Saturday, 14th December 2024

ಕೆನಡಾ ಪ್ರಧಾನಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದು ಏಕೆ ?

ಶಶಾಂಕಣ

shashidhara.halady@gmail.com

ಪಂಜಾಬಿನ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕಿಂತ ೫ ವರ್ಷ ಮುಂಚೆ ಘಟಿಸಿದ ‘ಕೋಮಗಾಟ ಮಾರು’ ಹತ್ಯಾಕಾಂಡವು, ೨೦ ಸಾಹಸಿ ಪಂಜಾಬಿಗಳ ದುರಂತ ಸಾವಿನೊಂದಿಗೆ ಅಂತ್ಯವಾಯಿತು. ಆ ದಿನಗಳಲ್ಲಿ ಸುದ್ದಿ ಪ್ರಕಟವಾಗಬೇಕಾದರೆ, ಬ್ರಿಟಿಷರ ಸಹಮತ ಇರಲೇಬೇಕಿತ್ತಾದ್ದರಿಂದ, ಈ ಹತ್ಯಾಕಾಂಡದ ವಿವರಗಳು ಹಲವು ದಿನಗಳ ಕಾಲ ಹೊರಜಗತ್ತಿಗೆ ತಿಳಿದಿರಲೇ ಇಲ್ಲ. ಈ ಹತ್ಯಾಕಾಂಡಕ್ಕೆ ಒಂದು ಗೌರವಯುತ ಸ್ಮಾರಕ ನಿರ್ಮಾಣಗೊಳ್ಳಲು ಸುಮಾರು ೪ ದಶಕ ಕಾಯಬೇಕಾಯಿತು.

ನಮ್ಮ ದೇಶವನ್ನು ಒಂದು ಕಾಲೊನಿ ಅಥವಾ ವಸಾಹತನ್ನಾಗಿಸಿಕೊಂಡು, ಇಲ್ಲಿನ ಸಂಪತ್ತನ್ನು ಬ್ರಿಟನ್‌ಗೆ ಸಾಗಿಸಿದ ಬ್ರಿಟಿಷರು, ‘ಸ್ಥಳೀಯರ’ (ನೇಟಿವ್ಸ್) ಮೇಲೆ ತೋರುತ್ತಿದ್ದ ದೌರ್ಜನ್ಯ, ಹಿಂಸೆ, ಪಕ್ಷಪಾತನೀತಿಗೆ ಸಾಟಿಯೇ ಇಲ್ಲ. ಶಸ್ತ್ರ ರಹಿತ ಭಾರತೀಯರ ಮೇಲೆ ಗುಂಡು ಹಾರಿಸಿ ಕೊಲ್ಲಲು ಸ್ವಲ್ಪವೂ ಹೇಸದ ಬ್ರಿಟಿಷರ ಕ್ರೌರ್ಯಕ್ಕೆ, ೨೦ನೆಯ ಶತಮಾನದಲ್ಲಿ ಕಂಡುಬಂದ ಹೇಯ ಉದಾಹರಣೆ ಎಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಅದೇ ರೀತಿ, ಜನರ ಮೇಲೆ ಪೊಲೀಸರು ಗುಂಡುಹಾರಿಸಿದ ಇತರ ಉದಾಹರಣೆಗಳೂ ಕಂಡುಬರುತ್ತವೆ.

ಅಂಥದೊಂದು ಕ್ರೂರ ಘಟನೆಯು ಕೊಲ್ಕೊತ್ತಾದಲ್ಲಿ ೧೯೧೪ರಲ್ಲಿ ನಡೆದಿತ್ತು. ಅಂದು ನಡೆದ ಪೊಲೀಸರ ಗೊಲೀಬಾರ್‌ನಲ್ಲಿ ಅಽಕೃತವಾಗಿ ೨೨ ಜನ ಮೃತ ಪಟ್ಟರು; ಪ್ರತ್ಯಕ್ಷದರ್ಶಿಗಳ ಪ್ರಕಾರ ಅಂದು ಸುಮಾರು ೭೫ ಜನರನ್ನು ಬ್ರಿಟಿಷರು ಕೊಂದುಹಾಕಿದ್ದರು. ಈ ಹತ್ಯಾಕಾಂಡ ಮತ್ತು ಅದಕ್ಕೆ ಕಾರಣವಾದ ವಿದ್ಯ
ಮಾನವನ್ನು ಒಟ್ಟಾಗಿ ‘ಕೋಮಗಾಟ ಮಾರು’ ಘಟನೆ ಎಂದು ಕರೆಯುವ ರೂಢಿ ಇದೆ. ನಿಜವಾಗಿ ನೋಡಿ ದರೆ, ಕೋಮಗಾಟ ಮಾರು ವಿದ್ಯಮಾನ ಮತ್ತು ಕೊಲ್ಕೊತ್ತಾದಲ್ಲಿ ನಡೆದ ಆ ಹತ್ಯಾಕಾಂಡವನ್ನು ಎರಡು ಪ್ರತ್ಯೇಕ ಘಟನೆಗಳನ್ನಾಗಿಯೇ ಗಮನಿಸಬೇಕಾಗುತ್ತದೆ; ಎರಡರಲ್ಲೂ ಬ್ರಿಟಿಷರ ಕ್ರೌರ್ಯ, ಕುಟಿಲತೆ, ಪಕ್ಷಪಾತ ನೀತಿ ಧಾರಾಳವಾಗಿ ಕಂಡುಬರುತ್ತದೆ.

ಪಂಜಾಬಿನ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕಿಂತ ಐದು ವರ್ಷ ಮುಂಚೆ ಘಟಿಸಿದ ‘ಕೋಮಗಾಟ ಮಾರು’ ಹತ್ಯಾಕಾಂಡವು, ಇಪ್ಪತ್ತು ಜನ ಸಾಹಸಿ
ಪಂಜಾಬಿಗಳ ದುರಂತ ಸಾವಿನೊಂದಿಗೆ ಅಂತ್ಯ ವಾಯಿತು. ಆ ದಿನಗಳಲ್ಲಿ ಸುದ್ದಿ ಪ್ರಕಟವಾಗಬೇಕಾದರೆ, ಬ್ರಿಟಿಷರ ಸಹಮತ ಇರಲೇಬೇಕಿತ್ತಾದ್ದರಿಂದ, ಈ
ಹತ್ಯಾಕಾಂಡದ ವಿವರಗಳು ಹಲವು ದಿನಗಳ ಕಾಲ ಹೊರಜಗತ್ತಿಗೆ ತಿಳಿದಿರಲೇ ಇಲ್ಲ. ಈ ಹತ್ಯಾಕಾಂಡದ ದಾರುಣತೆಯನ್ನು ತೋರುವ ಇನ್ನೊಂದು ವಿದ್ಯ
ಮಾನವೂ ಇದೆ: ತಾಯ್ನಾಡನ್ನು ಅರಸಿ ಬಂದವರು, ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರೂ, ಈ ಹತ್ಯಾಕಾಂಡಕ್ಕೆ ಒಂದು ಗೌರವಯುತ ಸ್ಮಾರಕ ನಿರ್ಮಾಣಗೊಳ್ಳಲು ಸುಮಾರು ನಾಲ್ಕು ದಶಕ ಕಾಯಬೇಕಾಯಿತು!

ಈ ವಿದ್ಯಮಾನದ ಆರಂಭ ೧೯೧೪ರ ಎಪ್ರಿಲ್‌ನಲ್ಲಿ. ೧೬೫ ಪಂಜಾಬಿ ಪ್ರಯಾಣಿಕರೊಂದಿಗೆ ಎಪ್ರಿಲ್ ೪ರಂದು ‘ಕೋಮಗಾಟ ಮಾರು’ ಎಂಬ ಹೆಸರಿನ ಹಡಗು,
ಹಾಂಕಾಂಗ್‌ನಿಂದ ಕೆನಡಾದತ್ತ ಹೊರಟಿತು. ಆಗ ಭಾರತ, ಹಾಂಕಾಂಗ್, ಕೆನಡಾ ಎಲ್ಲವೂ ಬ್ರಿಟಿಷ್ ಸಾಮ್ರಾಜ್ಯದ ನಿಯಂತ್ರಣಕ್ಕೆ ಒಳಪಟ್ಟ ಪ್ರಾಂತ್ಯಗಳಾ
ಗಿದ್ದವು. ಆದ್ದರಿಂದ, ತಾತ್ವಿಕವಾಗಿ ಬ್ರಿಟಿಷ್ ಸಾಮ್ರಾಜ್ಯದ ಪ್ರಜೆಗಳು ಪರಸ್ಪರರ ಪ್ರಾಂತ್ಯಗಳಿಗೆ ವಲಸೆ ಹೋಗಬಹುದಿತ್ತು. ಪಂಜಾಬ್ ಪ್ರಾಂತ್ಯದ ೩೩೭ ಸಿಖ್ಖರು, ೨೭ ಮುಸ್ಲಿಮರು, ೧೨ ಹಿಂದೂ ಜನರು ಕೋಮಗಾಟ ಮಾರು ಹಡಗನ್ನೇರಿ ಕೆನಡಾಕ್ಕೆ ಹೊರಟರು. ಹಾಂಗ್ ಕಾಂಗ್‌ನಲ್ಲಿ ೧೬೫ ಜನ ಏರಿದರೆ, ಷಾಂಘೈನಲ್ಲಿ ಮತ್ತು ಯೋಕೋಹಾಮಾದಲ್ಲಿ ಇನ್ನಷ್ಟು ಜನ ಏರಿದರು.

ಕೆನಡಾದಲ್ಲಿ ದೊರೆಯುತ್ತಿದ್ದ ಉತ್ತಮ ಸಂಬಳದ ಕೆಲಸವನ್ನು ಅರಸುವವರೇ ಹೆಚ್ಚಿನವರು. ಪಂಜಾಬಿನ ಶ್ರೀಮಂತ ವ್ಯವಹಾರಸ್ಥ ಗುರುದಿತ್ ಸಿಂಗ್ ಸಿರ್‌ಹಾಲಿ ಈ ಪಯಣದ ರೂವಾರಿ. ಮಲೇಷ್ಯಾ, ಸಿಂಗಾಪುರ ಮೊದಲಾದ ಕಡೆ ಕಾಂಟ್ರಾಕ್ಟ್ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿದ್ದ ಆತ, ಕೆನಡಾಕ್ಕೆ ಜನರನ್ನು ಕರೆದು ಕೊಂಡು ಹೋಗಲು ಸೂಕ್ತ ಹಡಗನ್ನು ಹುಡುಕಿದ. ಬ್ರಿಟಿಷ್ ಮಾಲೀಕತ್ವದ ಹಡಗುಗಳು ವಿವಿಧ ಕಾನೂನಿನ ಭಯದಿಂದಾಗಿ ದೊರೆಯಲಿಲ್ಲ. ಜಪಾನ್ ಮಾಲೀ ಕತ್ವದ ಕೋಮಗಾಟ ಮಾರು ಹಡಗನ್ನು ಆತ ಬಾಡಿಗೆಗೆ ಗೊತ್ತುಮಾಡಿದ. ಎಪ್ರಿಲ್ ೧೯೧೪ರಲ್ಲಿ ಹೊರಟ ಕೋಮ ಗಾಟ ಮಾರು, ಹಲವು ಕಡೆ ಜನರನ್ನು ಹತ್ತಿಸಿಕೊಂಡು, ೨೩ ಮೇ ೧೯೧೪ರಂದು ಕೆನಡಾದ ವಾಂಕೋವರ್ ಬಂದರನ್ನು ಪ್ರವೇಶಿಸಿತು.

ಆದರೆ, ಈ ಹಡಗಿನಲ್ಲಿ ಮುನ್ನೂರಕ್ಕೂ ಹೆಚ್ಚು ಜನ ಕೆನಡಾಕ್ಕೆ ವಲಸೆಯ ಉದ್ದೇಶಕ್ಕೆ ಬರುತ್ತಿದ್ದ ವಿಚಾರ ಅದಾಗಲೇ ಅಲ್ಲಿನವರಿಗೆ ತಿಳಿದಿತ್ತು ಮತ್ತು ಭಾರತೀಯ ರನ್ನು ಕೆನಡಾದ ನೆಲಕ್ಕೆ ಇಳಿಸಬಾರದು ಎಂದು ಅವರು ನಿರ್ಧರಿಸಿದ್ದರು. ಕೆನಡಾ ಪ್ರಾಂತ್ಯವು ಬ್ರಿಟಿಷ್ ಸಾಮ್ರಾಜ್ಯದ ಭಾಗವೇ ಆಗಿದ್ದರೂ, ಕೆಲಸ ಅರಸಿ ಬಂದವರು ಬ್ರಿಟಿಷ್ ಪ್ರಜೆಗಳೇ ಆಗಿದ್ದೂ, ಭಾರತದಿಂದ ಬರುವ ಜನರನ್ನು ಸ್ವೀಕರಿಸಬಾರದು ಎಂಬುದು ಕೆನಡಾದವರ (ಅಂದರೆ ಅಲ್ಲಿದ್ದ ಯುರೋಪಿಯನ್ನರ) ನಿಲುವು, ಒಳಸಂಚು. ಕೆನಡಾವು ಬಿಳಿಯರಿಗೆ ಮೀಸಲಾಗಿರಬೇಕು ಎಂಬುದು ಅಂದು ಅಲ್ಲಿದ್ದ ಜನಾಭಿಪ್ರಾಯ.

ಉತ್ತಮ ಉದ್ಯೋಗಾವಕಾಶ, ವಿನಿಯೋಜನೆಯ ಅವಕಾಶದಿಂದಾಗಿ ಕೆನಡಾ ಮತ್ತು ಅಮೆರಿಕ ದೇಶಗಳಿಗೆ ಆ ದಿನಗಳಲ್ಲಿ ವಿಶ್ವದ ನಾನಾ ಭಾಗಗಳಿಂದ ಜನರು ವಲಸೆ ಬರಲು ಪ್ರಯತ್ನಿಸುತ್ತಿದ್ದರು. ಆದರೆ ಆ ಸಮಯದಲ್ಲಿ ಅಮೆರಿಕ ಅದಾಗಲೇ ಸ್ವತಂತ್ರ ರಾಷ್ಟ್ರವಾಗಿ, ತನಗೆ ಬೇಕೆನಿಸಿದಂತೆ ವಲಸೆಯ ಕಾನೂನನ್ನು ರೂಪಿಸಿತ್ತು. ಆದರೆ ಕೆನಡಾ ಪ್ರದೇಶವು ಬ್ರಿಟಿಷ್ ಸಾಮ್ರಾಜ್ಯದ ಭಾಗ. ಬ್ರಿಟಿಷ್ ಅಧೀನದಲ್ಲಿದ್ದ ಭಾರತದಿಂದ ತಾತ್ವಿಕವಾಗಿ ಕೆನಡಾಕ್ಕೆ ಹೋಗಲು ಯಾವದೇ ತಕರಾರು, ವಿರೋಧ ಇರಬಾರದಿತ್ತು.

ಆದರೆ, ಕೆನಡಾದ ಭೂಭಾಗವು ಬಿಳಿಯರಿಗೆ ಮಾತ್ರ ಮೀಸಲಿರಬೇಕೆಂದು ಬಯಸಿದ್ದ ಅಲ್ಲಿನ ಜನರು, ಭಾರತದ ಜನರನ್ನು ಹೊರಗಿಡಲು ಚಿತ್ರ-ವಿಚಿತ್ರ
ಕಾನೂನುಗಳನ್ನು ಮಾಡಿಕೊಂಡಿದ್ದರು. ಅವುಗಳಲ್ಲಿ ಮುಖ್ಯವಾಗಿದ್ದೆಂದರೆ, ಕೆನಡಾಕ್ಕೆ ಬರುವವರು ತಮ್ಮ ಪ್ರದೇಶದಿಂದ ನೇರವಾಗಿ ಬರಬೇಕು, ಅಂದರೆ ಬೇರೆ
ಬೇರೆ ದೇಶಗಳಲ್ಲಿ, ಭೂಭಾಗಗಳಲ್ಲಿ ಲಂಗರು ಹಾಕಿದ ಹಡಗಿನಲ್ಲಿ ಬರುವಂತಿಲ್ಲ ಎಂಬ ಕಾನೂನು. ಈ ಕಾನೂನು ಯುರೋಪಿನಿಂದ ಕೆನಡಾಕ್ಕೆ ಬರುವ
ವರ ಪರವಾಗಿತ್ತು- ಅಟ್ಲಾಂಟಿಕ್ ಸಾಗರ ದಾಟಿ ನೇರವಾಗಿ ಕೆನಡಾ ತಲುಪಲು ಬಿಳಿಯರಿಗೆ ಇದರಿಂದ ಸಾಧ್ಯವಿತ್ತು.

ಭಾರತದಂಥ ಸುದೂರ ವಸಾಹತಿನಿಂದ ಕೆನಡಾಕ್ಕೆ ನೇರವಾದ ಪಯಣ ದುಸ್ತರ; ನಡುವಿನಲ್ಲಿ ಎಲ್ಲಾದರೂ ಲಂಗರು ಹಾಕಲೇಬೇಕಿತ್ತು. ಕೋಮಗಾಟ ಮಾರು
ಹಡಗು, ಫಿಲಿಪೈನ್ಸ್, ಚೀನಾ, ಜಪಾನ್ ಮೊದಲಾದ ಪ್ರದೇಶಗಳ ಬಂದರುಗಳಲ್ಲಿ ಜನರನ್ನು ಹತ್ತಿಸಿಕೊಂಡು ಬಂದದ್ದರಿಂದ, ಈ ಹಡಗಿನ ಜನರನ್ನು ತಾವು ಕೆಳಗಿಳಿಯಲು ಬಿಡುವುದಿಲ್ಲ ಎಂದು ಕೆನಡಾ ಬಿಗಿಪಟ್ಟು ಹಾಕಿತು. ಇನ್ನೊಂದು ನಿಯಮವನ್ನು ಸಹ ಅವರೇ ರೂಪಿಸಿದ್ದರು- ಏನೆಂದರೆ, ದಕ್ಷಿಣ ಏಷ್ಯಾದಿಂದ ಬರುವ
ವರ ಬಳಿ ತಲಾ ಕನಿಷ್ಟ ೨೦೦ ಡಾಲರ್ ಹಣ ಇರಬೇಕು ಎಂದು. ೧೯೧೪ರಲ್ಲಿ ೨೦೦ ಡಾಲರ್ ಎಂದರೆ ಬಹುದೊಡ್ಡ ಮೊತ್ತ. ಇಂಥ ನಿಯಮಗಳಿಂದ ಭಾರತ ದಿಂದ ಬರುವವರನ್ನು ತಡೆಯಬಹುದು ಎಂಬುದು ಕೆನಡಾದ ಹುನ್ನಾರ.

ತನ್ನ ಊರಿನ ಮುನ್ನೂರಕ್ಕೂ ಹೆಚ್ಚು ಜನರನ್ನು ಕರೆ ತಂದಿದ್ದ ಗುರುದಿತ್ ಸಿಂಗ್‌ಗೆ ಈ ಒಳಸಂಚು ತಿಳಿಯದಿದ್ದುದೇನಲ್ಲ. ಆದರೂ, ಅಲ್ಲಿಗೆ ಹೋದ ನಂತರ,
ಕಾನೂನಿನ ಹೋರಾಟದ ಮೂಲಕ ತಾವು ಕೆನಡಾವನ್ನು ಪ್ರವೇಶಿಸಬಹುದು ಎಂಬ ಒಂದು ವಿಶ್ವಾಸ ಅವನಲ್ಲಿತ್ತು. ಭಾರತ ಮತ್ತು ಕೆನಡಾ ಇವೆರಡೂ ಪ್ರದೇಶ ಗಳು ಬ್ರಿಟಿಷ್ ಸಾಮ್ರಾಜ್ಯದ ಭಾಗಗಳಾಗಿದ್ದವು ತಾನೆ! ಜತೆಗೆ, ಒಂದು ವರ್ಷ ಮುಂಚೆ, ೧೯೧೩ರಲ್ಲಿ ೩೮ ಜನ ಪಂಜಾಬಿಗಳು ಕೆನಡಾವನ್ನು ಪ್ರವೇಶಿಸಲು ಅಲ್ಲಿನ ಕೋರ್ಟ್ ಸಹಾಯ ಮಾಡಿತ್ತು. ಈ ೩೮ ಜನ ಕೆನಡಾಕ್ಕೆ ಪ್ರವೇಶ ಬಯಸಿದ್ದಾಗ, ಮೊದಲಿಗೆ ಅಧಿಕಾರಿಗಳು ಅವರನ್ನು ತಡೆದಿದ್ದರು.

ಅವರು ಕೋರ್ಟ್ ಮೊರೆಹೋದರು. ಮಧ್ಯೆ ತಡೆ ಇಲ್ಲದೇ, ನೇರವಾಗಿ ಕೆನಡಾವನ್ನು ತಲುಪಬೇಕು ಎಂಬ ನಿಯಮ ಸರಿಯಲ್ಲ ಎಂದು ಅಲ್ಲಿನ ಓರ್ವ ನ್ಯಾಯಾ
ಽಶ ಅಭಿಪ್ರಾಯ ಪಟ್ಟು, ಆ ೩೮ ಜನ ಸಿಖ್ಖರ ಪ್ರವೇಶಕ್ಕೆ ಅನುಮತಿ ನೀಡಿದ್ದ. ಈ ಹಿನ್ನೆಲೆಯಲ್ಲಿ, ಆ ನ್ಯಾಯಾಲಯದ ಆದೇಶದ ಬಲದಿಂದ, ತಮಗೂ ಪ್ರವೇಶ
ಸಿಗಬಹುದು ಎಂಬುದು ಗುರುದೀತ್ ಸಿಂಗ್‌ನ ನಿರೀಕ್ಷೆ. ಆದರೆ, ಈ ನಡುವೆ ಕೆನಡಾದ ಅಧಿಕಾರಿಗಳು ಭಾರತೀಯರ ವಿರುದ್ಧದ ಕಾನೂನುಗಳನ್ನು ಇನ್ನಷ್ಟು ಬಿಗಿ
ಗೊಳಿಸಿದ್ದರು. ಜತೆಗೆ, ಈ ಹಡಗಿನಲ್ಲಿ ಬಂದಿರುವವರು ‘ಗದ್ದಾರ್ ಚಳವಳಿ’ಯ ಕಾರ್ಯಕರ್ತರು, ದಂಗೆ ಏಳು ವವರು ಎಂದು ಅಲ್ಲಿನ ಮಾಧ್ಯಮಗಳು ಪ್ರಚಾರ ಮಾಡಿದ್ದವು.

ಆ ದಿನಗಳಲ್ಲಿ ಬ್ರಿಟಿಷರ ವಿರುದ್ಧ ಗದ್ದಾರ್ ಚಳವಳಿ ಬಿರುಸಾಗಿ ನಡೆಯುತ್ತಿತ್ತು. ಗುರುದೀತ್ ಸಿಂಗ್‌ನು ವಾಂಕೋವರ್ ನಗರದ ಕೆಲವು ವಕೀಲರನ್ನು ಸಂಪರ್ಕಿಸಿ,
ಅಲ್ಲಿನ ಕೋರ್ಟ್‌ನಲ್ಲಿ ತಮಗೆ ಕೆನಡಾ ಪ್ರವೇಶಿಸಲು ಅವಕಾಶ ನೀಡಬೇಕೆಂದು ದಾವೆ ಹೂಡಿದ. ಭಾರತ ಸಹ ಕೆನಡಾದ ರೀತಿಯೇ ಬ್ರಿಟಿಷ್ ಸಾಮ್ರಾಜ್ಯದ ಭಾಗ
ಆಗಿರುವುದರಿಂದ, ತಮಗೆ ವಿವಿಧ ರೀತಿಯ ನಿಯಂತ್ರಣ ಹೇರುವುದು ತಪ್ಪು ಎಂದು ಮನವಿ ಮಾಡಿದರು. ಆದರೆ, ಭಾರತ ವಸಾಹತಿನಿಂದ ಹೊರಟ ನಂತರ, ಮಧ್ಯೆ ಎಲ್ಲೂ ನಿಲ್ಲದೇ ನೇರವಾಗಿ ಕೆನಡಾ ಪ್ರವೇಶಿಸಬೇಕು ಮತ್ತು ಪ್ರತಿ ಪ್ರಯಾಣಿಕನ ಬಳಿ ೨೦೦ ಡಾಲರ್ ಇರಬೇಕು ಎಂಬ ನಿಯಮವನ್ನು ಮೀರುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯಪಟ್ಟು, ಇವರೆಲ್ಲರೂ ಕೂಡಲೇ ಭಾರತಕ್ಕೆ ಹಿಂದಿರುಗಬೇಕು ಎಂದು ಆದೇಶ ನೀಡಿತು.

ಇಷ್ಟರಲ್ಲಾಗಲೇ ಹಲವು ವಾರಗಳು ಕಳೆದಿದ್ದವು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವಷ್ಟು ತಾಳ್ಮೆ, ಚೈತನ್ಯ ಗುರುದೀತ್ ಸಿಂಗ್ ಮತ್ತು ಅವನ ಸಂಗಾತಿಗಳಿಗೆ ಇರಲಿಲ್ಲ. ಈ ನಡುವೆ ಕೋಮಗಾಟ ಮಾರು ಹಡಗಿನ ಕಪ್ತಾನ ಮತ್ತು ಪ್ರಯಾಣಿಕರ ನಡುವೆ ಮನಸ್ತಾಪ ಹುಟ್ಟಿ, ಎಲ್ಲರೂ
ಕಪ್ತಾನನ ವಿರುದ್ಧ ಘೋಷಣೆ ಕೂಗಿದ್ದರು. ಇವರೆಲ್ಲರೂ ದಂಗೆ ಎದ್ದು, ಚಳವಳಿ ನಡೆಸುತ್ತಿದ್ದಾರೆ ಮತ್ತು ಗದ್ದಾರ್ ಪಕ್ಷದವರು ಹಡಗಿನಲ್ಲಿದ್ದಾರೆಂದು ಪತ್ರಿಕೆಗಳು ವರದಿ ಮಾಡಿದವು. ವಾಂಕೋವರ್ ಬಂದರಿನಲ್ಲಿದ್ದ ಭಾರತೀಯ ಪ್ರಯಾಣಿಗರು ಕಂಗೆಟ್ಟಿದ್ದರು. ಕೆನಡಾ ನ್ಯಾಯಾಲಯದ ಆದೇಶದಂತೆ ಭಾರತಕ್ಕೆ ವಾಪಸಾಗ
ಬೇಕಾಯಿತು.

ಕೆನಡಾ ತಲುಪಿ ಮೂರು ತಿಂಗಳುಗಳ ನಂತರ, ಜುಲೈ ೨೩ರಂದು, ಕೋಮಗಾಟ ಮಾರು ಹಡಗು ಭಾರತದತ್ತ ಹೊರಟಿತು. ಜಪಾನ್ ಮೂಲಕ ಬರುವಾಗ ಕೆಲವು ತಕರಾರುಗಳಿಗೆ ಸಿಲುಕಿ, ಸಾಕಷ್ಟು ವಿಳಂಬವಾಗಿ, ಸೆಪ್ಟೆಂಬರ್ ೨೭, ೧೯೧೪ರಂದು ಕೊಲ್ಕೊತ್ತಾ ಹತ್ತಿರದ ಬುಡ್ಗೆ ಬುಡ್ಗೆ ಬಂದರನ್ನು ತಲುಪಿತು. ವಾಪಸಾಗುವಾಗ ನಡುವೆ ಜರ್ಮನಿಯ ಹಡಗೊಂದು ಎದುರಾದಾಗ, ಕುಶಲ ಸಮಾಚಾರವನ್ನು ಈ ಹಡಗಿನವರು ವಿನಿಮಯ ಮಾಡಿಕೊಂಡಿದ್ದರು. ಈ ನಡುವೆ ಮೊದಲನೆಯ ಮಹಾ ಯುದ್ಧ ಆರಂಭಗೊಂಡಿದ್ದು, ಬ್ರಿಟಿಷರು ಮತ್ತು ಜರ್ಮನರು ಬದ್ಧವೈರಿಗಳಾಗಿದ್ದರು. ಐದು ತಿಂಗಳು ಹಡಗಿನಲ್ಲಿದ್ದು, ಅನಿವಾರ್ಯವಾಗಿ ತಾಯ್ನಾಡಿಗೆ ವಾಪಸಾದ ಈ ಪಂಜಾಬಿಗಳನ್ನು ಬ್ರಿಟಿಷ್ ಸರಕಾರ ಸ್ವಾಗತಿಸಿದ್ದು ಗನ್‌ಬೋಟ್ ಮೂಲಕ.

ಕೊಲ್ಕೊತ್ತಾದಲ್ಲಿ ಇಳಿಯಬೇಕೆಂದು ಬಯಸಿದ್ದ ಎಲ್ಲಾ ಪಂಜಾಬಿಗಳನ್ನೂ ಬಂಧನದಲ್ಲಿರಿಸುವ ಪ್ರಕ್ರಿಯೆಗೆ ಬ್ರಿಟಿಷರು ಮುಂದಾದರು. ಇವರೆಲ್ಲರೂ ಕಾನೂನು ಮೀರಿ ಕೆನಡಾ ಪ್ರವೇಶಿಸಲು ಪ್ರಯತ್ನಿಸಿದ್ದಲ್ಲದೇ, ಅಪಾಯಕಾರಿ ರಾಜಕೀಯ ಹೋರಾಟಗಾರರು ಎಂದು ಬ್ರಿಟಿಷ್ ಸರಕಾರ ಪರಿಗಣಿಸಿತು. ಭಾರತದ ಕ್ರಾಂತಿಕಾರಿ ಗಳು ಈ ಜನರನ್ನು ದಂಗೆ ಏಳಲು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಸಹ ಬ್ರಿಟಿಷ್ ಸರಕಾರ ಘೋಷಿಸಿತು. ಹಡಗನ್ನು ತನ್ನ ವಶಕ್ಕೆ ಪಡೆದು, ಗುರುದೀತ್ ಸಿಂಗ್ ಮತ್ತು ಇತರ ಇಪ್ಪತ್ತು ಜನರನ್ನು ಬಂಧಿಸಲು ಬ್ರಿಟಿಷ್ ಪೊಲೀಸರು ಪ್ರಯತ್ನಿಸಿದರು. ಆದರೆ ಗುರುದೀತ್ ಸಿಂಗ್ ಮತ್ತು ಆತನ ಗೆಳೆಯರು ಪ್ರತಿರೋಧ ಒಡ್ಡಿದರು. ಒಂದಿಬ್ಬರು ಪೊಲೀಸರಿಗೆ ಹೊಡೆತ ಬಿತ್ತು.

ಇದೇ ನೆಪದಲ್ಲಿ ಬ್ರಿಟಿಷ್ ಪೊಲೀಸರು ಮನಬಂದಂತೆ ಗುಂಡು ಹಾರಿಸಿದರು. ಇನ್ನೇನು ಭಾರತದ ನೆಲದ ಮೇಲೆ ಇಳಿಯಬೇಕು ಎಂದುಕೊಂಡಿದ್ದ ಆ ಪಂಜಾಬಿ ಗಳಲ್ಲಿ ಸುಮಾರು ೨೦ ಜನ ಅಲ್ಲೇ ಹತರಾದರು. ಇಬ್ಬರು ಸ್ಥಳೀಯರು, ಇಬ್ಬರು ಪೊಲೀಸರು ಮತ್ತು ಇಬ್ಬರು ಯುರೋಪಿಯನ್ನರು ಸಹ ಸತ್ತರು. ಇತರರನ್ನು
ಬಂಧಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಿ ಪಂಜಾಬಿನ ಅವರವರ ಹಳ್ಳಿಗಳಿಗೆ ಕಳುಹಿಸಲಾಯಿತು. ಆದರೆ ಮೊದಲನೆಯ ಮಹಾಯುದ್ಧದ ನೆಪದಲ್ಲಿ ಬ್ರಿಟಿಷರು ವಿಧಿಸಿದ ಸೆನ್ಸಾರ್ ನೀತಿಯಿಂದಾಗಿ, ಹಲವು ದಶಕಗಳ ನಂತರವಷ್ಟೇ ಈ ಹತ್ಯಾಕಾಂಡದ ಗಂಭೀರತೆ ನಮ್ಮ ದೇಶದ ನಾಯಕರಿಗೆ ಅರಿವಾಯಿತು.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ೧೯೫೨ರಲ್ಲಿ ಕೋಮಗಾಟ ಮಾರು ಘಟನೆಯಲ್ಲಿ ಮೃತರಾದ ಇಪ್ಪತ್ತು ಜನರನ್ನು ಹುತಾತ್ಮರೆಂದು ಪರಿಗಣಿಸಿ, ಬುಡ್ಗೆ ಬುಡ್ಗೆಯ ಬಳಿ ಸ್ಮಾರಕವೊಂದನ್ನು ನಿರ್ಮಿಸಿ, ಜವಾಹರ ಲಾಲ್ ನೆಹರು ಉದ್ಘಾಟಿಸಿದರು. ಅತ್ತ ಕೆನಡಾದಲ್ಲಿ, ನಂತರದ ದಶಕಗಳಲ್ಲಿ ಹೆಚ್ಚಿನ ಸಿಖ್ ಜನರು ನೆಲಸಿ, ಈ ಘಟನೆ ಯನ್ನು ನೆನಪಿಸಿಕೊಂಡರು. ಕೆನಡಾದ ಪ್ರಧಾನ ಮಂತ್ರಿಯು ಈ ಘಟನೆಯ ಕುರಿತು ತಪ್ಪೊಪ್ಪಿಗೆಯನ್ನು ನೀಡುವಂತೆ ಜನ ಒತ್ತಾಯಿಸಿದರು. ಪ್ರಧಾನಿ ಜಸ್ಟಿನ್ ಟ್ರುಡೇ, ಮೇ ೨೦೧೬ರಲ್ಲಿ ಬಹಿರಂಗ ಕ್ಷಮೆ ಯಾಚಿಸಿದರು.

ಕೆನಡಾದಲ್ಲಿ ಇದರ ಕುರಿತು ಸ್ಮಾರಕ ನಿರ್ಮಿಸಲಾಗಿದೆ. ಭಾರತದಲ್ಲಿ ಕೊಲ್ಕೊತ್ತಾ ಬಂದರು ಪ್ರದೇಶದಲ್ಲಿ ಸ್ಮಾರಕ, ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ.
ಜಲಿಯನ್‌ವಾಲಾಬಾಗ್ ಘಟನೆಗಿಂತ ಐದು ವರ್ಷ ಮುಂಚೆ ನಡೆದ ಈ ಘಟನೆಯು, ಬ್ರಿಟಿಷರ ದಬ್ಬಾಳಿಕೆಯ ಆಡಳಿತ ಮತ್ತು ಕೊಲೆಗಡುಕ ಮನೋಭಾವವನ್ನು ಬಿಂಬಿಸುವ ಕ್ರೂರ ಉದಾಹರಣೆ ಎನಿಸಿದೆ.