ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ಹೇಳಿಕೊಳ್ಳಲು ಮಾತ್ರ ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ನಾಲ್ಕು ಬಾರಿ ಮುಖ್ಯಮಂತ್ರಿಯಾದವರೆಂಬ
ದಾಖಲೆಯನ್ನು ಬರೆದರು. ಆದರೆ ನಾಲ್ಕೂ ಬಾರಿಯ ಅಧಿಕಾರವೂ ಮುಳ್ಳಿನ ಹಾಸಿಗೆಯೇ ಆಗಿತ್ತು. ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಜೆಡಿಎಸ್ ಪಕ್ಷ ದೊಂದಿಗೆ ಏಗುವುದೇ ಒಂದು ಶಾಪವಾಗಿ ‘ವಚನಭ್ರಷ್ಟ’ ಎಂಬ ಪದಕ್ಕೆ ಜನ್ಮನೀಡಿ ರಾಜೀನಾಮೆ ಬಿಸಾಡಿ ಬರಬೇಕಾಯಿತು.
ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಶಾಸಕರ ಮಂತ್ರಿಗಳ ಹಗರಣಗಳ ಧಾರಾವಾಹಿಯಾಗಿ ಆಗಲೂ ಪೂರ್ಣ ಪ್ರಮಾಣದ ಅಧಿಕಾರವನ್ನು ಅನುಭವಿಸ ಲಾಗದಂತಾಯಿತು. ಇನ್ನು ಮೂರನೇ ಬಾರಿ ಎರಡು ದಿನಗಳಿದ್ದರೂ ಅದೊಂದು ಭಯಾನಕ ಉದ್ವೇಗದ ದಿನಗಳಾಗಿತ್ತು. ಆದರೆ ನಾಲ್ಕನೇ ಬಾರಿಗೆ ಮುಖ್ಯ ಮಂತ್ರಿಯಾಗಿ ನೆಮ್ಮದಿಯಿಂದ ಸರಕಾರವನ್ನು ಟೇಕಾ- ಮಾಡಲೂ ಸಾಧ್ಯವಾಗಲೇ ಇಲ್ಲ.
ಅದ್ಯಾಕೋ ಏನೋ ಹೈಕಮಾಂಡ್‌ನಿಂದಲೇ ಹೆಚ್ಚು ಅಸಹಕಾರ ಚಳವಳಿಯನ್ನು ಎದುರಿಸಬೇಕಾಯಿತು. ಒಂದೆಡೆ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹವಾದಾಗ ತಮ್ಮದೇ ಪಕ್ಷ ಅಽಕಾರದಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಕೇಂದ್ರದಿಂದ ನ್ಯಾಯಯುತವಾಗಿ ಬರಪರಿಹಾರ ಸಿಗಲೇ ಇಲ್ಲ. ಇನ್ನೊಂದೆಡೆ ಸಂಪುಟ ವಿಸ್ತರಣೆ ಮಾಡುವುದಕ್ಕೂ ಅನುಮತಿ ನೀಡಲು ವರ್ಷಾನುಗಟ್ಟಲೆ ಸತಾಯಿಸಿಕೊಂಡು ಬಂದ ಕೇಂದ್ರದ ವರಿಷ್ಠರು ಯಡಿಯೂರಪ್ಪನವರನ್ನು ದಾರಿತಪ್ಪಿದ ಮಗನಂತೆಯೇ ಕಂಡರು. ಸರಿ, ಅದೂ ನಡೆದುಹೋಗಿ ಸಂಪೂರ್ಣ ಮಂತ್ರಿಮಂಡಲವನ್ನು ಕಟ್ಟಿಕೊಂಡು ಹೊರಟಾಗ ಕಂಟಕವಾಗಿ ಬಂದದ್ದೇ ಕರೋನಾ ಆಕ್ರಮಣ.
ಯಾವ ಮುಂಜಾಗ್ರತೆಗೆ, ಪೂರ್ವಸಿದ್ಧತೆಗೆ ಅವಕಾಶವಿಲ್ಲದಂತೆ ವಕ್ಕರಿಸಿದ ಕರೋನಾವನ್ನು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ನಿಯಂತ್ರಿಸುವುದಿರಲಿ, ನುರಿತ ವೈದ್ಯರುಗಳೇ ತ್ವರಿತವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೇಂದ್ರ ಸರಕಾರ ಲಾಕ್‌ಡೌನ್ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸದೇ ಇದ್ದಿದ್ದರೆ ನಮ್ಮ ದೇಶದ ಗತಿ ಅದೇನಾಗುತ್ತಿತ್ತೋ ಏನೋ. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪನವರೊಂದಿಗೆ ಅನೇಕ ಸಚಿವರು ಕರೋನಾ ಬಾಽತರಾಗಿಯೂ ಮೊದಲನೇ ಅಲೆಯನ್ನು ದಾಟಿ ಬಂದರು. ಅದರಲ್ಲೂ ವಿರೋಧ ಪಕ್ಷಗಳಿಂದ ಹಗರಣಗಳ ಆಪಾದನೆಗಳು, ಖಾತೆ ಬದಲಾವಣೆ ಗಳು, ಮುನಿಸು, ಬಂಡಾಯ, ಪಕ್ಷವಿರೋಧಿ ನಡೆಗಳು, ಸಿಡಿಲೇಡಿ ಪ್ರಕರಣ, ಮಠಾಧೀಶರ ಪಾದಯಾತ್ರೆಗಳು, ಪ್ರತಿಭಟನೆಗಳು, ಸರಕಾರಿ ಸಂಸ್ಥೆಯಾದ ಸಾರಿಗೆ ಇಲಾಖೆ ನೌಕರರಿಂದ ಮುಷ್ಕರ, ರೈತರ ಹೆಸರಿನಲ್ಲಿ ನಡೆದ ನಕಲಿ ನಾಯಕರ ಹಾರಾಟ, ಇದೆಲ್ಲವೂ ಮುಗಿಯಿತು ಎನ್ನುತ್ತಿದ್ದಂತೆ ಬಂದದ್ದು ಕರೋನಾ ಎರಡನೇ ಅಲೆಯ ಅಬ್ಬರ.
ಹೀಗೆ ಯಡಿಯೂರಪ್ಪನವರು ಅಷ್ಟು ಸುಲಭವಾಗಿ ಎರಡು ವರ್ಷಗಳನ್ನು ಪೂರೈಸಲಿಲ್ಲ. ಈ ಎರಡು ವರ್ಷಗಳ ಆಡಳಿತದಲ್ಲಿ ಯಡಿಯೂರಪ್ಪನವರಿಗೆ ಕರೋನಾ ಕ್ಕಿಂತಲೂ ಹೆಚ್ಚು ಪರಿಣಾಮ ಬೀರಿದ್ದು ಸಂಪುಟ ವಿಸ್ತರಣೆ ಮತ್ತು ವಲಸಿಗರು, ಮೂಲ ಶಾಸಕರು ಎಂಬ ತಿಕ್ಕಾಟ ಮತ್ತು ಅದಕ್ಕೆ ಪೂರಕವಾದ ಅಸಹಕಾರ ಹೈಕಮಾಂಡ್‌ನಿಂದ. ಕಳೆದ ಆರು ತಿಂಗಳಿಂದ ನಾಯಕತ್ವ ಬದಲಾವಣೆಯೆಂಬುದೇ ಆಡಳಿತವನ್ನು ಬಲಹೀನಗೊಳಿಸಿತ್ತು. ಈಗ ಯಡಿಯೂರಪ್ಪನವರ ನಿರ್ಗಮನವಾಗಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿ ಇವೆ ವಿಚಾರಗಳು ಒಂದು ಹಂತಕ್ಕೆ ಬಂದು, ಬಾಕಿ ಉಳಿದಿರುವ ಇನ್ನೆರಡು ವರ್ಷಗಳು ನಾಡಿನಲ್ಲಿ ಸಂಪೂರ್ಣ ಜನಪರವಾದ ಅಭಿವೃದ್ಧಿ ಪರವಾದ ಆಡಳಿತವನ್ನು ನೀಡಲೇಬೇಕಾದ ಅನಿವಾರ್ಯತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸರಕಾರ ಮತ್ತು ಸಂಘಪರಿವಾರದ ಮೇಲಿದೆ.
ಆದರೆ ಈಗ ಸಂಪುಟ ಪುನಾರಚನೆಯೆಂಬ ಪ್ರಕ್ರಿಯೆ ಅಷ್ಟು ಸುಲಭವಾದ ಪ್ರಹಸವಲ್ಲವೆಂಬ ಮುನ್ಸೂಚನೆ ಗೋಚರಿಸುತ್ತಿದೆ. ಏಕೆಂದರೆ ಸರಕಾರ ಅಸ್ತಿತ್ವಕ್ಕೆ ಬರಲು ಪರೋಕ್ಷ ಕಾರಣರಾದರು ಮಿತ್ರಮಂಡಳಿಯ ತಂಡ, ಹಠಕ್ಕೆ ಬಿದ್ದಿರುವ ರೇಣುಕಾಚಾರ್ಯರಂಥ ಗುಂಪು, ಯಡಿಯೂರಪ್ಪನವರನ್ನು ವಿರೋಧಿಸಿಕೊಂಡೇ ಬಂದ ಬಸನಗೌಡ ಪಾಟೀಲ್ ಯತ್ನಾಳ್ ಗುಂಪು. ಯಡಿಯೂರಪ್ಪ ನವರ ಆದ್ಯತೆ ಮೇರೆಗೆ ನಿಲ್ಲುವ ಒಂದು ಗುಂಪು ಮತ್ತು ಸಂಘ ಪರಿವಾರದ ವಿಶ್ವಾಸ ಗಳಿಸಿ ರುವ ಒಂದು ಗುಂಪು.
ಹೀಗೆ ಇವೆಲ್ಲವನ್ನೂ ಸರಿದೂಗಿಸಿಕೊಂಡು ಸರಕಾರವನ್ನು ಅಭಿವೃದ್ಧಿ ಪ್ರಗತಿ ಜನಸ್ನೇಹಿಯಾಗಿ ನಡೆಸಿಕೊಂಡು ಹೋಗುವುದು ಬೊಮ್ಮಾಯಿಯವರಿಗೆ ಒಂದು ದೊಡ್ಡ ಸವಾಲಾಗಿ ನಿಂತಿದೆ. ಹೀಗಾಗಿ ಸಂಪುಟ ವಿಸ್ತರಣೆ ಎಂಬುದು ಒಂದು ರೀತಿಯ ಟೈಂ ಬಾಂಬ್’ ಇದ್ದಂತೆ. ಈಗ ಅದು ಸಿಡಿಯದಿದ್ದರೂ ಅತೃಪ್ತ ಆತ್ಮವಾಗಿ ಒಂದು ದಿನ ಸಿಡಿಯುವುದಂತೂ ನಿಶ್ಚಿತ. ಹೀಗೆ ಇರುವ ಮೂವತ್ತು ನಲವತ್ತು ಖಾತೆಗಳಿಗೆ ಮತ್ತೇ ಕ್ಯಾತೆಗಳು ಶುರುವಾಗಿ ಹೊಸಾ ಸರಕಾರ ಟೇಕಾಫ್ ಆಗದಿದ್ದರೆ ಬಿಜೆಪಿ ಇನ್ನು ಭವಿಷ್ಯದಲ್ಲಿ ಚುನಾವಣೆ ಎದುರಿಸಲು ಮುಖವಿಲ್ಲದಂತೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಆಗೊಮ್ಮೆ ಹಾಗೇಯೇ ಏನಾದರೂ ಆದರೆ ಅದಕ್ಕೆ ಸಂಘ ಪರಿವಾರದ ಪಾತ್ರವೂ ಜತೆಯಾಗಿ ಪಕ್ಷ ಮತ್ತು ಸರಕಾರದ ಕಳಂಕವನ್ನು ಹೊರಬೇಕಾಗುತ್ತದೆ.
ಸಂಘದ ಕುರಿತು ಯಾರು ಏನೇ ಅಪವಾದ ಮಾಡಿದರೂ ಅದು ಗುರುವಿನಂತೆ ಬೆತ್ತ ಹಿಡಿದು ಹಿಂದೆ ನಿಂತು ಬಿಜೆಪಿ ಸರಕಾರದ ಕ್ರಮಗಳನ್ನು ತಪ್ಪು ಸರಿಗಳನ್ನು ತಿದ್ದುವುದು ತಪ್ಪೇನಲ್ಲ. ಏಕೆಂದರೆ ಸಂಘದ ನೀತಿಗಳು ಆರೋಗ್ಯಕರ ಸಮಾಜ ಮತ್ತು ದೇಶವನ್ನು ಕಟ್ಟುವುದೇ ಆಗಿರುತ್ತದೆ ಹೊರತು ನೀಚರನ್ನು ಭ್ರಷ್ಟರನ್ನು ಪಾಲನೆ ಮಾಡುವುದಲ್ಲ.
ಸಂಘಪರಿವಾರದ ಹಿರಿಯರು ತಮಗೆ ಹತ್ತಿರವಿರುಷ್ಟುವ ಮಂದಿಗಳನ್ನೇ ಅಪ್ಪಿಕೊಂಡು ಅವರ ಪರವಾಗೇ ಕೂರದೆ ಬಿಜೆಪಿಯ ಅಷ್ಟೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಮೆಚ್ಚುವಂಥ ಆಡಳಿತಕ್ಕೆ ನಿರಂತರ ಮತ್ತು ಪ್ರಾಮಾಣಿಕ ಜವಾಬ್ದಾರಿಯನ್ನು ಹೊರಬೇಕಾಗಿದೆ. ಮುಖ್ಯವಾಗಿ ಈ ಸರಕಾರವೇನು ಸಮ್ಮಿಶ್ರ ಸರಕಾರವೇನಲ್ಲ. ಎಲ್ಲರೂ ಬಿಜೆಪಿ ಪಕ್ಷದಿಂದ ಗೆದ್ದು ಬಂದಿರುವವರೇ ಆಗಿದ್ದಾರೆ. ಆದ್ದರಿಂದ ಭವಿಷ್ಯದಲ್ಲಿ ತಮ್ಮ ಪಕ್ಷವನ್ನು ಉಳಿಸಿಕೊಳ್ಳಬೇಕಾದರೆ ಪ್ರತೀ ಶಾಸಕರಿಗೂ ನಿಗಧಿತವಾಗಿ ‘ಸಾಂಕ’ವನ್ನು ಏರ್ಪಡಿಸಿ ಹದ್ದುಬಸ್ತಿನಲ್ಲಿ ಟ್ಟುಕೊಳ್ಳುವ ಕರ್ತವ್ಯವನ್ನು ನಿಭಾಯಿಸಲೇ ಬೇಕಿದೆ.
ಇನ್ನು ಬಿಜೆಪಿಯ ಪ್ರತಿಯೊಬ್ಬ ಶಾಸಕನೂ ಮಂತ್ರಿ ಪದವಿ ಅಲಂಕರಿಸುವುದೇ ಅಂತಿಮ ಗುರಿ, ಸಾರ್ಥಕತೆಯಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ನಮ್ಮ ಈಡೇರಿಕೆಗಿಂತ ಸರಕಾರ, ಸಮಾಜ, ದೇಶ ಮೊದಲು ಎಂಬುದನ್ನು ದೇವರ ಆಜ್ಞೆಯಂತೆ ಭಾವಿಸಬೇಕಿದೆ. ಈಗಾಗಲೇ 2008ರಲ್ಲಿ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಕಂಡ ಅಧೋಗತಿಯನ್ನು ಜನ ನೋಡಿ ಬೇಸತ್ತಿದ್ದಾರೆ. ಮೂವರು ಮುಖ್ಯಮಂತ್ರಿಗಳು ಶಾಸಕರ ಹಗರಣ ಗಳು ಆಪರೇಷನ್‌ಗಳು ಜೈಲುಪಾಲುಗಳು ಬಿಜೆಪಿಯನ್ನು ಕಂಳಕಗೊಳಿಸಿತ್ತು. ಅದೆ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಬೇಕಾದ ನೈತಿಕ ಸಾಮಾಜಿಕ ಹೊಣೆಗಾರಿಕೆ ಇಂದಿನ ಸರಕಾರದ ಶಾಸಕರ ಮೇಲಿದೆ.
ಈಗಾಗಲೇ ಮಾತಿಗೆ ತಪ್ಪದ ರಾಜಾಹುಲಿ ಎಂದು ಕರೆಸಿಕೊಂಡಿರುವ ಯಡಿಯೂರಪ್ಪನವರು ಅತಿಥಿ ಶಾಸಕರನ್ನು ಗೆಲ್ಲಿಸಿಕೊಂಡು ಬಂದು ಅವರಿಗೆ ಮಂತ್ರಿ ಪದವಿಯನ್ನು ನೀಡಿzರೆ. ಅವರುಗಳೂ ಅಷ್ಟೇ, ತಾವುಗಳು ಮಿತ್ರಮಂಡಳಿಯವರು ರೆಬಲ್‌ಗಳು ಎಂದೆಲ್ಲವನ್ನೂ ಬಿಟ್ಟು ಸರಕಾರದ ಸ್ಥಿರತೆಗೆ ಆದ್ಯತೆಕೊಟ್ಟು ತಮ್ಮ ಕ್ಷೇತ್ರಗಳ ಮತದಾರರುಗಳ ವಿಶ್ವಾಸವನ್ನು ಉಳಿಸಿಕೊಂಡರಷ್ಟೇ ಸಾಕು. ಮುಂದೆ ಅವರ ಯೋಗ್ಯತೆ ಘನತೆಗೆ ತಕ್ಕಂತೆ ಅವಕಾಶಗಳು ಸಿಗುತ್ತದೆ.
ಶಾಸಕನೊಬ್ಬ ಹೇಗಾದರು ಏನಾದರು ಮಾಡಿ ಗೆದ್ದು ಬರಬಹುದು. ಆದರೆ ಸರಕಾರವೆಂಬುದು ಸಂವಿಧಾನಾತ್ಮಕವಾದದ್ದು.
ಪ್ರತಿಯೊಂದಕ್ಕೂ ಯೋಗ್ಯತೆ ಅರ್ಹತೆಯನ್ನು ಅದು ಬೇಡುತ್ತದೆ. ಸರಕಾರದಲ್ಲಿ ಸಾಮಾನ್ಯ ಡಿ ದರ್ಜೆ ನೌಕರನೂ ಜಿಲ್ಲಾ ತರಬೇತಿ ಕೇಂದ್ರ’ (ಡಿಟಿಐ) ದಲ್ಲಿ ಅರ್ಹತಾ ತರಬೇತಿಗಳನ್ನು ಪಡೆದು ಅದರಿಂದ ಪ್ರಮಾಣಪತ್ರ ಪಡೆದು ಅದನ್ನು ತನ್ನ ಸೇವಾಪುಸ್ತಕದಲ್ಲಿ ಸೇರಿಸಿದೆ ಮಾತ್ರ ಆತ ಸರಕಾರಿ ಸೇವೆಯಲ್ಲಿ ಮುಂದುವರೆಯುವ ನಿಯಮವಿದೆ. ಹಾಗೆಯೇ ಒಂದು ಇಲಾಖೆಯನ್ನು ನಿಭಾಯಿಸಲೂ ಮಂತ್ರಿಗಳಿಗೂ ಅರ್ಹತೆ ಯೋಗ್ಯತೆ ಇರಬೇಕಲ್ಲವೇ? ಅದನ್ನು ಎಲ್ಲಾ
ಶಾಸಕರೂ ಮನಗಾಣಬೇಕಿದೆ. ರೇಣುಕಾಚಾರ್ಯ ಗೋಪಾಲಯ್ಯ ಆನಂದ್‌ಸಿಂಗ್ ಅಂಥವರು ಗೆದ್ದಿರಬಹುದು ಆದರೆ ಅವರೆಲ್ಲರೂ ಮಂತ್ರಿಗಳಾದರೆ
ಅವರಿಗೆ ಅವರ ಮನೆಯವರಿಗೆ ಕ್ಷೇತ್ರಕ್ಕೆ ಸಂತೋಷವಾಗಬಹುದು.
ಆದರೆ ಅವರಿಗಿಂತ ಸಮರ್ಥರು ಯೋಗ್ಯರು ಮಂತ್ರಿಗಳಾದರೆ ಇಡೀ ಸಮಾಜ ಸಾರ್ಥಕವಾಗುತ್ತೆ. ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮತ್ತು ಅವರ ಹಿತೈಷಿಗಳು ಮಾಡಬಹುದಾದ ಒಂದು ಕೆಲಸವೆಂದರೆ ಉಳಿದ ಎರಡು ವರ್ಷಗಳ ಟೈಂ ಟೇಬಲ್’ ಮಾದರಿಯ ಪೂರ್ವ ನಿರ್ಧಾರಿತ ಸೂತ್ರವನ್ನು ಅಳವಡಿಸಿಕೊಳ್ಳಬೇಕಿದೆ. ನೂರಾ ಹತ್ತೊಂಬತ್ತು ಶಾಸಕರನ್ನೂ ಒಟ್ಟಿಗೇ ಮಂತ್ರಿ ಮಾಡಲು ಸಾಧ್ಯವಿಲ್ಲವಾದರೂ ಮಂತ್ರಿಗಳಿಗೆ ಇಂತಿಷ್ಟು ಸಮಯ ನೀಡಿ ಅವರ ಸಾಮರ್ಥ್ಯ ಕ್ರಿಯಾಶೀಲತೆ ಸೇವಾ ಮನೋಭಾವ ಹೀಗೆ ಅಳತೆಗೋಲನ್ನು ನಿರ್ಮಿಸಿ ಅಭಿವೃದ್ಧಿ ಪ್ರಗತಿ ಉತ್ತಮ ಆಡಳಿತದ ದಿಕ್ಕನ್ನು ತೋರಿಸಿ ಪರೀಕ್ಷೆಗೊಡ್ಡ ಬಹುದಾಗಿದೆ.
ಒಂದೊಂದು ಜಿಲ್ಲೆಗೆ ತಾಲೂಕಿಗೆ ಅಗತ್ಯವಾದ ಅಗತ್ಯ ಯೋಜನೆಗಳನ್ನು ಜಾರಿಗೆ ತಂದು ಅದನ್ನು ಯಶಸ್ವಿಗೊಳಿಸುವ ಉಸ್ತುವಾರಿಯನ್ನು ಸ್ಥಳೀಯ ಶಾಸಕರಿಗೆ ನೀಡಿ ಅವರ ಮೌಲ್ಯವನ್ನು ಹೆಚ್ಚಿಸುವ ಅವಕಾಶವನ್ನು ಸೃಷ್ಟಿಸಬಹುದಾಗಿದೆ. ಇನ್ನು ಜಿಲ್ಲೆಗಳ ತಾನು ನೀನು ಎಂಬ ಅಹಂಗಳಿವೆ. ಜಿಲ್ಲೆಗಳಲ್ಲಿ ಅನುಭವಿಗಳಿಗೆ, ಹೆಚ್ಚು ಜನರೊಂದಿಗೆ ಬೆರೆತು ನಡೆಯುವವರಿಗೆ ಅವಕಾಶ ನೀಡಬೇಕಿದೆ. ಉದಾಹರಣೆಗೆ ಬಳ್ಳಾರಿಯಲ್ಲಿ ಒಂದು ಕಾಲದಲ್ಲಿ ಬಿಜೆಪಿ ಬಲಿಷ್ಠವಾಗಿತ್ತು. ಅಲ್ಲಿ ಮೊದಲು ಕೇಳಿಬರುವ ಹೆಸರು ಶ್ರೀರಾಮುಲು. ಆ ಜಿಲ್ಲೆಗೆ ಅವರೇ ಹಿರಿಯರಾಗಿದ್ದಾರೆ. ಆದರೆ ಅವರನ್ನು ಮೊಳಕಾಲ್ಮೂರಿಗೆ ಕಳುಹಿಸಿ, ಬಳ್ಳಾರಿಯಲ್ಲಿ ಆನಂದ್‌ಸಿಂಗ್ ಅಂಥವರು ಗೆದ್ದಿರುವುದು ಬಿಜೆಪಿಯ ಬೆಳವಣಿಗೆಯ ವಿಚಾರದಲ್ಲಿ ಅಪಾಯಕಾರಿ ಜಿಲ್ಲೆಯೇ ಆಗಿದೆ. ಆದ್ದರಿಂದ ಶ್ರೀರಾಮುಲು ಮತ್ತು ಆನಂದ್ ಸಿಂಗ್ ಅವರ
ನಡುವಿನ ಸಂಬಂಧವನ್ನು ಕಾಯುವುದೂ ಸರಕಾರದ ಮತ್ತು ಪಕ್ಷದ ಪಾಲಿಗೆ ಸೂಕ್ಷ್ಮ ವಿಚಾರವಾಗಿದೆ.
ಹಾಗೆಯೇ ಬೆಂಗಳೂರಿನಲ್ಲಿ ಘಟಾನುಘಟಿ ಶಾಸಕರಿದ್ದಾರೆ. ಅವರಲ್ಲಿ ಎಲ್ಲರೂ ಆಕಾಂಕ್ಷಿಗಳೇ ಆಗಿದ್ದಾರೆ. ಅವರನ್ನೆ ಸಂಭಾಳಿಸಿಕೊಂಡು ಹೋಗುವುದು ಬೊಮ್ಮಾಯಿಯವರಿಗೆ ಒಂದು ಸವಾಲು. ಇನ್ನು ಇಷ್ಟೆ ಆದಮೇಲೆ ಸರಕಾರದ ಹೊರಗೆ ವಿರೋಧಪಕ್ಷ ಪ್ರತಿಪಕ್ಷಗಳಲ್ಲಿರುವ ನಾಯಕರೇನು ಮುದ್ದೆ ಮುರಿಯುತ್ತಾ ಹೊಲದಲ್ಲಿ ನಾಟಿ ಮಾಡುತ್ತಾ ಕೂರುವರೇ ? ಖಂಡಿತಾ ಇಲ್ಲ.
ಅವರೆಲ್ಲರೂ ಹಸಿದ ಹೆಬ್ಬುಲಿಗಳೇ ಆಗಿರುತ್ತಾರೆ. ವಿಕೆಟ್ ಕೀಪರ್‌ನಂತೆ ನಿಂತು ಅವಕಾಶ ಸಿಕ್ಕರೆ ಏನು ಬೇಕಾದರು’ ಮಾಡಲು ತಯಾರಿರುತ್ತಾರೆ. ಏಕೆಂದರೆ ಇದೆ ಕುಟುಂಬದ ಅಸ್ತಿತ್ವದ ಪ್ರಶ್ನೆ ಮನೆತನದ ಘನತೆಯ ಪ್ರಶ್ನೆ. ಇನ್ನು ‘ಸಿಡಿ ಪ್ರೊಡಕ್ಷ’ನಂಥ ಆಸಾಮಿಗಳೂ ಕ್ಯಾಮರಾ ಇಟ್ಟು ಆಕ್ಷನ್ ಹೇಳಲು ರೆಡಿಯಾಗಿರು ತ್ತಾರೆ. ಇಂತಹ ಚಕ್ರವ್ಯೂಹವನ್ನೆ ಭೇದಿಸಿ ಶಾಸಕರೆ ಒಟ್ಟಾಗಿ ಕಲೆತು ಒಬ್ಬರೊ ನ್ನೊಬ್ಬರು ಅರ್ಥಮಾಡಿಕೊಂಡು ಸ್ವಾರ್ಥಕ್ಕಿಂತ ಪ್ರಜಾಪ್ರಭುತ್ವದ ಸಾರ್ಥಕ ದಿಕ್ಕಿನತ್ತ ನಡೆದು ಸ್ಥಿರ ಮತ್ತು ಉತ್ತಮ ಆಡಳಿತ ನೀಡಿದರೆ ಬೊಮ್ಮಾಯಿ ಯವರು ಬಾಹುಬಲಿಯೂ ಹೌದು. ಅಂದಹಾಗೆ ಮುಖ್ಯಮಂತ್ರಿಗಳಿಗೂ ಒಬ್ಬ ಪುತ್ರ ನಿರಬೇಕಲ್ಲವೇ!?