ಕಾನೂನು-ಕಿತಾಬ್
ಅಬ್ರಹಾಂ ಥಾಮಸ್
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಈಗ ಜೈಲುಪಾಲಾಗಿದ್ದಾರೆ. ಆದರೆ ಅಲ್ಲಿಂದಲೇ ಅವರು ಕೆಲ ‘ಆಡಳಿತಾತ್ಮಕ’ ಆದೇಶಗಳನ್ನು ನೀಡಿರುವುದು ಒಂದಷ್ಟು ಚರ್ಚೆಗೆ ಕಾರಣವಾಗಿದೆ. ಜತೆಗೆ ಮುಖ್ಯಮಂತ್ರಿಯೊಬ್ಬರು ಜೈಲಿನಿಂದಲೇ ಸರಕಾರವನ್ನು ನಡೆಸಬಹುದೇ? ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಹೀಗಾಗಿ ಈ ಚರ್ಚಾವಿಷಯವನ್ನು ಸುತ್ತುವರಿದಿರುವ ‘ಕಾನೂನಾತ್ಮಕ’ ಮಗ್ಗುಲುಗಳನ್ನು ಕೊಂಚ ಅವಲೋಕಿಸೋಣ.
ಕಾನೂನು ಮತ್ತು ಸಾಂವಿಧಾನಿಕ ತಜ್ಞರು ಅಭಿಪ್ರಾಯಪಟ್ಟಿರುವಂತೆ, ಸೆರೆವಾಸದಲ್ಲಿರುವಾಗಲೇ ಸರಕಾರವನ್ನು ನಡೆಸುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಪಟ್ಟುಹಿಡಿದಿರುವುದು ಅಂತಿಮವಾಗಿ ರಾಷ್ಟ್ರಪತಿ ಆಳ್ವಿಕೆಯು ಹೇರಲ್ಪಡು ವುದಕ್ಕೆ ಕಾರಣವಾಗಬಹುದು. ಏಕೆಂದರೆ, ಚುನಾಯಿತ ಮುಖ್ಯಮಂತ್ರಿಯೊಬ್ಬರು ಬಹುಮುಖಿ ಕಾರ್ಯಭಾರಗಳನ್ನು ಹೊಂದಿರುತ್ತಾರೆ ಮತ್ತು ಕಸ್ಟಡಿಯಲ್ಲಿದ್ದಾಗ ಇವೆಲ್ಲವನ್ನೂ ನಿರ್ವಹಿಸುವುದು ಪ್ರಾಯೋಗಿಕವಾಗಿ ಸಾಧ್ಯವಿರುವುದಿಲ್ಲ. ಜತೆಗೆ, ಹಾಲಿ ಮುಖ್ಯಮಂತ್ರಿಯೊಬ್ಬರ ಬಂಧನವು ಅಭೂತಪೂರ್ವ ಬೆಳವಣಿಗೆಯಾಗಿರುವುದರಿಂದ, (ಅಪರಾಧ ನಿರ್ಣಯಕ್ಕಿಂತ ಭಿನ್ನವಾಗಿರುವಂತೆ) ಸದರಿ ಬಂಧನ ಮಾತ್ರವೇ ಅವರ ರಾಜೀನಾಮೆಗೆ ಆಗ್ರಹಿಸುವಂತಾಗ ಬೇಕೇ ಎಂಬ ಚರ್ಚಾವಿಷಯವು ನ್ಯಾಯಾಲಯದ ಸಮಕ್ಷಮದಲ್ಲಷ್ಟೇ ಯಥೋಚಿತವಾಗಿ ಇತ್ಯರ್ಥಗೊಳ್ಳಬೇಕಾಗುತ್ತದೆ.
ಈಗಾಗಲೇ ಉಲ್ಲೇಖಿಸಿರುವಂತೆ, ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕೇಜ್ರಿವಾಲರನ್ನು ಕಳೆದ ವಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್‌ರ ನಂತರ, ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪಕ್ಷದ ಮೂರನೇ ನಾಯಕರಾಗಿದ್ದಾರೆ ಕೇಜ್ರಿವಾಲ್. ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ರಿಮಾಂಡ್ ಅರ್ಜಿಯಲ್ಲಿ ಜಾರಿ ನಿರ್ದೇಶನಾ ಲಯವು, ‘ಕೆಲವೊಂದು ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ಅನುಕೂಲ ಆಗುವಂತಾಗುವ ರೀತಿಯಲ್ಲಿ, ಈಗ ರದ್ದುಗೊಳಿಸ ಲಾಗಿರುವ ೨೦೨೧-೨೨ರ ದೆಹಲಿ ಅಬಕಾರಿ ಕಾರ್ಯ ನೀತಿಯನ್ನು ರೂಪಿಸುವಲ್ಲಿ ಕೇಜ್ರಿವಾಲರು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ’ ಎಂದು ಸಮರ್ಥಿಸಿಕೊಂಡಿದೆ.
ಈ ಸಂಸ್ಥೆಯ ಪ್ರಕಾರ, ಆಮ್ ಆದ್ಮಿ ಪಕ್ಷಕ್ಕೆ ೧೦೦ ಕೋಟಿ ರುಪಾಯಿ ಲಂಚವನ್ನು ನೀಡಲಾಗಿದ್ದು, ಈ ಪೈಕಿ ೪೫ ಕೋಟಿ ರು. ಹಣವನ್ನು ೨೦೨೨ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಖರ್ಚುಮಾಡಿದೆ. ವಾಡಿಕೆಯಂತೆ, ಕೇಜ್ರಿವಾಲರು
ಮತ್ತು ಆಮ್ ಆದ್ಮಿ ಪಕ್ಷ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದೂ ಆಗಿದೆ.
ಈಗ ಪ್ರಸಕ್ತ ಕ್ಷಣಕ್ಕೆ ಬರೋಣ. ಕೇಜ್ರಿವಾಲರು ಮಾರ್ಚ್ ೨೮ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲೇ ಇರಬೇಕು ಎಂಬು ದಾಗಿ ದೆಹಲಿ ನಗರದ ನ್ಯಾಯಾಲಯವೊಂದು ಮಾ.೨೨ರಂದು ಆದೇಶಿಸಿತು. ತಮ್ಮ ಬಂಧನ ಮತ್ತು ತರುವಾಯದ ಹವಾಲತ್ತು/ ವಿಚಾರಣೆ ಪ್ರಕ್ರಿಯೆಗಳನ್ನು ದೆಹಲಿ ಹೈಕೋರ್ಟ್‌ನಲ್ಲಿ ಕೇಜ್ರಿವಾಲ್ ಪ್ರಶ್ನಿಸಿದರು ಹಾಗೂ ಈ ವಿಷಯವನ್ನು ಮೊನ್ನೆ ಬುಧವಾರ ನ್ಯಾಯಾಲಯ ಕೈಗೆತ್ತಿಕೊಂಡಿತು (ಜಾರಿ ನಿರ್ದೇಶನಾಲಯದ ಬಂಧನ ಕ್ರಮವನ್ನು ಪ್ರಶ್ನಿಸಿ ನ್ಯಾಯಾ ಲಯದ ಮೊರೆಹೋಗಿದ್ದ ಕೇಜ್ರಿವಾಲರಿಗೆ ಈಗ ನಿರಾಸೆಯಾಗಿದೆ; ಕಾರಣ ಅವರಿಗೆ ನ್ಯಾಯಾಲಯ ಬಿಡುಗಡೆಯ ಭಾಗ್ಯ ನೀಡಿಲ್ಲ. ಜತೆಗೆ, ಕೇಜ್ರಿವಾಲರ ಅರ್ಜಿಯ ಸಂಬಂಧವಾಗಿ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಏಪ್ರಿಲ್ ೨ರವರೆಗೆ ಸಮಯ
ನೀಡಿದೆ. ಏ.೩ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ).
ಈ ಮಧ್ಯೆ ಕೇಜ್ರಿವಾಲರು ಕಳೆದ ಭಾನುವಾರ ದೆಹಲಿಯ ಸಚಿವ ಅತಿಶಿ ಅವರಿಗೆ ‘ಲಿಖಿತ ಟಿಪ್ಪಣಿ’ ಯೊಂದನ್ನು ಕಳುಹಿಸಿದ್ದಾರೆ ಎನ್ನಲಾಗಿದೆ; ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ನೀರಿನ ಕೊರತೆಯನ್ನು ನಿಭಾಯಿಸುವ ಕುರಿತಾದ ಈ ‘ಸೂಚ್ಯ’ ಆದೇಶವನ್ನು ನೀಡುವ ಮೂಲಕ, ಅಽಕಾರದಿಂದ ಕೆಳಗಿಳಿಯುವ ಉದ್ದೇಶ ತಮಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಜ್ರಿವಾಲ್ ರವಾನಿಸಿದಂತಾಗಿದೆ. ಆದರೆ, ಮುಖ್ಯಮಂತ್ರಿಯೊಬ್ಬರು ಜೈಲಿನಲ್ಲಿದ್ದುಕೊಂಡೇ ಕಾರ್ಯನಿರ್ವಹಿಸುವುದಕ್ಕಿರುವ ‘ಕಾನೂನು ಬದ್ಧತೆ’ಯ ಕುರಿತಾಗಿ ತಜ್ಞರು ಹೇಳುವುದೇನು ಮತ್ತು ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಲಭ್ಯವಿರುವ ಆಯ್ಕೆಗಳಾಗುವುವು? ಎಂಬುದಿಲ್ಲಿ ಪ್ರಶ್ನೆ.
ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಹೇಳುವಂತೆ, ಕೆಲವೊಂದು ಪ್ರಾಯೋಗಿಕ ತೊಡಕುಗಳು ಈ ವಿಷಯದಲ್ಲಿ ಕೇಜ್ರಿವಾಲರಿಗೆ ಅಡ್ಡಗಾಲು ಹಾಕುವ ಸಾಧ್ಯತೆಯಿದೆ. ಆಚಾರಿ ಹೀಗೆನ್ನುತ್ತಾರೆ: ‘ಬಂಧನದಿಂದಾಗಿ ಮುಖ್ಯಮಂತ್ರಿ ಯೊಬ್ಬರು ತಮ್ಮ ಕಾರ್ಯನಿರ್ವಹಣೆಯಿಂದ ಅನರ್ಹಗೊಳ್ಳುವುದಿಲ್ಲ, ಅವರು ಮುಖ್ಯಮಂತ್ರಿಯಾಗಿಯೇ ಮುಂದು ವರಿಯುತ್ತಾರೆ; ಆದರೆ ಕೇಜ್ರಿವಾಲ್ ಒಬ್ಬ ಕೈದಿಯಾಗಿರುವುದರಿಂದ, ಜೈಲಿನ ಕೈಪಿಡಿಯಲ್ಲಿ ಅನುಮತಿಸಲಾದ ಬಾಬತ್ತುಗಳ ನ್ನಷ್ಟೇ ಅವರು ಮಾಡಲು ಸಾಧ್ಯವಿರುತ್ತದೆ. ಮುಖ್ಯಮಂತ್ರಿಯು ಸಂಪುಟ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕಾಗಿ ಬರುವು
ದರಿಂದ, ಇಲ್ಲಿ ಪ್ರಾಯೋಗಿಕ ಸಮಸ್ಯೆಗಳು ಉದ್ಭವಿಸಬಹುದು. ಮಾತ್ರವಲ್ಲದೆ, ಸಹಿಗಾಗಿ ಅನೇಕ ಕಡತಗಳನ್ನು ಅವರಿದ್ದಲ್ಲಿಗೆ ತರಬೇಕಾಗುತ್ತದೆ ಮತ್ತು ಅವರು ಈ ನಿಟ್ಟಿನಲ್ಲಿ ಸಮಾಲೋಚಿಸಬೇಕಾಗುತ್ತದೆ, ಅಽಕಾರಿಗಳನ್ನೂ ಭೇಟಿಯಾಗಬೇಕಾಗುತ್ತದೆ.
ನ್ಯಾಯಾಲಯದಿಂದ ಅನುಮತಿ ಸಿಗದ ಹೊರತು, ಕೈದಿಗಳಿಗೆ ಇಂಥ ಸ್ವಾತಂತ್ರ್ಯವು ಲಭ್ಯವಿರುವುದಿಲ್ಲ. ಹೀಗಾಗಿ, ಜೈಲಿನಲ್ಲಿರು ವಾಗ ಓರ್ವ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವುದು ಅವರಿಗೆ ಕಾರ್ಯತಃ ಕಷ್ಟವಾಗುತ್ತದೆ. ೧೯೫೧ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ ೮(೩)ರ ಅನುಸಾರ, ಸಂಸತ್ತಿನ ಅಥವಾ ರಾಜ್ಯ ವಿಧಾನಸಭೆಯ ಹಾಲಿ ಸದಸ್ಯರೊಬ್ಬರು ಯಾವುದೇ ಅಪರಾ ಧದ ಸಂಬಂಧ ತಪ್ಪಿತಸ್ಥರೆಂದು ತೀರ್ಮಾನಿಸಲ್ಪಟ್ಟರೆ ಹಾಗೂ ಎರಡು ವರ್ಷಕ್ಕಿಂತ ಕಮ್ಮಿಯಿಲ್ಲದ ಅವಧಿಗೆ ಜೈಲುಶಿಕ್ಷೆಗೆ ಗುರಿಯಾದರೆ, ಅಂಥ ಸದಸ್ಯರು ಆರು ವರ್ಷಗಳವರೆಗೆ ಅನರ್ಹಗೊಳ್ಳುತ್ತಾರೆ. ಆದರೆ ಅರವಿಂದ್ ಕೇಜ್ರಿವಾಲರ ವಿಷಯ ದಲ್ಲಿನ್ನೂ ಅಪರಾಧ ನಿರ್ಣಯವಾಗಿಲ್ಲ ಮತ್ತು ‘ಆ ಸಂಬಂಧವಾಗಿ’ ಜೈಲುಶಿಕ್ಷೆಯಾಗಿಲ್ಲ.
ದೆಹಲಿಯಲ್ಲಿ ಹುಟ್ಟಿಕೊಂಡಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ರಾಕೇಶ್ ದ್ವಿವೇದಿ ಯವರು ವಿಶ್ಲೇಷಿಸುವುದು ಹೀಗೆ: ‘ಮುಖ್ಯಮಂತ್ರಿ ಎನಿಸಿಕೊಂಡವರು ಓರ್ವ ಸಾಮಾನ್ಯ ಸಚಿವರಲ್ಲ. ಆಡಳಿತದ ವ್ಯವಸ್ಥೆಯ ಜೀವಾಳವೇ ಆಗಿರುವ ಅವರು ಇತರ ಸಚಿವರ ನೇಮಕಕ್ಕೆ ಶಿ-ರಸು ಮಾಡುವಲ್ಲಿನ ಸೂತ್ರಧಾರಿಯೂ ಆಗಿರುತ್ತಾರೆ. ಒಂದೊಮ್ಮೆ ಮುಖ್ಯಮಂತ್ರಿಯ ಬಂಧನವಾದರೆ, ಸದನದ ಹೊಣೆಹೊತ್ತಿರುವ ಮತ್ತು ಅದಕ್ಕೆ ಉತ್ತರದಾಯಿಯಾಗಿರುವ ಸರಕಾರವನ್ನು ಅವರು ನಡೆಸಲಾಗದು. ಸಂವಿಧಾನದಲ್ಲಿನ ನೀತಿ-ನಿಬಂಧನೆಗಳ ಅನುಸಾರ ಅಥವಾ ಸಂವಿಧಾನದ ಪರಿಭಾಷೆ ಯಲ್ಲಿ ಸರಕಾರ ವನ್ನು ನಡೆಸಲಾಗದ ಸ್ಥಿತಿಯೊಂದನ್ನು ಇದು ಸೃಷ್ಟಿಸುತ್ತದೆ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿಯು, ದೆಹಲಿ ಸರಕಾರಕ್ಕೆ ಸೇವೆ ಸಲ್ಲಿಸುತ್ತಿರುವ ಅಧಿಕಾರಿಶಾಹಿಗಳ ವರ್ಗಾವಣೆ ಮತ್ತು ಸ್ಥಾನ ನಿಯೋಜನೆ ಕುರಿತು ವ್ಯವಹರಿಸುವ ‘ನ್ಯಾಷನಲ್ ಸಿವಿಲ್ ಕ್ಯಾಪಿಟಲ್ ಸರ್ವೀಸ್ ಅಥಾರಿಟಿ’ಯ (ಎನ್‌ಸಿಸಿಎಸ್‌ಎ) ಮುಖ್ಯಸ್ಥರೂ ಆಗಿರುವುದರಿಂದ, ಇದು ಚುನಾಯಿತ ಸರಕಾರವು ನಿಯಂತ್ರಿಸುತ್ತಿರುವ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಾನ ನಿಯೋಜನೆ ಯಲ್ಲಿ ತಾನು ಭಾಗವಹಿಸದಂತಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇಂಥದೇ ತೊಡಕುಗಳು ಎದುರಾದಾಗ, ಮುಖ್ಯಮಂತ್ರಿ ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಸ್ಥಾನದಲ್ಲಿ ಮತ್ತೊಬ್ಬರನ್ನು ನಿಯೋಜಿಸಿದ ಪೂರ್ವನಿದರ್ಶನಗಳೂ ಇವೆ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇಂಥದೊಂದು ಉದಾಹರಣೆ; ಮಾತ್ರವಲ್ಲ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡ ಇಂಥದೊಂದು ತೊಡಕಿನ ವೇಳೆ ತಮ್ಮ ಪತ್ನಿಯನ್ನೇ ಮುಖ್ಯಮಂತ್ರಿಯಾಗಿ
ನಿಯೋಜಿಸಿದ್ದಿದೆ.
ಈ ಪ್ರಕರಣದಲ್ಲಿ, ಒಂದೊಮ್ಮೆ ಕೇಜ್ರಿವಾಲರು ರಾಜೀನಾಮೆ ನೀಡದಿದ್ದರೆ, ರಾಷ್ಟ್ರಪತಿ ಆಳ್ವಿಕೆ ಯನ್ನು ಹೇರಲು ಕೇಂದ್ರವು ಯತ್ನಿಸಬಹುದು. ದೆಹಲಿ ಸರಕಾರವು ದಕ್ಷತೆಯಿಂದ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ, ಸಿಎಂ ಜೈಲಿನಲ್ಲಿರದೆ
ಅದರ ಹೊರಗಿರಬೇಕು, ಕನಿಷ್ಠ ಪಕ್ಷ ಜಾಮೀನಿನ ಮೇಲೆ ಇರಬೇಕು. ಸಾರ್ವಜನಿಕ ನೈತಿಕತೆ ಮತ್ತು ಸಾಂವಿಧಾನಿಕ ನೈತಿಕತೆಯ ಅನುಸಾರ ಮುಖ್ಯಮಂತ್ರಿಯು ರಾಜೀನಾಮೆ ನೀಡಬೇಕಾಗುತ್ತದೆ.
ಕೇಜ್ರಿವಾಲರು ಒಂದೊಮ್ಮೆ ತಮ್ಮ ಈಗಿನ ಕಾರ್ಯವೈಖರಿಯನ್ನೇ ಮುಂದುವರಿಸಿದರೆ, ಕೇಂದ್ರ ಸರಕಾರಕ್ಕೆ ರಾಷ್ಟ್ರಪತಿ ಆಳ್ವಿಕೆ ಯನ್ನು ವಿಧಿಸಲು ಅರ್ಹತೆ ಸಿಕ್ಕಂತಾಗುತ್ತದೆ’. ಈ ವಿಷಯಕ್ಕೆ ಸಂಬಂಧಿಸಿ ಆಚಾರಿ ಅವರು ಹೀಗೆನ್ನುತ್ತಾರೆ: ‘ರಾಷ್ಟ್ರಪತಿ ಆಳ್ವಿಕೆಯು ಹೇರಲ್ಪಡುವ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಮುಖ್ಯಮಂತ್ರಿಯ ಬಂಧನವು ರಾಷ್ಟ್ರಪತಿಗಳ ಆಳ್ವಿಕೆ ಹೇರಲು ಅನುವುಮಾಡಿಕೊಡುವ ಒಂದು ದುರ್ಬಲತೆಯಲ್ಲ, ಆದರೆ ಕೇಜ್ರಿವಾಲರು ಮುಕ್ತವಾಗಿ ಕಾರ್ಯನಿರ್ವಹಿಸುವುದಕ್ಕೆ ಜೈಲು ಕೈಪಿಡಿಯ ನಿಯಮಗಳು ಅನುಮತಿಸದಿದ್ದರೆ, ‘ಮುಖ್ಯಮಂತ್ರಿಯು ಕಾರ್ಯಕಾರಿಯಲ್ಲದವರು’ ಎಂದು ಕೇಂದ್ರ ಸರಕಾರವು ತೀರ್ಮಾನಿಸಬಹುದು.
ಜತೆಗೆ, ದೆಹಲಿ ಸರಕಾರವನ್ನು ೨೩೯ಎಎ ವಿಧಿಯ (ಚುನಾಯಿತ ಶಾಸನಸಭೆಗೆ ಸಂಬಂಧಿಸಿದಂತೆ ದೆಹಲಿಗೆ ಒದಗಿಸಲಾಗಿರುವ ವಿಶೇಷ ನಿಬಂಧನೆಗಳು/ ಮುನ್ನೇರ್ಪಾಡುಗಳು) ಅನುಸಾರವಾಗಿ ನಡೆಸಲಾಗುತ್ತಿಲ್ಲವಾದ್ದರಿಂದ, ಅಲ್ಲೊಂದು ಬಿಕ್ಕಟ್ಟು ತಲೆದೋರಿದೆ’. ಸಂವಿಧಾನದ ೨೩೯ ಎಬಿ ವಿಽಯು, ರಾಷ್ಟ್ರಪತಿಗಳು ಇಂಥದೊಂದು ಶಿಫಾರಸು ನೀಡುವುದಕ್ಕೆ ಅವಕಾಶ
ಕಲ್ಪಿಸುತ್ತದೆ. ಈ ವಿಧಿ ಹೀಗೆನ್ನುತ್ತದೆ: ‘ಒಂದೊಮ್ಮೆ ಲೆಫ್ಟಿನೆಂಟ್ ಗವರ್ನರ್‌ರಿಂದ ಅಥವಾ ಇನ್ನಾವುದೇ ರೀತಿಯಲ್ಲಿ ವರದಿ ಯನ್ನು ಸ್ವೀಕರಿಸಿದ ನಂತರ, ೨೩೯ ಎಎ ವಿಧಿಯ ನಿಬಂಧನೆಗಳಿಗೆ ಅಥವಾ ಆ ವಿಧಿಯಡಿ ರೂಪಿಸಲಾದ ಯಾವುದೇ ಕಾನೂನಿನ ನಿಬಂಧನೆಗಳಿಗೆ ಅನುಸಾರವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಟಿ) ಆಳ್ವಿಕೆಯನ್ನು ನಡೆಸಲಾಗದಂಥ ಪರಿಸ್ಥಿತಿ ಯೊಂದು ಉದ್ಭವಿಸಿದೆ ಅಥವಾ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸೂಕ್ತ ಆಡಳಿತಕ್ಕಾಗಿ ಇದು ಅಗತ್ಯವಾಗಿದೆ ಎಂಬುದು ರಾಷ್ಟ್ರಪತಿಗಳಿಗೆ ದೃಢಪಟ್ಟಲ್ಲಿ ಇಂಥ ಶಿಫಾರಸು ಅವಶ್ಯಕವಾಗಿರುತ್ತದೆ ಅಥವಾ ಹಾಗೆ ಮಾಡುವುದು ಯಥೋಚಿತ ವಾಗಿರುತ್ತದೆ’.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರು ಈ ವಿಷಯದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಹೀಗಿದೆ: ‘ಇದು ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಲ್ಲ. ದೆಹಲಿ ಸರಕಾರಕ್ಕೆ ಸಂಪೂರ್ಣ ಬಹುಮತವಿರುವುದರಿಂದ ಅಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಹೇರಲ್ಪಡುತ್ತದೆ ಎಂದು ನನಗನಿಸುವುದಿಲ್ಲ. ಇಂಥದೊಂದು ಸನ್ನಿವೇಶ ಈ ಹಿಂದೆ ನ್ಯಾಯಾಲಯದಲ್ಲಿ ವಿಚಾರಣೆಗೆ
ಬಂದಿಲ್ಲ ಹಾಗೂ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಯಾವುದೇ ನಿರ್ಧಾರವು ದೆಹಲಿ ನಾಗರಿಕರು ನೀಡಿದ ಜನಾದೇಶದ ಮೇಲೆ ಪರಿಣಾಮ ಬೀರುತ್ತದೆ.
ಮಾತ್ರವಲ್ಲದೆ, ದೆಹಲಿಯ ಆಡಳಿತದಲ್ಲಿ ಎದ್ದುಕಾಣುವಂಥ ಯಾವುದೇ ಅವ್ಯವಸ್ಥೆ ಇಲ್ಲ, ಏಕೆಂದರೆ ಮತ್ತೋರ್ವ ಮುಖ್ಯಮಂತ್ರಿ ಯನ್ನು ಚುನಾಯಿಸುವ ಆಯ್ಕೆಯು ಆಮ್ ಆದ್ಮಿ ಶಾಸಕಾಂಗ ಪಕ್ಷಕ್ಕೆ ಯಾವಾಗಲೂ ತೆರೆದಿರುತ್ತದೆ. ಮುಖ್ಯಮಂತ್ರಿಯೊಬ್ಬರು ಅಧಿಕಾರದಿಂದ ಕೆಳಗಿಳಿಯುತ್ತಿಲ್ಲ ಎಂಬ ಕಾರಣಕ್ಕಾಗಿ, ಬಹುಮತವಿರುವ ಶಾಸಕಾಂಗ ಪಕ್ಷವೊಂದನ್ನು ಬುಡಮೇಲು
ಮಾಡುವುದಕ್ಕೆ ಯಾವುದೇ ಸಮರ್ಥನೆಯಿರುವುದಿಲ್ಲ. ಇಷ್ಟಾಗಿಯೂ, ಕೇಜ್ರಿವಾಲರು ಅಧಿಕಾರದಲ್ಲಿ ಉಳಿಯಬೇಕೇ ಬೇಡವೇ ಎಂಬ ಕಾನೂನಾತ್ಮಕ ಪ್ರಶ್ನೆಗೆ ಸಂಬಂಧಿಸಿ, ಕೇಂದ್ರ ಸರಕಾರ, ಆಮ್ ಆದ್ಮಿ ಪಕ್ಷ ಅಥವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವವರು ಹೀಗೆ ಯಾವುದೇ ಪಕ್ಷಸ್ಥರು ನ್ಯಾಯಾಲಯದ ಮೊರೆಹೋಗಬಹುದು’.
ಈಗ ಆಮ್ ಆದ್ಮಿ ಪಕ್ಷವು ಯಾವ ಹೆಜ್ಜೆಯನ್ನಿಡಲಿದೆ ಎಂಬುದರ ಮೇಲೆಯೇ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ. ಈ ಕುರಿತು ಹಿರಿಯ ವಕೀಲ ಹಾಗೂ ಸಂವಿಧಾನ ತಜ್ಞ ರಾಕೇಶ್ ದ್ವಿವೇದಿಯವರು ಮಾತು ಮುಂದುವರಿಸುತ್ತಾ, “ಮುಖ್ಯಮಂತ್ರಿ ಯವರು ಜೈಲಿನಲ್ಲಿದ್ದುಕೊಂಡೇ ಆದೇಶಗಳನ್ನು ರವಾನಿಸುತ್ತಿದ್ದಾರೆ ಎಂಬುದನ್ನು ಜಗತ್ತಿಗೆ ತೋರಿಸಲು ‘ಆಮ್ ಆದ್ಮಿ’ಗಳು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಅಷ್ಟನ್ನು ಮಾತ್ರವೇ ಮಾಡಬಲ್ಲರು. ಆದರೆ ಓರ್ವ ಮುಖ್ಯಮಂತ್ರಿಯಾಗಿ ಅವರಿಗೆ ಇನ್ನೂ ಹಲವು ಕಾರ್ಯಭಾರಗಳಿರುವುದರಿಂದ, ಆದೇಶಗಳ ರವಾನೆಯಷ್ಟೇ ಮುಖ್ಯಮಂತ್ರಿಯ ಹೊಣೆಗಾರಿಕೆಯ
ನಿಭಾವಣೆ ಎನಿಸುವುದಿಲ್ಲ. ಒಂದು ವೇಳೆ ಕೇಂದ್ರ ಸರಕಾರವು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದರೂ, ಅದು ಖಂಡಿತವಾಗಿಯೂ ಸದನವನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಮತ್ತು ವಿಸರ್ಜಿಸುವುದಿಲ್ಲ.
ಸರಕಾರವನ್ನು ನಡೆಸಲೆಂದು ಹಾಲಿ ಮುಖ್ಯಮಂತ್ರಿಯ ಬದಲಿಗೆ ಮತ್ತೊಬ್ಬರನ್ನು ಚುನಾಯಿಸುವಂತೆ ಅದು ಆಮ್ ಆದ್ಮಿ ಸರಕಾರವನ್ನು ಕೇಳಬಹುದು. ಅದರ ಶಾಸಕರು ಮುಖ್ಯಮಂತ್ರಿಯಾಗಿ ಯಾರನ್ನಾದರೂ ನೇಮಿಸುವವರೆಗೆ/ಚುನಾಯಿಸು ವವರೆಗೆ ಕೇಂದ್ರದ ಆಡಳಿತವು ಮುಂದುವರಿಯುತ್ತದೆ. ಶಾಸಕರು ಹೀಗೆ ನೇಮಿಸುತ್ತಿದ್ದಂತೆ, ಆ ವ್ಯಕ್ತಿಯು ಪ್ರಮಾಣವಚನ ಸ್ವೀಕರಿಸುತ್ತಾರೆ.
‘ನಾವು ಬೇರೆ ಯಾರನ್ನೂ ನೇಮಿಸುವುದಿಲ್ಲ, ಬದಲಿಗೆ ರಾಷ್ಟ್ರಪತಿ ಆಳ್ವಿಕೆಗೆ ಆಹ್ವಾನ ನೀಡುತ್ತೇವೆ’ ಎಂದು ಅವರು ಹೇಳಿದರೆ ಮಾತ್ರವೇ ಅಲ್ಲಿ ತೊಡಕು/ಜಟಿಲತೆ ಉದ್ಭವಿಸುತ್ತದೆ”. ತಜ್ಞ ದ್ವಿವೇದಿಯವರು ಹೇಳುವಂತೆ, ಕೇಜ್ರಿವಾಲರ ಈ ಜೈಲುವಾಸದ ಪ್ರಕರಣ ಉದ್ಭವಿಸಿರುವ ಸಂದರ್ಭವೂ ಇಲ್ಲಿ ಲೆಕ್ಕಕ್ಕೆ ಬರುತ್ತದೆ. ಎಲ್ಲರಿಗೂ ಗೊತ್ತಿರುವಂತೆ, ಒಂದಿಡೀ ದೇಶವೇ ಸಾರ್ವತ್ರಿಕ ಚುನಾವಣೆಯ ಪರ್ವಕಾಲದಲ್ಲಿರುವುದರಿಂದ, ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಧಾವಂತವನ್ನು ಕೇಂದ್ರ ಸರಕಾರವು ತೋರದಿರಬಹುದು.
ಏಕೆಂದರೆ, ಇಂಥದೊಂದು ಹೆಜ್ಜೆಯಿಡುವ ಮೂಲಕ ಸ್ವತಃ ಮಸಿ ಮೆತ್ತಿಕೊಳ್ಳಲು ಕೇಂದ್ರವು ಬಯಸುವುದಿಲ್ಲ. ಹೀಗಾಗಿ,
ಹೈಕೋರ್ಟ್ ಏನು ಮಾಡಲಿದೆ ಎಂಬುದನ್ನು ನಾವು ಕೂಡ ಕಾದು ನೋಡಬೇಕಾಗಿದೆ. ಜೈದೀಪ್ ಗುಪ್ತಾ ಅವರ ಅಭಿಪ್ರಾಯ ದಂತೆ, ಈ ಚರ್ಚಾವಿಷಯವು ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿಯಲಿದೆ. ಚುನಾವಣೆಯ ಸಮಯದಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ತೊಂದರೆ ನೀಡದಂತೆ ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾ ಲಯಕ್ಕೆ ಸೂಚಿಸಿತ್ತು. ಅಲ್ಲಿಗೆ ನ್ಯಾಯಾಲಯವು ಇಂಥ ಆದೇಶಗಳನ್ನು ನೀಡಬಲ್ಲದು ಎಂದಾಯಿತು. ಆದರೆ ಕೇಜ್ರಿವಾಲರು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ ಮತ್ತು ಅವರ ಬಂಧನ ಹಾಗೂ ಜಾಮೀನು ಸಂಬಂಧಿತ ಪ್ರಶ್ನೆಗಳನ್ನು ನ್ಯಾಯಾಲಯವು ಅಂತಿಮವಾಗಿ ನಿರ್ಧರಿಸುವವರೆಗೂ ಅವರು ಸಂಬಂಧಿತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.
ಕೇಜ್ರಿವಾಲರ ಬಂಧನದ ವಿಷಯವನ್ನು ಚುನಾವಣಾ ಆಯೋಗದ ಸಮ್ಮುಖದಲ್ಲಿ ಪ್ರಶ್ನಿಸಲು ದೇಶದ ವಿಪಕ್ಷಗಳು ಕೂಡ ಯತ್ನಿಸಿದ್ದುಂಟು. ಆದರೆ ತಜ್ಞ ಆಚಾರಿ ಅವರ ಪ್ರಕಾರ, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಶಾಸನಬದ್ಧ ಸಂಸ್ಥೆಗೆ ಹೇಳಿಕೊಳ್ಳು ವಂಥ ಪಾತ್ರವಿಲ್ಲ; ಚುನಾವಣೆಗಳು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ಅಗಾಧ ಅಧಿಕಾರಶಕ್ತಿಯಿದ್ದರೂ, ಅಪರಾಧ ಕಾನೂನಿಗೆ ಸಂಬಂಧಿಸಿದ ವಿಷಯಗಳು ಅದಕ್ಕಿಂತ
ಮಿಗಿಲಾಗಿರುವಂಥವು ಎಂಬುದು ವಾಸ್ತವ. ಹೀಗಾಗಿ ಅಪರಾಧ ನಿರ್ಣಯಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆಗಳು/ನಡಾವಳಿಗಳನ್ನು ಈ ಆಯೋಗವು ನಿರ್ವಹಿಸಲಾಗದು.
ಒಟ್ಟಿನಲ್ಲಿ, ಈ ಕುತೂಹಲಕರ ಚರ್ಚಾವಿಷಯವು ಯಾವ ನಿರ್ಣಾಯಕ ಘಟ್ಟವನ್ನು ಮುಟ್ಟಲಿದೆ ಎಂಬುದನ್ನು ಕಾದುನೋಡು ವಂತಾಗಿದೆ.
(ಕೃಪೆ: ಹಿಂದೂಸ್ತಾನ್ ಟೈಮ್ಸ್)
(ಲೇಖಕರು ಹಿರಿಯ ಪತ್ರಕರ್ತರು)