ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಭಾರತದಂಥ ಪ್ರಜಾಪ್ರಭುತ್ವ ದೇಶದಲ್ಲಿ ಎರಡನೇ ಅತಿ ಸವಾಲಿನ ಮತ್ತು ಕಷ್ಟದ ಕೆಲಸವೆಂದರೆ, ಈ ದೇಶದ ಪ್ರಧಾನಿ ಯಾಗುವುದಂತೆ. ಹಾಗಾದರೆ ಮೊದಲನೇಯದು ಯಾವುದು ಎಂದು ಕೇಳಬಹುದು. ಅದು ಕೇಂದ್ರ ಮತ್ತು ರಾಜ್ಯ ಸಚಿವ ಸಂಪುಟವನ್ನು ರಚಿಸುವುದು. ಈ ಮಾತನ್ನು ಸಂಪುಟ ರಚನೆ ಮತ್ತು ವಿಸ್ತರಣೆಯ ಸಂದರ್ಭದಲ್ಲಿ, ಆಗಾಗ ಹಿರಿಯ ಮುತ್ಸದ್ದಿ ಜಾರ್ಜ್ ಫೆರ್ನಾಂಡೀಸ್ ಹೇಳುತ್ತಿದ್ದರು.
ಇದು ನಿಜವೂ ಹೌದು. ಅವರು ಮೊರಾರ್ಜಿ ದೇಸಾಯಿ ಸಂಪುಟ ರಚನೆಯಿಂದ ಆರಂಭವಾಗಿ, ವಾಜಪೇಯಿ ಸರಕಾರದವರೆಗೆ, ಎಲ್ಲಾ ಕಾಂಗ್ರೆಸ್ಸೇತರ ಸರಕಾರ ರಚನೆಯ ಸಂದರ್ಭಗಳಲ್ಲಿ ಪ್ರಧಾನ ಪಾತ್ರವಹಿಸಿದವರು. ಒಂದು ಸರಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಎಂಬುದನ್ನು ಈ ಸಚಿವ ಸಂಪುಟ ರಚನೆಯನ್ನು ಅವಲಂಬಿ ಸಿರುತ್ತದೆ ಎಂದು ಅವರು ಹೇಳಿದ್ದರು. ಇದು ಸರ್ವಕಾಲಕ್ಕೂ, ಎಲ್ಲಾ ಸರಕಾರಕ್ಕೂ ಅನ್ವಯಿಸುವ ಮಾತು. ಮೊದಲ ಸರಕಾರ ರಚಿಸುವಾಗಲೂ ನೆಹರು ಮುಂದೆ ಅನೇಕ ಸವಾಲುಗಳಿದ್ದವು. ಯಾರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ತೀವ್ರ ಲಾಬಿ ಏರ್ಪಟ್ಟಿತ್ತು.
ಪ್ರಧಾನಿ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ನಡುವೆ ತುರುಸಿನ ಪೈಪೋಟಿ ನಡೆದಿತ್ತು. ಕೊನೆಗೆ, ನೆಹರು ಪ್ರಧಾನಿ ಆಗುವಲ್ಲಿ ಯಶಸ್ವಿ ಆದರು. ಆದರೆ ಮೊದಲ ದಿನವೇ, ನೆಹರು ಮತ್ತು ಪಟೇಲ್ ನಡುವೆ ಮುಸುಕಿನ ಗುದ್ದಾಟಕ್ಕೆ ನಾಂದಿಯಾಯಿತು. ಪಟೇಲರನ್ನು ಉಪ ಪ್ರಧಾನಿ ಎಂದು ನೇಮಿಸಿದರೂ, ಅವರ ನಡುವಿನ ಪೈಪೋಟಿ ಕಡಿಮೆ ಆಗಲಿಲ್ಲ. ಆಗ ನೆಹರು, ಪಟೇಲರನ್ನು ಗೃಹ ಸಚಿವರನ್ನಾಗಿ ನೇಮಿಸಿದರು. ಅಷ್ಟೂ ಸಾಲದೆಂಬಂತೆ, ಮಾಹಿತಿ ಮತ್ತು ಪ್ರಸಾರ ಖಾತೆಯನ್ನೂ ಕೊಟ್ಟರು. ಆದರೂ ಪಟೇಲರು ಸಂತೃಪ್ತರಾಗಲಿಲ್ಲ.
ಆರಂಭದಲ್ಲಿ ಗೃಹ ಖಾತೆಗೆ ಬೇರೆ ಸಚಿವರನ್ನು ನೇಮಿಸಿರಲಿಲ್ಲ. ಮೂರು ವರ್ಷಗಳ ನಂತರ, ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಕೈಲಾಸನಾಥ ಕಟ್ಜು ಅವರನ್ನು ಸಹಾಯಕ ಸಚಿವರನ್ನಾಗಿ ನೇಮಿಸಿದರು. ಹಾಗೆ ಮಾಹಿತಿ ಮತ್ತು ಪ್ರಸಾರ ಖಾತೆಗೆ ಆರ್.ಆರ್ .ದಿವಾಕರ ಅವರನ್ನು ಸಹಾಯಕ ಸಚಿವರನ್ನಾಗಿ
ನೇಮಿಸಿದರು. ಗೃಹ ಮತ್ತು ಮಾಹಿತಿ-ಪ್ರಸಾರ ಖಾತೆಗಳಿಗೆ ಸಹಾಯಕ ಸಚಿವರನ್ನು ನೇಮಿಸುವುದು ಪಟೇಲರಿಗೆ ಇಷ್ಟವಿರಲಿಲ್ಲ. ಆದರೂ ನೆಹರು ಕೇಳಲಿಲ್ಲ. ಪಟೇಲರಿಗೆ ಒಂದು ಕಾಲಕ್ಕೆ ಆಪ್ತರಾಗಿದ್ದ ಉತ್ತರಪ್ರದೇಶದ ಮೋಹನಲಾಲ್ ಸಕ್ಸೆನಾ ಎಂಬ ಮಂತ್ರಿಯನ್ನು ನೆಹರು, ಐದು ವರ್ಷಗಳ ಕಾಲ ಖಾತೆ ಇಲ್ಲದೇ ಕುಳ್ಳಿರಿಸಿದ್ದರು.
ತಮಗೆ ಯಾವುದಾದರೂ ಖಾತೆ ಕೊಡಿ ಎಂದು ಸಕ್ಸೆನಾ ನೆಹರು ಅವರಿಗೆ ನೂರಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದರು. ಹತ್ತಾರು ಸಲ ಖುದ್ದಾಗಿ ಭೇಟಿ ಮಾಡಿ ಒತ್ತಾಯಿಸಿದ್ದರು. ಆದರೂ ಪ್ರಯೋಜನ ಆಗಲಿಲ್ಲ. ತಮಗೆ ಶಿಕ್ಷಣ ಅಥವಾ ರಕ್ಷಣಾ ಖಾತೆಯನ್ನು ನೀಡಬಹುದು ಎಂದು ಶಾಮಪ್ರಸಾದ ಮುಖರ್ಜಿ ಭಾವಿಸಿದ್ದರು. ಆದರೆ ಅವರಿಗೆ ನೆಹರು ನೀಡಿದ್ದು ಕೈಗಾರಿಕೆ ಖಾತೆ. ಅದನ್ನು ಅವರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡರು. ಒಮ್ಮೆ ನೆಹರು ಅವರನ್ನು ಭೇಟಿ ಮಾಡಿ,
ತಮಗೆ ರಕ್ಷಣಾ ಖಾತೆಯನ್ನು ನೀಡುವಂತೆ ವಿನಂತಿಸಿಕೊಂಡರಂತೆ. ಆದರೆ ನೆಹರು ಉದ್ದೇಶಪೂರ್ವಕವಾಗಿ, ಆ ಖಾತೆಯನ್ನು ಬಲದೇವ ಸಿಂಗ್ ಅವರಿಗೆ ನೀಡಿದ್ದರು.
ಸಂವಿಧಾನ ರಚನೆ ಕರಡು ಸಮಿತಿ ಸದಸ್ಯರಾಗಿದ್ದ ಎನ್.ಗೋಪಾಲಸ್ವಾಮಿ ಅಯ್ಯಂಗಾರ ಅವರನ್ನು ಮಂತ್ರಿ ಮಾಡಿದ್ದ ನೆಹರು, ಒಂದು ವರ್ಷ ಕಾಲ ಖಾತೆ ಕೊಡದೇ ಸತಾಯಿಸಿದ್ದರು. ಈ ಬಗ್ಗೆ ವಿವಾದವುಂಟಾಗಿ, ಒತ್ತಡ ಬಂದಾಗ ಅವರಿಗೆ ಕಾಶ್ಮೀರ ವ್ಯವಹಾರಗಳನ್ನು ನಿಭಾಯಿಸುವ ಹೊಣೆಗಾರಿಕೆ ವಹಿಸಿದರು. ಅಯ್ಯಂಗಾರ ದೂಸರಾ ಮಾತಾಡದೇ ಒಪ್ಪಿಕೊಂಡರು. (ಆ ಸಂದರ್ಭದಲ್ಲಿ ಆರ್ಟಿಕಲ್ 370ಯನ್ನು ರಚಿಸಿದವರು ಇವರೇ) ಆದರೆ ನೆಹರು ನಡೆಯ ಬಗ್ಗೆ ವಿರೋಧ ವ್ಯಕ್ತವಾದಾಗ, ನಂತರ ಒಲ್ಲದ ಮನಸ್ಸಿನಿಂದ, ಜಾನ್ ಮಥಾಯ್ ಅವರ ಅಡಿಯಲ್ಲಿ ರೈಲ್ವೆ ಖಾತೆ ಸಹಾಯಕ ಸಚಿವರನ್ನಾಗಿ ಮಾಡಿದರು. ಎಂಟು
ತಿಂಗಳ ಕಾಲ ಇವರು ರಕ್ಷಣಾ ಸಚಿವರೂ ಆಗಿದ್ದರೆನ್ನಿ.
ಮಂತ್ರಿಗಳಿಗೂ, ಅವರ ಸಾಮರ್ಥ್ಯಕ್ಕೂ, ಅವರ ಆಸಕ್ತಿಗೂ, ಅವರ ಪರಿಣತಿಗೂ, ಅವರಿಗೆ ಕೊಡುವ ಖಾತೆಗೂ ಸಂಬಂಧವೇ ಇರುವುದಿಲ್ಲ. ಅಯೋಗ್ಯ ರಾದವರಿಗೆ, ಅಸಮರ್ಥರಾದವರಿಗೆ, ಒಳ್ಳೆಯ ಖಾತೆಗಳನ್ನು ಕೊಡುವುದು ಮೊದಲಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ರಾಜಕೀಯವಾಗಿ
ಬಲಿಷ್ಠರಾದವರಿಗೆ ಮಾತ್ರ ಒಳ್ಳೆಯ ಮತ್ತು ಪ್ರಭಾವಿ ಖಾತೆ ಸಿಗುತ್ತದೆಂಬುದು ಸುಳ್ಳು. ಪ್ರಭಾವಶಾಲಿಗಳಿಗೆ ಮಹತ್ವದ ಖಾತೆಗಳನ್ನು ತಪ್ಪಿಸಲು, ಅಷ್ಟೇನೂ ಪ್ರಭಾವಿಗಳಲ್ಲದವರಿಗೆ ಪ್ರಮುಖ ಖಾತೆಗಳ ಹೊಣೆಗಾರಿಕೆಯನ್ನು ವಹಿಸಿದ ಎಷ್ಟೋ ನಿದರ್ಶನಗಳಿವೆ.
ಪ್ರಮುಖ ಖಾತೆಗಳಲ್ಲಿ ದುರ್ಬಲರನ್ನು ಕುಳ್ಳಿರಿಸಿ, ಹಿಂದಿನ ಸೀಟಿನಲ್ಲಿ ಕುಳಿತು ಪ್ರಧಾನಿಗಳು ಮತ್ತು ಅವರ ಆಪ್ತರು ಡ್ರೈವಿಂಗ್ ಮಾಡುವುದು ಹೊಸತೇನೋ
ಅಲ್ಲ. ನೆಹರು ಪ್ರಧಾನಿಯಾಗಿ ತಮ್ಮ ಸಾರ್ವಭೌಮತ್ವ ಸ್ಥಾಪಿಸಿಕೊಂಡ ನಂತರ, ಯಾರನ್ನೂ ಕೇಳುತ್ತಿರಲಿಲ್ಲ. ಪಟೇಲರು ನಿಧನರಾದ ಬಳಿಕ ಮತ್ತು ಕೊನೆಯ ಹತ್ತು ವರ್ಷ ಅವರು ಸಂಪುಟ ರಚಿಸುವಾಗ ಯಾರನ್ನೂ ಕೇಳುತ್ತಿರಲಿಲ್ಲ. ರಾಷ್ಟ್ರಪತಿ ಭವನದಿಂದ ಪ್ರಕಟಣೆ ಹೊರಬೀಳುವ ತನಕ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಈ ಸಂಪ್ರದಾಯವನ್ನು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಬಂದವರೆಂದರೆ ಇಂದಿರಾ ಗಾಂಧಿ.
ಆರಂಭದಲ್ಲಿ ಅವರಿಗೂ ಸಂಪುಟ ರಚನೆ ಸುಲಭದ ತುತ್ತಾಗಿರಲಿಲ್ಲ. ಅವರ ಸಂಪುಟದಲ್ಲಿ ಘಟಾನುಘಟಿಗಳಿದ್ದರು. ಮೊರಾರ್ಜಿ ದೇಸಾಯಿ, ಯಶವಂತರಾವ್ ಚೌಹಾಣ್, ಗುಲ್ಜಾರಿಲಾಲ್ ನಂದಾ, ಎಂ.ಸಿ.ಛಗ್ಲಾ, ನೀಲಂ ಸಂಜೀವ ರೆಡ್ಡಿ, ಜಗಜೀವನ್ ರಾಮ್, ಸಿ.ಸುಬ್ರಮಣ್ಯಮ್, ಸತ್ಯನಾರಾಯಣ ಸಿನ್ಹ ಮೊದಲಾದವ ರಿದ್ದರು. ವಯಸ್ಸು ಮತ್ತು ಅನುಭವದಿಂದ ಮೊರಾರ್ಜಿಯವರನ್ನು ಉಪಪ್ರಧಾನಿಯಾಗಿ ಮಾಡುವುದು ಅನಿವಾರ್ಯವಾಯಿತು. ಮೊರಾರ್ಜಿ ಉಪಪ್ರಧಾನಿ
ಆಗುವುದನ್ನು ತಪ್ಪಿಸಲು ಇಂದಿರಾ ಬಹಳ ಪ್ರಯತ್ನಿಸಿದರು.
ಆದರೂ ಅದು ಸಾಧ್ಯವಾಗಲಿಲ್ಲ. ಮೊರಾರ್ಜಿ ತಮಗೆ ರಕ್ಷಣೆ ಅಥವಾ ಗೃಹ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದ್ದರು. ಆದರೆ ಉಪಪ್ರಧಾನಿ ಹುದ್ದೆ ನೀಡಿದ್ದರಿಂದ ಕೊಟ್ಟ ಖಾತೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲಾಯಿತು. ನಂತರ ಅವರು ಹಣಕಾಸು ಖಾತೆಗೆ ಸೈ ಎಂದರು. ಯಶವಂತರಾವ್ ಚೌಹಾಣ್ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಇಂದಿರಾ ಬೇಕೆಂದೇ ಸಾಧು ಸ್ವಭಾವದವರಾದ ಗುಲ್ಜಾರಿಲಾಲ್ ನಂದಾರನ್ನು ಗೃಹ ಸಚಿವರನ್ನಾಗಿ ಮಾಡಿದರು. ಅವರ ನಿಧನದ
ನಂತರವೇ, ಚೌಹಾಣ್ ಗೃಹ ಮಂತ್ರಿಯಾಗಿದ್ದು. ಎರಡು ವರ್ಷಗಳ ಅವಽಯಲ್ಲಿ ಇಂದಿರಾ, ವಿದೇಶಾಂಗ ವ್ಯವಹಾರಗಳ ಖಾತೆಗೆ ಇಬ್ಬರು (ಸರ್ದಾರ್ ಸ್ವರ್ಣ ಸಿಂಗ್ ಮತ್ತು ಎಂ.ಸಿ.ಛಗ್ಲಾ) ಸಚಿವರನ್ನು ನೇಮಿಸಿದ್ದರು. ಕೊನೆಗೆ ಎರಡು ವರ್ಷಗಳ ಕಾಲ (1967-69) ಆ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಜಗಜೀವನ್ ರಾಮ್ ತಮ್ಮ ಮಾತನ್ನು ಕೇಳುವ ತನಕ, ಕಾಲಕಾಲಕ್ಕೆ ಅವರು ಕೇಳಿದ ಖಾತೆಗಳನ್ನು ಕೊಡುತ್ತಿದ್ದರು. ಜಗಜೀವನ್ ರಾಮ್ ಅವರು ಇಂದಿರಾ
ಸಂಪುಟದಲ್ಲಿ ಕಾರ್ಮಿಕ, ಉದ್ಯೋಗ, ಕೃಷಿಯಂಥ ಅಷ್ಟೇನೂ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದವರು, ಕೊನೆಗೆ ಅವರ ಸಂಪುಟದಲ್ಲಿ ರಕ್ಷಣಾ ಸಚಿವರೂ ಆದರು. ಇಂದಿರಾ ಗಾಂಧಿ ತಮ್ಮ ಮನಸ್ಸಿಗೆ ಬಂದಂತೆ ಸಚಿವರನ್ನು ಮತ್ತು ಅವರ ಖಾತೆಗಳನ್ನು ಬದಲಿಸುತ್ತಿದ್ದರು. ಅದರಲ್ಲೂ ಅವರ ಎರಡನೇ ಮತ್ತು ಮೂರನೇ ಸಲ ಪ್ರಧಾನಿಯಾದ ಬಳಿಕ, ಅವರು ಸಚಿವ ಸಂಪುಟ ರಚಿಸುವಾಗ ಯಾರನ್ನೂ ಕೇಳುತ್ತಿರಲಿಲ್ಲ. ತಮಗೆ ಬೇಕಾದವರನ್ನು ಮಂತಿಯನ್ನಾಗಿ
ಮಾಡುತ್ತಿದ್ದರು. ಬೇಡದವರನ್ನು ತೆಗೆದು ಹಾಕುತ್ತಿದ್ದರು. ಈ ಮಾತು ಕೇವಲ ಮಂತ್ರಿಗಳಿಗೆ ಅನ್ವಯಿಸುತ್ತಿರಲಿಲ್ಲ. ರಾಷ್ಟ್ರಪತಿ ಹುದ್ದೆಗೆ ನೇಮಿಸುವಾಗಲೂ ಅವರು ಈ ಮಾನದಂಡವನ್ನು ಅನುಸರಿಸುತ್ತಿರಲಿಲ್ಲ.
ಚೌಧರಿ ನಿತಿರಾಜ್ ಸಿಂಗ್ ಎಂಬ ರಾಜಕಾರಣಿಯಿದ್ದರು. ಅವರು ಮಧ್ಯಪ್ರದೇಶದ ಹೋಶಂಗಾಬಾದ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆರಿಸಿ ಬಂದಿದ್ದರು. ಅವರು ಇಂದಿರಾ ಗಾಂಧಿಯವರನ್ನು ನೋಡಲು ಅವರ ಮನೆಗೆ ಹೋಗಿದ್ದರು. ಸೋಜಿಗವೆಂದರೆ, ಅವರನ್ನು ಇಂದಿರಾ ಆ ಮೊದಲು ಒಂದೆರಡು ಸಲ ನೋಡಿದ್ದರು. ಆದರೂ ಅವರ ಮುಖ ಮನಸ್ಸಿನಲ್ಲಿ ಅಚ್ಚೊತ್ತಿರಲಿಲ್ಲ. ’ಮೇಡಂ, ನಾನು ಚೌಧರಿ ನಿತಿರಾಜ್ ಸಿಂಗ್, ನಾನು ನಿಮ್ಮ ಪಕ್ಷದ ಲೋಕಸಭಾ ಸದಸ್ಯ. ಹೋಶಂಗಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇನೆ. ನಿಮ್ಮನ್ನು ಭೇಟಿ ಮಾಡಬೇಕು ಎಂದು ಬಂದೆ’ ಎಂದರು.
’ಅದ್ಸರಿ, ನಿಮ್ಮ ಬೇಡಿಕೆ ಏನು?’ ಎಂದು ಕೇಳಿದರು. ’ಮೇಡಂ, ನನ್ನ ಬೇಡಿಕೆಗಳೇನೂ ಇಲ್ಲ. ನಿಮ್ಮನ್ನು ನೋಡಿ, ನನ್ನ ಪರಿಚಯವನ್ನು ಮಾಡಿಕೊಳ್ಳಬೇಕು ಅನಿಸಿತು. ಇಂಥ ಅವಕಾಶ ನನಗೆ ಹಿಂದೆಂದೂ ಸಿಕ್ಕಿರಲಿಲ್ಲ. ನಿಮ್ಮನ್ನು ಗುಂಪಿನಲ್ಲಿ ನೋಡಿದ್ದೆ. ಆದರೆ ಒಬ್ಬನೇ ಬಂದು ಪರಿಚಯ ಮಾಡಿಕೊಳ್ಳಬೇಕು ಅನಿಸಿತು ಅಷ್ಟೇ’ ಎಂದರು ನಿತಿರಾಜ್ ಸಿಂಗ್. ಇಂದಿರಾಗೆ ಏನು ಅನಿಸಿತೋ ಏನೋ? ನಿತಿರಾಜ್ ಸಿಂಗ್ ಅವರ ಬಗ್ಗೆ ಒಳ್ಳೆಯ ಭಾವನೆ ಮೂಡಿತು. ಅದಾಗಿ ಒಂದು ವಾರದ ನಂತರ ನಿತಿರಾಜ್ ಸಿಂಗ್ ಸಚಿವರಾಗಿ ಸಂಪುಟ ಸೇರಿದರು.
ಸಂಪುಟ ರಚನೆ ಇಂದಿರಾಗೆ ಎಂದೂ ಕಸರತ್ತು ಆಗಿರಲಿಲ್ಲ. ಇಂದಿರಾ ಪ್ರಧಾನಿಯಾಗಿದ್ದಷ್ಟು ಕಾಲ, ’ಖಾತೆಗೆ ಕ್ಯಾತೆ’ ಎಂಬ ಹೆಡ್ ಲೈನ್ ಪತ್ರಿಕೆಗಳಲ್ಲಿ ಪ್ರಕಟ ವಾಗಲಿಲ್ಲ. ಕಾರಣ ಅವರ ಹೊರತಾಗಿ ಮಂತ್ರಿಗಳ ಆಯ್ಕೆಯಲ್ಲಿ ಬೇರೆಯವರ ಪಾತ್ರವೇ ಇರಲಿಲ್ಲ. ಸಂಪುಟ ರಚನೆ ಕಗ್ಗಂಟಾಗಿದ್ದು ಸಮ್ಮಿಶ್ರ ಸರಕಾರ ಪರ್ವ ಆರಂಭವಾದಾಗ. ಅದರಲ್ಲೂ ಹದಿನೈದು-ಇಪ್ಪತ್ತು ಪಕ್ಷಗಳ ಬೆಂಬಲ ಪಡೆದು, ಸರಕಾರ ರಚಿಸುವ ಸನ್ನಿವೇಶ ಎದುರಾದಾಗಲೆಲ್ಲ, ಜಾರ್ಜ್ ಫೆರ್ನಾಂಡೀಸ್ ಮಾತು ಪದೇ ಪದೆ ನೆನಪಾಗುತ್ತಿತ್ತು.
ಅವರು ಈ ಪ್ರಹಸನವನ್ನು ನೋಡಿಯೇ ಹಾಗೆ ಹೇಳಿರಬೇಕು. ವಾಜಪೇಯಿ ಮತ್ತು ಡಾ.ಮನಮೋಹನ ಸಿಂಗ್ ಅವರ ಕಾಲದಲ್ಲಿ, ಮಿತ್ರ ಪಕ್ಷಗಳೇ ತಮ್ಮ
ಕೋಟಾವನ್ನು ಕೊಟ್ಟು ಬಿಡುತ್ತಿದ್ದವು. ಅವು ಹೇಳಿದವರನ್ನು ಪ್ರಧಾನಿಯವರು ತಮ್ಮ ಸಂಪುಟದಲ್ಲಿ ಮಂತ್ರಿಗಳಾಗಿ ನೇಮಿಸಿಕೊಳ್ಳಬೇಕಾಗಿತ್ತು. ಪ್ರಧಾನಿಗೆ ತಮ್ಮ ಪಕ್ಷದವರ ಹೊರತಾಗಿ ಬೇರೆಯವರನ್ನು ಸೇರಿಸಿಕೊಳ್ಳುವ ಮತ್ತು ತೆಗೆದುಹಾಕುವ ಅಽಕಾರ ಇರಲಿಲ್ಲ. ಸುಮಾರು ಹದಿನೈದು ವರ್ಷ ಭಾರತದ ಪ್ರಧಾನಿಯನ್ನು ಆರಿಸುವುದು ಸುಲಭವಾಗಿತ್ತು. ಆದರೆ ಪ್ರಧಾನಿಗೆ ತಮ್ಮ ಸಚಿವ ಸಂಪುಟವನ್ನು ರಚಿಸುವುದು ಮಾತ್ರ ಅತೀವ ಕಷ್ಟವಾಗಿತ್ತು. ಆ ಪರಿಸ್ಥಿತಿ ಹೋಗಿದ್ದು, ಮೋದಿ ಯವರು ಪ್ರಧಾನಿಯಾದಾಗಲೇ.
ಈಗ ಮೋದಿಯವರ ಸಂಪುಟದಲ್ಲಿ ಅನಾಮಧೇಯರೂ ಸಚಿವರಾಗುತ್ತಿದ್ದಾರೆ. ಘಟಾನುಘಟಿಗಳನ್ನು ಕೈಬಿಡುತ್ತಿದ್ದಾರೆ. ಆದರೆ ಯಾರೂ ಮಾತಾಡುತ್ತಿಲ್ಲ. ಯಾರು
ಸಚಿವರಾಗುತ್ತಾರೆ ಎಂಬುದು ಕೊನೆ ಕ್ಷಣದವರೆಗೂ ಸಚಿವ ಆಕಾಂಕ್ಷಿಗಳಿಗೂ ಗೊತ್ತಾಗುವುದಿಲ್ಲ. ಅಷ್ಟು ಮುಗುಮ್ಮಾಗಿ ಇರುತ್ತದೆ. ಪ್ರಧಾನಿಯಾದವರಿಗೆ ಸಂಪೂರ್ಣ ಬಹುಮತ ಪ್ರಾಪ್ತವಾದರೆ, ಬೇರೆಯವರ ಮರ್ಜಿಗೆ ಸಿಲುಕದಿದ್ದರೆ, ಸಂಪೂರ್ಣ mandate ಇದ್ದರೆ, ಸಂಪುಟ ರಚನೆ ಅಥವಾ ವಿಸ್ತರಣೆ ಕಸರತ್ತು ಅಲ್ಲ, ಅದು ಲೀಲಾಜಾಲ. ಇಲ್ಲದಿದ್ದರೆ ಅದೇ ಕೋಲಾಹಲ!
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟವನ್ನು ಚಾಣಾಕ್ಷತನದಿಂದ ರಚಿಸಿದ್ದಾರೆ. ಎಲ್ಲರನ್ನೂ ಖುಷಿಪಡಿಸುವುದು ಅಸಾಧ್ಯ.
ಅಸಮಾಧಾನಗಳು ಇದ್ದೇ ಇರುತ್ತವೆ. ಈ ಅಸಮಾಧಾನವನ್ನು ಶಮನ ಮಾಡುವುದು ರಾಜಕೀಯ ಕಲೆಗಾರಿಕೆ ಅಷ್ಟೇ. ನಾಲ್ಕು ಸಚಿವ ಸ್ಥಾನಗಳನ್ನು ಖಾಲಿ ಬಿಟ್ಟು, ಅವನ್ನು ನಲವತ್ತು ಜನರಿಗೆ ತೋರಿಸಿ, ಅವರ ಮೂಗಿಗೆ ಬೆಣ್ಣೆ ಸವರಿ, ಸಮತೋಲನ ಕಾಯ್ದುಕೊಳ್ಳುವುದು ಬುದ್ಧಿವಂತ ರಾಜಕಾರಣಿಯ ನಡೆ. ರಾಜಕೀಯ ಇರೋದೇ ಹಾಗೆ.