Thursday, 12th September 2024

Jayashree Kalkundri Column: ಮನಸ್ಥಿತಿ ಬದಲಾಗದೆ ಪರಿಸ್ಥಿತಿ ಬದಲಾಗದು

ಯಕ್ಷಪ್ರಶ್ನೆ

ಜಯಶ್ರೀ ಕಾಲ್ಕುಂದ್ರಿ

ಕೋಲ್ಕತ್ತಾದಲ್ಲಾದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ದೇಶದ ವಿವಿಧೆಡೆ ಆಕ್ರೋಶ ವ್ಯಕ್ತವಾಗಿದೆ. ‘ನನ್ನ ದೇಶದಲ್ಲಿ ನನಗೇಕೆ ಸುರಕ್ಷತೆಯಿಲ್ಲ?’ ಎಂದು ದೇಶ ದುದ್ದಕ್ಕೂ ಮಹಿಳೆಯರು ನಾಗರಿಕ ಸಮಾಜವನ್ನು ಪ್ರಶ್ನಿಸುತ್ತಿದ್ದಾರೆ. ಹತ್ತಾರು ಕನಸು ಕಟ್ಟಿಕೊಂಡು ಕಷ್ಟ ಪಟ್ಟು ಓದಿ ಪದವಿ ಗಳಿಸಿ, ವೈದ್ಯೆಯಾಗಿ ಜನಸೇವೆ ಮಾಡಬೇಕಿದ್ದ ಮಗಳು,
ಅತ್ಯಾಚಾರಕ್ಕೊಳಗಾಗಿ ಶವವಾಗಿ ಮನೆ ಸೇರಿದಾಗ ಆಕೆಯ ಹೆತ್ತವರ ಮೇಲೆ ಎಂಥ ಘೋರ ಪರಿಣಾಮವಾಗಿರಬಹುದು? ಆಕೆಯ ಕುಟುಂಬಿಕರ ನೋವು-ಸಂಕಟಗಳನ್ನು ಪದಗಳಲ್ಲಿ ಬಿಡಿಸಿಡಲಾದೀತೇ? ಅವರ ಕಣ್ಣುಗಳಲ್ಲಿ ಜಿನುಗುವುದು ಕಂಬನಿಯಲ್ಲ, ರಕ್ತ.

ಇದೊಂದೇ ಪ್ರಕರಣವಲ್ಲ. ದೇಶದುದ್ದಕ್ಕೂ ಮಹಿಳೆಯರ ಮೇಲೆ ಸರಣಿ ಅತ್ಯಾಚಾರಗಳು ನಡೆಯುತ್ತಿದ್ದು, ಇದರಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಹಿಳೆಗೆ ದೇವತೆಯ ಸ್ಥಾನ ನೀಡಿರುವ ದೇಶದಲ್ಲೇ ಆಕೆಯ ವಿರುದ್ಧ ಪೈಶಾಚಿಕ ಕೃತ್ಯಗಳು ನಡೆಯುತ್ತಿರುವುದೇಕೆ? ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ
ಪ್ರಕಾರ, ೨೦೧೯ರಲ್ಲಿ ಭಾರತದಲ್ಲಿ ನಿತ್ಯ ೯೫ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, ವರ್ಷದಲ್ಲಿ ಒಟ್ಟು ೩೨,೦೩೩ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

೨೦೧೮-೧೯ರಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು ಶೇ.೭.೩ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅತ್ಯಾಚಾರದ ಸಂತ್ರಸ್ತೆಯರಲ್ಲಿ ಅಪ್ರಾಪ್ತ ಬಾಲಕಿಯರ ಸಂಖ್ಯೆ ಹೆಚ್ಚಾಗಿರುವುದು
ಆತಂಕದ ಸಂಗತಿ. ‘ನಿರ್ಭಯಾ’ಳಂಥ ಅನೇಕ ಯುವತಿಯರು ದುಷ್ಟರ ಮತ್ತು ಕೊಲೆಗಡುಕರ ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕುಳಿದರೆ
ಅನುಭವಿಸಬೇಕಾಗುವ ನೋವು, ತಿರಸ್ಕಾರಗಳು ಆಕೆಯ ಬದುಕನ್ನೇ ಛಿದ್ರಗೊಳಿಸಿಬಿಡುತ್ತವೆ. ನಮ್ಮ ದೇಶದಲ್ಲಿ, ‘ಅತ್ಯಾಚಾರ’ ಎನ್ನುವ ಪದವನ್ನು ಬಳಸಲು ಸಹ ಹಿಂಜರಿಯುವ ಕಾಲ ವೊಂದಿತ್ತು.

‘ಮಧ್ಯರಾತ್ರಿಯ ಸಮಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಓಡಾಡುವಂತಾದರೆ ಅದುವೇ ನಿಜವಾದ ಸ್ವಾತಂತ್ರ್ಯ’ ಎಂದೇನೋ ಮಹಾತ್ಮ ಗಾಂಧೀ ಹೇಳಿದ್ದಾರೆ; ಆದರೆ ಇಂಥ ಮಹನೀ
ಯರ ನುಡಿಗಳು ಅತ್ಯಾಚಾರಿಗಳ ಮನವನ್ನು ಮುಟ್ಟುವುದಿಲ್ಲ, ಹೃದಯವನ್ನು ತಟ್ಟುವುದಿಲ್ಲ. ಮಧ್ಯರಾತ್ರಿಯ ಮಾತು ಹಾಗಿರಲಿ, ಹಾಡುಹಗಲಲ್ಲೇ ಮಹಿಳೆ ಒಬ್ಬಳೇ ಓಡಾಡಲು, ವಾಹನಗಳಲ್ಲಿ ಪ್ರಯಾಣಿಸಲು ತಲ್ಲಣಿಸುವಂಥ ಸಂಕಷ್ಟದ ದಿನಗಳು ಎದುರಾಗಿವೆ. ‘ಅಷ್ಟು ರಾತ್ರಿಯಲ್ಲಿ ಅವಳೇಕೆ ಹೊರಗೆ ಹೋಗಬೇಕಿತ್ತು?’ ಎಂದು ಪ್ರಶ್ನಿಸುವವರು ಇಂಥ ದುರ್ವರ್ತನೆಗಳನ್ನು ಎಸಗು ವವರ ವಿರುದ್ಧ ದನಿಯೆತ್ತುತ್ತಿಲ್ಲವೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಮಹಿಳೆಯರು ಮನೆಯಲ್ಲಿ, ಆಸ್ಪತ್ರೆಗಳಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ನಡುರಸ್ತೆಗಳಲ್ಲಿ ದಿನನಿತ್ಯವೂ ಅನುಭವಿಸುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಗಮನಿಸಿ ದಾಗ, ಭಾರತದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೆಂಬುದು ಇನ್ನೂ ಮರೀಚಿಕೆಯೇ ಆಗಿದೆ ಎನಿಸುತ್ತದೆ. ನಗರಗಳಲ್ಲಿ ನಡೆಯುವ ಅತ್ಯಾಚಾರಗಳು ಮಾಧ್ಯಮಗಳ ಮೂಲಕ ಸಾರ್ವಜನಿಕರ ಗಮನಕ್ಕೆ ಬರುತ್ತವೆಯಾದರೂ ಗ್ರಾಮಗಳಲ್ಲಾಗುವ ಇಂಥ ಹೇಯಕೃತ್ಯಗಳು ಸುದ್ದಿಯಾಗುವುದೇ ಇಲ್ಲ. ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳನ್ನು ತಡೆಯಲೆಂದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲೆಂದು ೨೦೧೩ರಲ್ಲಿ ‘ನಿರ್ಭಯಾ ಕಾಯ್ದೆ’ಯನ್ನು ಜಾರಿಗೆ ತಂದಿದ್ದರೂ, ಅತ್ಯಾಚಾರದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.

ಅತ್ಯಾಚಾರಗಳು ಘಟಿಸುವುದು ದ್ವೇಷಕ್ಕಾಗಿ ಎನ್ನಲಾಗುತ್ತದೆ; ತಾನು ಇಷ್ಟಪಟ್ಟಿದ್ದ ಹೆಣ್ಣು ಮತ್ತೊಬ್ಬನನ್ನು ಮದುವೆಯಾಗಬಾರದೆಂಬ ಪುರುಷನ ಆಕ್ರೋಶವೂ ಇದಕ್ಕೊಂದು ಕಾರಣ ಎಂಬ ಅಭಿಪ್ರಾಯವೂ ಇದೆ. ಇನ್ನು, ಉದ್ಯೋಗಸ್ಥ ಮಹಿಳೆಯರು ಬಗೆಬಗೆಯಾಗಿ ಶೋಷಿಸಲ್ಪಡುತ್ತಾಳೆ: ಮೇಲಧಿಕಾರಿಯಿಂದ ಅಥವಾ ಸಹೋದ್ಯೋಗಿಗಳಿಂದ ಬರುವ ಅನುಚಿತ ಸಂದೇಶಗಳು, ಪ್ರೀತಿಗಾಗಿ ಪೀಡನೆ ಇಂಥ ನಡವಳಿಕೆಗಳಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದು ಆಕೆಗೆ ಕಷ್ಟಕರವಾಗುತ್ತದೆ. ದೇಶಭಕ್ತಿಯನ್ನು, ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಬಲ್ಲ ಸಾಮಾಜಿಕ ಮತ್ತು ಪೌರಾಣಿಕ ಹಿನ್ನೆಲೆಯ ಚಲನಚಿತ್ರಗಳು ನಿರ್ಮಾಣವಾಗುತ್ತಿದ್ದ ಕಾಲದಲ್ಲಿ ಇಂಥ ಅತ್ಯಾಚಾರ/ಹಿಂಸಾಚಾರಗಳ ಸಂಖ್ಯೆ ಕಡಿಮೆಯಿತ್ತೆನ್ನಬಹುದು. ವರ್ತಮಾನದಲ್ಲಿ ಪ್ರೇಕ್ಷಕರ ಅಭಿರುಚಿಗಳು ಬದಲಾಗಿವೆ.

ಶೀಘ್ರವಾಗಿ ದುಡ್ಡು ಮಾಡುವ ಲಾಲಸೆಯಿಂದ ನಿರ್ಮಾಣವಾಗುವ, ದ್ವೇಷ, ಅತ್ಯಾಚಾರ ಮತ್ತು ಹಿಂಸಾಚಾರಗಳನ್ನು ವೈಭವೀಕರಿಸುವಂಥ ಚಲನಚಿತ್ರಗಳು ಮತ್ತು ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಅಶ್ಲೀಲ ದೃಶ್ಯಾವಳಿಗಳು ವಿಕೃತ ಮನಸ್ಥಿತಿಯನ್ನು ಹುಟ್ಟುಹಾಕುತ್ತಿವೆ ಎಂಬ ಮಾತಿನಲ್ಲಿ ಸತ್ಯಾಂಶವಿದೆ. ಇಂಥವನ್ನು ವೀಕ್ಷಿಸುವ ಅಪ್ರಬುದ್ಧ ಯುವಕರು, ಅಲ್ಲಿನ
ಪಾತ್ರಧಾರಿಗಳಂತೆ ವರ್ತಿಸಲು ಹೋಗಿ ಇಂಥ ಹೇಯಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಮಾತಿದೆ. ಮಾಧ್ಯಮಗಳಲ್ಲಿ ಕಾಣಬರುವ ವಾಣಿಜ್ಯ ಜಾಹೀರಾತುಗಳು, ಮಹಿಳೆಯರ ಸೇವಾ ಮನೋಭಾವ ಮತ್ತು ಕುಶಲತೆಗಿಂತ ಆಕೆಯ ಅಂದಕ್ಕೆ ಮಹತ್ವ ನೀಡುತ್ತವೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಅವರ ಉಡುಗೆ-ತೊಡುಗೆಗಳೇ ಕಾರಣವೆಂಬ ಮಾತಿನಲ್ಲಿ  ಸತ್ಯಾಂಶ ವಿರುವುದಾದರೆ, ಏನೂ ಅರಿಯದ ಮುಗ್ಧ ಕಂದಮ್ಮಗಳ ಮೇಲಾಗುವ ದೌರ್ಜನ್ಯಕ್ಕೆ ಕಾರಣವೇನು? ‘ಈಕೆ ಸರಿಯಾಗಿದ್ದಿದ್ದರೆ ಅತ್ಯಾಚಾರಕ್ಕೆ ಗುರಿಯಾಗುತ್ತಿರಲಿಲ್ಲ’ ಎಂದು ಬಾಣ ಬಿಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ; ಕಾನೂನಿನ ಪದವಿ ಪಡೆಯದವರೂ ಹೆಣ್ಣೊಬ್ಬಳ ನಡತೆಯನ್ನು ವಿಮರ್ಶೆ ಮಾಡಿಬಿಡುತ್ತಾರೆ!

‘ಹುಡುಗರು ಹುಡುಗರೇ, ಅವರು ತಪ್ಪು ಮಾಡುತ್ತಾರೆ’ ಎಂದು ಕೆಲ ಜನಪ್ರತಿನಿಧಿಗಳೇ ಬಹಿರಂಗವಾಗಿ ಹೇಳುವಾಗ, ಅವರ ಹಿಂಬಾಲಕರು ಇಂಥ ‘ಹಿತನುಡಿಗಳನ್ನು’ ಸಮರ್ಥಿಸದಿರು ತ್ತಾರೆಯೇ? ಮಕ್ಕಳು ಬೇಗನೇ ಪ್ರೌಢರಾಗುತ್ತಿದ್ದಾರೆಂಬ ಮಾತಿದೆ. ಒಂದಿಡೀ ವಿಶ್ವವೇ ಈಗ ಬೆರಳ ತುದಿಯಲ್ಲಿರುವುದರಿಂದ, ಸ್ಮಾರ್ಟ್ ಫೋನುಗಳು ಮಕ್ಕಳ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವಗಳೆರಡನ್ನೂ ಬೀರುವ ಸಾಧ್ಯತೆಯಿದೆ. ಅವರು ಮೊಬೈಲ್/ಟಿವಿಯಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆಂಬುದನ್ನು ಗಮನಿಸುವುದು ಅಗತ್ಯ. ಸ್ವೇಚ್ಛಾಚಾರವೂ ಲೈಂಗಿಕ ದೌರ್ಜನ್ಯಗಳಿಗೆ ಕಾರಣವಾಗಬಹುದು ಎಂಬ ಮಾತಿನಲ್ಲಿ ಸತ್ಯವಿಲ್ಲದಿಲ್ಲ. ವ್ಯಸನಗಳಿಗೆ ಬಲಿಯಾದವರಲ್ಲಿ ವಿವೇಚಬಾಶಕ್ತಿ ಮರೆಯಾದಾಗ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಉದಾಹರಣೆಗಳಿವೆ. ಆದ್ದರಿಂದ ಶಾಲೆ ಮತ್ತು ಮನೆಗಳಲ್ಲಿ ಪಠ್ಯಪುಸ್ತಕಗಳ ಹೂರಣದ ಜತೆಜತೆಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕಾಗಿದೆ.

ಪೋಷಕರು ಮಗಳಿಗೆ ಹೇಳುವ ನೀತಿ ಪಾಠವನ್ನೇ ಮಗನಿಗೂ ಬೋಧಿಸಬೇಕು. ಜತೆಗೆ, ಬಡಾವಣೆಯಲ್ಲಿರುವ ಯುವಕರನ್ನು ರಾತ್ರಿಯ ಸಮಯ, ಸರದಿಯಂತೆ ಗಸ್ತು ತಿರುಗಿಸುವುದು
ಸೂಕ್ತ. ಶಾಲಾ-ಕಾಲೇಜುಗಳಲ್ಲಿ ವಿಡಿಯೋ ಕಣ್ಗಾವಲನ್ನು ಕಡ್ಡಾಯಗೊಳಿಸಬೇಕು. ಮಹಿಳೆಯ ವ್ಯಕ್ತಿತ್ವದ ಇತರ ಆಯಾಮಗಳ ಬಗ್ಗೆ ಯೋಚಿಸಲಿಚ್ಛಿಸದ ಕೆಲ ಪುರುಷರಿಗೆ ಆಕೆ ಕೇವಲ
ಭೋಗದ ವಸ್ತುವಷ್ಟೇ. ಆದರೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರನ್ನು ಅನಗತ್ಯ ಗರ್ಭಧಾರಣೆ, ಶಿಶುಮರಣ ಮತ್ತು ಸೋಂಕುಗಳು ಕಾಡಿ ಬದುಕನ್ನು ವಿಹ್ವಲವಾಗಿಸುತ್ತವೆ. ಅವರು ದೀರ್ಘಕಾಲಿಕ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ, ‘ಹೆಣ್ಣಾಗಿ ಹುಟ್ಟುವುದಕ್ಕಿಂತ ಅರಣ್ಯದಲ್ಲಿ ಪ್ರಾಣಿಯಾಗುವುದೇ ಲೇಸು’ ಎಂಬ ಭಾವನೆ ಇಂಥವರಲ್ಲಿ ಮೂಡಿದರೂ ಅಚ್ಚರಿಯಿಲ್ಲ.

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಆಂತರಿಕ ದೂರು ವಿಚಾರಣಾ ಕೇಂದ್ರವಿರಬೇಕೆಂಬ ನಿಯಮ ಜಾರಿಯಲ್ಲಿದ್ದರೂ, ಬಹಳಷ್ಟು ಸಂಸ್ಥೆ ಗಳಲ್ಲಿ ಈ ವಿಭಾಗವಿಲ್ಲವೆನ್ನಬಹುದು. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಯಾವ ನಿಯಮಾವಳಿಯೂ ನೆರವಾಗುವುದಿಲ್ಲ. ಎಷ್ಟೋ ಬಾರಿ, ಕಾನೂನಿನ ಅರಿವಿಲ್ಲದೆ, ಅಪರಾಧ ಸಾಬೀತುಪಡಿಸಲು ಅಗತ್ಯವಿರುವ ಸಾಕ್ಷ್ಯಗಳು ನಾಶವಾಗಿಬಿಡುತ್ತವೆ. ಅತ್ಯಾಚಾರಿಗಳ ಸಂಖ್ಯೆ ಹೆಚ್ಚಾದರೂ ಶಿಕ್ಷೆಗೊಳಗಾದವರ ಸಂಖ್ಯೆ ಹೆಚ್ಚಾಗದಿರುವುದು ಕಳವಳಕಾರಿ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ತನ್ನ ಜೀವನದ ಬಗ್ಗೆ ಮತ್ತೆ ನಂಬಿಕೆ- ವಿಶ್ವಾಸಗಳು ಮೂಡಬೇಕೆಂದರೆ, ಇಡೀ ಸಮಾಜ ಅವಳ ಜತೆಗಿರಬೇಕು. ಕುಟುಂಬದ ನಿಕಟವರ್ತಿಗಳು ತುಂಬಾ ಸೂಕ್ಷ್ಮವಾಗಿ ವ್ಯವಹರಿಸಿ ಆಕೆಯ ಕದಡಿದ ಮನಸ್ಥಿತಿಯನ್ನು ನಿರಾಳವಾಗಿಸಬೇಕು.

ಕೆಲ ಅತ್ಯಾಚಾರದ ಸಂತ್ರಸ್ತೆಯರು ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು/ವರದಿಮಾಡಲು ವಿಫಲರಾಗುತ್ತಾರೆ; ನ್ಯಾಯಾಲಯದಲ್ಲಿ ನಡೆಯುವ ‘ಕ್ರಾಸ್-ಎಕ್ಸಾಮಿನೇಷನ್’ ಯಾತನಾ ಮಯವಾಗಿರುತ್ತದೆ ಎಂಬ ಗ್ರಹಿಕೆ ಇದಕ್ಕೊಂದು ಕಾರಣ. ಆಳುಗರು ಆಕೆಯಲ್ಲಿ ಧೈರ್ಯ ತುಂಬಿ, ಅಗತ್ಯವಿರುವ ಆರ್ಥಿಕ-ವೈದ್ಯಕೀಯ-ಕಾನೂನಿನ ನೆರವನ್ನು ಆಕೆಗೆ ಒದಗಿಸಬೇಕು. ಮಹಿಳೆಯರನ್ನು ಸರಕಾಗಿ ಬಿಂಬಿಸುವ ಅಸಭ್ಯ ಜಾಹೀರಾತು, ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಬೇಕು. ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಅತ್ಯುತ್ಸಾಹ ತೋರುವ ಸರಕಾರಗಳು, ಮಹಿಳೆಯರ ರಕ್ಷಣೆಗೂ ಬದ್ಧತೆಯನ್ನು ಪ್ರದರ್ಶಿಸುವುದು ಅಗತ್ಯ. ಇನ್ನು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ವ್ಯವಸ್ಥೆಗೆ ಬಂದರೆ ಕಾನೂನು-ಸುವ್ಯವಸ್ಥೆ ಯಲ್ಲಿ ಗಣನೀಯ ಬದಲಾವಣೆಯನ್ನು ನಿರೀಕ್ಷಿಸಬಹುದು. ಮಹಿಳೆ ಯರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮಹಿಳಾ ಆರಕ್ಷಕ ಠಾಣೆಗಳನ್ನು ರಚಿಸಬೇಕು.

ದೌರ್ಜನ್ಯಕ್ಕೊಳಗಾದ ಮಹಿಳೆಗೆ ಪೊಲೀಸ್ ಠಾಣೆಯಲ್ಲಿ ಅನುಕೂಲಕರ ವಾತಾವರಣ ಕಲ್ಪಿಸುವಿಕೆ, ದೂರುದಾರರಿಗೆ ರಕ್ಷಣೆ ಒದಗಿಸುವಿಕೆ, ತ್ವರಿತಗತಿಯಲ್ಲಿ ಪಾರದರ್ಶಕ ತನಿಖೆ ನಡೆಸುವಿಕೆ
ಮತ್ತು ಅತ್ಯಾಚಾರ ಎಸಗಿದ ದುರುಳನಿಗೆ ಉಗ್ರಶಿಕ್ಷೆ ವಿಽಸುವಿಕೆ ಮುಂತಾದ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡರೆ ಅತ್ಯಾಚಾರದ ಘಟನೆಗಳು ತಹಬಂದಿಗೆ ಬಂದಾವು. ಅತ್ಯಾಚಾರದ ಸಂತ್ರಸ್ತರ ನೆರವಿಗೆ ಬಾರದ ಕಾನೂನು ಅದೆಷ್ಟೇ ಕಟ್ಟುನಿಟ್ಟಾಗಿದ್ದರೂ ಪ್ರಯೋಜನಕಾರಿ ಎನಿಸದು. ಬಸ್‌ನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರೊಬ್ಬರು, ‘ಅತ್ಯಾಚಾರ ಕ್ಕೊಳಗಾದ ಮಹಿಳೆಗೆ ಸಂತಾಪ ಸೂಚಿಸಲು ಮೋಂಬತ್ತಿಯನ್ನು ಉರಿಸುತ್ತಾ ನಡೆದರೆ ಸಾಲದು; ಪ್ರಾಚೀನ ಮತ್ತು ಮಧ್ಯಯುಗದ ಭಾರತದಲ್ಲಿ, ಘೋರ ಅಪರಾಧವೆಸಗಿದವರನ್ನು ಕಬ್ಬಿಣದ ಮಂಚದ ಮೇಲೆ ಕೈಕಾಲುಗಳನ್ನು ಕಟ್ಟಿ ಮಲಗಿಸಿ, ಮಂಚದ ಕೆಳಗಿ ನಿಂದ ಬೆಂಕಿ ಹಚ್ಚಿ ಶಿಕ್ಷಿಸುತ್ತಿದ್ದರು.

ಅತ್ಯಾಚಾರಿಗಳಿಗೂ ಇದೇ ಶಿಕ್ಷೆಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇಂದಿನ ದಿನಗಳಲ್ಲಿ ಅಂಥ ಶಿಕ್ಷೆ ವಿಧಿಸಲು ಮುಂದಾದರೆ, ಮಾನವ ಹಕ್ಕುಗಳ ಸಂರಕ್ಷಕರು ಧಾವಿಸಿ
ಬರುತ್ತಾರೆ. ಇನ್ನೊಂದು ಕಳವಳಕಾರಿ ಸಂಗತಿಯೆಂದರೆ, ದಿನದ ೨೪ ಗಂಟೆಯೂ ವಾಹನಗಳು ಸಂಚರಿಸುವ ಹೈದರಾಬಾದ್‌ನ ಹೆದ್ದಾರಿಯಲ್ಲಿ, ದುರುಳರು ಪಶುವೈದ್ಯೆಯನ್ನು ಅಪಹರಿಸಿ ದೌರ್ಜನ್ಯವೆಸಗಿ ದ್ದಾರೆ. ಗಲ್ಲಿ ಗಲ್ಲಿಗಳಲ್ಲಿಯೂ ಆರಕ್ಷಕರ ನಿಯೋಜನೆ ಸಾಧ್ಯವಿಲ್ಲವೆಂದು ಆಳುಗರು ಕೈಕೊಡವಿಕೊಳ್ಳಲಾಗದು. ಕಾನೂನಿನ ರಕ್ಷಕರ ಗಮನಕ್ಕೆ ಬಾರದಂತೆ ದುರುಳರು ಹೀಗೆ ಹೆದ್ದಾರಿಯಲ್ಲೂ ಮೆರೆದಿದ್ದು ಹೇಗೆ ಎಂಬುದರ ಚರ್ಚೆಯಾಗಬೇಕು.

ಅತ್ಯಾಚಾರದ ಘಟನೆಗಳ ಕುರಿತು ರೈಲಿನಲ್ಲಿ, ಬಸ್ಸಿನಲ್ಲಿ, ಮನೆಯ ಹಜಾರದಲ್ಲಿ ಸುದ್ದಿವಾಹಿನಿಗಳ ಮುಂದೆ ಕುಳಿತು ಚರ್ಚಿಸುತ್ತಾ ನಡೆಯುವಷ್ಟರಲ್ಲಿ ಇನ್ನೂ ನಾಲ್ಕಾರು ಅತ್ಯಾಚಾರದ ಘಟನೆಗಳು ಸಂಭವಿಸಿರುತ್ತವೆ. ಇಂಥ ಪ್ರಕರಣ ನಡೆದಾಗ ಇರುವ ಬಿಸಿ, ಕೆಲವೇ ದಿನಗಳಲ್ಲಿ ಜನಮಾನಸದಿಂದ ಮರೆಯಾಗಿಬಿಡುತ್ತದೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗುವವರು ಆಕೆಯಲ್ಲಿ ತನ್ನ ಸೋದರಿಯನ್ನೋ ತಾಯಿಯನ್ನೋ ಕಾಣುವ ಮನಸ್ಥಿತಿ ರೂಪುಗೊಳ್ಳಲಿ. ‘ಎಲ್ಲಿ ಸ್ತ್ರೀಯರನ್ನು ಗೌರವಾದರಗಳೊಂದಿಗೆ ನಡೆಸಿಕೊಳ್ಳಲಾಗುತ್ತದೆಯೋ ಅಲ್ಲಿ ದೈವತ್ವ ರಾರಾಜಿಸುತ್ತದೆ’ ಎಂಬಂಥ ದಿವ್ಯನುಡಿಗಳು ‘ಮಹಿಳಾ ದಿನ’ಕ್ಕೆ ಮಾತ್ರ ಸೀಮಿತವಾಗದಿರಲಿ. ಮಹಿಳಾ-ಸ್ನೇಹಿ ವ್ಯವಸ್ಥೆಯನ್ನು ಕಟ್ಟದಿದ್ದರೆ ಅತ್ಯಾಚಾರಿಗಳ ಸಂಖ್ಯೆ ಬೆಳೆಯುತ್ತಲೇ
ಹೋಗುತ್ತದೆ. ಆದ್ದರಿಂದ, ಮಹಿಳಾ ಸುರಕ್ಷತೆಗಾಗಿ ನಾವೆಲ್ಲರು ನಿರಂತರವಾದ ಮತ್ತು ಅರ್ಥವತ್ತಾದ ಹೋರಾಟವನ್ನು ಮುಂದುವರಿಸಬೇಕಾಗಿದೆ.

(ಲೇಖಕಿ ಸಾಹಿತಿ ಮತ್ತು ಬ್ಲಾಗ್ ಬರಹಗಾರ್ತಿ)

 

Leave a Reply

Your email address will not be published. Required fields are marked *