Friday, 25th October 2024

ಕ್ಯಾಡ್ ಬರಿ, ಮಾಂಟ್ ಬ್ಲಾಂಕ್ ಮತ್ತು ಮಿಮಿಕ್ರಿ

ವೀಕೆಂಡ್ ವಿತ್ ಮೋಹನ್

camohanbn@gmail.com

ಆಫ್ರಿಕಾದ ದೇಶಗಳಿಂದ ಬ್ರಿಟಿಷ್ ದ್ವೀಪಗಳಿಗೆ ೧೪೫೦ರಿಂದ ೧೮೫೦ರ ನಡುವೆ ದೊಡ್ಡ ಮಟ್ಟದ ಮಾನವ ಸಾಗಣೆ ನಡೆಯುತ್ತಿತ್ತು. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ದ್ವೀಪಗಳ ಬ್ರಿಟಿಷರ ಕಾಲನಿಗಳಲ್ಲಿನ ಕೆಲಸಕ್ಕೆಂದು ಈ ಕಾರ್ಮಿಕರನ್ನು ದೊಡ್ಡ ಹಡಗುಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ವೆಸ್ಟ್ ಇಂಡೀಸ್ ದ್ವೀಪಸಮೂಹಗಳಲ್ಲಿ ಒಂದಾದ ಜಮೈಕಾ, ಬ್ರಿಟಿಷ್ ವಸಾಹತುಶಾಹಿಯ ಅಂದಿನ ಕಾಲದ ಶ್ರೀಮಂತ ದ್ವೀಪವಾಗಿತ್ತು. ಹಡಗುಗಳ ಕಂಟೇನರ್‌ಗಳಲ್ಲಿ ವಸ್ತುಗಳನ್ನು ಪ್ಯಾಕ್ ಮಾಡುವಂತೆ ಕಾರ್ಮಿಕರನ್ನು ತುಂಬಲಾಗುತ್ತಿತ್ತು.

ಸಮುದ್ರಯಾನದ ವೇಳೆ ಸುಮಾರು ಶೇ.೨೦ರಷ್ಟು ಕಾರ್ಮಿಕರು ಸಾವನ್ನಪ್ಪುತ್ತಿದ್ದರು. ಬದುಕಿದವರ ಜೀವನವೇನೂ ಆರಾಮದಾಯಕವಾಗಿರಲಿಲ್ಲ; ಅವರನ್ನು ಬ್ರಿಟಿಷರ ಕಾಲನಿಗಳಲ್ಲಿರುವ ತೋಟಗಳಲ್ಲಿ ಕೂಲಿಯಾಳುಗಳಾಗಿ ಬಳಸಿಕೊಂಡು ಹಿಂಸಿಸಲಾಗುತ್ತಿತ್ತು. ಜಮೈಕಾ ದ್ವೀಪಕ್ಕೆ ಅಮೆರಿಕದ ಅಲ್ಬೇರ್ ಮರ್ಲೆ ನಗರದ ಬ್ರಿಟಿಷ್ ಅಧಿಕಾರಿಯೊಬ್ಬರನ್ನು ೧೬೮೭ರಲ್ಲಿ ವ್ಯವಸ್ಥಾಪಕರಾಗಿ ಹಾಗೂ ಸ್ಲೋನ್ ಎಂಬ ವೈದ್ಯರನ್ನು ಬ್ರಿಟಿಷ್ ಅಧಿಕಾರಿಯ
ಆರೋಗ್ಯಾಧಿಕಾರಿಯಾಗಿ ನೇಮಿಸಲಾಯಿತು. ಜಮೈಕಾದಲ್ಲಿ ಹೆಂಡತಿ-ಮಕ್ಕಳೊಂದಿಗೆ ವಾಸಿಸುತ್ತಿದ್ದ ಸ್ಲೋನ್, ಬ್ರಿಟಿಷ್ ಅಧಿಕಾರಿಯ ಆರೋಗ್ಯ ವನ್ನಷ್ಟೇ ನೋಡಿಕೊಳ್ಳಬೇಕಿತ್ತು.

ಸಹಜವಾಗಿಯೇ ಹೆಚ್ಚಿನ ಬಿಡುವು ಸಿಕ್ಕ ಕಾರಣ, ಆ ದ್ವೀಪದಲ್ಲಿನ ಕುತೂಹಲಕಾರಿ ಸಂಗತಿಗಳೆಡೆಗೆ ಗಮನ ಹರಿಸಲು ಸ್ಲೋನ್‌ಗೆ ಸಾಧ್ಯವಾಯಿತು. ಜಮೈಕಾದಲ್ಲಿನ ಹಲವು ಬಗೆಯ ಸಸ್ಯಗಳ ಮಾದರಿಯನ್ನು ಸಂಗ್ರಹಿಸಿದ್ದ ಸ್ಲೋನ್, ಅಲ್ಲಿನ ಕೂಲಿ ಕಾರ್ಮಿಕರ ದೈನಂದಿನ ಚಟುವಟಿಕೆಗಳು, ಆಹಾರ ಶೈಲಿ, ಅವರ ಪೂರ್ವಜರ ಬಗೆಗಿನ ಮಾಹಿತಿಗಳನ್ನು ತಮ್ಮ ಡೈರಿಯಲ್ಲಿ ದಾಖಲಿಸುತ್ತಿದ್ದರು. ಜತೆಗೆ, ಕೂಲಿಕಾರ್ಮಿಕರು ಆಫ್ರಿಕಾದಿಂದ ಜಮೈಕಾಕ್ಕೆ ತಂದ ಸಸ್ಯಗಳ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದರು. ದ್ವೀಪದ ಭೌಗೋಳಿಕ ಪ್ರದೇಶಗಳು, ಅಲ್ಲಿನ ಹವಾಮಾನ ವೈಪರೀತ್ಯಗಳು, ಪ್ರಕೃತಿ ವಿಕೋಪಗಳ ಮಾಹಿತಿ ಮತ್ತು ಅಪರೂಪದ ಸಸ್ಯಪ್ರಭೇದಗಳ ವಿಸ್ತೃತ ಚಿತ್ರಣವನ್ನೂ ಬರೆದಿಡುತ್ತಿದ್ದರು.

ವೈದ್ಯರಾಗಿ ದ್ವೀಪಕ್ಕೆ ಬಂದ ಸ್ಲೋನ್ ತಮ್ಮ ಬಿಡುವಿನ ಸಮಯದಲ್ಲಿ ರೂಪಿಸಿಕೊಂಡ ಹವ್ಯಾಸದಿಂದಾಗಿ ದೊಡ್ಡ ಮಟ್ಟದ ಮಾಹಿತಿಗಳನ್ನು ಕಲೆ ಹಾಕಿದ್ದರು. ದ್ವೀಪದಲ್ಲಿ ಸ್ಲೋನ್ ಸಂಗ್ರಹಿಸಿದ್ದ ಸಸ್ಯ ಪ್ರಭೇದಗಳಲ್ಲಿ ‘ಕೋಕೋ’ ವಿಶಿಷ್ಟವಾಗಿತ್ತು. ದ್ವೀಪದ ಜನರು ಇದನ್ನು ಔಷಧಿಯಾಗಿ ಬಳಸುವು ದರ ಬಗ್ಗೆ ಡೈರಿಯಲ್ಲಿ ದಾಖಲಿಸಿದ್ದ ಸ್ಲೋನ್, ಆ ಔಷಧಿಯನ್ನು ಜೀರ್ಣಿಸಿಕೊಳ್ಳಲು ಬಹಳ ಕಷ್ಟವಾಗುವುದನ್ನೂ ಉಲ್ಲೇಖಿಸಿದ್ದರು. ಸ್ವತಃ ಈ ಔಷಧಿ ಯನ್ನು ಬಳಸುವಾಗ ಅದಕ್ಕೆ ಹಾಲನ್ನು ಬೆರೆಸಿ ಕುಡಿಯುತ್ತಿದ್ದರು. ಬ್ರಿಟಿಷ್ ದ್ವೀಪಗಳಿಗೆ ವಾಪಸಾದ ನಂತರ ಸ್ಲೋನ್ ತಾವು ಬಳಸುತ್ತಿದ್ದ ಹಾಲು ಮಿಶ್ರಿತ ಕೋಕೋ ಸಸ್ಯದ ಔಷಧಿಯನ್ನು ‘ಕುಡಿಯುವ ಚಾಕೊಲೇಟ್’ ಎಂದು ಮಾರ್ಕೆಟಿಂಗ್ ಮಾಡಿ ಅಲ್ಪಮಟ್ಟದ ಹಣವನ್ನು ಸಂಪಾದಿಸಿದ್ದರು. ಕೆಲವು ವರ್ಷಗಳ ನಂತರ, ‘ಕ್ಯಾಡ್ ಬರಿ’ ಸೋದರರು ಸ್ಲೋನ್‌ರಿಂದ ಈ ಔಷಧಿಯನ್ನು ಖರೀದಿಸಿದರು.

ನಂತರ ಜಗತ್ತಿನ ಚಾಕೊಲೇಟ್ ಉದ್ಯಮದಲ್ಲಿ ಕ್ರಾಂತಿ ನಡೆದದ್ದು ಈಗ ಇತಿಹಾಸ. ಬ್ರಿಟಿಷ್ ವೈದ್ಯರೊಬ್ಬರು ೧೭ನೇ ಶತಮಾನದಲ್ಲಿ ಜಮೈಕಾ ದ್ವೀಪ ದಿಂದ ತಂದಿದ್ದ ಸಸ್ಯಪ್ರಭೇದವೊಂದರ ಔಷಧಿಯು, ೨೧ನೇ ಶತಮಾನದಲ್ಲೂ ‘ಕ್ಯಾಡ್ ಬರಿ’ ಎಂದು ಮನೆಮಾತಾಗಿದೆ. ಲಂಡನ್‌ನಲ್ಲಿ ವೈದ್ಯಕೀಯ ವೃತ್ತಿ ಮುಂದುವರಿಸಿದ ಸ್ಲೋನ್, ಕೂಲಿ ಕಾರ್ಮಿಕರ ಹಡಗಿನಲ್ಲಿ ತಂದ ವಿವಿಧ ವಸ್ತುಗಳ ದೊಡ್ಡ ಸಂಗ್ರಹವನ್ನು ತಮ್ಮ ಖಾಸಗಿ ವಸ್ತು ಸಂಗ್ರಹಾಲಯ ದಲ್ಲಿ ಇರಿಸಿದ್ದರು. ವಿವಿಧ ಪ್ರಭೇದದ ಪ್ರಾಣಿಗಳು, ದ್ವೀಪದಲ್ಲಿ ಸಿಕ್ಕಿದ ರತ್ನಗಳು, ಮನುಷ್ಯನ ಚರ್ಮದಿಂದ ಮಾಡಿದ ಚಪ್ಪಲಿಗಳು ಹೀಗೆ ವಿಸ್ಮಯಕಾರಿ ವಸ್ತುಗಳ ಆಗರವಾಗಿತ್ತು ಈ ಸಂಗ್ರಹಾಲಯ. ಹೀಗಾಗಿ ಲಂಡನ್ನಿನ ಪ್ರತಿಷ್ಠಿತ ವ್ಯಕ್ತಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದರು.

೧೭೫೩ರಲ್ಲಿ ಸ್ಲೋನ್ ಮರಣಿಸಿದ ನಂತರ ಈ ಅಮೂಲ್ಯ ಸಂಗ್ರಹವನ್ನು ಬ್ರಿಟಿಷ್ ಮ್ಯೂಸಿಯಂನಲ್ಲಿ ಇರಿಸಲಾಯಿತು. ಮಾಂಟ್ ಬ್ಲಾಂಕ್ ಪೆನ್ನು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಅಸಲಿಗೆ ಮಾಂಟ್ ಬ್ಲಾಂಕ್ ಎಂಬುದು ಸ್ವಿಜರ್ಲೆಂಡ್‌ನ ಜಿನಿವಾ ನಗರದಿಂದ ಸುಮಾರು ೭೦ ಕಿ.ಮೀ.
ದೂರದಲ್ಲಿರುವ ಆಲ್ಪ್ಸ್ ಪರ್ವತಶ್ರೇಣಿಯ ಹಿಮಾಚ್ಛಾದಿತ ಬೆಟ್ಟ. ಜಿನಿವಾದಲ್ಲಿ ೧೭೪೦ರಲ್ಲಿ ಜನಿಸಿದ ಹೊರಾಸ್ ಬೆನೆಡಿಕ್ಟ್ ಎಂಬ ವಿಜ್ಞಾನಿ ೨೦ರ ಹರೆಯದಲ್ಲೇ ಮಾಂಟ್ ಬ್ಲಾಕ್ ಪರ್ವತವನ್ನೇರಲು ಯತ್ನಿಸಿದ್ದರು. ಆ ವೇಳೆ ತಮ್ಮ ಬಳಿಯಿದ್ದ ಥರ್ಮಾಮೀಟರ್ ನೆರವಿನಿಂದ ಅಲ್ಲಿನ ಹವಾಮಾನ ಬದಲಾವಣೆಗಳು ಮತ್ತಿತರ ವಿಷಯಗಳ ಕುರಿತು ಸಂಶೋಽಸುತ್ತಿದ್ದರು. ಪರ್ವತದ ಎತ್ತರ ಹೆಚ್ಚಾದಂತೆ ಸೌರ ವಿಕಿರಣಗಳೂ ಹೆಚ್ಚಾಗುತ್ತವೆಯೆಂದು ವೈಜ್ಞಾನಿಕವಾಗಿ ಹೇಳಿದ ಜಗತ್ತಿನ ಮೊದಲ ವಿಜ್ಞಾನಿ ಹೊರಾಸ್ ಬೆನೆಡಿಕ್ಟ್.

ಜತೆಗೆ ಮಾಂಟ್ ಬ್ಲಾಂಕ್ ಪರ್ವತದ ಎತ್ತರ ೪೮೧೦ ಮೀ. ಎಂದು ನಿಖರವಾಗಿ ಹೇಳಿದ್ದೂ ಇವರೇ. ಇಷ್ಟಾಗಿಯೂ ಅವರಿಗೊಂದು ಕೊರಗಿತ್ತು. ಎಷ್ಟು ಬಾರಿ ಯತ್ನಿಸಿದರೂ ಅದರ ತುದಿಯನ್ನು ತಲುಪಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದನ್ನು ಇತರರಿಂದ ಮಾಡಿಸಲು ಯತ್ನಿಸಿದ ಅವರು, ಮಾಂಟ್ ಬ್ಲಾಕ್ ಪರ್ವತದ ತುದಿಯನ್ನು ಏರಿದವರಿಗೆ ದೊಡ್ಡ ಮೊತ್ತದ ಹಣವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದರು.

ಆ ಪರ್ವತದ ತಪ್ಪಲಿನಲ್ಲಿ ವಾಸವಿದ್ದ ಬಲ್ಮಟ್ ಎಂಬಾತ ಈ ಹಣದ ಆಸೆಗೆ ಪರ್ವತದ ತುದಿಯನ್ನೇರಲು ನಿರ್ಧರಿಸಿದ. ಪರ್ವತದ ಕಣಿವೆಗಳಲ್ಲಿ ಮೇಕೆಗಳನ್ನು ಬೇಟೆಯಾಡಿಕೊಂಡು ಜೀವನ ನಡೆಸುತ್ತಿದ್ದ ಈತ ೧೭೮೬ರಲ್ಲಿ ತನ್ನ ಹೆಂಡತಿಗೆ ಹೇಳದೆಯೇ ಈ ಸಾಹಸಕ್ಕೆ ಮುಂದಾದ. ಚೀಲದಲ್ಲಿ ಬ್ರಾಂದಿಯನ್ನಿರಿಸಿಕೊಂಡು ಕೊರೆಯವ ಚಳಿಯಲ್ಲಿ ಈ ಸಾಹಸಕ್ಕೆ ಶುರುಹಚ್ಚಿಕೊಂಡ. ಅಂದಿನ ಕಾಲದಲ್ಲಿ ಪರ್ವತದ ತುದಿಯನ್ನು ತಲುಪುವ ನಿಖರವಾದ ಮಾರ್ಗ ತಿಳಿದಿರಲಿಲ್ಲ; ಹೀಗಾಗಿ ಪರ್ವತಾರೋಹಣವು ಭೌತಿಕ ಸವಾಲಿನ ಜತೆಗೆ ದಾರಿ ಹುಡುಕುವ ಕಸರತ್ತನ್ನೂ ಒಳಗೊಂಡಿತ್ತು. ಮೊದಲ
ಯತ್ನದಲ್ಲಿ ದಾರಿ ಹುಡುಕಲಾಗದೆ ಅರ್ಧದಲ್ಲೇ ಯತ್ನವನ್ನು ಕೈಚೆಲ್ಲಿದ ಬಲ್ಮಟ್ ಕೆಳಗಿಳಿದ.

೧೮ನೇ ಶತಮಾನದಲ್ಲಿ, ಬೆಟ್ಟದ ಮೇಲಿರುವ ಪ್ರಾಣಿಗಳನ್ನು ಬೇಟೆಯಾಡುವವರಿಗೆ ಮಾತ್ರವೇ ಪರ್ವತಾರೋಹಣ ಸಾಧ್ಯವಾಗುತ್ತಿತ್ತು. ರಾತ್ರಿ ವೇಳೆ ಪರ್ವತದ ಮೇಲೆ ಸಿಲುಕಿದರೆ ದೇವರೇ ಕಾಪಾಡಬೇಕಿತ್ತು. ಮೊದಲ ಯತ್ನ ವಿಫಲವಾದ ಮೇಲೆ ಬಲ್ಮಟ್ ಕೆಲ ವಾರಗಳ ನಂತರ ತನ್ನೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನು ಕರೆದುಕೊಂಡು, ಚೀಲದಲ್ಲಿ ಬ್ರಾಂದಿ ಬಾಟಲಿಗಳನ್ನಿಟ್ಟುಕೊಂಡು ಪರ್ವತವೇರಲು ಶುರುಮಾಡಿದ. ಇವರ ಪರ್ವತಾರೋಹಣವನ್ನು ಹೊಸರ್ ಬೆನೆಡಿಕ್ಟ್‌ನ ಕೆಲಸಗಾರರು ದೂರದರ್ಶಕದ ಮೂಲಕ ವೀಕ್ಷಿಸುತ್ತಿದ್ದರು. ೦೮.೦೮.೧೭೮೬ರಂದು ಅವರು ಪರ್ವತದ ತುದಿಯನ್ನು ತಲುಪಿದ್ದು ಬೆನೆಡಿಕ್ಟ್‌ಗೆ ತಿಳಿಯಿತು. ತರುವಾಯ ದಲ್ಲಿ ಇಬ್ಬರೂ ಪರ್ವತಾರೋಹಿಗಳನ್ನು ಕರೆದು ಬಹುಮಾನದ ಹಣವನ್ನು ನೀಡಲಾಯಿತು.

ಪರ್ವತಾರೋಹಣದ ವೇಳೆ ತಾವು ಸಂಗ್ರಹಿಸಿದ್ದ ಹಲವು ವಸ್ತುಗಳನ್ನು ಆ ಆರೋಹಿಗಳು ಬೆನೆಡಿಕ್ಟ್‌ಗೆ ನೀಡಿದರು. ಆದರೆ ಅವರು ಪರ್ವತದ ತುದಿ ಏರಿದ್ದ ದಿನದಂದೇ ಬಲ್ಮಟ್‌ನ ಮಗಳು ಅಸುನೀಗಿದ್ದಳು. ಬಲ್ಮಟ್‌ನ ರೋಮಾಂಚಕಾರಿ ಸಾಹಸವು ಹೀಗೆ ದುಃಖದಲ್ಲಿ, ದುರಂತದಲ್ಲಿ ಕೊನೆಯಾಯಿತು. ಈ
ಸಾಹಸಿಗಳ ಶ್ರಮದ ಫಲವಾಗಿ ಮಾಂಟ್ ಬ್ಲಾಂಕ್ ಏರುವಿಕೆಯು ಮುಂದಿನ ದಿನಗಳಲ್ಲಿ ‘ಪರ್ವತಾರೋಹಣ’  ಎಂಬ ನೂತನ ಕ್ರೀಡೆಗೆ ನಾಂದಿ ಯಾಯಿತು. ಜೀವಶಾಸ್ತ್ರದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾದ ಪ್ರಾಣಿಗಳ ‘ನೈಸರ್ಗಿಕ ಆಯ್ಕೆ’ಯ ಪಿತಾಮಹ ಚಾರ್ಲ್ಸ್ ಡಾರ್ವಿನ್. ಇವರು ೧೮೫೯ ರಲ್ಲಿ ಜೀವವಿಕಾಸ ಸಿದ್ಧಾಂತದ ಬಗ್ಗೆ ಹೇಳುವಾಗ, ‘ತಮ್ಮ ನೈಸರ್ಗಿಕ ಪರಿಸರಕ್ಕೆ ಹೊಂದಿಕೊಳ್ಳುವ ವ್ಯಕ್ತಿಗಳು ಹೆಚ್ಚು ಕಾಲ ಬದುಕಬಲ್ಲರು ಮತ್ತು
ಉತ್ತಮ ಸಂತಾನೋತ್ಪತ್ತಿ ಮಾಡಬಲ್ಲರು.

ಒಂದು ವೇಳೆ ಪರಿಸರದಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ಮುಂದಿನ ಪೀಳಿಗೆಗಳಲ್ಲಿ ಹೆಚ್ಚಿನ ಬದಲಾವಣೆಯನ್ನು ನಿರೀಕ್ಷಿಸಬಹುದು’ ಎನ್ನುವ ಮೂಲಕ ನೈಸರ್ಗಿಕ ಆಯ್ಕೆಯ ಸಿದ್ಧಾಂತ ವನ್ನು ಪ್ರತಿಪಾದಿಸಿದ್ದರು. ಅಮೆಜಾನ್ ಕಾಡಿನಲ್ಲಿರುವ ಪ್ರಾಣಿ ಪ್ರಭೇದಗಳು ಜಗತ್ತಿನ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ. ಅಲ್ಲಿನ ನೈಸರ್ಗಿಕ ವಾತಾವರಣಕ್ಕೆ ಹೊಂದಿಕೊಂಡಿರುವ ಪ್ರಾಣಿಗಳು ಮತ್ತೊಂದು ಕಾಡಿನಲ್ಲಿ ಅಷ್ಟು ಸುಲಭವಾಗಿ ಜೀವಿಸಲು ಸಾಧ್ಯವಿಲ್ಲ. ಅಮೆಜಾನ್ ಕಾಡಿನಲ್ಲಿ ಬಂದೂಕು ಹಿಡಿದು ಬೇಟೆಯಾಡುವುದು ಕಷ್ಟ; ಆದರೆ ಮೌನವಾಗಿದ್ದುಕೊಂಡು ಬಾಯಲ್ಲಿ ಊದುವ ಕೊಳವೆಯ ಮೂಲಕ ಪ್ರಯೋಗಿಸುವ ವಿಷಪೂರಿತ ಬಾಣವು ಸುಮಾರು ೫೦-೬೦ ಅಡಿ ದೂರದಲ್ಲಿರುವ ಪ್ರಾಣಿಯನ್ನು ಬೇಟೆ ಯಾಡಲು ನೆರವಾಗಬಲ್ಲದು.

ಹೀಗೆಂದಿದ್ದು ಅಮೆಜಾನ್ ಕಾಡಿನಲ್ಲಿ ಸುಮಾರು ೧೧ ವರ್ಷ ಕಳೆದ ಹೆನ್ರಿ ವಾಲ್ಟರ್ ಬೇಟ್ಸ್ ಎಂಬ ಪರಿಸರವಾದಿ. ಇವರ ಸಂಶೋಧನೆಯು ಮುಂದೆ ಚಾರ್ಲ್ಸ್ ಡಾರ್ವಿನ್ನನು ‘ನೈಸರ್ಗಿಕ ಆಯ್ಕೆ’ ಎಂಬ ಸಿದ್ಧಾಂತವನ್ನು ಜನರ ಮುಂದಿಡಲು ನೆರವಾಯಿತು. ಅಮೆಜಾನ್ ಕಾಡಿನಲ್ಲಿನ ತಮ್ಮ ಸಂಶೋಧನೆ ಯಲ್ಲಿ ಹೆನ್ರಿ ಸುಮಾರು ೧೪,೦೦೦ ಹಕ್ಕಿಗಳು, ಪ್ರಾಣಿಗಳು ಮತ್ತು ಕೀಟಗಳ ಮಾದರಿಗಳನ್ನು ಸಂಗ್ರಹಿಸಿದ್ದರು. ಆ ಮಾದರಿಗಳಲ್ಲಿ ಅರ್ಧ ದಷ್ಟು ವಿಜ್ಞಾನದ ಪಾಲಿಗೆ ನೂತನ ಆವಿಷ್ಕಾರಗಳಾಗಿದ್ದವು. ಇಂಗ್ಲೆಂಡ್‌ಗೆ ಮರಳಿದ ಬಳಿಕ ಈ ಮಾದರಿಗಳನ್ನು ಅಧ್ಯಯನ ಮಾಡಿ ‘ದಿ ನ್ಯಾಚುರಲಿಸ್ಟ್ ಆನ್ ದಿ ರಿವರ್ ಅಮೆಜಾನ್ಸ್’ ಎಂಬ ಪುಸ್ತಕ ಬರೆದರು ಹೆನ್ರಿ ವಾಲ್ಟರ್ ಬೇಟ್ಸ್. ಇದರಲ್ಲಿ ಗಮನಿಸಬೇಕಾದ್ದು ‘ಮಿಮಿಕ್ರಿ’ಯ ಸಂಶೋಧನೆ.

ಹೌದು, ‘ಮಿಮಿಕ್ರಿ’ ಎಂಬುದು ಜೀವಶಾಸ್ತ್ರದ ಅಧ್ಯಯನದ ರೂಪದಲ್ಲಿ ಸಿಕ್ಕಿದ ವೈಜ್ಞಾನಿಕ ಪದ. ಮನರಂಜನೆಗಾಗಿ ಮತ್ತೊಬ್ಬರನ್ನು ಅನುಕರಿಸುವುದು
ಮಾತ್ರವೇ ‘ಮಿಮಿಕ್ರಿ’ ಎಂದುಕೊಂಡಿರುವ ಹಲವರಿಗೆ ಈ ವಿಷಯ ತಿಳಿದಿರಲಿಕ್ಕಿಲ್ಲ. ಹೆನ್ರಿ ತಮ್ಮ ನೈಸರ್ಗಿಕ ಅಧ್ಯಯನದ ನಿಮಿತ್ತ ಅಮೆಜಾನ್ ಕಾಡಿ ನಲ್ಲಿ ಸಂಶೋಧನೆ ನಡೆಸುವಾಗ ಕಂಡುಬಂದ ಕೌತುಕದ ವಿಷಯವೇ ‘ಮಿಮಿಕ್ರಿ’. ಕೀಟವೊಂದು ತನ್ನನ್ನು ರಕ್ಷಿಸಿಕೊಳ್ಳಲು ಮತ್ತೊಂದು ಕೀಟದ
ಮಾದರಿಯನ್ನು ಅನುಸರಿಸುವುದನ್ನು ಹೆನ್ರಿ ಕಂಡಿದ್ದರು. ಪಕ್ಷಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಚಿಟ್ಟೆಗಳು ಹಾರುವ ಬದಲು ಮಿಡತೆಯಂತೆ ನಿಧಾನವಾಗಿ ಮುನ್ನಡೆಯುವುದನ್ನು ಗಮನಿಸಿದ್ದ ಹೆನ್ರಿ, ಆ ಚಿಟ್ಟೆಗಳು ಇಂಥ ಅನುಕರಣೆಯ ಜತೆಗೆ ವಿಷಕಾರಿ ಅನಿಲವೊಂದನ್ನು ಹೊರ ಸೂಸುವು ದನ್ನು ಗಮನಿಸಿದ್ದರು.

ಈ ಚಿಟ್ಟೆಗಳು ತಮ್ಮ ರಕ್ಷಣೆಯ ಶೈಲಿಯನ್ನು ಮುಂದಿನ ಪೀಳಿಗೆಗಳಿಗೆ ಮುಂದುವರಿಸುವ ಸಂಶೋಧನೆಯನ್ನು ಅವರು ನಡೆಸಿದರು. ಈ ಸಂಶೋಧನೆ ಯೇ ಚಾರ್ಲ್ಸ್ ಡಾರ್ವಿನ್‌ರ ‘ಕೀಟಗಳ ನೈಸರ್ಗಿಕ ಆಯ್ಕೆ’ ಎಂಬ ಸಿದ್ಧಾಂತಕ್ಕೆ ನಾಂದಿಹಾಡಿತು. ಹೆನ್ರಿ ತಮ್ಮ ಪುಸ್ತಕದಲ್ಲಿ ಮೊದಲ ಬಾರಿಗೆ ಚಿಟ್ಟೆಯ ‘ಮಿಮಿಕ್ರಿ’ ಬಗ್ಗೆ ಬರೆದರು. ಇಂಗ್ಲಿಷ್‌ನಲ್ಲಿ ‘ಮಿಮಿಕ್’ ಎಂದರೆ ಮತ್ತೊಬ್ಬರನ್ನು ಅನುಕರಿಸುವುದು ಎಂದರ್ಥ. ಬ್ರಿಟಿಷರ ವಸಾಹತುಶಾಹಿ ಆಡಳಿತಾ ವಧಿಯಲ್ಲಿ ವಿವಿಧ ದೇಶಗಳಲ್ಲಿ ಜವಾಬ್ದಾರಿ ನಿರ್ವಹಿಸಿದ ಹಲವರು ತಮಗೆ ತಿಳಿಯದೆಯೇ ಜಗತ್ತಿನ ಹಲವು ಮಹತ್ವದ ಸಂಶೋಧನೆಗಳಲ್ಲಿ ತೊಡಗಿಸಿ ಕೊಂಡಿದ್ದು ವಿಶೇಷ.