ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ, ಅಂಕಣಕಾರರು
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ತಮ್ಮ ಇಷ್ಟು ವರ್ಷಗಳ ರಾಜಕೀಯ ಅನುಭವದಿಂದ ಪಾಂಗಿತರಾಗಿರ ಬಹುದು, ಪಳಗಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ಸಿನಲ್ಲಿ
ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದ ನಂತರ, ಅವರು ಇನ್ನೂ ಮಾಗಬೇಕು, ಬಾಗಬೇಕು, ಇನ್ನೂ ಎಳಸುತನ
ಅವರನ್ನು ಆಳುತ್ತಿದೆ, ಅವರಿನ್ನೂ ಪಕ್ವವಾಗಿಲ್ಲ ಬಲವಾಗಿ ಎಂದು ಅನಿಸಿತು.
ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರಾಗಿಲ್ಲದಿದ್ದರೆ, ಅವರು ಹುಡುಗಾಟಿಕೆ ಮಾಡಬಹುದಿತ್ತು. ಆದರೆ ಬರಲಿರುವ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಗುರುತರ ಜವಾಬ್ದಾರಿಯನ್ನು ಹೆಗಲಿಗೆ ಹಾಕಿಕೊಂಡು, ಇಷ್ಟು ಚಿಲ್ಲರೆಯಾಗಿ ಅವರು ವರ್ತಿಸಬಹುದು ಎಂದು ಅವರ ಪಕ್ಷದವರೇ ಆದ ಯಾರೂ ನಿರೀಕ್ಷಿಸಿರಲಿಲ್ಲ. ಡಿಕೆಶಿಯವರು ರಾಜಕಾರಣವನ್ನು ಮಾಡಬೇಕು, ಆದರೆ ಪಕ್ಷದೊಳಗೇ ಅದನ್ನು ಈ ಹಂತದಲ್ಲಿ ಮಾಡಬಾರದು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಪ್ರತಿಸ್ಪರ್ಧಿಗಳೆಂದು ಭಾವಿಸಬೇಕೇ ಹೊರತು, ತಮ್ಮ ಪಕ್ಷದ ನಾಯಕರೇ ತನಗೆ ಪ್ರತಿಸ್ಪರ್ಧಿ ಎಂದಲ್ಲ. ಇಂಥ ಕೆಟ್ಟ ಮನಸ್ಥಿತಿ ಇಟ್ಟುಕೊಂಡು ಅವರು ಪಕ್ಷವನ್ನು ಕಟ್ಟವುದು ಸಾಧ್ಯವೇ ಇಲ್ಲ. ಅಷ್ಟಕ್ಕೂ ಇದು ನಾಯಕನ ಲಕ್ಷಣವೇ ಅಲ್ಲ. ಈ ಮಾತನ್ನು ಹೇಳಲು ಕಾರಣವಿದೆ. ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಏನಾ ಯಿತು ಎಂಬುದನ್ನು ಗಮನಿಸಿದರೆ, ಡಿಕೆಶಿ ಮನಸ್ಥಿತಿ ಗೊತ್ತಾಗುತ್ತದೆ.
ಮೈಸೂರಿನಲ್ಲಿ ಸಿದ್ದರಾಮಯ್ಯನವರಿಗೆ ಬುದ್ಧಿ ಕಲಿಸಲು, ಕುಮಾರಸ್ವಾಮಿಯವರ ಜತೆ ಕೈಜೋಡಿಸಿ, ಕಾಂಗ್ರೆಸ್ ಪಕ್ಷದ
ಅಭ್ಯರ್ಥಿಯನ್ನೇ ಸೋಲಿಸುವ ಮಟ್ಟಕ್ಕೆ ಹೋದದ್ದು ಡಿಕೆಶಿ ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಇದರಿಂದ ತಾವು ದೊಡ್ಡ ಸಾಧನೆ ಮಾಡಿದೆ, ಸಿದ್ದರಾಮಯ್ಯ ನವರಿಗೆ ಮುಖಭಂಗ ಮಾಡಿದೆ ಎಂದು ಅವರು ಭಾವಿಸಿದ್ದರೆ, ಅವರ ಯೋಚನೆ ಬಗ್ಗೆ
ಮರುಕಪಡಬೇಕಷ್ಟೆ. ಇಂಥ ಪಟ್ಟುಗಳನ್ನು ಹಾಕಿ ಯಾವ ಪಕ್ಷವನ್ನೂ ಕಟ್ಟಲಾಗುವುದಿಲ್ಲ.
ಕಿವಿ ಕತ್ತರಿಸಿ ಕನ್ನಡಕ ಧರಿಸಲಾಗುವುದಿಲ್ಲ. ತಲೆ ಒಡೆದು ಮುಂಡಾಸು ಧರಿಸಲಾಗುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಅವರ ತವರು ಜಿಯಲ್ಲಿ ಧಿಕ್ಕಾರ ಕೂಗಿಸಿದ ಮಾತ್ರಕ್ಕೆ ಅದರಿಂದ ಅವರು (ಸಿದ್ದರಾಮಯ್ಯ) ಕಳೆದುಕೊಳ್ಳುವುದೇನೂ ಇಲ್ಲ. ಆ ಧಿಕ್ಕಾರ ಕೂಗಿಸಿದ್ದು ಯಾರು, ಯಾರ ಅಣತಿಯ ಮೇರೆಗೆ ಅವರು ಹಾಗೆ ಕೂಗಿದ್ದು ಎಂದು ಅರ್ಥ ಮಾಡಿಕೊಳ್ಳದಷ್ಟು ಜನ ಮುಗ್ದರೇನೂ ಅಲ್ಲ.
ಇದಕ್ಕೇ ಹೇಳಿದ್ದು ಅಧ್ಯಕ್ಷರಾದವರು ಇಂಥ ಚಿಲ್ಲರೆ ವರ್ತನೆಗಳನ್ನು ಬಿಟ್ಟುಬಿಡಬೇಕು. ದೊಡ್ಡ ಮನಸ್ಸನ್ನು ಬೆಳೆಸಿಕೊಳ್ಳಬೇಕು.
ಅದರಲ್ಲೂ ಸಿದ್ದರಾಮಯ್ಯನವರಿಗೆ ಮುಖಭಂಗ ಮಾಡಲು ಅವರು ಕುಮಾರಸ್ವಾಮಿಯವರ ಸಹಾಯ ಯಾಚಿಸಬಾರದಿತ್ತು. ಇದು ಮೀರ್ ಸಾದಕ್ ತನ! ಇಂಥ ಮನೋಭಾವದಿಂದ ಡಿಕೆಶಿ ತಮಗೆ ಸಿಕ್ಕಿದ ಒಂದು ಅದ್ಭುತ ಅವಕಾಶವನ್ನು ಕಳೆದುಕೊಳ್ಳು ವುದು ನಿಶ್ಚಿತ. ಕುಮಾರಸ್ವಾಮಿ ಎಂದಿಗೂ ನಂಬಿಕೆಗೆ ಅರ್ಹರಲ್ಲ ಎಂಬುದನ್ನು ಡಿಕೆಶಿ ಎಷ್ಟು ಬೇಗ ಅರ್ಥ ಮಾಡಿಕೊಳ್ಳುವು ದಿಲ್ಲವೋ, ಅಲ್ಲಿಯವರೆಗೆ ಅವರು ರಾಜಕೀಯವಾಗಿ ತಮಗೆ ಒಲಿದು ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವೂ ಇಲ್ಲ.
ಅಷ್ಟಕ್ಕೂ ಡಿಕೆಶಿಯವರಿಗೆ ರಾಜಕೀಯ ವೈರಿ ಕುಮಾರಸ್ವಾಮಿಯೇ ಹೊರತು ಸಿದ್ದರಾಮಯ್ಯ ಅಲ್ಲ. ಇದೊಂದು ವಾಕ್ಯವನ್ನು
ಅರ್ಥ ಮಾಡಿಕೊಂಡು ಸರಿಯಾದ ಹೆಜ್ಜೆ ಇಡುವುದರಲ್ಲಿ ಡಿಕೆಶಿ ರಾಜಕೀಯ ಭವಿಷ್ಯ ಅಡಗಿದೆ ಎಂಬುದನ್ನು ಅವರು ಅರಿಯ ಬೇಕಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕುಮಾರಸ್ವಾಮಿ ಮತ್ತು ಡಿಕೆಶಿ ಸೇರಿಯೇ, ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇದಕ್ಕೆ ಡಿಕೆಶಿ ದಾಳವಾಗಿ ಬಳಸಿಕೊಂಡಿದ್ದು ತಮ್ಮ ಪಕ್ಷದವರೇ ಆದ ತನ್ವೀರ್ ಸೇಟ್. ಮೇಯರ್ ಚುನಾವಣೆಗೆ ಎರಡು ದಿನ ಇರುವಾಗ ಕುಮಾರಸ್ವಾಮಿ, ‘ನಿಮಗೊಂದು ವಿಸ್ಮಯಕಾರಿ ಸುದ್ದಿ ಕೊಡಲಿದ್ದೇನೆ’ ಎಂದು ಹೇಳಿದಾಗಲೇ, ಮೇಯರ್
ಯಾರಾಗುತ್ತಾರೆ ಎಂಬುದು ಗೊತ್ತಾಗಿತ್ತು. ತಮ್ಮ ಪಕ್ಷದ ಅಭ್ಯರ್ಥಿ ಸೋತರೂ ಪರವಾಗಿಲ್ಲ, ಸಿದ್ದರಾಮಯ್ಯನವರಿಗೆ
ಮುಖಭಂಗವಾಗಬೇಕು ಎಂದು ಡಿಕೆಶಿ ತೀರ್ಮಾನಿಸಿದರು. ಇದನ್ನು ಬಳಸಿಕೊಂಡವರು ಕುಮಾರಸ್ವಾಮಿ. ಇವರಿಬ್ಬರೂ
ಸೇರಿ ತನ್ವಿರ್ ತಲೆಕೆಡಿಸಿ, ಅವರ ಕ್ಷೇತ್ರದಲ್ಲಿರುವ ಮುಸ್ಲಿಂ ಕಾರ್ಪೊರೇಟರುಗಳನ್ನು ಸೆಳೆದುಕೊಂಡು, ಕೊನೆಕ್ಷಣದಲ್ಲಿ
ಕಾಂಗ್ರೆಸ್ ಅಭ್ಯರ್ಥಿಗೆ ಸೋಲುಂಟಾಗುವಂತೆ ಮಾಡಿದ್ದು ಯಾರಿಗಾದರೂ ಅರ್ಥವಾಗುವಂಥದ್ದೇ.
ಮೇಯರ್ ಚುನಾವಣಾ ಫಲಿತಾಂಶದ ನಂತರ, ತಮ್ಮ ಪಕ್ಷವನ್ನು ಮುಂದಿನ ಚುನಾವಣೆಗೆ ಮೈಸೂರಿನಿಂದಲೇ ಅಣಿಗೊಳಿಸು ತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಕ್ಕೆ ಇದೇ ಕಾರಣ. ಅದಕ್ಕೆ ಸಾಥ್ ನೀಡಿದವರು ಡಿಕೆಶಿ. ಇದರಿಂದ ಡಿಕೆಶಿ ಏನನ್ನು ಸಾಽಸಿದರು? ಅದನ್ನು ಅವರೇ ಹೇಳಬೇಕು. ಹೆಚ್ಚೆಂದರೆ ಡಿಕೆಶಿ ಕುಮಾರಸ್ವಾಮಿಯೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಪಡಿಸಿಕೊಂಡಿರಬಹುದು.
ಮುಂದೊಮ್ಮೆ ಅಂಥ ಸಂದರ್ಭ ಬಂದರೆ, ತನಗೆ ಸಹಾಯ ಮಾಡುವ ಅಲಿಖಿತ ವಾಗ್ದಾನಕ್ಕೆ ನಾಂದಿ ಹಾಡಿರಬಹುದು. ತಮಗಿಬ್ಬರಿಗೂ ಸಿದ್ದರಾಮಯ್ಯನವರೇ ‘ಕಾಮನ್ ಎನಿಮಿ’ ಎಂಬುದನ್ನು ಮತ್ತಷ್ಟು ವಿಶದಿಕರಿಸಿರಬಹುದು. ಆದರೆ ಸಿದ್ದರಾಮಯ್ಯನವರೊಂದಿಗೆ ನಂಬಿಕೆ ಕಳೆದುಕೊಂಡರು. ಅದು ಕುಮಾರಸ್ವಾಮಿ ಜತೆಗಿನ ವಿಶ್ವಾಸಕ್ಕಿಂತ ದೊಡ್ಡದು. ಬೇರೆಯವರ ನೀರಿನ ಕೊಡ ನಂಬಿಕೊಂಡು ನಮ್ಮ ಮನೆಗೆ ಕೊಳ್ಳಿಯಿಡುವುದು ಜಾಣತನವಲ್ಲ.
ಡಿಕೆಶಿ ಅವರಿಗೆ ಸಿದ್ದರಾಮಯ್ಯನವರ ಸಾಮರ್ಥ್ಯ, ಅವರಿಗಿರುವ ವರ್ಚಸ್ಸು ಗೊತ್ತಿಲ್ಲದ ಸಂಗತಿಯೇನಲ್ಲ. ಅದು ಗೊತ್ತಿದ್ದೂ ಅವರು, ಸಿದ್ದರಾಮಯ್ಯ ನವರ ಜತೆ ಮುಖ ಕೆಡಿಸಿಕೊಳ್ಳುವ ಹಂತಕ್ಕೆ ಹೋಗಿದ್ದು ಅಧ್ಯಕ್ಷರಿಗೆ ಯೋಗ್ಯವಾದ ನಡೆಯಲ್ಲ. ಸಿದ್ದರಾಮಯ್ಯ ನವರಿಲ್ಲದೇ ಇಂದು ಪಕ್ಷವನ್ನು ಕಟ್ಟಲು ಡಿಕೆಶಿ ಸಮರ್ಥರಾ? ಹೌದು ಎಂದಾದರೆ, ಅವರ ನಡೆಯನ್ನು ಮೆಚ್ಚ ಬಹುದಿತ್ತು. ಆದರೆ ಇಂದು ಇಡೀ ಪಕ್ಷ ಸಿದ್ದರಾಮಯ್ಯನವರ ಸುತ್ತವೇ ಸುತ್ತುತ್ತಿದೆ. ಬಿಜೆಪಿಯನ್ನು ಎದುರು ಹಾಕಿಕೊಳ್ಳುವ
ತಾಕತ್ತಿರುವುದು ಅವರೊಬ್ಬರಿಗೆ ಮಾತ್ರ. ಸಿದ್ದರಾಮಯ್ಯ ನವರು ಮೋದಿಯವರನ್ನೂ ಬಿಟ್ಟವರಲ್ಲ.
ಮೋದಿಯನ್ನು ಟೀಕಿಸುವ ನೈತಿಕ ಸ್ಥೈರ್ಯವಿರುವುದೂ ಅವರೊಬ್ಬರಿಗೇ. ಇದಕ್ಕೆ ಕಾರಣ ಅವರಿಗಿರುವ ರಾಜಕೀಯ ಬದ್ಧತೆ ಮತ್ತು ನಿಷ್ಕಳಂಕ ನಡೆ. ಸಿದ್ದರಾಮಯ್ಯ ಪೊಗರು ಮೆರೆದಂತೆ, ಡಿಕೆಶಿ ಎಗರಾಡಲು ಸಾಧ್ಯವಾ? ಅವರಿಗೆ ಮೈ ತುಂಬಾ ಹಗರಣ ಗಳು ಮೆತ್ತಿಕೊಂಡಿವೆ. ಹೆಚ್ಚು ಹಾರಾಡಿದರೆ, ಸಿಬಿಐ, ಇಡಿ, ಐಟಿ ಅಧಿಕಾರಿಗಳು ಮೊಟಕುತ್ತಾರೆ. ಚುನಾವಣಾ ಹತ್ತಿರ
ಬರುತ್ತಿರುವಂತೆ, ಕಾಂಗ್ರೆಸ್ ಅಧ್ಯಕ್ಷರಿಗೆ ಎಲ್ಲಿ ಚಿವುಟಿದರೆ ನೋವಾಗುತ್ತದೆ ಎಂಬುದನ್ನು ಈ ಅಧಿಕಾರಿಗಳು ತೋರಿಸಿಕೊಡದೇ ಹೋಗುವುದಿಲ್ಲ.
ಹೀಗಾಗಿ ಡಿಕೆಶಿ, ಬಿಜೆಪಿಯನ್ನು ಟೀಕಿಸುವ, ಹೋರಾಡುವ ನೈತಿಕ ಬಲವನ್ನೇ ಕಳೆದುಕೊಂಡಿದ್ದಾರೆ. ಮೋದಿಯನ್ನು
ಟೀಕಿಸುವುದಿರಲಿ, ಅವರು ಗಟ್ಟಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೂ ಇನ್ನೂ ಹೆಡೆ ಎತ್ತಿಲ್ಲ. ಬಿಜೆಪಿ
ನಾಯಕರಿಗೆ ಡಿಕೆಶಿ ಅಧ್ಯಕ್ಷ ರಾಗಿರಬೇಕು. ಕಾರಣ ಅವರು ಕಚ್ಚದ, ಬರೀ ಬುಸುಗುಡುವ ಹಾವು ಎಂಬುದು ಗೊತ್ತಾಗಿದೆ.
ಆದರೆ ಸಿದ್ದರಾಮಯ್ಯ ಹಾಗಲ್ಲ, ಅವರಿಗೆ ಯಾರ ಹಂಗೂ ಇಲ್ಲ, ಮುಲಾಜೂ ಇಲ್ಲ. ಅವರು ಬೇರೆ ಪಕ್ಷಗಳ ನಾಯಕರ ಮರ್ಜಿಯಲ್ಲಿ ಇಲ್ಲ.
ಅವರು ಓಲೈಕೆ ರಾಜಕಾರಣ ಮಾಡಬೇಕಿಲ್ಲ. ಯಾರ ಜತೆಗೂ ಒಳಒಪ್ಪಂದ ಮಾಡಿಕೊಳ್ಳಬೇಕಿಲ್ಲ. ಅವರದ್ದು ನೇರಾನೇರ. ಇಂದು ಸಿದ್ದರಾಮಯ್ಯ ಅವರ ಹೆಸರು ರಾಷ್ಟ್ರಮಟ್ಟದಲ್ಲೂ ಚರ್ಚಿತ ವಾಗುತ್ತಿದೆ. ಮೋದಿಯವರನ್ನು ಎದುರಿಸಲು ಸಿದ್ದರಾಮಯ್ಯನವರಂಥ ಕಳಂಕರಹಿತ ನಾಯಕರು ಬೇಕಾಗಿದ್ದಾರೆ ಎಂಬ ಮಾತುಗಳು ದಿಲ್ಲಿಯಲ್ಲೂ ಕೇಳಿಬರುತ್ತಿವೆ. ಅಂದರೆ ಸಿದ್ದರಾಮಯ್ಯನವರ ವ್ಯಕ್ತಿತ್ವ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಆಸರೆಯಾಗಿದೆ. ಅವರನ್ನು ಮುಂದಿಟ್ಟುಕೊಂಡು ಹೋಗುವುದು ಪಕ್ಷಕ್ಕೆ ವಿಹಿತ. ಈ ಸಂಗತಿಯನ್ನು ಸ್ವತಃ ರಾಹುಲ್ ಗಾಂಧಿ ತಮ್ಮ ಬೆಂಬಲಿಗರ ಮುಂದೆ ಹೇಳಿಕೊಂಡಿದ್ದಾರೆಂದು ಕಾಂಗ್ರೆಸ್ ನಾಯಕರೇ ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನು ಡಿಕೆಶಿ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಕಾಂಗ್ರೆಸ್ ಆಸ್ತಿ, ಅವರು ಪಕ್ಷದ ಎತ್ತರದ ನಾಯಕ, ಅವರ
ನಾಯಕತ್ವವನ್ನು ಹೇಗೆ ಬಳಸಿಕೊಳ್ಳಬೇಕು, ಅವರ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಪಕ್ಷವನ್ನು ಹೇಗೆ ಕಟ್ಟಬೇಕು, ಮುನ್ನಡೆಸಬೇಕು ಎಂಬುದನ್ನು ಯೋಚಿಸಬೇಕೇ ಹೊರತು ಅವರ ಕಾಲು ಜಗ್ಗುವುದಲ್ಲ ಮತ್ತು ಅವರಿಗೆ ಮುಖಭಂಗ ಮಾಡುವು ದಲ್ಲ. ಅದರಿಂದ ಸ್ವತಃ ಡಿಕೆಶಿ ಯವರಿಗಾಗಲಿ, ಪಕ್ಷಕ್ಕಾಗಲಿ ಒಳ್ಳೆಯದಾಗುವುದಿಲ್ಲ.
ಸಿದ್ದರಾಮಯ್ಯನವರು ಕಳೆದುಕೊಳ್ಳುವುದೇನೂ ಇಲ್ಲ. ಅವರು ಈಗಾಗಲೇ ಒಂದು ಸಲ ಮುಖ್ಯಮಂತ್ರಿ ಆದವರು. ಆದರೆ
ಮಹತ್ತರ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಡಿಕೆಶಿ, ಸಿದ್ದರಾಮಯ್ಯನವರನ್ನು ಸಂಪೂರ್ಣವಾಗಿ ಹೇಗೆ ಬಳಸಿಕೊಳ್ಳ ಬೇಕು ಎಂದು ಯೋಚಿಸಬೇಕೇ ಹೊರತು ಅವರ ಬೆನ್ನಿಗೆ ಇರಿಯುವ ಕೆಲಸಕ್ಕೆ ಮುಂದಾಗಬಾರದು. ಇದರಿಂದ ಅವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಮಾತ್ರಕ್ಕೆ ಪಕ್ಷ ಅಧಿಕಾರಕ್ಕೆ ಬಂದೇ ಬಿಟ್ಟಿತು ಎಂದು ಡಿಕೆಶಿ ಭಾವಿಸಬಾರದು. ಪಕ್ಷವನ್ನು
ಅಧಿಕಾರಕ್ಕೆ ತರುವುದು ಹೇಗೆ ಎಂಬುದಷ್ಟೇ ಮುಂದಿನ ಗುರಿಯಾಗಬೇಕು. ಯಾರು ಮುಖ್ಯಮಂತ್ರಿ ಆಗಬೇಕು ಎಂದು ಈಗಲೇ ಲೆಕ್ಕಾಚಾರ ಹಾಕುವುದಲ್ಲ. ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟು ಈಗಲೇ ಕೆಲಸ ಮಾಡಿದರೆ, ಜತೆಗೆ ಎಲ್ಲರೂ ಬರುವುದಿಲ್ಲ. ಈಗ ಅವರ ಮುಂದಿರುವ ದೊಡ್ಡ ಸವಾಲೆಂದರೆ, ಎಲ್ಲರನ್ನೂ ತಮ್ಮ ಜತೆಗೆ ಕರೆದುಕೊಂಡು ಹೋಗುವುದು. ಆದರೆ
ಡಿಕೆಶಿಯವರು ಸಿದ್ದರಾಮಯ್ಯ ನವರನ್ನು ಬಿಟ್ಟು, ತಮ್ಮ ಜತೆಗೆ ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಲು
ಹವಣಿಸಿದಂತಿದೆ.
ಇಂಥ ಮನಸ್ಥಿತಿಯಲ್ಲಿ ಪಕ್ಷವನ್ನು ಅಧಿಕಾರದ ಹೊಸ್ತಿಲಿಗೆ ತರಲು ಸಾಧ್ಯವಾ? ಇನ್ನು ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಬಯಸುವುದು ತಪ್ಪಲ್ಲ. ಅದು ಅವರ ಪರಮ ಉದ್ದೇಶವೂ ಹೌದು. ಇರಲಿ. ಆದರೆ ಪಕ್ಷವನ್ನು ಅಧಿಕಾರಕ್ಕೆ ತರದೇ ಮುಖ್ಯಮಂತ್ರಿ
ಆಗಲು ಸಾಧ್ಯವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರೆ, ಅದಕ್ಕೆ ಸಿದ್ದರಾಮಯ್ಯನವರ ಸಂಪೂರ್ಣ ಸಹಕಾರ, ಬೆಂಬಲ ಬೇಕೇ ಬೇಕು. ಪಕ್ಷ ಅಧಿಕಾರಕ್ಕೆ ಬಂದರೆ, ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ, ಹೀಗಾಗಿ ಅವರನ್ನು ದುರ್ಬಲಗೊಳಿಸಬೇಕು, ಅವರಿಗೆ ಕೀಟಲೆ ಕೊಟ್ಟು ಮುಖಭಂಗ ಮಾಡಬೇಕು ಎಂದು ಡಿಕೆಶಿ ಲೆಕ್ಕಾಚಾರ ಹಾಕಿದರೆ, ಪಕ್ಷ ಅಧಿಕಾರಕ್ಕೆ ಬರುವ ಹಾದಿಯ ಮುಗ್ಗರಿಸುತ್ತದೆ.
ಅದರಿಂದ ಅವರಿಗೂ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗುತ್ತದೆ. ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ, ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈಗಲೇ ಯಾರೂ ಮುಖ್ಯಮಂತ್ರಿ ಆಗಿಲ್ಲವಲ್ಲ.
ಆದರೆ ಡಿಕೆಶಿ, ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿರುವುದರಲ್ಲಿ ಬೇರೆಯ ಲೆಕ್ಕಾಚಾರ ಅಡಗಿರು ವಂತಿದೆ. ಅವರಿಗೆ ಪಕ್ಷಕ್ಕೆ ಸರಳ ಬಹುಮತ ಬರುವುದು ಬೇಕಾಗಿಲ್ಲ. ಸರಳ ಬಹುಮತ ಬಂದರೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಡಿಕೆಶಿಗೆ ಬಲವಾಗಿ ಅನಿಸಿರಬೇಕು.
ಹೀಗಾಗಿ ಅವರಿಗೆ, ಪಕ್ಷಕ್ಕೆ ಸರಳ ಬಹುಮತ ಸಿಗದಿದ್ದರೇ ಒಳ್ಳೆಯದು. ತಮ್ಮ ಪಕ್ಷ ತೊಂಬತ್ತರ ಗಡಿಯಲ್ಲಿ ನಿಂತುಕೊಳ್ಳಬೇಕು, ಅಂಥ ಸಂದರ್ಭದಲ್ಲಿ, ತಾವು ಕುಮಾರಸ್ವಾಮಿಯವರ ಜೆಡಿಎಸ್ ಬೆಂಬಲವನ್ನು ಪಡೆದು ಮುಖ್ಯಮಂತ್ರಿ ಆಗಬೇಕು, ಸಿದ್ದರಾಮಯ್ಯ ನವರನ್ನು ಹೊರಗಿಡುವುದಾದರೆ ಮತ್ತು ಡಿಕೆಶಿಗೆ ಸಿಎಂ ಪಟ್ಟ ಕೊಡುವುದಾದರೆ, ನಾವು ಬೆಂಬಲ ಕೊಡುತ್ತೇವೆ ಎಂದು ಕುಮಾರಸ್ವಾಮಿಯಿಂದ ಹೇಳಿಸಬೇಕು, ಹೀಗಾಗಿ ಈಗಿಂದಲೇ ಕುಮಾರಸ್ವಾಮಿ ಜತೆ ಉತ್ತಮ ಸಂಬಂಧ ಹೊಂದಿರಬೇಕು
ಎಂದು ಶಿವಕುಮಾರ ಯೋಚನೆಗಳ ಬತ್ತಿಗೆ ಎಣ್ಣೆ ಹುಯ್ಯುತ್ತಿದ್ದಾರೆ.
ಮೊನ್ನೆಯ ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದು, ಈ ಎಲ್ಲಾ ತಂತ್ರ – ಹುನ್ನಾರಗಳ ಮೊದಲ ಅಖಾಡ. ಅದು ಯಾವಾಗ ಬ್ಯಾಕ್ ಫೈರ್ ಆಯಿತೋ, ಡಿಕೆಶಿ ತೇಪೆ ಹಚ್ಚುವ, ಅಂಬೋ ಶರಣಾರ್ಥಿ ಎನ್ನುವ ಕೆಲಸಕ್ಕೆ ಮುಂದಾಗಿದ್ದಾರೆ. ಒಂದೆಡೆ ಡಿಕೆಶಿ ಕೈಯಲ್ಲಿ ಎಣ್ಣೆ ಹಿಡಿದು ಸಿದ್ದರಾಮಯ್ಯನವರಿಗೆ ಮಾಲಿಶ್ ಮಾಡುವ ಪೋಸು ಕೊಡುತ್ತಾ, ಮತ್ತೊಂದೆಡೆ ಕಂಕುಳಲ್ಲಿ ದೊಣ್ಣೆ ಹಿಡಿದು ಸಿದ್ದುಗೆ ಬಾರಿಸುವ ಅವಕಾಶ ಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಹವಣಿಕೆ ಯಲ್ಲೂ ಇದ್ದಂತಿದೆ.
ಇದರಿಂದ ಅವರು ಗಳಿಸುವುದಕ್ಕಿಂತ, ಕಳೆದುಕೊಳ್ಳುವುದೇ ಹೆಚ್ಚು. ಕುಮಾರಸ್ವಾಮಿ ಯವರ ತಾಕತ್ತಿನ ಮೇಲೆ ಅವರು
ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟಂತಿದೆ. ಡಿಕೆಶಿಯವರ ಈಗಿನ ನಡೆ ಹೇಗಿದೆಯೆಂದರೆ, ‘ಕುಂಟು ಹುಡುಗಿಯನ್ನು ಸೊಸೆಯಾಗಿ
ತಂದು ದೊಡ್ಡವನೆನಿಸಿಕೊಳ್ಳಲು, ಊನನಾದ ಮಗ ಹುಟ್ಟಲಿ ಎಂದು ಬೇಡಿಕೊಂಡರಂತೆ’ ಎಂಬ ಗಾದೆಯಂತಿದೆ. ಹೀಗಾದರೆ
ಡಿಕೆಶಿಯವರೂ ಉದ್ಧಾರವಾಗೊಲ್ಲ, ಅವರ ಪಕ್ಷವೂ!