Sunday, 8th September 2024

ನಾಯಕನಾಗಿ ಫೇಲಾದರೆ, ಆಟಗಾರನಾಗಿ ಯಶಸ್ವಿಯಾಗಬಹುದು

ಇದೇ ಅಂತರಂಗ ಸುದ್ದಿ

vbhat@me.com

ಜೀವನದಲ್ಲಿ ಪದೇಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನ ವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಯಶಸ್ಸನ್ನು ಕಂಡವರು, ಸೋಲನ್ನೇ ಕಾಣದವರು ಏಕಾಏಕಿ ಫೇಲ್ ಆದಾಗ ಚಡಪಡಿಸುತ್ತಾರಲ್ಲ, ಒಳಗೊಳಗೇ ಬೇಯುತ್ತಾರಲ್ಲ, ಅದನ್ನು ನೋಡಲಾಗುವುದಿಲ್ಲ.

ಯಶಸ್ಸು ಅವರಲ್ಲೊಂದು ದಾರ್ಷ್ಟ್ಯವನ್ನು ರೂಪಿಸಿರುತ್ತದೆ. ಯಶಸ್ಸಿನ ಗುಂಗಿನಲ್ಲಿ ಅವರು ಮೈಮರೆತಿರುತ್ತಾರೆ. ಜೀವನ ಸದಾ ಹೀಗೇ ಇರುತ್ತದೆಂದು ಭಾವಿಸಿರುತ್ತಾರೆ. ಆದರೆ ಹಠಾತ್ತನೆ ಸೋಲು ಎದುರಾದರೆ ಅವರಿಗೆ ಅದನ್ನು ಹೇಗೆ ಸ್ವೀಕರಿಸಬೇಕೆಂಬುದು ಗೊತ್ತಾಗದೇ ಒದ್ದಾಡುತ್ತಾರೆ. ಎಷ್ಟೋ ಸಲ ಸೋಲಿಗಿಂತ, ಸೋಲಿನ ಹೊಡೆತಕ್ಕೆ ನರಳುವ, ಕೊರಗುವ ಸೋಲಿದೆಯಲ್ಲ, ಅದರ ಪರಿಣಾಮ ಮಾತ್ರ ಭಯಾನಕವಾಗಿರುತ್ತದೆ. ಸೋಲನ್ನು ಸಹಿಸಿಕೊಳ್ಳ ಬಹುದು. ಆದರೆ ಅದರ ಪರಿಣಾಮವನ್ನು ಎದುರಿಸಲಾಗದೇ ಸೋಲುವುದು ನಿಜಕ್ಕೂ ಘನಘೋರ.

ಇಂಥ ಸ್ಥಿತಿಯಲ್ಲಿದ್ದವರು ಕ್ರಿಕೆಟ್‌ನ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಮಾತುಗಳನ್ನು ಕೇಳಿಸಿಕೊಳ್ಳಬೇಕು. (ಅಷ್ಟಕ್ಕೂ ದೇವರು ಹೇಳಿದರೆ ಯಾರು ಕೇಳುವುದಿಲ್ಲ ಹೇಳಿ) ‘ನಾನು ಸಾಮಾನ್ಯ ಆಟಗಾರನಾಗಿ ಭಾರತ ಕ್ರಿಕೆಟ್ ತಂಡವನ್ನು ಸೇರಿದೆ. ಉತ್ತಮ ಪ್ರದರ್ಶನದ ಫಲವಾಗಿ
ತಂಡದ ಕ್ಯಾಪ್ಟನ್ ಕೂಡ ಆದೆ. ಆದರೆ ನಾಯಕನಾಗಿ ನನ್ನ ಸಾಧನೆ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ನಾಯಕನಾಗಿ ಒತ್ತಡಕ್ಕೆ ನಿಲುಕುತ್ತಿದ್ದುದರಿಂದ, ಅದು ನನ್ನ ಸಹಜ ಬ್ಯಾಟಿಂಗ್ ಮೇಲೆ ಸಹ ಪರಿಣಾಮ ಬೀರಲಾರಂಭಿಸಿತು. ನಾಯಕನಾಗಿ ಫೇಲ್ ಆದರೂ ಪರವಾಗಿಲ್ಲ, ಕ್ರಿಕೆಟ್ ಆಟಗಾರನಾಗಿ ಫೇಲ್ ಆಗಬಾರದು ಎಂದು ಭಾವಿಸಿ, ನಾಯಕತ್ವದಿಂದ ಹೊರಬಂದೆ. ಆನಂತರ ಹನ್ನೊಂದರಲ್ಲಿ ಒಬ್ಬನಾಗಿ ತಂಡದಲ್ಲಿ ಮುಂದುವರಿದೆ.

ನನ್ನ ಬ್ಯಾಟಿಂಗ್ ಕೌಶಲವನ್ನು ಮುಂದುವರಿಸಲು ಇದರಿಂದ ಸಹಾಯಕವಾಯಿತು. ಸಂಪೂರ್ಣವಾಗಿ ನಾನು ಬ್ಯಾಟಿಂಗ್ ಮೇಲೆ ನನ್ನ ಗಮನವನ್ನು ಕೇಂದ್ರೀ ಕರಿಸಿದೆ’ ಎಂದು ಸಚಿನ್ ಹೇಳಿದ್ದರು. ಕ್ಯಾಪ್ಟನ್ ಆಗಿ ವಿಫಲನಾದರೆ, ಮುಂದೆ ಆಟಗಾರನಾಗಿ ಮುಂದುವರಿಯುವುದು ಹೇಗೆ ಎಂದು ಅವರು ಯೋಚಿಸಲಿಲ್ಲ. ಕ್ಯಾಪ್ಟನ್ ಆಗಿ ವಿಫಲನಾದರೆ ಆಟಗಾರನಾಗಿಯೂ ವಿಫಲನಾದಂತೆ ಎಂದು ಸಹ ಯೋಚಿಸಲಿಲ್ಲ. ನನಗೆ ಇಲ್ಲಿ ಬ್ರಿಟನ್‌ನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ನೆನಪಾಗುತ್ತಾರೆ. ಎರಡನೇ ಮಹಾಯುದ್ಧದಲ್ಲಿ ಬ್ರಿಟನ್‌ಗೆ ಜಯವನ್ನು ತಂದುಕೊಟ್ಟರೂ, ಮುಂದಿನ ವರ್ಷ ನಡೆದ ಮಹಾಚುನಾವಣೆಯಲ್ಲಿ ಚರ್ಚಿಲ್ ಅಧಿಕಾರ ವಂಚಿತರಾಗುತ್ತಾರೆ. ತಮ್ಮ ಸಾರ್ವಜನಿಕ ಜೀವನ ಇಲ್ಲಿಗೇ ಮುಗಿಯಿತು ಎಂದು ಅವರು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನಿರಂತರ ರಾಜಕೀಯ ಚಟುವಟಿಕೆ ಯಿಂದ ಬಿಡುವು ಪಡೆದು ಸಾಹಿತ್ಯ ಅಧ್ಯಯನ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ಸಾಹಿತ್ಯಕ್ಕೆ ನೀಡುವ ಅತ್ಯುಚ್ಚ ಪ್ರಶಸ್ತಿಯಾದ ನೊಬೆಲ್ ಪುರಸ್ಕಾರ ಸಹ ಪ್ರಾಪ್ತವಾಗುತ್ತದೆ. ಅದಾದ ನಂತರ ಪುನಃ ಅವರು ಕೆಲಕಾಲ ಬ್ರಿಟನ್‌ನ ಪ್ರಧಾನಮಂತ್ರಿಯೂ ಆಗುತ್ತಾರೆ. ಒಂದು ಸೋಲು ಸೋಲಲ್ಲ. ಸೋಲಿನಿಂದ ಧೃತಿಗೆಡುವುದು, ಸೋತೆ ಎಂದು ಸತ್ತಂತೆ ಭಾವಿಸುವುದು ನಿಜವಾದ ಸೋಲು.

ಸೋಲು ಸಹ ನಮ್ಮನ್ನು ಅರಿಯಲು, ನಿಜ ಸಾಮರ್ಥ್ಯ ತಿಳಿಯಲು ಸಹಕಾರಿಯಾಗಬಹುದು. ಸೋಲು ಎದುರಾದಾಗ, ಜೀವನದ ಎಲ್ಲ ಬಾಗಿಲುಗಳು ಮುಚ್ಚಿಹೋದವು ಎಂದು ಭಾವಿಸುವುದು ಬೇಡ. ಕೇವಲ ಒಂದು ಬಾಗಿಲಷ್ಟೇ ಮುಚ್ಚಿರಬಹುದು. ನೀವು ಪ್ರಯತ್ನಪಟ್ಟರೆ ಅದೂ ತೆರೆದುಕೊಳ್ಳಬಹುದು.

ನಿಮ್ಮೊಳಗಿನ ಬೋರ್‌ವೆಲ್ ಕೊರೆಯುವವರು ನೀವೇ

ಅನೇಕ ಮಂದಿಗೆ ತಮ್ಮೊಳಗೆ ಏನಿದೆಯೆಂಬುದೇ ತಿಳಿದಿರುವುದಿಲ್ಲ. ತಾವು ಏನಾಗಬೇಕೆಂಬುದೂ ತಿಳಿದಿರುವುದಿಲ್ಲ. ಚಿಕ್ಕ ಮಕ್ಕಳನ್ನು ಕೇಳಿ, ನೀನು ಜೀವನದಲ್ಲಿ ಏನಾಗಬೇಕೆಂದು ಬಯಸುತ್ತೀಯಾ? ಎಂದು. ತಂದೆ-ತಾಯಿ ಹೇಳಿದ, ಹೇಳಿಸಿದ ಉತ್ತರ ಕೊಡುತ್ತಾರೆ. ಕೆಲವರು ತಮಗೆ ಇಷ್ಟವಾಗುವ ವೃತ್ತಿಯ ಬಗ್ಗೆ ಹೇಳಬಹುದು. ಆದರೆ ಅವರಿಗೆ ಆ ವೃತ್ತಿಯ ಬಗ್ಗೆ ಏನೂ ಗೊತ್ತಿರುವುದಿಲ್ಲ. ಕೆಲವು ಆಕರ್ಷಣೆಗಳು ಅವರನ್ನು ಹಾಗೆ ಹೇಳಲು ಪ್ರೇರೇಪಿಸಿರುತ್ತವೆ. ವರ್ಷಗಳು ಉರುಳುತ್ತಾ ಹೋದಂತೆ ಅವರ ಆಯ್ಕೆ, ಬಯಕೆಗಳೆಲ್ಲ ಬದಲಾಗುತ್ತಾ ಹೋಗುತ್ತವೆ. ಕಾಲೇಜು ಶಿಕ್ಷಣ ಮುಗಿಸುವ ತನಕ ಜೀವನದಲ್ಲಿ ಏನಾಗಬೇಕೆಂಬ ಬಗ್ಗೆ ನನಗೆ ಸ್ಪಷ್ಪತೆಯಿರಲಿಲ್ಲ. ಕ್ರಿಕೆಟ್, ಟೆನಿಸ್ ಆಡುತ್ತಿದ್ದೆ, ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ, ಚಳವಳಿ, ಹೋರಾಟಗಳಲ್ಲಿ ಸಕ್ರಿಯನಾಗಿದ್ದೆ. ಬ್ಯಾಂಕ್ ಉದ್ಯೋಗಕ್ಕೋ, ಐಎಎಸ್, ಐಪಿಎಸ್ ಅಽಕಾರಿಯಾಗ ಲೆಂದೋ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಓದುತ್ತಿದ್ದೆ. ಕೈಗೆ ಸಿಕ್ಕಿದ ಪುಸ್ತಕಗಳನ್ನು ಓದುತ್ತಿದ್ದೆ. ಆ ದಿನಗಳಲ್ಲಿ ನೀನು ಏನಾಗಬೇಕೆಂದು ಅಂದುಕೊಂಡಿದ್ದೀಯಾ? ಎಂದು ಕೇಳಿದರೆ ಸರಿ ಉತ್ತರಕ್ಕೆ ತಡಕಾಡುತ್ತಿದ್ದೆ. ಕಾರಣ ನನ್ನಲ್ಲಿ ಸ್ಪಷ್ಟತೆಯಿರಲಿಲ್ಲ.

ನಿಮ್ಮೊಳಗೆ ಬಾವಿಯೋ, ಕೆರೆಯೋ ಇದ್ದರೆ ಉದ್ಯಾನವನ್ನೋ, ತೋಟವನ್ನೋ ಮಾಡಬಹುದು. ಏಣಿಯಿದ್ದರೆ ಆಗಸವನ್ನು ಏರಬಹುದು. ರೆಕ್ಕೆಗಳಿದ್ದರೆ ಆಕಾಶಕ್ಕೆ ನೆಗೆಯಬಹುದು. ಆದರೆ ಏನಿದೆಯೆಂಬುದು ಮಣ್ಣೊಳಗಿನ ಬಂಗಾರದಂತೆ, ವಜ್ರದಂತೆ ಇದ್ದರೆ ಏನು ಮಾಡುವುದು? ನಮ್ಮ ತಾಕತ್ತೇನು, ನಾವು ಯಾವುದರಲ್ಲಿ ಎತ್ತಿದ ಕೈ, ನಮ್ಮ ಹಕೀಕತ್ತು ಏನು ಎಂಬುದು ನಮಗೆ ಬೇಗನೆ ಗೊತ್ತಾಗುವುದಿಲ್ಲ. ಇದು ಒಂಥರಾ ಬೋರ್‌ವೆಲ್ ತೋಡಿದಂತೆ. ಬೇಗನೆ ನೀರು ಸಿಗಬಹುದು. ಸಾವಿರಾರು ಅಡಿ ತೋಡಿದ ಬಳಿಕ ನೀರು ಸಿಗಬಹುದು. ಎಷ್ಟು ಆಳಕ್ಕೆ ಹೋದರೂ ತೊಟ್ಟು ನೀರು ಸಿಗದಿರಬಹುದು. ಅಷ್ಟಕ್ಕೂ ನಮ್ಮೊಳಗಿನ ನೀರಿನ ಆಳ, ಮಟ್ಟ, ಒರತೆ, ಪಸೆ ಗೊತ್ತೇ ಆಗುವುದಿಲ್ಲ.

ಈ ಕಾರಣದಿಂದಲೇ ಕೆಲವರು ಪದೇಪದೆ ವೇಷ ಬದಲಿಸುತ್ತಾರೆ, ಉದ್ಯೋಗ ಬದಲಿಸುತ್ತಾರೆ, ಊರು ಬದಲಿಸುತ್ತಾರೆ. ಹಾಗೆ ಮನೆಯನ್ನೂ ಅವರ ನೆಲೆ ಯಾವುದು, ಅಸಲಿಯತ್ತು ಏನೆಂಬುದು ಅವರಿಗೆ ಗೊತ್ತೇ ಆಗುವುದಿಲ್ಲ. ಕಾರಣ ಅವರೊಳಗೆ ಇರುವುದಕ್ಕೂ, ಅವರು ಮಾಡುತ್ತಿರುವ ಉದ್ಯೋಗಕ್ಕೂ ಸಂಬಂ
ಧವೇ ಇರುವುದಿಲ್ಲ. ಅತ್ಯುತ್ತಮ ಕವಿಯೋ, ಕಲಾವಿದನೋ, ಸಂಗೀತಗಾರನೋ ಆಗಿರುತ್ತಾರೆ. ಅಂಥವರು ಸರಕಾರಿ ಕೆಲಸ ಬೇಕೆಂದು ಪೊಲೀಸ್ ಕಾನಸ್ಟೇಬಲ್ಲೋ, ಇನ್ಸಪೆಕ್ಟರೋ ಆಗುತ್ತಾರೆ. ಮಗನ ಜೀವನಕ್ಕೆ ಒಂದು ನೆಲೆ ಸಿಗುವುದು ಬಹಳ ಮುಖ್ಯವೆಂದು ಸಚಿನ್ ತೆಂಡೂಲ್ಕರ್ ತಂದೆ-ತಾಯಿ ಮಗನನ್ನು ಸರಕಾರಿ ನೌಕರಿಗೆ ಸೇರಿಸಿದ್ದರೆ ಏನಾಗುತ್ತಿತ್ತು? ಅಮೆರಿಕದ ಖ್ಯಾತ ಕವಿ, ಸಾಹಿತಿ, ಚಿಂತಕ ರಾಲ್ ವಾಲ್ಟೋ ಎಮರ್ಸನ್ ಹೇಳಿದ ಮಾತು ಆಗಾಗ ನೆನಪಾಗುತ್ತದೆ.- If there is something great in you, it will not appear on your first call. It will not appeal and come to you easily, without any work and effort..

ಅಂದರೆ ನಿಮ್ಮೊಳಗೇನಿದೆಯೋ ಅದು ನೀವು ಕರೆದ ಮಾತ್ರಕ್ಕೆ ಹೊರಬರುವುದಿಲ್ಲ. ಮೊದಲಿಗೆ ಏನಿದೆಯೆಂಬುದೇ ಗೊತ್ತಿರುವುದಿಲ್ಲ. ಗೊತ್ತಾಯಿತು ಅಂದುಕೊಳ್ಳಿ, ಅದನ್ನು ಹೊರ ತೆಗೆಯಲು ಹರಸಾಹಸ ಮಾಡಬೇಕಾಗುತ್ತದೆ. ನಿಮ್ಮ ಪರಿಶ್ರಮವಿಲ್ಲದೇ ನಿಮ್ಮೊಳಗಿನ ಸಾಮರ್ಥ್ಯವೂ ಹೊರಕ್ಕೆ ಬರುವುದಿಲ್ಲ. ನಿಮ್ಮೊಳಗೆ ನೀರು ಇದೆಯಾ, ಎಷ್ಟು ಆಳದಲ್ಲಿದೆಯೆಂಬುದನ್ನು ತಿಳಿದು ಬೋರು ಕೊರೆಯುವವರು ನೀವೇ. ಕೊರೆದ ನಂತರ ನೀರು ಸಿಗದೆಯೂ ಹೋಗಬಹುದು. ನೀವೇ ಜವಾಬ್ದಾರರು ಅಷ್ಟಕ್ಕೂ.

ಹೆಸರು ಬದಲಾದಾಗ

ಪಾಕಿಸ್ತಾನದ ಹುಡುಗನೊಬ್ಬ ಅಮೆರಿಕದ ಶಾಲೆಗೆ ಸೇರಿಕೊಂಡ. ತರಗತಿಗಳು ಆರಂಭವಾದವು. ಮೊದಲ ದಿನ, ಅಧ್ಯಾಪಕರು ಅವನನ್ನು ಕೇಳಿದರು: ನಿನ್ನ ಹೆಸರೇನು? ಬಾಲಕ: ಸರ್, ನಾನು ನಾದಿರ್. ಪಾಕಿಸ್ತಾನದಿಂದ ಬಂದಿದೀನಿ. ಪಾಕಿಸ್ತಾನಿ ಎಂದರೆ ಸಾಕು; ಆತ ಭಯೋತ್ಪಾದಕನೇ ಇರಬೇಕು ಎಂದು ನೋಡುವ ರಾಷ್ಟ್ರ ಅಮೆರಿಕ. ಅದನ್ನು ನೆನಪಿಸಿಕೊಂಡ ಅಧ್ಯಾಪಕರು- ಮುಸ್ಲಿಂ ಹೆಸರಿಟ್ಟುಕೊಂಡರೆ ಅಮೆರಿಕದಲ್ಲಿ ಏನೇನೆಲ್ಲ ತೊಂದರೆಗಳು ಎದುರಾಗಬಹುದು ಎಂಬುದನ್ನು ಅರ್ಧ ಗಂಟೆ ವಿವರಿಸಿದರು. ನಂತರ -‘ನೋಡೂ, ಇವತ್ತಿನಿಂದ ನಿನ್ನ ಹೆಸರು ನಾದಿರ್ ಅಲ್ಲ. ಈ ಕ್ಷಣದಿಂದಲೇ ನಿನಗೆ ಜಾನಿ ಎಂದು ನಾಮಕರಣ ಮಾಡಲಾಗಿದೆ. ಅರ್ಥವಾಯ್ತಾ?’ ಎಂದರು.

ಗುರುಗಳ ಮಾತಿಗೆ ಎದುರಾಡುವುದುಂಟೆ? ಆ ಹುಡುಗ ತಕ್ಷಣದಿಂದಲೇ ಹೆಸರು ಬದಲಿಸಿಕೊಂಡ. ಶಾಲೆಯಿಂದ ಮನೆಗೆ ಬಂದ ಮಗನನ್ನು ಕಂಡು ಅಮ್ಮ
ಕೇಳಿದಳು: ನಾದಿರ್, ಯಾಕಿಷ್ಟು ಲೇಟು? ಈ ಹುಡುಗ ತಕ್ಷಣವೇ – ‘ಅಮ್ಮಾ, ನೆನಪಿಟ್ಟುಕೋ. ನಾನೀಗ, ಅಮೆರಿಕನ್. ನನ್ನ ಹೆಸರು ಜಾನಿ. ನೀವು ನನ್ನನ್ನು ಜಾನಿ ಎಂದೇ ಕರೆಯಬೇಕು’ ಎಂದುಬಿಟ್ಟ. ಮಗನ ಉದ್ಧಟತನವನ್ನು ಕಂಡು ತಾಯಿಗೆ ಸಿಟ್ಟು ಬಂತು. ಆಕೆ ತಕ್ಷಣವೇ ನಡೆದಿದ್ದನ್ನೆಲ್ಲ ಗಂಡನಿಗೆ ವರದಿ ಮಾಡಿದಳು. ಎದುರು ಬಂದ ಅಪ್ಪ- ‘ನಾದಿರ್, ಏನೋ ಇದೆಲ್ಲ ರಗಳೆ’ ಎನ್ನುತ್ತಿದ್ದಂತೆಯೇ ಈ ಹುಡುಗ- ‘ನಾನೀಗ ಅಮೆರಿಕನ್. ನನ್ನ ಹೆಸರು ಜಾನಿ’ಎಂದ.

ಮಗನ ಉದ್ಧಟತನ ಕಂಡು ಹೆತ್ತವರಿಗೆ ವಿಪರೀತ ಸಿಟ್ಟು ಬಂತು. ಇಬ್ಬರೂ ಸೇರಿಕೊಂಡು ಮಗನಿಗೆ ಚೆನ್ನಾಗಿ ಬಾರಿಸಿದರು. ಮರುದಿನ ಕುಂಟುತ್ತಾ ಬಂದ ಹುಡುಗನನ್ನು ಕಂಡು ಅಧ್ಯಾಪಕರು ಕೇಳಿದರು: ‘ಜಾನಿ, ಯಾಕೆ ಕುಂಟುತ್ತಾ ಇದ್ದೀಯಲ್ಲ , ಏನಾಯ್ತು?’ ಆ ಹುಡುಗ ಹೇಳಿದ: ‘ಸಾರ್, ನಾನು ಅಮೆರಿಕನ್
ಆಗಿ ಬದಲಾದೆನಲ್ಲ, ಆನಂತರದ ೬ ಗಂಟೆಯೊಳಗೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ನನ್ನ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದರು!’

ದೇವರು ಹಾಗೂ ಜೋಕು
ಕೆಲ ವರ್ಷಗಳ ಹಿಂದೆ, ಕಸೌಳಿಯಲ್ಲಿರುವ ತಮ್ಮ ಮನೆಯಲ್ಲಿ ಮಧ್ಯಾಹ್ನದ ನಿದ್ದೆಯಿಂದ ಎದ್ದು ಚಹ ಸೇವಿಸುತ್ತಿರುವಾಗ, ಕುರ್ಚಿಯಿಂದ ಹಠಾತ್ತನೆ ಖುಷವಂತ ಸಿಂಗ್ ಬಿದ್ದು ಬಿಟ್ಟರಂತೆ. ಇನ್ನೇನು ತನ್ನ ಕತೆ ಮುಗಿಯಿತು ಎಂದು ಅನಿಸಿತಂತೆ. ದೇವರನ್ನು ನಂಬದಿದ್ದರೂ ಅವನ ಪ್ರತಿಕೃತಿ ಅವರ ಮುಂದೆ ಬಂತಂತೆ.
ದೇವರು (ಬಡೇಮಿಯಾ)-ಸಿಂಗ್ ನಡುವೆ ಒಂದಷ್ಟು ಹೊತ್ತು ತುಕತೆ ನಡೆಯಿತಂತೆ.

ಖುಷವಂತ ಸಿಂಗ್ -ಬಡೇಮಿಯಾ, ಇನ್ನು ಕೆಲವು ತಿಂಗಳು ನನಗೆ ಬದುಕಲು ಬಿಡು. ಕೆಲವು ಅಪೂರ್ಣ ಕೆಲಸಗಳಿವೆ. ನಾನು ನಿನ್ನ ಸೇರುವ ಮೊದಲು ಆ ಕೆಲಸವನ್ನು ಮುಗಿಸುವೆ. ಅದಕ್ಕೆ ಅನುವು ಮಾಡಿಕೊಡು. ಬಡೇಮಿಯಾ -ಅದೆಂಥ ಮಹತ್ವದ ಕೆಲಸ? ಸಿಂಗ್ – ನನ್ನ ಕೆಲವು ಹಸ್ತಪ್ರತಿಗಳು ಪಬ್ಲಿಶರ್ ಹತ್ರಾನೇ ಇವೆ. ಅವು ಪ್ರಿಂಟಾಗಬೇಕು. ಅವನ್ನು ನಾನು ನೋಡಬೇಕು. ಬಡೇಮಿಯಾ- ಅವು ಅಂಥ ಪ್ರಮುಖ ಪುಸ್ತಕಗಳಾ? ನಿನ್ನ ಪುಸ್ತಕ ಓದಿ ಯಾರು ಉದ್ಧಾರವಾಗಿ ದ್ದಾರೆ? ಸಿಂಗ್- ಗೊತ್ತಿಲ್ಲ. ಆದರೆ ಆ ಪೈಕಿ ಕೆಲವು ಜೋಕ್ ಪುಸ್ತಕಗಳಿವೆ. ಬಡೇಮಿಯಾ- ಹೌದಾ? ನಿನ್ನ ಪುಸ್ತಕಗಳ ಪೈಕಿ ಎಲ್ಲರಿಗೂ ಅರ್ಥವಾಗೋದು ಅಂದ್ರೆ ಅವು ಮಾತ್ರ. ಕಾರಣ ನಾನು ನಿನ್ನ ಜೋಕ್ ಪುಸ್ತಕಗಳನ್ನು ಓದಿ ಹೊಟ್ಟೆ ತುಂಬಾ ನಕ್ಕಿದ್ದೇನೆ.

ಸಿಂಗ್- ನನ್ನ ಬರವಣಿಗೆಯಿಂದ ನನಗೆ, ಪ್ರಕಾಶಕನಿಗೆ ಹಾಗೂ ಓದುಗನಿಗೆ ಪ್ರಯೋಜನ ವಾಗಿದ್ದರೆ, ಜೋಕ್‌ಪುಸ್ತಕಗಳಿಂದ ಮಾತ್ರ. ಪ್ರತಿ ಪುಸ್ತಕವೂ ಹತ್ತು-ಹದಿನೈದು ರೀಪ್ರಿಂಟ್‌ಗಳನ್ನು ಕಂಡಿವೆ. ಕೈತುಂಬಾ ಹಣ ತಂದು ಕೊಟ್ಟಿವೆ. ಬಡೇಮಿಯಾ- ಹಾಗಾದರೆ ಸರಿ, ನಿನಗೆ ಇನ್ನೂ ಕೆಲವು ವರ್ಷ ಬದುಕಲು ಬಿಡುತ್ತೇನೆ. ಜೋಕ್ ಪುಸ್ತಕಗಳನ್ನು ಮುಗಿಸು. ಈ ದೇಶದ ಜನರಿಗೆ ನಗುವುದೇ ಗೊತ್ತಿಲ್ಲ. ಹೀಗಂತ ಖುಷವಂತ ಸಿಂಗ್ ತಮ್ಮ ‘ಜೋಕ್ ಬುಕ್-೮’ರಲ್ಲಿ ಬರೆದುಕೊಂಡಿದ್ದಾರೆ. ಅವರ ಎತ್ತರಕ್ಕೇರಿದ ಲೇಖಕ ಇಷ್ಟು ಮುಕ್ತವಾಗಿ ಬರೆದುಕೊಳ್ಳುವುದನ್ನು ಮೆಚ್ಚಲೇಬೇಕು. ಇದಾದ ನಂತರ ಖುಷವಂತ ಸಿಂಗ್ ಏಳು ವರ್ಷ ಬದುಕಿದ್ದರು!

ಕೆಲವು ಸಲ ದಡ್ಡರಂತೆ ಇರಿ, ಪರವಾಗಿಲ್ಲ
ಇಬ್ಬರು ಸ್ನೇಹಿತರಿದ್ದರು. ಅವರಲ್ಲಿ ಇಬ್ಬರೂ ಬುದ್ಧಿವಂತರೇ. ಒಬ್ಬ ವ್ಯವಹಾರದಲ್ಲಿ ಚತುರ, ತನಗೆ ಬೇಕಾದಷ್ಟಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳುವವ. ಮತ್ತೊಬ್ಬ ಹಾಗಲ್ಲ, ಎಲ್ಲ ವಿಷಯಗಳಲ್ಲೂ ಮೂಗು ತೂರಿಸುತ್ತಾ, ಅತೀವ ಆಸಕ್ತಿ ತೋರಿಸುವವ. ಆ ಮೂಲಕ ಜನ ತನ್ನನ್ನು ಬುದ್ಧಿವಂತ ಎಂದು ಕರೆಯಬೇಕೆಂದು ಒಳಗೊಳಗೆ ಅಪೇಕ್ಷಿಸುವವ. ತನಗೆ ಸಂಬಂಧಪಡದ, ಅಪ್ರಾಮುಖ್ಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಅವನ ಜಾಯಮಾನ. ಒಮ್ಮೆ ಇವರಿಬ್ಬರು ಹಳ್ಳಿಯಲ್ಲಿ ಬರಿಗಾಲಲ್ಲಿ ನಡೆದು ಹೋಗುತ್ತಿರುವಾಗ ಇಬ್ಬರೂ ಅಮೇಧ್ಯವನ್ನು ಮೆಟ್ಟಿಕೊಂಡರು. ಇಬ್ಬರಿಗೂ ಪಿಚ್ಚೆನಿಸಿತು. ಮೊದಲನೆಯವ ಹಿಂದೆಮುಂದೆ
ನೋಡದೇ ತನ್ನ ಕಾಲನ್ನು ಪಕ್ಕದಲ್ಲಿದ್ದ ಹುಲ್ಲಿಗೆ ಒರೆಸಿಕೊಂಡು ಸನಿಹದಲ್ಲಿರುವ ಕಾಲುವೆ ನೀರಿನಲ್ಲಿ ತೊಳೆದುಕೊಂಡು ಏನೂ ಆಗದವನಂತೆ ನಿಶ್ಚಿಂತೆಯಿಂದ ಮುಂದಕ್ಕೆ ಹೊರಡಲು ಅನುವಾದರೆ, ಆತನ ಸ್ನೇಹಿತ ಅಮೇಧ್ಯ ಮೆಟ್ಟಿದ ಜಾಗದಲ್ಲಿಯೇ ಇದ್ದ. ಇದು ಅಮೇಧ್ಯವಾ ಅಥವಾ ಬೇರೇನಾದರೂ ಹೊಲಸಾ?
ಇದು ಮನುಷ್ಯನದಾ ಇಲ್ಲವೇ ಬೇರೆ ಪ್ರಾಣಿಗಳದ್ದಾ? ಎಂಬ ಯೋಚನೆಯಲ್ಲಿ ಮುಳುಗಿದ.

‘ಬೇಗ ಬಾರಪ್ಪ, ಕಾಲು ತೊಳೆದುಕೊಳ್ಳಲು ನೀರಿದೆ, ಚಿಂತೆ ಮಾಡಬೇಡ’ ಎಂದು ಸ್ನೇಹಿತ ಹೇಳಿದರೂ ಸಮಾಧಾನವಿಲ್ಲ. ಅದೇ ಚಿಂತೆ. ಅಷ್ಟಕ್ಕೇ ಸುಮ್ಮನಾಗದೇ ಆ ಅಮೇಧ್ಯವನ್ನು ಕೈಯಲ್ಲೆತ್ತಿ ವಾಸನೆ ನೋಡಿದ. ಅದು ಮನುಷ್ಯನದಾ, ಪ್ರಾಣಿಯದಾ ಎಂದು ತಿಳಿಯುವ ಕೆಟ್ಟ ಕುತೂಹಲ. ‘ಅದು ಮನುಷ್ಯರದ್ದಾದರೇನು, ಪ್ರಾಣಿಯದ್ದಾದರೇನು? ಅದನ್ನು ತಿಳಿದುಕೊಂಡು ನಿನಗೇನಾಗ ಬೇಕು?’ ಎಂದು ಸ್ನೇಹಿತ ಎಷ್ಟು ಹೇಳಿದರೂ ಆತ ತನ್ನ ಕೆಲಸದಲ್ಲಿ
ಮಗ್ನನಾಗಿದ್ದ.

ಇವನಂತಿರುವ ಅನೇಕ ಜನರನ್ನು ನಾವು ದೈನಂದಿನ ಜೀವನ ದಲ್ಲಿ ಕಾಣುತ್ತೇವೆ. ಅವರಿಗೆ ಸಂಬಂಧಪಡದ ವಿಷಯಗಳಲ್ಲಿ ಮಗ್ನ ರಾಗಿರುತ್ತಾರೆ. ಕೆಲವು ಸಂಗತಿಗಳನ್ನು ತಿಳಿದುಕೊಳ್ಳಲು ಹೋಗಲೇ ಬಾರದು. ಆ ಸಂಗತಿಗಳ ಒಳತೋಟಿಗಳೇ ಹಾಗಿರುತ್ತವೆ. ಗಾಂಧೀಜಿಯವರ ಮೂರು ಕೋತಿಗಳಂತೆ ಇದ್ದು ಬಿಡಬೇಕು. ಅದು ಸ್ಥಿತಪ್ರಜ್ಞತೆ ಅಲ್ಲ, ಅನಾಸಕ್ತಿ ಅಲ್ಲ, ಅನಾದರವೂ ಅಲ್ಲ. ಅದರ ಬಗ್ಗೆ ಏನೂ ಗೊತ್ತಿಲ್ಲದ ದಡ್ಡ ಶಿಖಾಮಣಿಯಂತೆ ಇದ್ದು ಬಿಡಬೇಕು. ಬೇರೆಯವರು ನಿಮ್ಮನ್ನು ದಡ್ಡ ಅಂತ ಕರೆದರೂ ಪರವಾಗಿಲ್ಲ.

ಕೆಲವು ಸಂಗತಿಗಳು ಹೇಗಿರುತ್ತವೆ ಅಂದ್ರೆ ಭತ್ತ ಸುಲಿದರೆ ಇಷ್ಟೇನಾ ಎಂಬಂತಿರುತ್ತವೆ. ಅವುಗಳ ಬಗ್ಗೆ ಕಷ್ಟಪಟ್ಟು ತಿಳಿದುಕೊಂಡ ನಂತರ ಇಷ್ಟೇನಾ? ಎಂದು ಕೇಳುವಂತಿರುತ್ತದೆ. ಅದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ತನಗೆ ಈ ಸಂಗತಿ ಗೊತ್ತಿದೆಯೆಂದು ಫೋಸು ಕೊಟ್ಟರೆ ಹೇಗಿರುತ್ತದೆ? ಈ ವಿಷಯ
ಎಲ್ಲರಿಗೂ ಮೊದಲೇ ತಿಳಿದಿರುತ್ತದೆ. ಒಮ್ಮೆ ಹಿಮಾಲಯದಲ್ಲಿ ಮೂವತ್ತು ವರ್ಷ ತಪಸ್ಸು ಮಾಡಿ ವಾಪಸ್ಸಾದ ಸನ್ಯಾಸಿಯೊಬ್ಬ ತನ್ನ ಶಿಷ್ಯರನ್ನೆಲ್ಲ ಕುಳ್ಳಿರಿಸಿಕೊಂಡು, ‘ನಾನು ಎಂಥ ಕಠಿಣ ತಪಸ್ಸನ್ನು ಮಾಡಿದ್ದೇನೆ ಗೊತ್ತಾ? ಒಮ್ಮೆ ಬಾಯಿ ತೆರೆದರೆ ಸಾಕು ನನ್ನ ಬಾಯಿಂದ ಬೆಂಕಿ ಕಾಣಿಸಿಕೊಳ್ಳುತ್ತದೆ’ ಎಂದನಂತೆ. ಅದನ್ನು ಕೇಳಿದ ಶಿಷ್ಯರ ಪೈಕಿ ಕಿಲಾಡಿಯೊಬ್ಬ ‘ಅಷ್ಟಕ್ಕಾಗಿ ಅಷ್ಟು ವರ್ಷ ಹಿಮಾಲಯದಲ್ಲೇಕೆ ಹಾಳು ಮಾಡಿದಿರಿ? ಬಾಯಿ ಹತ್ತಿರ ಬೆಂಕಿ ಪೊಟ್ಟಣ ಇಟ್ಟುಕೊಂಡು ಕಡ್ಡಿ ಗೀರಬಹುದಿತ್ತಲ್ಲ’ ಎಂದನಂತೆ. ಅತಿ ಶಾಣ್ಯಾ ಆಗಲು ಹೋದಾಗ ಹೀಗೆಲ್ಲ ಆಗುತ್ತವೆ.

ಸಣ್ಣ ಕತೆಗಳು

‘ಒಂದು ಕತೆ ಹೇಳ್ತೀನಿ’ ಅಂತ ಯಾರಾದರೂ ಹೇಳಿದರೆ ‘ಅಯ್ಯೋ ಶುರು ಹಚ್ಕೊಂಡನಲ್ಲ’ ಎಂದು ಮೂಗು ಮುರಿಯುವವರೇ ಹೆಚ್ಚು. ಕತೆ ಹೇಳಲು ಸಮಯವಿರಬಹುದು. ಆದರೆ ಕತೆ ಕೇಳಲು ಯಾರಿಗೂ ಸಮಯವಿಲ್ಲ. ತಾವು ಕೇಳಿದ ಅತಿ ಸಣ್ಣ ಕತೆಗಳಿವು ಎಂದು ಪತ್ರಕರ್ತ ವೈಯೆನ್ಕೆ ಆಗಾಗ ಈ ಎರಡು
ಕತೆಗಳನ್ನು ಹೇಳುತ್ತಿದ್ದರು. ಮೊದಲನೆಯದು – ‘ಕನಸಿನಲ್ಲಿ ಡೈನೋಸಾರಸ್‌ನ್ನು ಕಂಡೆ. ಎದ್ದಾಗ ಮುಂದೇ ಇತ್ತು.’  ಎರಡನೇಯದು – ‘ಅವನ ಮದುವೆಯಾಯಿತು. ಇಲ್ಲಿಗೆ ಕತೆ ಮುಗಿಯಿತು.’
?

ಆಫೀಸ್ ಮ್ಯಾನೇಜರ್‌ನನ್ನು ಕೆಲಸದಿಂದ ವಜಾ ಮಾಡಿದರು. ಯಾರೂ ಏನೂ ಹೇಳಲಿಲ್ಲ. ಆಫೀಸಿನ ಅಟೆಂಡರ್ ಅವನಾಗಿಯೇ ಕೆಲಸ ಬಿಟ್ಟು ಹೋದ. ಎಲ್ಲರೂ ಅವನ ಬಗ್ಗೆ ಮಾತಾಡಿಕೊಂಡರು.
?

‘ನೀನು ಕೆಲವು ದಿನಗಳ ಮಟ್ಟಿಗೆ ನನ್ನ ಸ್ಥಾನವನ್ನು ತುಂಬು ತ್ತೀಯಾ ?’ ಎಂದು ದೇವರು ಕೇಳಿದ. ಒಬ್ಬನೇ ಕುಳಿತು ಎಲ್ಲರ ಬಗ್ಗೆ ಯೋಚಿಸುವ ಆ ಕೆಲಸ ಯಾರಿಗೆ ಬೇಕು ಎಂದು ‘ಆಗೊಲ್ಲ’ ಸಾರಿ ಎಂದು ಹೇಳಿದೆ.
?
ನನ್ನ ಬೆನ್ನ ಮೇಲೆ ಬಂದೂಕು ನಿನ್ನ ಬೆನ್ನ ಮೇಲೆ ಪುಸ್ತಕ. ಇಬ್ಬರಿಗೆ ಮತ್ತೊಬ್ಬರ ಹೆಗಲ ಮೇಲೆ ಏನಿರಬಹುದೆಂಬ ಆತಂಕ

Leave a Reply

Your email address will not be published. Required fields are marked *

error: Content is protected !!