Saturday, 14th December 2024

ನನಗೇಕೆ ಸಾಮಾಜಿಕ ಜಾಲತಾಣ ಒಗ್ಗುವುದಿಲ್ಲ ?

ಬೇಟೆ

ಜಯವೀರ ವಿಕ್ರಮ ಸಂಪತ್‌ ಗೌಡ

ನಾನು ಫೇಸ್‌ಬುಕ್, ಟ್ವಿಟರ್, ಇನ್ಸ್ಟಾ ಗ್ರಾಂ, ಲಿಂಕ್ಡ್ ಇನ್, ಟಂಬ್ಲರ್, ಸ್ನ್ಯಾಪ್ ಚಾಟ್, ಯು ಟ್ಯೂಬ್, ಟೆಲಿಗ್ರಾಮ, ವಾಟ್ಸಾಪ್,
ಸಿಗ್ನಲ್, ಕೂ, ಮೆಸೆಂಜರ್, ಪೋರ್ಟಲ, ಕ್ಲಬ್ ಹೌಸ್… ಹೀಗೆ ಯಾವ ಸಾಮಾಜಿಕ ಜಾಲತಾಣಗಳಲ್ಲೂ ಇಲ್ಲ. ನನಗೂ ಸಾಮಾಜಿಕ ಜಾಲತಾಣಗಳಿಗೂ ಆಗಿ ಬರುವುದಿಲ್ಲ. ನಾನು ಬರೆಯುವ ಅಂಕಣಗಳನ್ನು ಸಂಪಾದಕರು ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗಳಿಂದ ಪೋಸ್ಟ್ ಮಾಡುತ್ತಾರೆ ಎಂಬುದು ಗೊತ್ತು.

ನನ್ನ ಖಾತೆಗಳು ಇಲ್ಲದಿರುವುದರಿಂದ, ಪತ್ರಿಕೆಯಲ್ಲಿ ಓದಲು ಆಗದವರಿಗೆ ಸಿಗಲಿ ಎಂಬ ಕಾರಣದಿಂದ ಅವರು ಹಾಗೆ ಮಾಡುತ್ತಿರ ಬಹುದು ಎಂದು ನಾನು ಭಾವಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಅದನ್ನು ಪೋಸ್ಟ್ ಮಾಡುವುದರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಅದು ಸಂಪಾದಕರ ಗೋಡೆ (Wall)ಯ ಮೇಲೆ ಪ್ರಕಟವಾಗುವುದರಿಂದ, ಅದಕ್ಕೆ ಅವರೇ ಉತ್ತರ ದಾಯಿಗಳು. ನನಗೂ, ಅದಕ್ಕೂ ಸಂಬಂಧವಿಲ್ಲ. ನನ್ನ ಪರವಾಗಿ ಅವರೇ ಬೈಯಿಸಿಕೊಳ್ಳುತ್ತಾರೆ. ಹೊಗಳಿಕೆಯನ್ನು ಅವರೇ ಇಟ್ಟುಕೊಳ್ಳಲಿ. ನನಗೆ ಬೇಡ. ಕೆಲವರು ಭಟ್ಟರು ನನ್ನ ಹೆಸರಿನಲ್ಲಿ ಬರೆಯುತ್ತಿದ್ದಾರೆ ಎಂದು ಅಂದುಕೊಂಡಿದ್ದಾರೆ.

ಚಾರ್ಲ್ಸ್ ಶೋಭರಾಜ್ ಫೋಟೋ ಪ್ರಕಟವಾಗುವವರೆಗೆ ಆ ಹೆಸರಿನ ವ್ಯಕ್ತಿ ಇಲ್ಲ ಎಂದೇ ಜನ ಭಾವಿಸಿದ್ದರು. ನಾನೂ ಹಾಗೆ. ಇದರಿಂದ ನನಗೆ ಒಂಥರಾ ಅನಾಮಧೇಯತ್ವ ಸಿಕ್ಕಿದೆ. ನಾನು ಎದುರಿಗೆ ಹೋದರೂ ಕೆಲವೊಮ್ಮೆ ಯಾರೂ ಗಮನಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲದಿರುವುದು. ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಅಂದ್ರೆ
ಭೂಮಿ ಮೇಲೆಯೇ ಇಲ್ಲ ಎಂದು ಭಾವಿಸುವ ಕಾಲದಲ್ಲಿ ನಾವಿದ್ದೇವೆ.

ಎಲ್ಲರಿಗೂ ಸೋಷಿಯಲ್ ಮೀಡಿಯಾದಲ್ಲಿ ಅಕೌಂಟು ಗಳಿವೆ. ಸಂಪಾದಕರ ಸ್ನೇಹಿತರಾದ ನಂಜನಗೂಡು ಮೋಹನ ಅವರ ಪರಿಚಿತರೊಬ್ಬರು ತಮ್ಮ ನಾಯಿಯ ಹೆಸರಿನಲ್ಲಿ ಕೂಡ ಫೇಸ್ ಬುಕ್ ಮತ್ತು ಟ್ವಿಟರ್ ಅಕೌಂಟುಗಳನ್ನು ತೆರೆದಿದ್ದಾರೆ. ಬೆಳಗಾ ಯಿತೆಂದರೆ, ಜನ ಸೋಷಿಯಲ್ ಮೀಡಿಯಾದಲ್ಲಿ ಹೋಗಿ ಕುಳಿತು ಬಿಡುತ್ತಾರೆ. ಅವರಿಗೆ ಊಟ, ಉಪಾಹಾರ, ನಿದ್ದೆ ಯಾವುದರ ಪರಿವೆಯೂ ಇರುವುದಿಲ್ಲ. ನಾನು ಇಲ್ಲೂ ಇಲ್ಲದಿರುವುದರಿಂದ, ನಾನು ಈ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ ಎಂದು ಅನೇಕರು ಅಂದುಕೊಂಡಿದ್ದಾರೆ. ಈ ಭೂಮಿಗೆ ಅವತರಿಸಿದ ನಂತರ, ನೀವು ಸೋಷಿಯಲ್ ಮೀಡಿಯಾಕ್ಕೆ ಬರಲೇಬೇಕು. ಬಂದ ಮೇಲೆ ಜನ ನಿಮ್ಮ ಇರುವಿಕೆಯನ್ನು ಒಪ್ಪಿಕೊಳ್ಳುತ್ತಾರೆ.

ನಾವು ಇಂದು ಸೋಷಿಯಲ್ ಮೀಡಿಯಾ ಎಂಬ ಕೊಳಗೇರಿಯಲ್ಲಿ ಬದುಕುತ್ತಿದ್ದೇವೆ ಅಂದ್ರೆ ಯಾರೂ ಬೇಸರ ಮಾಡಿಕೊಳ್ಳ
ಬಾರದು. ಕೊಳಗೇರಿಯಲ್ಲಿರುವ ಹಂದಿಗಳಿಗೆ ತಾವು ಕೊಂಪೆಯಲ್ಲಿದ್ದೇವೆ ಎಂದು ಅನಿಸುವುದಿಲ್ಲ. ಅವು ಅಲ್ಲಿಯೇ ಸುಖಿಸುತ್ತಿರು ತ್ತವೆ. ಈ ಜಾಲತಾಣಿಗರೂ ಹಾಗೆ. ಸದಾ ಅಲ್ಲಿಯೇ ಸುತ್ತುತ್ತಿರುತ್ತಾರೆ. ಅದೇನೋ ಕಡಿದು ಕಟ್ಟೆ ಹಾಕಿದ್ದೇವೆ ಎಂದು ಅಂದು ಕೊಳ್ಳುತ್ತಾರೆ. ಅದೇನೋ ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಂಡೆವು ಎಂದು ಭಾವಿಸುತ್ತಾರೆ ಅಥವಾ ಭ್ರಮಿಸುತ್ತಾರೆ.

ಆದರೆ ದಿನದ ಕೊನೆಯಲ್ಲಿ, ಯೋಚಿಸಿದರೆ ಅವರು ಓದಿದ್ದೆ, ಬರೆದಿದ್ದೆಲ್ಲಾ trash. ಕೆಲವರಂತೂ ಫೇಸ್‌ಬುಕ್‌ನಲ್ಲಿ ದಿನಕ್ಕೆ ಐವತ್ತು – ಅರವತ್ತು ಪೋಸ್ಟ್ ಮಾಡುತ್ತಾರೆ. ಅದರ ಹೊರತಾಗಿ ಮತ್ತೇನು ಮಾಡಲು ಅವರಿಗೆ ಸಮಯ ಸಿಗುತ್ತದೆ? ಒಂದು ಪೋಸ್ಟ್ ಹಾಕುತ್ತಿದ್ದಂತೆ, ಯಾರು ಎಷ್ಟು ಲೈಕ್ ಕೊಟ್ಟರು, ಯಾರು ಏನು ಕಾಮೆಂಟ್ ಮಾಡಿದರು, ಅದಕ್ಕೆ ಯಾರು ಪ್ರತಿಕ್ರಿಯಿಸಿದರು ಎಂಬುದನ್ನು ಪದೇ ಪದೆ ಚೆಕ್ ಮಾಡುತ್ತಾ ಇರುತ್ತಾರೆ. ಹೆಚ್ಚು ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ ಪಡೆಯಲು ಏನೇನೋ ಬರೆದು ಪೋಸ್ಟ್ ಮಾಡುತ್ತಾರೆ. ತಮ್ಮದೇ ಫೋಟೋಗಳನ್ನು ಹಾಕಿ ಜನರ ಕಾಮೆಂಟುಗಳನ್ನು ನಿರೀಕ್ಷಿಸುತ್ತಾರೆ.

ಆಗಾಗ ಪ್ರೊಫೈಲ್ ಫೋಟೋ ಬದಲಿಸಿ, ಜನರಿಂದ ಹೊಗಳಿಕೆಗಳನ್ನು ಬಯಸುತ್ತಾರೆ. ಲೈಕ್ ಒತ್ತಲು, ಕಾಮೆಂಟ್ ಮಾಡಲು ಏನೂ ಕೊಡಬೇಕಿಲ್ಲವಲ್ಲ. ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಬರಲಾರಂಭಿಸಿದಂತೆ ಅವರಲ್ಲಿ ತಮ್ಮ ಬಗ್ಗೆ ಏನೋ ಭ್ರಮೆ
ಆವರಿಸಲಾರಂಭಿಸುತ್ತದೆ. ತಾನು ದೊಡ್ಡ ಮನುಷ್ಯ ಎಂದು ಅಂದುಕೊಳ್ಳಲಾರಂಭಿಸುತ್ತಾರೆ. ಒಂದು ವೇಳೆ ಹೆಚ್ಚು ಲೈಕ್ಸ್
ಮತ್ತು ಕಾಮೆಂಟ್ಸ್ ಬರದಿದ್ದರೆ ಕೀಳರಿಮೆಗೆ ತುತ್ತಾಗುವವರೂ ಇದ್ದಾರೆ. ಕಡಿಮೆ ಲೈಕ್ಸ್ ಬರುವವರು, ಹೆಚ್ಚು ಲೈಕ್ಸ್ ಬರಲು
ಏನೆ ಹುಚ್ಚಾಟ ಮಾಡಬೇಕೋ ಅವನ್ನೆ ಮಾಡಲಾರಂಭಿಸುತ್ತಾರೆ.

ಒಟ್ಟಾರೆ ಅವರು ಈ ಕೂಪದಲ್ಲಿ ತೊಳಲಾಡುತ್ತಿರುತ್ತಾರೆ. ಇದನ್ನು ಸಂಪಾದಕ ಭಟ್ಟರು ‘ಬುಲೆಟ್ ಪ್ರಕಾಶ್ ವರ್ಸಸ್ ಬನ್ನಂಜೆ ಗೋವಿಂದಾಚಾರ್ಯ ಸಿಂಡ್ರೋಮ’ ಎಂದು ಕರೆದಿದ್ದಾರೆ. ಬುಲೆಟ್ ಮತ್ತು ಬನ್ನಂಜೆಯವರನ್ನು ಒಂದು ರೂಪಕವಾಗಿ, ಅಕ್ಕ-ಪಕ್ಕದಲ್ಲಿ ನಿಲ್ಲಿಸಿದರೆ, ಬುಲೆಟ್ ಪ್ರಕಾಶ ಪಕ್ಕದಲ್ಲಿ ನಿಂತು ತೊಂಬತ್ತೈದು ಜನ ಸೆಲ್ಫಿ ತೆಗೆಸಿಕೊಂಡರೆ, ಬನ್ನಂಜೆಯವರ ಪಕ್ಕದಲ್ಲಿ ನಿಂತು ಐದು ಜನ ತೆಗೆಸಿಕೊಳ್ಳಬಹುದು. ಸೆಲಿ ತೆಗೆಸಿಕೊಂಡ ಜನರ ಸಂಖ್ಯೆಯೇ ಮಾನದಂಡವಾದರೆ, ಜನಪ್ರಿಯತೆ ಯನ್ನು ಅಳೆಯುವುದಾದರೆ, ಬುಲೆಟ್ ಪ್ರಕಾಶ್ ಬನ್ನಂಜೆಯವರಿಗಿಂತ ಪಾಪ್ಯೂಲರ್.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್ ಮತ್ತು ಫಾಲೋವರ್ಸ್ ಹೊಂದಿರುವವರು ಸಹ ಹೀಗೇ ಆಗಿದ್ದಾರೆ. ಫಾಲೋ ಮಾಡುವವರು, ಲೈಕ್ಸ್ ಕೊಡುವವರು ಯಾರು ಎಂಬುದು ಗೊತ್ತಾಗುವುದಿಲ್ಲ. ಆದರೆ ಬುಲೆಟ್ಟು ಮತ್ತು ಬನ್ನಂಜೆಯವರ ಮಧ್ಯೆ ಹೋಲಿಕೆ ಸಾಧ್ಯವಾ? ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನವರು ಬುಲೆಟ್ಟು ಪ್ರಕಾಶಂದಿರು!

ಪಾಪ, ಬನ್ನಂಜೆಯವರಿಗೆ ಇವೆ ಅರ್ಥವೇ ಆಗುವುದಿಲ್ಲ. ಅವರು ತಮ್ಮ ಪಾಡಿಗೆ ಅಧ್ಯಯನ ನಿರತರು. ಅವರಿಗೆ ಇವ್ಯಾವುದೂ ಬೇಕಿಲ್ಲ. ಆದರೆ ಜನರ ಕಣ್ಣಲ್ಲಿ ಹೆಚ್ಚು ಸೆಲ್ಫಿ ತೆಗೆಸಿಕೊಂಡವರು, ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡವರು, ಕಾಮೆಂಟ್ ನಮೂದಾ ಗಿದ್ದು ಬುಲೆಟ್ ಗೆ. ಹೀಗಾಗಿ ಅವರೇ ಇವರಿಗಿಂತ ಗ್ರೇಟ್. ಹೀಗಾಗಿ ನೆಟ್ ಪ್ರಪಂಚದಲ್ಲಿದ್ದವರು, ಅದೇ ಸರ್ವಸ್ವ ಎಂದು ಭಾವಿಸಿರುವವರಿಗೆ ಬನ್ನಂಜೆಯವರ ಹೆಸರು ಗೊತ್ತಿರಲಿಕ್ಕಿಲ್ಲ.

ಲೈಕ್ಸ್ ಮತ್ತು ಫಾಲೋವರುಗಳ ಆಧಾರದ ಮೇಲೆ ವ್ಯಕ್ತಿಗಳನ್ನು ಅಳೆಯಲಾರಂಭಿಸಿದರೆ ಇಂಥ ಯಡವಟ್ಟುಗಳಾಗುತ್ತವೆ ಮತ್ತು ಸೋಷಿಯಲ್ ಮೀಡಿಯಾಗಳು ಇದನ್ನೇ ಮಾಡುತ್ತಿವೆ. ಅದಕ್ಕಾಗಿಯೇ ಸೋಷಿಯಲ್ ಮೀಡಿಯಾ ಕೊಳಗೇರಿಗಳಾಗಿರುವುದು. ಅದಕ್ಕಾಗಿಯೇ ಜನ ಕೀಳುಮಟ್ಟದ ಕಾಮೆಂಟುಗಳನ್ನು ಬರೆಯುವುದು. ಲಂಡನ್ ಒಂದು ಅದ್ಭುತ ನಗರ, ಆದರೆ ಲಂಡನ್ ಜನ
ಅದನ್ನು ಹಾಳು ಮಾಡಿzರೆ ಎಂಬ ಮಾತಿದೆ. ಈ ಮಾತನು ಸಾಮಾಜಿಕ ಜಾಲತಾಣಗಳಿಗೂ ಹೇಳಬಹುದು. ಸಾಮಾಜಿಕ
ಜಾಲತಾಣದಂಥ ಅದ್ಭುತ ವೇದಿಕೆ ಮತ್ತೊಂದಿಲ್ಲ. ಆದರೆ ಅಲ್ಲಿ ಎಂಥೆಂಥವರೋ ಸೇರಿಕೊಂಡು, ಅದನ್ನು ಗಬ್ಬೆಬ್ಬಿಸಿದ್ದಾರೆ.

ನೀವು ಒಂದು ಒಳ್ಳೆಯ ಪೋಸ್ಟ್ ಬರೆದರೆ, ತಕ್ಷಣ ಯಾವನೋ ಉಪದ್ವ್ಯಾಪಿ ಬೆಣೆ ಕೀಳುತ್ತಾನೆ. ಅವನಿಗೆ ಸಂಬಂಧವೇ ಇಲ್ಲದ ವಿಷಯ ಗೀಚುತ್ತಾನೆ. ಉದಾಹರಣೆಗೆ, ನೀವು ಪ್ರಾಮಾಣಿಕತೆ ಬಗ್ಗೆ ಬರೆದರೆ, ‘ನೀನೇನು ಸತ್ಯ ಹರಿಶ್ಚಂದ್ರನಾ?’ ಎಂದು ಕೇಳುತ್ತಾನೆ.
ಮೂಲತಃ ಅವನಿಗೆ ನಿಮ್ಮ ಪರಿಚಯವೇ ಇರುವುದಿಲ್ಲ. ಅದನ್ನು ಓದುವ ಸಹನೆಯೂ ಇರುವುದಿಲ್ಲ. ಅವನಿಗೆ ನಿಮ್ಮ
ಕಾಲೆಳೆಯಬೇಕು, ಅಷ್ಟೇ ಸಮಾಧಾನ. ಆತ ನಿಮ್ಮ ಮೇಲೆ ರಾಡಿ ಎರಚುವುದರಿಂದ ಕಳೆದುಕೊಳ್ಳುವುದೇನೂ ಇಲ್ಲ. ಯಾರು
ತಾನು ಮಾಡುವ ಕಾಮೆಂಟುಗಳಿಗೆ ಬಾಧ್ಯಸ್ಥನಾಗಿರುವುದಿಲ್ಲವೋ, ಆತ ಏನನ್ನು ಬೇಕಾದರೂ ಹೇಳುತ್ತಾನೆ.

ಸೈಬರ್ ಕಾನೂನು ಇನ್ನೂ ಬಾಲ್ಯಾವಸ್ಥೆಯಲ್ಲಿರುವ ನಮ್ಮ ದೇಶದಲ್ಲಿ ಏನು ಹೇಳಿಯಾದರೂ ದಕ್ಕಿಸಿಕೊಳ್ಳುತ್ತಾನೆ ಮತ್ತು ಅವನನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರೆ, ತನ್ನ ಕಸುಬನ್ನು ಬೇರೆ ಯಾವುದಾದರೂ ಮಾರ್ಗದಲ್ಲಿ ಮುಂದು ವರಿಸಿರು ತ್ತಾನೆ. ಹೀಗಾಗಿ ಸಾಮಾಜಿಕ ಜಾಲತಾಣ ಜವಾಬ್ದಾರಿಯುತ ಮಾಧ್ಯಮವಾಗಿ ಉಳಿದಿಲ್ಲ. ಹಾಗಂತ ಇಲ್ಲಿರುವ ಎಲ್ಲರೂ
ಹಾಗೆ ಎಂದು ಹೇಳುತ್ತಿಲ್ಲ. ನಾನು ಲಂಡನ್ ನಗರವನ್ನು ದೂರುತ್ತಿಲ್ಲ, ಲಂಡನ್ನಿಗರನ್ನು. ಅವರಲ್ಲೂ ಒಳ್ಳೆಯವರು
ಇದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಮೊನ್ನೆ ನನಗೆ ನಂಜನಗೂಡು ಮೋಹನ್ ಅವರು ನನಗೆ ಒಂದು ಸ್ಕ್ರೀನ್ ಶಾಟ್ ಕಳಿಸಿದ್ದರು. ನಾವಿಬ್ಬರೂ ಅದರ ಬಗ್ಗೆಯೇ ಮಾತಾಡಿದೆವು. ‘ಸಂಪಾದಕರ ಸದ್ಯಶೋಧನೆ’ಯಲ್ಲಿ ಇತ್ತೀಚೆಗೆ ಭಟ್ಟರು, ಡಾ.ಎಸ್.ಎಲ್.ಭೈರಪ್ಪನವರ ಬಗ್ಗೆ ಬರೆದಿದ್ದರು. ಅದನ್ನು ಮರುದಿನ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಯಾವನೋ ಅವಿವೇಕಿ, ‘ಡಾ.ಭೈರಪ್ಪನವರು ಬರೆದ ಕೆಲವು ಕಾದಂಬರಿಗಳು ಕೃತಿಚೌರ್ಯ’ ಎಂದು ಬರೆದ. ಅವನದು ‘ಹಿಟ್ ಅಂಡ್ ರನ್’ (ಗುದ್ದೋಡು) ಮನೋಭಾವ. ಯಾರೋ ನಾಲ್ಕೆ ದು ಮಂದಿ, ‘ಅವರು ಕೃತಿಚೌರ್ಯ ಮಾಡಿದ್ದಾರೆಂಬುದನ್ನು ಸಾಬೀತು ಮಾಡು’ ಎಂದು ಹೇಳಿದರೆ ಆಸಾಮಿ ಪರಾರಿ! ಇಂಥ ಪಡಪೋಶಿಗಳು ಸಾಮಾಜಿಕ ಜಾಲತಾಣಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಕ ಸಂಗತಿ.

ಹಾಗಂತ ಸಾಮಾಜಿಕ ಜಾಲತಾಣಗಳೆಂದರೆ ತಿಪ್ಪೆಗುಂಡಿ ಎಂದು ನಾನು ಸಾರಾಸಗಟು ತಿರಸ್ಕಾರ ಮಾಡಿ ಬಿಸಾಕುತ್ತಿಲ್ಲ. ನಿಜಕ್ಕೂ ಇದು ಅದ್ಭುತವಾಗಿ ಆಲೋಚಿಸುವವರ ಕೂಡು ತಾಣ, ತ್ರಿವೇಣಿ ಸಂಗಮ. ಆದರೆ ಅದು ನಾವು ಯಾರನ್ನು ಹಿಂಬಾಲಿಸುತ್ತೇವೆ ಮತ್ತು ಏನನ್ನು ಓದುತ್ತೇವೆ ಎಂಬುದನ್ನು ಅವಲಂಬಿಸಿದೆ. ಮೂರು ವರ್ಷಗಳ ಹಿಂದೆ, ‘ಟೈಮ’ ಮ್ಯಾಗಜಿನ್ ನಾವು ಫೇಸ್ ಬುಕ್ ಮತ್ತು ಟ್ವಿಟರ್‌ನಲ್ಲಿ ಯಾರನ್ನು ಹಿಂಬಾಲಿಸಬೇಕು, ಯಾರು ಹೇಗೆ ಎಂಬ ಬಗ್ಗೆ ಮುಖಪುಟ ಲೇಖನ ಪ್ರಕಟಿಸಿತ್ತು. ಜಗತ್ತಿನಲ್ಲಿ ಹತ್ತು ಸಾವಿರ ಜನರ ಅಕೌಂಟ್ಸ್ ನೋಡಿ, ಆ ಪೈಕಿ ನೂರು ಅಕೌಂಟುಗಳನ್ನು ಪಟ್ಟಿ ಮಾಡಿ ಕೊಟ್ಟಿತ್ತು. ಈ ನೂರು ಜನರನ್ನು ಹಿಂಬಾಲಿಸಿದರೆ, ನಿಮಗೆ ಪ್ರಯೋಜನವಾಗುತ್ತದೆ ಎಂದು ಹೇಳಿತ್ತು. ಆ ನೂರು ಜನರೂ ಯೋಗ್ಯರಾದವರನ್ನೇ ತಮ್ಮ ಫಾಲೋವರುಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಬಹಳ ಜನ ತಮ್ಮ ಫಾಲೋವರುಗಳನ್ನು ಫಿಲ್ಟರ್ ಮಾಡುವುದಿಲ್ಲ. ಟಂ ಟಂ ಗಾಡಿಗೆ ಬಂದವರನ್ನೆ ಸೇರಿಸಿಕೊಂಡಂತೆ ಸೇರಿಸಿಕೊಂಡು ಬಿಡುತ್ತಾರೆ. ಇದು ಸರಿಯಾದ ನಿರ್ವಹಣೆ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇರುವುದು ಮುಖ್ಯವಲ್ಲ, ಅದರ ಲಾಭ ತೆಗೆದುಕೊಳ್ಳುವುದು ಮುಖ್ಯ. ನಿಕೋಲ್ ಕೆಲ್ಲಿ ಎಂಬ ಸಾಮಾಜಿಕ ಜಾಲತಾಣ ಪರಿಣತೆ ಪ್ರಕಾರ,  Social media
policies will never be able to cure stupid. ಇಲ್ಲಿ ಯಾರೂ ಯಾರ ಮಾತನ್ನು ಕೇಳುವುದಿಲ್ಲ. ಅದೊಂದು ಗೋಡೆಯೇ ಇಲ್ಲದ ವಿಧಾನಮಂಡಲ. ಯಾರು ಏನೂ ಬೇಕಾದರೂ ಹೇಳಲು ಸ್ವಾತಂತ್ರ್ಯವಿರುವ ವೇದಿಕೆ. ಹೀಗಾಗಿ ನಾವು ಎಲ್ಲಿ ಒದಗುತ್ತೇವೆ ಎಂಬುದನ್ನು ನಾವೇ ಕಂಡುಕೊಳ್ಳಬೇಕು. ಅದರಿಂದ ಗರಿಷ್ಠ ಪ್ರಯೋಜನ ಪಡೆಯುವುದು ಹೇಗೆ ಎಂಬುದು ಗೊತ್ತಿರಬೇಕು. ನಾವು ಯಾರನ್ನು ಫಾಲೋ ಮಾಡುತ್ತೇವೆ, ನಮ್ಮನ್ನು ಯಾರು ಫಾಲೋ ಮಾಡುತ್ತಾರೆ ಎಂಬುದನ್ನು ತಿಳಿದಿರಬೇಕು.

ಇಲ್ಲದಿದ್ದರೆ ನೀವು bad companyಯಲ್ಲಿ ಇದ್ದ ಹಾಗೆ. ಆಗ ನೀವು trash ಗಳನ್ನು ಓದುತ್ತೀರಿ. ಕೆಲಸಕ್ಕೆ ಬಾರದವರ ಅಭಿಪ್ರಾಯ ಗಳಿಗೆ ತಲೆಕೆಡಿಸಿಕೊಳ್ಳುತ್ತೀರಿ. If content is king, then conversion is queen ಎಂಬ ಮಾತಿದೆ. ನೀವು king ಥರದ content ಗಳನ್ನು ಯಾರು ಕೊಡುತ್ತಾರೆ ಎಂಬುದನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿ ಕ್ಷಣವೂ ನೀವು ಸಮಯವನ್ನು ನಿರರ್ಥಕಗೊಳಿಸಿಕೊಳ್ಳುತ್ತೀರಿ. ಹೆಚ್ಚಿನ ಸಂದರ್ಭಗಳಲ್ಲಿ ಅನೇಕರಿಗೆ ತಮಗೇನು ಬೇಕು ಎಂಬುದು ಗೊತ್ತಾಗುವುದಿಲ್ಲ. ತಮಗೆ ಬೇಕಾಗಿದ್ದು ಎಲ್ಲಿ ಸಿಗುತ್ತದೆ ಎಂಬುದೂ ಗೊತ್ತಿರುವುದಿಲ್ಲ.

ಅಷ್ಟೊತ್ತಿಗೆ ಅವರು trash ಗಳಿಗೇ ಅಡಿಕ್ಟ್ ಆಗಿರುತ್ತಾರೆ. ಅದೇ ಸರ್ವಸ್ವ ಎಂದು ಭಾವಿಸಲು ಆರಂಭಿಸಿರುತ್ತಾರೆ. ಫೇಸ್ ಬುಕ್ ಎಂಬುದು ತಮ್ಮ ವ್ಯಕ್ತಿತ್ವದ ಮುಖ ಎಂದು ಅಂದುಕೊಳ್ಳುವುದಿಲ್ಲ. ಅದು ತಮ್ಮ ಪ್ರತಿರೂಪ, ಕನ್ನಡಿ ಎಂದು ತಿಳಿದುಕೊಳ್ಳುವು ದಿಲ್ಲ. ಇನ್ನು ಕೆಲವರು ತಮ್ಮ ಅಸಲಿ ಅಕೌಂಟುಗಳಲ್ಲಿ ಸಂತರಂತೆ, ಫೇಕ್ ಅಕೌಂಟುಗಳಲ್ಲಿ ನಿಜಸ್ವರೂಪವನ್ನು ಮೆರೆಯು ತ್ತಾರೆ. ನಿಮ್ಮ ಆಪ್ತ ಸ್ನೇಹಿತ ಕೂಡ ಫೇಕ್ ಅಕೌಂಟುಗಳಲ್ಲಿ ನಿಮ್ಮ ಪರಮ ವೈರಿಯಾಗಬಹುದು ಮತ್ತು ಆತನೇ ನಿಮಗೆ ಕಂಟಕ ವಾಗಬಹುದು.

ಇವೆ ಬಿಡಿ, ಈ ಸಾಮಾಜಿಕ ಜಾಲತಾಣಗಳಂಥ ಸೋಮಾರಿ ಕಟ್ಟೆಗಳು ಇನ್ನೊಂದಿಲ್ಲ. ಯಾರೋ ಪುಕ್ಕಟೆ ಕೂಳು ಹಾಕಿದರೆ, ಜೀವನವಿಡೀ ಸಾಮಾಜಿಕ ಜಾಲತಾಣಗಳನ್ನು ವಿಹರಿಸುತ್ತ ಕಳೆದುಬಿಡಬಹುದು. ಅದರ ಸಾರ್ಥಕತೆ ಕಂಡುಕೊಳ್ಳಬಹುದು. ನನ್ನ ಅವೆಷ್ಟೋ ಸ್ನೇಹಿತರು ದಿನಕ್ಕೆ ಹತ್ತು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಇದರ ಕಳೆಯುತ್ತಿದ್ದಾರೆ. ಅವರಿಗೆ ಇದೇ ಸರ್ವಸ್ವ. ನನ್ನ ಸಮಯವನ್ನು ಪೋಲು ಮಾಡುವ, ವ್ಯರ್ಥವಾಗಿ ತಿಂದು ಹಾಕುವ ಕ್ರಿಯೆಗಳೆ ‘ಕೆಟ್ಟ ಚಟ’ ಎಂದೇ ನಾನು ಭಾವಿಸಿದವ.
ಹೀಗಾಗಿ ಆರಂಭದಿಂದಲೇ ಇದರ ಸಹವಾಸದಿಂದ ದೂರವಿದ್ದು ಬಿಟ್ಟೆ.

ಇದಕ್ಕಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾಗಿಯಾಗಲು ಸಾಕಷ್ಟು ಸಹನೆ ಬೇಕು. ನಾನು ಇತ್ತೀಚೆಗೆ ಭಟ್ಟರನ್ನು ಕೇಳಿದೆ – ‘ಸ್ವಾಮೀ, ನಿಮಗೆ ರಿಯಾಕ್ಟ್ ಮಾಡುವ ನೆಪದಲ್ಲಿ ಕೆಲವರು ಬಾಯಿಗೆ ಬಂದ ಹಾಗೆ ಅಮೇಧ್ಯ ಕಕ್ಕುತ್ತಾರಲ್ಲ, ನಿಮಗೆ ಏನೂ ಅನಿಸುವುದಿಲ್ಲವಾ?’ ಎಂದು ಕೇಳಿದೆ. ಅದಕ್ಕೆ ಭಟ್ಟರು, ‘ಉತ್ತರ ನಿಮ್ಮ ಪ್ರಶ್ನೆಯ ಇದೆಯಲ್ಲ (ಅಮೇಧ್ಯ ಕಕ್ಕುವುದು)’ ಎಂದು ಹೇಳುತ್ತಾ ತಮ್ಮ ಎಂದಿನ ಮುಗುಳುನಗೆಯಲ್ಲಿ ಚರ್ಚೆಗೆ ವಿರಾಮ ಹೇಳಿದರು. ಈ ಮನಸ್ಥಿತಿ ನನಗಂತೂ ಇಲ್ಲ.

ನಾನೇನಾದರೂ ಕಾಲು ಕೆದರಿ ನಿಂತರೆ, ಅ ‘ಬೇಟೆ’. ಹಾಗಾಗಿ ನನಗೆ ಅದರ ಸಹವಾಸವೇ ಬೇಡ. ಸಾಮಾಜಿಕ ಜಾಲತಾಣದಲ್ಲಿ ಇಲ್ಲದಿದ್ದರೆ, ಜೀವನದಲ್ಲಿ ಏನೋ ಕಳೆದುಕೊಂಡ ಭಾವ ನನ್ನನ್ನು ಕಾಡಿಲ್ಲ. ನನ್ನನ್ನು ನೋಡಿ, ನನ್ನ ಮೀಸೆ ನೋಡಿ ಯಾರು ಲೈಕ್ಸ್ ಕೊಟ್ಟರೆಷ್ಟು ಬಿಟ್ಟರೆಷ್ಟು. ನನ್ನ ಬೈಕ್, ಕುದುರೆ ನೋಡಿ ಯಾರು ಕಾಮೆಂಟ್ಸ್ ಮಾಡಿದರೆ ನನಗೇನಾಗುತ್ತದೆ?
Bullshit