ತಿಳಿರು ತೋರಣ
ಶ್ರೀವತ್ಸ ಜೋಶಿ
ಅಮೆರಿಕದಲ್ಲಿ 20ನೆಯ ಶತಮಾನದ ಗ್ರೇಟೆಸ್ಟ್ ಫೋಟೊಗ್ರಾಫರ್ ಎಂದು ಪ್ರಖ್ಯಾತನಾಗಿದ್ದ ಯುಸೂಫ್ ಕರ್ಷ್, ಫೋಟೊ ಗ್ರಫಿಯ ಬಗ್ಗೆ ಹೇಳಿರುವ ಮಾತಿದು: : “Look and think before opening the shutter. The heart and mind are the true
lens of the camera.’ ಈಗ 21ನೆಯ ಶತಮಾನದಲ್ಲಿ ಫೋಟೊಗ್ರಫಿಯೆಂದರೆ ಶಟ್ಟರ್ ಓಪನ್ ಮಾಡುವ ಸೀನ್ ಎಲ್ಲ ಇಲ್ಲ; ಈ ಸ್ಮಾರ್ಟ್‌ಫೋನ್ ಯುಗದಲ್ಲಿ ಎಲ್ಲರೂ ಫೋಟೊಗ್ರಾಫರರೇ. ಆದರೆ ಕರ್ಷ್‌ನ ಸೂಕ್ತಿಯ ಎರಡನೆಯ ಭಾಗ ಈಗಲೂ ಸತ್ಯವೇ. ಲಕ್ಷಾಂತರ ಬೆಲೆಬಾಳುವ ಹೈ- ಎಂಡ್ ಕ್ಯಾಮರಾ ಇರಲಿ, ಶೂಟ್ – ಎಟ್ – ಸೈಟ್ ರೀತಿಯ ಪೊಟ್ಟು ಕ್ಯಾಮರಾ ಇರಲಿ, ಸ್ಮಾರ್ಟ್‌ಫೋನ್‌ಅನ್ನೇ ಕ್ಯಾಮರಾ ಆಗಿ ಬಳಸುವುದಿರಲಿ, ಅಂತಿಮವಾಗಿ ಫೋಟೊಗ್ರಾಫರನ ಮನಸ್ಸು ಹೃದಯಗಳೇ ನಿಜವಾದ ಲೆನ್ಸ್.
ಕ್ಲಿಕ್ಕಿಸಿದ ಚಿತ್ರವು ಭಾವಚಿತ್ರ ಅನಿಸಬೇಕಾದರೆ ಭಾವವನ್ನು ಕರಾರುವಾಕ್ಕಾಗಿ ಸೆರೆ ಹಿಡಿಯುವುದು ಕ್ಯಾಮರಾದ ಲೆನ್ಸ್ ಅಲ್ಲ, ಫೋಟೊಗ್ರಾಫರನ ಮನಸ್ಸು ಮತ್ತು ಹೃದಯ. ಅಂದಹಾಗೆ, ಯುಸೂಫ್ ಕರ್ಷ್ ಬಗ್ಗೆ ಒಂದು ಸ್ವಾರಸ್ಯಕರ ಮಾಹಿತಿ ಯೇನೆಂದರೆ ಆತ ಕ್ಲಿಕ್ಕಿಸಿದ ‘ರೋರಿಂಗ್ ಲಯನ್’ ಎಂಬ ಭಾವಚಿತ್ರ, ವಿನ್ಸ್‌ಟನ್ ಚರ್ಚಿಲ್‌ನದು, ತುಂಬ ಪ್ರಖ್ಯಾತ. 1941ರ ಕೊನೆಯಲ್ಲಿ ಕೆನಡಾದ ಪಾರ್ಲಿಮೆಂಟ್ ನೀಡಿದ ಆಹ್ವಾನದ ಮೇರೆಗೆ ವಿನ್ಸ್‌ಟನ್ ಚರ್ಚಿಲ್ ಅಲ್ಲಿಗೆ ಹೋಗಿ ಭಾಷಣ ಮಾಡಿದ್ದ ಸಂದರ್ಭದಲ್ಲಿ ಆಮೇಲೆ ಅಲ್ಲೇ ಒಂದು ಫೋಟೊ ಸೆಷನ್ ನಡೆದದ್ದು. ಚರ್ಚಿಲ್ ಸಾಹೇಬರು ಕೈಯಲ್ಲಿ ಸಿಗಾರ್ ಹಿಡಿದು ಗತ್ತಿನ ಭಾವಚಿತ್ರ ವೊಂದಕ್ಕೆ ಪೋಸ್ ಕೊಟ್ಟು ನಿಂತಿದ್ದರು.
ಫೋಟೊಗ್ರಾಫರ್ ಕರ್ಷ್‌ಗೆ ಅದೇನನಿಸಿತೋ, ಎಕ್ಸ್ ಪೋಷರ್‌ಗೆ ಅರೆಕ್ಷಣ ಮೊದಲು ಚರ್ಚಿಲ್‌ರ ಬಳಿಸಾರಿ ಸಿಗಾರ್ ಅನ್ನು
ಸೆಳೆದುಕೊಂಡು ಪಕ್ಕಕ್ಕಿಟ್ಟ. ಈ ಹಠಾತ್ ಬದಲಾವಣೆಯಿಂದ ಚರ್ಚಿಲ್ ಸಹಜವಾಗಿ ವಿಚಲಿತರಾಗಿ ಸಿಡಿಮಿಡಿಗೊಂಡರು. ಅದೇ ಅಮೃತಘಳಿಗೆ ಎಂದುಕೊಂಡು ಕರ್ಷ್ ಕ್ಯಾಮರಾ ಕ್ಲಿಕ್ಕಿಸಿಯೇಬಿಟ್ಟ!
‘ಪೋಸ್ ಕೊಟ್ಟ ಪಟ’ ಆಗಬೇಕಿದ್ದದ್ದು ವಿನ್ಸ್‌ಟನ್ ಚರ್ಚಿಲ್‌ರ ಒಂದು ‘ಕ್ಯಾಂಡಿಡ್ ಪಿಕ್ಚರ್’ ಆಯ್ತು. ಚರ್ಚಿಲ್ ಎಂದೊಡನೆ
ಜನರ ಮನಸ್ಸಿಗೆ ಬರುವ ಸಿಡುಕು ಮೋರೆಯ ಮನುಷ್ಯ ಎಂಬ ಭಾವನೆ, ಮುಖ್ಯವಾಗಿ ಜೀವಂತಿಕೆ ಚಿತ್ರದಲ್ಲಿ ಭರಪೂರ ಇತ್ತು.
‘ರೋರಿಂಗ್ ಲಯನ್’ ಹೆಸರಿನಿಂದ ಅದು ವಿಶ್ವವಿಖ್ಯಾತ ವಾಯ್ತು. 1945ರಲ್ಲಿ ‘ಲೈಫ್’ ಪತ್ರಿಕೆಯ ಮುಖಪುಟ ವನ್ನಲಂಕರಿಸಿದ್ದ ಆ ಚಿತ್ರ ಈಗಲೂ ಕೆನಡಾದ ಸಂಸತ್‌ಭವನದಲ್ಲಿ ರಾರಾಜಿಸುತ್ತಿದೆ.
ಅಂಥದೊಂದು ಪೀಠಿಕೆಯೊಂದಿಗೆ ಇಂದಿನ ಅಂಕಣದಲ್ಲಿ ಫೋಟೊಗ್ರಫಿಯನ್ನು ಕುರಿತಾಗಿ ಒಂದು ಲಘು ಲಹರಿಯನ್ನು ಹರಿಸ ಬೇಕೆಂದಿದ್ದೇನೆ. ಮೊದಲೇ ಹೇಳಿಬಿಡುತ್ತೇನೆ. ನಾನು ಫೋಟೊಗ್ರಫಿಯಲ್ಲಿ ಎಕ್ಸ್‌ಪರ್ಟ್ ಅಲ್ಲ. ಎಕ್ಸ್‌ಪರ್ಟ್ ಬಿಡಿ, ಅಭ್ಯಾಸಿ ಹವ್ಯಾಸಿ ಅಮೆಚೂರ್ ಕೂಡ ಅಲ್ಲ. ಫೋಟೊದಲ್ಲಿ ಕಾಣಿಸಿಕೊಳ್ಳಬೇಕೆಂಬ ಹುಚ್ಚು – ಬೇರೆಯವರಿಂದ ಫೋಟೊ ತೆಗೆಸಿ ಕೊಳ್ಳುವುದಿರಲಿ selfie ಕ್ಲಿಕ್ಕಿಸುವುದಿರಲಿ – ನನಗಿಲ್ಲ.
ಇದುವರೆಗೆ ಬೆರಳೆಣಿಕೆಯ selfieಗಳನ್ನು ಕ್ಲಿಕ್ಕಿಸಿದ್ದೇನೋ ಇಲ್ಲವೋ. 15 ವರ್ಷಗಳ ಹಿಂದೆ ಫೇಸ್‌ಬುಕ್ ಖಾತೆ ತೆರೆದಾಗ ಏರಿಸಿದ್ದ ಒಂದು ಮಾಮೂಲಿ ಪ್ರೊಫೈಲ್ ಪಿಕ್ಚರ್ ಆಮೇಲೆ ಬದಲಾಯಿಸಿಲ್ಲವೆಂದರೆ ನನ್ನ ಫೋಟೊ – ಕ್ರೇಜ್ ಎಷ್ಟರ ಮಟ್ಟಿನದೆಂದು ಅಂದಾಜಾದೀತು. ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣ ದೊಂದಿಗೆ ಪ್ರಕಟವಾಗುವ ಭಾವಚಿತ್ರವಾದರೂ ಅಷ್ಟೇ. ಪತ್ರಿಕೆಯವರು ಅಪೇಕ್ಷಿಸಿದ್ದರಿಂದಾಗಿ ಈ ಆರು ವರ್ಷಗಳಲ್ಲಿ ಒಂದೆರಡು ಸಲ ಬದಲಾಯಿಸಬೇಕಾಯಿತು. ಈಗ್ಗೆ ಮೂರು ವರ್ಷಗಳಿಂದ ಇರುವ ಈ ಭಾವಚಿತ್ರದಲ್ಲಿ ‘ನಿಮ್ಮ ಎಡ ಕಿವಿಯ ಸ್ವಲ್ಪ ಭಾಗವನ್ನು ಇಲಿ ತಿಂದಿದೆಯೇನೋ ಅಂತ ಕಾಣುತ್ತದೆ’ ಎಂದು ಒಂದಿಬ್ಬರು ಓದುಗಮಿತ್ರರು ತಮಾಷೆ ಮಾಡಿದ್ದಿದೆ.
ನನಗದರಲ್ಲಿ ಬೇಸರವೇನೂ ಇಲ್ಲ. ‘ಅರ್ಧ ಅಲ್ಲ ಇಡೀ ಕಿವಿಯನ್ನು ಇಲಿ ತಿಂದರೂ ಅಡ್ಡಿಯಿಲ್ಲ, ನಾನೇನೂ ಕನ್ನಡಕ ಹಾಕ್ಕೊಳ್ಳೋದಿಲ್ಲವಲ್ಲ’ ಎಂದು ನಾನೂ ತಮಾಷೆಯ ಉತ್ತರ ಕೊಡುತ್ತೇನೆ. ಇರಲಿ, ಏನು ಹೇಳಲಿಕ್ಕೆ ಹೊರಟಿದ್ದೆನೆಂದರೆ, ಫೋಟೊಗ್ರಫಿಯ ಬಗೆಗಿನ ಈ ಲಹರಿಯಲ್ಲಿ ನನ್ನಿಂದ ನಿಮಗೆ ಯಾವುದೇ ಟಿಪ್ಸ್ ಏಂಡ್ ಟ್ರಿಕ್ಸ್ ಸಿಗಲಿಕ್ಕಿಲ್ಲ. ಆದರೆ ಒಬ್ಬ ನೋಡುಗನಾಗಿ, ಅಂದರೆ ಬೇರೆಯವರು ಪ್ರಕಟಿಸಿದ ಫೋಟೊಗಳ ವೀಕ್ಷಕನಾಗಿ, ನಾನು ಯಾವ ರೀತಿಯ ಫೋಟೊಗಳನ್ನು ಹೆಚ್ಚು ಇಷ್ಟಪಡುತ್ತೇನೆ, ಯಾವ ಥರದ ಫೋಟೊಗಳು ನನಗೆ ‘ಒಂಥರಾ…’ ಅನಿಸುತ್ತವೆ ಎಂದು ಹಂಚಿಕೊಳ್ಳುತ್ತೇನೆ.
ಅಷ್ಟಾಗಿ ಫೋಟೊಗ್ರಾಫರರರೆಲ್ಲರ ಬಗ್ಗೆ – ಅವರು ವೃತ್ತಿಪರರಿರಲಿ, ಹವ್ಯಾಸಿಗಳಿರಲಿ, ಅಭ್ಯಾಸಿಗಳಿರಲಿ, ಸ್ಮಾರ್ಟ್ ಫೋನಿಗರೇ ಇರಲಿ – ನನಗೆ ಗೌರವವಿದೆ. ಅವರ ಆಸಕ್ತಿ, ಉತ್ಸಾಹ, ತಾಳ್ಮೆ, ತಪಸ್ಸು, ಕೌಶಲ ಯಾವುದನ್ನೂ ನಾನು ಯಾವತ್ತಿಗೂ ಅಲ್ಪವೆಂದು ಪರಿಗಣಿಸುವುದಿಲ್ಲ. ಫೋಟೊ ಆಸ್ವಾದನೆಯಲ್ಲಿ ನನ್ನ ಅಭಿರುಚಿಯ ಸಾರಾಂಶ ಏನೆಂಬುದನ್ನು ಲೇಖನದ ಶೀರ್ಷಿಕೆಯಲ್ಲೇ ತಿಳಿಸಿದ್ದೇನೆ. ಹೌದು, ಪೋಸ್ ಫೋಟೊಗಳಿಗಿಂತ ನನಗೆ ಕ್ಯಾಂಡಿಡ್ ಫೋಟೊಗಳು ತುಂಬ ಇಷ್ಟ.
ಅದರಲ್ಲೂ, ಕ್ಯಾಂಡಿಡ್ ಆಗಿ ಇರಬೇಕಾಗಿದ್ದ ಮತ್ತು ಕ್ಯಾಂಡಿಡ್ ಅನಿಸಬಹುದಾಗಿದ್ದ ಫೋಟೊಗಳಲ್ಲಿನ ವ್ಯಕ್ತಿಗಳು ಕ್ಯಾಮರಾ ದೆಡೆ ನೋಡುತ್ತ ಪೋಸ್ ಕೊಡುವುದು ಭಯಂಕರ ಆರ್ಟಿಫಿಷಿಯಲ್ ಅಂತನಿಸುತ್ತದೆ. ಒಂಥರದ ಹೇವರಿಕೆ ಉಂಟಾಗುತ್ತದೆ.
ಫೇಸ್‌ಬುಕ್‌ನಲ್ಲಿ, ಇನ್ಸ್ಟಾಗ್ರಾಮ್‌ನಲ್ಲಿ, ಪತ್ರಿಕೆ ಗಳಲ್ಲೂ, ಅಂಥವು ದಂಡಿಯಾಗಿ ಕಣ್ಣಿಗೆ ಬೀಳುತ್ತವೆ. ವರಮಹಾಲಕ್ಷ್ಮೀ ವ್ರತ ದಂದು ಮುತ್ತೈದೆಯರನ್ನು ಕರೆದು ಬಾಗಿನ ಕೊಟ್ಟ ಸಂದರ್ಭದ ಫೋಟೊ ಫೇಸ್‌ಬುಕ್‌ನಲ್ಲಿ ಹಾಕುತ್ತಾರೆ. ಅದರಲ್ಲಿ ಮುತ್ತೈದೆಯೂ, ಬಾಗಿನ ಕೊಡುತ್ತಿರುವ ಗೃಹಿಣಿಯೂ ಕ್ಯಾಮರಾದೆಡೆ ನೋಡುತ್ತಿರುತ್ತಾರೆ! ಹಾಗಾ ಬಾಗಿನ ಕೊಡುವುದು?
ಚಾಪೆಯ ಮೇಲೋ ಮಣೆಯ ಮೇಲೋ ಕುಳಿತಕೊಂಡ ಮುತ್ತೈದೆಯ ಮುಖಾರವಿಂದವನ್ನು ಪೂಜ್ಯ ಭಾವದಿಂದ
ನೋಡುತ್ತ, ಕಣ್ಣು – ಕಣ್ಣು ಕಲೆತು ಅಂದರೂ ಸರಿಯೇ, ಗೃಹಿಣಿಯು ಬಾಗಿ ನಿಂತು ಮುತ್ತೈದೆಗೆ ಬಾಗಿನ ಕೊಟ್ಟು ನಮಸ್ಕರಿಸ ಬೇಕು. ಹಾಗೆ ಮಾಡುವಾಗ ಬೇಕಿದ್ದರೆ ಮೂರನೆಯವ ರೊಬ್ಬರು ಫೋಟೊ ಕ್ಲಿಕ್ಕಿಸಲಿ.
ಆದರೆ ಮುತ್ತೈದೆ ಮತ್ತು ಗೃಹಿಣಿ ಕ್ಯಾಮರಾಕಡೆಗೆ ನೋಡಿದ್ರಾ ಅಲ್ಲಿಗೆ ಬಾಗಿನ ಸೋಗಿನದಾಯ್ತು. ಇದು ಒಂದು ಉದಾಹರಣೆ ಯಷ್ಟೇ. ‘ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು’, ‘ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು’, ‘ದೇವರ ಪ್ರಸಾದ ನೀಡಿ ಆಶೀರ್ವದಿಸಿದರು’, ‘ಹುಟ್ಟುಹಬ್ಬದ ಕೇಕ್ ತಿನ್ನಿಸಿದರು’, ‘ಪುಸ್ತಕ ಉಡುಗೊರೆ ಕೊಟ್ಟು ಶುಭ ಹಾರೈಸಿದರು’… ಮುಂತಾದ ಅಡಿಬರಹವಿರುವ ಬಹುತೇಕ ಫೋಟೊಗಳ ಹಣೆಬರಹ ಇದೇ: ಅವ್ಯಾವುದರಲ್ಲೂ ಕೊಡು ವವರು ಮತ್ತು ತೆಗೆದುಕೊಳ್ಳುವವರು ಮುಖ – ಮುಖ ನೋಡುತ್ತಿರುವುದಿಲ್ಲ.
ಕಣ್ಣು – ಕಣ್ಣು ಕಲೆತಿರುವುದಿಲ್ಲ. ಇಬ್ಬರೂ ಫೋಟೊಗ್ರಾಫರನತ್ತ ನೋಡುವುದರಿಂದ ಸಹಜ ಜೀವಂತಿಕೆ ಸತ್ತೇಹೋಗಿರುತ್ತದೆ.
ಕೃತಕತೆಯಷ್ಟೇ ತುಂಬಿತುಳುಕುತ್ತಿರುತ್ತದೆ. ಪುಸ್ತಕ ಉಡುಗೊರೆ ಕೊಡುವುದೆಂದಾಗ ನೆನಪಾಯ್ತು. ನನಗೆ ವಾಟ್ಸಪ್‌ನಲ್ಲಿ ಪರಿಚಿತರಾದ ಸುನೀಲ್ ಹಳೆಯೂರು ಎಂಬೊಬ್ಬ ಸ್ನೇಹಿತರಿದ್ದಾರೆ. ಬೆಂಗಳೂರಿನಲ್ಲಿರುತ್ತಾರೆ. ಹದಿನಾರಾಣೆ ಕನ್ನಡ ಮನಸ್ಸಿನ ಅಪ್ಪಟ ಕನ್ನಡಿಗರು. ಕಳೆದ ಮೂರು ವರ್ಷಗಳಿಂದ ಅವರು ಪ್ರತಿ ನವೆಂಬರ್ ತಿಂಗಳಿಡೀ ಒಂದು ವಿಶೇಷ ವ್ರತವನ್ನು ಆಚರಿಸು ತ್ತಾರೆ. ಕನ್ನಡ ಪುಸ್ತಕ ಬಾಗಿನ ಕೊಡುವ ವ್ರತ.
ನವೆಂಬರ್ ತಿಂಗಳ ಪ್ರತಿದಿನವೂ ಕನ್ನಡದ ಯಾವುದಾದರೂ ಒಂದು ಒಳ್ಳೆಯ ಮೌಲ್ಯಯುತ ಪುಸ್ತಕವನ್ನು ಯಾರಾದರೂ ಒಬ್ಬ ಸತ್ಪಾತ್ರರ ಮನೆಗೆ ಅಥವಾ ಕಚೇರಿಗೆ ಹೋಗಿ ಮಾತನಾಡಿಸಿ ಬಾಗಿನವೆಂದು ಕೊಟ್ಟು ಬರುತ್ತಾರೆ. ಮೂವತ್ತು ದಿನ ಮೂವತ್ತು ಬೇರೆಬೇರೆ ಪುಸ್ತಕಗಳು ಬೇರೆಬೇರೆ ಕನ್ನಡಿಗ/ಕನ್ನಡಿತಿಯರಿಗೆ ಬಾಗಿನದಂತೆ ಕೊಡಲ್ಪಡುತ್ತವೆ.
ಸುನೀಲ್ ಹಳೆಯೂರರ ಈ ವ್ರತ ಗೌರವಾರ್ಹವಾದುದು, ಅನುಕರಣೀಯವಾದುದು. ಬೇರೆ ಯಾವ್ಯಾವುದಕ್ಕೋ ನೀರಿನಂತೆ
ದುಡ್ಡು ಖರ್ಚುಮಾಡುವಾಗ ಕನ್ನಡ ಅಕ್ಷರಪ್ರೀತಿ ಹೆಚ್ಚಿಸಲಿಕ್ಕೆ ಹೀಗೆ ಒಂದಿಷ್ಟು ಅರ್ಥ – ವ್ಯಯ ಆದರೂ ಅರ್ಥಪೂರ್ಣವೇ. ಸರಿ,
ವಿಷಯ ಏನೆಂದರೆ, ಪುಸ್ತಕ ಬಾಗಿನ ಕೊಡುತ್ತಿರುವ ಫೋಟೊ ವನ್ನು, ಆ ಪುಸ್ತಕದ ಕಿರುಪರಿಚಯ ಮತ್ತು ಬಾಗಿನ ಸ್ವೀಕರಿಸಿದ
ವ್ಯಕ್ತಿಯ ಕಿರುಪರಿಚಯದೊಂದಿಗೆ, ಸುನೀಲ್ ತನ್ನ ಕೆಲವು ಆಯ್ದ ಬಂಧುಮಿತ್ರರೊಡನೆ ವಾಟ್ಸಪ್‌ನಲ್ಲಿ ಪ್ರತಿದಿನವೂ ಹಂಚಿ ಕೊಳ್ಳುತ್ತಾರೆ.
ಪ್ರಚಾರಕ್ಕಂತ ಅಲ್ಲ, ಆದರೆ ಬೇರೆಯವರಿಗೆ ಪ್ರೇರಣೆ ಸಿಕ್ಕಿದರೆ ಒಳ್ಳೆಯದೇ ತಾನೆ? ಆರಂಭದ ವರ್ಷದಲ್ಲಿ ಆ ಫೋಟೊಗಳೆಲ್ಲವೂ ಮೇಲೆ ಹೇಳಿದಂತೆ – ಮುಖಮುಖ ನೋಡದೆ ಕಣ್ಣುಕಣ್ಣು ಕಲೆತುಕೊಳ್ಳದೆ ಫೋಟೊಗ್ರಾಫರನತ್ತ ನೋಡುತ್ತ ಪೋಸ್ ಕೊಟ್ಟ
ರೀತಿಯವು ಇರುತ್ತಿದ್ದವು. ಸುನೀಲ್‌ರನ್ನು ನಾನು ಮುಖತಃ ಭೇಟಿಯಾದವನಲ್ಲ, ಫೋನ್‌ನಲ್ಲೂ ಇದುವರೆಗೆ ಮಾತಾಡಿಲ್ಲ.
ವಾಟ್ಸಪ್ ಸ್ನೇಹ ಮಾತ್ರ. ಆದರೂ ಒಂದುದಿನ ಧೈರ್ಯ ತಂದುಕೊಂಡು ಅವರಿಗೆ ತಿಳಿಸಿದೆ: ‘ನಿಮ್ಮ ಈ ಅಭಿಯಾನದ ಬಗ್ಗೆ
ನನಗೆ ತುಂಬು ಅಭಿಮಾನ ಇದೆ. ಅನ್ಯಥಾ ಭಾವಿಸುವುದಿಲ್ಲವಾದರೆ ಒಂದು ಸಲಹೆ ಕೊಡುತ್ತೇನೆ.
ಪುಸ್ತಕ ಬಾಗಿನ ಕೊಡುವ ಫೋಟೊ ‘ಪೋಸ್ ಕೊಟ್ಟದ್ದು’ ಆಗಿರದೆ ಸಾಧ್ಯವಾದಷ್ಟೂ ಮಟ್ಟಿಗೆ ‘ಕ್ಯಾಂಡಿಡ್’ ಆಗಿರಲಿ. ಬಾಗಿನ ಎಷ್ಟು ಭಾವಪೂರ್ಣವಾಗಿರುತ್ತದೆ ಎಂದು ನೀವೇ ಗಮನಿಸುವಿರಂತೆ’ ಎಂದೆ. ನನ್ನ ಪುಣ್ಯಕ್ಕೆ ಸುನೀಲ್ ಅದನ್ನು ಮುಕ್ತ ಮನಸ್ಸಿ ನಿಂದ ಸ್ವೀಕರಿಸಿದರು. ಮಾರನೆಯ ದಿನದಿಂದಲೇ ಫೋಟೊ ಶೈಲಿ ಬದಲಾಯಿತು. ಕಳೆದೆರಡು ವರ್ಷಗಳ 60 ಫೋಟೊ ಗಳಲ್ಲಿ ಒಂದೂ ‘ಕ್ಯಾಮರಾದೆಡೆ ನೋಡುತ್ತ ಪೋಸ್ ಕೊಟ್ಟದ್ದು’ ಇರಲಿಲ್ಲ.
‘ಪೋಸ್ ಕೊಟ್ಟ ಫೋಟೊಗಳು ಎಷ್ಟು ನಿರ್ಜೀವ ಎಂದು ನನಗೇ ಈಗ ಅನಿಸುತ್ತಿದೆ’ ಎಂದು ಸುನೀಲ್ ತಿಳಿಸಿದಾಗ ನನ್ನಲ್ಲೊಂದು ಧನ್ಯತಾಭಾವ. ನನ್ನ ಹೆಚ್ಚುಗಾರಿಕೆ ಅಲ್ಲ. ಪುಸ್ತಕ ಬಾಗಿನ ಕೊಡುವುದರ ಹಿಂದಿರುವ ಭಾವಪೂರ್ಣತೆಯನ್ನು ಆ ಚಿತ್ರಗಳು ಜತನದಿಂದ ಕಾಪಿಟ್ಟಿವೆ, ಕೊಂದಿಲ್ಲ. ಪುಸ್ತಕಗಳದೇ ವಿಚಾರ ಮುಂದುವರಿಸುವುದಾದರೆ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿರುವ ರೆಲ್ಲರೂ ಆಗತಾನೆ ಬಿಡುಗಡೆಯಾದ ಪುಸ್ತಕದ ಒಂದೊಂದು ಪ್ರತಿಯನ್ನು ಮುಖಪುಟ ಕಾಣುವಂತೆ ಎರಡೂ ಕೈಗಳಿಂದ ಹಿಡಿದುನಿಲ್ಲುವ ಭಂಗಿ. ಕಳ್ಳತನ ಆರೋಪದಲ್ಲಿ ಬಂಧಿತರಾದವರು ಪೊಲೀಸ್ ಸ್ಟೇಷನ್‌ನಲ್ಲಿ ಸ್ಲೇಟ್ ಹಿಡಿದುಕೊಂಡು ನಿಲ್ಲುತ್ತಾರಲ್ವಾ ಹಾಗೆ. ಯಬ್ಬಾ ಅದನ್ನಂತೂ ನೋಡಿನೋಡಿ ಸಾಕಾಗಿ ಹೋಗಿದೆ.
ನೋಡಿ ಮಾತ್ರವಲ್ಲ, ನನ್ನ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ನಾನೂ ಹಾಗೆ ಹಿಡಿದುಕೊಂಡು ನಿಂತವನೇ, ಒಲ್ಲದ ಮನಸ್ಸಿ ನಿಂದ. ಈ ಏಕತಾನತೆಯನ್ನು ಹೇಗಾದರೂ ಮಾಡಿ ಬದಲಾಯಿಸಲಿಕ್ಕೆ ಸಾಧ್ಯವಿಲ್ಲವೇ? ನನಗೆ ನೆನಪಿರುವಂತೆ 2010ರಲ್ಲಿ ನನ್ನ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಮಾ| ಹಿರಣ್ಣಯ್ಯನವರು ಆ ರೀತಿ ಸ್ಲೇಟು ಹಿಡಿದ ಕೈದಿಯಂತೆ ನಿಲ್ಲಲಿಲ್ಲ.
ಬದಲಿಗೆ ಎರಡೂ ಕೈಗಳಲ್ಲಿ ಒಂದೊಂದು ಪುಸ್ತಕವನ್ನು ತೆರೆದು ಕೈಗಳನ್ನು ಭುಜಗಳವರೆಗೆ ಮೇಲಕ್ಕೆತ್ತಿ ಹಿಡಿದಿದ್ದರು. ಅಲ್ಲೊಂದು ಜೀವಂತಿಕೆ ತಂದಿಟ್ಟಿದ್ದರು. ನನಗದು ಇಷ್ಟವಾಯ್ತು. ಇನ್ನೊಂದು, ನನ್ನ ಪ್ರಕಾರ ತೀರ ಅಸಹ್ಯ ಕಾಣುವ ಫೋಟೊ ಸನ್ಮಾನ ಸಮಾರಂಭ ಗಳದ್ದು. ಅದರಲ್ಲೂ ಒಬ್ಬ ವ್ಯಕ್ತಿಯ ಸನ್ಮಾನ ಅಂತಾದರೆ ಮತ್ತಷ್ಟು ದಾರುಣ. ಸನ್ಮಾನಿತರಿಗೆ ಮೈಸೂರುಪೇಟ ತೊಡಿಸಿ, ಶಾಲು ಹೊದೆಸಿ, ಕೈಗಳಲ್ಲಿ ಫಲಕ, ಹಣ್ಣುಗಳ ಬುಟ್ಟಿ, ಹೂಗುಚ್ಛ ಎಲ್ಲವನ್ನೂ ಪೇರಿಸಿ, ವೇದಿಕೆಯ ಮಧ್ಯಭಾಗದ ಒಂದು ಕುರ್ಚಿಯ ಮೇಲೆ ಕುಳ್ಳಿರಿಸುತ್ತಾರೆ. ಅವರ ಹಿಂದಿನಿಂದ ಏನಿಲ್ಲೆಂದರೂ ಎಂಟು, ಹತ್ತು, ಕೆಲವೊಮ್ಮೆ ಹದಿನಾರರವರೆಗೂ ಸಂಖ್ಯೆಯ ಗಣ್ಯರು/ ಪದಾಧಿಕಾರಿಗಳು/ ಕಾಯಕರ್ತರು ನಿಂತುಕೊಂಡಿರುತ್ತಾರೆ.
ಅವರೆಲ್ಲ ಒಟ್ಟಿಗೆ ಬೇಟೆಯಾಡಿ ಈ ‘ಮಿಕ’ವನ್ನು ಸೆರೆಹಿಡಿದರೋ ಎಂಬಂತೆ. ಅದಕ್ಕಿಂತ, ವೇದಿಕೆಯ ಮೇಲೆ ಕುರ್ಚಿಯಲ್ಲಿ ಕುಳಿತ ಸನ್ಮಾನಿತರು, ಅವರಿಗೆ ಸನ್ಮಾನ ಮಾಡುತ್ತಿರುವ ಒಬ್ಬ ಗಣ್ಯರು – ಇವರಿಬ್ಬರೇ ಸನ್ಮಾನದ ಕ್ರಿಯೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿರುವಾಗ, ಫೋಟೊ ಕ್ಲಿಕ್ಕಿಸಿದರೆ ಅದೆಷ್ಟು ಜೀವಂತಿಕೆ ಇರುತ್ತದೆ ಆ ಚಿತ್ರದಲ್ಲಿ! ಸನ್ಮಾನಿತರ ಬಗ್ಗೆಯೂ ಸನ್ಮಾನ ಮಾಡುವವರ ಬಗ್ಗೆಯೂ ಎದೆ ತುಂಬಿ ಬರುತ್ತದೆ ಅದನ್ನು ನೋಡುವಾಗ. ಏನಂತೀರಿ? ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕ್ಯಾಂಡಿಡ್ ಚಿತ್ರಗಳು ಸರಿಹೋಗುವುದಿಲ್ಲ, ಕ್ಯಾಮರಾದತ್ತ ಮುಖ ಮಾಡಿ ಪೋಸ್ ಕೊಟ್ಟದ್ದೇ ಆಗಬೇಕು ಎನ್ನುವುದೇನೋ ನಿಜ. ಪಾಸ್‌ಪೋರ್ಟ್ ಅರ್ಜಿಯ ಜೊತೆಗಿನ ಫೋಟೊ ಯಾವ್ಯಾವುದೋ ಭಂಗಿ ಯಲ್ಲಿದ್ದರೆ ಅರ್ಜಿ ತಿರಸ್ಕೃತ.
ಯಾವುದೇ ಗುರುತುಪತ್ರಕ್ಕೆ ಅಂಟಿಸುವ ಫೋಟೊ ಕೂಡ ನಿರ್ದಿಷ್ಟ ರೀತಿಯದಿರ ಬೇಕಾಗುತ್ತದೆ. ಹೈಸ್ಕೂಲ್‌ನಲ್ಲಿ, ಕಾಲೇಜಿನಲ್ಲಿ ಕೋರ್ಸ್ ಮುಗಿದು ತರಗತಿಯ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರೊಂದಿಗೆ ಇರುವ ಗ್ರೂಪ್ ಫೋಟೊ, ಮದುವೆ ಮತ್ತಿತರ ಸಮಾರಂಭ ಗಳಂದು ಕುಟುಂಬದವರನ್ನೆಲ್ಲ ಒಂದೆಡೆ ಸೇರಿಸಿ ತೆಗೆಯುವ ಗ್ರೂಪ್ ಫೋಟೊ – ಎಲ್ಲರೂ ಫೋಟೊಗ್ರಾಫರನತ್ತ ನೋಡುತ್ತ ಚೀಸ್ ಎಂದು ಕೃತಕ ಮಂದಹಾಸ ತಂದುಕೊಂಡಾದರೂ ಸರಿ ಪೋಸ್ ಕೊಟ್ಟು ನಿಂತವುಗಳೇ ಆಗಬೇಕಾಗುತ್ತದೆ. ಅಂಥವನ್ನು ಕ್ಯಾಂಡಿಡ್ ಆಗಿ ಕ್ಲಿಕ್ಕಿಸುತ್ತೇನೆಂದರೆ ಅಸಾಧ್ಯ ಮತ್ತು ಆಭಾಸ. ಆದರೆ ದೈನಂದಿನ ಬದುಕಿನ ಸಣ್ಣಸಣ್ಣ ಸಂಭ್ರಮಗಳ ಫೋಟೊ ಕ್ಲಿಕ್ಕಿಸುವಾಗ ಕ್ಯಾಂಡಿಡ್ ಆಗಿರುವಂತೆ ನೋಡಿಕೊಳ್ಳಬಹುದಲ್ಲ? ಕೊಟ್ಟಿಗೆಯಲ್ಲಿ ಛಂಗನೆ ಜಿಗಿಯುತ್ತಿರುವ ಪುಟ್ಟ ಕರುವನ್ನು ಮುದ್ದಿಸುವಾಗಿನದೋ, ಶಾಲೆಯಿಂದ ಬಂದ ಮಗುವಿಗೆ ತಿಂಡಿ ಕೊಡುತ್ತ ಆ ದಿನದ ಶಾಲಾ ಚಟುವಟಿಕೆಗಳ ಬಗ್ಗೆ ಕಿವಿಗೊಟ್ಟು ಕೇಳುವಾಗಿನದೋ, ಮೊಮ್ಮಗನು ಕುಳಿತ ಟ್ರೈಸಿಕಲ್ ಅನ್ನು ಅಜ್ಜ ದೂಡುತ್ತಿರುವಾಗಿನದೋ, ಕೈತೋಟದಿಂದ ಕೊಯ್ದುತಂದ ಮಲ್ಲಿಗೆ ಹೂಗಳ ಮಾಲೆ ಕಟ್ಟುತ್ತಿರುವಾಗಿನದೋ, ವರ್ಷಗಳ ಬಳಿಕ ಭೇಟಿಯಾದ ಸ್ನೇಹಿತರು ಬಾಲ್ಯದ ಯಾವುದೋ
ಸವಿ ನೆನಪನ್ನು ಗಹಗಹಿಸಿ ನಗುತ್ತ ಚಪ್ಪರಿಸುವಾಗಿನದೋ, ಗುರುತುಪರಿಚಯವೇ ಇಲ್ಲದ ಯಾರೋ ಅಮಾಯಕರಿಗೆ
ಚಿಕ್ಕದೊಂದು ಸಹಾಯ ಮಾಡುವಾಗಿನದೋ… ಈ ಎಲ್ಲ ಚಿಕ್ಕ ಚಿಕ್ಕ ಆದರೆ ಚಿನ್ನದಂಥ ಕ್ಷಣಗಳ ಫೋಟೊಗಳು ಕ್ಯಾಂಡಿಡ್ ಆಗಿದ್ದರೆ ಅದೆಷ್ಟು ಚೆನ್ನ!
ಫೋಟೊ ಕ್ಲಿಕ್ಕಿಸುತ್ತಾರೆಂದು ಬೇಕಿದ್ದರೆ ಗೊತ್ತಿರಲಿ, ಆದರೆ ಕ್ಯಾಮರಾ ಕಡೆ ನೋಡುತ್ತ ಪೋಸ್ ಕೊಡುವುದಂತೂ ಖಂಡಿತ ಬೇಕಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಾವು ಹಂಚಿಕೊಳ್ಳುವ ನಮ್ಮ ಫೋಟೊಗಳು ‘ಪೋಸ್ ಕೊಟ್ಟ ಪಟ’ಗಳಾಗಿರದೆ ಕ್ಯಾಂಡಿಡ್ ಆಗಿದ್ದರೆ ಒಳ್ಳೆಯದು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಫ್ ಮಾರ್ಕೆಟಿಂಗ್ ಆಗಿರುವ ಜೋನಾಹ್ ಬರ್ಜರ್ ಈ ಬಗ್ಗೆ ಒಂದು ಅಧ್ಯಯನ ನಡೆಸಿದ್ದಾರೆ. ಅದರ ಸಾರಾಂಶ ಇಲ್ಲಿದೆ ಓದಿ: ‘ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಏರಿಸುವವರು ಬಹುತೇಕವಾಗಿ ಪೋಸ್ ಫೋಟೊ ಗಳನ್ನೇ ಆಯ್ದುಕೊಳ್ಳುತ್ತಾರೆ.
ಸಾಧ್ಯವಿದ್ದಷ್ಟು ಚಂದ ಕಾಣುವ, ಸಭ್ಯ ಸಜ್ಜನ ಸ್ನೇಹಮಯಿ ವ್ಯಕ್ತಿಯೆಂದು ಭಾಸವಾಗುವ, ಒಟ್ಟಾರೆಯಾಗಿ ‘ಬೆಸ್ಟ್’ ಇಮೇಜ್
ಅನ್ನು ವ್ಯಕ್ತಪಡಿಸುವ ಫೋಟೊಗಳು. ಅವುಗಳ ವೀಕ್ಷಕರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನೇ ಬೆಳೆಸಿಕೊಳ್ಳುತ್ತಾರೆಂಬ ಭ್ರಮೆ ಈ
ಮಂದಿಯದು. ಆದರೆ ವೀಕ್ಷಕರ ದೃಷ್ಟಿಕೋನ ಬೇರೆಯದೇ ಇರುತ್ತದೆ. ಚಂದವಿಲ್ಲದಿದ್ದರೂ ತೊಂದರೆಯಿಲ್ಲ, ಕ್ಯಾಂಡಿಡ್
ಫೋಟೊಗಳು ನೋಡುಗರ ಮನಸ್ಸನ್ನು ಗೆಲ್ಲುತ್ತವೆ. ಅಂಥ ಫೋಟೊಗಳಲ್ಲೊಂದು ಅಧಿಕೃತತೆ, ಪ್ರಾಮಾಣಿಕತೆ ವ್ಯಕ್ತವಾಗಿದ್ದಿರು ತ್ತದೆ. ಕೊನೆಗೂ ಜನರು ನಿಮ್ಮನ್ನು ಅಳೆಯುವುದು ನಿಮ್ಮ ‘ಬೆಸ್ಟ್’ ಇಮೇಜ್‌ನಿಂದ ಅಲ್ಲ, ನಿಮ್ಮ ‘ರಿಯಲ್’ ಇಮೇಜ್ ನಿಂದ.
ನಿಮ್ಮ ‘ಬೆಸ್ಟ್’ ಕ್ಷಣಗಳಲ್ಲಿ ನೀವು ಹೇಗೆ ಕಾಣುತ್ತಿದ್ದೀರೆಂಬುದು ಮುಖ್ಯವಲ್ಲ, ಒಂದು ಮಾಮೂಲಿ ದಿನದಲ್ಲಿ ನಿಮ್ಮ ಚಟುವಟಿಕೆ
ಹಾವಭಾವ ಎಲ್ಲ ಹೇಗಿರುತ್ತದೆ ಎಂದು ತಿಳಿಸುವ ನಿಮ್ಮ ‘ರಿಯಲ್’ ಕ್ಷಣಗಳಿಂದಷ್ಟೇ ನಿಮ್ಮ ವ್ಯಕ್ತಿತ್ವವನ್ನು ಅಂದಾಜಿಸಲಿ ಕ್ಕಾಗುವುದು. ಹಾಗಂತ, ಪೋಸ್ ಫೋಟೊಗಳು ಇರಲೇಬಾರದೆಂದಲ್ಲ. ಕೆಲವು ಸಂದರ್ಭಗಳಲ್ಲಿ ಅವು ಅನಿವಾರ್ಯ. ಆದರೆ ಯಾದೃಚ್ಛಿಕವಾಗಿ ಒಂದೆರಡು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋಣ ಎಂದು ಮನಸ್ಸಾಯ್ತೋ, ಸಾಧ್ಯವಾದಷ್ಟೂ ಮಟ್ಟಿಗೆ ಅವು ಕ್ಯಾಂಡಿಡ್ ಆಗಿರುವಂತೆ ನೋಡಿಕೊಳ್ಳಿ.
ಅವುಗಳಲ್ಲಿ ಪುಟಿದೇಳುವ ಸಹಜತೆ, ಜೀವಂತಿಕೆಗಳು ನಿಮ್ಮ ಊಹೆಗಿಂತ ಹೆಚ್ಚು ಮೆಚ್ಚುಗೆ ಪಡೆಯುತ್ತವೆ. ನಿಮ್ಮ ಪ್ರಕಾರ ಅವು ಚಂದವಿರಲಿಕ್ಕಿಲ್ಲ. ಆದರೆ ವೀಕ್ಷಕರ ಮೌಲ್ಯಮಾಪನ ಬೇರೆ ಇರುತ್ತದೆ. ನಿಮ್ಮ ಸಹಜ ಹಾವಭಾವ ಅವುಗಳಲ್ಲಿ ಪ್ರಕಟವಾಗುವುದು ಮತ್ತು ವೀಕ್ಷಕರಿಗೆ ಅದೇ ಇಷ್ಟವಾಗುವುದೆಂದು ಗೊತ್ತಿರಲಿ. ಇನ್ನೊಂದು ತೆರನಾಗಿ ಹೇಳಬೇಕೆಂದರೆ – ವಾರ್ನಿಷ್ ಮಾಡಿದ ಮುಖ ಮತ್ತು ವಾರ್ನಿಷ್ ಮಾಡದ ಮುಖ. ಎಲ್ಲರೂ ವಾರ್ನಿಷ್ ಮಾಡಿದ ಮುಖಗಳನ್ನೇ, ಅಂದರೆ ತಮ್ಮತಮ್ಮ ಗ್ರೇಟ್‌ನೆಸ್ಸನ್ನೇ ಪ್ರದರ್ಶಿಸುತ್ತ ಹೋದರೆ? ಕೊನೆಗೊಮ್ಮೆ ಅದರೊಳಗಿನ ಟೊಳ್ಳುತನ ಗೊತ್ತಾಗಿಬಿಡುತ್ತದೆ.
ಆದರೆ ಪ್ರತಿಯೊಬ್ಬರೂ ವಾರ್ನಿಷ್ ಮಾಡದ ಮುಖ ಪ್ರದರ್ಶಿಸಿದರೆ ಅವು ಏಕಪ್ರಕಾರವಾಗಿ ಇರಲಿಕ್ಕೆ ಸಾಧ್ಯವೇ ಇಲ್ಲ. ಸರಳತೆ ಮತ್ತು ಸಹಜತೆ ಗಳಿಂದಾಗಿ ಅಲ್ಲಿ ನೈಜ ಆಕರ್ಷಣೆಗೆ ಅವಕಾಶವಿರುತ್ತದೆ. ಎಷ್ಟೆಂದರೂ ನೀವು ಫೋಟೊಗಳನ್ನು ಹಂಚಿಕೊಳ್ಳು ವುದು ನಿಮ್ಮ ತೃಪ್ತಿಗಲ್ಲ, ಇತರರಿಗೆ ಅವುಗಳಲ್ಲಿ ಆಕರ್ಷಣೆ ಹುಟ್ಟಿಕೊಳ್ಳಲಿ ಎಂದು ತಾನೆ? ಪೋಸ್ ಕೊಟ್ಟ ಫೋಟೊಗಳಿಗಿಂತ ಕ್ಯಾಂಡಿಡ್ ಫೋಟೊಗಳಲ್ಲಿ ಆ ಆಕರ್ಷಣೆ ಹೆಚ್ಚು ಎಂಬುದನ್ನು ಈಗಲೇ ಅರಿತುಕೊಳ್ಳಿ.’