ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ ನಂತರ ಮೇಲೆದ್ದ ಅಪಸ್ವರಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ
ಅವರಾಡುತ್ತಿರುವ ಒಂದು ಮಾತು ಎಲ್ಲರ ಕುತೂಹಲ ಕೆರಳಿಸಿದೆ.
ಸಂಪುಟ ವಿಸ್ತರಣೆಯ ವಿಷಯದಲ್ಲಿ ಯಾರಿಗಾದರೂ ಅಸಮಾಧಾನವಿದ್ದರೆ ನೇರವಾಗಿ ದಿಲ್ಲಿಗೆ ಹೋಗಿ ದೂರು ಕೊಡಲಿ. ಅದನ್ನು ತಡೆಯುವುದಿಲ್ಲ ಎಂಬುದು ಯಡಿಯೂರಪ್ಪ ಅವರ ಮಾತು. ಅಷ್ಟೇ ಅಲ್ಲ, ಈಗ ನಡೆದಿರುವುದರಲ್ಲಿ ಸರಿ ಯಾವುದು,
ತಪ್ಪು ಯಾವುದು ಎಂಬುದು ವರಿಷ್ಠರಿಗೆ ಗೊತ್ತಿದೆ. ಹಾಗೆಯೇ ನನಗೆ ಹೈಕಮಾಂಡ್‌ನ ಸಂಪೂರ್ಣ ಆಶೀರ್ವಾದವಿದೆ ಎಂದೂ ಯಡಿಯೂರಪ್ಪ ಹೇಳಿದ್ಧಾರೆ.
ಕರ್ನಾಟಕದ ರಾಜಕಾರಣದಲ್ಲಿ ಒಬ್ಬ ಮುಖ್ಯಮಂತ್ರಿ ಇಂತಹ ಮಾತುಗಳನ್ನು ಆಡಿರುವುದು ಅತ್ಯಂತ ವಿರಳ. ನಾಲ್ಕು ದಶಕಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾಯರು ಇಂತಹ ಮಾತುಗಳನ್ನಾಡುತ್ತಿದ್ದರು. ನೀವು ಏನೇ ಮಾಡಿದರೂ ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲಾರಿರಿ. ಅದೇ ರೀತಿ ಬಯಸಿದರೂ ನನ್ನನ್ನು ಈ ಹುದ್ದೆಯಲ್ಲಿ ಉಳಿಸಲಾರಿರಿ ಎಂದು ಅವರು ಸ್ವಪಕ್ಷದ ಶಾಸಕರಿಗೆ ಹೇಳುತ್ತಿದ್ದರು.
ಅವರು ಹೇಳುವುದರಲ್ಲಿ ಅರ್ಥವೂ ಇತ್ತು. ಯಾಕೆಂದರೆ ದೇವರಾಜ ಅರಸರ ಜಾಗಕ್ಕೆ ಬಂದು ಕೂರಲು ಗುಂಡೂರಾವ್ ಅವರಿಗಿದ್ದುದು ಪಕ್ಷದ ನಾಯಕಿ ಇಂದಿರಾ ಗಾಂಧಿಯವರ ಕಟಾಕ್ಷ ಮಾತ್ರ. ಹೀಗಾಗಿ ಇಂದಿರಾಗಾಂಧಿ ಬಯಸಿದಷ್ಟು ದಿನ ಈ ಜಾಗ
ದಲ್ಲಿರುತ್ತೇನೆ. ಇಲ್ಲದಿದ್ದರೆ ಕೆಳಗಿಳಿಯುತ್ತೇನೆ ಎಂಬುದು ಗುಂಡೂರಾಯರ ಮಾತಿನ ಹಿಂದಿದ್ದ ಧ್ವನಿಯಾಗಿತ್ತು. ಆದರೆ ಅವತ್ತು ಗುಂಡೂರಾಯರ ಮಾತುಗಳಲ್ಲಿದ್ದ ಧ್ವನಿ ಈಗ ಯಡಿಯೂರಪ್ಪ ಅವರ ಮಾತುಗಳ ಹಿಂದಿದೆ.
ವ್ಯತ್ಯಾಸ ವೆಂದರೆ ಗುಂಡೂರಾಯರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಲು ಹೈಕಮಾಂಡ್‌ನ ನೇರ ಆಶೀರ್ವಾದವಿತ್ತು.
ಆದರೆ ಯಡಿಯೂರಪ್ಪ ಜನರ ನಡುವಿನಿಂದ ಮೇಲೆದ್ದು ಬಂದ ನಾಯಕ. ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರದ ಗದ್ದುಗೆಗೇರಲು ಅವರೇ ನೇರ ಕಾರಣ. ಆದರೆ ಅಂಥವರೀಗ ಶಾಸಕರ ಅಪಸ್ವರ ಏಳುತ್ತಿದ್ದಂತೆಯೇ ಹೈಕಮಾಂಡ್ ಆಸರೆಯನ್ನು ಬಯಸುತ್ತಿದ್ಧಾರೆ. ಯಾಕೆ? ಎಂಬುದೇ ಸದ್ಯದ ಕುತೂಹಲ.
ಈ ಪ್ರಶ್ನೆಗೆ ಉತ್ತರ ಹುಡುಕಬೇಕೆಂದರೆ ಕಳೆದ ಬುಧವಾರ ನಡೆದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಆಳವಾಗಿ
ಗಮನಿಸಬೇಕು. ಹಾಗೆ ನೋಡಿದರೆ ಈ ಬಾರಿ ಸಂಪುಟ ವಿಸ್ತರಣೆ ಮಾಡುವಾಗ ಯಡಿಯೂರಪ್ಪ ಯಾರ‍್ಯಾರನ್ನು ಮಂತ್ರಿ ಮಾಡಿದರೋ?ಈ ಪೈಕಿ ಬಹುತೇಕರು ಸಹಜ ನ್ಯಾಯದ ಅಡಿಯ ಮಂತ್ರಿಗಳಾದವರು. ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಹಾಗೂ ಎಸ್.ಅಂಗಾರ ಅವರನ್ನು ಮಂತ್ರಿ ಮಂಡಲಕ್ಕೆ ಯಾವತ್ತೋ ಸೇರಿಸಬೇಕಿತ್ತು. ಸನ್ನಿವೇಶದ ಅನಿವಾರ್ಯತೆಯಿಂದ ಅದು
ಸಾಧ್ಯವಾಗಿರಲಿಲ್ಲ ಅಷ್ಟೇ.
ಇನ್ನು ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರಕಾರವನ್ನು ಪದಚ್ಯುತಗೊಳಿಸಿ ಬಿಜೆಪಿ ಸರಕಾರವನ್ನು ಅಸ್ತಿತ್ವಕ್ಕೆ ತರಲು ಕಾರಣರಾದವರಲ್ಲಿ ಎಂ.ಟಿ.ಬಿ.ನಾಗರಾಜ್ ಹಾಗೂ ಆರ್. ಶಂಕರ್ ಇದ್ದರು. ಹೀಗಾಗಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ವಿಷಯದಲ್ಲಿ ತಕರಾರು ಗಳಿರಲು ಸಾಧ್ಯವಿಲ್ಲ. ಉಳಿದಂತೆ ಮುರುಗೇಶ್ ನಿರಾಣಿ ಅವರು ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರ ಖುರ್ಚಿಗೇ ಗಡಪಾರೆ ಹಾಕಲು ಯತ್ನಿಸುತ್ತಿದ್ದವರು. ಸರಕಾರ ಬಂದ ಹೊಸತರಲ್ಲಿ ಪಂಚಮಸಾಲಿ ಲಿಂಗಾಯತರಾದ ತಮಗೆ ಮಂತ್ರಿಗಿರಿ ಸಿಗಬೇಕು ಎಂದು ಮುರುಗೇಶ್ ನಿರಾಣಿ ಹಲ ಪ್ರಯತ್ನಗಳನ್ನು ಮಾಡಿದ್ದರು.
ಆದರೆ ಅದೇನೇ ಮಾಡಿದರೂ ನಿರಾಣಿ ಅವರನ್ನು ಮಂತ್ರಿ ಮಾಡಲು ಯಡಿಯೂರಪ್ಪ ಒಪ್ಪಲಿಲ್ಲ.ಒಂದು ಸಲ ನಿರಾಣಿ ಸೇರಿದಂತೆ ಸಮುದಾಯದವರ ಪರವಾಗಿ ಸ್ವಾಮೀಜಿಯೊಬ್ಬರು ಬ್ಯಾಟಿಂಗ್ ಮಾಡಿದಾಗ ಖುದ್ದು ಯಡಿಯೂರಪ್ಪ ಅವರು ಆಕ್ರೋಶಗೊಂಡು ಕೂಗಾಡಿದ್ದರು. ಯಾವಾಗ ಈ ಘಟನೆ ನಡೆಯಿತೋ? ಇದಾದ ನಂತರ ಮುರುಗೇಶ್ ನಿರಾಣಿ ಅವರು
ಯಡಿಯೂರಪ್ಪ ಅವರ ವಿರುದ್ಧ ತಿರುಗಿ ಬಿದ್ದರು. ಹೀಗೆ ತಿರುಗಿ ಬಿದ್ದವರು ಬಹಿರಂಗವಾಗಿ ಹೋರಾಡದಿದ್ದರೂ ಆಳದಲ್ಲಿ ಕೆಲಸ ಮಾಡುತ್ತಲೇ ಹೋದರು.
ನೀವು ಮಂತ್ರಿಯಾಗದಿದ್ದರೇನು? ಮುಖ್ಯಮಂತ್ರಿಯೇ ಆಗಿ ಎಂದು ಅವರ ಆಪ್ತರು ನೀಡಿದ ಸಲಹೆಯನ್ನು ನಿರಾಣಿ ಗಂಭೀರವಾಗಿ
ಪರಿಗಣಿಸಿದರು ಎಂಬುದು ಅವರ ಆಪ್ತರ ಮಾತು. ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ನಿರಂತರ ಯತ್ನಗಳು ನಡೆದೇ ಇದ್ದವಲ್ಲ? ಈ ಸಂದರ್ಭದಲ್ಲಿ ತಾವೇ ಭವಿಷ್ಯದ ಬಿಜೆಪಿ ನಾಯಕರಾಗಬಹುದು ಎಂದು ಮುರುಗೇಶ್ ನಿರಾಣಿ ಕನಸು ಕಂಡರು.
ಇದಕ್ಕೆ ಪೂರಕವಾಗಿ ರಾಜಕೀಯ ವಲಯಗಳಲ್ಲಿ ಒಂದು ಮಾತು ಕೇಳಿ ಬಂದಿತ್ತು: ಯಡಿಯೂರಪ್ಪ ಅವರ ನಂತರ ಪಕ್ಷಕ್ಕೆ ಅಗತ್ಯವಾದ ಶಕ್ತಿ ತುಂಬಲು ಮುರುಗೇಶ್ ನಿರಾಣಿ ಅವರಷ್ಟು ಸಮರ್ಥರು ಯಾರಿzರೆ? ಎಂಬುದು ಈ ಮಾತು. ಈ ಮಾತಿಗೆ ಹೆಚ್ಚು ಶಕ್ತಿ ಸಿಗಲಿಲ್ಲ ಎಂಬುದು ಬೇರೆ ಮಾತು. ಆದರೆ ಯಡಿಯೂರಪ್ಪ ಅವರನ್ನು ಪದಚ್ಯುತ ಗೊಳಿಸಬೇಕು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬಂದಾಗಲೆಲ್ಲ ಅದರ ಹಿಂದೆ ನಿರಾಣಿಯವರ ನೆರಳೂ ಕಾಣುತ್ತಿತ್ತು ಎಂಬುದು ಮಾತ್ರ ಸುಳ್ಳಲ್ಲ. ಹೀಗೆ ತಮ್ಮ ಖುರ್ಚಿಯ ಮೇಲೇ ಕಣ್ಣಿಟ್ಟಿದ್ದ ಮುರುಗೇಶ್ ನಿರಾಣಿ ಅವರನ್ನು ಯಡಿಯೂರಪ್ಪ ತಮ್ಮ ಸಂಪುಟಕ್ಕೇಕೆ ಸೇರಿಸಿ ಕೊಂಡರು ಎಂಬುದಕ್ಕೂ ಕಾರಣಗಳನ್ನು ಕೊಡಬಹುದು.
ಅದೆಂದರೆ: ಮುರುಗೇಶ್ ನಿರಾಣಿ ಪಂಚಮಸಾಲಿ ಲಿಂಗಾಯತರು. ಇದೇ ಒಳಪಂಗಡದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಳೆದ ಹಲ ಕಾಲದಿಂದ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಹೋರಾಡುತ್ತಾ ಬಂದಿದ್ಧಾರೆ. ಕುತೂಹಲದ ಸಂಗತಿ ಎಂದರೆ ಸರಕಾರ ಬಂದ ಹೊಸತರಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿಯೇ ಇದ್ದರು.
ಒಂದು ಸಂದರ್ಭದಲ್ಲಿ: ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಹೈಕಮಾಂಡ್ ಪ್ರಯತ್ನಿಸುತ್ತಿದೆ. ಹಾಗೇನಾದರೂ
ಮಾಡಿದರೆ ಪಕ್ಷ ಗಂಭೀರ ಅಪಾಯವನ್ನು ಎದುರಿಸಲಿದೆ ಎಂದು ಇದೇ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.
ಆದರೆ ಅದೇಕೋ ಏನೋ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿಷಯದಲ್ಲಿ ಯಡಿಯೂರಪ್ಪ ಅವರು ಮೃದುವಾಗಲೇ ಇಲ್ಲ. ಬದಲಿಗೆ ಯತ್ನಾಳ್ ಅವರನ್ನು ಮಂತ್ರಿ ಮಾಡುವುದಿರಲಿ, ಅವರ ಕ್ಷೇತ್ರಕ್ಕೆ ಸರಕಾರದಿಂದ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿರಲಿಲ್ಲ.
ಇದು ಸಹಜವಾಗಿಯೇ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೆರಳಿಸಿತು. ಹೀಗಾಗಿಯೇ ಅವರು ಯಡಿಯೂರಪ್ಪ ಅವರ ವಿರುದ್ಧ ಮುಗಿಬಿದ್ದರು. ಅಂದ ಹಾಗೆ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೆಲ ಶಕ್ತಿಗಳು ಉದ್ದೇಶಪೂರ್ವಕವಾಗಿ
ಯಡಿಯೂರಪ್ಪ ಅವರಿಂದ ದೂರ ಮಾಡಿದವು ಎಂಬ ಮಾತಿದೆ.
ಅದೇನೇ ಇರಲಿ, ಒಟ್ಟಿನಲ್ಲಿ ಅವತ್ತು ಯಡಿಯೂರಪ್ಪ ಅವರ ವಿರುದ್ಧ ತಿರುಗಿ ಬಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ದಿನ ಕಳೆದಂತೆ ಹೆಚ್ಚೆಚ್ಚು ಪ್ರಬಲವಾಗಿ ಹೋರಾಟ ನಡೆಸುತ್ತಲೇ ಬಂದಿದ್ಧಾರೆ. ಅವರ ಈ ಹೋರಾಟಕ್ಕೆ ಪಂಚಮಸಾಲಿ ಲಿಂಗಾಯತರ
ಸಾರಾಸಗಟು ಬೆಂಬಲ ಮುಂದುವರಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಕಾರಣಕ್ಕಾಗಿ ಅದೇ ಸಮುದಾಯದ
ಮುರುಗೇಶ್ ನಿರಾಣಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಲಾಯಿತು ಎಂಬುದು ಒಂದು ವಾದ.
ಹೀಗಾಗಿ ಮುರುಗೇಶ್ ನಿರಾಣಿ ಅವರ ಸಂಪುಟ ಸೇರ್ಪಡೆ ವಿಷಯದಲ್ಲಿ ಅಪಸ್ವರಗಳಿವೆಯಾದರೂ ತುಂಬ ದೊಡ್ಡ ತಕರಾರು ಗಳೇನಿಲ್ಲ. ಆದರೆ ಸಿ.ಪಿ. ಯೋಗೇಶ್ವರ್ ಅವರನ್ನು ಯಾವ ಕಾರಣಕ್ಕಾಗಿ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಲಾಯಿತು?ಎಂಬುದು ಸದ್ಯಕ್ಕೆ ದೊಡ್ಡ ಚರ್ಚೆಯ ವಿಷಯ. ಈ ವಿಷಯವೇ ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ಬಹುತೇಕ ಶಾಸಕರು ತಿರುಗಿ ಬೀಳಲು ಕಾರಣ.
ಗಮನಾರ್ಹ ಸಂಗತಿ ಎಂದರೆ ಮಂತ್ರಿ ಮಂಡಲ ವಿಸ್ತರಣೆಯ ನಂತರ ಆಕ್ರೋಶ ವ್ಯಕ್ತಪಡಿಸುತ್ತಿರುವವರ ಪೈಕಿ ಬಹುತೇಕರಿಗೆ ತಮಗೆ ಮಂತ್ರಿಗಿರಿ ಸಿಗಲಿಲ್ಲ ಎಂಬುದು ಹೇಗೆ ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಯೋಗೇಶ್ವರ್ ಅವರಂತವರಿಗೆ ಅವಕಾಶ
ಸಿಗುತ್ತದೆ. ನಮ್ಮಂಥವರಿಗೇಕಿಲ್ಲ ಎಂಬ ಸಿಟ್ಟಿದೆ.
ಅಂದ ಹಾಗೆ ಈ ಎಲ್ಲರ ಮುಖ್ಯ ಪ್ರಶ್ನೆಯೆಂದರೆ: ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಇದ್ದ ಮಾನದಂಡವೇನು? ಎಂಬುದು. ಈ ಪ್ರಶ್ನೆಯ ಜತೆ, ಜತೆಗೇ ಹಲವು ಅನುಮಾನಗಳು ಮೇಲೆದ್ದು ಗಿರಕಿ ಹೊಡೆಯುತ್ತಿವೆ. ಯೋಗೇಶ್ವರ್ ಅವರು
ಯಾವುದೋ ಸಿಡಿಯನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿ ಮಂತ್ರಿಯಾದರು ಎಂಬುದು ಬಹುತೇಕರ ಆರೋಪ.
ಆ ವಿಷಯವೇ ರಾಜ್ಯ ಬಿಜೆಪಿಯಲ್ಲಿ ವರ್ಣರಂಜಿತ ಚರ್ಚೆಗಳಿಗೆ ಮೂಲವಾಗಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪ್ರಕಾರ: ಈ ಸಿಡಿಯಲ್ಲಿ ಯಡಿಯೂರಪ್ಪ ಅವರ ಸರಕಾರದ ಭ್ರಷ್ಟಾಚಾರದ ಪ್ರಕರಣದಿಂದ ಹಿಡಿದು, ನೋಡಲು ಆಗದಂತಹ ವಿಷಯಗಳಿವೆ.
ಇದೇ ರೀತಿ ಎಚ್. ವಿಶ್ವನಾಥ್ ಅವರು ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಂದು ನನಗೆ ಕಳಿಸಿದ್ದ ಪಾರ್ಟಿ ಫಂಡನ್ನು ನುಂಗಿದವರು ಯೋಗೇಶ್ವರ್. ಹಾಗೆಯೇ ಮೆಗಾಸಿಟಿ ಯೋಜನೆಯ ಮೂಲಕ ಅಮಾಯಕರನ್ನು ವಂಚಿಸಿದವರು ಯೋಗೇಶ್ವರ್. ಇವರ ಬ್ಲ್ಯಾಕ್ ಮೇಲ್‌ಗೆ ಮಣಿದು ಮಂತ್ರಿ ಮಾಡಲಾಗಿದೆ ಎಂದು ಆರೋಪಿಸುತ್ತಿದ್ಧಾರೆ.
ಈ ಮಧ್ಯೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ದೆಹಲಿಗೆ ಹೋಗಿ ವರಿಷ್ಠರ ಬಳಿ ಯೋಗೇಶ್ವರ್ ವಿರುದ್ಧ ದೂರು ನೀಡಿ ಬಂದಿzರೆ ಎಂಬುದು ಸದ್ಯದ ಮಾತು. ಪರಿಣಾಮ? ಬಿಜೆಪಿಯ ಆಳದಿಂದ ಮೇಲೆದ್ದ ರಾಡಿ.
ಖುದ್ದು ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಸಿಲುಕಿಸಿದೆ. ಹೀಗಾಗಿಯೇ ಅವರು ಸಂಪುಟ ವಿಸ್ತರಣೆಯಿಂದ ಯಾರಿಗೆ ಅಸಮಾಧಾನವಾಗಿದೆಯೋ? ಅವರು ದೆಹಲಿಗೆ ಹೋಗಿ ದೂರು ಕೊಡಲಿ ಎನ್ನುತ್ತಿದ್ಧಾರೆ.
ಅದರ ಬೆನ್ನ ನನಗೆ ಹೈಕಮಾಂಡ್‌ನ ಸಂಪೂರ್ಣ ಆಶೀರ್ವಾದವಿದೆ ಎನ್ನುತ್ತಿzರೆ. ಕಳೆದ ಒಂದೂವರೆ ವರ್ಷಗಳಲ್ಲಿ ಯಾವತ್ತೂ ಇಂತಹ ಮಾತುಗಳನ್ನಾಡದ ಯಡಿಯೂರಪ್ಪ ಈಗ ಇದ್ದಕ್ಕಿದ್ದಂತೆ ಏಕೆ ಅಂತಹ ಮಾತುಗಳನ್ನಾಡುತ್ತಿದ್ದಾರೆ ? ಎಂಬುದೇ ಸದ್ಯದ ಕುತೂಹಲ. ಅರ್ಥಾತ್, ಪಕ್ಷದಲ್ಲಿ ನಡೆಯುತ್ತಿರುವ ಗೊಂದಲಗಳು ಅವರಲ್ಲಿ ಅತಂಕ ಮೂಡಿಸಿವೆಯೇ? ಯಾಕೆಂದರೆ ಈ ಬಾರಿ
ಅವರು ಅಽಕಾರಕ್ಕೆ ಬಂದ ಮೇಲೆ ಒಳಗಿಂದೊಳಗೇ ಯಾರೇ ಅವರ ವಿರುದ್ಧ ಕೆಲಸ ಮಾಡಿರಬಹುದು.
ಆದರೆ ಹೀಗೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುವ ಮಟ್ಟಕ್ಕೆ ಹೋಗಿರಲಿಲ್ಲ. ಎಲ್ಲಿಯವರೆಗೆ ಶಾಸಕರ ಅಸಮಾಧಾನ ಗುಪ್ತ್ ಗುಪ್ತ್ ಆಗಿತ್ತೋ? ಅಲ್ಲಿಯವರೆಗೂ ಯಡಿಯೂರಪ್ಪ ಅವರು ಅಳುಕುವ ಅನಿವಾರ್ಯತೆಯೇ ಇರಲಿಲ್ಲ. ಆದರೆ ಈ ಬಾರಿ ಮೇಲೆದ್ದಿರುವ ಶಾಸಕರ ಅಸಮಾಧಾನವನ್ನು ಯಡಿಯೂರಪ್ಪ ಸರಳವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಅವರು ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಹೈಕಮಾಂಡ್ ಕಡೆ ಬೆರಳು ತೋರಿಸುತ್ತಿದ್ದಾರೆ.
ಕುತೂಹಲದ ಸಂಗತಿ ಎಂದರೆ ಯಡಿಯೂರಪ್ಪ ಅವರು ಈ ಮಟ್ಟದಲ್ಲಿ ಆಸರೆ ಬಯಸುತ್ತಿದ್ದರೂ ಹೈಕಮಾಂಡ್ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಹಾಗೊಂದು ವೇಳೆ ಸ್ಪಂದಿಸಿದ್ದಿದ್ದರೆ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತದ ಧ್ವನಿಗಳನ್ನು ಅದು ಅಡಗಿಸಿಬಿಡುತ್ತಿತ್ತು. ಆದರೆ ಅದೇಕೋ ಈ ವಿಷಯದಲ್ಲಿ ಮೌನವಾಗಿದೆ.
ಅರ್ಥಾತ್, ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ ಅವರಿಗೆ ನೀಡಿದ ಅವಕಾಶ ಯಡಿಯೂರಪ್ಪ ಅವರ ಯೋಗ ಹೇಗಿದೆ? ಎಂಬುದನ್ನು ಕಾದು ನೋಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಹೀಗಾಗಿ ಸದ್ಯದ ಪರಿಸ್ಥಿತಿಗೂ, ಯಡಿಯೂರಪ್ಪ ಅವರು ಹೈಕಮಾಂಡ್ ಆಸರೆ ಬಯಸುತ್ತಿರುವುದಕ್ಕೂ ಒಂದು ಸಂಬಂಧವಿದೆ ಎಂಬುದಂತೂ ಸ್ಪಷ್ಟ