Saturday, 14th December 2024

ನಾಯಕತ್ವ ಅನ್ನೋದು ಲೈಫ್’ಸ್ಟೈಲ್, ಅದು ಸರ್ವಾಧಿಕಾರವಲ್ಲ‌

ವಿರಾಟ್‌ ಕೊಹ್ಲಿ, ಭಾರತೀಯ ಕ್ರಿಕೆಟ್‌ ತಂಡದ ನಾಯಕ

ನಾಯಕತ್ವ ಎಂಬುದು ಜೀವನಶೈಲಿ. ಇದು ನಮ್ಮ ಮೇಲಿರುವ ದಿನನಿತ್ಯದ ಜವಾಬ್ದಾರಿ. ಒಬ್ಬ ವ್ಯಕ್ತಿಯಾಗಿ ಬದುಕಿನಲ್ಲಿ
ವೈಯಕ್ತಿಕವಾಗಿ ನೀವೇನು ಮಾಡುತ್ತೀರಿ, ಹೇಗೆ ನಡೆದುಕೊಳ್ಳುತ್ತೀರಿ ಎಂಬುದಿಲ್ಲಿ ಬಹಳ ಮುಖ್ಯ. ಏಕೆಂದರೆ ನಿಮ್ಮ ಜೊತೆಗಿರು ವವರು ನಿಮ್ಮನ್ನೇ ಅನುಸರಿಸುತ್ತಾರೆ.

ಅವರಿಗೆ ನೀವು ಉದಾಹರಣೆಯಾಗಿರಬೇಕು. ಹಾಗಂತ ನಾಯಕತ್ವವೆಂಬುದು ಸರ್ವಾಧಿಕಾರವಾಗಲು ಸಾಧ್ಯವಿಲ್ಲ. ಸರಳವಾಗಿ ಹೇಳಬೇಕೆಂದರೆ ಲೀಡರ್‌ಶಿಪ್ ಎಂಬುದು ನಿಮ್ಮ ಬದುಕನ್ನು ನೀವು ಹೇಗೆ ಬದುಕುತ್ತೀರೋ ಅದು, ಅಷ್ಟೆ. ಹಾಗೆ ನೀವು ಬದುಕುವುದು ನಿಮ್ಮ ವೃತ್ತಿಜೀವನದಲ್ಲೂ ನಿತ್ಯಜೀವನದಲ್ಲೂ ನಿಮ್ಮನ್ನೇ ಪ್ರತಿನಿಧಿಸುತ್ತದೆ. ವಿಭಿನ್ನ ಜನರ ಜೊತೆ ಒಡನಾಟ: ಒಬ್ಬ ಒಳ್ಳೆಯ ನಾಯಕನಿಗೆ ತನ್ನ ಜೊತೆಗಿರುವವರನ್ನು ಮ್ಯಾನೇಜ್ ಮಾಡಲು ಗೊತ್ತಿರಬೇಕು.

ಕ್ರಿಕೆಟ್ ಆಟಗಾರನಾಗಿ ನನಗೆ ನನ್ನ ಜೊತೆಗಿರುವ ಆಟಗಾರರಿಂದ ಅತ್ಯುತ್ತಮವಾದುದನ್ನು ಹೊರಗೆಳೆಯಲು ತಿಳಿದಿರಬೇಕು. ಹಾಗೆಯೇ ನೀವು ಯಾವುದೇ ಕ್ಷೇತ್ರದಲ್ಲಿ ನಾಯಕರಾಗಿರಿ, ಆ ಕ್ಷೇತ್ರದಲ್ಲಿ ನಿಮ್ಮ ಜೊತೆಗೆ ಕೆಲಸ ಮಾಡುವವರಿಂದ ಒಳ್ಳೆಯ ರಿಸಲ್ಟ್ ತೆಗೆಸಲು ನಿಮಗೆ ತಿಳಿದಿರಬೇಕು. ಇಷ್ಟಕ್ಕೂ ಯಾವುದೇ ನಾಯಕನ ಅಂತಿಮ ಗುರಿ ತನಗೆ ವಹಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದಲ್ಲವೇ? ಅದಕ್ಕಾಗಿ ಸಂದರ್ಭಕ್ಕೆ ತಕ್ಕಂತೆ ನಿಮ್ಮ ದಾರಿಗಳನ್ನು ಬದಲಿಸಬೇಕು, ಬೇರೆ ಬೇರೆ ಜನರು, ಅದರಲ್ಲೂ ನಿಮ್ಮ ತಂಡದವರು ಹೇಗೆ ಕೆಲಸ ಮಾಡುತ್ತಾರೆಂಬುದು ನಿಮಗೆ ಗೊತ್ತಿರಬೇಕು.

ಎಲ್ಲರ ಬಗೆಗೊಂದು ದೂರದೃಷ್ಟಿ : ನಾನು ಜನರಲ್ಲಿ ಸ್ಕಿಲ್‌ಗಿಂತ ಹೆಚ್ಚಾಗಿ ಕ್ಯಾರೆಕ್ಟರ್ ಹುಡುಕುತ್ತೇನೆ. ನಾನು ಭಾರತೀಯ ಕ್ರಿಕೆಟ್ ತಂಡಕ್ಕೆ ಕಾಲಿಟ್ಟಾಗ ತುಂಬಾ ಸ್ಕಿಲ್ ಇರುವ ಅಥವಾ ಕುಶಲ ಆಟಗಾರನೇನೂ ಆಗಿರಲಿಲ್ಲ. ಆದರೆ, ಆಡುವ ಪ್ರತಿ ಯೊಂದು ಆಟವನ್ನೂ ಗೆಲ್ಲಬೇಕು ಎಂಬ ಹಸಿವು ನನಗಿತ್ತು. ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿತ್ತು. ಆ ಪ್ರಕ್ರಿಯೆಯಲ್ಲಿ ನಾನು ನನ್ನ ಸ್ಕಿಲ್‌ಗಳನ್ನು ಸುಧಾರಿಸಿಕೊಳ್ಳುತ್ತಾ ಹೋದೆ. ಯಾವಾಗಲೂ ಬೇರೆ ಬೇರೆ ಜನರು ಹೇಗೆ ಕಷ್ಟಕರ ಸಂದರ್ಭಗಳಲ್ಲೂ ಎದೆಯು ಬ್ಬಿಸಿ ಮುನ್ನಡೆಯುತ್ತಾರೆಂಬುದನ್ನು ನಾನು ಗಮನಿಸುತ್ತಿರುತ್ತೇನೆ.

ನನ್ನ ವಿರೋಧಿಗಳೂ ಹೀಗೆ ಮಾಡುವುದನ್ನು ನೋಡಿ ಅವರಿಂದ ಕಲಿಯುತ್ತೇನೆ. ನನಗೆ ಗೊತ್ತು, ಕಷ್ಟಕರ ಆಟಗಳನ್ನು ಕೂಡ ಗೆಲ್ಲುವ ಶಕ್ತಿಯಿರುವುದು ಇವರಿಗೆ ಮಾತ್ರ. ನಿಮಗೆ ಅತ್ಯಂತ ಅಗತ್ಯವಿರುವಾಗ ನಿಮ್ಮ ನೆರವಿಗೆ ನಿಲ್ಲುವವರು ಕೂಡ ಇವರೇ ಆಗಿರುತ್ತಾರೆ.

ಟೀಕೆ ಎದುರಿಸೋದು ಹೇಗೆ?: ನನ್ನ ಪ್ರಕಾರ ಟೀಕೆಯೆಂಬುದು ಇನ್ನೊಬ್ಬರ ದೃಷ್ಟಿಕೋನ. ಪ್ರತಿಯೊಬ್ಬರಿಗೂ ತಮ್ಮತಮ್ಮ ಅಭಿಪ್ರಾಯ ಹೇಳುವ ಎಲ್ಲಾ ಹಕ್ಕಿದೆ. ಹಾಗಂತ ಅದರರ್ಥ ಆ ಕೆಲಸ ಮಾಡಲು ಇರುವ ದಾರಿ ಅದೊಂದೇ ಎಂದಲ್ಲ. ಒಬ್ಬ ವ್ಯಕ್ತಿಯಾಗಿ ನಿಮಗೆ ಏನನ್ನಿಸುತ್ತದೆಯೋ, ನೀವು ಏನನ್ನು ನಂಬುತ್ತೀರೋ ಅದನ್ನು ಖಂಡಿತ ವ್ಯಕ್ತಪಡಿಸಬೇಕು. ನೀವೇನು
ಯೋಚಿಸುತ್ತೀರಿ ಎಂಬುದನ್ನು ಜನರಿಗೆ ಹೇಳಿ. ಆಟದ ಮೈದಾನದಲ್ಲಿ ಏನಾಯಿತು ಎಂಬುದನ್ನು ಹಂಚಿಕೊಳ್ಳಿ. ಆದರೆ ಕೊನೆಯಲ್ಲಿ ನೀವು ನೀವಾಗಿರಿ ಮತ್ತು ಬದುಕನ್ನು ಧನಾತ್ಮಕವಾಗಿ ಬದುಕಿ.

ಸೋಲು-ಗೆಲುವಿನಿಂದ ಕಲಿಕೆ: ಯಶಸ್ಸಿಗೆ ಬಹಳ ಸ್ನೇಹಿತರಿರುತ್ತಾರೆ, ಆದರೆ ಸೋಲಿಗೆ ಯಾರೂ ಇರುವುದಿಲ್ಲ ಎಂಬುದು ನಮಗೆ ಗೊತ್ತು. ಯಶಸ್ಸನ್ನು ನಿಭಾಯಿಸುವುದು ಸುಲಭ. ಆದರೆ, ಕಷ್ಟಕರ ಸಂದರ್ಭಗಳೇ ನಿಮಗೆ ಹೆಚ್ಚು ಪಾಠ ಕಲಿಸುತ್ತವೆ. ಇದು ನನ್ನ ಅನುಭವದ ಪಾಠ. ಮುಂದೆ ಗೆಲ್ಲಬೇಕು ಎಂಬ ಕಾರಣಕ್ಕೆ ಕೆಟ್ಟ ಅನುಭವಗಳಿಂದ ನಾವು ಪಾಠ ಕಲಿಯಬೇಕು ಎಂಬುದು ಒಂದೆಡೆಯಾದರೆ, ಕೆಟ್ಟ ಅನುಭವಗಳು ಮತ್ತೆ ಎದುರಾದರೆ ಆಗ ಅವುಗಳ ಬಗ್ಗೆ ಮೊದಲಿನಷ್ಟು ತಲೆಕೆಡಿಸಿಕೊಳ್ಳದೆ ಮುಂದೆ ಹೋಗುವುದಕ್ಕಾಗಿಯೂ ಅವುಗಳಿಂದ ಪಾಠ ಕಲಿಯಬೇಕು. ದಿನದ ಕೊನೆಯಲ್ಲಿ ಮನಸ್ಸು ಶಾಂತವಾಗಿರುವುದು ಹಾಗೂ ಒಳ್ಳೆಯ ನಿದ್ದೆ ಇಷ್ಟೇ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿ ಬೇಕಿರುವುದು.

ಗೆಲ್ಲುವ ಹಸಿವು: ಈಗ ನಾವು ಯಾವ ಹಂತಕ್ಕೆ ತಲುಪಿದ್ದೇವೋ ಈ ಹಂತಕ್ಕೆ ಬರಲು ಎಷ್ಟೊಂದು ಜನ ಸಾಯಲು ಕೂಡ ರೆಡಿಯಿರುತ್ತಾರೆ. ಈ ಅವಕಾಶ ನಾನೂ ಪಡೆಯಬೇಕು, ಒಂದಲ್ಲಾ ಒಂದು ದಿನ ನಾನೂ ಈ ಸಾಧನೆ ಮಾಡಬೇಕೆಂದು ಬಹಳ ಜನರು ಕನಸು ಕಾಣುತ್ತಾರೆ. ಹಾಗಂತ ಈಗಾಗಲೇ ಈ ಹಂತಕ್ಕೆ ತಲುಪಿರುವ ನಾನು ‘ನಾನೊಬ್ಬನೇ ಇಲ್ಲಿರಲು ಯೋಗ್ಯ’ ಎಂದು ಯೋಚಿಸಿದರೆ ಅದು ಮೂರ್ಖತನ. ಇದೇನೂ ಶಾಶ್ವತ ಸ್ಥಾನವಲ್ಲ. ಯಾರೂ ನನಗಿದನ್ನು ಬರೆದುಕೊಟ್ಟಿಲ್ಲ.

ಇದಕ್ಕಾಗಿ ನಾನು ಕಷ್ಟಪಡಬೇಕು. ನನ್ನನ್ನೇಕೆ ಇಲ್ಲಿಗೆ ಆಯ್ಕೆ ಮಾಡಿದ್ದಾರೆಂದರೆ ನಾನು ಮೈದಾನದಲ್ಲಿ ಚೆನ್ನಾಗಿ ಆಡುತ್ತೇನೆ ಎಂಬ ಕಾರಣಕ್ಕೆ. ಇದೊಂದು ಅವಕಾಶ. ನಾನಿಲ್ಲಿದ್ದೇನೆ ಅಂದರೆ ದೇವರು ನನಗೆ ಈ ಅವಕಾಶ ನೀಡಿದ್ದಾನೆ ಎಂದರ್ಥ. ಅವನ ನಂಬಿಕೆ ಉಳಿಸಿಕೊಳ್ಳುವುದಕ್ಕಾದರೂ ನಾನು ಈ ಸ್ಥಾನದಲ್ಲಿರುವವರೆಗೆ ಪ್ರತಿದಿನ ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ
ನಡೆದುಕೊಳ್ಳಬೇಕು.

ನನ್ನ ಪರಂಪರೆ ಉಳಿಸಬೇಕಾ?: ನಿಜ ಹೇಳಬೇಕೆಂದರೆ ನನಗೆ ಇದರಲ್ಲಿ ನಂಬಿಕೆಯಿಲ್ಲ. ನಾನು ಯಾವ ಸಿದ್ಧಾಂತಕ್ಕೂ
ಜೋತುಬಿದ್ದವನಲ್ಲ. ಇಲ್ಲಿಂದ ಹೋಗುವಾಗ ನನ್ನ ಗುರುತು ಉಳಿಸಿ ಹೋಗಬೇಕು ಎಂಬಂಥ ಭ್ರಮೆ ನನಗಿಲ್ಲ. ಏಕೆಂದರೆ ಮುಂದೆ ಹೊಸ ತಲೆಮಾರು ಬರುತ್ತದೆ. ಹೊಸ ಆಟಗಾರರು ಬರುತ್ತಾರೆ. ಜನರು ಅವರನ್ನು ಇಷ್ಟಪಡುತ್ತಾರೆ. ಆಗ ಇಲ್ಲಿ ನನಗೇನು ಕೆಲಸ? ಇದೊಂದು ನಿರಂತರವಾಗಿ ಬದಲಾಗುವ ಪ್ರಕ್ರಿಯೆ.

ಅದರ ಮಧ್ಯೆ ನಾನೆಲ್ಲೂ ಭಾರವಾಗಿ ಉಳಿಯಲು ಇಷ್ಟಪಡುವುದಿಲ್ಲ. ಅಥವಾ ಜನರು ಸದಾಕಾಲ ನನ್ನ ಬಳಿ ‘ನೀನೆಷ್ಟು ಚೆನ್ನಾಗಿ ಆಡ್ತಿದ್ದೆ… ಭಾರತದ ಕ್ರಿಕೆಟ್‌ಗೆ ನೀನು ಎಂಥಾ ಕೊಡುಗೆ ಕೊಟ್ಟೆ… ಈ ಕ್ಷೇತ್ರಕ್ಕೆ ನಿನ್ನ ಕೊಡುಗೆ ಎಷ್ಟೊಂದು ದೊಡ್ಡದು…’ ಎಂದು ಮುಖಸ್ತುತಿ ಮಾಡುತ್ತಿರಬೇಕೆಂದೂ ನಾನು ಬಯಸುವುದಿಲ್ಲ. ನಾನು ನನ್ನ ಕೈಲಿರುವ ಜವಾಬ್ದಾರಿ ಪೂರೈಸಬೇಕು, ಅಷ್ಟೆ.
ಈ ಕ್ಷಣದಲ್ಲಿ ಬದುಕಬೇಕು: ನಾನು ಯಾವಾಗಲೂ ಯಾವುದನ್ನೂ ನೆಗೆಟಿವ್ ಆಗಿ ನೋಡುವುದಿಲ್ಲ.

‘ನಾನು ಇಷ್ಟೊಂದು ಜಾಹೀರಾತಿನಲ್ಲಿ ಆಕ್ಟ್ ಮಾಡುತ್ತಿದ್ದರೆ ನನ್ನ ಆಟಕ್ಕೆ ಮೋಸ ಮಾಡಿದಂತಾಗುತ್ತದೆಯೇ…’ ಎಂದೂ
ಯೋಚಿಸುವುದಿಲ್ಲ. ನಮ್ಮ ಬದುಕಿನಲ್ಲಿ ಪ್ರತಿ ದಿನ, ಪ್ರತಿ ಕ್ಷಣವೂ ವಿಭಿನ್ನವಾಗಿರುತ್ತದೆ. ಆ ಕ್ಷಣದಲ್ಲಿ ನಾನು ಯಾವುದಕ್ಕೂ ಹೆದರದೆ, ಧನಾತ್ಮಕವಾಗಿ, ಆಶಾವಾದಿಯಾಗಿ ಬದುಕಬೇಕು, ಇಷ್ಟೇ ನನ್ನ ಸಿದ್ಧಾಂತ. ಎಲ್ಲರೂ ಹೀಗೇ ಇರಿ ಎಂದೇ ನಾನು ಹೇಳುತ್ತೇನೆ. ಏಕೆಂದರೆ ಎಲ್ಲರೂ ಬದುಕನ್ನು ಅನುಭವಿಸಬೇಕು.

ಎಲ್ಲರೂ ಹೊರಗೆ ಹೋಗಿ, ಒಳ್ಳೆಯ ರೀತಿಯಲ್ಲಿ ಎಲ್ಲ ಅನುಭವಗಳನ್ನೂ ಪಡೆಯಬೇಕು. ಹಾಗೆ ಮಾಡುವಾಗ ಬೇರೆಯವರನ್ನು ಅಣಕಿಸಬಾರದು ಅಥವಾ ಬೇರೆಯವರಿಗೆ ಕೆಟ್ಟದ್ದು ಮಾಡಬಾರದು. ಹಾಗೆಯೇ ನಮ್ಮತನದ ಜೊತೆಗೆ ರಾಜಿ ಮಾಡಿಕೊಳ್ಳ ಬಾರದು. ಈ ಸಮತೋಲನ ಕಾಪಾಡಿಕೊಳ್ಳಲು ಕಲಿತರೆ ಎಲ್ಲರ ಬದುಕೂ ಅದ್ಭುತವಾಗಿರುತ್ತದೆ. ಆಗ ನೀವು ಸೋಲನ್ನೂ ಗೆಲುವನ್ನೂ ಸಮಾನವಾಗಿ ಹ್ಯಾಂಡಲ್ ಮಾಡುತ್ತೀರಿ.

ಫಿಟ್ ಆಗಿರುವುದು ಅಂದರೇನು?: ದೈಹಿಕವಾಗಿ ನನ್ನಿಂದ ಇಷ್ಟೇ ಮಾಡಲು ಸಾಧ್ಯ ಎಂದು ಯಾವತ್ತೂ ನಿಮಗೆ ನೀವೇ ಬೇಲಿ ಹಾಕಿಕೊಳ್ಳಬೇಡಿ. ದೈಹಿಕವಾಗಿ ನಿಮ್ಮ ಸಾಮರ್ಥ್ಯವನ್ನು ನೀವೇ ಮೀರಲು ಯಾವಾಗಲೂ ಹೊಸಹೊಸತನ್ನು ಪ್ರಯತ್ನಿಸುತ್ತಾ ಹೋಗಿ. ಆಗ ಒಂದು ದಿನ ದೈಹಿಕವಾಗಿ ನೀವು ನಿಮ್ಮದೇ ಒಳ್ಳೆಯ ವರ್ಷನ್ ಆಗಿ ಹೊರಹೊಮ್ಮುತ್ತೀರಿ. ಅದರಿಂದ ದೇಹ ಇನ್ನಷ್ಟು ಸಾಧನೆ ಮಾಡಲು ರೆಡಿಯಾಗುತ್ತದೆ. ಆಗ ಎಲ್ಲದರ ಬಗ್ಗೆಯೂ ನೀವು ಇನ್ನಷ್ಟು ಆಶಾವಾದಿಯಾಗಿ, ಇನ್ನಷ್ಟು ಧನಾತ್ಮಕವಾಗಿ
ಯೋಚಿಸಲು ಸಾಧ್ಯವಾಗುತ್ತದೆ.

ನೋಡುವುದಕ್ಕೆ ದೈಹಿಕವಾಗಿ ನೀವು ಹೇಗೆ ಕಾಣಿಸುತ್ತೀರಿ ಎಂಬುದು ಮುಖ್ಯವಲ್ಲ. ನಿತ್ಯ ಸುಧಾರಣೆ ಮಾಡಿಕೊಳ್ಳುತ್ತಾ ಹೋಗುವ
ಶಕ್ತಿ ನಿಮ್ಮಲ್ಲಿ ಎಷ್ಟಿದೆ ಎಂಬುದು ಮುಖ್ಯ. ಆಗ ನೀವು ಇನ್ನಷ್ಟು ಸಾಧಿಸಬಹುದು. ಆಗ ನಿಮಗೆ ಎಷ್ಟು ಜವಾಬ್ದಾರಿ ಬಂದರೂ ಅದು ಹೊರೆ ಅನ್ನಿಸುವುದಿಲ್ಲ. ಅದನ್ನೆಲ್ಲ ನೀವೊಂದು ಅವಕಾಶವೆಂಬಂತೆ ನೋಡತೊಡಗುತ್ತೀರಿ.

ಹಣ ಗಳಿಸುವುದು ಹೇಗೆ?: ನಿಮ್ಮ ಉದ್ದೇಶ ಸರಿಯಾಗಿದ್ದರೆ ಹಣ ತನ್ನಿಂತಾನೇ ಬರುತ್ತದೆ. ಅದು ನಿಮ್ಮ ಬದುಕಿನ ಉಪ ಉತ್ಪನ್ನ. ಆದರೆ, ನೀವೇನಾದರೂ ಹಣ ಗಳಿಸುವುದೊಂದನ್ನೇ ಗುರಿಯಾಗಿಸಿಕೊಂಡರೆ ಹೆಚ್ಚೆಂದರೆ ಆರು ತಿಂಗಳು ಸಂಪಾದನೆ ಮಾಡಬಹುದು. ನಂತರ ನಿಮ್ಮ ಉತ್ಪನ್ನ ಬಹಳ ದಿನ ಬಾಳಿಕೆ ಬರುವುದಿಲ್ಲ. ನಿಮ್ಮಲ್ಲಿ ವಿಶ್ವಾಸಾರ್ಹತೆ ಉಳಿಯುವುದಿಲ್ಲ. ಒಬ್ಬ ಗ್ರಾಹಕನಾಗಿ ನಾನು ಯಾವಾಗಲೂ ಏನನ್ನು ಖರೀದಿಸುತ್ತೇನೋ ಅದರ ಜೊತೆಗೊಂದು ಸಂಬಂಧ ಬೆಳೆಸಿಕೊಂಡಿರುತ್ತೇನೆ. ಹೀಗಾಗಿ ನಾನು ನನ್ನ ಗ್ರಾಹಕರಿಗೆ ಏನನ್ನಾದರೂ ಕೊಡಬೇಕು ಅಂದುಕೊಂಡಾಗ ಅದು ಮೊದಲಿಗೆ ನನಗೆ ವಿಶೇಷ ಅನ್ನಿಸಬೇಕು. ಇಲ್ಲದಿದ್ದರೆ ನಾನದನ್ನು ಯಾರಿಗೂ ಕೊಡಬಾರದು.

ಎಲ್ಲಾ ಉತ್ಪನ್ನಗಳೂ ಮೊದಲು ನಿಮಗೆ ಇಷ್ಟವಾಗಬೇಕು. ಆಗ ಮಾತ್ರ ಜನರಿಗೆ ಅವುಗಳನ್ನು ಖರೀದಿಸುವಂತೆ ನೀವು ಮನವೊಲಿಸಲು ಸಾಧ್ಯ. ನನ್ನ ವಿಷಯದಲ್ಲಿ ನಾನು ಪ್ರಾಮಾಣಿಕವಾಗಿದ್ದರೆ ಕ್ರಮೇಣ ಜನರು ನಾನೇನು ಹೇಳುತ್ತೇನೋ ಅದನ್ನು ಅರ್ಥ ಮಾಡಿಕೊಳ್ಳತೊಡಗುತ್ತಾರೆ.