Thursday, 12th December 2024

ಲಗಾಮಿಲ್ಲದ ನಾಲಿಗೆಗೆ ಕಡಿವಾಣವಾದ ಮೊಕದ್ದಮೆಗಳು

ಅವಲೋಕನ

ಗಣೇಶ್‌ ಭಟ್‌, ವಾರಣಾಸಿ

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಪುರಂದರ ದಾಸರು ತಮ್ಮ ಕೀರ್ತನೆಯಲ್ಲಿ ಹೇಳಿದ್ದಾರೆ.

ಆದರೆ ಬಹಳಷ್ಟು ಜನರಿಗೆ ತಮ್ಮ ನಾಲಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹೇಗೆಂದು ಗೊತ್ತಿಲ್ಲ. ಭಾರತೀಯ ಸಂವಿಧಾನದ ಆರ್ಟಿಕಲ್ 19(1)(ಎ)ಯ ಅಡಿಯಲ್ಲಿ ಜನರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಡಲಾಗಿದೆ. ಮಾತು, ಬರಹ, ಮಾಧ್ಯಮ, ಸಾಮಾಜಿಕ ಮಾಧ್ಯಮ ಮೊದಲಾದ ಮಾಧ್ಯಮಗಳ ಮೂಲ ಜನರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸು ವುದಕ್ಕೆ ಈ ಕಾಯಿದೆಯು ಸ್ವಾತಂತ್ರ್ಯ ಕೊಡುತ್ತದೆ. ಆದರೆ ಕೆಲವು ಬಾರಿ ಜನರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿ ನಲ್ಲಿ ಇತರರ ಬಗ್ಗೆ ಸುಳ್ಳನ್ನು ಹಬ್ಬಿಸುವುದು ಅಥವಾ ತಪ್ಪು ಮಾಹಿತಿಯನ್ನು ಹರಡುವುದೂ ಇದೆ.

ಇಂದಿನ ದಿನಗಳಲ್ಲಿ ಕೆಲವು ಜನರು ರಾಜಕಾರಣಿಗಳು, ಸಿನಿಮಾ ನಟರು, ಪ್ರಸಿದ್ಧ ಕ್ರೀಡಾಳುಗಳು ಮೊದಲಾದ ಸಾರ್ವಜನಿಕ ವ್ಯಕ್ತಿ ಗಳು ಅಥವಾ ಸಂಸ್ಥೆಗಳನ್ನು ಗುರಿಯಾಗಿಸಿ ಆಧಾರ ರಹಿತ ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ಹಗುರವಾಗಿ ಮಾತನಾಡುವು ದನ್ನು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ತಡೆಗಟ್ಟಲು ಸಂವಿಧಾನ ದ ಆರ್ಟಿಕಲ್ 19(2)ರ ಅಡಿಯಲ್ಲಿ ಸಾರ್ವಜನಿಕ ವ್ಯವಸ್ಥೆಯ ಹಿತವನ್ನು ಕಾಪಾಡುವ ಉದ್ದೇಶದಲ್ಲಿ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಬಂಧವನ್ನೂ ಹೇರಲಾಗಿದೆ.

ಸುಳ್ಳು ಆರೋಪ ಮಾಡುವವರ ವಿರುದ್ಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಥವಾ ಸಿವಿಲ್ ಮಾನ ನಷ್ಟ ಮೊಕದ್ದಮೆಗಳನ್ನು ಹೂಡುವ ಅವಕಾಶವನ್ನು ಜನರಿಗೆ ಕಲ್ಪಿಸಿಕೊಡಲಾಗಿದೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ವಿವೇಕ್ ದೋವಲ್ ಅವರು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರ ಮೇಲೆ ಹೂಡಿದ್ದ ಮಾನ ನಷ್ಟ ಮೊಕದ್ದಮೆಯ ವಿಷಯ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ.

2019ನೇ ಇಸವಿಯ ಜನವರಿ ತಿಂಗಳಲ್ಲಿ ಕಾರವಾನ್ ಎನ್ನುವ ಆನ್‌ಲೈನ್ ಪತ್ರಿಕೆಯು ದಿ ಡಿ ಕಂಪೆನೀಸ್ ಎನ್ನುವ ಹೆಸರಿನ ಲೇಖನವನ್ನು ಪ್ರಕಟಿಸಿ ವಿವೇಕ್ ದೋವಲ್ ತೆರಿಗೆದಾರರ ಸ್ವರ್ಗವಾಗಿರುವ ಕೇಯ್ಮನ್ ದ್ವೀಪದಲ್ಲಿ ಪರ್ಯಾಯ ಹೂಡಿಕೆ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆಂದೂ, ಈ ಸಂಸ್ಥೆಯನ್ನು ಮೋದಿ ಸರಕಾರವು ಡಿಮಾನೆಟೈಸೇಶನ್ ಮಾಡುವುದಕ್ಕೆ 13 ದಿವಸ ಗಳ ಮೊದಲು ರೂಪೀಕರಣಗೊಳಿಸಲಾಗಿತ್ತು ಎಂದು ಹೇಳಿತ್ತು. ಕಾರವಾನ್ ಪತ್ರಿಕೆಯ ಲೇಖನದ ಅಧಾರದಲ್ಲಿ ಜೈರಾಮ್ ರಮೇಶ ಪತ್ರಿಕಾಗೋಷ್ಠಿ ನಡೆಸಿ ವಿವೇಕ್ ದೋವಲ್ ಮೇಲೆ ನೇರವಾಗಿ ಹಾಗೂ ಅಜಿತ್ ದೋವಲ್ ಮೇಲೆ ಪರೋಕ್ಷ ಆರೋಪ ವನ್ನು ಮಾಡಿದ್ದರು.

ಜೈರಾಮ್ ರಮೇಶರ ಆರೋಪಕ್ಕೆ ಪ್ರತಿಯಾಗಿ ವಿವೇಕ್ ದೋವಲ್ ಈ ಆರೋಪವು ತನ್ನ ತಂದೆಯವರಾದ ಅಜಿತ ದೊವಲ್ ರನ್ನು ಗುರಿಯಾಗಿಸಿ ಮಾಡಿದುದಾಗಿದೆ ಹಾಗೂ ಈ ಆಧಾರರಹಿತ ಆರೋಪದಿಂದಾಗಿ ತನ್ನ ಕುಟುಂಬಿಕರ ಹಾಗೂ ತನ್ನ ಸಹೋದ್ಯೋಗಿಗಳ ಕಣ್ಣಲ್ಲಿ ತನ್ನ ಗೌರವಕ್ಕೆ ಚ್ಯುತಿಯಾಗಿದೆಯೆಂದು ಕಾರವಾನ್ ಪತ್ರಿಕೆ ಹಾಗೂ ಜೈರಾಮ್ ರಮೇಶ ಅವರ ಮೇಲೆ ಕಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಕೋರ್ಟ್‌ನಲ್ಲಿ ಹೂಡಿದ್ದರು.

ಇತ್ತೀಚೆಗೆ ಜೈರಾಮ್ ರಮೇಶ್ ಅವರು ನ್ಯಾಯಾಲಯಕ್ಕೆ ಹೇಳಿಕೆ ನೀಡಿ ತಾನು ಕಾರವಾನ್ ಪತ್ರಿಕೆಯ ವರದಿಯ ಆಧಾರದಲ್ಲಿ ಆರೋಪ ಮಾಡಿದ್ದು ನಂತರ ಆ ವರದಿಯು ಸರಿಯಾದುದಲ್ಲ ಎಂಬುದನ್ನು ಅರಿತುಕೊಂಡಿದ್ದೇನೆ, ಆರೋಪ ಮಾಡಿದ
ತಪ್ಪಿಗಾಗಿ ವಿವೇಕ್ ದೋವಲ್ ಹಾಗೂ ಅವರ ಕುಟುಂಬದ ಕ್ಷಮಾಪಣೆಯನ್ನು ಕೇಳುತ್ತಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಜೈರಾಮ್ ರಮೇಶ್ ಅವರು ಕ್ಷಮಾಪಣೆಯನ್ನು ಕೇಳಿದುದರಿಂದ ವಿವೇಕ್ ದೋವಲ್ ಜೈರಾಮ್ ಮೇಲಿನ ಮೊಕದ್ದಮೆಯನ್ನು ಹಿಂದೆ ತಗೆದುಕೊಂಡಿದ್ದಾರೆ. ರಾಜಕೀಯ ಕಾರಣಗಳಿಂದ ಆರೋಪ ಮಾಡಿದ ಜೈರಾಮ್ ರಮೇಶ್ ಕೊನೆಗೆ ಕೋರ್ಟ್‌ನ ಮುಂದೆ ಆಡಿದ ಮಾತಿಗೆ ತಪ್ಪಾಯಿತು ಎನ್ನುವಂತಾಯಿತು. ಆದರೆ ಕಾರವಾನ್ ಪತ್ರಿಕೆಯು ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ
ಮಾಡಿಕೊಳ್ಳದೆ ತನ್ನ ಹಳೆಯ ಲೇಖನಕ್ಕೆ ತಾನು ಇಂದಿಗೂ ಬದ್ಧನಿದ್ದೇನೆ ಎಂದು ಹೇಳಿದುದರಿಂದ ಆ ಪತ್ರಿಕೆಯ ಮೇಲಿನ ಮೊಕದ್ದಮೆ ಇನ್ನೂ ಮುಂದುವರಿದಿದೆ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೂ ಮಾನನಷ್ಟ ಮೊಕದ್ದಮೆಗಳಿಗೂ ಬಹಳ ನಂಟಿದೆ. ವಿವೇಚನೆಯಿಲ್ಲದೆ ಹೇಳಿಕೆಕೊಟ್ಟು ಮತ್ತೆ ತನ್ನ ನಾಲಗೆಯನ್ನೇ ಕಚ್ಚಿಕೊಳ್ಳುವ ಸ್ಥಿತಿ ರಾಹುಲ್ ಗಾಂಧಿಯವರಿಗೆ ಕೆಲವು ಬಾರಿ ಒದಗಿಬಂದಿದೆ. 2014ರ ಮಾರ್ಚ್ 6ರಂದು ಮಹಾರಾಷ್ಟ್ರದ ಥಾಣೆ ಜಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡಿದ
ರಾಹುಲ್ ಗಾಂಧಿಯವರು ಮಹಾತ್ಮಾ ಗಾಂಧಿಜಿಯವರನ್ನು ಆರ್‌ಎಸ್‌ಎಸ್‌ನ ಜನರು ಕೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ರಾಹುಲ್ ಹೇಳಿಕೆ ವಿರುದ್ಧ ಆರ್‌ಎಸ್‌ಎಸ್‌ನ ಕಾರ್ಯಕರ್ತರಾದ ರಾಜೇಶ್ ಕುಂಟೆ ಅನ್ನುವವರು ನ್ಯಾಯಾಲಯದಲ್ಲಿ ಮಾನ ನಷ್ಟ ಮೊಕದ್ದಮೆ ಹೂಡಿದ್ದರು. ಈ ಕೇಸ್ ಸುಪ್ರೀಂ ಕೋರ್ಟಿನವರೆಗೆ ಮುಂದುವರಿದು ಜಸ್ಟೀಸ್ ದೀಪಕ್ ಮಿಶ್ರಾ ಹಾಗೂ ಆರ್‌ಎಫ್ ನಾರೀಮನ್ ಅವರ ದ್ವಿಸದಸ್ಯ ಪೀಠವು ರಾಹುಲ್ ಗಾಂಧಿಯ ಭಾಷಣವು ತಪ್ಪು ಮಾಹಿತಿಯಿಂದ ಕೂಡಿದುದಾಗಿದೆ,
ನಾಥೂರಾಮ್ ಗೋಡ್ಸೆ ಕೊಂದದ್ದನ್ನು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಗಾಂಧಿಜಿಯನ್ನು ಕೊಂದಂತೆ ಚಿತ್ರಿಸುವುದು ಸರಿಯಲ್ಲ, ರಾಹುಲ್ ತನ್ನ ಹೇಳಿಕೆಯ ಕುರಿತು ಕ್ಷಮೆಯನ್ನು ಕೇಳಬೇಕು, ಇ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಬೇಕು
ಎಂದು ತೀರ್ಪನ್ನು ಕೊಟ್ಟಿತ್ತು.

ರಫೆಲ್ ಯುದ್ಧ ವಿಮಾನದ ಖರೀದಿಯ ವಿಷಯದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಾಡಲು ಒಪ್ಪಿದುದನ್ನು ಉಖಿಸಿ ರಾಹುಲ್ ಗಾಂಧಿಯವರು ಸುಪ್ರೀಂ ಕೋರ್ಟ್ ಕೂಡಾ ನರೇಂದ್ರ ಮೋದಿಯವರನ್ನು ಕಳ್ಳನೆಂದು ಹೇಳಿದೆ ಎಂದು ಹೇಳಿ
ಚೌಕೀದಾರ್ ಚೋರ್ ಹೈ ಎಂಬ ಘೋಷಣೆಯ ಮೂಲಕ ಮೋದಿಯನ್ನು ಕಟಕಿಯಾಡಿದ್ದರು. ರಾಹುಲ್‌ರ ಈ ಹೇಳಿಕೆ ವಿರುದ್ಧ ದೆಹಲಿಯ ಬಿಜೆಪಿ ಸಂಸದೆ ಹಾಗೂ ವಕೀಲೆ ಮೀನಾಕ್ಷೀ ಲೇಖಿಯವರು ನ್ಯಾಯಾಲಯ ನಿಂದನೆ ಮೊಕದ್ದಮೆಯನ್ನು
ಹೂಡಿದ್ದರು.

ಕೋರ್ಟ್ ನಿಂದನೆಯ ಕೇಸಿನಿಂದ ಬಚಾವಾಗಲು ರಾಹುಲ್ ಗಾಂಧಿಯವರು ತಾನು ಸುಪ್ರೀಂಕೋರ್ಟ್‌ನ ಹೇಳಿಕೆಯನ್ನು ತಿರುಚಿ ರುವುದಕ್ಕೆ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ಮುಂದೆ ಬೇಷರತ್ತಾಗಿ ಕ್ಷಮಾಯಾಚನೆಯನ್ನು ಮಾಡಬೇಕಾಯಿತು. ಸುಪ್ರೀಂ ಕೋರ್ಟ್ ಪೀಠವು ಇನ್ನು ಮುಂದೆ ಹೇಳಿಕೆ ಕೊಡುವಾಗ ಎಚ್ಚರಿಕೆಯಿಂದಿರಬೇಕು ಎಂದು ರಾಹುಲ್‌ರಿಗೆ ಎಚ್ಚರಿಕೆ ಯನ್ನು ನೀಡಿತು. ಇದೇ ರೀತಿ 2019ರ ಎಪ್ರಿಲ್ 13ರಂದು ಕೋಲಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್ ಗಾಂಧಿ ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ… ಹೀಗೆ ಎಲ್ಲರಿಗೂ ಮೋದಿ ಎನ್ನುವ ಉಪನಾಮ ಇರಲು ಕಾರಣ ವೇನು? ಎಂದು ಪ್ರಶ್ನಿಸಿದ್ದರು.

ರಾಹುಲ್ ಗಾಂಧಿ ಈ ಹೇಳಿಕೆಯ ಮೂಲಕ ಇಡೀ ಮೋದಿ ಹೆಸರಿನ ಉಪನಾಮವಿರುವ ಇಡೀ ಮೋದಿ ಸಮುದಾಯವನ್ನೇ ಅಪಮಾನಿಸಿದ್ದಾರೆಂದು ಆರೋಪಿಸಿ ಗುಜರಾತ್‌ನ ಸೂರತ್‌ನಲ್ಲಿ ಪೂರ್ಣೇಶ್ ಮೋದಿ ಎಂಬವರು ಸೂರತ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ರಾಹುಲ್ ಗಾಂಧಿಗೆ ಈ ಕೇಸ್ ನಲ್ಲಿ ಸ್ವತಃ ಮ್ಯಾಜಿ  ಸ್ಟ್ರೇಟ್ ಕೋರ್ಟ್‌ನ ಮುಂದೆ ಹಾಜರಾಗಬೇಕಾಗಿ ಬಂದಿತ್ತು.

ಮಾನನಷ್ಟ ಮೊಕದ್ದಮೆಯ ಬಿಸಿಯು ಹಲವು ಬಾರಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲರನ್ನೂ ತಾಗಿದೆ. ಅರವಿಂದ ಕೇಜ್ರೀವಾಲ್ ಹಾಗೂ ಅವರ ಆಮ್ ಆದ್ಮಿ ಪಕ್ಷದ ಸಹೋದ್ಯೋಗಿಗಳಾಗಿದ್ದ ರಾಘವ್ ಚಡ್ಡಾ, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಆಶುತೋಶ್ ಹಾಗೂ ದೀಪಕ್ ಬಾಜಪೈ ಇವರುಗಳು ಅರುಣ್ ಜೈಟ್ಲಿಯವರು ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ)ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಡಿಸಿಎಯಲ್ಲಿ ಬಹಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದ್ದರು.

ಇವರ ಅರೋಪದ ವಿರುದ್ಧ ಅರುಣ್ ಜೆಟ್ಲಿ ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ 10 ಕೋಟಿ  ರುಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಕೇಸ್‌ನಲ್ಲಿ ಕೇಜ್ರೀವಾಲ್ ಪರವಾಗಿ ರಾಮ್ ಜೇಠ್ಮಲಾನಿಯಂಥ ಘಟಾನುಘಟಿ ವಕೀಲರುಗಳೇ ವಾದ ಮಾಡಿದ್ದರೂ ತಪ್ಪಿಸಿಕೊಳ್ಳಲಾಗದ ಕೇಜ್ರೀವಾಲ್ ಕೊನೆಗೆ ಜೈಟ್ಲೀಯವರ ಬಳಿ ಬೇಷರತ್ ಕ್ಷಮಾಪಣೆಯನ್ನು ಕೋರಬೇಕಾಗಿ ಬಂತು. ಇದಕ್ಕೂ ಮೊದಲು ಕೇಜ್ರೀವಾಲ್ ನಿತಿನ್ ಗಡ್ಕರಿಯವರ ಮೇಲೆ ಸುಳ್ಳು
ಆಪಾದನೆಯನ್ನು ಮಾಡಿ, ಗಡ್ಕರಿಯವರಿಂದ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡು, ಕೇಸಿನಿಂದ ಬಚಾವಾಗಲು ತನ್ನ ಹೇಳಿಕೆಯನ್ನು ಹಿಂತೆಗೆದು ಕೊಂಡು ಗಡ್ಕರಿಯವರ ಬಳಿ ಕ್ಷಮೆಯನ್ನು ಬೇಡಿದ್ದರು.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕುರಿತು ಸಲ್ಲದ ಮಾತುಗಳನ್ನಾಡಿ ಮತ್ತೆ ಕೋರ್ಟ್ ನಲ್ಲಿ ಕ್ಷಮೆ ಬೇಡಬೇಕಾದ ಸ್ಥಿತಿ ಕೇಜ್ರೀ ವಾಲ್‌ಗೆ ಬಂದಿತ್ತು. ಅಕಾಲಿದಳ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಡ್ರಗ್ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದ್ದ ಕೇಜ್ರೀವಾಲರು ನಂತರ ಬಿಕ್ರಮ್ ಸಿಂಗರು ಕೋರ್ಟ್‌ನಲ್ಲಿ ಮಾನನಷ್ಟ ಕೇಸ್ ಹಾಕಿದಾಗ ಬೇಷರತ್ತಾಗಿ ಕ್ಷಮೆಯನ್ನು ಬೇಡಿ ಶಿಕ್ಷೆಯಿಂದ ಪಾರಾಗಿದ್ದರು.

ಸಿನಿಮಾ ರಂಗದ ಸ್ಟಾರ್‌ಗಳು ಹಾಗೂ ಸೆಲೆಬ್ರಿಟಿಗಳು ತಮ್ಮ ಮೇಲಿನ ಆರೋಪದಿಂದ ಬಚಾವಾಗಲು ಹಾಗೂ ತಮ್ಮ ನಿರಪರಾ ಧಿತ್ವವನ್ನು ಸಾಬೀತುಪಡಿಸಿಕೊಳ್ಳಲು ಮಾನನಷ್ಟ ಮೊಕದ್ದಮೆಗಳಿಗೆ ಶರಣಾಗುವುದೂ ಇದೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಒಬ್ಬ ಬಿಹಾರದ ಒಬ್ಬ ಯೂಟ್ಯೂಬರ್ ಮೇಲೆ 500 ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಯುಟ್ಯೂಬರ್ ತನ್ನ ವೀಡಿಯೋದಲ್ಲಿ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವಿನ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿಯು ಕೆನಡಾಗೆ ಪರಾರಿಯಾಗಲು ಅಕ್ಷಯ್ ಕುಮಾರ್ ಸಹಕರಿಸಿದ್ದರು
ಎಂದು ಸುಳ್ಳು ಸುದ್ದಿಯನ್ನು ಹರಡಿದ್ದರು.

ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣ ಹಾಗೂ ಬಾಲಿವುಡ್ ಮತ್ತು ಡ್ರಗ್ ಮಾಫಿಯಾದ ನಡುವಿನ ಸಂಬಂಧವನ್ನು ಬಯಲು ಮಾಡಿದ್ದಕ್ಕೆ ರಿಪಬ್ಲಿಕ್ ಟಿವಿ, ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಹಾಗೂ ಪ್ರದೀಪ್ ಭಂಡಾರಿ, ಟೈಮ್ಸ ನೌ ನ್ಯೂಸ್ ಚಾನೆಲ್‌, ಟೈಮ್ಸ ನೌ ಚಾನೆಲ್‌ನ ರಾಹುಲ್ ಶಿವ ಶಂಕರ್ ಹಾಗೂ ನಾವಿಕಾ ಕುಮಾರ್ ಇವರುಗಳ ಮೇಲೆ ಫಿಲ್ಮ್ ಹಾಗೂ
ಟೆಲಿವಿಜನ್ ಪ್ರೊಡ್ಯೂಸರ್ಸ್ ಗಿಲ್ಡ ಆಫ್ ಇಂಡಿಯಾ, ಸಿನಿ ಹಾಗೂ ಟೀವಿ ಕಲಾವಿದರ ಅಸೋಸಿಯೇಶನ್, ಭಾರತೀಯ ಫಿಲ್ಮ್ ಹಾಗೂ ಟೀವಿ ನಿರ್ಮಾಪಕರ ಕೌನ್ಸಿಲ್ ಹಾಗೂ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್ ಗಳು ಮಾನ ನಷ್ಟ ಮೊಕದ್ದಮೆಗಳನ್ನು ಹಾಕಿವೆ.

ತಮ್ಮ ಸದಸ್ಯರ ಖಾಸಗಿತನದ ಮೇಲೆ ಈ ನ್ಯೂಸ್ ಚಾನೆಲ್ ಗಳು ಸವಾರಿ ಮಾಡುತ್ತಿವೆ ಹಾಗೂ ಅವರ ಮಾನಹಾನಿ ಮಾಡುತ್ತಿವೆ ಎನ್ನುವುದು ಈ ಸಂಘಟನೆಗಳ ಆರೋಪವಾಗಿದೆ. ಮೊಕದ್ದಮೆ ಹೂಡಿರುವ ಸಂಸ್ಥೆಗಳಲ್ಲಿ ಶಾರುಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ರೋಹಿತ್ ಶೆಟ್ಟಿ, ಅಜಯ್ ದೇವಗನ್ ಮೊದಲಾದವರ ಮಾಲಿಕತ್ವದ ನಿರ್ಮಾಣ ಸಂಸ್ಥೆಗಳೂ ಸೇರಿವೆ.

2018ನೇ ಇಸವಿಯಲ್ಲಿ ಮಿ ಟೂ ಅಭಿಯಾನದಲ್ಲಿ ಪ್ರಿಯಾ ರಮಣಿ ಎಂಬ ಹೆಸರಿನ ಪತ್ರಕರ್ತೆಯೊಬ್ಬರು ರಾಜ್ಯ ವಿದೇಶಾಂಗ ಸಚಿವರೂ ಆಗಿದ್ದ , ಖ್ಯಾತ ಪತ್ರಕರ್ತ ಎಂಜೆ ಅಕ್ಬರ್ ಅವರು ಕೆಲವು ವರ್ಷಗಳ ಮೊದಲು ತನ್ನನ್ನು ಲೈಂಗಿಕ ಶೋಷಣೆಗೊಳ ಪಡಿಸಿದ್ದರು ಎಂದು ಆರೋಪ ಮಾಡಿದ್ದರು. ಈ ಆರೋಪದ ಕಾರಣದಿಂದ ಎಂ.ಜೆ.ಅಕ್ಬರ್ ಅವರು ತನ್ನ ಮಂತ್ರಿ ಪದವಿಗೆ
ರಾಜೀನಾಮೆ ನೀಡಿದ್ದರು. ಅಕ್ಬರ್ ಅವರು ಆರೋಪ ಮಾಡಿರುವ ಪ್ರಿಯಾ ರಮಣಿ ಅವರ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಈ ಕೇಸು ಇನ್ನೂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕನ್ನಡದ ಚಿತ್ರಲೋಕ – ಸ್ಯಾಂಡಲ್‌ವುಡ್ ಅನ್ನೂ ಮಾನನಷ್ಟ ಮೊಕದ್ದಮೆಗಳು ಬಿಟ್ಟಿಲ್ಲ.

ನಟಿ ಶ್ರುತಿ ಹರಿಹರನ್ ಅವರು ಮೀ ಟೂ ಅಭಿಯಾನದಲ್ಲಿ ನಟ ಅರ್ಜುನ್ ಸರ್ಜಾ ತನ್ನ ಮೇಲೆ ಲೈಂಗಿಕ ಶೋಷಣೆಯನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಆರೋಪಕ್ಕೆ ಪ್ರತಿಯಾಗಿ ಅರ್ಜುನ್ ಸರ್ಜಾ ಅವರು ಶ್ರುತಿ ಹರಿಹರನ್ ಮೇಲೆ ಕೋರ್ಟ್
ನಲ್ಲಿ ೫ ಕೋಟಿ ರುಪಾಯಿಗಳ ಮಾನನಷ್ಟ ದಾವೆಯನ್ನು ಹೂಡಿರುವುದರಿಂದ ಶ್ರುತಿ ಹರಿಹರನ್ ಸಂಕಷ್ಟದಲ್ಲಿದ್ದಾರೆ.

ಡ್ರಗ್ ಲೋಕದ ಕೇಸಿನ ವಿಚಾರದಲ್ಲಿ ನಟಿ ಸಂಜನಾ ಅವರು ಸಾರ್ವಜನಿಕವಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಯವರನ್ನು ಬೀದಿ ನಾಯಿ, ಹಂದಿ ಎಂದೆ ನಿಂದಿಸಿದುದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರ್ಗಿ ಯವರು ತಾನು ಸಂಜನಾ ಮೇಲೆ
10 ಕೋಟಿ ರುಪಾಯಿಗಳ ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅನ್ನುವುದು ಒಂದು ಸಾರ್ವಕಾಲಿಕ ಗಾದೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಮನಬಂದಂತೆ ನಾಲಗೆಯನ್ನು ಹರಿಯಬಿಟ್ಟರೆ ಅದಕ್ಕೆ ತಕ್ಕ ಶಾಸ್ತಿಯನ್ನು ಮಾಡುವ ಕಾಯಿದೆಗಳು ಇವೆ. ಮಾತುಗಳು ಕ್ಷಣಾರ್ಧದಲ್ಲಿ ರೆಕಾರ್ಡ್ ಆಗುವ ಈ ಆಧುನಿಕ ಯುಗದಲ್ಲಿ ಜನರು ಮಾತನಾಡು ವಾಗ ಸ್ವಲ್ಪ ಆಲೋಚಿಸಿ ಮಾತನಾಡಿದರೆ ಒಳ್ಳೆಯದು. ಇಲ್ಲವಾದರೆ ಕೋರ್ಟ್‌ಗಳು ತಕ್ಕ ಕ್ರಮವನ್ನು ತಗೆದುಕೊಳ್ಳುತ್ತವೆ.