Thursday, 12th December 2024

ಹೊತ್ತುಕೊಂಡು ಹೋಗುವ ನಾಯಿ ಮೊಲದ ಬೇಟೆಯಾಡೀತೆ ?

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್

ಸಾಮಾನ್ಯನೊಬ್ಬ ಸೆಲೆಬ್ರಿಟಿಯಾದರೆ ಅವನು ಪಡುವ ಹಿಂಸೆ, ಸಂಕಟ, ಅಪಮಾನಗಳನ್ನು ಎದುರಿಸಬೇಕಾದ ಸಮಸ್ಯೆಗಳನ್ನು ನೋಡಿದರೆ, ಶ್ರೀಸಾಮಾನ್ಯನಾಗಿ ರುವುದೇ ಅತ್ಯಂತ ಶ್ರೇಷ್ಠವಾದದ್ದು ಎಂದು ಅನುಭವಕ್ಕೆ ಬಾರದೇ ಇರುವುದಿಲ್ಲ. ಫೇಮಸ್ ಆಗಬೇಕು, ನನ್ನ ಆಟೋಗ್ರಾಫ್ ಜನ ಕೇಳಬೇಕು, ನನ್ನ ಜೋತೆ ಫೋಟೊ ಸೆಲ್ಫಿಗೆ ಜನ ಮುಗಿಬೀಳಬೇಕು ಎಂಬ ಕನಸುಗಳೇ ನಾದರೂ ನಿಮಗಿದ್ದರೆ, ದಯವಿಟ್ಟು ಬಯಸ ಬೇಡಿ.

ಇದರಲ್ಲಿ ಎಳ್ಳುಕಾಳಷ್ಟೂ ಸುಖವಿಲ್ಲ, ಸಂತೋಷವಿಲ್ಲ, ನೆಮ್ಮದಿ ಇಲ್ಲ, ಲಾಭವಂತೂ ಮೊದಲೇ ಇಲ್ಲ. ಪ್ರಸಿದ್ಧರಾಗ ಬೇಕೆಂದು ಎಷ್ಟು ಹೋರಾಡುತ್ತಿರೋ ಅದರ ಹತ್ತರಷ್ಟು ಹೋರಾಟವನ್ನು, ಶ್ರಮವನ್ನು ಪ್ರಸಿದ್ಧರಾದ ಮೇಲೆ ಜನರಿಂದ ತಪ್ಪಿಸಿಕೊಳ್ಳಲು ನೀವು ಮಾಡಬೇಕಾಗುತ್ತದೆ. ಪೊಲೀಸರಿಂದ ತಪ್ಪಿಸಿಕೊಂಡು ತಿರುಗುವ ಕಳ್ಳನಷ್ಟೆ ಹೀನಾಯವಾದ ಬದುಕಿನ ದಿನಚರಿಯನ್ನು ನೀವು ಅನುಭವಿಸ ಬೇಕಾಗುತ್ತದೆ. ಅಲ್ಲಿ ತಪ್ಪಿಸಿಕೊಂಡು ಪೊಲೀಸರ ಕೈಗೆ ಸಿಕ್ಕಿರೆಂದರೆ ಶಿಕ್ಷೆ ಇದೆ.

ಪ್ರಸಿದ್ಧಿಯಲ್ಲಿ ಸಿಕ್ಕಿರೆಂದರೆ ಬೈಗಳು, ತೆಗಳಿಕೆ, ನಿಂದನೆ, ನಿಷ್ಠುರ ಜಗಳಗಳಿವೆ. ಅಭಿಮಾನಿ ಹೇಳಿದಂತೆಲ್ಲ ಕೇಳಿ ನೀವು ಫೋಟೋ, ಸೆಲಿ, ಆಟೋಗ್ರಾಫ್‌ ಕೊಟ್ಟಿರೋ,  ನೀವು ಸಾಕ್ಷಾತ್ ದೇವರ ಮಗ, ಆಗಲ್ಲ ಹೋಗಯ್ಯ ಎಂದು ಗದರಿಸಿದಿರೋ, ನೀವು ಬೋಳಿ ಮಗ. ಒಂದು ಉದ್ಯೋಗ, ಸ್ವಂತ ಮನೆ, ಸ್ವಂತ ಹೆಂಡತಿ ಇದ್ದು ನಿಮ್ಮ ಜೀವನ ಸರಳವಾಗಿ ಸಾಗಿದ್ದರೆ ಸಾಕು ಕಣ್ರಿ. ಹೆಚ್ಚಿನದನ್ನು ಬಯಸಬೇಡಿ, ಮನಃಶಾಂತಿಗೆ ಸಂಗೀತವನ್ನೊ, ಧೈರ್ಯ, ಭರವಸೆಗಳಿಗೆ ತಿರುಪತಿ ತಿಮ್ಮಪ್ಪನನ್ನೊ, ಮಂತ್ರಾಲಯ ರಾಘವೇಂದ್ರ
ಸ್ವಾಮಿಗಳನ್ನೊ, ಶ್ರೀಶೈಲ ಮಲ್ಲಿಕಾರ್ಜುನ, ಧರ್ಮಸ್ಥಳ ಮಂಜುನಾಥ, ಉಡುಪಿ ಶ್ರೀಕೃಷ್ಣನನ್ನೊ ನಂಬಿ ಹಾಯಾಗಿರಿ.

ಇದು ಸಾಲದೆಂದು ಸಿನಿಮಾ ನಟನಾಗಬೇಕೆಂದೋ, ಲೇಖಕ, ಕವಿಯಾಗಬೇಕೆಂದೋ, ಹೆಚ್ಚಿನ ಹಣ ಗಳಿಕೆಗೆ ಯಾವುದಾದರೂ
ಬಿಜಿನೆಸ್ಸೋ, ಸಹಕಾರಿ ಬ್ಯಾಂಕೋ, ಪ್ರಸಿದ್ಧನಾಗಬೇಕು ಜನ ನನ್ನನ್ನು ಗುರುತಿಸಬೇಕೆಂದು ‘ಇರುವುದನ್ನು ಬಿಟ್ಟು, ಇರದುದರ ಕಡೆಗೆ ತುಡಿದಿರೊ’ ನಿಮ್ಮನ್ನು ಆಮೇಲೆ ಯಾರೂ ಕಾಪಾಡುವುದಿಲ್ಲ. ನೀರಿನ ಪ್ರವಾಹಕ್ಕೆ ಸಿಲುಕಿದವನು ಮುಳುಗೇಳುತ್ತಾ, ಕೈಕಾಲು ಬಡಿಯುತ್ತಾ, ನೀರನ್ನು ಕುಡಿಯದೆ ಉಗುಳುತ್ತಿದ್ದರೆ, ಹಾಗೆಯೇ ತೇಲುತ್ತಾ ಎಲ್ಲೋ ಒಂದು ಕಡೆ ದಡ ಸೇರುತ್ತಾನೆ. ಆದರೆ ಈ ಜನಪ್ರವಾಹಕ್ಕೆ ಸಿಲುಕಿದಿರೆಂದರೆ ಕೈಕಾಲು ಬಡಿಯುವಂತಿಲ್ಲ, ನೀವು ನೀರು ಕುಡಿಯದಿದ್ದರೂ ಜನರೇ ಕುಡಿಸುತ್ತಾ ನಿಮ್ಮನ್ನು ಭಾರವಾಗಿ ಮಾಡಿ ತಳಕ್ಕೆ ತಳ್ಳಿ ಬಿಡುತ್ತಾರೆ. ನೀರ ಪ್ರವಾಹದಲ್ಲಿ ಈಜುವಂತೆ, ಜನಪ್ರವಾಹದಲ್ಲಿ ಈಜಲು ನಿಮ್ಮನ್ನು ಬಂಡೆ ಕಲ್ಲಿನಂತಹ ಜನ ಬಿಡುವುದೇ ಇಲ್ಲ. ತಮ್ಮನ್ನೂ ನಿಮ್ಮ ಜೊತೆ ಹೊತ್ತೊಯ್ಯಿರಿ ಎಂದು ಕುತ್ತಿಗೆಗೆ ಜೋತು ಬೀಳುತ್ತಾರೆ. ಇಲ್ಲವೆ ಬೆನ್ನಿನ ಮೇಲೆ, ಭುಜದ ಮೇಲೆ ಹತ್ತಿ ಕೂರುತ್ತಾರೆ.

ತಲೆ ಮೇಲೆ ಹತ್ತಿ ಕೂತರು ಎನ್ನುತ್ತಾರಲ್ಲ, ಹಾಗೆ ತಲೆ ಹತ್ತುವವರೂ ಇರುತ್ತಾರೆ. ಹುಟ್ಟಿನಿಂದ ನೀವು ಜನಪ್ರಿಯ ವ್ಯಕ್ತಿಗಳ ಮಕ್ಕಳಾಗಿ ಹುಟ್ಟಿದ್ದರೆ ಓಕೆ, ಆದರೆ ಒಬ್ಬ ಸಾಮಾನ್ಯ, ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಯಾರನ್ನೊ ಬೇಡಿ ಪಡೆದು, ತಿಂದು, ಬೆಳೆದು ಪ್ರಸಿದ್ಧರಾದಿರೆಂದರೆ ನೀವು ರೋಸಿ ಹೋಗುತ್ತೀರಿ, ಇಲ್ಲಾ ಕುಸಿದು ಹೋಗುತ್ತೀರಿ, ಇಲ್ಲವೇ ಹುಚ್ಚರಾಗುತ್ತೀರಿ. ಇದಕ್ಕೆ ಜೀವಂತ ಉದಾಹರಣೆ ನಾನೇ. ಪ್ರೈಮರಿ ಸ್ಕೂಲ್ ಮಾಸ್ತರ್ ಮಗನಾಗಿ ಹುಟ್ಟಿ, ಅಪ್ಪನಿಗೆ ವರ್ಗವಾದಂತೆಲ್ಲ ಹಳ್ಳಿ ಹಳ್ಳಿ ತಿರುಗಿ, ಮೇಲಿಂದ ಮೇಲೆ ಶಾಲೆ, ಶಿಕ್ಷಕರನ್ನು ಬದಲಿಸಿ, ಬದಲಿಸಿ ಯಾರು ಹೇಳಿದ್ದೂ ತಲೆಯಲ್ಲಿ ಉಳಿಯದೇ, ಯಾವ ಶಿಕ್ಷಕರನ್ನೂ ಆದರ್ಶ ಮಾಡಿಕೊಳ್ಳಲಾಗದೇ ಮೂವತ್ತೈದು ಮಾರ್ಕ್ಸ್‌ಗೆ ಮಾತ್ರ ಸಾಕಾಗುವಷ್ಟು ಓದಿ, ಉಳಿದಂತೆ ಬೀಚಿ, ಕೈಲಾಸಂರನ್ನು ಓದುತ್ತಾ ಮೂವತ್ತೈದು ಮಾರ್ಕ್ಸ್ ತೆಗೆದುಕೊಂಡು ಪಾಸಾಗಿದ್ದಕ್ಕೋ ಏನೋ, ನನ್ನ ವಯಸ್ಸು ಮೂವತ್ತೈದು ಆದ ಮೇಲೆಯೇ ಈ ಹಾಸ್ಯ ಕೈ ಹಿಡಿದು ಮೂರು ಹೊತ್ತು ಉಣ್ಣುವ ಅರ್ಹತೆ ಪಡೆದೆ.

ಹಾಸ್ಯ ಸಂಜೆ, ನಗೆಹಬ್ಬಗಳೆಂಬ ಟ್ರೆಂಡ್ ಶುರುವಾಗಿ ಇದನ್ನೇ ಪೂರ್ಣಾವಧಿ ಉದ್ಯೋಗ ಮಾಡಿಕೊಳ್ಳುವ ಧೈರ್ಯ ತುಂಬಿದ ಇಡೀ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳ ಮಹಾಜನತೆಯ ಉದಾರ ಹಸ್ತ, ಹೃದಯಗಳಿಂದ ಹಣ, ಆಶೀರ್ವಾದ ಪಡೆದು ಬದುಕು ಕಟ್ಟಿಕೊಂಡೆ. ಇದರ ಜೊತೆ ಜೊತೆಗೆ ಜನಪ್ರಿಯತೆ ಎಂಬ ಸೈಡ್ ಎಫೆಕ್ಟು ಶುರುವಾಗಿ ‘ಸೆಲೆಬ್ರಿಟಿ’ ಎಂಬ ಸೆಲೆಯೊಂದು ಶುರುವಾಗಿ ಬಿಟ್ಟಿತು. ಪ್ರಾರಂಭದಲ್ಲಿ ಸೆಲೆಯಾಗಿದ್ದು ಬರುಬರುತ್ತಾ ಝರಿಯಾಗಿ, ಝರಿ ಹಳ್ಳವಾಗಿ, ಕೆರೆಯಾಗಿ, ಹೊಳೆಯಾಗಿ, ನದಿಯಾಗಿ ಈಗ ಸಮುದ್ರ ಸೇರುವ ಮಟ್ಟಕ್ಕೆ ಬಂದು ನಿಂತು, ಮೃದುತ್ವ, ನದಿ ನೀರಿನ ಸಿಹಿ ಹೋಗಿ, ಬರೀ ಸಮುದ್ರದ ಅಬ್ಬರ, ಅಲೆಗಳ ಹೊಡೆತ, ಉಪ್ಪುಪ್ಪು ಆಗಿ, ಕೇಳಲು ನೋಡಲು ಮಾತ್ರ ಚೆನ್ನಾಗಿದೆ.

ಆಗಲಿ, ಪ್ರಚಾರ ಅತೀ ಆದರೆ ಪಾವಿತ್ರ್ಯ ಉಳಿಯುವುದಿಲ್ಲ ಎಂಬಂತಾಗಿದೆ ನನ್ನ ಸ್ಥಿತಿ. ಟಿ.ವಿ. ಗಳಲ್ಲಿ, ಕಂಡ ಕಂಡ ಸಭೆ
ಸಮಾರಂಭಗಳಲ್ಲಿ ನಾಡಿನ ಹೆಸರಾಂತ ಚಿತ್ರ ನಟರು, ಉದ್ಯಮಿಗಳು, ರಾಜಕಾರಣಿಗಳು, ಮಂತ್ರಿಗಳು, ಸ್ವಾಮಿಗಳ ಜೊತೆಯಲ್ಲಿ ನನ್ನನ್ನು ನೋಡಿದ ಸಾಮಾನ್ಯ ಜನ, ಬಂಧು – ಬಳಗ, ಸ್ನೇಹಿತರ ತಂಡ ಅವರಿಂದ ನನ್ನ ಮೂಲಕ ಸಹಾಯ ಪಡೆಯ ಲೆತ್ನಿಸುತ್ತಿರುವವರು, ಒಂದು ಮಾತು ಹೇಳಿ, ಒಂದು ಮಾತು ಕೇಳಿ ಎಂಬುದು ಜಾಸ್ತಿಯಾಗಿ ಫಜೀತಿ ಪೀಕಲಾಟಕ್ಕೆ ಸಿಲುಕು ವಂತಾಗಿದೆ.

ಕೇಳುವವರಿಗೆ ‘ಇಲ್ಲಾ’ ಎನ್ನಲಾಗುವುದಿಲ್ಲ. ಕೇಳಿಸಿಕೊಂಡವರು ಇಂಥದನ್ನು ಮಾಡಲಾಗುವುದಿಲ್ಲ. ಮಾಡದಿದ್ದರೆ ಮುನಿಸು, ನನ್ನ ಬಗ್ಗೆ ಟೀಕೆಗಳು, ಸರಿಯಾಗಿ ಹೇಳಿಲ್ಲ ಎಂಬ ದೋಷಾರೋಪಣೆ. ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಮುಗ್ಧ ಜನ ನಾನೊಬ್ಬ ಮಂತ್ರಿಯೇನೋ, ಎಂ.ಎಲ್.ಎ ಏನೋ ಎಂಬಂತೆ ಭಾವಿಸಿ ಬಿಡುತ್ತಾರೆ. ನವಲಗುಂದ, ನರಗುಂದದ ಕಡೆ ಹೋದಾಗ
ಮಹಾದಾಯಿ ನೀರು ಬಿಡಿಸಿರಿ ಎಪ್ಪಾ.. ಎಂದು ಕೈ ಮುಗಿಯುತ್ತಾರೆ ಪಾಪ! ಇನ್ನು ಸಿನಿಮಾದಾಗ ಒಂದು ಛಾನ್ಸ್ ಕೊಡಿಸಿರಿ. ನಿಮ್ಮ ಕೂಡಾ ನಮ್ಮನ್ನು ಕರೆದೊಯ್ಯಿರಿ, ನಾನು ಎರಡು ಜೋಕ್ ಹೇಳ್ತಿನಿ, ನಮ್ಮ ಹುಡುಗ, ಹುಡುಗಿ ಚೊಲೋ ಹಾಡ್ತಾರ, ಅವಕಾಶ ಕೊಡಿಸಿರಿ, ಸಿನಿಮಾ ಕಥೆ ಬರೆದೀನಿ, ಪುನಿತ್‌ರಾಜ್‌ಕುಮಾರ, ಸುದೀಪ್‌ಗೆ ಇದನ್ನು ಸಿನಿಮಾ ಮಾಡೋಕೆ ಹೇಳ್ರಿ, ನಮ್ಮ ಹುಡುಗನ್ನ ಆ ಕಾಂಪಿಟೇಷನ್‌ದಾಗ ಫೈನಲ್ಗೆ ತಗೋ ಅಂತ ಹೇಳ್ರಿ, ಒಂದೇ ಎರಡೆ? ಕಡೆಗೆ, ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮ ದೊಳಗ ಅಮಿತಾಬ್ ಬಚ್ಚನ್ ಕೇಳೊ ಪ್ರಶ್ನೆಗಳನ್ನ ಮೊದಲು ನಮ್ಮ ಹುಡುಗುಗ ತಂದು ಕೊಡ್ರಿ.

ಅವ ಪ್ರಿಪೇರ್ ಆಗ್ತಾನ, ಒಂದು ಇಪ್ಪತ್ತೆ ದು, ಐವತ್ತು ಲಕ್ಷ ಗೆದಿಸಿಬಿಡ್ರಿ ಸಾಕು, ನಮ್ಮ ಹುಡುಗಂದೂ ಒಂದು ಬಾಳ್ವೆ ಆಗ್ತೈತಿ, ಮದುವೆ ಮಾಡಿ, ಸೊಸಿ, ಮೊಮ್ಮಕ್ಕಳನ್ನ ಕಾಣ್ತೀ ಎಪ್ಪಾ.. ನಿನ್ನ ದಯದಿಂದ ಅಂತ ಕೈ ಮುಗೀತಾರ. ಇನ್ನು ಬೆಂಗಳೂರಾಗ ಒಂದು ಕಂಪನಿಯೊಳಗ ನಮ್ಮ ಮಗನಿಗೆ ಕೆಲಸ ಕೊಡಿಸಿರಿ ಅಂತ, ಎಂಪ್ಲಾಯ್‌ಮೆಂಟ್ ಆಫಿಸ್‌ಗಿಂತಲೂ ಹೆಚ್ಚು ಕರೆಗಳು, ನಮ್ಮ ಹುಡುಗನಿಗೆ ಮದುವೆ ಮಾಡಿಕೊಳ್ಳಲು ಒಂದು ಕನ್ಯೆ ನೋಡಿರಿ ಎನ್ನುವ ಕರೆಗಳಂತೂ ಪುರೋಹಿತರು, ಮದುವೆ ದಲ್ಲಾಳಿಗಳಿಗಿಂತಲೂ ಹೆಚ್ಚು ನನಗೆ ಬರುತ್ತಿವೆ.

ನಮ್ಮ ಜನರಿಗೆ ಯಾರಿಗೆ ಏನು ಹೇಳಬೇಕು, ಏನು ಕೇಳಬೇಕು ಎಂಬ ಪ್ರಜ್ಞೆಯೇ ಹೋಗಿ, ಯಾರನ್ನು, ಹೇಗೆ ಬಳಸಿಕೊಳ್ಳಬೇಕೆಂಬ ಸ್ವಾರ್ಥ, ವ್ಯವಹಾರ ಚತುರತೆಯೇ ಅಧಿಕವಾಗಿದ್ದು, ಅದೇ ಸರಿ ಎನಿಸುತ್ತಿದೆ. ಇನ್ನು ನಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಜನರನ್ನು ಶೋಷಣೆ ಮಾಡಲು, ನನ್ನನ್ನು ಪಾತಾಳಕ್ಕೆ ತಳ್ಳಲು ಹಣ ಮಾಡುವ ಸಂಘಗಳು, ಸಹಕಾರಿ ಸಂಘಗಳು, ಚೀಟಿ ವ್ಯವಹಾರ ದವರು, ಕಳಪೆ ವಸ್ತು ತಯಾರಕರು ದುಂಬಾಲು ಬೀಳುತ್ತಾರೆ. ನಮ್ಮ ಸಂಸ್ಥೆಯ ಅಧ್ಯಕ್ಷ, ಚೇರ್ಮನ್ನರಾಗಿ ಎಂಬ ಲ್ಲಿಂದ ಹಿಡಿದು ನಾವು ಒಪ್ಪದಿದ್ದಾಗ ಕಡೆಗೆ ಸಲಹಾ ಸಮಿತಿ ಸದಸ್ಯರಾಗಲಾದರೂ ಒಪ್ಪಿಸಿ, ಅದನ್ನು ದಿವಾಳಿ ಎಬ್ಬಿಸಿ, ನಾನೇ ಸಲಹೆ ಕೊಟ್ಟೆ ಎಂಬಂತೆ ಬಿಂಬಿಸಿ ನನ್ನ ಮಾನ ತೆಗೆದು, ತಾವು ಊರು ಬಿಡುತ್ತಾರೆ.

ಇಲ್ಲವೆ ಉರ್ಲು ಹಾಕಿಕೊಳ್ಳುತ್ತಾರೆ. ಗುಂಪು ಗೂಡಿ ಬಂದು ಮುಂದೆ ಕೂತು ನಮ್ಮನ್ನು ಒಪ್ಪಿಸಲು ಇವರಾಡುವ ಮಾತುಗಳು,
ಆಡುವ ನಾಟಕಗಳನ್ನು ನೋಡಿದರೆ, ನಮ್ಮ ಕೀರ್ತಿ ಪತಾಕೆಗೆ ನಾವೇ ಬೆಂಕಿ ಹಚ್ಚಿಕೊಂಡು ಬಿಡಬೇಕು ಎನಿಸುತ್ತದೆ. ಅವರ ಯಾವ ಮಾತಿಗೂ ನಾವು ಮಣಿಯದೇ, ನಮ್ಮ ಕಲೆಗೆ ನಾವು ಕಷ್ಟವೋ ನಷ್ಟವೋ ಅಂಟಿಕೊಂಡು ನಿಂತರೆ, ‘ಹೋಗಲಿ, ಒಂದು ಬೈಟ್’ ಆದರೂ ಕೊಡಿ ಸಾರ್ ಎಂದು ಜೀವ ಹಿಂಡಿ, ಅಂಗೈಯಲ್ಲಿ ಜೀವ ಹಿಡಿದುಕೊಳ್ಳುವಂತೆ ಮಾಡುತ್ತಾರೆ. ಹೊತ್ತುಕೊಂಡು ಹೋಗುವ ನಾಯಿ, ಮೊಲದ ಬೇಟೆಯಾಡೀತೆ? ಎಂಬ ಗಾದೆಯ ಮಾತೇ ನೆನಪಾಗುತ್ತಿರುತ್ತದೆ.

ಅರವತ್ತು – ಎಪ್ಪತ್ತರ ದಶಕದ ಕಲಾವಿದರು, ಆಟಗಾರರು, ಸಂಗೀತಗಾರರು, ಸಾಧಕರು ಪುಣ್ಯವಂತರು. ಆಗ ಜಾಹೀರಾತುಗಳ
ದರಿದ್ರ ಜಾಲವಿನ್ನೂ ಬಂದಿರಲಿಲ್ಲ. ಕಲಾವಿದರೆಲ್ಲ ತಮ್ಮ ತಮ್ಮ ಕಲೆಗಳ ಪ್ರಾವಿಣ್ಯತೆ ಹೆಚ್ಚಿಸಿಕೊಳ್ಳುವಲ್ಲೇ ದಿನವಿಡೀ ತಾಲೀಮು, ಸಾಧನೆ, ಆವಿಷ್ಕಾರಗಳಲ್ಲೇ ಮುಳುಗುತ್ತಿದ್ದರು. ಭೀಮಸೇನ್ ಜೋಶಿ, ಚೌರಾಸಿಯಾ, ರವಿಶಂಕರ್, ಮಲ್ಲಿಕಾರ್ಜುನ ಮನಸೂರ್, ಸವಾಯಿ ಗಂಧರ್ವ, ಅಲ್ಲಾರಖ, ನಮ್ಮ ಡಾ. ರಾಜಕುಮಾರ, ಲೇಖಕ ಚಿಂತಕರಾದ ಕಾರಂತರು, ಅಡಿಗರು, ಕುವೆಂಪು, ಬೇಂದ್ರೆ, ಬೀಚಿ, ಈಗಿನ ಭೈರಪ್ಪ ನವರು, ತಮ್ಮ ಕಾಯಕದ ಕೃಯಲ್ಲೇ ಮಗ್ನರಾಗಿದ್ದುದ ರಿಂದಲೇ ಮಹತ್ತನ್ನು ಸಾಧಿಸಿದರು. ಮಹನೀಯ ರಾಗುಳಿದರು.

ಈಗೇನಿದೆ? ಒಂದೋ ಎರಡೋ ಸಿನಿಮಾ, ಒಂದೋ ಎರಡೋ ಧಾರಾವಾಹಿ, ಮೂರೋ ನಾಲ್ಕೋ ಕಾರ್ಯಕ್ರಮಗಳಲ್ಲಿ ಭಾಗ ವಹಿಸಿದರೆ ಮುಗಿದೇ ಹೋಯಿತು. ಅವರನ್ನು ಮೂರು ನಿಮಿಷದ ಬೈಟ್‌ನಿಂದ ಹಿಡಿದು, ಮೂವತ್ತು ದಿನಗಳಲ್ಲಿ ಮಹಾದೇವ ನನ್ನು ಪ್ರತ್ಯಕ್ಷ ಕಾಣಿರಿ’ ಎಂದು ಹೇಳಿಸುವ ಜಾಹೀರಾತುಗಳಲ್ಲಿ ಬಳಸಿ, ಮುಂದೆ ಮೂರು ತಿಂಗಳಲ್ಲಿ ಅವನು ಮೂರಾಬಟ್ಟೆ ಯಾಗಿ, ಮಸಣ ಸೇರುವಂತೆ ಮಾಡಿ ಬಿಡುವ ‘ಕ್ಷಿಪ್ರಕ್ರಾಂತಿ’ ಯುಗವಾಗಿ ಹೋಗಿವೆ ಎಲ್ಲ ರಂಗಗಳು.

ಯಾರೂ, ಯಾವ ರಂಗದಲ್ಲೂ ಬೇರು ಬಿಟ್ಟು ಬೆಳೆದು ಮಹಾವೃಕ್ಷವಾಗಿ ಬುದ್ಧನಂತವರಿಗೆ ನೆರಳು ನೀಡಲಾಗದೆ, ಕೇವಲ
‘ರಾತ್ರಿರಾಣಿ’ ಹೂಗಳಂತಾಗಿ ಬಿಟ್ಟಿದ್ದಾರೆ. ಬಿತ್ತಿ, ಬೆಳೆದು, ಕೂಡಿಟ್ಟು ವರ್ಷಗಟ್ಟಲೆ ತಿನ್ನುವ ಧಣಿಗಳಾಗದೇ, ಯಾವ ಪಾತ್ರೆ ಯನ್ನೂ ತಾರದೇ, ನೀಡುವವರ ಅಂಗೈ ಗಳಿಂದಲೇ ಅನ್ನವನ್ನು ಇಸಿದುಕೊಂಡೋ, ಕಸಿದು ಕೊಂಡೋ, ತಿಂದು ಓಡುವ ಅರೆ ಹುಚ್ಚ ಭಿಕ್ಷುಕರ ಬದುಕಾಗಿ ಬಿಟ್ಟಿದೆ ಎಲ್ಲ ರಂಗಗಳ ಜೀವನ. ಬೆಂದ ಮನೆಯಲ್ಲಿ ಹಿರಿದಷ್ಟೆ ಲಾಭವೆನ್ನುವಂತೆ, ಎದುರಿಗೆ ಕಾಣುವ ಪ್ರತಿಯೊಬ್ಬರನ್ನೂ ನಮ್ಮಂತೆ ಇವನೂ ಎಂದು ನೋಡದೇ, ಇವನಿಂದ ನಾನೇನು ಕಿತ್ತುಕೊಳ್ಳಲಿ, ಇವನನ್ನು ಮೆಟ್ಟಿಲು ಮಾಡಿಕೊಂಡು, ನಾನೂ ಹೇಗೆ ಮೇಲೆ ಏರಲಿ ಎಂದು ಯೋಚಿಸುತ್ತಲೇ, ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ.

ಪ್ರತಿ-ಲವಿಲ್ಲವೆಂದು ತಿಳಿದಾಗ ಪರಚಾಡುತ್ತಾರೆ. ಯಾರನ್ನೊ ಬಳಸಿಕೊಂಡು, ಏನೋ ಒಂದು ಮಾಡಿದ ರಾಯಿತೆಂಬ ಧೋರಣೆ
ಹೋಗಿ, ನಮ್ಮ ನೆರಳಲ್ಲೆ ನಾವು ವಿಶ್ರಮಿಸಿಕೊಳ್ಳೋಣ, ಸ್ವಯಂ ಶಕ್ತಿಯಿಂದ ಸಿಂಹದಂತೆ ಬದುಕೋಣ, ಯಾರದೋ ವಶೀಲಿ
ಯಿಂದ ಬದುಕುವ ಬಯಕೆ ಬೇಡ. ಏಕೆಂದರೆ ಹೊತ್ತುಕೊಂಡು ಹೋಗುವ ನಾಯಿ ಮೊಲದ ಬೇಟೆಯಾಡೀತೆ?