Monday, 16th September 2024

ಕೊಟ್ಟ ಅವಕಾಶ ಬಳಸಿಕೊಳ್ಳುವರೇ ಈ ಇಬ್ಬರು!?

ಅಶ್ವತ್ಥಕಟ್ಟೆ
ರಂಜಿತ್ ಎಚ್. ಅಶ್ವತ್ಥ

ರಾಜಕೀಯದಲ್ಲಿ ಗಾಡ್ ಫಾದರ್‌ಗಳಿಲ್ಲದೇ ಅವಕಾಶ ಸಿಗುವುದಿಲ್ಲ ಎನ್ನುವ ಮಾತಿದೆ. ಕೆಲವೊಮ್ಮೆ ಅವಕಾಶ ಸಿಕ್ಕರೂ ಅದನ್ನು
ಬಳಸಿಕೊಳ್ಳುವುದು ಹೇಗೆ ಎನ್ನುವುದು ತಿಳಿಯದೇ ಹಿಂದೆ ಬಿದ್ದಿರುವ ಅನೇಕರನ್ನು ನೋಡಿದ್ದೇವೆ. ಆದರೆ ಯಾರು ಯಾವ ರೀತಿ ಹೊರಹೊಮ್ಮುತ್ತಾರೆ ಎನ್ನುವುದೇ ಮುಖ್ಯವಾಗುತ್ತದೆ.

ರಾಜಕೀಯದಲ್ಲಿ ಅವಕಾಶದ ಬಗ್ಗೆ ಹೇಳುವುದಾದರೆ, ಕೆಲ ಪಕ್ಷಗಳು ಹಿರಿಯ ನಾಯಕರ ನೆರಳಲ್ಲಿ ಯುವ ಪಡೆಯನ್ನು ಸಿದ್ಧಪಡಿಸಿಕೊಳ್ಳುತ್ತವೆ. ಇನ್ನು ಕೆಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣದ ನೆಪದಲ್ಲಿ ವಂಶಸ್ಥರಿಗೆ ನಾಯಕತ್ವ ನೀಡುತ್ತಾರೆ. ಅವರನ್ನೇ ಆ ಪಕ್ಷದ ಕಾರ್ಯಕರ್ತರು ಶಿರಸಾವಹಿಸಿ ಪಾಲಿಸುತ್ತಾರೆ. ಭಾರತದಲ್ಲಿ ನೋಡುವುದಾದರೆ ಬಿಜೆಪಿ ಹಾಗೂ ಕಮ್ಯೂನಿಸ್ಟರಲ್ಲಿ ಈ ಕುಟುಂಬ ರಾಜಕಾರಣಕ್ಕೆ ಹೆಚ್ಚಿನ ಮಹತ್ವವಿಲ್ಲ. ಇತ್ತೀಚಿಗೆ ಕಮ್ಯೂನಿಸ್ಟ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದು ಕೊಂಡರೂ, ಕುಟುಂಬ ರಾಜಕಾರಣಕ್ಕೆಂದು ಅವಕಾಶ ನೀಡಿಲ್ಲ ಎನ್ನುವುದನ್ನು ಒಪ್ಪಬೇಕು.

ಇನ್ನು ಬಿಜೆಪಿಯಲ್ಲಿ ಒಂದು ನಾಯಕತ್ವ ಮುಗಿಯುತ್ತಿದೆ ಎನ್ನುವ ಮೊದಲೇ, ಅವರಿಗೆ ಹೆಗಲಾಗಿ ನಿಲ್ಲಲ್ಲು ಮತ್ತೊಂದು ತಂಡ ಸಿದ್ಧವಾಗಿರುತ್ತದೆ. ಈ ಎರಡನೇ ಹಂತದಲ್ಲಿ ನಾಯಕರಲ್ಲಿ ಪ್ರಭಾವಿಗಳೇ ಇರಬೇಕೆಂದಿಲ್ಲ. ಎಲ್ಲೋ ತೆರೆಮರೆಯಲ್ಲಿರುವ
ನಾಯಕನೊಬ್ಬ ದಿಗ್ಗನೆ ಪ್ರಮುಖ ನಾಯಕನಾಗಿ ಹೊರಹೊಮ್ಮುವುದನ್ನು ನೋಡಿದ್ದೇವೆ. ಈ ರೀತಿಯ ಅಚ್ಚರಿಯ ಆಯ್ಕೆಗಳು ಬಿಜೆಪಿಯಲ್ಲಿ ಮಾತ್ರ ಸಾಧ್ಯ!

ಹಾಗೇ ನೋಡಿದರೆ, ಪ್ರತಿಯೊಂದು ರಾಜಕೀಯ ಪಕ್ಷಗಳು ನಡೆಯುವುದೇ ಹೀಗೆ. ಯಾವುದೇ ಪಕ್ಷ ಬಲಿಷ್ಠವಾಗಿ ಬೆಳೆಯಬೇಕಾದರೆ, ‘ಹಳೆ ಚಿಗುರು’ ಇರುವಾಗಲೇ ಮುಂದಿನ ಪೀಳಿಗೆಯ ನಾಯಕತ್ವ ಪ್ರವರ್ಧಮಾನಕ್ಕೆ ಬರಬೇಕು. ಆಗ ಮಾತ್ರ ಹಿಂದಿನ ಪರಂಪರೆ ಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ. ಉದಾಹರಣೆಗೆ ಸ್ವಾತಂತ್ರ್ಯಾ ನಂತರ ಭಾರತದ ರಾಜಕೀಯದಲ್ಲಿ ಕಾಂಗ್ರೆಸ್
ಬಂದದ್ದು ಹೀಗೆಯೇ. ನೆಹರು ಇರುವಾಗಲೇ, ಇಂದಿರಾ ಗಾಂಧಿ ಅವರಿಗೆ ನೇರವಲ್ಲದಿದ್ದರೂ ಪರೋಕ್ಷವಾಗಿ ರಾಜಕೀಯ ಪಟ್ಟನ್ನು ಕರಗತಗೊಳಿಸಲಾಯಿತು. ಇಂದಿರಾ ಗಾಂಧಿ, ನಂತರ ಸಂಜಯ್ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಿಗೆ ರಾಜಕೀಯ ಒಳಹೊರಗಳನ್ನು ತಿಳಿಸಿದರು.

ಆದರೆ ಕಾಂಗ್ರೆಸ್ ನಾಯಕತ್ವ ಕೇವಲ ಒಂದು ಮನೆತನಕ್ಕೆ ಸೀಮಿತವಾಗಿತ್ತು ಎನ್ನುವುದು ಬೇರೆ ಮಾತು. ಈ ರೀತಿ ಕೇವಲ ಒಂದು ಕುಟುಂಬಕ್ಕೆ ಮಾತ್ರ ನಾಯಕತ್ವವನ್ನು ಸೀಮಿತಗೊಳಿಸಿದ್ದರಿಂದಲೇ, ರಾಜೀವ್ ಹಾಗೂ ಸಂಜಯ್ ಗಾಂಧಿ ಅವರ ನಿಧನವನ್ನು ಇಡೀ ಪಕ್ಷ ಯೋಚಿಸಿಯೂ ಇರಲಿಲ್ಲ. ಆದ್ದರಿಂದ ಅವರ ಬಳಿಕ ನಾಯಕರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹಾಗೂ ಸೋನಿಯಾ ಗಾಂಧಿ ಅವರನ್ನು ರಾಜಕೀಯಕ್ಕೆ ಕರೆತರಲು ಹಲವು ವರ್ಷ ಶ್ರಮಪಡಬೇಕಾಯಿತು. ಆದರೆ ಬಿಜೆಪಿ ಉದಯವಾದ ದಿನದಿಂದಲೂ ಈ ರೀತಿಯ ಸಮಸ್ಯೆ ಎದುರಾಗಿಲ್ಲ. ಜನಸಂಘದಿಂದ ಬಿಜೆಪಿಯಾದ ದಿನದಿಂದಲೂ ಬಿಜೆಪಿಯಲ್ಲಿ ಹಲವು ಹಿರಿಯ ನಾಯಕರು ಪಕ್ಷವನ್ನು ಸಂಘಟನೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಟಲ ಬಿಹಾರ
ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಪ್ರಮೋದ್
ಮಹಾಜನ್, ಅನಂತಕುಮಾರ ಹೀಗೆ ಸಾಲು ಸಾಲು ನಾಯಕರು ಆರಂಭದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದರು.

ಮೊದಲ ಹಂತದ ನಾಯಕತ್ವ ತೆರೆಮರೆಗೆ ಸರಿಯುತ್ತಿದೆ ಎನ್ನುವ ಹೊಸ್ತಿಲಿನಲ್ಲಿಯೇ ನರೇಂದ್ರ ಮೋದಿ, ಅಮಿತ್ ಶಾ ಆಂಡ್ ಟೀಂ ಬಿಜೆಪಿಯ ಜವಾಬ್ದಾರಿಯನ್ನು ಹೋರುವುದಕ್ಕೆ ತಯಾರಿ ನಿಂತಿತ್ತು. ವಾಜಪೇಯಿ ಅವರ ಸ್ಥಾನಕ್ಕೆ ಮೋದಿ ಅವರು ಬಂದಾಗ, ಅವರಿಗೆ ಸಲಹೆ ನೀಡಲು ಸುಷ್ಮಾ ಸ್ವರಾಜ್, ಅನಂತಕುಮಾರ, ವೆಂಕಯ್ಯ ನಾಯ್ಡು ಸೇರಿದಂತೆ ಹಲವು ನಾಯಕರಿದ್ದರು. ಇದೀಗ ನರೇಂದ್ರ ಮೋದಿ, ಶಾ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬಿಜೆಪಿ ಇನ್ನೊಂದು ದಶಕದ ಕಾಲ ನಡೆಯಬಹುದು. ಆದರೆ
ಆ ನಂತರ ಎನ್ನುವ ಭವಿಷ್ಯದ ಬಗ್ಗೆ ಈಗಲೇ ಯೋಚಿಸುತ್ತಿರುವ ನಾಯಕರು ಹಲವು ಯುವಕರನ್ನು ಮುನ್ನೆಲೆಗೆ ತರುತ್ತಿದ್ದಾರೆ. ಆದ್ದರಿಂದ ಆ ನಂತರ ಮತ್ತೊಂದು ಪಡೆ ಸಜ್ಜಾಗುತ್ತದೆ ಎನ್ನುವ ವಿಶ್ವಾಸ ಬಿಜೆಪಿಯಲ್ಲಿದೆ.

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವ ವ್ಯತ್ಯಾಸವೇ ಇದು. ಕಾಂಗ್ರೆಸ್‌ನಲ್ಲಿ ಭವಿಷ್ಯದಲ್ಲಿರುವ ನಾಯಕರು ಯಾರು ಎಂದರೆ, ಗಾಂಧಿ ಕುಟುಂಬದ ಒಬ್ಬ ಸದಸ್ಯರನ್ನು ತೋರಿಸುತ್ತಾರೆ. ಆದರೆ ಬಿಜೆಪಿಯಲ್ಲಿ ನಿರೀಕ್ಷಿಸಿದ್ದಕ್ಕಿಂತ ‘surprise’ ಕ್ಯಾಂಡಿಡೇಟ್ ತರುವ ಮೂಲಕ ಹೊಸತನ ಹಾಗೂ ಕುಟುಂಬ ರಾಜಕಾರಣಕ್ಕೆ ಹೆಚ್ಚು ಸ್ಪೇಸ್ ನೀಡುವುದಿಲ್ಲ.

ಇನ್ನು ರಾಜ್ಯ ಬಿಜೆಪಿಯ ಬಗ್ಗೆ ನೋಡುವುದಾದರೆ, ಇಲ್ಲಿ ಬಿಜೆಪಿ ಶುರುವಾದ ದಿನದಿಂದ ಇಲ್ಲಿಯವರೆಗೆ ‘ಮುಂದಿನ ನಾಯಕ?’ ಯಾರು ಎನ್ನುವ ಪ್ರಶ್ನೆ ಹೆಚ್ಚಾಗಿ ಬರುತ್ತಿರಲಿಲ್ಲ. ಆರಂಭದ ದಿನದಿಂದಲೂ, ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ, ಅನಂತ ಕುಮಾರ, ಕೆ.ಎಸ್. ಈಶ್ವರಪ್ಪ ಸೇರಿ ಕೆಲ ನಾಯಕರು ಡ್ರೈವ್ ಮಾಡುತ್ತಿದ್ದರು.

ವಿಧಾನಸಭೆಯಲ್ಲಿ ಒಂದೂ ಸ್ಥಾನ ಇಲ್ಲದ ದಿನದಿಂದ, ಸ್ಪಷ್ಟ ಬಹುಮತದೊಂದಿಗೆ ಮೂರನೇ ಮಹಡಿ ಪ್ರವೇಶಿಸುವ ಎಲ್ಲ ಹಂತದಲ್ಲಿ ಈ ನಾಯಕರೇ ನಾಯಕತ್ವವನ್ನು ವಹಿಸಿಕೊಂಡಿದ್ದರು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಕೊಂಡು ಹೊರನಡೆದಾಗಲೂ, ಅನಂತಕುಮಾರ ಹಾಗೂ ಇನ್ನಿತರೆ ನಾಯಕರು ಬಿಜೆಪಿಯನ್ನು ಮುನ್ನಡೆಸುವ ಜವಾಬ್ದಾರಿ ಯನ್ನು ವಹಿಸಿಕೊಂಡಿದ್ದರು. ಬಳಿಕ ಯಡಿಯೂರಪ್ಪ ವಾಪಸಾದ ಬಳಿಕ ಪುನಃ ಮೊದಲಿನ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ
ತೊಡಗಿಸಿಕೊಂಡರು. ಆದರೀಗ ಮುಂದೆ ಯಾರು ಎನ್ನುವ ಪ್ರಶ್ನೆ ಪಕ್ಷದ ಮುಂದೆ ಬಂದಿದೆ. ಈ ಪ್ರಶ್ನೆಗೆ ಅನೇಕರು ನೂರಾರು ಹೆಸರನ್ನು ನೀಡುತ್ತಿದ್ದಾರೆ. ಆದರೆ ಈ ಯಾವ ಹೆಸರುಗಳು ಈ ಹಿಂದಿನ ನಾಯಕತ್ವದಷ್ಟು ಗಟ್ಟಿಯಾಗಿ ವರಿಷ್ಠರಿಗೆ ಕಾಣಿಸುತ್ತಿಲ್ಲ.

ವರಿಷ್ಠರಿಗಷ್ಟೇ ಅಲ್ಲ ಪಕ್ಷದ ಕಾರ್ಯಕರ್ತರು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಈ ಜಟಿಲ ಪ್ರಶ್ನೆಗೆ ಉತ್ತರ ಸಿಗದೇ ಇರುವ ಕಾರಣಕ್ಕೆ,
ರಾಜ್ಯದಲ್ಲಿ ಯಡಿಯೂರಪ್ಪ ಅವರ ನಾಯಕತ್ವ ಬದಲಾಗಬೇಕು ಎನ್ನುವ ಮಾತು ಕೇಳಿಬಂದಾಗಲೆಲ್ಲ, ‘ಯಾರು?’ ಎನ್ನುವ ಪ್ರಶ್ನೆಯನ್ನು ವರಿಷ್ಠರು ನಾಯಕತ್ವ ಬದಲಾವಣೆ ಕೇಳುತ್ತಿರುವವರ ಮುಂದಿಡುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಈ ಪ್ರಶ್ನೆಗೆ ಉತ್ತರಿಸುವಾಗ ತಡವರಿಸುತ್ತಿದ್ದಾರೆ.

ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಇದೀಗ ಪಕ್ಷದಲ್ಲಿ ಇರುವಾಗಲೇ, ಬಿಜೆಪಿ ವರಿಷ್ಠರು ಇದೀಗ ಅಚ್ಚರಿಯ ರೀತಿಯಲ್ಲಿ ರಾಜ್ಯ ಇಬ್ಬರಿಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆಗಳನ್ನು ನೀಡಿದ್ದಾರೆ. ರಾಜ್ಯ ಬಿಜೆಪಿ ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ದ ಅನುಭವಿದ್ದ ತೇಜಸ್ವಿ ಸೂರ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವರು ಎನ್ನುವ ಸ್ಪಷ್ಟತೆ ಬಹುತೇಕರಿಗಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಅನೇಕರಿಗೆ ಇರಲಿಲ್ಲ. ಇದೇ ರೀತಿ ಯಡಿಯೂರಪ್ಪ ಅವರ ಕ್ಯಾಬಿನೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕಾರ್ಯನಿರ್ವ ಹಿಸುತ್ತಿದ್ದ ಸಿ.ಟಿ. ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ವರಿಷ್ಠರು ನೇಮಿಸುತ್ತಾರೆ ಎನ್ನುವ ಬಗ್ಗೆ ಸ್ವತಃ ಅವರಿಗೆ ಮಾಹಿತಿಯಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಇನ್ನು ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮಾತ್ರವಲ್ಲದೇ, ಇದೀಗ ದಕ್ಷಿಣ ಭಾರತದ ಜವಾಬ್ದಾರಿಯನ್ನು ನೀಡಿದ್ದಾರೆ. ಕರ್ನಾಟಕದೊಂದಿಗೆ ಪಂಚರಾಜ್ಯಗಳನ್ನು ನಿಭಾಯಿಸುವ ಪ್ರಮುಖ ಹುದ್ದೆ ರವಿ ಅವರಿಗೆ ನೀಡಿದ್ದರಿಂದ ಹಿಂದೆ ಇರುವ ಕಾರಣಗಳು ಹಲವು ಇರಬಹುದು. ಆದರೆ ಕರ್ನಾಟಕದಲ್ಲಿ ನಾಯಕತ್ವದ ವಿಷಯ ಮುನ್ನಲೆಗೆ ಬಂದಿರುವ ಈ ಸಮಯ ದಲ್ಲಿ ದಶಕದ ಭವಿಷ್ಯವನ್ನು ತಲೆಯಲ್ಲಿಟ್ಟುಕೊಂಡು ಕೇಂದ್ರದ ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನುವ ಮಾತನ್ನು ತಗೆದು ಹಾಕುವಂತಿಲ್ಲ.

ಹಾಗೆ ನೋಡಿದರೆ ತೇಜಸ್ವಿ ಸೂರ್ಯ ಹಾಗೂ ಸಿ.ಟಿ ರವಿ ಇಬ್ಬರಿಗೂ ಈ ಮಹತ್ವದ ಜವಾಬ್ದಾರಿ ನೀಡಿರುವ ಈ ಸಮಯದಲ್ಲಿ, ಈ ಜವಾಬ್ದಾರಿಯನ್ನು ಯಾವ ರೀತಿ ಬಳಸಿಕೊಳುತ್ತಾರೆ ಎನ್ನುವುದೇ ಇದೀಗ ಎಲ್ಲರ ಮುಂದಿರುವ ಪ್ರಶ್ನೆ. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಅವರು ಇಡೀ ದೇಶದಲ್ಲಿರುವ ಯುವಕರನ್ನು ಪಕ್ಷದೆಡೆ ಸೆಳೆದು ಮುಂದಿನ ‘ರಾಷ್ಟ್ರೀಯ ನಾಯಕ’ ಎಂದು ಗುರುತಿಸಿಕೊಳ್ಳಬಹುದಾಗಿದೆ.

ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ರ‍್ಯಾಲಿ ಮಾಡಿ ರಾಷ್ಟ್ರೀಯ ಮಾಧ್ಯಮದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ‘ಸುದ್ದಿ’ಯಾಗಿದ್ದಾರೆ. ಇದೀಗ ಇದೇ energy ಅನ್ನು ಮುಂದುವರಿಸಬೇಕಿದೆ. ಹಾಗೆ ನೋಡಿದರೆ ಸಿ.ಟಿ ರವಿ ಅವರಿಗಿಂತ ತೇಜಸ್ವಿ ಸೂರ್ಯ ಅವರು ದೆಹಲಿ ರಾಜಕಾರಣದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಲು ಉತ್ತಮ ಅವಕಾಶ ಹೊಂದಿದ್ದಾರೆ. ಪ್ರಮುಖವಾಗಿ ತೇಜಸ್ವಿ ಸೂರ್ಯ ಅವರು ಈಗಾಗಲೇ ಬಿಜೆಪಿ ಪರ ರಾಷ್ಟ್ರೀಯ ಮಾಧ್ಯಮ ಗಳಲ್ಲಿ ವಕ್ತಾರಿಕೆ ಮಾಡಿಕೊಂಡಿರುವುದರಿಂದ, ಈಗಾಗಲೇ ಬುನಾದಿ ಹಾಕಿದ್ದಾರೆ.

ಇದರೊಂದಿಗೆ ದೆಹಲಿಯಲ್ಲಿ ಮಿಂಚಲು ಅತ್ಯವಶ್ಯಕವಾಗಿರುವ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿ ದ್ದಾರೆ. ದಕ್ಷಿಣ ಭಾರತದಿಂದ ದೆಹಲಿಗೆ ಹೋಗುವ ಬಹುತೇಕರಿಗೆ ಭಾಷಾ ಸಮಸ್ಯೆ ಇರುವುದರಿಂದಲೇ, ಹಿನ್ನಡೆ ಅನುಭವಿಸುತ್ತಾರೆ ಎನ್ನುವ ಮಾತಿದೆ. ಆದರೆ ತೇಜಸ್ವಿ ಅವರಿಗೆ ಈ ಸಮಸ್ಯೆ ಇಲ್ಲವಾಗಿರುವುದರಿಂದ ದೆಹಲಿಯಲ್ಲಿ ರಾಜಕೀಯ ಮಾಡುವುದು ಹಾಗೂ ಕರ್ನಾಟಕದ ಪ್ರತಿನಿಧಿ ಎನ್ನುವ ರೀತಿ ವರಿಷ್ಠರಿಗೆ ಹತ್ತಿರವಾಗುವುದು ಕಷ್ಟದ ವಿಷಯವಲ್ಲ. ಅದರಲ್ಲೂ ಕರ್ನಾಟಕದ ವಿಷಯದಲ್ಲಿ ದೆಹಲಿ ರಾಜಕೀಯವನ್ನು ನೋಡುವುದಾದರೆ ಅನಂತಕುಮಾರ ಅವರ ನಿಧನದ ಬಳಿಕ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ‘ಸೇತುವೆ’ಯಾಗಿ ಯಾರೂ ಕಾಣಿಸಿಕೊಂಡಿಲ್ಲ.

ಇತ್ತೀಚಿನ ದಿನದಲ್ಲಿ ಬೆಳಗಾವಿ ಸಂಸದ, ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಖಾತೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು
ಸಜ್ಜಾಗುತ್ತಿದ್ದರು. ಆದರೆ ಕರೋನಾದಿಂದಾಗಿ ಮೃತಪಟ್ಟ ಬಳಿಕ ಮತ್ತೊಮ್ಮೆ ಈ ಸ್ಥಾನ ಖಾಲಿಯಾಗಿದೆ. ಸಂತೋಷ್ ಜಿ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರೂ, ಅವರು ಕರ್ನಾಟಕದ ಪರ ಬ್ಯಾಟಿಂಗ್ ಮಾಡುವುದಕ್ಕಿಂತ, ಪಕ್ಷದ ವರಿಷ್ಠರ ಆಂಗಲ್ ನಲ್ಲಿಯೇ ರಾಜಕೀಯವನ್ನು ನೋಡುವುದರಿಂದ ಈ ಸ್ಥಾನಕ್ಕೆ ಇನ್ನೊಬ್ಬರು ಅತ್ಯಾವಶ್ಯಕವಾಗಿದ್ದಾರೆ. ರಾಜ್ಯದಿಂದ ೨೫
ಬಿಜೆಪಿ ಸಂಸದರು, ಪ್ರಹ್ಲಾದ್ ಜೋಶಿ, ಸದಾನಂದಗೌಡ ಅವರು ಕೇಂದ್ರ ಸಚಿವರಾಗಿದ್ದಾರೆ. ಆದರೆ ಇವರ‍್ಯಾರೂ ಇಲ್ಲಿಯವರೆಗೆ ‘ಸೇತುವೆ’ಯಾಗಿ ಗುರುತಿಸಿಕೊಂಡಿಲ್ಲ.

ಆದ್ದರಿಂದ ಇದೀಗ ತೇಜಸ್ವಿ ಸೂರ್ಯ ಅವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ರಾಜ್ಯ ಹಾಗೂ ದೆಹಲಿ ರಾಷ್ಟ್ರ ರಾಜಕಾರಣದ ನಡುವೆ ಸೇತುವೆಯಾಗಿ ಗುರುತಿಸಿಕೊಳ್ಳುವುದು ಸುಲಭ ಮಾತಲ್ಲ. ಈ ಸ್ಥಾನಕ್ಕೆ ಹಲವು ಸವಾಲುಗಳಿವೆ. ಪ್ರಮುಖ ವಾಗಿ ರಾಜ್ಯದ ಗಡಿ, ಭಾಷೆ, ಜಲ ಸೇರಿ ಜ್ವಲಂತ ಸಮಸ್ಯೆಗಳು ಎದುರಾದಾಗ, ಪಕ್ಷಾತೀತವಾಗಿ ಧ್ವನಿ ಎತ್ತಬೇಕಾಗುತ್ತದೆ. ಪಂಥ, ಧರ್ಮ, ಪಕ್ಷ ಮೀರಿ ತಮ್ಮ ಪಕ್ಷದವರ ಮುಂದೆಯೇ ವರಿಷ್ಠರಿಗೆ ಬೇಸರವಾಗದಂತೆ, ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿ ಕೊಳ್ಳುವುದಕ್ಕೆ ಕೇವಲ ವಾಕ್‌ಚಾತುರ್ಯ ಮಾತ್ರವಲ್ಲದೇ, ರಾಜಕೀಯ ಮುತ್ಸದ್ಧಿತನವೂ ಅಗತ್ಯವಿರುತ್ತದೆ. ಇದನ್ನು ಹಲವು ದಶಕಗಳ ಕಾಲ ಅನಂತಕುಮಾರ ಅವರು ನಿಭಾಯಿಸಿದ್ದರೂ, ಅದನ್ನು ಮುಂದುವರಿಸಿಕೊಂಡು ಹೋಗುವಷ್ಟು ಮುತ್ಸದ್ದಿತನ
ಬಂದಾಗ ಈ ಗ್ಯಾಪ್ ಫಿಲ್ ಮಾಡಲು ಸಾಧ್ಯವಾಗುತ್ತದೆ. ಈ ಮುತ್ಸದ್ಧಿತನ ಬರುವುದಕ್ಕೆ ತೇಜಸ್ವಿ ಅವರಿಗೆ ಇನ್ನಷ್ಟು ಸಮಯ ಬೇಕಿದೆ. ಆದರೆ ಈ ನಿಟ್ಟಿನಲ್ಲಿ ಈಗಿನಿಂದಲೇ ತಮ್ಮ ಯೋಚನೆ ಹಾಗೂ ಯೋಜನೆಯನ್ನು ಶುರು ಮಾಡಿದಾಗ ಮಾತ್ರ ದಶಕದ ಬಳಿಕವಾದರೂ, ಇದರಲ್ಲಿ ಯಶ ಕಾಣಬಹುದಾಗಿದೆ.

ಇನ್ನು ದಕ್ಷಿಣ ಭಾರತದ ಉಸ್ತುವಾರಿ ವಹಿಸಿಕೊಂಡಿರುವ ಸಿ.ಟಿ. ರವಿ ಅವರ ಅವಕಾಶದ ಬಗ್ಗೆ ನೋಡುವುದಾದರೆ, ಇವರಿಗೆ ಸಿಕ್ಕಿರುವ ಅವಕಾಶದಿಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಎರಡರಲ್ಲಿ ಒಂದರಲ್ಲಿ ನೆಲೆ ಭದ್ರಗೊಳಿಸಿಕೊಳ್ಳಬಹುದು. ರಾಜ್ಯದಲ್ಲಿ ಈಗಾಗಲೇ ಭದ್ರವಾಗಿರುವ ರವಿ ಇನ್ನಷ್ಟು ತಮ್ಮ ಹಿಡಿತವನ್ನು ಗಟ್ಟಿಗೊಳಿಸಿಕೊಳ್ಳಬಹುದು. ರಾಷ್ಟ್ರ ರಾಜಕಾರಣ ದಲ್ಲಿ ನೋಡುವುದಾದರೆ, ಭಾಷಾ ಸಮಸ್ಯೆಯೋ ಅಥವಾ ರಾಜ್ಯವೇ ಸಾಕು ಎನ್ನುವ ಮನೋಭಾವದಿಂದಲೋ, ಇಲ್ಲಿಯವರೆಗೆ ರವಿ ಅವರು ದೆಹಲಿಯಲ್ಲಿ ಹೆಚ್ಚು ಸದ್ದು ಮಾಡಿಲ್ಲ.

ಪಕ್ಷದ ವರಿಷ್ಠರು ಕೆಲ ರಾಜ್ಯದ ಚುನಾವಣೆ ಅಥವಾ ರಾಜ್ಯಗಳ ಉಸ್ತುವಾರಿಯನ್ನು ಸಹ ಉಸ್ತುವಾರಿಯಾಗಿ ನಿಭಾಯಿಸಿರುವುದು ಬಿಟ್ಟು, ಹೆಚ್ಚು ಕಾಣಿಸಿಕೊಂಡಿಲ್ಲ. ಇದೀಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರೂ, ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ’ ಎನ್ನುವ ರೀತಿ ಕರ್ನಾಟಕದ ಉಸ್ತುವಾರಿಯನ್ನೇ ನೀಡಲಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ಕರ್ನಾಟಕದ ಉಸ್ತುವಾರಿಯನ್ನು ಹೊತ್ತುಕೊಂಡ ಬಳಿಕ ಇದೀಗ ಕರ್ನಾಟಕದ ಮೇಲೆ ಮತ್ತಷ್ಟು ಹಿಡಿತ ಸಾಧಿಸುವು ದಕ್ಕೆ ಸೂಕ್ತ ಅವಕಾಶ ಸಿಕ್ಕಂತಾಗಿದೆ. ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಭವಿಷ್ಯದ ದೃಷ್ಟಿಯಿಂದ ಬಿಜೆಪಿ ರಾಜ್ಯದ ಈ ಇಬ್ಬರಿಗೆ ಅತ್ಯುತ್ತಮ ಅವಕಾಶವನ್ನು ನೀಡಿದೆ. ಆದರೆ ಈ ಇಬ್ಬರು ಈ ಜವಾಬ್ದಾರಿ ಯನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡರೆ,
ಭವಿಷ್ಯದಲ್ಲಿ ಕರ್ನಾಟಕದ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಆದರೆ ಸಿಕ್ಕ ಅವಕಾಶವನ್ನು ಬಿಟ್ಟರೆ, ಈ ನಾಯಕತ್ವದ ಹುಡುಕಾಟದ ಹಾದಿ ಹೀಗೆ ಮುಂದುವರಿಯಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

Leave a Reply

Your email address will not be published. Required fields are marked *