Saturday, 14th December 2024

ಹೊಸ ಓದುಗರ‍ನ್ನು ಸೃಷ್ಟಿಸಲು ಲೇಖಕರಿಗೆ ಸಾಧ್ಯವೆ ?

ಶಶಾಂಕಣ

shashidhara.halady@gmail.com

ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಳಕಳಿ ಒಮ್ಮೊಮ್ಮೆ ವ್ಯಕ್ತವಾಗುತ್ತದೆ. ಆದರೆ, ಈಚಿನ ವಿದ್ಯಮಾನಗಳನ್ನು, ಅಂಕಿ ಅಂಶಗಳನ್ನು ಕಂಡರೆ ಹಾಗನಿಸುವುದಿಲ್ಲ. ಈಗ ಹಲವು ಕನ್ನಡ ಪುಸ್ತಕಗಳು ಒಂದೇ ವರ್ಷದಲ್ಲಿ ಮರು ಮುದ್ರಣಗೊಳ್ಳುತ್ತಿವೆ; ಕನ್ನಡ ಓದುಗರ ಸಂಖ್ಯೆ ಹೆಚ್ಚಳಗೊಂಡಿದೆ.

ಪುಸ್ತಕ ಓದುವುದರಲ್ಲಿ ಸಿಗುವ ಆನಂದ ಬೇರಾವುದರಲ್ಲೂ ಸಿಗುವುದಿಲ್ಲ. ನಿಜ ಅಲ್ಲವೆ! ಬಹಳ ಕ್ಲೀಷೆ ಎನಿಸುವ, ಬಹು ಹಿಂದಿ ನಿಂದಲೂ ಎಲ್ಲರೂ ಹೇಳುತ್ತಲೇ ಬಂದಿರುವ ಈ ಮಾತುಗಳು, ಇಂದಿಗೂ ಪ್ರಸ್ತುತ ಎಂಬ ವಿಚಾರವೇ ಒಂದು ಅದ್ಭುತ. ಈಚಿನ ದಿನಗಳಲ್ಲಿ, ಅಂತರ್ಜಾಲವು ವ್ಯಾಪಕವಾದ ನಂತರ, ಜನರಿಗೆ ಬೇರೆ ಬೇರೆ ಹವ್ಯಾಸಗಳಲ್ಲಿ ಕಾಲ ಕಳೆಯುವ ಅವಕಾಶ ದೊರೆಯುತ್ತಿರುವಾಗ, ನಿಧಾನವಾಗಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಬಹುದು ಎಂಬ ಸಣ್ಣ ಮಟ್ಟದ ಆತಂಕ ಎದುರಾಗಿದ್ದು ನಿಜ.

ಈಗಲೂ, ಅಂತಹ ಒಂದು ಆತಂಕಕ್ಕೆ ಪುಷ್ಠಿ ಕೊಡುವ ವಿದ್ಯಮಾನಗಳೂ, ಅಂಕಿ ಅಂಶಗಳು ಥಟ್ ಅಂತ ಕಣ್ಣಿಗೆ ಬೀಳುವುದುಂಟು. ಅದರಲ್ಲೂ ಮುಖ್ಯವಾಗಿ ಕನ್ನಡದ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾ ಗುತ್ತಾ ಸಾಗಿದೆ ಎಂಬ ಕಳಕಳಿ ಇದೆ. ನಮ್ಮ ರಾಜ್ಯದ ಉದ್ದಗಲಕ್ಕೂ, ಹಳ್ಳಿ ಹಳ್ಳಿಗಳಲ್ಲೂ ಆಂಗ್ಲ ಮಾಧ್ಯಮ ಶಾಲೆಗಳ ಜನಪ್ರಿಯತೆ ಈಚಿನ ದಶಕಗಳಲ್ಲಿ ಹೆಚ್ಚಾಗಿರುವುದರಿಂದಾಗಿ, ಕನ್ನಡವನ್ನು ಓದುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ ಎಂಬ ಈ ಕಳಕಳಿ ತೀರಾ ನಿರಾಧಾರ ವಲ್ಲ.

ಆದರೂ ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಅಂಕಿ ಸಂಕಿಗಳು ಹೇಳುತ್ತಿವೆ. ಕನ್ನಡದಲ್ಲಿ ಪ್ರತಿವರ್ಷ ಹೊರಬರುವ ಪುಸ್ತಕಗಳ ಸಂಖ್ಯೆಯೂ ಜಾಸ್ತಿಯಾಗುತ್ತಾ ಸಾಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದಾದರೂ, ಒಂದಂತೂ ಸತ್ಯ – ಪುಸ್ತಕ ರೂಪದ ಸಾಹಿತ್ಯ ಜನರನ್ನು ಪರಿಣಾಮಕಾರಿಯಾಗಿ ತಲುಪುತ್ತದೆ ಎಂಬ ಭಾವನೆಯಿಂದಲೇ
ಲೇಖಕರು, ಸಾಹಿತಿಗಳು ಪುಸ್ತಕಗಳನ್ನು ಬರೆಯುತ್ತಿದ್ದಾರೆ, ಪ್ರಕಟಿಸುತ್ತಿದ್ದಾರೆ.

ಜತೆಗೆ, ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಕೆಲವು ಕಾದಂಬರಿಗಳು ಸಾವಿರಗಟ್ಟಲೆ ಪ್ರತಿಗಳು ಕ್ಷಿಪ್ರವಾಗಿ
ಮಾರಾಟಗೊಂಡಿವೆ. ಕೆಲವು ವಿಚಾರ ಪ್ರಚೋದಕ ಗ್ರಂಥಗಳು, ಅನುವಾದಗಳು ಸಹ ಅತಿ ಜನಪ್ರಿಯ ಎನಿಸಿ, ಪದೇ ಪದೇ ಮುದ್ರಣಗೊಳ್ಳುತ್ತಿವೆ. ಕನ್ನಡದ ಮಟ್ಟಿಗೆ, ಕೆಲವೇ ತಿಂಗಳುಗಳ ಅವಧಿಯಲ್ಲಿ ಹಲವು ಕೃತಿಗಳು ಮರುಮುದ್ರಣಗಳಾಗುತ್ತಿರು ವುದು ಈಚಿನ ವಿದ್ಯಮಾನ. ಕೆಲವು ದಶಕಗಳ ಹಿಂದೆ ಶಿವರಾಮ ಕಾರಂತರಂತಹ ಪ್ರಸಿದ್ಧ ಮತ್ತು ಜನಪ್ರಿಯ ಸಾಹಿತಿ,
ತಮ್ಮ ಕಾದಂಬರಿಯೊಂದರ ಎರಡನೆಯ ಮುದ್ರಣದ ಮುನ್ನುಡಿಯಲ್ಲಿ ಬರೆಯುತ್ತಾ, ಮೊದಲ ಮುದ್ರಣದ ೧,೦೦೦ ಪ್ರತಿಗಳು ಮಾರಾಟವಾಗಲು ಹಲವು ವರ್ಷಗಳ ಕಾಲ ಬೇಕಾಯಿತು ಎಂದು ತಮ್ಮ ವ್ಯಥೆಯನ್ನು ತೋಡಿಕೊಂಡಿದ್ದರು.

ಅದಕ್ಕೆ ಹೋಲಿಸಿದರೆ, ಈಗ ಕೆಲವು ಕಾದಂಬರಿಗಳು, ವಿಚಾರಪ್ರಚೋದಕ ಪುಸ್ತಕಗಳು ಒಂದೇ ವರ್ಷದಲ್ಲಿ ಹಲವು ಮುದ್ರಣ
ಗಳಾಗುತ್ತಿರುವುದು ಅಚ್ಚರಿಯ ಮತ್ತು ಸ್ವಲ್ಪ ಮಟ್ಟಿಗೆ ಹೆಮ್ಮೆಯ ವಿಚಾರವೇ ಸರಿ. ಇದನ್ನು ನೋಡಿದರೆ, ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಿಚಾರಕ್ಕೆ ಸೂಕ್ತ ಆಧಾರವಿಲ್ಲ. ಈ ನಿಟ್ಟಿನಲ್ಲಿ ವಿಶ್ಲೇಷಿಸುವ ಕೆಲವರು, ಪ್ರಾಜ್ಞ ಮತ್ತು ಗಂಭೀರ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬರ್ಥದಲ್ಲಿ ಇದನ್ನು ಸ್ವೀಕರಿಸಬಹುದು ಎನ್ನುತ್ತಾರೆ.

ಕನ್ನಡ ನಾಡಿನಾದ್ಯಂತ ಕಳೆದ ಕೆಲವು ದಶಕಗಳಿಂದ ಇಂಗ್ಲಿಷ್ ಕಲಿಯುವವರು ಹೆಚ್ಚಳಗೊಂಡಿದ್ದರೂ, ಕನ್ನಡ ಪುಸ್ತಕಗಳ ಮಾರಾಟವೂ ಹೆಚ್ಚಳವಾಗುತ್ತಿದೆ! ಇದಕ್ಕೇನು ಕಾರಣವಿರಬಹುದು? ೨೦೨೧-೨೨ರಲ್ಲಿ ಪ್ರಕಟಗೊಂಡ ಕನ್ನಡ ಪುಸ್ತಕಗಳನ್ನು ಅವಲೋಕಿಸಿದರೆ, ಹಲವು ಬಾರಿ ಮುದ್ರಣಗೊಂಡ ಹಲವು ಟೈಟಲ್‌ಗಳು ನೆನಪಾಗುತ್ತವೆ. ಗಜಾನನ ಶರ್ಮ ಅವರ ‘ಚೆನ್ನಭೈರಾದೇವಿ’ ಕಾದಂಬರಿಯು, ೨೦೨೧ರಲ್ಲಿ ಪ್ರಕಟಗೊಂಡು ಹಲವು ಬಾರಿ ಮುದ್ರಣಗೊಂಡಿತು. ಜತೆಗೆ, ಆ ಕಾದಂಬರಿ ಪ್ರಕಟಗೊಂಡ ನಂತರ, ಗಜಾನನ ಶರ್ಮ ಅವರು ವರ್ಧಮಾನ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಮೊದಲಾದ ಹಲವು ಗೌರವಗಳಿಗೆ ಭಾಜನರಾದರು.

ವಿಮರ್ಶಕರಿಂದಲೂ ಗುರುತಿಸಲ್ಪಟ್ಟ ಈ ಕಾದಂಬರಿಯನ್ನು ಸಾವಿರಾರು ಜನರು ಖರೀದಿಸಿ ಓದುತ್ತಿರುವರು ಎಂಬ ವಿಚಾರವು, ಕನ್ನಡದ ಹೆಮ್ಮೆ. ಇದೇ ರೀತಿ, ೨೦೨೧ರಲ್ಲಿ ಪ್ರಕಟಗೊಂಡ ‘ಆವಿಷ್ಕಾರದ ಹರಿಕಾರ’ ಪುಸ್ತಕದ ಇಪ್ಪತ್ತು ಸಾವಿರಕ್ಕೂ
ಹೆಚ್ಚು ಪ್ರತಿಗಳು ಕೆಲವೇ ತಿಂಗಳುಗಳ ಅವಧಿಯಲ್ಲಿ ಮಾರಾಟವಾಗಿವೆ. ಸಾಹಿತಿ, ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಹೊರತಂದ ಈ ಪುಸ್ತಕವು ಕನ್ನಡಿಗರ ಮೆಚ್ಚುಗೆ ಪಡೆದ ರೀತಿಯಂತೂ ಅಭೂತಪೂರ್ವ. ಇಸ್ರೇಲ್‌ನಂತಹ ಪುಟ್ಟ ದೇಶವು ಕಳೆದ ಕೆಲವು ದಶಕಗಳಲ್ಲಿ ಸಾಽಸಿದ ಪ್ರಗತಿಯ ವಿಸತ ಪರಿಚಯವನ್ನು ಮಾಡಿಕೊಡುವ ಈ ಪುಸ್ತಕವು, ಓದುಗರ ಜ್ಞಾನ ವನ್ನು ಹೆಚ್ಚಿಸುತ್ತದೆ, ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಅನುವಾದಿತ ಕೃತಿಯೊಂದು ಈ ಪರಿಯಲ್ಲಿ ಜನಮೆಚ್ಚುಗೆ ಗಳಿಸಿದ ಉದಾಹರಣೆಯು ಬಹಳ ಅಪರೂಪ.

‘ಆವಿಷ್ಕಾರದ ಹರಿಕಾರ’ ಪುಸ್ತಕವು ಸಾವಿರಾರು ಓದುಗರನ್ನು ತಲುಪಿದ ವಿದ್ಯಮಾನ ಸಹ, ಕನ್ನಡದ ಪುಸ್ತಕಗಳ ಭವಿಷ್ಯದ ಕುರಿತು ಆಶಾಭಾವನೆಯಿಂದಿರಲು ಒಂದು ಕಾರಣ. ಇದೇ ರೀತಿ, ಇನ್ನೂ ಕೆಲವು ಸಾಹಿತ್ಯ ಕೃತಿಗಳು ೨೦೨೧-೨೨ರ ಅವಽಯಲ್ಲಿ ಪದೇ ಪದೇ ಮುದ್ರಣಗೊಂಡು, ಜನರನ್ನು ತಲುಪಿವೆ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದಕ್ಕೆ ಇವೆಲ್ಲವೂ ಪೂರಕ. ಇದರ ಜತೆಗೆ, ಎಸ್.ಎಲ್.ಭೈರಪ್ಪ, ಪೂರ್ಣ ಚಂದ್ರ ತೇಜಸ್ವಿ ಮೊದಲಾದವರ ಕೃತಿಗಳು
ಸಾರ್ವಕಾಲಿಕ ಜನಪ್ರಿಯತೆಯನ್ನು ಹೊಂದಿವೆ.

ಕಾದಂಬರಿ ಸಾಹಿತ್ಯವನ್ನು ಇಷ್ಟಪಡುವವರ ಕಣ್ಮಣಿ ಡಾ. ಎಸ್.ಎಲ್.ಭೈರಪ್ಪ. ವಿಜ್ಞಾನ ವಿಷಯಗಳು, ದೇಶ ವಿದೇಶಗಳ ವಿಸ್ಮಯಗಳು, ಪರಿಸರದ ವಿಷಯಗಳು ಈ ರೀತಿ ವಿಭಿನ್ನವಾಗಿ ಬರೆದ ತೇಜಸ್ವಿಯವರ ಕೃತಿಗಳು ಇಂದು ಮಕ್ಕಳನ್ನು ಮತ್ತು ದೊಡ್ಡವರನ್ನು ಸೆಳೆಯುತ್ತಿರುವ ಪರಿಯೂ ವಿಸ್ಮಯ ಹುಟ್ಟಿಸುವಂತಹದ್ದು.

ಕರ್ನಾಟಕದಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆದ ಕುರಿತು ಸಾಕಷ್ಟು ಚರ್ಚೆಯಾಗಿದೆ. ಮೊದಲಿನಿಂದಲೂ ಬೆಂಗಳೂರು, ಮೈಸೂರು, ಧಾರವಾಡ ಮೊದಲಾದ ಕೇಂದ್ರಗಳು ಪುಸ್ತಕ ಸಂಸ್ಕೃತಿಗೆ ನೀರೆರೆದು ಪೋಷಿಸಿದವು. ಇಲ್ಲಿ ಮೊದಲಿನಿಂದಲೂ ಇದ್ದ ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳು ಇಂತಹ ಪುಸ್ತಕ ಸಂಸ್ಕೃತಿ ಬೆಳೆಯಲು ಪ್ರಮುಖ ಕಾರಣ ಎನಿಸಿದವು.
ಇಪ್ಪತ್ತನೆಯ ಶತಮಾನದ ತನಕ ಒಂದು ವಿಚಾರ ಸ್ಪಷ್ಟ – ಎಲ್ಲೆಲ್ಲಾ ಅಕ್ಷರತೆ ಜಾಸ್ತಿ ಇತ್ತೋ, ಅಲ್ಲಿನ ಜನರು ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದರು.

ಕ್ರಮೇಣ ಬೆಂಗಳೂರಿನಲ್ಲಿ ವಾಸಿಸುತ್ತಿದ್ದವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಲು ಆರಂಭಿಸಿದರು. ಪ್ರಾಥಮಿಕ ಹಂತದಿಂದಲೂ ಇಂಗ್ಲಿಷ್ ಓದಿದ ಒಂದು ತಲೆಮಾರು ಸಹಜವಾಗಿ ಕನ್ನಡ ಪುಸ್ತಕಳನ್ನು ಓದುವುದನ್ನು ಕಡಿಮೆ ಮಾಡಿತು, ಅವರ ಜ್ಞಾನ ದಾಹ ಮತ್ತು ಓದಿ ದಾಹ ತಣಿಸಲು ಇಂಗ್ಲಿಷ್ ಪುಸ್ತಕಗಳಿದ್ದವು. ಆದರೆ ಇದೇ ಅವಧಿಯಲ್ಲಿ, ಕರ್ನಾಟಕದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಸಾಕ್ಷರತೆ ಜಾಸ್ತಿಯಾದುದರಿಂದ, ಅಂತಹ ಪ್ರದೇಶಗಳಿಗೂ ಕನ್ನಡ ಪುಸ್ತಕಗಳು ತಲುಪಲು ಆರಂಭಗೊಂಡವು.

ಇಲ್ಲಿ ಒಂದು ಕುತೂಹಲಕಾರಿ ಮತ್ತು ಸ್ವಲ್ಪ ಸೂಕ್ಷ್ಮ ಎನಿಸುವ ವಿಚಾರವಿದೆ. ಬೆಂಗಳೂರು, ಮೈಸೂರು, ಧಾರವಾಡದಂತಹ ಸಾಂಸ್ಕೃತಿಕ ಮತ್ತು ಅಕ್ಷರ ಕೇಂದ್ರಗಳಿಂದ ಬಹಳ ದೂರದಲ್ಲಿದ್ದ ಕರಾವಳಿಯ ಜಿಲ್ಲೆಗಳಲ್ಲಿ ಮೊದಲಿನಿಂದಲೂ ಬೆಳೆದು ಬಂದಿದ್ದ
ಪುಸ್ತಕ ಸಂಸ್ಕೃತಿಯನ್ನು ಬಹಳಷ್ಟು ಪ್ರಾಜ್ಞರು, ತಜ್ಞರು ಗುರುತಿಸಿದ್ದಾರೆ. ಕನ್ನಡ ಪುಸ್ತಕಗಳನ್ನು, ಪತ್ರಿಕೆಗಳನ್ನು ಖರೀದಿಸಿ ಓದುವುದರಲ್ಲಿ ಕರಾವಳಿಯ ಮೊದಲಿನಿಂದಲೂ ಜನರು ಬಹಳ ಮುಂದು.

ಎಷ್ಟರ ಮಟ್ಟಿಗೆ ಎಂದರೆ, ಮೊದಲಿನಿಂದಲೂ ವಿದ್ಯಾಭ್ಯಾಸಕ್ಕೆ ಬಹಳ ಪ್ರೋತ್ಸಾಹ ಪಡೆದಿದ್ದ ಮೈಸೂರು ಪ್ರಾಂತ್ಯದ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೂ, ಕರಾವಳಿಯಲ್ಲಿನ ಪುಸ್ತಕ ಸಂಸ್ಕೃತಿ ಹಿರಿದು ಎನಿಸುತ್ತಿತ್ತು. ಕರಾವಳಿಯ ಮತ್ತು ಮಲೆನಾಡು ಪ್ರದೇಶದ ಗ್ರಾಮೀಣ ಜನರು ಸಹ ಪುಸ್ತಕ ಓದುವ ಹಪಹಪಿಯನ್ನು ಬೆಳೆಸಿಕೊಂಡಿದ್ದರು – ಇಪ್ಪತ್ತನೆಯ ಶತಮಾನದಲ್ಲಿ ಅಲ್ಲಿ ಹರಡಿದ್ದ ಪುಸ್ತಕ ಸಂಸ್ಕೃತಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಮೈಸೂರು, ಬೆಂಗಳೂರು, ಧಾರವಾಡದಲ್ಲಿ, ವಿಶ್ವವಿದ್ಯಾಲಯಗಳು ಮೊದಲಿನಿಂದಲೂ ಇದ್ದ ಪ್ರದೇಶಗಳಲ್ಲಿ ಕನ್ನಡ ವಿದ್ವಾಂಸರು, ಸಂಶೋಧಕರು ಮತ್ತು ಲೇಖಕರು ಕೇಂದ್ರೀಕೃತವಾಗಿದ್ದರು. ಸಹಜವಾಗಿ ಗ್ರಂಥ ರಚನೆ, ಪ್ರಕಟಣೆ, ಸಾಹಿತಿ
ಗಳಿಗೆ ಪ್ರೋತ್ಸಾಹಗಳು ಇದ್ದವು. ಅಂತಹ ಸೌಲಭ್ಯ ಇಲ್ಲದ ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಶತಮಾನದಲ್ಲೇ ಬೆಳೆದಿದ್ದ ಪುಸ್ತಕ ಸಂಸ್ಕೃತಿ ಮತ್ತು ಜನಸಾಮಾನ್ಯರಲ್ಲಿ ಓದುವ ಅಭ್ಯಾಸವು ಒಂದು ವಿಸ್ಮಯ. ಬೆಟ್ಟ ಪ್ರದೇಶ, ಕಾಡು, ನದಿಗಳಿಂದ ಆವೃತವಾದ ಉತ್ತರಕನ್ನಡ ಜಿಲ್ಲೆಯನ್ನು ಪ್ರತ್ಯೇಕವಾಗಿ ಗಮನಿಸಿದರೆ, ಈ ವಿದ್ಯಮಾನ ಇನ್ನಷ್ಟು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಅಲ್ಲಿನ ಜನರು ಅದೇಕೆ ಮೊದಲಿನಿಂದಲೂ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡಿದ್ದರು, ಇದಕ್ಕೆ ಹೋಲಿಸಬಹುದಾದ ಪುಸ್ತಕ ಸಂಸ್ಕೃತಿ ಮತ್ತು ಓದುವ ಹವ್ಯಾಸವು ಬಯಲು ಸೀಮೆಯ ಜಿಲ್ಲೆಗಳಲ್ಲಿ ಅದೇ ಮಟ್ಟದಲ್ಲಿ ಏಕೆ ರೂಢಿಗೆ ಬರಲಿಲ್ಲ. ಈ ಪ್ರಶ್ನೆಗೆ ಉತ್ತರ ತುಸು ಕಷ್ಟ. ಹಲವು ಸಾಂಸ್ಕೃತಿಕ, ಸಾಮಾಜಿಕ ಕಾರಣಗಳನ್ನು ಇದಕ್ಕೆ ಹುಡುಕಬಹುದು. ಇರಲಿ, ಈಗ ಇನ್ನೊಂದು ವಿಶಿಷ್ಟ ವಿಚಾರವನ್ನು ನಾನಿಲ್ಲಿ ಹಂಚಿಕೊಳ್ಳಲೇ ಬೇಕು. ಸಾಹಿತಿಯೊಬ್ಬನು ಕನ್ನಡದಲ್ಲಿ ಬರೆಯುತ್ತಿರುವಾಗಲೇ, ಹೊಸ ಹೊಸ ಪ್ರಾಜ್ಞ ಮತ್ತು ಸದಭಿರುಚಿಯ ಓದುಗರನ್ನು ಸೃಷ್ಟಿಸಲು ಸಾಧ್ಯವೆ? ಇದನ್ನು ಚರ್ಚಿಸಲು, ಈಗಾಗಲೇ ೭೫ ಪುಸ್ತಕಗಳನ್ನು ಹೊರತಂದಿರುವ ವಿಶ್ವೇಶ್ವರ ಭಟ್ ಅವರ ಸಾಹಿತ್ಯ ಸಾಹಸವನ್ನು ಗಮನಿಸೋಣ.

ಕಳೆದ ಹಲವು ದಶಕಗಳಿಂದ ನಿರಂತರವಾಗಿ ಬರೆಯುತ್ತಲೇ ಬಂದಿರುವ ವಿಶ್ವೇಶ್ವರ ಭಟ್ ಅವರ ಅಕ್ಷರ ಸಾಹಸವು
ಈ ವಾರ ಹೊಸದೊಂದು ಆಯಾಮವನ್ನು ಪ್ರವೇಶಿಸಲಿದೆ. ವಿಶ್ವೇಶ್ವರ ಭಟ್ ಅವರು ರಚಿಸಿರುವ ಐದು ಹೊಸ ಪುಸ್ತಕಗಳು ಈ ವಾರದಲ್ಲಿ ಬಿಡುಗಡೆ! ಇಂದು, ಅಂದರೆ ಶುಕ್ರವಾರ (೨೨.೭.೨೦೨೨) ಮೂರು ಪುಸ್ತಕಗಳು ಮತ್ತು ಭಾನುವಾರ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಒಬ್ಬ ಲೇಖಕನ ಐದು ಪುಸ್ತಕಗಳು ಒಂದೇ ವಾರದಲ್ಲಿ ಮಾರುಕಟ್ಟೆಗೆ ಬಂದರೆ
ಆ ಐದೂ ಪುಸ್ತಕಗಳ ಮಾರಾಟಕ್ಕೆ ತೊಂದರೆಯಾಗಬಹುದು ಎಂಬೆಲ್ಲಾ ವಿಚಾರಗಳು ವಿಶ್ವೇಶ್ವರ ಭಟ್ ಅವರಿಗೆ ಅನ್ವಯವಾಗದು. ಇಂದು ಲೋಕಾರ್ಪಣೆಗೊಳ್ಳಲಿರುವ ‘ಸುದ್ದಿಮನೆ ಕಥೆ’, ‘ನೂರೆಂಟು ವಿಶ್ವ’ ಮತ್ತು ‘ಇದೇ ಅಂತರಂಗದ ಸುದ್ದಿ’ ಪುಸ್ತಕಗಳನ್ನು ಒಟ್ಟಿಗೇ ಖರೀದಿಸಿದರೆ, ಸಾಕಷ್ಟು ರಿಯಾಯಿತಿ ಇದೆ ಎಂದು ಘೋಷಿಸಿದಾಗ, ಆ ಮೂರೂ ಪುಸ್ತಕಗಳನ್ನು ಒಟ್ಟಿಗೇ ಖರೀದಿಸಲು ಈಗಾಗಲೇ ಮುಂಗಡ ಹಣ ಪಾವತಿಸಿದವರು ಸಾಕಷ್ಟು ಜನ!

ಇದಕ್ಕೆ ಮುಖ್ಯ ಕಾರಣ, ವಿಶ್ವೇಶ್ವರ ಭಟ್ ಅವರು ಎಲ್ಲಾ ಪುಸ್ತಕಗಳು ಸುಲಲಿತವಾಗಿ ಓದಿಸಿಕೊಂಡು ಹೋಗುವ ಗುಣ
ಹೊಂದಿವೆ. ಈ ಹಿಂದೆ ಅವರ ಲೇಖನಗಳನ್ನು ದಿನ ಪತ್ರಿಕೆಯ ಅಂಕಣಗಳಲ್ಲಿ ಓದಿದ್ದರೂ, ಪುಸ್ತಕ ರೂಪದಲ್ಲಿ ಹೊರಬಂದಾಗ ಮತ್ತೊಮ್ಮೆ ಓದಲು ಬೇಸರವೆನಿಸುವುದಿಲ್ಲ. ಆದ್ದರಿಂದಲೇ ಅವರ ಪುಸ್ತಕಗಳು ಹೆಚ್ಚು ಹೆಚ್ಚು ಓದುಗರನ್ನು ತಲುಪುತ್ತಿವೆ.
ಕನ್ನಡದಲ್ಲಿ ಹೊಸ ಓದುಗರನ್ನು ವಿಶ್ವೇಶ್ವರ ಭಟ್ ಅವರು ಸೃಷ್ಟಿಸಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ, ಅದೊಂದು ವಾಸ್ತವ. ಇವರ ಸುಲಲಿತ ಶೈಲಿ, ವಿಶಿಷ್ಟ ಮಾಹಿತಿಯುಳ್ಳ ಬರಹಗಳನ್ನು ಓದುತ್ತಲೇ, ಕನ್ನಡ ಓದುವ ಅಭಿರುಚಿ ಬೆಳೆಸಿಕೊಂಡ ವರು, ಇನ್ನಷ್ಟು ಓದುವ ಹಪಹಪಿಯನ್ನು ಬೆಳೆಸಿಕೊಳ್ಳುತ್ತಾರೆ, ಆ ಮೂಲಕ ಹೊಸ ಓದುಗ ರು ಸೃಷ್ಟಿಯಾಗುತ್ತಾರೆ.

ಇವೆಲ್ಲಕ್ಕೂ ಪುರಾವೆಯೆಂದರೆ, ವಿಶ್ವೇಶ್ವರ ಭಟ್ ಅವರು ರಚಿಸಿದ ೭೫ ಪುಸ್ತಕಗಳು. ಈ ವಾರ ಪ್ರಕಟಗೊಳ್ಳಲಿರುವ ಐದು ಪುಸ್ತಕಗಳೂ ಸೇರಿದರೆ, ಅವರ ಒಟ್ಟು ಕೃತಿಗಳ ಸಂಖ್ಯೆ ೮೦! ಈ ಪುಸ್ತಕಗಳ ವಿಷಯವ್ಯಾಪ್ತಿಯೂ ಹಿರಿದು. ‘ಸುದ್ದಿಮನೆ ಕತೆ’ ಸರಣಿಯಲ್ಲಿ, ಪತ್ರಿಕೋದ್ಯಮದ ಸ್ವಾರಸ್ಯಕರ ಅನುಭವಗಳಿವೆ. ಇದೇ ವಿಷಯಕ್ಕೆ ಸಂಬಂಽಸಿದಂತೆ, ರುಪರ್ಟ್ ಮುರ್ಡೋಕ್, ವೈಎನ್ಕೆ, ಖುಷವಂತ್ ಸಿಂಗ್ ಬಗ್ಗೆ ಪುಸ್ತಕಗಳನ್ನು ಭಟ್ ಅವರು ರಚಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಬಂದ ಪ್ರಮುಖ ಮತ್ತು ಆಸಕ್ತಿ ದಾಯಕ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ, ಕನ್ನಡಿಗರ ಮುಂದೆ ಪ್ರಸ್ತುತ ಪಡಿಸುವುದು ವಿಶ್ವೇಶ್ವರ ಭಟ್ ಅವರ ಇನ್ನೊಂದು ವಿಶೇಷತೆ. ವಿಶ್ವೇಶರ ಭಟ್ ಅವರ ಅನುವಾದಗಳು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ಎಂಬುದನ್ನು ಗುರುತಿಸಲು, ಅವರು ಅನುವಾದಿಸಿದ ‘ಗಟ್ಟಿಗಿತ್ತಿ’ ಒಂದು ಪುಸ್ತಕ ಸಾಕು. ಅದನ್ನು ಓದಿದವರೆಲ್ಲರೂ, ಮೇರಿ ಕೋಮ್ ಜೀವನದ ವಿವರ ಅರಿಯುವುದರ ಜತೆಯಲ್ಲೇ, ಯಶಸ್ಸು ಸಾಽಸಲು ತಾವೂ ಕಷ್ಟ
ಪಡಬೇಕು ಎಂಬ ಸೂರ್ತಿ ಪಡೆದರೂ ಅಚ್ಚರಿಯಿಲ್ಲ.

ಕ್ಯಾಪ್ಟನ್ ಗೋಪಿನಾಥ್ ಮತ್ತು ರಿಚರ್ಡ್ ಬ್ರಾನ್ಸನ್ ಕುರಿತು ಅವರು ಹೊರತಂದ ಪುಸ್ತಕವೂ ಇದೇ ಸಾಲಿಗೆ ಸೇರಬಲ್ಲದು. ‘ರಾಷ್ಟ್ರಪತಿ ಜೊತೆ ಹದಿನಾಲ್ಕು ದಿನಗಳು’ ‘ಹರಿಲಾಲ್ ಗಾಂಽ’ಯಂತಹ ವಿಶಿಷ್ಟ ಪುಸ್ತಕಗಳನ್ನು ವಿಶ್ವೇಶ್ವರ ಭಟ್ ಮಾತ್ರ ರಚಿಸಬಲ್ಲರು! ಅವರ ಎಲ್ಲಾ ಪುಸ್ತಕಗಳನ್ನು ವಿಮರ್ಶಿಸುವ ಸ್ಥಳ ಇದಲ್ಲ; ಹೊಸ ಹೊಸ ಅಭಿರುಚಿಯ ಪುಸ್ತಕಗಳನ್ನು ಹೊರತರುವ ಮೂಲಕ, ಸುಲಲಿತವಾಗಿ ಓದಿಸಿಕೊಳ್ಳುವ ಸಾಹಿತ್ಯ ರಚಿಸುವುದರ ಮೂಲಕ ವಿಶ್ವೇಶ್ವರ ಭಟ್ ಅವರು ಕನ್ನಡದಲ್ಲಿ ಸಾವಿರಾರು ಹೊಸ ಓದುಗರನ್ನು ಸೃಷ್ಟಿಸಿದ್ದಾರೆ ಎಂಬುದನ್ನು ಹೇಳುವುದಕ್ಕೆ ಇಷ್ಟು ಬರೆಯಬೇಕಾಯಿತು.

ಈ ವಾರ ಪ್ರಕಟಗೊಳ್ಳುವ ಭಟ್ ಅವರ ಐದು ಪುಸ್ತಕಗಳನ್ನು ಓದಿದ ನಂತರ ಮುಂದೇನು? ವಿಶ್ವವಾಣಿಯ ಓದುಗರಿಗೆ ನೆನಪಿರಬಹುದು – ಅವರು ತಮ್ಮ ವಿದೇಶದ ಅನುಭವಗಳನ್ನು ಪ್ರತಿ ವಾರ ‘ವಿದೇಶ ಕಾಲ’ ಎಂಬ ಅಂಕಣದಲ್ಲಿ ಬರೆಯುತ್ತಿದ್ದರು. ಆ ಲೇಖನಗಳ ಸಂಕಲನ ಹೊರಬರುವುದನ್ನೇ ಕಾಯುತ್ತಿರುವೆ – ಹತ್ತೈವತ್ತು ದೇಶಗಳಲ್ಲಿ ಅವರ ಕಂಡು ಕೇಳಿದ ಸ್ವಾರಸ್ಯಗಳನ್ನು ಅಕ್ಷರ ರೂಪದಲ್ಲಿ ಕಡೆದಿಟ್ಟ ಪರಿಯೇ ಅನನ್ಯ! ಆ ಓದು ಒಂದು ಅಪರೂಪದ ಅನುಭವವಾಗುವ ಜತೆಯಲ್ಲೇ, ವಿದೇಶಗಳ ವಿಶಿಷ್ಟ ಪರಿಚಯವೂ ಆದೀತು. ವಿಶ್ವೇಶ್ವರ ಭಟ್ ಅವರ ‘ವಿದೇಶ ಕಾಲ’ ಪುಸ್ತಕಕ್ಕಾಗಿ ನಾನು ಕಾಯುತ್ತಿರುವೆ. ನೀವೂ ಸಹ – ಅಲ್ಲವೆ?