Thursday, 12th December 2024

ಇಂಡಿಯಾ ಗೇಟ್‌ ತಲುಪುತ್ತಾರಾ ಸಿದ್ದರಾಮಯ್ಯ ?

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಕಾಂಗ್ರೆಸ್‌ನ ಒಂದು ಬಣದ ಸಂದೇಶವನ್ನು ಮಾಜಿ ಪ್ರಧಾನಿ ದೇವೇಗೌಡರು ದಿಲ್ಲಿ ನಾಯಕರಿಗೆ ರವಾನಿಸಿದ್ದಾರೆ. ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಲಿ, ರಾಹುಲ್ ಗಾಂಧಿ ಅವರ ಕೈ ಬಲಪಡಿಸಲಿ ಎಂಬುದೇ ಕಾಂಗ್ರೆಸ್ ವರಿಷ್ಠರಿಗೆ ದೇವೇಗೌಡರು ರವಾನಿಸಿರುವ ಸಂದೇಶ. ವಸ್ತುಸ್ಥಿತಿ ಎಂದರೆ ಕಾಂಗ್ರೆಸ್‌ನಲ್ಲಿರುವ ಸಿದ್ಧರಾಮಯ್ಯ ವಿರೋಧಿ ಬಣಕ್ಕೆ ನೇರಾ ನೇರವಾಗಿ ಈ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸುವ ದಾರಿ ಕಾಣುತ್ತಿಲ್ಲ.

ಆದರೆ ದೆಹಲಿಯಲ್ಲಿ ದೇವೇಗೌಡರು ಬಹಿರಂಗವಾಗಿ ಏನು ಹೇಳಿದ್ದಾರೋ? ಆ ಮಾತಿನ ವಿಷಯದಲ್ಲಿ ಈ ಬಣಕ್ಕೆ ಸಂಪೂರ್ಣ
ಸಹಮತವಿದೆ. ಅಂದ ಹಾಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ಬಣಗಳಿವೆಯಾದರೂ ಸಿದ್ಧರಾಮಯ್ಯ ಅವರನ್ನು ವಿರೋಧಿಸುವ ವಿಷಯದಲ್ಲಿ ಹಲವು ಬಣಗಳಲ್ಲಿರುವವರು ಒಂದಾಗಿ ಬಿಡುತ್ತಾರೆ. ಹೀಗೆ ಒಂದಾಗುವವರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಉಪಮುಖ್ಯಮಂತ್ರಿ
ಡಾ.ಜಿ.ಪರಮೇಶ್ವರ್, ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಮುಖ್ಯರಾದವರು.

ಹಲವು ಕಾಲದಿಂದ ಇವರಿಗೆಲ್ಲ ಸಿದ್ದರಾಮಯ್ಯ ಅವರ ವಿಷಯದಲ್ಲಿ ಅಸಹನೆ ಇದೆಯಾದರೂ ಈಗ ಮೈಸೂರು ಮಹಾನಗರ
ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯ ವಿಷಯದಲ್ಲಿ ವಿವಾದವೇಳುತ್ತಲೇ ಒಂದಾಗಿ ನಿಂತುಬಿಟ್ಟಿದ್ದಾರೆ. ಇವರೆಲ್ಲರ ಸದ್ಯದ ಗುರಿ ಎಂದರೆ ಸಿದ್ಧರಾಮಯ್ಯ ಅವರಿಗೆ ರಾಜ್ಯ ಕಾಂಗ್ರೆಸ್ ಮೇಲಿರುವ ನಿಯಂತ್ರಣವನ್ನು ತಪ್ಪಿಸುವುದು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಇವರೆಲ್ಲರ ಭಾವನೆಯನ್ನು ನಿರಾಯಾಸವಾಗಿ ದಿಲ್ಲಿಯ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ. ವಸ್ತುಸ್ಥಿತಿ ಎಂದರೆ ದೇವೇಗೌಡರಿಗೆ ಭವಿಷ್ಯದಲ್ಲಿ ಬಿಜೆಪಿಯ ಜತೆ ಕೈಗೂಡಿಸುವ ಇಚ್ಛೆಯಿಲ್ಲ. ಆದರೆ ಎಲ್ಲಿಯವರೆಗೆ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನ ನಿರ್ಣಾಯಕ ಶಕ್ತಿಯಂತೆ ಭಾಸವಾಗುತ್ತಿರುತ್ತಾರೋ? ಅಲ್ಲಿಯವರೆಗೆ ಆ ಪಕ್ಷದ ಜತೆ ಕೈಗೂಡಿಸಲೂ ಆಗುವುದಿಲ್ಲ.

2018ರಲ್ಲಿ ಅಸ್ತಿತ್ವಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಸರಕಾರ ಹೇಗೆ ಪತನವಾಯಿತು?
ಎಂಬುದು ದೇವೇಗೌಡರಿಗೆ ಗೊತ್ತು. ಅವರ ಪುತ್ರ ಕುಮಾರಸ್ವಾಮಿ ಅವರಿಗೂ ಗೊತ್ತು. ವ್ಯತ್ಯಾಸವೆಂದರೆ ಇದಕ್ಕಾಗಿ ಕುಮಾರ ಸ್ವಾಮಿ ಅವರು ಕಾಂಗ್ರೆಸ್ ಜತೆಗಿನ ಸಖ್ಯವನ್ನೇ ವಿರೋಧಿಸುತ್ತಾರೆ. ಆದರೆ ದೇವೇಗೌಡರು ಕಾಂಗ್ರೆಸ್ ಜತೆಗಿನ ಸಖ್ಯವನ್ನು ವಿರೋಧಿಸುವುದಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರಿಲ್ಲದ ಕಾಂಗ್ರೆಸ್ ಪಕ್ಷವನ್ನು ಬಯಸುತ್ತಾರೆ.

ವಾಸ್ತವವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಬಣಕ್ಕೂ ಇದೇ ಉದ್ದೇಶವಿದೆ. ರಾಜ್ಯದಲ್ಲಿ ಮರಳಿ ಅಧಿಕಾರ ಪಡೆಯಲು ಬಿಜೆಪಿ ವಿರೋಧಿ ಶಕ್ತಿಗಳೆಲ್ಲ ಒಂದಾಗಬೇಕು ಎಂಬುದು ಅದರ ಲೆಕ್ಕಾಚಾರ. ನರೇಂದ್ರಮೋದಿ ನೇತೃತ್ವದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆದಿರುವ ಬಿಜೆಪಿಯನ್ನು ಸ್ವಯಂ ಶಕ್ತಿಯ ಮೂಲಕ ಎದುರಿಸುವುದು ಕಷ್ಟ. ಹೀಗಾಗಿ ಜೆಡಿಎಸ್ ಜತೆ ಸಖ್ಯವಾದರೆ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬಹುದು ಎಂಬುದು ಈ ಲೆಕ್ಕಾಚಾರದ ಭಾಗ.

ಅಲ್ಲಿಗೆ ರಾಜ್ಯ ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಬಣದ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ತಾಳ – ಮೇಳ ಕೂಡುತ್ತವೆ. ಆದರೆ ಬಿಜೆಪಿ ವಿರೋಧಿ ಶಕ್ತಿಗಳು ಒಗ್ಗೂಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಇರುವ ಏಕೈಕ ಅಡ್ಡಿ ಎಂದರೆ ಸಿದ್ದರಾಮಯ್ಯ ಎಂಬುದು ದೇವೇಗೌಡರ ಮಾತಿನ ಅರ್ಥ. ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ಅವರ ವಿರೋಧಿಗಳ ಭಾವನೆ ಕೂಡಾ ಅದೇ. ಆದರೆ ಈ ಎಲ್ಲರ ಭಾವನೆ, ಉದ್ದೇಶಗಳು ಈಡೇರುತ್ತವೆಯೇ? ಎಂಬುದು ಮಾತ್ರ ಕಾದು ನೋಡಬೇಕಾದ ಪ್ರಶ್ನೆ. ಕುತೂಹಲದ ಸಂಗತಿ ಎಂದರೆ ದಶಕಕ್ಕೂ ಹಿಂದೆ ಇಂತಹದೇ ಭಾವನೆ ಮತ್ತು ಉದ್ದೇಶವನ್ನುಳ್ಳ ಸಂದೇಶವನ್ನು ಇದೇ ಸಿದ್ದರಾಮಯ್ಯ ಅವರು ಪಕ್ಷದ ವರಿಷ್ಠರಿಗೆ ರವಾನಿಸಿದ್ದರು.

ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರ ಪಡೆಯಲು ಇರುವ ದೊಡ್ಡ ಅಡ್ಡಿ ಎಂದರೆ ಮಲ್ಲಿಕಾರ್ಜುನ ಖರ್ಗೆ ಎಂಬ ಸಂದೇಶ ಕೈ
ಪಾಳೆಯದ ವರಿಷ್ಠರ ಕಿವಿ ತಲುಪುವಂತೆ ಮಾಡಿದ್ದರು. ಪರಿಣಾಮ? ಹೈಕಮಾಂಡ್ ವರಿಷ್ಠರು ಸಿದ್ದರಾಮಯ್ಯ ಇಲ್ಲಿಗೆ, ಖರ್ಗೆ ದಿಲ್ಲಿಗೆ ಎಂಬ ಸೂತ್ರವನ್ನು ಬಹಳ ನಯವಾಗಿ ಅನುಷ್ಠಾನಗೊಳಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸು ಹೊತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಸಂಸತ್ತನ್ನು ಪ್ರವೇಶಿಸಿ ರಾಷ್ಟ್ರ ರಾಜಕಾರಣದಲ್ಲಿ ಸೆಟ್ಲ್ ಆಗಿದ್ದು ಹೀಗೆ. ಈ ರೀತಿ ಖರ್ಗೆ ಅವರು ದಿಲ್ಲಿಗೆ ಹೋದ ನಂತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಬಲಿಷ್ಠರಾಗುತ್ತಾ ಹೋದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯೂ ಆದರು. ಅಲ್ಲಿಂದ ಇದುವರೆಗೆ ಸಿದ್ಧರಾಮಯ್ಯ ಅವರು ಹಿಂತಿರುಗಿ ನೋಡಿದ್ದೇ ಇಲ್ಲ, ಆದರೆ ಯಾವಾಗ ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಯಲ್ಲಿ ಸಿದ್ದರಾಮಯ್ಯ ಅವರ ಇಚ್ಛೆಗೆ ವಿರುದ್ಧವಾಗಿ ಜೆಡಿಎಸ್ ಜತೆ ಹೊಂದಾಣಿಕೆ ನಡೆಯಿತೋ? ಇದಾದ ನಂತರ ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಈ ಚುನಾವಣೆಯ ವಿಷಯದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ತಾವು ವಿರೋಧಿ ಯಾಗಿರಲಿಲ್ಲ.

ಆದರೆ ಮೈತ್ರಿಗಾಗಿ ಜೆಡಿಎಸ್‌ನವರು ಮುಂದೆ ಬಂದಾಗ ಮೇಯರ್ ಸ್ಥಾನ ನಮಗೆ, ಉಪಮೇಯರ್ ಸ್ಥಾನ ನಿಮಗೆ ಎಂದು ಹೇಳಿ ಅಂತ ಸ್ವಪಕ್ಷೀಯರಿಗೆ ಹೇಳಿದ್ದೆ. ಆದರೆ ನನ್ನ ಮಾತನ್ನು ಮೀರಿ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡಲಾಗಿದೆ ಎಂಬುದು ಸಿದ್ದರಾಮಯ್ಯ ಅವರ ಆಕ್ರೋಶ. ಈ ವಿಷಯ ಬಂದಾಗ ಸಿದ್ದರಾಮಯ್ಯ ಅವರ ಭಾವನೆಗೆ ವಿರುದ್ಧವಾಗಿ ಕೆಲಸ ಮಾಡಿದವರು ಹಾಲಿ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್
ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವ, ಮೇಯರ್ ಸ್ಥಾನವನ್ನು ಅವರಿಗೆ ಬಿಟ್ಟುಕೊಡುವ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ
ಡಿ.ಕೆ. ಶಿವಕುಮಾರ್ ಅವರ ಸಹಮತವಿತ್ತು ಎಂದು ಇದೇ ತನ್ವೀರ್ ಸೇಠ್ ಬಹಿರಂಗವಾಗಿಯೇ ಹೇಳಿದರು.

ಅಲ್ಲಿಗೆ ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಣ ಶೀತಲ ಸಮರ ಉಷ್ಣ ಸಮರದ ರೂಪ ಪಡೆದುಬಿಟ್ಟಿತು. ಈ
ಸನ್ನಿವೇಶವನ್ನು ತಿಳಿಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಶ್ರಮಿಸುತ್ತಿದೆ ಲಯಾದರೂ ಅದೇ ಕಾಲಕ್ಕೆ ಸಿದ್ದರಾಮಯ್ಯ ವಿರೋಧಿಗಳ ಭಾವನೆಯನ್ನು ದೇವೇಗೌಡರು ತುಂಬ ಯಶಸ್ವಿಯಾಗಿ ಕೈ ಪಾಳೆಯದ ವರಿಷ್ಠರಿಗೆ ತಲುಪಿಸಿಬಿಟ್ಟಿದ್ದಾರೆ.

ಅಲ್ಲಿಗೆ ಆಟ ನಿರ್ಣಾಯಕ ತಿರುವು ಪಡೆಯಿತೆಂದೇ ಅರ್ಥ. ಯಾಕೆಂದರೆ ಭವಿಷ್ಯದಲ್ಲಿ ಸಿದ್ಧರಾಮಯ್ಯ ಅವರ ಹಿಡಿತದಿಂದ ಪಕ್ಷವನ್ನು ಬಿಡುಗಡೆ ಮಾಡದೆ ಬೇರೆ ದಾರಿಯಿಲ್ಲ ಎಂಬ ತೀರ್ಮಾನಕ್ಕೆ ಅವರ ವಿರೋಧಿಗಳು ಬಂದುಬಿಟ್ಟಿದ್ದಾರೆ. ಅದೇ ರೀತಿ ತಮ್ಮ ವಿರೋಧಿಗಳ ಶಕ್ತಿಯನ್ನು ಕುಗ್ಗಿಸದೆ ತಾವು ಭವಿಷ್ಯದ ಸಿಎಂ ಆಗುವ ಕನಸು ಈಡೇರುವುದಿಲ್ಲ ಎಂಬುದು ಸಿದ್ಧರಾಮಯ್ಯ ಅವರಿಗೂ ಗೊತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಂದೋ ಸಿದ್ಧರಾಮಯ್ಯ ಅವರು ಗೆಲುವನ್ನು ತಮ್ಮದಾಗಿಸಿಕೊಳ್ಳಬೇಕು. ಅದೇ ರೀತಿ ಸಿದ್ದರಾಮಯ್ಯ ವಿರೋಧಿಗಳೂ ಗೆಲುವನ್ನು ತಮ್ಮದಾಗಿಸಿಕೊಳ್ಳಲೇ ಬೇಕು.

ಗೆಲುವು ಯಾರದೇ ಆದರೂ ಸೋತವರ ರಾಜಕೀಯ ಶಕ್ತಿ ಕುಸಿದು ನೆಲ ಕಚ್ಚುತ್ತದೆ ಅಂತಲೇ ಅರ್ಥ. ಅಂದ ಹಾಗೆ ಸಿದ್ಧರಾಮಯ್ಯ ಅವರನ್ನು ವಿರೋಧಿಸುತ್ತಿರುವವರು ಯಾವ್ಯಾವ ಕಾರಣಕ್ಕಾಗಿ ಆ ಸ್ಥಿತಿಗೆ ತಲುಪಿದ್ದಾರೆ ಎಂಬುದನ್ನು ನೋಡಬೇಕು. ಉದಾಹರಣೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ತೆಗೆದುಕೊಳ್ಳಿ. ಸಿದ್ದರಾಮಯ್ಯ ಅವರು ಜೆಡಿಎಸ್ ಪಾಳೆಯದಿಂದ ಹೊರಬಿದ್ದು ಕಾಂಗ್ರೆಸ್ ಜತೆ ಕೈ ಜೋಡಿಸುವ ಕಾಲಕ್ಕೆ ಅವರೇ ಪವರ್ ಫುಲ್ ನಾಯಕರಾಗಿದ್ದರು.

ಆದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಗತೊಡಗಿತು. 2008ರ ವಿಧಾನಸಭಾ ಚುನಾವಣೆಯ ನಂತರ ಸಿದ್ಧರಾಮಯ್ಯ ಅವರಿಟ್ಟ ಹೆಜ್ಜೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಖರ್ಗೆ ಅವರಿಗಿದ್ದ ಶಕ್ತಿಯನ್ನು ಕುಗ್ಗಿಸುತ್ತಾ ಹೋದವು. ಅಷ್ಟೇ ಅಲ್ಲ, ತಮ್ಮ ಮುಖ್ಯಮಂತ್ರಿ ಹುದ್ದೆಯ ಕನಸು ಭಂಗವಾಗುತ್ತಿರುವುದನ್ನು ನೋಡಿಯೂ ಅವರು ನಿರ್ವಾಹವಿಲ್ಲದೆ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಾಯಿತು. ಈ ಮಧ್ಯೆ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಆಪ್ತ ಇಕ್ಬಾಲ್ ಅಹ್ಮದ್ ಸರಡಗಿ ಸೋತ ರೀತಿ, ಮತ್ತು ಅದರ ಹಿಂದೆ ಸಿದ್ದರಾಮಯ್ಯ ಅವರ ನೆರಳಿದ್ದ ರೀತಿಯನ್ನು ಗಮನಿಸಿ ಖರ್ಗೆ
ನೋವಿಗೊಳಗಾಗಿದ್ದೂ ನಿಜ.

ಪರಿಣಾಮ? ಇವತ್ತು ಸಿದ್ದರಾಮಯ್ಯ ಅವರ ಹಿಡಿತದಿಂದ ರಾಜ್ಯ ಕಾಂಗ್ರೆಸ್ ಅ ನ್ನು ಮುಕ್ತಗೊಳಿಸಬೇಕು ಎಂಬ ವಿಷಯದಲ್ಲಿ ಖರ್ಗೆ ಅತ್ಯಾಸಕ್ತಿ ಹೊಂದಿದ್ದಾರೆ. ವಸ್ತುಸ್ಥಿತಿ ಎಂದರೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರ ಮುಖಭಂಗಕ್ಕೆ ಕಾರಣರಾದ ತನ್ವೀರ್ ಸೇಠ್ ಏನಿzರೆ? ಅವರು ಖರ್ಗೆ ಅವರ ಅತ್ಯಾಪ್ತ.
ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ತಮಗಿಷ್ಟ ಬಂದ ಅಲ್ಪಸಂಖ್ಯಾತ ನಾಯಕರನ್ನು ಮೇಲೆತ್ತುತ್ತಾ, ತಮ್ಮನ್ನು ಮೂಲೆಗುಂಪು ಮಾಡುವಲ್ಲಿ ಸಿದ್ಧರಾಮಯ್ಯ ಯಶಸ್ವಿಯಾದರು ಎಂಬುದು ತನ್ವೀರ್ ಸೇಠ್ ಅವರಂಥವರ ಅಸಮಾಧಾನ.

ಚಾಮರಾಜಪೇಟೆಯ ಜಮೀರ್ ಅಹ್ಮದ್ ಅವರನ್ನು ಪಕ್ಕದಲ್ಲಿಟ್ಟುಕೊಂಡು ಸಿ.ಎಂ.ಇಬ್ರಾಹಿಂ, ರೋಷನ್ ಬೇಗ್ ಮತ್ತು ತಮ್ಮಂತವರ ಶಕ್ತಿಯನ್ನು ಸಿದ್ಧರಾಮಯ್ಯ ಕುಗ್ಗಿಸುತ್ತಾ ಬಂದರು ಎಂಬುದು ತನ್ವೀರ್ ಸೇಠ್ ಅವರಂಥವರ ಸಿಟ್ಟು. ಇದೇ
ಕಾರಣಕ್ಕಾಗಿ ಖರ್ಗೆ ಬಣದ ತನ್ವೀರ್ ಅವರೂ ಸಿದ್ದರಾಮಯ್ಯ ಅವರ ವಿರುದ್ಧದ ಹೋರಾಟ ತಮ್ಮ ಪಕ್ಷ ತ್ಯಾಗವನ್ನು ಅನಿವಾರ್ಯಗೊಳಿಸಿದರೆ ಅದಕ್ಕೂ ಸಿದ್ಧ ಎನ್ನುವಲ್ಲಿಯವರೆಗೆ ತಲುಪಿದ್ದಾರೆ.

ಇನ್ನು ಡಾ.ಜಿ. ಪರಮೇಶ್ವರ್ ಅವರಿಗೂ ಸಿದ್ಧರಾಮಯ್ಯ ಅವರ ಬಗ್ಗೆ ಅಪಾರ ಸಿಟ್ಟಿದೆ. ಪದಾಧಿಕಾರಿಗಳೇ ಇಲ್ಲದ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ವಿಷಯದಲ್ಲಿ ತಾವು ಅವಿರತ ಶ್ರಮ ಪಟ್ಟರೂ, ನಿರ್ಣಾಯಕ ಹಂತದಲ್ಲಿ ಸಿದ್ದರಾಮಯ್ಯ ತಮ್ಮ ಶಕ್ತಿ ಯನ್ನು ಕುಗ್ಗಿಸಿದರು ಎಂಬುದು ಪರಮೇಶ್ವರ್ ಅವರ ಸಿಟ್ಟಿಗೆ ಕಾರಣ. 2013ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಚಕ್ರವ್ಯೂಹ ಹೆಣೆದಿದ್ದೇ ಸಿದ್ಧರಾಮಯ್ಯ ಅಂತ ನಂತರದ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರಿಗೇ ದೂರು ನೀಡಿದ್ದ ಪರಮೇಶ್ವರ್ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ತಮಗೆ ಉಪ ಮುಖ್ಯಮಂತ್ರಿ ಹುದ್ದೆಯಾದರೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಅವರ ಕನಸು ನನಸಾಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ವಿಷಯ ದಲ್ಲಿ ಪರಮೇಶ್ವರ್ ಅವರಿಗೆ ಒಂದು ಖಾಯಂ ಸಿಟ್ಟಿದೆ. ಈಗ ಆ ಸಿಟ್ಟನ್ನು ತೋರಿಸಲು ಅವಕಾಶ ಸಿಕ್ಕಿದೆ. ಹೀಗಾಗಿಯೇ ಸಿದ್ಧರಾಮಯ್ಯ ಅವರು ರಾಜ್ಯ ರಾಜಕಾರಣವನ್ನು ತೊರೆದು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂದು ಬಯಸುವವರ ಪಟ್ಟಿಯಲ್ಲಿ ಅವರೂ ಇದ್ದಾರೆ. ಸಿ.ಎಂ.ಇಬ್ರಾಹಿಂ ಅವರ ಸಿಟ್ಟೂ ಸಕಾರಣವಾದದ್ದೇ. ಯಾಕೆಂದರೆ ಒಂದು ಕಾಲದಲ್ಲಿ ಕೈ ಪಾಳೆಯವನ್ನು ತೊರೆಯಲು ಸಜ್ಜಾಗಿದ್ದ ಸಿದ್ದರಾಮಯ್ಯ ಅವರು ಅ ಉಳಿಯಲು ಕಾರಣ ರಾದವರು ಸಿ.ಎಂ.ಇಬ್ರಾಹಿಂ. ಇನ್ನೇನು ಸಿದ್ದರಾಮಯ್ಯ ಅವರು ಪಕ್ಷ ತೊರೆಯಲು ಮನಸ್ಸು ಮಾಡಿದ್ದಾರೆ ಎಂಬುದು ಖಚಿತ ವಾಗುತ್ತಿದ್ದಂತೆಯೇ
ಬೆಂಗಳೂರಿನ ಪಂಚತಾರಾ ಹೋಟೆಲ್ ಒಂದರಲ್ಲಿ ಕುಳಿತು ಗುಲಾಂ ನಬಿ ಆಜಾದ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ದ್ದರು ಸಿ.ಎಂ.ಇಬ್ರಾಹಿಂ.

ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನು ಕರೆ ತಂದವರು ಈಗ ಅವರನ್ನು ನಿರ್ಲಕ್ಷಿಸು ವುದು ಸರಿಯಲ್ಲ ಎಂದು ಇಬ್ರಾಹಿಂ ಅವರು ಗುಲಾಂ ನಭಿ ಆಜಾದ್ ಅವರಿಗೆ ಕಿರಿಕಿರಿ ಮಾಡದೇ ಇದ್ದಿದ್ದರೆ ಸಿದ್ದರಾಮಯ್ಯ ಅವರಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಗಟ್ಟಿ ನೆಲೆ ಸಿಗುತ್ತಿರಲಿಲ್ಲ. ಆದರೆ ಹೀಗೆ ಸಮಯಕ್ಕೆ ಆದ ತಮಗೆ ರಾಜ್ಯ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನ ಮಾನ ಕಲ್ಪಿಸಲು ಸಿದ್ದರಾಮಯ್ಯ ಆಸಕ್ತಿ ತೋರಲಿಲ್ಲ ಎಂಬುದು ಸಿ.ಎಂ.ಇಬ್ರಾಹಿಂ ಅಸಮಾಧಾನ. ಸಾಲದು ಎಂದರೆ ಪಕ್ಕದಲ್ಲಿ ತಾವಿದ್ದರೂ ಜಮೀರ್ ಅಹ್ಮದ್ ಅವರನ್ನು ಕೈ ಪಾಳೆಯದ ಸರ್ವೋಚ್ಚ ಮುಸ್ಲಿಂ ನಾಯಕ ಎಂದು ಪ್ರತಿಬಿಂಬಿಸಲು ಸಿದ್ದರಾಮಯ್ಯ ಹೊರಟರು ಎಂಬುದು ಅವರ ಆಕ್ರೋಶಕ್ಕೆ ಕಾರಣ.ಇನ್ನು ಡಿ.ಕೆ.ಶಿವಕುಮಾರ್ ವಿಷಯದಲ್ಲಂತೂ ಕೇಳುವುದೇ ಬೇಡ.

2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಬಹುದಿನಗಳ ಕಾಲ ಡಿ.ಕೆ.ಶಿವಕುಮಾರ್ ಮಂತ್ರಿಯಾಗಲೂ ಸಿದ್ಧರಾಮಯ್ಯ ಬಿಡಲಿಲ್ಲ. ಆ ಸಂದರ್ಭದಲ್ಲಿ ತೆರೆಯ ಹಿಂದೆ ನಡೆದ ಆಟಗಳೇನಿದ್ದವು? ಆ ಆಟದ  ನಿಯಮಾವಳಿಗಳನ್ನು ಸಿದ್ದರಾಮಯ್ಯ ಅವರೇ
ರೂಪಿಸಿದ್ದರು. ಮುಂದೆ ಶತಾಯಗತಾಯ ಪ್ರಯತ್ನ ಮಾಡಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಯಾದರೇನೋ ನಿಜ. ಆದರೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿಕೊಳ್ಳುವಂಥ ಶಕ್ತಿ ಏನಿರಲಿಲ್ಲ.

ಕೆಪಿಸಿಸಿ ಅಧ್ಯಕ್ಷರಾದ ನಂತರವೂ ಅಷ್ಟೇ. ಪಕ್ಷವನ್ನು ಕಟ್ಟುವ ವಿಷಯದಲ್ಲಿ ಸಿದ್ಧರಾಮಯ್ಯ ಅವರು ಪರ್ಯಾಯ ಶಕ್ತಿಯಂತೆ ನಡೆದುಕೊಳ್ಳುತ್ತಾ ಬಂದಿದ್ದಾರೆಯೇ ಹೊರತು ಡಿ.ಕೆ. ಶಿವಕುಮಾರ್ ಅವರ ಶಕ್ತಿಗೆ ತಮ್ಮ ಶಕ್ತಿಯನ್ನು ಸೇರಿಸಿಲ್ಲ.ನನಗೆ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಅವರು ಎಡೆ ಹೇಳಿಕೊಳ್ಳುತ್ತಾ ಬಂದಿದ್ದೇ ಇದಕ್ಕೆ ಸಾಕ್ಷಿ. ಪರಿಣಾಮ? ಮುಂದೊಂದು ದಿನ ಸಿದ್ದರಾಮಯ್ಯ ತಮ್ಮ ಕನಸಿಗೆ ಅಡ್ಡಗಾಲಾಗುವುದು ನಿಶ್ಚಿತ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ ಡಿ.ಕೆ.ಶಿವಕುಮಾರ್

ಅಂದ ಹಾಗೆ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಿ  ಎಂಬುದು ನಿಜ. ಯಾಕೆಂದರೆ ಅಹಿಂದ ವರ್ಗಗಳ ಮತಬ್ಯಾಂಕ್ ಅನ್ನು ಸೆಳೆಯುವ ವಿಷಯದಲ್ಲಿ ಸಿದ್ಧರಾಮಯ್ಯ ಅವರಷ್ಟು ಪವರ್ ಫುಲ್ ಲೀಡರುಗಳು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಹಾಗಂತ ಪಕ್ಷವನ್ನು ಸಿದ್ದರಾಮಯ್ಯ ಹಿಡಿತಕ್ಕೆ ಬಿಟ್ಟುಕೊಟ್ಟು ನಾಳೆ ಅವರ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಗೆ ತಲುಪಲು ವಿರೋಧಗಳೂ ತಯಾರಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಅವರನ್ನು ರಾಜ್ಯ ರಾಜಕಾರಣ ದಿಂದ ರಾಷ್ಟ್ರ ರಾಜಕಾರಣಕ್ಕೆ ಕಳಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರು ತರಾತುರಿಯಲ್ಲಿದ್ದಾರೆ.

ಅವರ ತರಾತುರಿಗೆ ಧ್ವನಿಗೂಡಿಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರೂ ಜೆಡಿಎಸ್ ಪಕ್ಷದ ಭವಿಷ್ಯದ ಮಾರ್ಗವನ್ನು ಸಾಫ್ ಮಾಡಲು ಬಯಸಿದ್ದಾರೆ. ಆದರೆ ಇವರೆಲ್ಲರ ಬಯಕೆಯಂತೆ ಸಿದ್ದರಾಮಯ್ಯ ಇಂಡಿಯಾ ಗೇಟ್‌ಗೆ ಹೋಗುತ್ತಾರಾ? ಕಾದು ನೋಡಬೇಕು.