ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ranjith.hosakere@gmail.com
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಅಧಿಕಾರಕ್ಕೆ ಬಂದು 20 ದಿನ ಕಳೆಯುತ್ತಾ ಬಂದಿದೆ. ಒಂದೆಡೆ ಹಲವು ಉತ್ತಮ ನಿರ್ಣಯಗಳ
ಮೂಲಕ ಬೊಮ್ಮಾಯಿ ಸರಕಾರ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿದ್ದರೆ, ಇನ್ನೊಂದೆಡೆ ಸಂಪುಟ ಕ್ಯಾತೆ, ಖಾತೆ ಬದಲಾವಣೆ ಚರ್ಚೆ, ಶಾಸಕರ ಬಹಿರಂಗ
ಅಸಮಾಧಾನಗಳು ಮತ್ತೊಂದು ಬಗೆಯ ಸುದ್ದಿ ಮಾಡುತ್ತಿವೆ.
ಅದರಲ್ಲಿಯೂ ಎಂ.ಪಿ.ಕುಮಾರಸ್ವಾಮಿ, ರಾಮ್‌ದಾಸ್ ಸೇರಿದಂತೆ ಕೆಲ ಶಾಸಕರು ತಮಗೆ ಸ್ಥಾನ ಸಿಗಲಿಲ್ಲ ವೆಂದರೆ ರಾಜೀನಾಮೆ ನೀಡುವ ಮಾತನ್ನು ಆಡಿದ್ದಾರೆ. ಆದರೆ ಇನ್ನು ಕೆಲ ಶಾಸಕರು, ಹಿಂಬಾಗಿಲ ಮೂಲಕ ಈ ಮಾತನ್ನು ಹೇಳುತ್ತಿದ್ದಾರೆ. ಇನ್ನು ಖಾತೆ ಹಂಚಿಕೆಯಾದಾಗಿನಿಂದಲೂ ಖಾತೆ ಬೇಡ. ಬೇರೆ ಖಾತೆ ಕೊಡಿ ಇಲ್ಲ ದಿದ್ದರೆ ರಾಜೀನಾಮೆ ನೀಡುತ್ತೇನೆ ಎನ್ನುವ ಧಮ್ಕಿಯನ್ನು ಆನಂದ್ ಸಿಂಗ್ ಹಾಕುತ್ತಿದ್ದಾರೆ. ಈಗಷ್ಟೇ ಮುಖ್ಯ ಮಂತ್ರಿಯಾಗಿರುವ ಬೊಮ್ಮಾಯಿ ಅವರಿಗೆ ಇದು ಕೊಂಚ ಆತಂಕವನ್ನು ಮೂಡಿಸಿದರೂ, ಪಕ್ಷದ ವರಿಷ್ಠರು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಸದ್ಯದ ಮಟ್ಟಿಗೆ ಬಿಜೆಪಿ ವರಿಷ್ಠರು, ಎಲ್ಲವನ್ನು ನಿಭಾಯಿಸುವ ಹಾಗೂ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿಯಿದೆ. ಸಂಪೂರ್ಣ ಬಹುಮತವಿರುವ ಸರಕಾರದಲ್ಲಿ ಒಂದಿಬ್ಬರೂ ಅಡ್ಡ ಮಾತು ಆಡಿದ್ದಾರೆ ಎನ್ನುವ ಕಾರಣಕ್ಕೆ, ಅವರ ಮಾತಿಗೆ ಬೆಲೆ ಕೊಡುವ ಮನಸ್ಥಿತಿಯಂತೂ ಬಿಜೆಪಿಯಲ್ಲಿಲ್ಲ. ಕೆಲವೊಮ್ಮೆ ಕ್ರಿಯೆಗೆ ಪ್ರತಿಕ್ರಿಯೆ ನೀಡಿದರೇ ಆಗುವ ಆಪತ್ತು ಹೆಚ್ಚು ಎನ್ನುವುದನ್ನು ಅರಿತಿರುವ ಬಿಜೆಪಿ ನಾಯಕರು, ಪ್ರತಿಕ್ರಿಯೆಯನ್ನೇ ನೀಡದೇ, ಸಮಸ್ಯೆ ಬಗೆಹರಿಸುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ವಿವಿಧ ಭಾಗದಲ್ಲಿ ಇದರಲ್ಲಿ ಯಶಸ್ವಿಯಾಗಿದ್ದಾರೆ.
ಸಚಿವ ಸ್ಥಾನ ಸಿಗದಿದ್ದರೆ, ತಮಗೆ ಬೇಕಾದ ಖಾತೆ ಸಿಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೊಂಡು ನಾಲ್ಕೈದು ಶಾಸಕರು ಓಡಾಡುತ್ತಿದ್ದಾರೆ. ರಾಮದಾಸ್ ಅಂತ ವರು ಸೀಕ್ರೆಟ್ ಲೆಟರ್ ಅನ್ನು ಸಹ ಬಸವರಾಜ ಬೊಮ್ಮಾಯಿ ಅವರಿಗೆ ರವಾನಿಸಿದ್ದಾರೆ. ಈ ವಿಷಯವಾಗಿ ಈಗಾಗಲೇ ಬೊಮ್ಮಾಯಿ ಅವರು ಯಡಿಯೂರಪ್ಪ ಅವರೊಂದಿಗೆ, ಉಸ್ತುವಾರಿ ಅರುಣ್ ಸಿಂಗ್ ಜತೆ ಚರ್ಚಿಸಿಯೂ ಇದ್ದಾರೆ. ಆದರೆ ದೆಹಲಿ ಬಿಜೆಪಿ ಪವರ್ ಹೌಸ್ ಹೋಗಲಿ, ಕರ್ನಾಟಕದಲ್ಲಿಯೂ ಹೆಚ್ಚು ಪ್ರಾಮುಖ್ಯತೆ ಸಿಕ್ಕಂತೆ ಕಂಡಿಲ್ಲ. ಆನಂದ್ ಸಿಂಗ್ ರಾಜೀನಾಮೆ ಎನ್ನುವಾಗ ಕೆಲವರು ನೆಪಕ್ಕೆ ಸಂಧಾನ ಮಾಡಿದ್ದಾರೆ.
ಆದರೆ ಈ ಸಂಧಾನದ ಸಮಯದಲ್ಲಿಯೂ, ‘ನೀವು ರಾಜೀನಾಮೆ ಕೊಟ್ಟರೆ, ಅಂದು ಖಂಡಿತವಾಗಿಯೂ ಅಂಗೀಕಾರವಾಗುತ್ತೆ. ಕೊಟ್ಟಿರುವುದರಲ್ಲಿ ಖುಷಿಪಡಿ’
ಎನ್ನುವ ಎಚ್ಚರಿಕೆ ಸಂದೇಶವನ್ನು ನಯವಾಗಿಯೇ ರವಾನಿಸಿದ್ದಾರೆ. ಆ ಬಳಿಕಯೇ, ಆನಂದ ಸಿಂಗ್ ತೆಪ್ಪಗಾಗಿ ‘ಸಿಕ್ಕಿರುವುದರಲ್ಲಿಯೇ ಆನಂದವಾಗಿರುತ್ತೇನೆ!’ ಎಂದು ಬಹಿರಂಗ ಹೇಳಿದ್ದಾರೆ. ಈಗಲೂ ಬಂಡಾಯದ ರಣಕಹಳೆ ಊದಿದರೆ, ಅದನ್ನು ಬೆಂಬಲಿಸುವುದಕ್ಕೆ ಅವರೊಂದಿಗೆ ಬಿಜೆಪಿಗೆ ಬಂದಿರುವ ವಲಸಿಗರು ಇಲ್ಲ. ಆ ಬಂಡಾಯವನ್ನು ಶಮನ ಮಾಡುವುದಕ್ಕೂ ಯಾರೂ ಬರುವುದಿಲ್ಲ ಎನ್ನುವುದು ಸತ್ಯ.
ಅಷ್ಟಕ್ಕೂ ಬಿಜೆಪಿ ವರಿಷ್ಠರು ಈ ರೀತಿಯ ‘ಗಟ್ಟಿ’ಯಾಗಿರುವುದಕ್ಕೆ ಹಲವು ಕಾರಣಗಳಿವೆ. ಒಂದು ಈಗಾಗಲೇ ರಾಷ್ಟ್ರಾದ್ಯಂತ ಬಿಜೆಪಿ ತಮ್ಮ ಅಸ್ತಿತ್ವವನ್ನು ಕಂಡು ಕೊಂಡಿದ್ದು, ಇತರ ಪಕ್ಷಗಳಿಗಿಂತ ತಾನು ಬಲವಾಗಿರುವುದನ್ನು ಸಾಬೀತುಪಡಿಸಿದೆ. ಇನ್ನು ಬಿಜೆಪಿಗೆ ಸೆಡ್ಡು ಹೊಡೆಯಬೇಕಿದ್ದ, ಕಾಂಗ್ರೆಸ್ ತಮ್ಮ ಬಲವನ್ನು ದಿನದಿಂದ ದಿನಕ್ಕೆ ಕುಗ್ಗಿಸಿಕೊಳ್ಳುವ ಜತೆಜತೆಗೆ, ತಮ್ಮ ಬಳಿಯಿರುವ ಬಲವನ್ನು ಬಿಜೆಪಿಗೆ ಪರೋಕ್ಷವಾಗಿ ಹಸ್ತಾಂತರ ಮಾಡುತ್ತಿದೆ. ಇದರೊಂದಿಗೆ ಕಾಂಗ್ರೆಸ್ ಎಲ್ಲೆಲ್ಲಿ ಕಳೆದುಕೊಳ್ಳುತ್ತಿದೆಯೋ ಅಲ್ಲೆಲ್ಲ, ಬಿಜೆಪಿ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಈಗಲೂ ಕರ್ನಾಟಕವೇ ನೆಲೆಯಾಗಿದ್ದರೂ, ತಮಿಳುನಾಡು, ಕೇರಳದಲ್ಲಿ ತಮ್ಮ ಸಂಘಟನೆ ಬಲಪಡಿಸಿಕೊಳ್ಳುತ್ತಿದೆ. ಮುಂದಿನ ಲೋಕಸಭಾ ಚುನಾವಣಾ ವೇಳೆಗೆ ಕೆಲವು ಸೀಟು ಪಡೆಯುವ ಮಟ್ಟಿಗಾದರೂ ಬಲಗೊಳ್ಳಲಿದೆ. ಪಶ್ಚಿಮ ಬಂಗಾಳದಲ್ಲಿ ಬಾವುಟ ಕಟ್ಟಲು ಜನರಿಲ್ಲದ ಬಿಜೆಪಿಗೆ ಈಗ, ಭರ್ಜರಿ ಬೆಂಬಲ ಸಿಕ್ಕಿದೆ. ಹೀಗಿರುವಾಗ ಬಿಜೆಪಿ ವರಿಷ್ಠರಿಗೆ ಸಹಜವಾಗಿಯೇ ಕರ್ನಾಟಕದ ಕೆಲ ಶಾಸಕರ ಅಸಮಾಧಾನ ‘ನಿರ್ಲಕ್ಷ್ಯ’ ಮಾಡುವ ಸರಕು ಎಂದರೆ ತಪ್ಪಾಗಲಿಕ್ಕಿಲ್ಲ.
ಇದು ದೇಶದ ಸಂಘಟನೆ ವಿಷಯವಾದರೆ, ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಇಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಆಂತರಿಕ ಸಂಘರ್ಷದಿಂದ ಇಲ್ಲಿ ಸಂಘಟನೆಯಲ್ಲಿ ಹಿನ್ನಡೆಯಾಗಿದೆ ಆದರೂ, ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಕಾಂಗ್ರೆಸ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಉತ್ತರಕರ್ನಾಟಕದಲ್ಲಿ ವಿಭಜನೆಯಾಗ ದಂತೆ ನೋಡಿಕೊಂಡರೆ, ಅರ್ಧ ಚುನಾವಣೆ ಗೆದ್ದಂತೆ. ಏಕೆಂದರೆ, ಈಗಾಗಲೇ ಹಳೇ ಮೈಸೂರು ಭಾಗ ಮುಂದಿನ ಐದು ವರ್ಷ ನಮ್ಮ ‘ಕಪ್ ಆಫ್ ಟೀ’ ಅಲ್ಲ ಎನ್ನುವುದನ್ನು ಅರ್ಥ ಮಾಡಿ ಕೊಂಡಿರುವ ಬಿಜೆಪಿ, ಅಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಮಾಡುವ ಉದ್ದೇಶದಿಂದಲೇ ಜೆಡಿಎಸ್ ಗೆ ಬೆಂಬಲ ನೀಡಲು ಸಿದ್ಧತೆ ನಡೆಸಿಕೊಂಡಿದ್ದಾರೆ.
ಹೇಗಿದ್ದರೂ ಹಳೇ ಮೈಸೂರು ಭಾಗದ ಬಹುತೇಕ ಭಾಗದಲ್ಲಿ ಬಿಜೆಪಿಗೆ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಆದರೆ ಜೆಡಿಎಸ್ ಕಾಂಗ್ರೆಸ್‌ನಿಂದ ಕೆಲ ಕ್ಷೇತ್ರ ಗಳನ್ನಾದ ರೂ ಕಿತ್ತುಕೊಂಡರೆ, ಅದು ಪರೋಕ್ಷವಾಗಿ ಬಿಜೆಪಿ ಲಾಭ. ಏನೇ ಆದರೂ ‘ಶತ್ರುವಿನ ಶತ್ರು, ಮಿತ್ರ ಅಲ್ಲವೇ’. ಬಿಜೆಪಿಯ ಈ ನಡೆಯಿಂದ ಜೆಡಿಎಸ್ ತಮ್ಮ ಭದ್ರಕೋಟೆಯನ್ನು ಉಳಿಸಿಕೊಂಡ ಖುಷಿ ಒಂದೆಡೆಯಾದರೆ, ಬಿಜೆಪಿಯ ತಂಟೆಗೆ ಅವರು ಹೋಗುವುದಿಲ್ಲ. ಸರಕಾರ ರಚನೆಯ ಲೆಕ್ಕಾಚಾರದಲ್ಲಿ ನೋಡುವು ದಾದರೆ, ಇದರ ನೇರ ಲಾಭವಾಗುವುದು ಬಿಜೆಪಿಗೆ ಹೊರತು ಕಾಂಗ್ರೆಸ್‌ಗಲ್ಲ.
ಇನ್ನು ಈ ಸಮಯದಲ್ಲಿ ಯಾರಾದರೂ ಬಿಜೆಪಿ ತೊರೆದು ಹೋಗುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದರೆ, ಅದರಿಂದ ಪಕ್ಷ ಬಿಟ್ಟವರಿಗೆ ಲಾಸ್ ಹೊರತು ಬಿಜೆಪಿಗಲ್ಲ.
ಅದರಲ್ಲಿಯೂ ಜೆಡಿಎಸ್-ಕಾಂಗ್ರೆಸ್ ನಿಂದ ವಲಸೆ ಬಂದಿರುವ 17 ಜನರಂತೂ ಈ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ. ಎರಡು ವರ್ಷದ ಹಿಂದಷ್ಟೇ ಬಿಜೆಪಿಗೆ ಬಂದು, ಉಪಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ಈ ಸಚಿವ ಸ್ಥಾನ ಅಥವಾ ಬೇಕಾದ ಖಾತೆ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ, ರಾಜೀನಾಮೆ ನೀಡಿದರೆ
ತಮ್ಮ ಕ್ಷೇತ್ರದ ಮತದಾರರ ಮುಂದೆ ಮತ್ತೊಮ್ಮೆ ಮತಭಿಕ್ಷೆ ಅಸಾಧ್ಯ. ಈ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿರುವ ಯಾವುದೇ ವಲಸಿಗರು, ಪಕ್ಷದ ವಿರುದ್ಧ ತಿರುಗಿ ಬೀಳಬೇಕು ಎಂದರೆ, ಒಂದರ್ಥದಲ್ಲಿ ‘ರಾಜಕೀಯ ನಿವೃತ್ತಿ’ಯನ್ನೇ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.
ಇನ್ನು ಸ್ವಪಕ್ಷ ರಾಮದಾಸ್, ಪೂರ್ಣಿಮಾ ಶ್ರೀನಿವಾಸ್, ರಾಜೂಗೌಡ ಸೇರಿದಂತೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎಲ್ಲ ಅಸಮಾಧಾನಗಳು ‘ಬಟ್ಟೆ ಹಾವು’ ಅಥವಾ ಕೇವಲ ಆಪ್ತರ ಬಳಿ ಹೇಳಿಕೊಳ್ಳುವುದಕ್ಕೆ ಸೀಮಿತವಾಗುತ್ತದೆ. ಒಂದು ವೇಳೆ ನಿಜಕ್ಕೂ ಇವರೆಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಮುಂದಿನ ರಾಜಕೀಯ ಭವಿಷ್ಯ ಆಪತ್ತಿಗೆ ಸಿಲುವುದರಲ್ಲಿ ಅನುಮಾನವಿಲ್ಲ. ಈ ಎಲ್ಲವನ್ನು ಮೀರಿ, ಒಂದು ವೇಳೆ ಸರಕಾರವನ್ನು ಬೀಳಿಸುವಷ್ಟು ಶಾಸಕರು ಬಿಜೆಪಿ ಯಿಂದ ಹೋದರು ಎಂದುಕೊಂಡರೂ (ಅದು ಪ್ರಾಯೋಗಿಕವಾಗಿ ಇಂದಿನ ಮಟ್ಟಿಗೆ ಸಾಧ್ಯವಿಲ್ಲ.) ಈಗಾಗಲೇ ಜೆಡಿಎಸ್ ಬೆಂಬಲ ಪಡೆಯುವುದಕ್ಕೆ ಬೇಕಿರುವ ಸಿದ್ಧತೆಯನ್ನು ಈಗಾಗಲೇ ಬಿಜೆಪಿ ವರಿಷ್ಠರು ಸಿದ್ಧವಾಗಿದ್ದಾರೆ.
ಹೀಗಿರುವಾಗ, ಕೆಲ ಶಾಸಕರು ಮಾತಿಗೆ ರಾಜೀನಾಮೆ ಕೊಡುತ್ತೇವೆ ಎಂದರೆ ವರಿಷ್ಠರೇಕೆ ತಲೆಕೆಡಿಸಿಕೊಳ್ಳಬೇಕು? ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ, ಒತ್ತಡ, ಬಂಡಾಯ, ಬಹಿರಂಗ ಹೇಳಿಕೆಗಳಿಗಿಂತ, ಮನವಿಗಳಿಗೆ ಹೆಚ್ಚು ಮಾನ್ಯತೆ. ಪ್ರಾದೇಶಿಕ ಹಿತಾಸಕ್ತಿ ಯಿಂದ ಇದು ರಾಜ್ಯಕ್ಕೆ ಮಾರಕವಾದರೂ, ಪಕ್ಷಕ್ಕೆ ಇದರಿಂದ ಹೆಚ್ಚು ಲಾಭವಾಗುತ್ತದೆ. ಇನ್ನು ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕಿದೆ. ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬರುವ ಮೊದಲು, ಯಡಿಯೂರಪ್ಪ ಅವರ ಸರಕಾರವಿದ್ದಾಗ ಬಿಜೆಪಿ ಶಾಸಕರಾಗಿ, ನಾಯಕರಾಗಲಿಸುಮ್ಮನಿರಲಿಲ್ಲ. ಅದರಲ್ಲಿಯೂ ಬಸವಗೌಡ ಪಾಟೀಲ್ ಯತ್ನಾಳ್, ಸಿ.ಪಿ. ಯೋಗೇಶ್ವರ, ಅರವಿಂದ ಬೆಲ್ಲದ್ ಅವರೆಲ್ಲ ಮುಖ್ಯಮಂತ್ರಿಯನ್ನು , ಸರಕಾರವನ್ನು ಬೈದಾಡಿಕೊಂಡೇ ಓಡಾಡುತ್ತಿದ್ದಾರೆ. ಈ ಬಗ್ಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಎಂದು ಏನಲ್ಲ.
ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ನಾಯಕರ ವಿರುದ್ಧ ದೂರು ನೀಡಿದರೂ ‘ಕಠಿಣ ಕ್ರಮ’ ಹೇಳಿಕೆ ನೀಡುತ್ತಾ, ಯಡಿಯೂರಪ್ಪ ರಾಜೀನಾಮೆಯ ತನಕ ದೊಬ್ಬಿದರು. ಹಾಗೆ ನೋಡಿದರೆ, ಬಸನಗೌಡ ಪಾಟೀಲ್ ಯತ್ನಾಳ್ ಹೊರತುಪಡಿಸಿದರೆ, ಇನ್ನುಳಿದ ರೆಬೆಲ್‌ಗಳೆಲ್ಲ ಯಡಿಯೂರಪ್ಪ ಅವರಿಂದಲೇ ಮುನ್ನೆಲೆಗೆ ಬಂದಿದ್ದು. ಆದರೂ ಅವರ ವಿರುದ್ಧ ಈ ಮಟ್ಟಿಗೆ ತಿರುಗಿಬಿದ್ದರು. ಈ ವಿಷಯವನ್ನು ರಾಜ್ಯ ನಾಯಕರು, ಶಾಸಕರು ಪರಸ್ಪರ ಕೆಸರೆರಚಾಟಕ್ಕೆ ಒಂದು ‘ಟಾಪಿಕ್‘ ಆಗಿತ್ತೇ ಹೊರತು, ವರಿಷ್ಠರಿಗೆ ದೊಡ್ಡ ವಿಷಯ ಎನಿಸಲೇ ಇಲ್ಲ.
ಏಕೆಂದರೆ ಅವರಿಗೆ ತಿಳಿದಿದೆ, ಏನೇ ಬಂಡಾಯವೆದ್ದರೂ ಸರಕಾರ ಬೀಳಿಸುವ ಹಂತಕ್ಕಂತೂ ಯಾರು ಹೋಗುವುದಿಲ್ಲ. ಹೋದರೂ, ಆ ಸಂಖ್ಯೆ ಐದನ್ನು ಮೀರುವುದಿಲ್ಲ. ಆದ್ದರಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಸಾಧ್ಯವಾದಷ್ಟು ನಿರ್ಲಕ್ಷ್ಯ ಮಾಡಿದರೆ ಈ ವಿವಾದಗಳು ತನ್ನಿತ್ತಾನೆ ಗಾಳಿಯಲ್ಲಿ ಹಾರಿ ಹೋಗುತ್ತವೆ ಎನ್ನುವ ವಿಶ್ವಾಸ ಹೈಕಮಾಂಡ್‌ನದ್ದು. ಯಡಿಯೂರಪ್ಪನವರ ವಿಷಯದಲ್ಲಿ ಹೇಳುವುದಾದರೆ, ವರಿಷ್ಠರಿಗೆ ಅವರನ್ನು ಇಳಿಸಲು ಒಂದು ಕಾರಣ ಬೇಕಿತ್ತು. ಅದಕ್ಕೆ ಈ ರೆಬೆಲ್ ನಾಯಕರು ಸಿಕ್ಕರು.
ಆದ್ದರಿಂದ ಅವರ ಮೇಲೆ ಹಾಕಿ, ಇದರಿಂದ ಆಗುವ ಸಮಸ್ಯೆಯ ಬಗ್ಗೆ ಮಾತನಾಡಿ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದರು. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಲು ವರಿಷ್ಠರಿಗೆ ಅವರದ್ದೇ ಆದ ಕಾರಣವಿದ್ದರೂ, ಅಸಮಾಧಾನಿತ ಮಾತ್ರ ತಮ್ಮ ಬಂಡಾಯ ಕೂಗಿಗೆ ಅವರನ್ನು ಕೆಳಗೆ ಇಳಿಸಲಾಯಿತು ಎಂದು ಹೇಳಿಕೊಂಡರು. ಈ ಹಂತದಲ್ಲಿ ವರಿಷ್ಠರಿಗೆ ಬೇಕಾಗಿದ್ದು ಭಿನ್ನಮತವಿಲ್ಲದ, ಬಂಡಾಯವಿಲ್ಲದ, ಅಽಕಾರ ಹಸ್ತಾಂತರ ಪ್ರಕ್ರಿಯೆ ಅಷ್ಟೇ..
ಆದರೆ ಈ ಪರಿಸ್ಥಿತಿ ಬದಲಾಗಿದೆ. ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರಿಗೆ ಬೇಕಾದಂತೆ ಸರಕಾರ ರಚನೆಯಾಗಿದೆ. ಆದ್ದರಿಂದ ವರಿಷ್ಠರು ಏನೇ ಆದರೂ
ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಲ್ಲುವುದು ಖಚಿತ. ಒಂದಿಬ್ಬರು ‘ಕೊಸರಿದರೂ’ ಅದನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಹೋಗುವಂತೆ ಹೇಳುತ್ತಾರೆ. ಇನ್ನು
ಇನ್ನೊಂದುವರೆ ವರ್ಷದಲ್ಲಿ ಎದು ರಾಗಲಿರುವ ಚುನಾವಣೆಗೆ ಸಿದ್ಧತೆ ಆರಂಭಿಸಬೇಕಾದ ಸಮಯದಲ್ಲಿ, ರಾಜೀನಾಮೆ ಕೊಡುವುದು ಬಂಡಾಯ ವೇಳುವುದು
ರಾಜಕೀಯ ಚದುರಂಗ ಆಟದ ‘ಅತ್ಯಂತ್ಯ ಕೆಟ್ಟ ನಡೆ’.
ಅದರಲ್ಲಿಯೂ ಸದ್ಯ ಪರಿಸ್ಥಿತಿಯಲ್ಲಿ ಗೆಲ್ಲುವ ಕುದುರೆಯಾಗಿರುವ ಬಿಜೆಪಿಯನ್ನು ಬಿಟ್ಟು, ಮತ್ತೊಂದು ಪಕ್ಷಕ್ಕೆ ಹೋಗುತ್ತೇವೆ ಎನ್ನುವುದು ರಾಜಕೀಯ ಬೆಳವಣಿಗೆ ಬೇಕೆನ್ನುವ ನಡೆಯಂತೂ ಅಲ್ಲ. ಹೀಗಿರುವಾಗ ಬಿಜೆಪಿ ಸರಕಾರದಲ್ಲಿ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡು ತಮ್ಮ ಅಸಮಾಧಾನವನ್ನು ರಾಜೀನಾಮೆಯ ಮಟ್ಟಿಗೆ ತಗೆದುಕೊಂಡು ಹೋಗುವುದು ಸದ್ಯದ ಮಟ್ಟಿಗಂತೂ ಸಾಧ್ಯವಿಲ್ಲ. ಆವೇಶದಿಂದ ರಾಜೀನಾಮೆಯ ಮಾತನ್ನು ಆಡುತ್ತಿರುವವರ ಮಾತು ಆಪ್ತರ ಕಿವಿಗೆ, ಮಾಧ್ಯಮಗಳ ಮುಂದೆ ಮಾತ್ರ ಇರುತ್ತದೆ ಎನ್ನುವುದೇ ಸತ್ಯ!