಮುಖಗಳಿಗೆ ವ್ಯಯಿಸಿ, ವಯಸ್ಸನ್ನು ಮೀರಿ ನಾಯಕಿಯ ಕಾಲಿಗೆರಗುವ ಮಹಾಕಾವ್ಯದ ವೀರನಂತೆ ಗುಲಾಮಗಿರಿಯಲ್ಲಿ ಬದುಕುವುದಕ್ಕಿಂತ ಮೋದಿಯಂಥ ದೇಶಸೇವಕನಿಗೆ ಬೆಂಬಲಿಸಿ ಮನೆಯಲ್ಲಿ ಕೂತು ಅಂತಿಮ ದಿನಗಳನು ಳೆಯುವುದೇ ಶ್ರೇಷ್ಠವೆಂದು ತಮ್ಮ ಘನತೆಯನ್ನು
ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ ಕಷ್ಣ ಅವರು.

ಇಂಥ ಮನಸ್ಥಿತಿಯಲ್ಲೇ ಇರುವ ಮತ್ತೊಬ್ಬ ಕಾಂಗ್ರೆಸಿಗನೆಂದರೆ ಗುಲಾಂ ನಬಿ ಅಜಾದ್ ಎಂಬ ಹಿರಿಯ ಮುತ್ಸದ್ದಿ. ಅಂತೆಯೇ, ‘ವೃದ್ಧನಾರೀ ಪತಿವ್ರತಾ’ ಎಂಬಂತೆ ಇಬ್ರಾಹಿಂ ಅವರೂ ಇದೀಗ ಆರ್‌ಎಸ್‌ಎಸ್ ವೈಚಾರಿಕತೆ ಯನ್ನು ಕೊಂಡಾಡುತ್ತಾ, ಭಾವನಾ ದೇಶಪಾಂಡೆ ಯವರಿಗೆ ನಡೆದಾಡಲು ಚಪ್ಪಲಿ ಇರಲಿಲ್ಲ, ಜಗನ್ನಾಥ ರಾವ್ ಜೋಷಿಯವರು ನಿಧನರಾದಾಗ ಆಸ್ಪತ್ರೆಯ ಬಿಲ್ ಭರಿಸಲು ಅವರಿಗೆ ಸಾಧ್ಯವಿರಲಿಲ್ಲ, ಅಂಥ ದೇಶಭಕ್ತರ ಜತೆಯಲ್ಲೂ ಕೆಲಸ ಮಾಡಿದ್ದೇನೆ, ನನಗೆ ಯಾರ ಮೇಲೂ ದೇಷವಿಲ್ಲ ಎಂದು ಹೇಳುವ ಮೂಲಕ ಇಬ್ರಾಹಿಂ ಅವರು ತಮ್ಮ ಅಂತಃಕರಣವನ್ನು ಪ್ರದರ್ಶಿಸಿದ್ದಾರೆ. ತಮ್ಮ ಸಿದ್ಧಾಂತ ಹಿರಿತನಕ್ಕಿಂತ ಹೆಚ್ಚಾಗಿ ಇಂದಿನ ರಾಜಕೀಯದಲ್ಲಿ ಚೋರು ಗುರು-ಚಾಂಡಾಳ ಶಿಷ್ಯರಂಥ ಕಳ್ಳರಿಗೆ ರೌಡಿ ಗೂಂಡಾಗಳಿಗೇ ಆದ್ಯತೆ ಎಂಬುದು ಬಹುಶಃ ಇಬ್ರಾಹಿಂ ಸಾಹೇಬರಿಗೆ ಈಗಲಾ ದರೂ ಅರ್ಥವಾಗಿರಬೇಕು.

ಇಬ್ರಾಹಿಂ ಅವರ ಒಂದು ಹೆಚ್ಚುಗಾರಿಕೆ ಎಂದರೆ ಇರುವ ಒಬ್ಬ ಮಗನನ್ನು ಎಲ್ಲರಂತೆ ರಾಜಕೀಯಕ್ಕೆ ತರದೆ, ಆತನಿಗೆ ಸ್ವತಂತ್ರವಾಗಿ ಬದುಕುವುದನ್ನು ಕಲಿಸಿ ಕೊಟ್ಟಿದ್ದಾರೆ. ಆದ್ದರಿಂದ ಇನ್ನಾದರೂ ಈ ಅಹಿಂದ,ಅಲಿಂದ ಎಂಬ ಕೆಲಸಕ್ಕೆ ಬಾರದ ಡೋಂಗಿ ಐಡಿಯಾಗಳನ್ನು ಬಿಟ್ಟು ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಬದುಕಿಗೆ ಒಂದು ತೂಕ ಮತ್ತು ಮುತ್ಸದ್ದಿತನಕ್ಕೆ ಮೌಲ್ಯವನ್ನು ತರುವಂಥ ಹೆಜ್ಜೆಗಳನ್ನಿಡಲಿ. ‘ನಾನೊಬ್ಬ ಅನಾಥ ನನ್ನನ್ನು ಕೈಬಿಡಬೇಡಿ’ ಎಂದು ಮಾಧ್ಯಮದವರ ಮುಂದೆ ಗೋಳಿಡುವುದಕ್ಕಿಂತ ತಮ್ಮ ರಾಜಕೀಯ ಬದುಕಿನ ಅನುಭವಗಳನ್ನು, ದಾರಿತಪ್ಪಿಸಿದ ನಾಯಕರನ್ನು, ಮೋಸ-ನಯ ವಂಚನೆ ಮಾಡಿದ ಪುಢಾರಿಗಳ ಅಸಹ್ಯ ಮುಖಗಳನ್ನು ಜನರ ಮುಂದೆ ತೆರೆದಿಡುವ ಕೆಲಸಮಾಡಲಿ. ಅದರಿಂದ ಕನಿಷ್ಠ ಮುಸಲ್ಮಾನರನ್ನು ಈ ಪಕ್ಷಗಳು ಹೇಗೆಲ್ಲ ಬಳಸಿಕೊಂಡಿವೆ, ಮುಸ್ಲಿಂರನ್ನು ವೋಟ್‌ಬ್ಯಾಂಕ್ ಮಾಡಿಕೊಂಡು ಹೇಗೆಲ್ಲ ದಾರಿತಪ್ಪಿಸಿದ್ದಾರೆ, ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಹೇಗೆಲ್ಲ ಕುಲಗೆಡಿಸಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡು ಕೊನೆಯ ದಿನಗಳ ಗೌರವ ಘನತೆಯನ್ನು ಹೆಚ್ಚಿಸಿಕೊಂಡು ಹೊಲಸು ರಾಜಕೀಯವನ್ನು ತಕ್ಕಮಟ್ಟಿಗೆ ಶುದ್ಧಮಾಡುವ ಮನಸ್ಸು ಮಾಡಲಿ. ಏಕೆಂದರೆ ಸಿ.ಎಂ.ಇಬ್ರಾಹಿಂ ಕೇವಲ ಸಾಬ್ರಲ್ಲ, ಸಾಹೇಬರು! ಅಷ್ಟರ ಮಟ್ಟಿಗೆ ನಾಡಿನಲ್ಲಿ ಅವರ ಮೇಲೆ ಗೌರವವಿದೆ.

error: Content is protected !!