Thursday, 12th December 2024

ತಾರಸಿಯಲ್ಲಿ ವಿಮಾನ ಕಟ್ಟಿದವನ ಕನಸು ನನಸಾದೀತೇ ?

ಅಭಿಪ್ರಾಯ

ಗಣೇಶ್ ಭಟ್

ganeshbhatv@gmail.com

ಈ ಸಾಹಸಿಯ ಹೆಸರು ಕ್ಯಾಪ್ಟನ್ ಅಮೋಲ್ ಯಾದವ್. ಇವರು ವೃತ್ತಿಯಲ್ಲಿ ಪೈಲಟ್. ಇವರ ಮನಸ್ಸಿನಂದು ಆಸೆ ಹುಟ್ಟುತ್ತದೆ. ಭಾರತೀಯರಿಗಾಗಿ ಭಾರತದ ವಿಮಾನವನ್ನು ತಯಾರಿಸಬೇಕು ಎಂಬುದು ಅಮೋಲ್ ಯಾದವ್ ಅವರ ಮಹತ್ವಾಕಾಂಕ್ಷೆ. ಏಕೆಂದರೆ ಭಾರತ ದಲ್ಲಿ ನಾಗರಿಕ ಉದ್ದೇಶಕ್ಕೆ ಬಳಕೆಯಾಗುವ ಯಾವುದೇ ವಿಮಾ ನಗಳು ತಯಾರಾಗುತ್ತಿಲ್ಲ. ಭಾರತದಲ್ಲಿ ವಿವಿಧ ರೀತಿಯ ಉದ್ಯಮಗಳು ಇವೆ. ಭಾರತದ ಸಾಪ್ಟ್ವೇರ್ ಕಂಪನಿಗಳು, ಸಿದ್ಧ ಉಡುಪುಗಳ ತಯಾರಿಕೆಯ ಸಂಸ್ಥೆಗಳು, ಇಸ್ರೊ ಮೊದಲಾದವುಗಳು ಜಾಗತಿಕವಾಗಿ ಬಹಳಷ್ಟು ಹೆಸರು ಮಾಡಿವೆ.

ಎಚ್ ಎಎಲ್, ಡಿಆರ್‌ಡಿಓಗಳು ಮಿಲಿಟರಿ ಉದ್ದೇಶಕ್ಕಾಗಿ ಬಳಕೆಯಾಗುವ ಯುದ್ಧ ವಿಮಾನಗಳನ್ನು ರಚನೆ ಮಾಡುತ್ತಿವೆ. ಇತ್ತೀಚೆಗೆ ಟಾಟಾ ಕಂಪನಿಯೂ ಮಿಲಿಟರಿ ಸಾಗಾಟದ ವಿಮಾನಗಳನ್ನು ನಿರ್ಮಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಇವರೆಲ್ಲರ ನಡುವೆ ನಾಗರಿಕ ಪ್ರಯಾಣದ ಉದ್ದೇಶದಿಂದ ಸ್ವದೇಶಿ ನಾಗರಿಕ ಬಳಕೆಯ ವಿಮಾನವನ್ನು ರಚಿಸುವ ಕನಸನ್ನು ಕಂಡವರು ಅಮೋಲ್ ಯಾದವ್ ಮಾತ್ರ.

ಭಾರತದ ವಿಮಾನಯಾನ ಕ್ಷೇತ್ರದ ವಾರ್ಷಿಕ ಮಾರುಕಟ್ಟೆ ಹಾಗೂ ವರಮಾನ ಸುಮಾರು ೧೮ ಶತಕೋಟಿ ಡಾಲರ್ (೧,೨೫,೦೦೦ ಕೋಟಿ ರುಪಾಯಿ) ಗಳು. ಪ್ರಸ್ತುತ ದೇಶದಲ್ಲಿ ೧೨೩ ನಾಗರಿಕ ಯಾನಕ್ಕೆ ಬಳಕೆ ಯಾಗುವ ವಿಮಾನ ನಿಲ್ದಾಣಗಳಿವೆ. ೨೦೧೪ ರವರೆಗೆ ದೇಶದಲ್ಲಿ ೬೫ ನಾಗರಿಕ ವಿಮಾನ ನಿಲ್ದಾಣ ಗಳಿದ್ದವು. ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ, ಅರುಣಾಚಲ ಪ್ರದೇಶ,ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಝೋರಾಂ,ಸಿಕ್ಕಿಂ ರಾಜ್ಯಗಳಲ್ಲಿ ಕೂಡಾ ೧೫ ವಿಮಾನ ನಿಲ್ದಾಣ ಗಳನ್ನು ರೂಪಿಸಲಾಗಿದೆ. ೩೨ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಳು ಭಾರತದಲ್ಲಿವೆ.

೨೦೨೦ರಲ್ಲಿ ಭಾರತದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ೨೦೨೪ ರ ಒಳಗೆ ಇನ್ನೂ ೧೦೦ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ೧೯೯೫ ನೇ ಇಸವಿಯಲ್ಲಿ ತನ್ನ ೧೯ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಿವಾಸಿ ಅಮೋಲ್ ಯಾದವ್ ವಾಣಿಜ್ಯ ವಿಮಾನ ಹಾರಾಟದ ತರಬೇತಿಯನ್ನು ಪಡೆಯಲು ಅಮೆರಿಕಗೆ ತೆರಳಿದರು. ಒಬ್ಬ ಯಶಸ್ವಿ ಪೈಲಟ್ ಆಗುವ ನಿಟ್ಟಿನ ಎಲ್ಲ ತರಬೇತಿಗಳನ್ನೂ ಪೂರೈಸಿ ಭಾರತಕ್ಕೆ ಹಿಂತಿರುಗಿದರು. ಹಿಂತಿರುಗಿ ಬರುವಾಗ ಅಮೋಲ್ ಯಾದವ್ ಸ್ವದೇಶಿ ವಿಮಾನವೊಂದನ್ನು ರಚಿಸುವ ಕನಸನ್ನು ಹೊತ್ತುಕೊಂಡೇ ಬಂದರು.

ಅಮೋಲ್ ಕನಸಿಗೆ ನೀರೆರೆದು ಪೋಷಿಸಿದವರು ಅವರ ತಂದೆ ಶಿವಾಜಿ ಎಸ್ ಯಾದವ್. ೧೯೯೮ ರಲ್ಲಿ ಆಮೋಲ್ ಯಾದವ್ ತನ್ನ ಮುಂಬೈನ ಮನೆಯ ತಾರಸಿ
ಯಲ್ಲಿ ೨ ಆಸನಗಳ ವಿಮಾನವನ್ನು ತಯಾರಿಸಿದರು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ೨ ಆಸನಗಳ ವಿಮಾನವು ಆಗಸಕ್ಕೆ ಏರದೇ ನೆಲದ ಉಳಿಯಿತು. ಇದೇ ವಿಮಾನದ ತಾಂತ್ರಿಕ ದೋಷಗಳನ್ನು ಪರಿಹರಿಸಿ ೨೦೦೩ ರಲ್ಲಿ ಹಾರಾಟಕ್ಕೆ ಸಿದ್ಧಪಡಿಸಿದರೂ ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್‌ನ ಹಾರಾ ಟ ನಿರ್ಬಂಧಗಳಿಂದಾಗಿ ಹಾರಾಡಿಸಲು ಆಗಲಿಲ್ಲ. ಹಠವನ್ನು ಬಿಡದ ಅಮೋಲ್ ತನ್ನ ಪ್ರಯತ್ನವನ್ನು ಮುಂದುವರಿಸಿದರು.

೨೦೧೦ರಲ್ಲಿ ಅಮೋಲ್ ಯಾದವ್ ೬ ಸೀಟುಗಳ ಟಿಎಸಿ ೦೦೩ ವಿಮಾನವನ್ನು ರಚಿಸುವ ನಿರ್ಧಾರಕ್ಕೆ ಬಂದರು. ಜೆಟ್ ಏರ್‌ವೇಸ್ ಜತೆಗೆ ಇವರು ಮಾಡಿದ ಕೆಲಸದ ಅನುಭವ ವಿಮಾನ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಆಯ್ಕೆ ಮಾಡಲು, ವಿಮಾನ ಹಾರಾಟದ ಗುಣಮಟ್ಟದ ಮಾನದಂಡಗಳನ್ನು ಅರಿಯಲು ಸಹಕಾರಿಯಾಯಿತು. ೨೦೧೬ರಲ್ಲಿ ೬ ಸೀಟುಗಳ ಟಿಎಸಿ ೦೦೩ ವಿಮಾನವನ್ನು ನಿರ್ಮಿಸಿಯೇಬಿಟ್ಟರು. ಯಾವುದೇ ರೀತಿಯ ಕುಂದುಕೊರತೆಗಳಿರದ ಅಮೋಲ್ ಯಾದವ್‌ರ ೬ ಸೀಟರ್ ವಿಮಾನವು ಹಾರಾಟಕ್ಕೆ ಸಿದ್ಧವಾಗಿ ನಿಂತಿತು.

ಥ್ರ ಏರ್ ಕ್ರಾಫ್ಟ್ ಸಂಸ್ಥೆ ಖಾಸಗಿಯಾಗಿ ನಾಗರಿಕ ವಿಮಾನ ನಿರ್ಮಿಸುವ ಉದ್ದೇಶದಿಂದ ರೂಪುಗೊಂಡ ಮೊದಲ ಭಾರತೀಯ ಸಂಸ್ಥೆಯಾಗಿದೆ. ಈ ವಿಮಾನವನ್ನು ಡಿಜಿಸಿಎ ಹಾಗೂ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಅನುಸರಿಸಿಯೇ ನಿರ್ಮಿಸಲಾಯಿತು. ಈ ವಿಮಾನದ ನಿರ್ಮಾಣದಲ್ಲಿ ಶೇ.೬೦ರಷ್ಟು ಭಾಗಗಳು ಭಾರತೀಯ ನಿರ್ಮಿತ ವಸ್ತುಗಳು ಬಳಕೆಯಾಗಿವೆ ಹಾಗೂ ಎಂಜಿನ್ ಸೇರಿದಂತೆ ಶೇ.೪೦ರಷ್ಟು ವಸ್ತುಗಳು ವಿದೇಶದಿಂದ ತಂದವುಗಳಾಗಿವೆ. ಅಮೋಲ್ ಯಾದವ್ ಮೇಕ್ ಇನ್ ಇಂಡಿಯಾ ಪ್ರದರ್ಶನಗಳಲ್ಲಿ ತನ್ನ ವಿಮಾನವನ್ನು ಪ್ರದರ್ಶಿಸಿzರೆ. ೨೦೧೬ ರ ಮೇಕ್ ಇನ್ ಇಂಡಿಯಾ ಪ್ರದರ್ಶನದಲ್ಲಿ ಅಮೋಲ್ ಯಾದವರ ವಿಮಾನವು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ನಾಗರಿಕ ಬಳಕೆಯ ವಿಮಾನವನ್ನೇನೋ ಅಮೋಲ್ ಯಾದವ್ ನಿರ್ಮಿಸಿಯಾ ಯಿತು. ಅದನ್ನು ಹಾರಿಸುವ ಬಗೆ, ಅದಕ್ಕೆ ಡಿಜಿಸಿಎ ಅನುಮತಿ ಪಡೆಯುವುದು, ನೋಂದಾವಣಿ ಮಾಡಿಸುವುದು, ವಿಮೆ ಮಾಡಿಸುವುದು ಮೊದಲಾದ ವಿಷಯಗಳು ಅಮೋಲ್ ಯಾದವ್ ಮುಂದಿನ ಸವಾಲುಗಳಾಗಿದ್ದವು. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ)ನೋಂದಣಿಯನ್ನು ಮಾಡಿಸಿಕೊಳ್ಳಲು ಅಮೋಲ್ ಯಾದವ್ ಇನ್ನಿಲ್ಲದ ಕಷ್ಟಪಡಬೇಕಾಯಿತು. ಡಿಜಿಸಿಎ ೬ ವರ್ಷಗಳ ಕಾಲ ಅಮೋಲ್ ಯಾದವ್‌ರ ೬ ಆಸನಗಳ ವಿಮಾನವನ್ನು ನೊಂದಣಿ ಮಾಡದೆ ಸತಾಯಿಸಿತು. ಸರಕಾರಿ ಬಾಬುಗಳು ಎಲ್ಲ ಹಂತಗಳಲ್ಲೂ ತಮ್ಮ ನಿಧಾನ ಪ್ರವೃತ್ತಿ ಹಾಗೂ ಬೇಜವಾಬ್ದಾರಿತನವನ್ನು ಮೆರೆದು ನೊಂದಣಿ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದರು. ಬೇಸತ್ತ ಅಮೋಲ್ ಯಾದವ್ ಅಂದಿನ
ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದ ದೇವೇಂದ್ರ ಫಡ್ನಾವೀಸ್ ಅವರ ಮೊರೆ ಹೊಕ್ಕರು. ಈ ವಿಷಯದಲ್ಲಿ ಸೂಕ್ತವಾಗಿ ಸ್ಪಂದಿಸಿದ ದೇವೇಂದ್ರ ಫಡ್ನಾವೀಸ್ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಡಿಜಿಸಿಎಯು ದೇಶೀಯವಾಗಿ ನಿರ್ಮಾಣವಾಗುತ್ತಿರುವ ವಿಮಾನದ ಬಗ್ಗೆ ತೋರುತ್ತಿರುವ ಅಸಡ್ಡೆಯನ್ನು
ವಿವರಿಸಿ ಡಿಜಿಸಿಎಯು ವ್ಯವಸ್ಥೆಯ ಅಪಹಾಸ್ಯವನ್ನು ಮಾಡುತ್ತಿದೆ ಎಂದು ದೂರಿದರು.

ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಡಿಜಿಸಿಎಯ ನಿರ್ಲಕ್ಷ್ಯದ ಕುರಿತು ಪ್ರಧಾನಿಗಳಿಗೆ ಮನನ ಮಾಡಿದರು. ಇದರ ಪರಿಣಾಮವಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಮಧ್ಯ ಪ್ರವೇಶಿಸಿ, ಅಡೆತಡೆಗಳನ್ನು ನಿವಾರಿಸಿ, ೬ ಆಸನಗಳ ವಿಮಾನವನ್ನು ನೊಂದಣಿ ಮಾಡಿಕೊಳ್ಳಲು ಡಿಜಿಸಿಎಗೆ ಸೂಚಿಸಿತು. ಕೊನೆಗೂ
೨೦೧೭ರ ನವೆಂಬರ್ ೧೭ ರಂದು ಡಿಜಿಸಿಎ ಕ್ಯಾ. ಅಮೋಲ್ ಯಾದವರ ವಿಮಾನವನ್ನು ನೋಂದಾಣಿ ಮಾಡಿಕೊಂಡಿತು. ಈ ನಡುವೆ ೨೦೧೮ರಲ್ಲಿ ದೇವೇಂದ್ರ ಫಡ್ನಾವೀಸ್ ನೇತೃತ್ವದ ಸರಕಾರ ಮಹಾರಾಷ್ಟ್ರದಲ್ಲಿ ವಾಣಿಜ್ಯ ವಿಮಾನಗಳನ್ನು ನಿರ್ಮಾಣ ಮಾಡುವ ಕುರಿತಾಗಿ ಅಮೋಲ್ ಯಾದವರ ಜತೆಗೆ ತಿಳುವಳಿಕೆ
ಪತ್ರಕ್ಕೆ ಸಹಿ ಹಾಕಿತು. ಈ ಒಪ್ಪಂದದ ಪ್ರಕಾರ ವಿಮಾನ ನಿರ್ಮಾಣ ಯೋಜನೆಯಲ್ಲಿ ೩೫೦೦೦ ಕೋಟಿ ರುಪಾಯಿಗಳ ಹೂಡಿಕೆ ಯಾಗಬಹುದೆಂದು ಹಾಗೂ ಈ ಯೋಜನೆಯು ೧೦೦೦೦ ಉದ್ಯೋಗಗಳನ್ನು ಸೃಷ್ಟಿಸಬಹುದೆಂದು ನಿರೀಕ್ಷಿಸಲಾಯಿತು.

ಸರಕಾರವು ಈ ಯೊಜನೆಯನ್ನು ಜಾರಿಗೆ ತರಲು ಪಾಲ್ಘಾರ್‌ನಲ್ಲಿ ೧೫೭ ಎಕರೆ ಭೂಮಿಯನ್ನು ಕೊಡುವುದು ಎಂಬ ತೀರ್ಮಾನವೂ ಆಯಿತು. ೬ ಸೀಟುಗಳ ವಿಮಾನವಲ್ಲದೆ ೧೯ ಸೀಟುಗಳ ವಿಮಾನ ನಿರ್ಮಾಣ ಮಾಡುವ ಗುರಿಯನ್ನೂ ಈ ಯೋಜನೆಯಲ್ಲಿ ಹಾಕಿಕೊಳ್ಳಲಾಗಿತ್ತು. ಇಷ್ಟೆಲ್ಲವಾದರೂ ಡಿಜಿಸಿಎ ಹಾರಾಟ ಪರೀಕ್ಷೆ ನಡೆಸಲು ಅನುಮತಿಯನ್ನು ಕೊಡಲಿಲ್ಲ. ಅಮೋಲ್ ಯಾದವ್ ವಿಮಾನಕ್ಕೆ ಹಾರಾಟದ ಪರವಾನಗಿಯನ್ನು ಕೊಡಲು ಬೇಡಿಕೆ ಸಲ್ಲಿಸಿದಾಗ
ಪ್ರಯೋಗಾತ್ಮಕ ವಿಭಾಗದಲ್ಲಿ ನೋಂದಾಯಿತ ವಿಮಾನಕ್ಕೆ ಹಾರಾಟದ ಪರವಾನಗಿಯನ್ನು ನೀಡುವ ವ್ಯವಸ್ಥೆ ಇಲ್ಲ ಎಂದು ಉತ್ತರ ಕೊಟ್ಟಿತು. ಇದರಿಂದಾಗಿ ಇದುವರೆಗೂ ಅಮೋಲ್ ಯಾದವ್ ಮಾಡಿದ ಪ್ರಯತ್ನಗಳೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಯಿತು.

ಹತಾಶರಾದ ಅಮೋಲ್ ಯಾದವ್ ಒಂದು ಹಂತದಲ್ಲಿ ಅಮೆರಿಕಕ್ಕೆ ವಿಮಾನವನ್ನು ಕೊಂಡುಹೋಗಿ ಅಲ್ಲಿನ ಸಂಸ್ಥೆಗಳಿಂದ ವಾಯುಯಾನ ಯೋಗ್ಯತಾ ಪ್ರಮಾಣ ಪತ್ರ ವನ್ನು ತರುವ ನಿರ್ಣಯವನ್ನೂ ಮಾಡಿದ್ದರು. ಈ ಸಂದರ್ಭ ದಲ್ಲೂ ಅಮೋಲ್ ಯಾದವ್ ನೆರವಿಗೆ ಬಂದವರು ದೇವೇಂದ್ರ ಫಡ್ನಾವೀಸ್ ಹಾಗೂ ನರೇಂದ್ರ ಮೋದಿ. ಫಡ್ನಾವೀಸ್ ಅಮೋಲ್ ಯಾದವ್‌ರಿಗೆ ಮೋದಿಯವರ ಭೇಟಿಯನ್ನು ಮಾಡಿಸುತ್ತಾರೆ. ನರೇಂದ್ರ ಮೋದಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಮಾನ
ಹಾರಾಟ ಪರೀಕ್ಷೆಯ ಮೇಲೆ ವಿಧಿಸಲಾಗಿರುವ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲು ಸೂಚಿದರು. ಪ್ರಧಾನಿ ಮೋದಿ ಅಮೋಲ್ ಯಾದವ್‌ರನ್ನು ಪ್ರಶಂಸಿಸಿ ಈ ಯೋಜನೆಯನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಇದರ ಪರಿಣಾಮವಾಗಿ ಡಿಜಿಸಿಎ ಎಲ್ಲಾ ರೀತಿಯ ಅಡೆತಡೆಗಳನ್ನು ತೆಗೆದುಹಾಕಿ ಅವರ ವಿಮಾನ ಹಾರಾಟಕ್ಕೆ ಅನುಮತಿಯನ್ನು ನೀಡಿತು. ಹಾರಾಟ ನಡೆಸಿ ಸುರಕ್ಷಿತವಾಗಿ ನೆಲಕ್ಕಿಳಿಯಿತು.

ಆದರೆ ಅಮೋಲ್ ಯಾದವ್ ಅವರ ಕಷ್ಟಗಳು ಇಷ್ಟಕ್ಕೇ ಮುಗಿದಿಲ್ಲ. ಇನ್ನೂ ಅವರು ಎರಡನೆಯ ಹಾಗೂ ಮೂರನೇ ಹಂತದ ಹಾರಾಟ ನಡೆಸಬೇಕು. ೨ನೇ ಹಂತದ ಪರೀಕ್ಷಾ ಹಾರಾಟಕ್ಕೆ ೧೫ ಲಕ್ಷ ರುಪಾಯಿಗಳ ವಿಮಾ ಮೊತ್ತವನ್ನು ಪಾವತಿ ಮಾಡಬೇಕಾಗಿದೆ. ಅಮೋಲ್ ಯಾದವ್‌ರ ಇದುವರೆಗಿನ ಕೆಲಸಕ್ಕೆ ಸರಕಾರದ ಕಡೆಯಿಂದ ಒಂದು ನಯಾ ಪೈಸೆಯಷ್ಟೂ ಆರ್ಥಿಕ ಸಹಕಾರ ಸಿಕ್ಕಿಲ್ಲ. ೨೦೧೮ರಲ್ಲಿ ಮಹಾರಾಷ್ಟ್ರ ಸರಕಾರ ೧೩೭ ಎಕರೆಗಳಷ್ಟು ಜಾಗ ಕೊಡುವ ಭರವಸೆಯನ್ನೇನೋ ನೀಡಿತ್ತು. ಆದರೆ ಮಹಾ ರಾಷ್ಟ್ರದಲ್ಲಿ ೨೦೧೯ ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಎನ್‌ಡಿಎ ಮಿತ್ರ ಪಕ್ಷವಾಗಿದ್ದ ಶಿವಸೇನೆಯು ಎನ್‌ಡಿಎ ತೊರೆದು ಕಾಂಗ್ರೆಸ್ ಎನ್‌ಸಿಪಿಗಳ ಜತೆ ಸೇರಿ ಅಧಿಕಾರಕ್ಕೆ ಬಂತು.

ಮಹಾರಾಷ್ಟ್ರದದ ರಾಜಕೀಯ ಪರಿಸ್ಥಿತಿಯ ಬದಲಾವಣೆ ಅಮೋಲ್ ಯಾದವ್ ಅವರ ವಿಮಾನ ನಿರ್ಮಾಣ ಯೋಜನೆಗೆ ಬಲವಾದ ಪೆಟ್ಟು ನೀಡಿತು. ೧೩೭ ಎಕರೆ ಭೂಮಿಯನ್ನು ಹಸ್ತಾಂತರಿಸಿಲ್ಲ ಉದ್ಧವ್ ಠಾಕ್ರೆ ಸರಕಾರ. ಹೀಗಾಗಿ ಆಮೋಲ್ ಯಾದವ್ ಅವರು ಉದ್ದೇಶಿಸಿದ್ದ ವಿಮಾನಗಳ ನಿರ್ಮಾಣ ಯೋಜನೆ ಅ ನಿಂತಿದೆ. ನಾವು ಈಗ ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ಬಹಳ ಮಾತುಗಳನ್ನು ಕೇಳುತ್ತಿದ್ದೇವೆ. ಆದರೆ ಅಮೋಲ್ ಯಾದವ್ ಅವರಿಗೆ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲ. ಅವರು ವಿಮಾನಗಳನ್ನು ನಿರ್ಮಿಸಲು ಇದುವರೆಗೆ ೫ ಕೋಟಿ ರುಪಾಯಿಗಳನ್ನು ಖರ್ಚು
ಮಾಡಿದ್ದಾರೆ, ಈ ಕೆಲಸಕ್ಕಾಗಿ ಅವರು ತಮ್ಮ ಮನೆಯನ್ನು ಕೂಡಾ ಅಡವಿಟ್ಟು ಬ್ಯಾಂಕ್ ಸಾಲವನ್ನು ತೆಗೆದು ಈಗ ಅದಕ್ಕೆ ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದಾರೆ. ವಿಮಾನ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ತಂತ್ರಜ್ಞರು ಹಾಗೂ ಸಿಬ್ಬಂದಿಗಳ ವೇತನಕ್ಕಾಗಿ ತಮ್ಮ ಪಾಕೆಟ್‌ನಿಂದ ಹಣವನ್ನು ಖರ್ಚು ಮಾಡುತ್ತಿದ್ದಾರೆ.

ಆದರೂ ದೇಶೀಯವಾಗಿ ನಾಗರಿಕ ವಿಮಾನವನ್ನು ನಿರ್ಮಿಸುವ ಕನಸನ್ನು ಕೈಬಿಟ್ಟಿಲ್ಲ. ಆರ್ಥಿಕ ಸಮಸ್ಯೆಗಳ ನಡುವೆಯೂ ೧೯ ಆಸನಗಳ ವಿಮಾನದ ನಿರ್ಮಾಣದ ಕೆಲಸವನ್ನು ಆರಂಭಿಸಿದ್ದಾರೆ. ಈ ಹಂತದಲ್ಲಿ ಕೇಂದ್ರ ಸರಕಾರವಾಗಲೀ, ಮಹಾರಾಷ್ಟ್ರ ಸರಕಾರವಾಗಲೀ ಅಮೋಲ್ ಯಾದವ್ ಅವರಿಗೆ ಆರ್ಥಿಕ ನೆರವು ನೀಡದೆ ಹೋದರೆ ಕ್ಯಾ. ಅಮೋಲ್ ಯಾದವ್ ಅವರು ಎರಡು ದಶಕಗಳಿಂದ ಪಟ್ಟ ಶ್ರಮ ನೀರಿನಲ್ಲಿ ಮಾಡಿದ ಹೋಮದಂತಾಗುತ್ತದೆ, ಜತೆಗೆ ದೇಶವು ವಿಮಾನ ನಿರ್ಮಾಣ ಕ್ಷೇತ್ರದಲ್ಲಿರುವ ಅಪಾರ ಅವಕಾಶವನ್ನೂ ಕಳೆದುಕೊಳ್ಳಲಿದೆ.