Sunday, 15th December 2024

ಕೈರೋದಲ್ಲಿ ಡ್ರೈವ್‌ ಮಾಡೋದು ಕಲೆ, ಕಾರಣ ರಸ್ತೆಯೇ ಕ್ಯಾನ್ವಾಸ್ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್, ರಷ್ಯಾದ ಸೇಂಟ್ ಪೀಟರ್ಸಬರ್ಗ್ ಮತ್ತು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಓಡಾಡು ವಾಗ ಅವು ಜಗತ್ತಿನ ಅತ್ಯಂತ ಭಯಾನಕ ಟ್ರಾಫಿಕ್ ಜಾಮ್ ನಗರಗಳೆಂದೇ ಹೆಸರಾಗಿವೆ ಎಂಬುದು ಗೊತ್ತಾಗಿರಲಿಲ್ಲ.

ಅದರಲ್ಲೂ ಜಕಾರ್ತಾದಲ್ಲಿ ಟ್ಯಾಕ್ಸಿ ಹತ್ತಿದರೆ, ಎಷ್ಟು ಗಂಟೆಗೆ ಇಳಿಯುತ್ತೀರಿ ಎಂಬುದು ಗೊತ್ತಿರುವುದಿಲ್ಲ. ಐದಾರು ಕಿಮಿ ದೂರ ಕ್ರಮಿಸಲು ಕನಿಷ್ಠ ಒಂದು ಅಥವಾ ಒಂದೂವರೆ ಗಂಟೆಗಳಾದರೂ ಆಶ್ಚರ್ಯವಿಲ್ಲ. ಎಷ್ಟೋ ಸಲ ಕಾರಿಗಿಂತ ಮುಂಚಿತವಾಗಿ ಕಾಲ್ನಡಿಗೆ ಯಲ್ಲಿ ಬೇಗ ತಲುಪಬಹುದು. ಅದರಲ್ಲೂ Peak Hour ನಲ್ಲಿ ನೀವು ಎಷ್ಟು ಗಂಟೆಗೆ ತಲುಪುತ್ತೀರಿ ಎಂಬುದು ಡ್ರೈವರ್‌ಗೂ ಗೊತ್ತಿರುವುದಿಲ್ಲ. ಈ ಕಾರಣದಿಂದ ಜಕಾರ್ತಾ ದಲ್ಲಿರುವ ಕೆಲವು ಟ್ಯಾಕ್ಸಿಗಳಲ್ಲಿ potty (ಸುಲಭ ಕಕ್ಕಸು ಆಸನ) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಕೆಲವು ಸಲ ನಾಲ್ಕೈದು ಗಂಟೆ ಟ್ಯಾಕ್ಸಿಯಲ್ಲಿ ಇರಬೇಕಾಗಿ ಬಂದರೆ, ನೈಸರ್ಗಿಕ ಕರೆಗೆ ಸ್ಪಂದಿಸಲು ಈ ವ್ಯವಸ್ಥೆ ಅನಿವಾರ್ಯ. ಅದರಲ್ಲೂ ವಯಸ್ಸಾದವರಿಗೆ ಇದು ಅತ್ಯಗತ್ಯ. ಬ್ರೆಝಿಲ್‌ನ ರಿಯೋ ಡಿ ಜನೈರೋ ನಗರದ ಟ್ರಾಫಿಕ್ ಜಾಮ್ ಕೂಡ ಕುಪ್ರಸಿದ್ಧ. ಅಲ್ಲಿನ ಕೆಲವು ಟ್ಯಾಕ್ಸಿಗಳಲ್ಲಿ ವಯಸ್ಸಾದವರಿಗೆ ಡಯಾಪರ್ ನೀಡಲಾಗುತ್ತದೆ. ಮೂರು- ನಾಲ್ಕು ಗಂಟೆ ಕಾರಿನಲ್ಲಿ ಇರಬೇಕಾದಾಗ ಮತ್ತು ಕಾರನ್ನು ಇಳಿದು ಬೇರೆಲ್ಲೂ ಹೋಗಲು ಆಗದ ಪರಿಸ್ಥಿತಿಯಲ್ಲಿ ವಯಸ್ಸಾದವರಿಗೆ ಡಯಾಪರ್ ಉಪಯುಕ್ತವಾಗಬಹುದು.

ಇಸ್ತಾನಬುಲ್ ನಗರದ ಕೆಲವು ಟ್ಯಾಕ್ಸಿಗಳಲ್ಲಿ ಲಘು ಉಪಾಹಾರ (ಸ್ನಾಕ್ಸ್) ವನ್ನು ಸಹ ನೀಡಲಾಗುತ್ತದೆ. ಡ್ರೈವರ್ ಮತ್ತು ಪ್ರಯಾಣಿಕರ ಮಧ್ಯೆ ಕರ್ಟನ್ ಇರುವ ಟ್ಯಾಕ್ಸಿಗಳೂ ಇವೆ. ಪಾಟ್ಟಿ ಬಳಸಲು ಅಥವಾ ಡಯಾಪರ್ ಧರಿಸಲು ಇದು ಸಹಾಯಕಾರಿ. ಟ್ರಾಫಿಕ್ ಜಾಮ್ ಅಸಹನೀಯವಾಗಿರುವೆಡೆ ಟ್ಯಾಕ್ಸಿಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಇಂಥ ವ್ಯವಸ್ಥೆಗಳನ್ನು ನೀಡುವಂತೆ ಮಾರ್ಗದರ್ಶಿ ಸೂತ್ರ ಗಳನ್ನು ಕೆಲವು ನಗರಗಳಲ್ಲಿ ನೀಡಲಾಗಿದೆ.

ನಾನು ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಹೋಗುವಾಗ, ಟ್ಯಾಕ್ಸಿಯಲ್ಲಿ There are no traffic jams along the extra mile and assume that you are travelling that extra mile (ನೀವು ಹೆಚ್ಚುವರಿಯಾಗಿ ಒಂದು ಕಿ.ಮೀ. ಕ್ರಮಿಸುವ ಪಥದಲ್ಲಿ ಟ್ರಾಫಿಕ್ ಜಾಮ್ ಇರುವುದಿಲ್ಲ ಮತ್ತು ನೀವು ಆ ಪಥದಲ್ಲಿ ಸಂಚರಿಸುತ್ತಿದ್ದೀರಿ ಎಂದು ಭಾವಿಸಿ) ಎಂದು ಟ್ಯಾಕ್ಸಿಯಲ್ಲಿ ಬರೆದಿದ್ದನ್ನು
ಓದಿ ತಮಾಷೆಯೆನಿಸಿತ್ತು. ಟ್ರಾಫಿಕ್ ಜಾಮ್ ಎಂಬ ಚಕ್ರವ್ಯೂಹವನ್ನು ಬಗೆದು ಟ್ಯಾಕ್ಸಿ ಚಲಿಸುವಾಗ, ಯಾಕೋ ಆ ಒಂದು ಸಾಲು ನನಗೆ ಅತೀವ ಸಾಂತ್ವನ ನೀಡುತ್ತಿತ್ತು. ‘ಜಗತ್ತು ಬಹಳ ವಿಶಾಲವಾಗಿದೆ’ ಎಂಬ ಮಾತು ಶುದ್ಧ ಸುಳ್ಳು ಎಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ ನಲ್ಲಿ ಪ್ರಯಾಣಿಸುವಾಗ ನನಗೆ ಕ್ಷಣಕ್ಷಣಕ್ಕೂ ಅನಿಸುತ್ತಿತ್ತು. ಕಾರಣ ಆ ನಗರದಲ್ಲಿ ವಾಸಿಸುವವರು ಫ್ರೂಟ್ ಜಾಮ್ ಅನ್ನು ಸೇವಿಸು ತ್ತಾರೋ ಇಲ್ಲವೋ, ಒಮ್ಮೆ ಸೇವಿಸಿದರೂ, ಅದಕ್ಕಿಂತ ಹೆಚ್ಚು ಟ್ರಾಫಿಕ್ ಜಾಮ್ ಅನ್ನು ಅನುಭವಿಸುತ್ತಾರೆ.

ಈ ವಿಷಯದಲ್ಲಿ ನಮ್ಮ ಬೆಂಗಳೂರು ಮತ್ತು ಮುಂಬಯಿ ಯಾವ ರೀತಿಯಲ್ಲೂ ಹಿಂದಿಲ್ಲ ಬಿಡಿ. ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ ಜಾಮ್ ಬಗ್ಗೆ ಇರುವಷ್ಟು ಜೋಕುಗಳು ಬೇರೆ ಯಾವ ಟ್ರಾಫಿಕ್ ಜಾಮ್ ಬಗ್ಗೆಯೂ ಇರಲಿಕ್ಕಿಲ್ಲ. (ಒಮ್ಮೆ ಉದ್ಯೋಗ ಸಂದರ್ಶನದಲ್ಲಿ ಒಬ್ಬ  ಅಭ್ಯರ್ಥಿಗೆ ಮುಂದಿನ ಐದು ವರ್ಷಗಳಲ್ಲಿ ನೀವು ಎಲ್ಲಿರಬೇಕೆಂದು ಅಪೇಕ್ಷಿಸುತ್ತೀರಿ?’ ಎಂಬ ಪ್ರಶ್ಮೆಗೆ ಆತ, ಪ್ರಾಯಶಃ ಸಿಲ್ಕ್ ಬೋರ್ಡ್
ಜಂಕ್ಷನ್‌ನಲ್ಲಿ ಎಂದು ಹೇಳಿದ ತಮಾಷೆಯ ಉತ್ತರ ನೆನಪಾಗುತ್ತದೆ. ಹಾಗೆಯೇ ಇನ್ನೊಂದು ತಮಾಷೆಯ ವಕ್ರತುಂಡೋಕ್ತಿ – ನೀವು ಬೆಂಗಳೂರಿನಲ್ಲಿದ್ದೂ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿಲ್ಲ ಮತ್ತು ಚಲಿಸುತ್ತಲೇ ಇದ್ದೀರಿ ಅಂದ್ರೆ ನೀವು ಚೆನ್ನೈ ತಲುಪಿರುವ ಸಾಧ್ಯತೆ ಇದೆ.) ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಾಗ ಜನರಿಗೆ ಯೋಚಿಸಲು ಸಾಕಷ್ಟು ಸಮಯ ಸಿಗುವುದರಿಂದ ಬೆಂಗಳೂರಿನಲ್ಲಿ ಇಷ್ಟೊಂದು ಸ್ಟಾರ್ಟ್ ಅಪ್ ಗಳಿದ್ದಿರಬಹುದು ಎಂಬುದು ತಮಾಷೆಯಷ್ಟೇ ಅಲ್ಲ, ಕಟು ವಾಸ್ತವ ಕೂಡ ಹೌದು.

ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಅನೇಕ ಸೇತುವೆಗಳನ್ನು ಮತ್ತು – ಓವರ್‌ಗಳನ್ನೂ ದಾಟಬೇಕು, ಆ ಪೈಕಿ ಮಾರತ್ತಹಳ್ಳಿ ಸೇತುವೆ ಮತ್ತು ಮೈಸೂರು ರಸ್ತೆ -ಓವರ್ ಕೂಡ ಒಂದು ಎಂದು ನಾವು ಆಗಾಗ ಬೆಂಗಳೂರಿನ ಟ್ರಾಫಿಕ್ ಜಾಮ್ ಬಗ್ಗೆ ಮಾಡುವ ಜೋಕುಗಳು.
ಹೀಗಾಗಿ ಬೆಂಗಳೂರಿನಲ್ಲಿದ್ದವರಿಗೆ ಟ್ರಾಫಿಕ್ ಜಾಮ್‌ನ ಭಯಾನಕ ಕಥೆಗಳು ನಡುಕ ಹುಟ್ಟಿಸುವುದಿಲ್ಲ. ಹಿಮಾಲಯದಲ್ಲಿ ವಾಸಿಸುವವರಿಗೆ ಕೊರೆಯುವ ಚಳಿಯ ಬಗ್ಗೆಯೂ, ಹಿಮಾಲಯದ ಸೌಂದರ್ಯದ ಬಗ್ಗೆಯೂ ಬಣ್ಣಿಸಿದಂತೆ.

ಆದರೆ ಮೊನ್ನೆ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಇಳಿಯುವ ತನಕ ನನಗೆ ಆ ನಗರದ ಬಗ್ಗೆ ಇದ್ದ ಕಲ್ಪನೆಯೇ ಬೇರೆ. ವಿಮಾನ ನಿಲ್ದಾಣ ದಿಂದ ಕಾರನ್ನೇರಿ, ನಗರದ ಹೃದಯಭಾಗದಲ್ಲಿರುವ ಹೋಟೆಲ್‌ಗೆ ಹೋಗುವವ ತನಕ ಟ್ರಾಫಿಕ್ ಜಾಮ್ ನಲ್ಲಿ ಅನುಭವಿಸಿದ ಪರಿಸ್ಥಿತಿ ನೋಡಿ, ಇನ್ನೂ ಒಂದು ವಾರ ಈ ಕಿಷ್ಕಿಂದಾ ನಗರಿಯಲ್ಲಿ ಜೀವನ ಸಾಗಿಸುವುದು ಹೇಗಪ್ಪಾ ದೇವಾ! ಎಂದು ಉದ್ಗಾರ ತೆಗೆದಿದ್ದು ಸುಳ್ಳಲ್ಲ. ಕಾರಣ, ವಿಮಾನ ನಿಲ್ದಾಣದಿಂದ ಯಾವಾಗ ಹೋಟೆಲ್ ತಲುಪುತ್ತೇನೋ ಎಂದು ಅನಿಸಲಾರಂಭಿಸಿತ್ತು.

ಡ್ರೈವರ್ ಕೇಳಿದರೆ, ‘ಮ್ಯಾಪಿನಲ್ಲಿ ಅರ್ಧ ಗಂಟೆ ಅಂತ ತೋರಿಸ್ತಿದೆ, ಆದರೆ ಇನ್ನೂ ಹೆಚ್ಚು ಸಮಯ ಬೇಕಾಗಬಹುದು’ ಎಂದು ಹೇಳುತ್ತಿದ್ದ. ಒಂದು ಸಲ ಹಾಗೆ ಹೇಳಿದ್ದರೆ ಏನೂ ಅನಿಸುತ್ತಿರಲಿಲ್ಲ. ಮೂರ್ನಾಲ್ಕು ಸಲ ಕೇಳಿದಾಗಲೆಲ್ಲ ಹಾಗೇ ಹೇಳುತ್ತಿದ್ದ. ‘ಅದ್ಸರಿ, ಹೋಟೆಲ್ ಎಷ್ಟು ದೂರವಿದೆ?’ ಎಂದು ಕೇಳಿದೆ. ಅದಕ್ಕೆ ಆತ, ‘ಮೂರೂವರೆ ಕಿಮೀ’ ಎಂದ. ‘ಏನು, ಮೂರು ಕಿಮೀ ಕ್ರಮಿಸಲು ಅರ್ಧ ಗಂಟೆಯಾ?’ ಎಂದು
ಕೇಳಿದೆ. ‘ಅದು ಬಹಳ ಬೇಗ ಆಯಿತು. ಒಂದು ಗಂಟೆಯಾದರೂ ಆಗುವುದುಂಟು’ ಎಂದ. ನಾನು ಮರು ಮಾತಾಡದೇ ತೆಪ್ಪಗಾಗಿ ಬಿಟ್ಟೆ. ಇಪ್ಪತ್ತು ನಿಮಿಷಗಳಿಂದ ನಮ್ಮ ಕಾರು ನಿಂತಲ್ಲಿಯೇ ನಿಂತಿತ್ತು. ಆ ಸಮಯದಲ್ಲಿ ಆಮೆ, ಇರುವೆಗಳಾದರೂ ಅರ್ಧ ಕಿಮೀ ಕ್ರಮಿಸಿ ದ್ದಿರಬಹುದು. ನಮ್ಮ ಕಾರು ಮಾತ್ರ ಮುಂದಕ್ಕೆ ಹೋಗಲಾರದೇ, ಹಿಂದಕ್ಕೆ ಸರಿಯಲಾರದೇ, ಕೆಸರು ಹೊಂಡದಲ್ಲಿ ಸಿಕ್ಕಿ ಹಾಕಿಕೊಂಡ ಮಣ್ಣಿನ ಗಾಲಿಗಳ ರಥದಂತಾಗಿತ್ತು.

ಆ ಸಮಯದಲ್ಲಿ ನಾನು ಗೋಣು ಹೊರಚೆಲ್ಲಿ ಸುತ್ತ ಒಂದು ನೋಟ ಬೀರಿದೆ. ಆಗ ನಾನು ಒಂದು -ಓವರ್ ಮೇಲೆ ನಿಂತಿದ್ದು ಅನುಭವಕ್ಕೆ ಬಂದಿತ್ತು. ಹತ್ತಾರು ಸಾವಿರ ವಾಹನಗಳು -ಓವರ್ ಎರಡೂ ಮಗ್ಗುಲುಗಳಲ್ಲಿ ನಿಂತಿದ್ದವು. ಈ -ಓವರ್‌ಗಳು ಅಷ್ಟೊಂದು ವಾಹನಗಳ ಭಾರವನ್ನು ತಾಳಲಾರದೇ ಕುಸಿದು ಹೋಗದಿದ್ದರೆ ಸಾಕು ಎಂದು ಮನಸ್ಸು ಹೇಳುತ್ತಿತ್ತು. ಹಿಂದೆ-ಮುಂದೆ, ಅಕ್ಕ-ಪಕ್ಕದಲ್ಲಿರುವ
ವಾಹನ ಗಳೆಲ್ಲ ಒಂದೇ ಸಮನೆ ಹಾರ್ನ್ ಬಜಾಯಿಸುತ್ತಿದ್ದವು.

ಲಿಫ್ಟ್ ಬೇಗ ಬರುವುದಿಲ್ಲ ಎಂಬುದು ಗೊತ್ತಿದ್ದರೂ ಅದು ಬೇಗ ಬಂದೀತೇನೋ ಎಂದು ಕೆಲವರು ಲಿ- ಬಟನ್ ಅನ್ನುಒಂದೇ ಸಮನೆ ಪಟಪಟ ಅದುಮುತ್ತಾರಲ್ಲ, ಅದೇ ರೀತಿ, ಒಂದೇ ಸಮನೆ ಹಾರ್ನ್ ಒತ್ತಿದರೆ, ಎಲ್ಲರೂ ತನಗೆ ಪಕ್ಕಕ್ಕೆ ಸರಿದು, ದಾರಿ ಮಾಡಿಕೊಡು ತ್ತಾರೇನೋ ಎಂಬಂತೆ, ಸ್ಟಿಯರಿಂಗ್ ತಲೆಯನ್ನು ಬಡಿಯುತ್ತಿದ್ದರು. ಅಷ್ಟಾದರೂ ವಾಹನ ಕದಲುತ್ತಿರಲಿಲ್ಲ. ಡ್ರೈವರ್ ‘ಉಸ್ಸ್’ ಎಂದು ಕಾರನ್ನು ಬಂದ್ ಮಾಡಿ, ಮೊಬೈಲ್ ಫೋನಿನಲ್ಲಿ ಮಾತು ಆರಂಭಿಸಿದ. ಅಲ್ಲಿಗೆ ಕಾರು ಅಷ್ಟು ಬೇಗ ಅಲ್ಲಿಂದ ಕದಲುವುದಿಲ್ಲ ಎಂಬುದು ಖಾತ್ರಿಯಾ ಯಿತು.

ಸುಮಾರು ಹದಿನೈದು ನಿಮಿಷಗಳ ನಂತರ, ಕಾರು ಏದುಸಿರು ಬಿಡುತ್ತ ಅರ್ಧ ಅಡಿ ಚಲಿಸಿ ನಿಲ್ಲಲಾರಂಭಿಸಿತು. ನನಗೆ ಗೊತ್ತಿತ್ತು, ಆದರೂ ಡ್ರೈವರ್‌ನನ್ನು ‘ಹೋಟೆಲ್ ತಲುಪಲು ಇನ್ನು ಎಷ್ಟು ಹೊತ್ತು ಬೇಕು?’ ಎಂದು ಕೇಳಿದೆ. ‘ಮುಕ್ಕಾಲು ಗಂಟೆ ಆಗಬಹುದು’ ಎಂದ. ‘ಎಲಾ ಇವ್ನ’ ಎಂದೆ. ಇಪ್ಪತ್ತು ನಿಮಿಷಗಳ ಹಿಂದೆ, ಅರ್ಧ ಗಂಟೆ ಅಂತ ಹೇಳಿದವ ಈಗ ಮುಕ್ಕಾಲು ಗಂಟೆ ಅಂತ ಹೇಳುತ್ತಿದ್ದಾನಲ್ಲ? ಏನಿದು ಹೊಸ ಲೆಕ್ಕಾಚಾರ? ‘ಸಾರ್, ಮ್ಯಾಪಿನಲ್ಲಿ ತೋರಿಸಿದ್ದನ್ನು ನಿಮಗೆ ಹೇಳಿದೆ’ ಎಂದ.

‘ಹೀಗಾದ್ರೆ ಏನು ಕಥೆ ?’ ಎಂದು ಕೇಳಿದೆ. ಅದಕ್ಕೆ ಆತ, ‘ಕೈರೋಕ್ಕೆ ಇದು ನಿಮ್ಮ ಮೊದಲ ಭೇಟಿಯಾ?’ ಎಂದು ಕೇಳಿದ. ಹೂಂ ಅಂದೆ. ‘ಸಾರ್, ಕೈರೋದಲ್ಲಿ ಇದು ಸಾಮಾನ್ಯ. ಒಮ್ಮೊಮ್ಮೆ ಪೀಕ್ ಅವರ್‌ನಲ್ಲಿ ಒಂದು ಗಂಟೆಯಾದರೂ ಅರ್ಧ ಕಿಮೀ ಕ್ರಮಿಸುವುದೂ ಕಷ್ಟ. ಒಂದು ಎಷ್ಟೋ ವಾಸಿ. ಮೂರು ಕಿಮೀ ದೂರವನ್ನು ಮುಕ್ಕಾಲು ಗಂಟೆಯಲ್ಲಿ ಹೋಗಬಹುದು ಬಿಡಿ’ ಎಂದ.

ಆ ವಾಹನಗಳ ಗೊಂಡಾರಣ್ಯದಲ್ಲಿ ನಾನೊಬ್ಬ ಯಕಃಶ್ಚಿತ ವ್ಯಕ್ತಿ ಮತ್ತು ಎಲ್ಲ ಸ್ವಾತಂತ್ರ್ಯ ಕಳೆದುಕೊಂಡ ಒಬ್ಬ ಅಬ್ಬೇಪಾರಿ ಎಂದು ನನಗೆ ಆ ಕ್ಷಣದಲ್ಲಿ ಅನಿಸಿಬಿಟ್ಟಿತು. ಅಲ್ಲಿ ನಮ್ಮ ಯಾವ ಮಾತು, ಭಾವನೆಗಳಿಗೆ ಕಿಮ್ಮತ್ತೇ ಇಲ್ಲ. ಅಲ್ಲಿ ಏನೇ ಆದರೂ ನಮ್ಮ ಸಹಾಯಕ್ಕೆ ಬರಲು ಯಾರಿಗೂ ಸಾಧ್ಯವಿಲ್ಲ. ಮೊಬೈಲ್ ಜತೆಯಲ್ಲಿದ್ದುದರಿಂದ ನಾನು ಎಲ್ಲಿದ್ದೇನೆ ಎಂಬುದು ಅನ್ಯರಿಗೆ ಗೊತ್ತಾದೀತು. ಅದೂ ಆ- ಆಗಿಬಿಟ್ಟರೆ ನನಗೂ ಹೊರ ಪ್ರಪಂಚಕ್ಕೂ ಸಂಬಂಧವೇ ಇಲ್ಲ. ಆ ಕ್ಷಣದಲ್ಲಿ ನನಗೆ, ನಾನು ನಾನಲ್ಲ ಅಂತ ಅನಿಸಿಬಿಟ್ಟಿತು.

ಸುತ್ತಲೂ ಎಲ್ಲಿ ನೋಡಿದರೂ ಬರೀ ವಾಹನಗಳು. ಕಾರಿನ ಕಿಟಕಿ ಇಳಿಸಿದರೆ ಹಾರ್ನ್‌ಗಳ ಕರ್ಕಶ ಸದ್ದು. ಎಲ್ಲರಿಗೂ ಧಾವಂತ. ಒಂದಡಿ ಮುಂದೆ ಹೋಗುವುದಿಲ್ಲ ಎಂಬುದು ಗೊತ್ತಿದ್ದರೂ ಹಾರ್ನ್ ಕುಟ್ಟುವುದನ್ನು ಬಿಡುತ್ತಿರಲಿಲ್ಲ. ನನಗೆ ಈಜಿಪ್ಟಿನ ಐದಾರು ಸಾವಿರ ವರ್ಷಗಳ ಪ್ರಾಚೀನ ನಾಗರಿಕತೆಯ ಮೊದಲ ಪರಿಚಯ ಅ ಆಯಿತು. ಹದಿನೈದು ನಿಮಿಷಗಳ ನಂತರ, ಕೆಸರು ಹೊಂಡದ ಮಣ್ಣಿನಗಾಲಿ ರಥ ಹೊರಟಿತು. ಮುಂದಿನ ವಾಹನಕ್ಕೂ ನಮ್ಮ ಕಾರಿಗೂ ಕೆಳಗೂ ಮಿಲಿ ಇಂಚುಗಳ ಅಂತರವಿತ್ತು. ಮೈಗೆ ಮೈ ತಾಕಿಸಿಕೊಂಡು, ಭುಜಕ್ಕೆ ಭುಜ ಸವರಿಕೊಂಡು ವಾಹನಗಳು ಮೆಲ್ಲಮೆಲ್ಲಗೆ ತೆವಳಿಕೊಂಡು ಹೋಗಲಾರಂಭಿಸಿತು. ಆಗಲೇ ವಿಮಾನ ನಿಲ್ದಾಣದಿಂದ ಹೊರಟು ಒಂದೂವರೆ ಗಂಟೆಯಾಗಿತ್ತು.

ಹೊಟ್ಟೆ ತಾಳ ಹಾಕುತ್ತಿತ್ತು. ಜಾಸ್ತಿ ನೀರು ಕುಡಿದರೂ ಕಷ್ಟ. ಬೆಂಗಳೂರಿನ ಟ್ರಾಫಿಕ್ ನೋಡಿ ಸದಾ ಶಾಪ ಹಾಕುತ್ತಿದ್ದವನಿಗೆ ಆ ಕ್ಷಣದಲ್ಲಿ, ನಮ್ಮೂರು ಅದೆಷ್ಟು ಚೆಂದ, ಸಿಲ್ಕ ಬೋರ್ಡ್ ಜಂಕ್ಷನ್ ಹೆಸರಿಗೆ ಅನ್ವರ್ಥವಾದಂತೆ ಸಿಲ್ಕ ಥರಾನೇ ಸ್ಮೂತ್ ಎಂದು ಅನಿಸಿತು. ಈ ಅಂಕಣ ಇನ್ನೇನು ಮುಗಿಯುತ್ತ ಬಂದರೂ, ನಾನು ಇನ್ನೂ ಹೋಟೆಲನ್ನೇ ತಲುಪಿಲ್ಲ, ಹೀಗಿರುವಾಗ ಇನ್ನು ಒಂದು ವಾರ ಅಲ್ಲಿ ಈ ಟ್ರಾಫಿಕ್ ಜಾಮ್‌ ನಲ್ಲಿ ಹೇಗೆ ಕಳೆದಿರಬಹುದು? ಊಹಿಸಿ. ಅದಾಗಿ ಒಂದು ಗಂಟೆ ನಂತರ ಹಿಲ್ಟನ್ ಹೋಟೆಲ್ ಬಂದಾಗ, ಯಾವುದೋ ಅಗೋಚರ ಶಕ್ತಿ ಇರುವುದು ಖರೆ ಎಂದೆನಿಸಿತು.

ನಾನು ಎಂಬತ್ತೈದು ದೇಶ ಸುತ್ತಿದ್ದರೂ, ಟ್ರಾಫಿಕ್ ಜಾಮ್‌ನಲ್ಲಿ ಎರಡೂವರೆ ತಾಸು ಈ ರೀತಿ ಗತಿ ಗೋತ್ರವಿಲ್ಲದವಂತೆ ಬಿದ್ದಿರಲಿಲ್ಲ. ಹೋಟೆಲ್‌ಗೆ ಬಂದು ನನ್ನ ಪ್ರವರಗಳನ್ನು ಸ್ವಾಗತಕಾರಿಣಿಗೆ ಹೇಳಿದರೆ, ಕೂಲ್, ಕೈರೋದಲ್ಲಿ ಇವೆಲ್ಲ ಸಾಮಾನ್ಯ. ನಿಮಗೆ ಕೈರೋ ಅರ್ಥವಾಗ ಬೇಕೆಂದರೆ, ನೀವು ಒಂದು ವಾರ ಟ್ರಾಫಿಕ್ ಅನುಭವವನ್ನು ಪಡೆಯಬೇಕು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕದೇ ಕೈರೋ
ಅರ್ಥವಾಗೊಲ್ಲ ಬಿಡಿ. ಇನ್ನು ಒಂದು ವಾರದಲ್ಲಿ ನೀವು ವಿಭಿನ್ನ ವ್ಯಕ್ತಿಯಾಗುತ್ತೀರಿ’ ಎಂದು ನಕ್ಕುಬಿಟ್ಟಳು.

ನನ್ನ ಕಷ್ಟಗಳಿಗೆ ಸ್ವಲ್ಪವೂ ಮಿಡಿಯದೇ, ತೀರಾ ಸಹಜ ಎಂಬಂತೆ ಟಾವೆಲ್ ಜಾಡಿಸಿದಂತೆ ಕುಡುಗಿ(ಜಾಡಿಸಿ) ಹಾಕಿಬಿಟ್ಟಳಲ್ಲ ,
ಇವಳಜ್ಜಿ ಎಂದು ಮನಸ್ಸಿನಲ್ಲಿ ಅಂದುಕೊಂಡೆ. ನನ್ನ ರೂಮು ಹದಿನಾರನೇ ಮಹಡಿಯಲ್ಲಿತ್ತು. ರೂಮಿನ ಕಿಟಕಿ ಸರಿಸಿದೆ. ನೈಲ್ ನದಿ ಅಂಗಾತ ಮಲಗಿಕೊಂಡಿರುವಂತೆ ಭಾಸವಾಯಿತು. ನೈಲ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಮೇಲೆ ವಾಹನಗಳು ಇರುವೆ ಸಾಲು ಗಳನ್ನು ನಾಚಿಸುವ ರೀತಿಯಲ್ಲಿ ನಿಂತಿದ್ದವು. ಅದರ ಬೆಳಕು ನೈಲ್ ನದಿ ನೀರಿನಲ್ಲಿ ಬಿದ್ದು ಪ್ರತಿಫಲಿಸುತ್ತಿತ್ತು. ಅಷ್ಟು ದೂರ ಮತ್ತುಎತ್ತರದಲ್ಲಿದ್ದರೂ ನನ್ನ ರೂಮಿಗೆ ವಾಹನಗಳ ಹಾರ್ನ್ ಸದ್ದು ಅಪ್ಪಳಿಸುತ್ತಿತ್ತು.

ರಾತ್ರಿ ಎರಡು ಗಂಟೆಗೆ ಮಗ್ಗುಲು ಬದಲಿಸಿದರೂ ವಾಹನಗಳ ಭರಾಟೆ ಕಮ್ಮಿಯಾಗಿರಲಿಲ್ಲ. ಯಾಕೋ ಗೊತ್ತಿಲ್ಲ, ಕೈರೋ ಟ್ರಾಫಿಕ್ ಅನುಭವವನ್ನು ಪಡೆಯದೇ ಈಜಿಪ್ಟಿನ ಪ್ರಾಚೀನ ನಾಗರಿಕತೆ ಪ್ರವೇಶ ಸಾಧ್ಯವಾಗುವುದಿಲ್ಲ ಎಂಬ ಅವಳ ಮಾತುಗಳು ಪದೇ ಪದೆ ನೆನಪಾಗುತ್ತಿತ್ತು. ಮರುದಿನ ಬೆಳಗ್ಗೆ ಎದ್ದು ರೂಮಿನ ಕರ್ಟನ್ ಸರಿಸಿದರೆ, ಟ್ರಾಫಿಕ್ ದರ್ಶನ! ಆಗಲೇ ಮೈಲುದ್ದದ ಸಾಲು ಸೇತುವೆ
ಮೇಲೆನಿಂತಿತ್ತು.

ಪಿರಮಿಡ್ಡುಗಳನ್ನು ನೋಡಲೆಂದು ಹೊರಟಾಗ, ನಮ್ಮ ಟ್ರಾವೆಲ್ ಮ್ಯಾನೇಜರ್ ಹೇಳಿದ ಒಂದು ಮಾತು ಇಷ್ಟವಾಯಿತು. ‘ನನ್ನ ಈ ಮಾತನ್ನು ನೆನಪಿಸಿಕೊಂಡರೆ, ನೀವು ಕೈರೋ ಟ್ರಾಫಿಕ್ ನ್ನು ಇಷ್ಟಪಡುತ್ತೀರಿ’ ಎಂದ. ನನ್ನ ಮುಖದಲ್ಲಿ ಅದೇನು ಬೇಗ ಹೇಳು ಎಂಬ ಪ್ರಶ್ನಾರ್ಥಕ ಚಿಹ್ನೆಯಿತ್ತು. ’ಈಜಿqಜ್ಞಿಜ ಜ್ಞಿ ಉಜqsmಠಿ ಜಿo Z Zಠಿ, Zb ಠಿeಛಿ ಟZb ಜಿo qsಟ್ಠ್ಟ ZqZo’ ಎಂದ. ನನಗೆ ನಿಜಕ್ಕೂ ಆ ಸಾಲು ಬಹಳ ಪೊಯೆಟಿಕ್ ಆಗಿದೆ ಎನಿಸಿತು. ಅದನ್ನು ಕೇಳಿದ ನಂತರ ಕ್ರಮೇಣ ನಾನು ಟ್ರಾಫಿಕ್ ಬಗ್ಗೆ ಗೊಣಗುವುದನ್ನು ಬಿಟ್ಟೆ.

ಕೈರೋಕ್ಕೆ ಹೊಂದಿಕೊಳ್ಳುತ್ತಿದ್ದೇನೆ ಎಂದು ನನಗೆ ಸಮಾಧಾನವಾಗಲಾರಂಭಿಸಿತು. ಕೈರೋದಲ್ಲಿ ಟ್ರಾಫಿಕ್ ಸಿಗ್ನಲ, ಟ್ರಾಫಿಕ್ ಲೈಟ್ಸ್
ಎಂಬುದೆಲ್ಲ ಇಲ್ಲ. ಮನಸ್ಸಿಗೆ ಬಂದಂತೆ ಡ್ರೈವ್ ಮಾಡಬಹುದು. ಡ್ರೈವರ್‌ಗೆ ಡ್ರೈವಿಂಗ್ ಲೈಸೆನ್ಸ್ ಕೂಡ ಇರಬೇಕೆಂದಿಲ್ಲ. ಯಾರು, ಹೇಗೆ ಬೇಕಾದರೂ ವಾಹನ ಓಡಿಸಬಹುದು. ಒಬ್ಬ ಡ್ರೈವರ್‌ಗೆ ಈ ಭೂಮಿ ಮೇಲೆ ಅತಿಯಾದ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರ ಸಿಗುವ ನಗರ ಅಂದ್ರೆ ಕೈರೋ. ಅಲ್ಲಿನಂತೆ ಯಾರು ಬೇಕಾದರೂ, ಯಾವ ಕ್ಷಣದದರೂ ಎಡಕ್ಕೆ, ಬಲಕ್ಕೆ, ಒನ್ ವೇಯಲ್ಲಿ ಮನಸೋ ಇಚ್ಛೆ ವಾಹನ ಚಲಿಸುವ ಸ್ವಾತಂತ್ರ್ಯ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಭೂಮಿ ಮತ್ತು ಸ್ಟಿಯರಿಂಗ್ ಮಾತ್ರ ಅಲ್ಲ, ರಸ್ತೆಯೂ ಗೋಳವಾಗಿದೆ ಎಂಬುದು ಅನುಭವಕ್ಕೆ ಬರುವುದೂ ಅಲ್ಲಿಯೇ. ಆ ಟ್ರಾಫಿಕ್‌ನಲ್ಲಿ ಒಂದು ವಾರ ಮುಳುಗೆದ್ದು, ಏನೂ ಆಗದೇ ಬಂದಿದ್ದೇನೆ ಅಂದ್ರೆ ದೇವರು ದೊಡ್ಡವನು ತಾನೇ ?!