ಅಭಿಮತ
ಡಾ.ಪೂರ್ಣಿಮಾ ಜೆ.
ರಾಜಕೀಯ ಹಾಗೂ ಸಾಮಾಜಿಕ ಮುಂಚೂಣಿ ಸ್ಥಾನದಲ್ಲಿರುವವರು ಕೂಡ ಯಾವುದೇ ಸಭೆ ಸಮಾರಂಭಗಳಿಗೆ, ಪ್ರದರ್ಶನಗಳಿಗೆ, ಶಾಲಾ ಮಕ್ಕಳನ್ನು ಪದೇ ಪದೇ ಉಪಯೋಗಿಸಿಕೊಂಡು ನಾನು ಆಯೋಜಿಸಿದ್ದ ಕಾರ್ಯಕ್ರಮ ಎಷ್ಟು ಚೆನ್ನಿತ್ತು ನೋಡು ಎಂಬ ಸ್ವಯಂತುಷ್ಟಿಯ ಅಲ್ಪತನವನ್ನು ಬಿಟ್ಟುಬಿಡಬೇಕಾದ ಅನಿವಾರ್ಯತೆ ಇಂದಿದೆ.
ಸಿಎಂ ಸಿದ್ದರಾಮಯ್ಯನವರು ಶಿಕ್ಷಣ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯ ಮೇಲೆ ಸಿಟ್ಟಿಗೆದ್ದಿದ್ದು, ಶಿಕ್ಷಣ ಇಲಾಖೆಯ ಇಂದಿನ ಸ್ಥಿತಿ-ಗತಿಗೆ ಯಾರು ಕಾರಣರು ಎಂಬ ಜಿಜ್ಞಾಸೆ ಮತ್ತೊಮ್ಮೆ ಭುಗಿಲೇಳುವಂತೆ ಮಾಡಿದೆ. ದೇಶದೆಡೆಯಲ್ಲಿ ‘ಜಾಣ’ರೆಂದು ತಿಳಿಯಲ್ಪಡುವ ಕನ್ನಡಿಗರ ಬುದ್ಧಿಮತ್ತೆಯ ಸಾಣೆ ಹೀಗೆ ಹಿಡಿಯಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ, ’’web casting ಈ ವರ್ಷ ಅಳವಡಿಸಿರುವ ಕಾರಣ, ಫಲಿತಾಂಶ ಏರುಪೇರಾಗುತ್ತದೆ ಎಂಬ ಭಾವದಿಂದ ಗ್ರೇಸ್ ಮಾರ್ಕ್ಸ್ ಕೊಡಲಾಗಿತ್ತು’ ಎಂಬ ಹೇಳಿಕೆ ಅತೀ ಬಾಲಿಶ ಹಾಗು ಹಾಸ್ಯಸ್ಪದ ಎಂದೆನಿಸುವಂತಾಗಿದೆ. ‘ಕೆಮೆರಾ ಕಣ್ಣು ಪೆನ್ನನ್ನು ಕಿತ್ತುಕೊಂಡಿತೆ?’ ಎಂಬ ವ್ಯಂಗ್ಯ ಮುಖಕ್ಕೆ ರಾಚುವಂತೆ ‘ಪರೀಕ್ಷಾ- ದರ್ಶನ ಮೀಮಾಂಸೆ’ಯ ಒಟ್ಟು ಸಾರವೋ ಎಂದೆನಿಸುತ್ತಿದೆ.
ಅಂದರೆ ಇಷ್ಟೆಲ್ಲ ಸರಕಾರಗಳು, ಇಲಾಖೆ ಮತ್ತು ವ್ಯಾಸಂಗಕ್ಕೆ ಸಂಬಂಧಿಸಿದ ಎಲ್ಲರೂ ಇಷ್ಟು ದಿವಸ ಜಾಣ ಕುರುಡುತನದಿಂದ ಇಲಾಖೆಯನ್ನು ನಡೆಸಿಕೊಂಡು
ಬಂದಿzರೆಯೇ? ಎಲ್ಲರೂ ಸ್ವಲ್ಪಮಟ್ಟಿಗೆ ಆತ್ಮಶೋಧನೆಯಲ್ಲಿ ತೊಡಗಿ, ಸಾಂದರ್ಭಿಕವಾಗಿ ಕಟ್ಟು-ನಿಟ್ಟಿನ ನಿರ್ಣಯಗಳನ್ನು ತೆಗೆದುಕೊಂಡಾಗ ಮುಂದಿನ
ದಿನಗಳದರೂ ಈ ಕಾವಿ ಎಂಬ ಪಿಡುಗಿನಿಂದ ರಾಜ್ಯದ ಶೈಕ್ಷಣಿಕ ಯಂತ್ರವನ್ನು ಬಿಡಿಸಿಕೊಳ್ಳಬಹುದು ಹಾಗು ಗಟ್ಟಿಕಾಳುಗಳಿಂದ ಒಳ್ಳೆಯ ನಾಳೆಯನ್ನು
ಭದ್ರಗೊಳಿಸಬಹುದು.
ಯತನ ಕರ್ತವ್ಯವದು. ನಮಗೆ ವಿದ್ಯಾಭ್ಯಾಸ |
ಹಿತಪರಿಜ್ಞಾನ ಯತಾನುಭವ ಫಲಿತ|
ಸತತಯತ್ನದಿನಾತ್ಮಶಕ್ತಿ ಪರಿವಽಪುದು |
ಯತನ ಜೀವನ ಶಿಕ್ಷೆ-ಮಂಕುತಿಮ್ಮ
ಸತತ ಪ್ರಯತ್ನವೇ ಪರಿಪೂರ್ಣ ವಿದ್ಯಾಭ್ಯಾಸದೆಡೆಗೆ ನಮ್ಮನ್ನು ಕರೆದೊಯುತ್ತದೆ ಎಂಬಂತಹ ಹಿರಿಯರ ಅನುಭವವಾಣಿಗಳೆಲ್ಲವನ್ನೂ ಗಾಳಿಗೆರಚಿದಂತಿದೆ. ಈ
ಎಡವಟ್ಟು ಆದೆಷ್ಟು ವರ್ಷಗಳ ಒಟ್ಟು ಮೊತ್ತವೋ?! ಸರ್ವಜ್ಞನನ ವಚನದಂತೆ ತಂದೆ, ತಾಯಿ, ಗುರುಗಳೆಲ್ಲರೂ ಇಂದು ಮಕ್ಕಳ ಶತೃಗಳಾಗಿದ್ದೇವೆಯೇ?
ಇಷ್ಟು ವರ್ಷಗಳಿಂದ ‘ಜಾಣ-ಜಾಣೆಯರ ಜಿ’ ಗಳೆಂದು ಪ್ರಸಿದ್ಧವಾದ ಜಿಲ್ಲೆಗಳು, (ಅದೆಷ್ಟೋ ವರ್ಷಗಳಿಂದ ಪುಟ್ಟ ಪುಟ್ಟ ಮಕ್ಕಳು ಮನೆ-ಮಾರು ಬಿಟ್ಟು ಈ ಜಿಲ್ಲೆಗಳ ವಸತಿ ಶಾಲೆಗಳಲ್ಲಿ ತಮ್ಮ ಪರಿಜನರೆಲ್ಲರನ್ನೂ ತೊರೆದು ಬಾಲ್ಯವನ್ನು ಶಿಕ್ಷಣವೆಂಬ ಆಗ್ನಿಕುಂಡಕ್ಕೆ ‘ಸ್ವಾಹಾ’ ಎಂದು ತಿಲಾಂಜಲಿ ಬಿಟ್ಟಿದ್ದಿದೆ), ಕೆಮೆರಾ ಬಂದಾಕ್ಷಣ ಹಾವು-ಏಣಿಯಾಟದ ೯೮ ರಿಂದ ೮ ಕ್ಕೆ ಇಳಿವ ಕಾಯಿಯಂತೆ ಜರ್ಗನೆಂದು ಕೆಳಗೆ ಬಿದ್ದಿದ್ದರಿಂದ, ಇಲಾಖೆಯ ವತಿಯಿಂದ ಆಮೂಲಾಗ್ರ ಹಾಗು ಕಟ್ಟು-ನಿಟ್ಟಿನ ಕಾರ್ಯಾಚರಣೆ ಅತ್ಯಗತ್ಯ, ಇವರುಗಳ ತಪ್ಪಿಗೆ ಮಕ್ಕಳನ್ನು ದಂಡಿಸುವ ಅವಶ್ಯಕತೆಯಿಲ್ಲ, ಏಕೆಂದರೆ ‘ಸುಟ್ಟ ಹಗ್ಗದ ಬೂದಿ ರೂಪ ಮಾತ್ರದಿ’ ಎಂಬ ಪರಿಸ್ಥಿತಿ ಈ ಮಕ್ಕಳದು. ಅವರು ಶಿಕ್ಷಿತರಂತೆ ಕಾಣುತ್ತಾರೆ.
ಶಿಕ್ಷಣವು ಒದಗಿಸಬೇಕಾದ ಗಟ್ಟಿತನ ಅವರಲ್ಲಿಲ್ಲ. ಶೇ.೯೯ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗೆ ಕನ್ನಡ ಓದಲೇಬಾರದು ಎಂಬ ಸಮಾಚಾರ ಹೇಗಿದೆಯೆಂದರೆ ಇಡೀ ಮಕ್ಕಳ ಸಂಕುಲವೇ ನಮ್ಮನ್ನು ‘ಬದುಕಿಸಿ’ ಎಂದು ಗೋಗರೆದಂತಿದೆ. ಶಿಕ್ಷಕವೃಂದದವರೆ ಇಂದು ಉತ್ತರ ನೀಡಬೇಕಾಗಿದೆ. ಇತ್ತೀಚೆಗೆ ಮಾತನಾಡುತ್ತಾ
ನಮ್ಮ ದೇಶದ ಮೇಧಾವಿಗಳಲ್ಲೊಬ್ಬರು, ‘ಇಲಾಖೆಯ ಬಗೆಗಿನ. ಇಡೀ ಶಿಕ್ಷಣದ ಬಗೆಗಿನ ಅದರಕ್ಕಿಂತ ಕೆಮೆರಾ ಭಯವೇ ಹೆಚ್ಚಾಯ್ತ?’ ಎಂಬ ಮಾರ್ಮಿಕ ಪ್ರಶ್ನೆಯನ್ನು ಕೇಳಿದರು. ಶಿಕ್ಷಣದ ಬಗೆಗಿನ ಆದರ, ಇದರ ಬುನಾದಿ ಬಹಳ ಭದ್ರವಾಗಿರಬೇಕು ಎಂಬ ಒತ್ತಾಸೆ ಯಾರ ಮನಸ್ಸಿನಲ್ಲಿಯೂ ಉಳಿದಂತೆ ತೋರುವು ದಿಲ್ಲ.
ಕೆಮೆರಾಗಳಿದ್ದರೆ ಮಾತ್ರ ನಾನು ಸರಿಯಾಗಿ ಕರ್ತವ್ಯ ನಿರ್ವಹಿಸುವೆ ಎಂದರೆ ಇದೆಂತಹ ವಿಕೃತ ಮನಸ್ಥಿತಿ? ಹಾಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿಇಲಾಖೆಯ ವತಿಯಿಂದ ಪ್ರತಿ ಶಾಲೆಯ ಕಲಿಕಾ ಮಟ್ಟ ಹೆಚ್ಚಿಸುವ ಪ್ರಯತ್ನಗಳನ್ನು ನೂರ್ಮಡಿಗೊಳಿಸಬೇಕಾಗಿದೆ. ಪ್ರತಿ ವರ್ಷ ನಿಯಮಿತವಾಗಿ ಪರೀಕ್ಷೆಗಳನ್ನು ಕಟ್ಟುನಿಟ್ಟಿ ನಿಂದ ನಡೆಸಿ, ಯಾವುದೇ ವಾಮಮಾರ್ಗಗಳನ್ನು ಬಳಸದೇ ಯಾವಾಗಲೂ ಕೆಳಗಿನ ಸ್ಥಾನದಲ್ಲಿಯೇ ಕಂಡುಬಂದ ಜಿಲ್ಲೆಗಳ ಇಡೀ ಶಿಕ್ಷಕವೃಂದದವರ ಮನೋಸ್ಥೆರ್ಯವನ್ನು ಸರಕಾರ ಅಂಕಗಳ ಬಡತನದಲ್ಲಿಯೂ ನೈಜ್ಯತೆಯನ್ನು ಗಾಳಿಗೆರಚದೇ ಲಕ್ಷೋಪಲಕ್ಷ ವಿದ್ಯಾರ್ಥಿಗಳಿಗೆ ನಡುವಳಿಕೆಯ ಮೇಲಂಕ್ತಿ ಹಾಕಿಕೊಟ್ಟಿದ್ದಕ್ಕಾಗಿ ಪುರಸ್ಕರಿಸಬೇಕು. ಒಂದೊಂದು ಸರತಿ ಸರಕಾರವೇ ಶಿಕ್ಷಕರನ್ನು ನೂರಾರು ಶಿಕ್ಷಣೇತರ ಕೆಲಸಗಳಿಗೆ ಬಳಸಿಕೊಳ್ಳುವುದರಿಂದ, ಯಾರಿಗೂ ನಿಜವಾಗಿಯೂ ಶಿಕ್ಷಣದ ಬಗ್ಗೆ, ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲವೇ ಎಂಬ ಪ್ರಶ್ನೆ ಭುಗಿಲೇಳುತ್ತದೆ,
ಶಿಕ್ಷಕರ ಸಂಪೂರ್ಣ ಸಮಯವು ಮಕ್ಕಳ ಪ್ರಗತಿಗೆ ಮೀಸಲಾಗುವ ರೀತಿಯಲ್ಲಿ, ಶಿಕ್ಷಕರ ಓದು, ಅಧ್ಯಯನ, ಚರ್ಚೆ-ವಿಮರ್ಶೆ, ಮಕ್ಕಳ ಪ್ರಗತಿಯ ಕಾರ್ಯಾಗಾರ ಗಳು ಇವುಗಳಲ್ಲಿ ವಿನಿಯೋಗವಾಗುವಂತೆ ಇಲಾಖೆ ಕಾರ್ಯತಂತ್ರ ರೂಪಿಸಬೇಕು. ಅಲ್ಲದೆ ಶಿಕ್ಷಕರ ಗುಣ ಮಟ್ಟದ ಮೌಲ್ಯಾಂಕನ (Teachers’ Efficiency
Audit) ) ಮೇಲಿಂದ ಮೇಲೆ ನಡೆಯಬೇಕು. ಯಾವುದೋ ಕಾಲದಲ್ಲಿ ಒಂದು ಡಿಗ್ರಿಯನ್ನು ಪಡೆದುಕೊಂಡ ಎಷ್ಟೋ ಜನ ಶಿಕ್ಷಕರು ಮುಂದೆ ಮತ್ತೆಂದೂ ಹೊಸದೊಂದು ಪುಸ್ತಕವನ್ನು ತೆಗೆದು ಓದುವುದಿಲ್ಲ. ಅತೀ ತೀವ್ರಗತಿಯಲ್ಲಿ ಬದಲಾಗುತ್ತಿರುವ ಆಧುನಿಕ ಜಗತ್ತಿನ ಕಾಲಚಕ್ರದ ಓಟಕ್ಕೆ ನಮ್ಮ ಶಿಕ್ಷಕರು ಮಕ್ಕಳನ್ನು ಬೆಳೆಸಲು ಸನ್ನದ್ಧರಾಗಿದ್ದಾರೆಯೇ ಎಂಬ ಮೌಲ್ಯಾಂಕನ ಮೇಲಿಂದ ಮೇಲೆ ನಡೆದು. ನ್ಯೂನ್ಯತೆಗಳು ಕಂಡುಬಂದಲ್ಲಿ ಆ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ಇಲಾಖೆಯಿಂದ ಸರಕಾರದಿಂದ ಆಗಬೇಕು, ಅಂದಾಗ ಮಾತ್ರ ‘ಜಾಣ-ಜಾಣೆಯರ ನಾಡೆಂಬ’ ಬಿರುದಿಗೆ ನಾವು ಅರ್ಹರಾಗುತ್ತೇವೆ.
ರಾಜಕೀಯ ಹಾಗೂ ಸಾಮಾಜಿಕ ಮುಂಚೂಣಿ ಸ್ಥಾನದಲ್ಲಿರುವವರು ಕೂಡ ಯಾವುದೇ ಸಭೆ ಸಮಾರಂಭಗಳಿಗೆ, ಪ್ರದರ್ಶನಗಳಿಗೆ, ಶಾಲಾ ಮಕ್ಕಳನ್ನು ಪದೇ ಪದೇ ಉಪಯೋಗಿಸಿಕೊಂಡು ನಾನು ಆಯೋಜಿಸಿದ್ದ ಕಾರ್ಯಕ್ರಮ ಎಷ್ಟು ಚೆನ್ನಿತ್ತು ನೋಡು ಎಂಬ ಸ್ವಯಂತುಷ್ಟಿಯ ಅಲ್ಪತನವನ್ನು ಬಿಟ್ಟುಬಿಡಬೇಕಾದ ಅನಿವಾರ್ಯತೆ ಇಂದಿದೆ. ಯಾವುದೇ ಕಾರ್ಯಕ್ರಮಗಳಿರಲಿ ಪಾಪದ ಮಕ್ಕಳು ಸಾಲುಗಟ್ಟಿ ರಸ್ತೆಯಲ್ಲಿ ಗಂಟೆಗಟ್ಟಲೆ ನಿಂತು ಹಿರಿಯರಿಗೆ ಬಹುಪರಾಕ್ ಹೇಳುವ
ದೃಶ್ಯ ನಿಜಕ್ಕೂ ಅಸಹ್ಯಕರ. ಇಂತಹ ಅನಿಷ್ಟಗಳೆಲ್ಲ ತೊಲಗಬೇಕು.
ಪಾಲಕರಾದ ನಾವುಗಳು, ಶಾಲೆಗಳು ಹಾಗೂ ಇಡೀ ವ್ಯವಸ್ಥೆ, ಮಕ್ಕಳು ೧೦ನೇಯ ತರಗತಿ ತಲುಪಿದಾಗಲೇ ಎಚ್ಚೆತ್ತುಕೊಳ್ಳುತ್ತೇವೆ. ಮರವಾಗಿ
ಬೆಳೆದದ್ದನ್ನು ಬಗ್ಗಿಸಲು ನೋಡುತ್ತೇವೆ. ಇದರ ಬದಲು ಮಕ್ಕಳ ಎಳೆತನದಲ್ಲಿಯೇ ಅವರಿಗೆ ಒಳ್ಳೆಯ ಶಿಕ್ಷಣ ಕೊಡುವ ಪ್ರಯತ್ನ ಇನ್ನಿಲ್ಲದಂತೆ ನಡೆಯಬೇಕು.
ಕಲಿಕಾ ಸಂವಹನದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಸ್ವ-ಇಚ್ಛೆಯಿಂದ ತೊಡಗಿಸಿಕೊಳ್ಳುವ ವಾತಾವರಣ ಶಿಕ್ಷಕರು ನಿರ್ಮಿಸಬೇಕಾದದ್ದು ಅತ್ಯಗತ್ಯ. ನುರಿತ ಸಂಪ
ನ್ಮೂಲ ವ್ಯಕ್ತಿಗಳೊಡನೆ ಶಿಕ್ಷಕರ ಬೆರೆಯುವಿಕೆಗಳು ನಡೆದಾಗ ಮಾತ್ರ ಸುರಂಗದಾಚೆಗೆ ಬೆಳಕನ್ನು ಕಾಣಬಹುದು. ಇದು ನಮ್ಮಗಳ ಮಹಾ ಭಾರತದ ಯುದ್ಧ. ನಮ್ಮ ಮಕ್ಕಳನ್ನು ಹದಗೊಳಿಸಿ ಸನ್ನದ್ಧಗೊಳಿಸದಿದ್ದರೆ ನಾವು ನಮ್ಮ ಧರ್ಮಯುದ್ಧವನ್ನು ಸೋತಂತೆ. ನಮ್ಮ ಪ್ರೀತಿಯ ಭಾರತವನ್ನು ಸೋಲಿಸಿದಂತೆ.
(ಲೇಖಕರು: ಶಿಕ್ಷಣ ತಜ್ಞರು, ಅಧ್ಯಕ್ಷರು, ಜ್ಞಾನಸುಧಾ
ಶಿಕ್ಷಣ ಸಂಸ್ಥೆ, ಬೀದರ)